Wednesday, May 13, 2009

ನೀ ನನ್ ಜೊತೆ ಟೂ ಬಿಡಲ್ಲ ತಾನೇ?!

ಅಮ್ಮಾ...


ನಂಗೊತ್ತು ನೀ ನನ್ ಮೇಲೆ ಮುನಿಸಿಕೊಂಡಿದ್ದಿಯಂತ. ಇನ್ನು ನಾ ಮನೆಗೆ ಬಂದು ನೀ ನನ್ನ ದರುಶನ ಪಡೆಯುವವರೆಗೂ ನಿನ್ನ ಸಿಟ್ಟು ಕಡಿಮೆಯಾಗಲ್ಲ. ನಿತ್ಯ ಫೋನ್ ಮಾಡಿ ಗೊಣಗುತ್ತೀಯಾ. ಪ್ರೀತಿಯಿಂದ ಬೈತೀಯಾ. ಕೊನೆಗೆ ನೀನೆ ಸೋತಾಗ ದಡಕ್ಕಂತ ಫೋನಿಡ್ತೀಯಾ. ಮತ್ತೆ ಸಂಜೆ ಫೋನ್ ಮಾಡಿ ಪುಟ್ಟಿ ಒಂದೇ ಒಂದ್ಸಲ ಮನೆಗೆ ಬಂದು ಹೋಗು ಅಂತ ಗೋಳಿಡ್ತೀಯಾ. ಮಕ್ಕಳು ಅಂದ್ರೆ ಹಿಂಗೆ ಕಣಮ್ಮ..ಅಮ್ಮ ಅಂದ್ರೆ ನಿನ್ ಥರ ಅಲ್ವಾ? ಮೊನ್ನೆ ನೀ ಪೋನ್ ಮಾಡಿ, "ನೀನೆನು ಎಲೆಕ್ಷನ್ಗೆ ನಿಂತಿದ್ದೀಯೇನೆ? ಬ್ಯುಸಿ ಬ್ಯಸಿ ಅಂತ ಹೇಳಕ್ಕೆ?' ಅಂತ ಗೊಣಗಿದಾಗ ನಿಜವಾಗಲೂ ನನಗೆ ಸಿಟ್ಟು ಬಂದಿಲ್ಲಮ್ಮ, ನಗು ಬಂದು ಜೋರಾಗಿ ನಕ್ಕುಬಿಟ್ಟಿದ್ದೆ.


ಹ್ಲಾಂ..ಅಮ್ಮಾ ನೀ ಚೆನ್ನಾಗಿದ್ದಿಯಲ್ಲಾ? ತಮ್ಮ ಹೇಗಿದ್ದಾನೆ? ಜೋಪಾನವಾಗಿರಕೆ ಹೇಳು. ನನ್ ನೆನೆಕೆಗಳನ್ನು ಅವನಿಗೆ ತಿಳಿಸು. ನಿನ್ನ ಆರೋಗ್ಯ ಹೆಂಗಿದೆ? ಕರೆಕ್ಟಾಗಿ ಮದ್ದು ತಕೋತಿಯಲ್ಲಾ? ದಿನಾ ಗ್ಲುಕೋಸ್ ಕುಡೀತಿಯಲ್ಲಾ. ನಾನಿಲ್ಲಿ ಚೆನ್ನಾಗಿದ್ದೀನಮ್ಮಾ..ಮೂರು ಹೊತ್ತು ತಿಂದುಂಡು ಗುಂಡು ಗುಂಡಾಗಿದ್ದೀನಿ. ನಾನೆಷ್ಟು ದಪ್ಪಗಿದ್ರೂ ಸಣ್ಣ ಸಣ್ಣಗಿದ್ದಿ ಅಂತ ಬಾಯಿ ಬಡಬಡ ಮಾಡ್ತಿಯಲ್ಲಾ..ನೋಡು ಸಲ ಕನ್ನಡಕ ತರ್ತೀನಿ.!!


ಅಮ್ಮಾ ಬೆಳ್ಳಂಬೆಳಿಗ್ಗೆ ಆಫೀಸು, ಸೂರ್ಯ ಮುಳುಗಿದ ಮೇಲೆ ಮನೆ ಸೇರುವುದು, ಒಂದಷ್ಟು ಅನ್ನ-ಸಾರು ಮಾಡುವುದು, ಒಂದಷ್ಟು ಹೊತ್ತು ಟಿವಿ ಜೊತೆ ಮಾತನಾಡುವುದು ಅಷ್ಟೇ ಕಣಮ್ಮ. ನಮ್ಮೂರ ಬತ್ತದ ಹೊಳೆ, ಹಸಿರು ತೋಟ, ಸಾಲು-ಸಾಲು ಮರಗಿಡಗಳು, ಹಳ್ಳಿ ಮನೆಗಳು, ಕರುಗಳ ಅಂಬಾ, ಕನಕಾಂಬರ ಬಳ್ಳಿಯ ಸೊಬಗು, ಕುರಿಮಂದೆ, ಕಥೆ ಹೇಳುವ ಅಜ್ಜಿ, ಕಳ್ಳು ತೆಗೆಯುವ ಅಜ್ಜ ಯಾರೂ ಕಾಣೋಕೆ ಸಿಗ್ತಿಲ್ಲಮ್ಮ. ಆದ್ರೂ ಬೆಂಗ್ಳೂರು ತುಂಬಾ ಜನ್ರ ಹಸಿದ ಹೊಟ್ಟೆಗೆ ಅನ್ನ ನೀಡುತ್ತೆ. ಏನೋ ಒಂಥರಾ ಖುಷಿ ಕೊಡುತ್ತೆ. ನನ್ ಪುಟ್ಟ ರೂಮೊಳಗೆ ನಾನೂ ಖುಷಿಪಡ್ತೀನಮ್ಮ.

ಆಮೇಲೆ ನಮ್ಮ ಮನೆ ಓನರ್ರು ಅಕ್ಕ ತುಂಬಾ ಒಳ್ಳೆಯವರಮ್ಮ. ನಂಗೆ ಒಂದು ಒಳ್ಳೆ ಅಕ್ಕ ಸಿಕ್ಕಂಗೆ ಆಗಿದೆ. ಮೊನ್ನೆ ನಂಗೆ ಜ್ವರ ಬಂದಿತ್ತು ಅಂದ್ನಲ್ಲಾ..ನನ್ನ ತುಂಬಾ ಚೆನ್ನಾಗ್ ನೋಡಿಕೊಂಡ್ರಮ್ಮ. ಏನೇನೋ ಕಶಾಯ ಮಾಡಿಕೊಟ್ರು...ಥೇಟ್ ನಿನ್ನ ಥರಾನೇ..ಹೊಟ್ಟೆ ಫುಲ್ ಆದ್ರೂ ಮತ್ತೆ ಮತ್ತೆ ತಿನ್ನು ಅನ್ನುತ್ತಾ ತುರುಕೋದು! ಅಲ್ಲಿ-ಇಲ್ಲಿ ಸುತ್ತಾಡೋಕೆ ಹೋದ್ರೆ, ಶಾಪಿಂಗ್ ಹೋದ್ರೆ ನನ್ನ ಕರ್ಕೊಂಡು ಹೋಗ್ತಾರಮ್ಮಾ. ಪೂಜೆಗೆಂದು ಮನೆಗೆ ತಂದ ಮಲ್ಲಿಗೆಯಲ್ಲಿ ನನಗೂ ಒಂದು ಮೊಳ ಮುಡಿಸಿ ಮಲ್ಲಿಗೆಯಂತೆ ಘಮ್ ಅಂತ ನಗ್ತಾರೆ ಅಮ್ಮಾ.


ಅಮ್ಮಾ..ಹೇಳಿದ್ನಲ್ಲಾ ಮುಂದಿನ ತಿಂಗಳು ಊರಿಗೆ ಬರ್ತೀನಂತ. ಮಿಡಿ ಮಾವಿನಕಾಯಿ ಉಪ್ಪಿನಕಾಯಿ ಹಾಕಿದ್ದಿಯಲ್ಲಾ..ಒಂದಷ್ಟು ಅಕ್ಕಿ ರೊಟ್ಟಿ, ಹಲಸಿನ ಹಪ್ಪಳ ರೆಡಿ ಮಾಡಿಡಮ್ಮಾ. ಬೆಂಗ್ಳೂರು ಮಳೆಗೆ ಮೆಲ್ಲೋಕೆ ಭಾಳ ಖುಷಿ ಆಗುತ್ತೆ. ಮತ್ತೆ ನನ್ನ ಇಷ್ಟದ ನೀರು ದೋಸೆ ಮಾಡಕೆ ಬೆಳ್ತಕ್ಕಿ, ಹತ್ತು ಕೆಜಿ ಕುಚಲಕ್ಕಿನೂ ತಂದಿಡಕೆ ತಮ್ಮಂಗೆ ಹೇಳು. ವಾಪಾಸ್ ಬರುವಾಗ ತಕೊಬಂದ್ರೆ ಒಂದು ತಿಂಗಳು ಚಿಂತೆಯಿಲ್ಲ. ನಂಗೊತ್ತು ಇದೆಲ್ಲಾ ರೆಡಿ ಮಾಡಿಯೇ ನಿತ್ಯ ಸುಪ್ರಭಾತ ಹಾಡ್ತೀಯಂತ.

ಅಮ್ಮ ನಮ್ಮನೆ ಪಕ್ಕದ್ಮನೆಗೆ ಹೊಸಬರು ಬಾಡಿಗೆಗೆ ಬಂದಿದ್ದಾರೆ. ಅಲ್ಲೊಂದು ಪುಟ್ಟ ಪಾಪು ಇದೆ. ನೋಡಕ್ಕು ಮುದ್ದು ಮುದ್ದಾಗಿದೆ. ಆದ್ರೆ ರಾತ್ರಿ ಇಡೀ ಅಳೋ ಪಾಪು ನಮ್ಮ ನಿದ್ದೆನೂ ಕೆಡಿಸುತ್ತೆ. ಯವಾಗಲೂ ನೀ ನಂಗೆ ಹೇಳ್ತಿದ್ದಿಯಲ್ಲಾ, ನೀ ಬರೇ ಅಳುಮುಂಚಿ ನಿದ್ದೆ ಮಾಡಕ್ಕೂ ಬಿಡ್ತಿರಲಿಲ್ಲ ಅಂತ. ಮಗು ಅತ್ತು ರಂಪಾಟ ಮಾಡುವಾಗ ನೀ ಹೇಳಿದ ಮಾತು ನೆನಪಾಗಿ ಛೇ! ನಾನೆಷ್ಟು ಅಮ್ಮಂಗೆ ಕಾಟ ಕೊಟ್ಟಿದ್ದೀನಿ ಅನಿಸುತ್ತೆ ..ಹ್ಹಿಹ್ಹಿ!!!


ಅಮ್ಮಾ.. ಪತ್ರ ನೋಡಿಯಾದರೂ ನೀ ನನ್ನ ಜೊತೆ ಟೂ ಬಿಡಲ್ಲ ಅಂದುಕೋತೀನಿ. ಸಿಟ್ಟು ಕಡಿಮೆಯಾಗಿದೆಯಲ್ಲಾ...! ಹ್ಲಾಂ..ಖುಷಿಯೋ ಖುಷಿ. ಮುಂದಿನ ತಿಂಗಳು ಹುಣ್ಣಿಮೆ ದಿನ ಬಂದು ಬಿಡ್ತೀನಿ. ತಂಪು ಬೆಳದಿಂಗಳಲ್ಲಿ ನಮ್ಮನೆ ಎದುರು ಇರುವ ಕಲ್ಲುಬೆಂಚಿಯ ಮೇಲೆ ಒಂದಷ್ಟು ಹೊತ್ತು ಹರಟೋಣ ..ಸಿಟ್ ಮಾಡಿಕೊಳ್ಳೋಣ..ಜಗಳ ಆಡೋಣ..ನಿನ್ನಿಂದ ಬೈಸಿಕೋತೀನಿ. ಅದಕ್ಕಿಂತ ಹೆಚ್ಚಾಗಿ ನಿನನ್ನ ಮಡಿಲಲ್ಲಿ ಹುದುಗಿ ಮೊಗೆದಷ್ಟು ಬತ್ತದ ಪ್ರೀತಿನ ನನ್ನೊಳಗೆ ತುಂಬುಕೊಳ್ಳೋಕೆ ಬರ್ತಾ ಇದ್ದೀನಮ್ಮಾ. ಸದ್ಯಕ್ಕೆ ವಿರಾಮ..


ಇಂತೀ

ನಿನ್ನ ಪುಟ್ಟಿ

23 comments:

ದಿವ್ಯಾ ಮಲ್ಯ ಕಾಮತ್ said...

ಧರಿತ್ರಿ ಅವರೇ
ಅಮ್ಮ ಖಂಡಿತಾ ಟೂ ಬಿಡಲ್ಲ ರೀ... ಕ್ಷಮಯಾ ಧರಿತ್ರಿ ಆಗಿರುತ್ತಾಳೆ ತನ್ನ ಮಕ್ಕಳ ಬಗ್ಗೆ; ಅದಕ್ಕೆ ಅವರನ್ನು ಅಮ್ಮ ಅನ್ನೋದು. ಬರಹದಲ್ಲಿರುವ ಅದೇನೋ ಸೆಳೆತವಿದೆ. ತುಂಬಾ ಇಷ್ಟವಾಯಿತು.
- ದಿವ್ಯಾ

ಬಾಲು said...

urinda barutta swalpa jastine uppina kaayi haagu halasina happala thanni. (namgu irali antha. hanchi thindare swarga sukha antha gaadhene ide) so jasti ready madi idoke mattondu patra haaki!!!

chennagide dharithri avare. nammella, kushi, sittu, mondu thana, asahaayakathe ella ammana munde maathra saadhya ansutte!!

PARAANJAPE K.N. said...

ಧರಿತ್ರಿ,
ಚೆನ್ನಾಗಿದೆ ಪತ್ರ. ಪ್ರೀತಿ, ಆಪ್ಯಾಯತೆ, ಆತ್ಮೀಯತೆ ಭರಪೂರ ತು೦ಬಿದೆ. ಅಮ್ಮನಿಗೆ ಕನ್ನಡಕ ಒಯ್ಯುವುದು ಮರೆಯಬೇಡ, ಅವರು ನೋಡಿ ತಿಳಿಯಲಿ ನೀನೆಷ್ಟು ಗು೦ಡಗಾಗಿದ್ದಿ ಅ೦ತ. ನಿನ್ನ ಪತ್ರದಲ್ಲಿ , ಹಳ್ಳಿ, ಸುತ್ತಲ ಪರಿಸರ, ಬೆ೦ಗಳೂರ ಬವಣೆ, ಪಕ್ಕದ ಮನೆ ಅಳುಮು೦ಜಿ ಪಾಪು, ಓನರಕ್ಕ, ಹೀಗೆ ಎಲ್ಲರೂ ಸುಳಿದು ಹೋಗುತ್ತಾರೆ. ಮುದ್ದಾದ ಪತ್ರ.

ಮನಸು said...

ಧರಿತ್ರಿ
ಅಮ್ಮ ಎಂದರೆ ಮೈ ನವಿರಾಗುವುದು.......ನಿಮ್ಮ ಅಮ್ಮನಿಗೆ ಬರೆದ ಪ್ರೇಮ ಪತ್ರ ಚಿರವಾಗಿರುವುದು!!!!!! ಬಹಳ ಚೆಂದ ಬರೆದಿದ್ದೀರಿ, ಅಮ್ಮನ ಮೇಲೆ ಎಷ್ಟು ಪ್ರಾಣ ನಿಮ್ಗೆ, ಬೇಗೆ ಊರಿಗೆ ಹೋಗಿ ಬನ್ನಿ......ಅಮ್ಮ ಎಂದೆಂದಿಗೊ ಕೋಪ ಮಾಡಕೊಳ್ಳೊಲ್ಲ ಇನ್ನು ಪ್ರೀತಿ ಜಾಸ್ತಿ ಆಗುತ್ತೆ...ಹಾಗೆ ನೀವು ನಿಮ್ಮ ಓನರ್ ಅಕ್ಕನ ಬಗ್ಗೆ ತಿಳಿಸಿದ್ದಿರಲ್ಲ ಅದು ನನಗೆ ತುಂಬ ಇಷ್ಟವಾಯ್ತು..... ಎಲ್ಲರೊ ಹೀಗೆ ಒಳ್ಳೆತನ ಹೋಗಳೊಲ್ಲ ಅವರ ನಿಮ್ಮ ಸಂಬಂಧ ಚೆನ್ನಾಗಿರಲಿ ಮನೆಯವರು ಹತ್ತಿರವಿಲ್ಲದಾಗ ಪರರೇ ಆಪ್ತರಾಗುತ್ತಾರೆ....
ಆ ಅಮ್ಮನಿಗು ಈ ಪುಟ್ಟಿಗು ಧನ್ಯವಾದಗಳು

ಧರಿತ್ರಿ said...

@ಪ್ರೀತಿಯ ದಿವ್ಯಾ..ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಬರ್ತಾ ಇರಿ..ಅಮ್ಮ ಅಂದ್ರೆ ಹಂಗೇ ಕ್ಷಮಯಾ ಧರಿತ್ರಿ..

@ಬಾಲು ಸರ್..ನೀವಂದಂತೆ ಆಗಲಿ..ನಿಮ್ಮನೆಗೆ ಕೊರಿಯರ್ ಮಾಡ್ತೀನಿ. ಸರೀನಾ? ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

@ಪರಾಂಜಪೆಯಣ್ಣ,..ಪ್ರೀತಿಯ ಪ್ರೋತ್ಸಾಹ ಹೀಗೇ ಇರಲಿ. ಬರ್ತಾ ಇರಿ.

@ಮನಸ್ಸು ಅಕ್ಕ..ಅಮ್ಮ ಅಂದ್ರೆ ಎಲ್ರೀಗೂ ಇಷ್ಟ ಅಲ್ವಾ? ನಿಮ್ಮ ಬ್ಲಾಗಿನಲ್ಲಿದ್ದ ಅಮ್ಮನ ಲೇಖನನೂ ಓದಿದೆ. ನಮ್ ಓನರ್ರು ಅಕ್ಕನೂ ತುಂಬಾ ಒಳ್ಳೆಯವ್ರು. ಖುಷಿಯಾಗುತ್ತೆ. ಧನ್ಯವಾದಗಳು ಅಕ್ಕ.

-ಧರಿತ್ರಿ

ಗಿರಿ said...

ಓದುತ್ತಿದ್ದಂತೆ ಮನ ಮೂಕವಾಗಿ ಹೋಯ್ತು...
ಹಾಡೊಂದು ನೆನಪಾಗಿ ಕಣ್ಣು ತುಂಬಿತ್ತು...
"ತಾನು ಬೆಂದು ತಿಳಿ ಬೆಳಕ ಬೀರುತಿದೆ, ಒಂದು ಇರುಳ ದೀಪ..."

-ಗಿರಿ

ಸಾಗರದಾಚೆಯ ಇಂಚರ said...

ಧರಿತ್ರಿ,
ಅಮ್ಮನ ನೆನಪು ಮಾಡುವ ಪತ್ರ ತುಂಬಾ ಹ್ರದಯಕ್ಕೆ ಹತ್ತಿರವಾಗಿದೆ. ಹೌದು, ಕಲಿಯುವ ನೆನಪಾದಲ್ಲಿ ತಂದೆ ತಾಯಿಗಳನ್ನು ಬಿಡುತ್ತೇವೆ, ನಂತರ ಕೆಲಸದ ನೆಪದಲ್ಲಿ ಬಿಡುತ್ತೇವೆ, ಇದೆ ದೊಡ್ಡ ಸಾಧನೆಯೇ? ಹೆತ್ತವರ ಜೊತೆಗೆ ಇರಲಾಗದ ಇ ಬಾಳು ಬಾಳೇ ಎಂದು ಎಷ್ಟೋ ಸಲ ಅನಿಸಿದೆ. ಆದರೆ ಜೀವನ ಸಾಗಬೇಕಲ್ಲ. ಒಮ್ಮೆ ನನ್ನ ಅಮ್ಮನ ನೆನಪಾಯಿತು.
ಒಳ್ಳೆಯ ಬರಹ

ಧರಿತ್ರಿ said...

@ಗಿರಿ ಮತ್ತು ಗುರುಮೂರ್ತಿ ಸರ್..ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ. ಬರ್ತಾ ಇರಿ..ಧನ್ಯವಾದಗಳು.
-ಧರಿತ್ರಿ

PaLa said...

>>ನನ್ ನೆನೆಕೆಗಳನ್ನು ಅವನಿಗೆ ತಿಳಿಸು
’ನೆನೆಕೆ’ ಅಂದ್ರೆ?
ಕರಾವಳಿ ಹುಡ್ಗಿ ಬೆಂಗ್ಳೂರಿ ಹುಡ್ಗಿ ಆಗ್ತಾ ಇರೋ ಹಾಗಿದೆ, ಬರಹದಲ್ಲಿ ಬೆಂಗ್ಳೂರು ಕನ್ನಡದ ಸೊಗಡು. ಅಮ್ಮಂಗೆ ಬೆಂಗ್ಳೂರು ಕನ್ನಡ ಅರ್ಥ ಆಗುತ್ತಾ?
ಕರಾವಳಿ ಕನ್ನಡದಲ್ಲಿ ಬರೆದಿದ್ದರೆ ಆಪ್ತತೆ ಇನ್ನೂ ಹೆಚ್ಚಿರುತ್ತಿತ್ತೇನೋ ಅಂತ ನನ್ನನಿಸಿಕೆ.

ಶಿವಪ್ರಕಾಶ್ said...

nice article ri

ಜಲನಯನ said...

ರೀ ಧರಿತ್ರೀ ನೀವು ತುಂಬಾ ಘಾಟೀ ಕಣ್ರೀ, ಅಲ್ಲಿ ಅಮ್ಮನ ಕೈ ರುಚಿ ಪ್ರತ್ಯಕ್ಷ ಅನುಭವಿಸೋದಲ್ಲದೇ ಬೆಂಗ್ಳೂರ್ಗೂ ತರ್ಸ್ಕೋತಾ ಇದೀರಾ...ಹಂಗಂತ ಇಲ್ಲೂ ಮನೇಲೇ ಕುಂತೇ ಹಪ್ಪಳ ಮೆಲ್ಲ್ತಾ ಇದ್ದೀರಿ....ಗೊತ್ತಾಯ್ತಲ್ಲಾ...
ತುಂಬಾ ಚನ್ನಾಗಿ ಬರೆದಿದ್ದೀರಿ, ಅಮ್ಮನ್ನ ಮುದ್ದು ಮಗಳು ಅಂತ ಕಾಣುತ್ತೆ, ತಮ್ಮನ್ನೂ ತುಂಬಾ ಹಚ್ಕೊಂಡ ಹಾಗೂ ಇದೆ, ಇದನ್ನೆಲ್ಲಾ ಓದ್ತಾ ಇದ್ರೆ..ಸ್ನೇಹ ಜೀವಿ ನೀವು ಅನ್ನೋದಂತೂ ದಿಟ..ನಿಮ್ಮ ಮುಂದಿನ ಬರಹಗಳೂ ಈ ಆಪ್ಯಾಯ ಭಾವನೆಗಳ ಸರಮಾಲೆಯನ್ನೇ ಹೊತ್ತು ತರಲಿ ಅಂತ ಹಾರೈಕೆ..

ಹರೀಶ ಮಾಂಬಾಡಿ said...

Tulu bhaasheyalloo bareeri

ಜಲನಯನ said...

ದರಿತ್ರೀ...ಶುದೊ ಬ್ಲಾಗಿನ ಅನ್ನಿಸಿಕೆ ತಪ್ಪಿ ನಿಮ್ಮ ಬ್ಲಾಗಿಗೆ ಹೋಗಿದೆ ದಯವಿಟ್ಟು ಅಳಿಸಿಬಿಡಿ

Unknown said...

ಧಾತ್ರಿಯವರೇ,
ಚೆನ್ನಾಗಿದೆ ನಿಮ್ಮ ಲೇಖನ, ಅಮ್ಮನಿಗೆ ಬರೆದ ಪತ್ರ ಮನತಟ್ಟುವ೦ತಿದೆ. ಅಮ್ಮ-ಮಗಳ ಸ೦ಬ೦ಧ ಬಹಳ ಗಾಢವಿದೆಯೆನಿಸುತ್ತದೆ. ನನ್ನನ್ನು ಒ೦ದ್ಸಲ ನಿಮ್ಮೂರಿಗೆ ಕರ್ಕೊ೦ಡು ಹೋಗಿ ಅಮ್ಮನ ಪರಿಚಯ ಮಾಡಿಸ್ರಿ. ಹಾಗೇನೇ ನಿಮ್ಮ ಅಮ್ಮ ಕೊಡುವ ಹಪ್ಪಳ, ಸ೦ದಿಗೆ, ಉಪ್ಪಿನ ಕಾಯಿಯಲ್ಲಿ ನನಗೂ ಪಾಲಿದೆ ತಾನೇ. ಕಾದಿದ್ದೇನೆ.

Veena DhanuGowda said...

good wrk
Keep going :)
I'll like reading ur articles very much

Mohan Hegade said...

good article. mother is great. i like your all type of articles. may you always write within the family members is good sence.

danyari,

Unknown said...

ಇಷ್ಟವಾಯ್ತು ಕಣ್ರೀ ಪತ್ರ.
ಊರಿಗೆ ಹೋದಾಗ 'ಸೇ' ಅಂದುಬಿಡಿ ಸರಿಹೋಗತ್ತೆ

ಧರಿತ್ರಿ said...

@ಪಾಲಚಂದ್ರ ಸರ್..
ನೆನೆಕೆ ಅಂದ್ರೆ ನೆನಪುಗಳು, ಕೇಳಿದೆ ಅನ್ನು ಅಂತರಲ್ಲಾ ಹಾಗೇ. ಕರಾವಳಿ ಕನ್ನಡದಲ್ಲಿ ಬರೆಯಬಹುದಿತ್ತು..ಆದರೆ ಮನೇಲಿ ಮಾತಾಡೋದು ನಾವು ತುಳುಭಾಷೆ. ಹೌದು..ನನ್ನ ಕನ್ನಡದಲ್ಲಿ ಬೆಂಗಳೂರು ಕನ್ನಡದ ಸುಳಿವು ಇದೆಯಲ್ವಾ? ನಾನು ಕನ್ನಡ ಮಾತಾಡುವಾಗಲೂ ಮಂಗಲೂರು-ಬೆಂಗಳೂರು ಕನ್ನಡ ಮಿಕ್ಸ್ ಆಗುತ್ತೆ. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಬರ್ತಾ ಇರಿ ಆಯಿತಾ?

@ಶಿವಪ್ರಕಾಶ್, ಹರೀಶ್ ಸರ್... ಧನ್ಯವಾದಗಳು.

@ಪ್ರೀತಿಯ ವೀಣಾಕ್ಕ..ಬರ್ತಾ ಇರಿ..ಕಾಯ್ತಾ ಇರ್ತೀನಿ.

@ಜಲನಯನ...ಸರ್.. ಹ್ಲೂಂ ಘಾಟಿ! ಹೌದು..ತಮ್ಮನೂ ನಂಗಿಷ್ಟ. ನಿಮ್ಮ ನಿರೀಕ್ಷೆ ಸುಳ್ಳಾಗಲ್ಲ..ಅಪ್ಯಾಯಮಾನದ ಸರಮಾಲೆಯನ್ನೇ ಹೊತ್ತು ತರುವ ಪುಟ್ಟ ಬರಹಗಳು ಧರಿತ್ರಿಯಲ್ಲಿ ನಿತ್ಯ ನಿಮ್ಮ ಸ್ವಾಗತಿಸಲಿವೆ. ಬರ್ತಾ ಇರಿ.

@ಗುರುರಾಜ್.. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಆಯ್ತು ಕರ್ಕೊಂಡು ಹೋಗ್ತೀನಿ ಸರೀನಾ?

@ಸುಶೀಲ್ ದೀಪ್..ಧನ್ಯವಾದಗಳು. ಬರ್ತಾ ಇರಿ. ನೀವಂದಂತೆ ಮಾಡ್ತೀನಿ

@ಮೋಹನ್ ಹೆಗಡೆ..ಧನ್ಯವಾದಗಳು. ಅಮ್ಮಾ..ಎಂದರೆ ಏನೋ ಹರುಷವು..

-ಧರಿತ್ರಿ

Prabhuraj Moogi said...

ಧರಿತ್ರಿ ಅವರೇ ಅಮ್ಮ ಟೂ ಬಿಡುವುದಾ, ಅದೆಲ್ಲಿ ಸಾಧ್ಯ.. ಟೂ ಬಿಟ್ಟರೂ ಮತ್ತೆ ತಾನೆ ಸೊತು ಮತ್ತೆ ಮಾತಾಡಿಸುವಳು ಅಮ್ಮ... ಅಮ್ಮ ಏನೂ ಟೂ ಬಿಡಲ್ಲ ಬಿಡಿ... ಊರಿಗೆ ಹೋಗಿ ಬನ್ನಿ ಪಾಪ ಎಷ್ಟು ಕರೀತಿದಾರೆ... ಇಲ್ಲಾಂದ್ರೆ ನಾವೆಲ್ಲ ಟೂ ಬಿಟ್ಟು ನಿಮ್ಮನ್ನು ಊರಿಗೆ ಅಟ್ಟುತೀವೆ ಅಷ್ಟೇ...

ಸುಧೇಶ್ ಶೆಟ್ಟಿ said...

ದೂರದಲ್ಲಿ ವಾಸಿಯಾಗಿರುವ ಎಲ್ಲರ ಮನಸ್ಥಿತಿಯು ಹೀಗೆ ಇರುತ್ತದೇನೋ.... ಊರಿನ ಕನವರಿಕೆಯನ್ನು ಮತ್ತು ಅಮ್ಮನ ನೆನಪುಗಳನ್ನು ತು೦ಬ ಸು೦ದರವಾಗಿ ಬಿಡಿಸಿಟ್ಟಿದ್ದೀರಿ...

ಧರಿತ್ರಿ said...

ಪ್ರಭುರಾಜ್...ಹ್ಲುಹ್ಲು...ಹೋಗ್ತೀನಿ..ಅಟ್ಟಿಸ್ ಬೇಡ್ರೀ.ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಸುಧೇಶ್...ಬರೋಂದುಪ್ಪುಲೆ..ಮೋಕೆ ಉಪ್ಪಡ್. ಸೊಲ್ಮೆಲು.

-ಧರಿತ್ರಿ

Unknown said...

ನಿನ್ ಹತ್ರ ಟೂ ಬಿಡಕಾಗತ್ತಾ ಬಂಗಾರಾ.. ಇಲ್ಲಮ್ಮಾ ಟೂ ಬಿಡಲ್ಲಾ..
ಮೊನ್ನೆ ನಿನ್ ಹತ್ರ ಮಾತಾಡಿದ ನನ್ ಮಗಳು ನಿನ್ನ ನೋಡಬೇಕು ಅಂತಿದ್ಲು..

ಧರಿತ್ರಿ said...

ಶಮಾಕ್ಕ...ಥ್ಯಾಂಕ್ಯೂ ಅಕ್ಕಾ. ಹೌದಾ? ಐಶ್ವರ್ಯ ಅಲ್ವಾ ಮಾತಾಡಿದ್ದು..ಮನೆಗೆ ಬರ್ತೀನಿ ಅನ್ನಿ. ಧನ್ಯವಾದಗಳು.
-ಧರಿತ್ರಿ