Tuesday, May 5, 2009

ದುಃಖಗಳು ಸಾಯುತ್ತವೆ, ನೆನಪುಗಳು ಸಾಯೊಲ್ಲ..?!

ದುಃಖಗಳು ಸಾಯುತ್ತವೆ, ನೆನಪುಗಳು ಸಾಯೊಲ್ಲ..! ಹೌದು..ನೆನಪುಗಳು ಸಾಯೊಲ್ಲ..ದುಃಖಗಳು ಸಾಯುತ್ತವೆ..ನಿನ್ನೆ ಇದ್ದಕಿದ್ದಂತೆ ಈ ಮಾತು ನನ್ನ ತುಂಬಾ ಕಾಡಿಬಿಡ್ತು.

ನಾನಾಗ ಎರಡನೇ ಕ್ಲಾಸು. ಒಂದು ಸಂಜೆ ಶಾಲೆ ಮುಗಿಸಿ ನಮ್ಮೂರ ಹೊಳೆ ದಾಟಿ ಮನೆ ಸೇರುವಾಗ ಮನೆಯೇ ಸ್ಮಶಾನವಾಗಿತ್ತು. ನನ್ನ ಪ್ರೀತಿಯ ಅಜ್ಜ ನಮ್ಮನ್ನೆಲ್ಲಾ ಬಿಟ್ಟುಹೋಗಿದ್ದರು. ಅಜ್ಜ ಇನ್ನಿಲ್ಲವೆಂದಾಗ ಉಕ್ಕಿ ಬರುವ ದುಃಖವನ್ನು ಸಹಿಸುವುದು ತುಂಬಾ ಕಷ್ಟವಾಗುತ್ತಿತ್ತು. ನನ್ನ ಗುಂಗುರು, ಸಿಕ್ಕು ಹಿಡಿದ ತಲೆಕೂದಲನ್ನು ಎಣ್ಣೆ ಹಾಕಿ ನೀಟಾಗಿ ಬಾಚಿ ಜಡೆಹಾಕುತ್ತಿದ್ದುದು ನನ್ನಜ್ಜ. ಅಜ್ಜ ಎಷ್ಟೇ ಬೈಯಲಿ..ಅಜ್ಜಿಗಿಂತ ಒಂದು ಪಟ್ಟು ಪ್ರೀತಿ ಜಾಸ್ತಿ ನನ್ನಜ್ಜನ ಮೇಲೆ.

ಆ ದಿನ ನನ್ನ ಪ್ರೀತಿಯ ಅಜ್ಜನನ್ನು ಕಳೆದುಕೊಂಡಿದ್ದೆ. ಗಂಡನನ್ನು ಕಳಕೊಂಡ ದುಃಖ ಅಜ್ಜಿಗೆ, ಅಪ್ಪನನ್ನು ಕಳಕೊಂಡ ದುಃಖ ಅಮ್ಮ, ದೊಡ್ಡಮ್ಮ, ಚಿಕ್ಕಮ್ಮನವರಿಗೆ..! ನನ್ನನ್ನು ಸಮಾಧಾನಿಸುವವರು ಯಾರೂ ಇಲ್ಲ..ಆ ಶೋಕಸಾಗರದಲ್ಲಿ ಒಂದಾಗಿ ನಾನೂ ಬಿಕ್ಕಿ ಬಿಕ್ಕಿ ಅತ್ತಿದ್ದೆ. ಅಜ್ಜ ನೀನ್ಯಾಕೆ ನನ್ನ ಬಿಟ್ಟು ಹೋದೆ..ನೀ ಹೋದಲ್ಲಿಗೆ ನನ್ನನ್ನೂ ಕರೆದುಕೊಂಡು ಹೋಗಬಾರದಿತ್ತೆ? ಎಂದು ಗೋಳಾಡುತ್ತಿದ್ದೆ. ಯಾರ ಮಾತುಗಳನ್ನು ಕೇಳದೆ ಅಜ್ಜ ತಣ್ಣಗೆ ಮಲಗಿದ್ದ. ಏನೇನೋ ಶಾಸ್ತ್ರಗಳು..ಜಡಿಮಳೆಯಂತೆ ಕಣ್ಣಿಂದ ಹರಿಯೋ ನೀರನ್ನು ಸರಿಸಿ ಸರಿಸಿ ಅಜ್ಜನ ತಣ್ಣನೆಯ ಮುಖವನ್ನು ನಾ ನೋಡುತ್ತಿದ್ದೆ. ಕೊನೆಗೇ ಬೆಂಕಿಯಲ್ಲಿ ನನ್ನಜ್ಜ ಒಂದಾಗಲೂ ಹೃದಯ ದುಃಖದಿಂದ ಚೀರುತ್ತಿತ್ತು. ನಿಜವಾದ ದುಃಖ ನೋಡಬೇಕಾದ್ರೆ ಸಾವಿನ ಮನೆಗೆ ಹೋಗಬೇಕು..ಎನ್ನೋ ಮಾತು ಮತ್ತೆ ಮತ್ತೆ ನೆನಪಾಗುತ್ತಿತ್ತು.

ಮೊನ್ನೆ ಮನೇಲಿ ಯಾವುದೋ ಒಂದು ಪುಟ್ಟ ವಿಚಾರದ ಕುರಿತು ನಾನೂ-ತಮ್ಮ ಮಾತಿಗಿಳಿಯುತ್ತಿದ್ದಂತೆ ತಮ್ಮ, "ಅಕ್ಕಾ..ನಾವು ಅಜ್ಜ ಸತ್ತಾಗ ಎಷ್ಟು ಅತ್ತಿದ್ದೀವಿ. ಈವಾಗ ಅದು ದುಃಖಂತ ಅನಿಸೋದೇ ಇಲ್ಲ. ಮನುಷ್ಯ ದುಃಖವನ್ನು ಎಷ್ಟು ಬೇಗ ಮರೀತಾನೆ..ಆದರೆ ಅದ್ರ ನೆನಪು ಮಾತ್ರ ಹಾಗೇ ಇರುತ್ತಲ್ಲಾ.." ಅಂದಾಗ ನನ್ನ ಮನಸ್ಸಲ್ಲಿ 'ಹೌದು ದುಃಖಗಳು ಸಾಯುತ್ತವೆ, ನೆನಪುಗಳು ಸಾಯೊಲ್ಲ" ಎನ್ನೋ ಮಾತು ಮತ್ತೆ ಮತ್ತೆ ಗುನುಗುತ್ತಾನೇ ಇತ್ತು.

ಸಾವಿನ ಮನೆಯ ದುಃಖ ಮಾತ್ರವಲ್ಲ..ಎಷ್ಟೋ ಬಾರಿ ಪುಟ್ಟ ಪುಟ್ಟ ವಿಚಾರಗಳು ನಮಗೆ ತೀರ ನೋವು ಕೊಡುತ್ತವೆ. ನಿತ್ಯ ಅಮ್ಮನ ತೆಕ್ಕೆಯಲ್ಲೇ ನಿದ್ದೆಯ ಮಂಪರಿಗೆ ಜಾರುತ್ತಿದ್ದ ನಾನು ಎಸ್ ಎಸ್ಎಲ್ ಸಿ ಪಾಸಾಗಿ ದೂರದ ಹಾಸ್ಟೇಲಿಗೆ ಬರಬೇಕಾದ್ರೆ ವಾರಗಟ್ಟಲೆ ದಿಂಬು ಒದ್ದೆಯಾಗಿಸಿದ್ದೆ. ಹಾಸ್ಟೇಲಿನಲ್ಲಿ ನಾ ಒಂಟಿ ಒಂಟಿ ಎಂದು ಬಾತ್ ರೂಮಿಗೆ ಹೋಗಿ ಅಳ್ತಾ ಇದ್ದೆ. ಪಿಯುಸಿಯಲ್ಲಿ ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಗೆಳತಿ ದೂರದ ಬೆಂಗಳೂರಿಗೆ ಹಾರಿದಾಗ ತಿಂಗಳುಗಟ್ಟಲೆ ಕಣ್ಣೀರು ಸುರಿಸಿದ್ದೆ. ಪದವಿ ವಿದಾಯ ಸಮಾರಂಭದಲ್ಲಿ ನನ್ನೆಲ್ಲಾ ಕನಸು-ಕಲ್ಪನೆಗಳಿಗೆ ಮೂರ್ತ ರೂಪ ನೀಡಿದ ಗುರುಹಿರಿಯರ ಮುಖ ನೋಡುತ್ತಲೇ ವೇದಿಕೆಯನ್ನು ಕಣ್ಣೀರಾಗಿಸಿದ್ದೆ. ಪದವಿ ಮುಗಿದು ಬೆಂಗಳೂರಿಗೆ ಬಂದಾಗ ಅಯ್ಯೋ ಬೆಂಗಳೂರೇ ಬೇಡ ಮರಳಿ ಊರಿಗೆ ಹೋಗ್ತೀನಿ ಎಂದು ರಚ್ಚೆ ಹಿಡಿದಿದ್ದೆ. ನಮ್ಮನೆಯ ಪ್ರೀತಿಯ ನಾಯಿ 'ಕರಿಯ' ಬಾವಿಗೆ ಬಿದ್ದು ಸತ್ತಾಗ, ನನ್ನ ಮುದ್ದಿನ ಹಸು ಅಕತಿಯನ್ನು ಅಮ್ಮ ಮಾರಿಬಿಟ್ಟಾಗ.....ನಾನೆಷ್ಟು ಅತ್ತಿದ್ದೇ? ...ಇಲ್ಲೆಲ್ಲಾ ಸಹಿಸಲಾಗದ ಅಸಹನೀಯ ದುಃಖದ ಮಡುವಿನಲ್ಲಿ ನಾ ಬಿದ್ದು ಹೊರಳಾಡಿದ್ದೆ..!

ತುಂಬಾ ಪ್ರೀತಿಸಿದ ನಿತ್ಯ ಭರವಸೆಯ ನುಡಿಯಾಗಿದ್ದ ಜೀವದ ಗೆಳೆಯ ಕೈಬಿಟ್ಟಾಗ ನೀನಿಲ್ಲದೆ ನಾ ಹೇಗಿರಲಿ ಎಂದು ನಿತ್ಯ ಮಡಿಲಾಗಿದ್ದ ಗೆಳತಿ ದೂರವಾದಾಗ, ಬದುಕಿನ ಯಾವುದೋ ಘಟ್ಟದಲ್ಲಿ ಅನಿವಾರ್ಯತೆಗೆ ಸಿಲುಕಿ ಸಂಬಂಧಗಳನ್ನೇ ಕಳೆದುಕೊಂಡಾಗ ಮನಸ್ಸು ಎಷ್ಟು ನೋವು ಪಡುತ್ತೆ? ಆದರೆ ಇಲ್ಲೆಲ್ಲಾ..ದಿನಕಳೆದಂತೆ ಈ ದುಃಖಗಳು ಸಾಯುತ್ತವೆ..ಬರೇ ನೆನಪುಗಳನ್ನಷ್ಟೇ ಉಳಿಸಿಬಿಟ್ಟು! ಕಹಿಯಾಗೋ..ಸಿಹಿಯಾಗೋ..ಮತ್ತೆ ಮತ್ತೆ ಕಾಡೋ ನೆನಪುಗಳಷ್ಟೇ ಬದುಕಿನ ಹಾದಿಯ ನಮ್ಮ ಹೆಜ್ಜೆಯಲ್ಲಿ ನೆರಳಂತೆ ಹಿಂಬಾಲಿಸುತ್ತವೆ ಅಲ್ವೇ? ಹೌದು. ಇದೂ ಒಳ್ಲೆಯದೇ..ದುಃಖಗಳು ಸಾಯಬೇಕು, ನೆನಪುಗಳು ಉಳಿಯಬೇಕು, ಖುಷಿಯ ಕ್ಷಣಗಳಷ್ಟೇ ನಿತ್ಯ ನಮ್ಮನ್ನು ಕಾಡುವ, ಖುಷಿಯೊಳಿಸುವ ಹುಣ್ಣಿಮೆಯಂತೆ ಪಸರಿಸಬೇಕು.

ಅದಕ್ಕೇ ತಾನೇ ಹೇಳೋದು 'ಕಾಲವೇ ನೋವಿಗೆ ಮದ್ದು' ಅನ್ನೋದು....ಅಲ್ವಾ?

21 comments:

ಸಾಗರದಾಚೆಯ ಇಂಚರ said...

ಧರಿತ್ರಿ,
ಹೌದು, ನೆನಪುಗಳು ನಮ್ಮನ್ನೇ ಹಿಂಬಾಲಿಸುತ್ತವೆ, ಎಂದೋ ಕಳೆದ ಸ್ನೇಹಿತ ಇನ್ನೆಂದೋ ಇನ್ಯಾರದೋ ವೇಷದಲ್ಲಿ ನೆನಪಿಸುತ್ತಾನೆ. ಪ್ರೀತಿಯಿಂದ ಕೈ ನೇವರಿಸಿದಾಗ ಇನ್ಯಾರೋ ತಂದೆ ತಾಯಿಗಳ ಪ್ರೀತಿ ನೆನಪಿಸುತ್ತಾರೆ. ಅದೇ ಜೀವನದ ಸಂಭ್ರಮವಲ್ಲವೇ,
ಒಳ್ಳೆಯ ಬರಹ

PARAANJAPE K.N. said...

ಧರಿತ್ರಿ
ನಿಜ, ದುಃಖ ಸಾಯುತ್ತವೆ, ನೆನಪು ಬಹುಕಾಲ ಮನದ೦ಗಳದಲ್ಲಿ ಲಗೋರಿ ಆಡುತ್ತಿರುತ್ತದೆ. ದುಃಖದ ಕ್ಷಣಗಳು ಅಮಾವಾಸ್ಯೆಯ ಕರಾಳ ಕತ್ತಲಿನ೦ತೆ black&white ಸಿನಿಮಾದ೦ತೆ ಮಿದುಳಕೋಶದಲ್ಲಿ ಇದ್ದರೆ,ದುಃಖದ-ಸುಖದ ನೆನಪುಗಳ ಮಾಲೆ color ಸಿನಿಮಾದ೦ತೆ ಮನದಾಳದಿಂದ ಮೆರವಣಿಗೆ ಹೊರಡು ತ್ತವೆ, ಆಗಾಗ ಕಣ್ಮು೦ದೆ ಸುಳಿದು ಆ ಕ್ಷಣಗಳ ನಿಜಾನು ಭಾವಗಳನ್ನು ಮರುಮೆಲುಕು ಹಾಕುವ೦ತೆ ಮಾಡುತ್ತವೆ. ಬರಹ ಎ೦ದಿನ೦ತೆ ಚೆನ್ನಾಗಿದೆ ಎನ್ನುವುದಕ್ಕಿ೦ತ ವಾಸ್ತವ ವಾಗಿದೆ ಅನ್ನುವುದು ಉಚಿತವೆನಿಸುತ್ತದೆ.

ಮನಸು said...

ಬಹಳ ಚೆನ್ನಾಗಿದೆ ನಿಮ್ಮ ಬರಹ.....ನಿಜ ನಾವು ನಮ್ಮ ಜೀವನದಲ್ಲಿ ಏನೆಲ್ಲಾ ಕಂಡಿದ್ದೀವಿ ನಮಗೆ ಬೇಕೆ ಬೇಕು ಅವರಿಲ್ಲದೆ ನಾವು ಇರುವುದಕ್ಕೆ ಆಗೋದೆ ಇಲ್ಲ ಅನ್ನುವಷ್ಟು ಹಚ್ಚಿಕೊಂಡಿರುತ್ತೇವೆ ಆದರೊ ಅವರು ನಮ್ಮನಗಲಿ ದೂರವಾದಾಗ ಆಗೋ ದುಃಖ ಮರೆಯೊಕ್ಕೆ ಆಗೊಲ್ಲ ಆದರೆ ಮುಂದೊಂದು ದಿನ ನಾವು ಅವರಿಲ್ಲದೆಯೊ ಜೀವಿಸುತ್ತೇವೆ ಎಂಬ ಸತ್ಯ ನಮ್ಮ ಮುಂದಿರುತ್ತದೆ. ಕಷ್ಟ ಸುಖಗಳಿಗೆ ಕಾಲವೇ ಉತ್ತರಿಸುತ್ತದೆ....
ಧನ್ಯವಾದಗಳು...ಭಾವ ಜೀವಿಗೆ......ಭಾವನೆಗಳನ್ನ ಹೊತ್ತು ಬೆಂಗಳೂರಲ್ಲಿ ದುಡಿಮೆ ಹರಸಿ ಬಂದಿರುವಿರಿ ನಿಮಗೆ ಶುಭವಾಗಲಿ.
ನನ್ನದೊಂದು ಚಿಕ್ಕ ಪ್ರಶ್ನೆ...ನೀವು ಎಲ್ಲಿ ಕೆಲಸ ಮಾಡುತ್ತಲಿರುವುದು... ಭಾವಜೀವಿಯಲ್ಲಾ...? ಹ ಹ ಹ..(ತಮಾಷೆ ಮಾಡಿದೆ ತಪ್ಪು ತಿಳಿಯಬೇಡಿ)
ವಂದನೆಗಳು
ಮನಸು

ಬಿಸಿಲ ಹನಿ said...

ಧರಿತ್ರಿಯವರೆ,
ನಿಮ್ಮ ಅಜ್ಜನ ಬಗ್ಗೆ ಓದುತ್ತಾ ಓದುತ್ತಾ ಮೊನ್ನೆಯಷ್ಟೆ ತೀರಿಕೊಂಡ ನನ್ನ ಅಜ್ಜಿ ನೆನಪಾದರು. ಆಗ ನಾನು ಇಲ್ಲಿಂದಾನೆ ಲೇಖನವೊಂದನ್ನು ಬರೆಯುವದರ ಮೂಲಕ ಆಕೆಗೆ ನುಡಿನಮನವೊಂದನ್ನು ಸಲ್ಲಿಸಿದ್ದೆ. ಆ ಲೇಖನ "ಬತ್ತದ ತೊರೆ" ಎನ್ನುವ ಹೆಸರಿನಲ್ಲಿ ನನ್ನ ಬ್ಲಾಗಿನಲ್ಲಿದೆ.
ನಿಮ್ಮ ಲೇಖನ ತುಂಬಾ ಭಾವುಕವಾಗಿದೆ. ಭಾವನಾತ್ಮಕ ವಿಷಯಗಳನ್ನು ತುಂಬಾ ಚನ್ನಾಗಿ ಬರೆಯುತ್ತೀರಿ. ನೀವು ನನ್ನ ತರಾನೆ ಸ್ವಲ್ಪ ಭಾವುಕ ಜೀವಿ ಅಂತ ಕಾಣಿಸುತ್ತೆ. keep it up.

sunaath said...

ಧರಿತ್ರಿ,
ಬೇಂದ್ರೆ ಹಾಡಿಲ್ಲವೆ?
"ಇರುಳು ತಾರೆಗಳಂತೆ ಬೆಳಕೊಂದು ಹೊಳೆಯುವದು
ಕಳೆದ ದುಃಖಗಳಲ್ಲಿ ನೆನೆದಂತೆಯೆ"!

ಧರಿತ್ರಿ said...

@ಗುರುಮೂರ್ತಿ ಸರ್....
ನೀವಂದಿದ್ದು ನಿಜ. ನೋವಿನಲ್ಲೂ ಏನೋ ಸಂಭ್ರಮವನ್ನು ಕಾಣೋದೇ ಜೀವನ. ಧನ್ಯವಾದಗಳು

@ಪರಾಂಜಪೆಯಣ್ಣ...ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.

@ಮನಸ್ಸು ಅಕ್ಕಾ...ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ನಾನು ಭಾವಜೀವಿ..?! ನೀವು ಹೇಗೆ ತಿಳಿದುಕೊಳ್ಳುತ್ತಾರೋ ಹಾಗೇ. ಏನ್ ಮಾಡಲೀ..ಭಾವನೆಗಳು ಹಾಗೆ ತಾನೇ. ಬರ್ತಾ ಇರಿ

@ಬಿಸಿಲ ಹನಿ ಉದಯ್ ಸರ್..ಧನ್ಯವಾದಗಳು. 'ಭಾವಗಳು ಅರಳಿದರೆ ಕಲೆ, ಕೆರಳಿದರೆ ಕೊಲೆ' ಅಂತಾರಲ್ವಾ(ಯಾರು ಹೇಳಿದ್ದು ನೆನಪಿಲ್ಲ). ಹಾಗೇನೇ...ಅಲ್ವಾ?

@ಸುನಾಥ್ ಅಂಕಲ್...
ನಮಸ್ತೆ. ನೀವು ಬರೆದ ಸಾಲುಗಳನ್ನು ಡೈರಿಯಲ್ಲಿ ಬರೆದಿಟ್ಟುಕೊಂಡೆ
ವಂದನೆಗಳು

-ಧರಿತ್ರಿ

ಶಿವಪ್ರಕಾಶ್ said...

ಹೌದು ರೀ,
ನೆನಪುಗಳೇ ಹಾಗೆ,
ನಮ್ಮ ಬೆನ್ನುಬಿಡವು...

jithendra hindumane said...

ಹಲೋ ಧರಿತ್ರಿ,
ನಿಮ್ಮ ಭಾವನೆಗಳಿಗೆ ನನ್ನ ನಮನ.
ಕಾಲವೊಂದೆ ಎಲ್ಲವನ್ನು ಮಾಯಿಸುತ್ತೆ, ಮರೆಸುತ್ತೆ....

ಬಾಲು said...

kaalave maddu annodara bagge gottilla, aadre kaledu konda vyakthi akasmath matte inyavagalo sikkare.. a haleya jeevana vannu kanditha tharalaagadu. a vyakthi, a sambanda jeevana poora nirvatha vaagi kaadutte!!!

kelavara nenapu aadagella kannu thumbikollutte, adu avara absence na helutte alva?

ಧರಿತ್ರಿ said...

@ಶಿವಪ್ರಕಾಶ್...ಧನ್ಯವಾದಗಳು

@ಜಿತೇಂದ್ರ ಸರ್..ಧರಿತ್ರಿಗೆ ಸ್ವಾಗತ. ಹೀಗೇ ಪ್ರೋತ್ಸಾಹಿಸುತ್ತಿರಿ..ಬರ್ತಾ ಇರಿ. ಧನ್ಯವಾದಗಳು

@ಬಾಲು ಸರ್..ಹೌದು! ಕೆಲವೊಮ್ಮೆ ಹಾಗೆನೇ..! ನೆನಪುಗಳೂ ಹಾಗೆನೇ....ಆದರೆ ಅತೀವ ದುಃಖಗಳಿರಲ್ಲ ಅಷ್ಟೇ. ಧನ್ಯವಾದಗಳು

-ಧರಿತ್ರಿ

shivu.k said...

ಧರಿತ್ರಿ,

ಸಾವಿನ ಮನೆಯ ದುಃಖದ ಅನುಭವ ನನಗಾಗಿದೆ..ನಿನ್ನ ಲೇಖನ ಓದುತ್ತಿದ್ದಂತೆ, ನನ್ನಜ್ಜಿ, ಅಪ್ಪ ಮತ್ತು ತಂಗಿಯ ಸಾವಿನ ನೆನಪುಗಳು ಮರುಕಳಿಸಿ ಒಂದುಕ್ಷಣ ಕಣ್ಣು ಒದ್ದೆಯಾಯಿತು. ಮತ್ತೆ ನನಗೆ ಇತರ ಸಾವಿನ ಮನೆ ಎಡತಾಕಿದಾಗಲು ದುಃಖ ಉಮ್ಮಳಿಸಿಬಿಡುತ್ತೆ...ಅಂತ ಅನೇಕ ಘಟನೆಗಳಲ್ಲಿ ಮರೆಯಲಾಗದಿರುವಂತದ್ದು ನಮ್ಮ ದಿನಪತ್ರಿಕೆ ಹಂಚುವ ಹುಡುಗನೊಬ್ಬನ ಮೇಲೆ ಬಸ್ಸು ಹರಿದು ಅವನ ಪ್ರಾಣ ಹರಣ ಮಾಡಿದ್ದು. ಆಗ ನಾವೆಲ್ಲಾ ಆವನ ಕುಟುಂಬದ ದುಃಖದಲ್ಲಿ ಭಾಗಿದ್ದು ಈಗಲೂ ಕಾಡುತ್ತದೆ...

ಸುಂದರ ಸೊಗಸಾದ ಸರಳ ಮತ್ತು ನೇರವಾಗಿ ಮನಮುಟ್ಟುವ ಲೇಖನ .

ಧನ್ಯವಾದಗಳು..

Susheel Sandeep said...

"ದುಃಖಗಳು ಸಾಯುತ್ತವೆ, ನೆನಪುಗಳು ಸಾಯೊಲ್ಲ..?!" - ಅದ್ಭುತ ಪರಿಕಲ್ಪನೆ.

ಬರವಣಿಗೆ ಬಹಳಾನೇ ಹಿಡಿಸಿತು.
ನೀವೇ ಹೇಳಿದಂತೆ - "ದುಃಖಗಳು ಸಾಯಬೇಕು, ನೆನಪುಗಳು ಉಳಿಯಬೇಕು, ಖುಷಿಯ ಕ್ಷಣಗಳಷ್ಟೇ ನಿತ್ಯ ನಮ್ಮನ್ನು ಕಾಡುವ, ಖುಷಿಯೊಳಿಸುವ ಹುಣ್ಣಿಮೆಯಂತೆ ಪಸರಿಸಬೇಕು"
ಹಾಗೇ ಆಗಲಿ :)

Unknown said...

ಧಾತ್ರಿ
ನಿಮ್ಮ ಬರಹ ತು೦ಬಾ ಭಾವುಕ ಅನುಭವ ಕೊಡ್ತು. ನಿಜ ದುಃಖ ಮರೆತು ಹೋಗಬಹುದು, ಆದರೆ ನೆನಪುಗಳ ಸರಮಾಲೆ ಎ೦ದಿಗೂ ಕಣ್ಣಿಗೆ ಕಟ್ಟಿದ೦ತೆ ಜೀವ೦ತವಾಗಿ ಇರುತ್ತದೆ. ನನ್ನ ಕುಟು೦ಬದಲ್ಲಾದ ಸಾವಿನ ಸ೦ದರ್ಭದ ಮತ್ತು ನ೦ತರದ ಘಟನೆಗಳ ನೆನಪು ನಿಮ್ಮ ಲೇಖನ ಓದಿದ ನ೦ತರ ಕಾಡಿತು. ಇ೦ತಹ ಕಾಡುವ ಬರಹ ಬರೆಯುವ ನೀವು ಅಭಿನ೦ದನೀಯರು

ಜಲನಯನ said...

ದುಃಖ ಆ ಸಮಯದ ಘಟನಾವಳಿಯ ನೈಸರ್ಗಿಕ ಪ್ರತಿಕ್ರಿಯೆ, ಘಟನೆ ಕಳೆದರೆ, ಆ ಸಾಂದ್ರತೆ ಇಲ್ಲವಾದರೆ, ಅದರ ಸುತ್ತ ಸಂಬಂಧಿತ ಸಂವೇದನೆ ಇಲ್ಲವಾದರೆ..ದುಃಖ ಇರುವುದಿಲ್ಲ ಆದರೆ ನೆನಪು ಉಳಿಯುತ್ತದೆ, ಸಂವೇದನೆಯ ಒಟ್ಟಾರೆ ಭಾವ ಮನಸ್ಸಿಗೆ ಬರುತ್ತದೆ. ದುಃಖ ಭೌತಿಕ (physical) ಅದೇ ನೆನಪು, ಭಾವನೆ, ಸಂವೇದನೆ ಇತ್ಯಾದಿ..ಮಾನಸಿಕ ಅಥವಾ ಬೌದ್ಧಿಕ (sensory or mental). ಒಂದು ತನ್ನ ಸಮಯದ ಸಾಮ್ರಾಟ ಇನ್ನೊಂದು ಪ್ರತಿ ಸಮಯದ ವಾಸ್ತವ.
ಧರಿತ್ರಿಯವರೇ, ನಿಜಕ್ಕೂ ಒಳ್ಳೆಯ ಭಾವಮಂಥನವನ್ನು ಜಾಗೃತಗೊಳಿಸುತ್ತಿದ್ದೀರಿ ಕನ್ನಡ ಬ್ಲಾಗಿಗಳಲ್ಲಿ...ಮುಂದುವರೆಯಲಿ ಈ ನಿಮ್ಮ ಮಂಥನ

ಅಂತರ್ವಾಣಿ said...

ಧರಿತ್ರಿ,
ನಾನು ಇತ್ತೀಚೆಗೆ ಬರೆದ "ಹುಟ್ಟು ಸಾವು" ಕವನ ಜ್ಞಾಪಕವಾಯಿತು. ಇದೇ ವಿಚಾರದ ಬಗ್ಗೆ ಬರೆದಿದ್ದೆ.

ದುಃಖ ಅಥವಾ ಸುಖ ಸ್ವಲ್ಪ ಕಾಲವಿರುತ್ತದೆ ಅಷ್ಟೆ. ಆಮೇಲೆ ಅದನ್ನು ನೆನೆಸಿಕೊಂಡಾಗ ಮತ್ತೆ ದುಃಖ / ಸುಖ ಆಗುತ್ತದೆ. ಸ್ವಲ್ಪ ಸಮಯದ ನಂತರ ಎರಡೂ ಉಳಿಯೋದಿಲ್ಲ.

ಧರಿತ್ರಿ said...

@ಶಿವಣ್ಣ...
ಬರಹ ಮೆಚ್ಚಿದ್ದಕ್ಕೆ ಪುರುಸೋತ್ತು ಮಾಡಿಕೊಂಡು ಓದಿದ್ದಕ್ಕೆ ಧನ್ಯವಾದಗಳು. ಬರ್ತಾ ಇರಿ

@ಜಯಶಂಕರ್..ನಿಮ್ಮ ಕವನ ನಾನೂ ಓದಿದ್ದೆ. ಧನ್ಯವಾದಗಳು.

@ಗುರುರಾಜ್...ನಿಮ್ಮ ಮಾತುಗಳೇ ಎನಗೇ ಸ್ಫೂರ್ತಿ

@ಸುಶೀಲ್ ಸಂದೀಪ್..ಧರಿತ್ರಿಗೆ ಸ್ವಾಗತ. ಸಮಯ ಸಿಕ್ಕಾಗೆಲ್ಲಾ ಇಲ್ಲಿ ಬಂದು ಒಂದಷ್ಟು ಹೊತ್ತು ಹರಟಿ ಹೋಗಿ. ಧನ್ಯವಾದಗಳು.

@ಜಲನಯನ ಸರ್..ನಮಸ್ತೆ. ದುಃಖ-ನೆನಪುಗಳ ಮಾನಸಿಕ ಆಯಾಮಗಳ ಕುರಿತುಹೇಳಿದ್ದೀರಿ. ಭಾವ ಮಂಥನ ಮುಂದುವರಿಯುತ್ತೆ. ನೀವು ಬಂದೇ ಬರ್ತಿರಲ್ಲಾ...ಧನ್ಯವಾದಗಳು.

-ಧರಿತ್ರಿ

Mohan Hegade said...

ನಿಜ ದುಃಖದ ವೇಳೆಯಲ್ಲಿ ಜಗತ್ತೇ ವಿಚಿತ್ರ ಅನ್ನಿಸುತ್ತೆ, ಆದರೆ ಕಾಲ ಎಲ್ಲವನ್ನು ಮರೆಸುವಾಗ ನೆನಪೊಂದೆ ಇರುತ್ತೆ. ಅದೇ ದುಃಖದ ಸನ್ನಿವೇಷದ ನೆನಪು ಎಂದೂ ಒಮ್ಮೆ ಅದಾಗ ಅದು ಸಂತೋಷದ ನೆನಪಾಗುವ ವಿಷಯಗಳು ಇರುತ್ತೆ ಅಲ್ಲವಾ?. ನಿಮ್ಮ ದುಃಖದಲ್ಲಿ ನಾನು ಭಾಗಿಯಾಗುವೆ, ನೆನಪಿನ ಸುಂದರ ಬಾಳ್ವೆಗೆ ಶುಭ ಕೋರುವೆ. ಇಷ್ಟವಾಗುವ ಪದಗಳ ಸಾಲಲ್ಲಿ ಒಮ್ಮೆಲೇ ಹಳೆಯದೆಲ್ಲ ನೆನಪಿಸುವ ಸುಂದರ ಬರಹ.
ದನ್ಯರಿ.

Chevar said...

ನೆನಪುಗಳ ಜತೆ ಅದ್ಭುತ ಪಯಣ.

ಸುಧೇಶ್ ಶೆಟ್ಟಿ said...

ಧರಿತ್ರೀಯವರೇ...

ಆಳವಾದ ಬರಹ.... ಎಷ್ಟು ನಿಜ ಅಲ್ವಾ.... ಹಿ೦ದೆ ಜೀವನವೇ ಮುಳುಗಿಹೋಯಿತು ಅನ್ನುವಷ್ಟು ಕಾಡಿಸಿದ ನೋವು ಈಗ ಇಲ್ಲ.... ಕಾಲ ಎಲ್ಲವನ್ನೂ ಮರೆಸುತ್ತದೆ ಅನ್ನುವುದು ಎಷ್ಟು ನಿಜ.... "ಏನಾದರೂ ಮು೦ದೆ ಸಾಗು ನೀ...." ಹಾಡು ನೆನಪಾಗುತ್ತದೆ...

ಯಾವುದೇ ನೋವು ಬ೦ದರೂ ಅದು ಕ್ಷಣಿಕ ಎ೦ದು ಅದರ ಬಗ್ಗೆ ಚಿ೦ತಿಸುವುದನ್ನು ಕಡಿಮೆ ಮಾಡಿಕೊಳ್ಳುವ ಅಭ್ಯಾಸ ಮಾಡಿಕೊ೦ಡಿದ್ದೇನೆ ಈಗ....

ಬಾಲು said...

enri bahala dina aithu, enu barede illa... ondu vaarada mele aithu.

patragalu haagu nimma nenapina chitra galannu kayuttiruva odugaru iddare.. bega bareyiri! :)

ಧರಿತ್ರಿ said...

@ಮೋಹನ್ ಹೆಗಡೆ ಅವರೇ ನಮಸ್ಕಾರ..ಬರಹದ ಕುರಿತ ಮೆಚ್ಚುಗೆಗೆ ಧನ್ಯವಾದಗಳು, ಬರ್ತಾ ಇರಿ..ನಿಮ್ ಮಾತುಗಳೆಲ್ಲಾ ನಂಗೆ ಟಾನಿಕ್ ಇದ್ದಂಗೆ.

@ಚೇವಾರ್..ಧನ್ಯವಾದಗಳು

@ಸುಧೇಶ್..ಧನ್ಯವಾದಗಳು. ಬರ್ತಾ ಇರಿ..ಒಂದಷ್ಟು ಹೊತ್ತು ಧರಿತ್ರಿ ಜೊತೆ ಹರಟಿದ್ದಕ್ಕೆ ಥ್ಯಾಂಕ್ಸ್. ಮತ್ತೆ ಬರ್ತೀರಲ್ಲಾ.

@ಬಾಲು ಸರ್..ಹೂ! ನಿರಾಶೆ ಮಾಡೊಲ್ಲ..ಬರೀತಾ ಇರ್ತೀನಿ

-ಧರಿತ್ರಿ