ರೈಲನ್ನು ದೂರ ನಿಂತು ನೋಡಿದವಳಿಗೆ ಅಂದು ರೈಲಿನ ಒಳಗಡೆ ಹೋಗಿ ನೋಡುವ ತವಕ. ಕಿಟಕಿ ಬಳಿ ಕುಳಿತರೆ ಏನೆಲ್ಲಾ ನೋಡಬಹುದು, ನನಗೂ ದಾರಿಹೋಕರೆಲ್ಲಾ ಕೈ ಬೀಸಬಹುದು, ಹೊಲ ಗದ್ದೆಗಳನ್ನು, ಹಸಿರು ಹಾಸನ್ನು, ಮುಗಿಲ ಚಿತ್ತಾರವನ್ನು ನೋಡುತ್ತಾ ಹೋಗಬಹುದೆನ್ನುವ ಖುಷಿ.
ಸಂಜೆ ನಾಲ್ಕರ ಹೊತ್ತಿಗೆ ಗಂಟೆ ಢಣ ಢಣ ಎನ್ನುವುದೇ ತಡ, ಗೇಟು ದಾಟಿ ಒಂದು ಫರ್ಲಾಂಗು ಓಡಿ ಆಗುತ್ತಿತ್ತು. ಏಕೆಂದರೆ, ನಾಲ್ಕೂವರೆ ಸರಿಯಾಗಿ ರೈಲು ಬರುತ್ತಿತ್ತು!. ಅದು ಕೂ ಎನ್ನುತ್ತಾ ಚುಕುಬುಕು ಸದ್ದು ಮಾಡುತ್ತಾ ದಟ್ಟ ಹೊಗೆ ಸೂಸುತ್ತಾ ಬರುವುದನ್ನು ನೋಡುವುದೇ ಚೆಂದ. ಅದು ಉಗಿಬಂಡಿ. ಇನ್ನು ರೈಲು ಬಂದಾಗ ಕಿಟಕಿಯಿಂದ ಇಣುಕುತ್ತಿದ್ದವರಿಗೆ ಟಾಟಾ ಮಾಡುವುದೇ ಖುಷಿ. ರೈಲು ನೋಡುವ ಸಂಭ್ರಮ ಹೈಸ್ಕೂಲ್ ಮುಗಿಯೋ ತನಕ ಇತ್ತು. ಕಾಲೇಜಿಗೆ ಬಂದ ಮೇಲೆ ರೈಲು ನೋಡಲಾಗಲೇ ಇಲ್ಲ.
ಬಳಿಕ ರೈಲು ಪ್ರಯಾಣ ಮಾಡುವ ಅವಕಾಶ ಸಿಕ್ಕಿದ್ದು ಮದ್ವೆಯ ಬಳಿಕ. ನಮ್ಮನೆಯವರು ಹನಿಮೂನ್ ಗೆಂದು ಕೇರಳಕ್ಕೆ ರೈಲು ಬುಕ್ ಮಾಡಿದ್ದರು. ಅಲ್ಲಿಯವರೆಗೆ ರೈಲಲ್ಲಿ ಪ್ರಯಾಣಿಸದ ನಾನು ಹುಟ್ಟಿದ 27 ವರ್ಷಗಳ ಬಳಿಕ ರೈಲು ಹತ್ತಿದ್ದೆ. ಅದೂ ಮೆಜೆಸ್ಟಿಕ್ ನಲ್ಲಿ. ರೈಲನ್ನು ದೂರ ನಿಂತು ನೋಡಿದವಳಿಗೆ ಅಂದು ರೈಲಿನ ಒಳಗಡೆ ಹೋಗಿ ನೋಡುವ ತವಕ. ಕಿಟಕಿ ಬಳಿ ಕುಳಿತರೆ ಏನೆಲ್ಲಾ ನೋಡಬಹುದು, ನನಗೂ ದಾರಿಹೋಕರೆಲ್ಲಾ ಕೈ ಬೀಸಬಹುದು, ಹೊಲ ಗದ್ದೆಗಳನ್ನು, ಹಸಿರು ಹಾಸನ್ನು, ಮುಗಿಲ ಚಿತ್ತಾರವನ್ನು ನೋಡುತ್ತಾ ಹೋಗಬಹುದು. ಎಲ್ಲವನ್ನೂ ನೆನೆಸಿಕೊಂಡು ಮನಸ್ಸು ಖುಷಿಪಡುತ್ತಿತ್ತು. ಮದ್ವೆಯಾಗಿ ಹನಿಮೂನ್ ಗೆ ಹೋಗ್ತೀವಿ ಅನ್ನೋ ಖುಷಿಗಿಂತಲೂ ರೈಲಿನೊಳಗೆ ಏನೇನು ಅಚ್ಚರಿ, ಅದ್ಭುತಗಳಿವೆ ಎಂಬ ಬಗ್ಗೆ ನಾನು ಹೆಚ್ಚು ಕುತೂಹಲಗೊಂಡಿದ್ದೆ.
ರೈಲು ಹತ್ತಿಯಾಯಿತು. ಕಿಟಕಿ ಬದಿಯ ಸೀಟು ಗಿಟ್ಟಿಸಿಕೊಂಡಾಯ್ತು. ಆದರೆ, ಸ್ಲಿಪರ್ ಕೋಚ್ ಆಗಿದ್ದರಿಂದ ನಮ್ಮನೆಯವರು ನೀನು ಕೆಳಗಡೆ ಮಲಗು, ನಾನು ಮೇಲೆ ಮಲಕ್ಕೊಳ್ತಿನಿ ಅಂದ್ರು. ನನಗೆ ಭಯ ಶುರು. ನಿದ್ದೆ ಮಾಡಿದಾಗ ಯಾರಾದ್ರೂ ಕಳ್ಳರು ಬಂದ್ರೆ ಏನು ಗತಿ? ಕಣ್ಣುಗಳು ಕೊಳಗಳಾದವು. ಎಷ್ಟು ಸಮಾಧಾನ ಹೇಳಿದ್ರೂ ಕೇಳದೆ, ಅವರನ್ನು ಪಕ್ಕ ಕೂರಿಸಿಕೊಂಡು ಅಂಟಿಕೊಂಡು ಕುಳಿತುಬಿಟ್ಟಿದ್ದೆ. ಬಾತ್ ರೂಂಗೆ ಹೋಗಕೂ ಭಯ. ಹೇಗೋ ಬೆಳಗಾಯ್ತು. ಕೆಲವರು ರೈಲಿನ ಬಾಗಿಲಲ್ಲಿ ನಿಂತು ಎಲ್ಲವನ್ನೂ ನೋಡುತ್ತಾ, ಕೈ ಬೀಸುತ್ತಾ ಸಾಗುವಾಗ ಬಿದ್ದುಬಿಟ್ಟರೆ? ಎಂದು ನಾನೇ ಆತಂಕಗೊಳ್ಳುತ್ತಿದ್ದೆ. ಬೆಳಿಗ್ಗೆ 10ರ ಹೊತ್ತಿಗೆ ಕೊಚ್ಚಿನ್ನಲ್ಲಿ ಇಳಿದಾಗ ಮನಸ್ಸು ನಿರಾಳವಾಯಿತು.
********
ಇನ್ನೊಂದು ಮೈಸೂರಿಗೆ ರೈಲಿನಲ್ಲಿ ಪ್ರಯಾಣ. ಅಂದು ಸಿಕ್ಕಿದ್ದು ಸಾಮಾನ್ಯ ಬೋಗಿ. ರೈಲು ಸಹವಾಸಬೇ ಬೇಡ ಅನಿಸಿದ್ದು ಆವಾಗ. ಎದುರುಗಡೆ ಏಳೆಂಟು ಹೆಂಗಸರು, ಪಕ್ಕದಲ್ಲಿ ಕಚ್ಚೆ ಹಾಕಿದ ರೈತರು. ಪದೇ ಪದೇ ವೀಳ್ಯದೆಲೆ ಜಗಿದು ಕಿಟಕಿ ಬದಿಯಲ್ಲಿ ಕುಳಿತು ಮೌನವಾಗಿದ್ದ ನನ್ನ ಸ್ವಲ್ಪ ಪಕ್ಕ ಸರೀಮ್ಮಾ ಎಂದೇಳಿ ಕ್ಯಾಕರಿಸಿ ಉಗಿಯೋರು. ಎದುರುಗಡೆ ಕುಳಿತ ಹೆಂಗಸರ ಬಾಯಲ್ಲಂತೂ ಊರ ಸುದ್ದಿ, ಸೀರಿಯಲ್ ಗಳು ಎಲ್ಲವೂ ತೂರಿ ಬಂದವು. ಮೈಸೂರು ತಲುಪುವವರೆಗಿನ ಆ ಮೂರು ಗಂಟೆಗಳು ನನಗೆ ಅತ್ಯಂತ ಕಷ್ಟದ ಸಮಯವಾಗಿತ್ತು.
*********
ಇನ್ನೊಂದು ಮೈಸೂರಿನಿಂದ ವಾಪಸ್ ಬರುವ ಪ್ರಸಂಗ. ಜನರಲ್ ಬೋಗಿ ಕಿರಿಕಿರಿ ಬೇಡೆಂದು ಮೊದಲೇ ಟಿಕೆಟ್ ಕಾಯ್ದಿರಿಸಲಾಗಿತ್ತು. ಕಾರ್ಯಕ್ರಮಗಳೆಲ್ಲಾ ಮುಗಿಸಿ ಸೂರ್ಯ ಮುಳುಗುವ ಹೊತ್ತಿಗೆ ರೈಲು ಪ್ರಯಾಣಕ್ಕೆ ಸಿದ್ಧಳಾಗಿದ್ದೆ. ರೈಲು ತಡವಾಗಿ ಬಂದಿದ್ದರಿಂದ ನೂಕುನುಗ್ಗಲು. ಎಲ್ಲರೂ ಎಲ್ಲರನ್ನೂ ದೂಡಿ, ಒದ್ದು ಸಾಗುವವರೇ. ನಮ್ಮನೆಯವರು ನನ್ನ ಕೈಹಿಡಿದುಕೊಂಡು ನನ್ನನ್ನೂ ಎಳೆದುಕೊಂಡು ರೈಲು ಹತ್ತಲು ಅಣಿಯಾದರು. ಆದರೆ, ಜನಸಂದಣಿಯಲ್ಲಿ ನನ್ನ ಕೈ ತಪ್ಪಿ ನಾನು ಕೆಳಗಡೆಯೇ ಬಾಕಿಯಾದೆ. ಮತ್ತೆ ನಮ್ಮವ್ರು ನನ್ನ ಹುಡುಕಿಕೊಂಡು ವಾಪಸ್ ಬಂದಾಗ ಅಳುತ್ತಾ ಕೆಳಗಡೆಯೇ ನಿಂತಿದ್ದೆ. ಅಷ್ಟೊತ್ತಿಗೆ ರೈಲು ಚಲಿಸಲು ಆರಂಭಿಸಿತ್ತು!
*********
ಈಗ ನಮ್ಮೂರಿಗೂ ರೈಲು ಬರುತ್ತಿದೆ. ಆದರೆ, ಸೀಟು ಸಿಗೋದೇ ಕಷ್ಟ. ಶಿರಾಡಿಘಾಟ್ ನಲ್ಲಿ ಬಸ್ ಗಳಲ್ಲಿ ಓಲಾಡಿಕೊಂಡು ಹೋಗುವ ನನಗೆ ಶಿರಾಡಿಘಾಟ್ ನ ಹಸಿರು ತಪ್ಪಲಲ್ಲಿ ಹಗಲಿನಲ್ಲಿ ರೈಲಿನಲ್ಲಿ ಪ್ರಯಾಣಿಸಬೇಕೆನ್ನುವ ಆಸೆಯಿದೆ.
2 comments:
ಹಾ..!! ರೈಲಿನಲ್ಲಿ ಹೋಗುವ ಮಜವೇ ಬೇರೆ... ನನಗೆ ಚೆನ್ನಾಗಿ ಅನುಭವವಾಗಿದೆ.. ಚಿಕ್ಕವರಿರುವಾಗ ನನ್ನ ತಂದೆ ನಮ್ಮನ್ನೆಲ್ಲಾ ರೈಲಿನಲ್ಲೇ ಊರಿಗೆ ಕರೆದುಕೊಂಡು ಹೋಗುತ್ತಿದ್ದುದ್ದು.
ಇಷ್ಟೆಲ್ಲಾ ತೊಂದರೆಗಳನ್ನು ಅನುಭವಿಸಿಯೂ ಸಹ, ಶಿರಾಡಿ ಘಟ್ಟದ ಚೆಲುವನ್ನು ನೋಡಲು ರೈಲಿನಲ್ಲಿ ಪಯಣಿಸಬೇಕೆನ್ನುವ ನಿಮ್ಮ ಹಂಬಲ ಮೆಚ್ಚತಕ್ಕಂತಹದು. ನಿಮ್ಮ ಬಯಕೆ ಬೇಗನೇ ಫಲಿಸಲಿ!
Post a Comment