ನಾನು ಡಿಗ್ರಿ ಮುಗಿಸಿ ಕಾಲೇಜಿಂದ ಹೊರನಡೆದಾಗ ಅಕ್ಕಾ ನಾ ನಿನ್ ಜೊತೆಗೇ ಬರ್ತೀನಿ ಎಂದು ಅಮ್ಮನೆದುರು ಮಗು ಗೋಗರದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದ. "ನನಗಿಂತ ಹೆಚ್ಚಾಗಿ ನಿನ್ನ ಪ್ರೀತಿಸೋರು ಸಿಕ್ಕಾಗಲೂ ನನ್ನ ಮರೆಯಲ್ಲ ತಾನೇ?" ಎಂದು ಆಟೋಗ್ರಾಫ್ ತುಂಬಾ ಗೀಚಿಟ್ಟು ನನ್ನ ಕಣ್ಣುಗಳೂ ಒದ್ದೆಯಾಗುವಂತೆ ಮಾಡಿದ್ದ. ಕಾರಿಂಜ ದೇವಸ್ಥಾನ ಬೆಟ್ಟದ ತುತ್ತತುದಿಗೆ ಹೋಗಿ ನನ್ನ ಜೊತೆ ಫೋಟೋ ತೆಗೆಸಿಕೊಂಡು ನಿಂಗೆ ಬಾವ ಹುಡುಕುತ್ತೀನಿ ಅಂತ ತಮಾಷೆ ಮಾಡುತ್ತಿದ್ದ. ಸಿಕ್ಕವರಿಗೆಲ್ಲಾ ಫೋಟೋ ತೋರಿಸಿ ಇದು ನನ್ನಕ್ಕ ಅಂತ ಹೆಮ್ಮೆಪಡುತ್ತಿದ್ದ. ಅಂತೂ ನಾನು ಬೆಂಗಳೂರಿಗೆ ಬಂದಾಗಲೂ ನಿತ್ಯ ಮೊಬೈಲ್, ಮೆಸೇಜ್ ಗಳೊಂದಿಗೆ ನನ್ನೊಂದಿಗೆ ಕಲರವಗುಟ್ಟುತ್ತಿದ್ದ. ಡಿಗ್ರಿ ಮುದಿದ್ದೇ ತಡ..ಮನೆಯಲ್ಲಿ ಯಾರೂ ಹೇಳಿದ್ರೂ ಅಕ್ಕನ ಜೊತೆಗೇ ಇರ್ತೀನಿ ಅಂತ ಹಠ ಹಿಡಿದು ಬೆಂಗಳೂರಿಗೆ ಬಂದುಬಿಟ್ಟ. ನನ್ನ ಪುಟ್ಟ ಮನೆಯಲ್ಲಿ ನನ್ನ ಮಡಿಲೇ ಸೇರಿಬಿಟ್ಟ.
ನನ್ನ ಕೆಟ್ಟ ಕೋಪ, ಅಸಹನೆ, ಸಿಡುಕು ಎಲ್ಲಾವನ್ನೂ ಸಹಿಸಿಕೊಂಡು ನನ್ನ ಜೊತೆ ಹೆಜ್ಜೆಹಾಕೋನು ನನ್ನ ತಮ್ಮ. ರಾತ್ರಿ 10 ಗಂಟೆಗೆ ಮನೆ ಸೇರಿದರೂ. "ಮೇಡಮ್ಮೋರೇ ಎದ್ದೇಳ್ತೀರಾ. ಮಿ. ಸಂದೇಶ್ ಬಂದಿದ್ದಾರೆ" ಅಂತೇಳಿ ನನ್ನ ಕೋಣೆಯ ಕಿಟಕಿ ಬಡಿದು ಎಬ್ಬಿಸಿ, ಸ್ವಲ್ಪ ಊಟ ಮಾಡಕ್ಕ..ಅನ್ನುತ್ತಾ ಮತ್ತೊಮ್ಮೆ ಊಟ ಮಾಡಿಸೋನು ನನ್ನ ಮುದ್ದು ತಮ್ಮ. ಬೆಳಿಗ್ಗೆ ಆರು ಗಂಟೆಗೆ ಎದ್ದು ನಾನು ಪಾತ್ರೆಗಳ ಜೊತೆ ಸದ್ದು ಮಾಡುವಾಗ, ದಡಕ್ಕನೆ ಎದ್ದು ನನ್ನ ಜೊತೆ ತರಕಾರಿ ಹಚ್ಚೋಕೆ ಸಾಥ್ ನೀಡೋನು, ನಾನು ಟೀ ಕುಡಿದು ಸ್ಬಾನಕ್ಕೆ ಹೋದಾಗ ಮನೆ ಗುಡಿಸಿ-ಒರೆಸಿ, ಪೂಜೆಗೆ ರೆಡಿ ಮಾಡೋನು ನನ್ನ ತಮ್ಮ. ನಾನು ಬೇಜಾರದಲ್ಲಿದ್ದಾಗ ಕೆದಕಿ ಕೆದಕಿ ಕೇಳಿ ತಲೆಯೆಲ್ಲಾ ತಿಂದು ಸ್ವಲ್ಪ ಬೈಸಿಕೊಂಡು ಆಮೇಲೆ ನನ್ನ ಮನಸ್ಸನ್ನು ತಣ್ಣಗಾಗಿಸೋನು ನನ್ನ ತಮ್ಮ. ನಾ ಬೈದ್ರೆ ಸುಮ್ಮನಾಗಿ, ನನ್ನ ಸಿಟ್ಟೆಲ್ಲಾ ಕರಗಿದ ಮೇಲೆ ನೀನು ಹಾಗೆಲ್ಲಾ ಹೇಳಬಾರದಿತ್ತು ಎಂದು ನನ್ನ ತಪ್ಪನ್ನು ನನಗೇ ಮನದಟ್ಟು ಮಾಡೋನು. ತಿಂಗಳ ಕೊನೆಯಲ್ಲಿ ಬೇಗನೇ ಸಂಬಳ ಕೈಗೆ ಸಿಗದಾಗ...ನನ್ನ ತಲೆಬಿಸಿ ನೋಡಿ..ಅಕ್ಕಾ ಸ್ವಲ್ಪ ದಿನಸಿ ತಕೋಳೋಣ..ಸಂಬಳ ಆದ ಮೇಲೆ ಎಲ್ಲಾ ತಕೋಳೋಣಂತೆ ಎಂದೇಳಿ ತಲೆಬಿಸಿ ಕಡಿಮೆಯಾಗಿಸೋನು ನನ್ನ ತಮ್ಮ. ನಾನು ಹೊಸ ಡ್ರೆಸ್ಸು ತಕೋಳುವಾಗ ಕಲರ್ ಸೆಲೆಕ್ಟ್ ಮಾಡಿ, ಅದನ್ನು ಹಿಂಗೇ ಹೊಲಿಸು, ಅದಕ್ಕೆ ಇಂಥ ಕಿವಿಯೋಲೆ, ಬಳೆ ಹಾಕೆಂದು ದುಂಬಾಲು ಬೀಳೋನು, ಅವನಿಗೆ ವಾರದ ರಜಾದಿನದಂದು ಬೇಗನೆ ಅಡುಗೆ ಎಲ್ಲಾ ರೆಡಿಮಾಡಿ, ನಾನು ಸಂಜೆ ಆಫೀಸ್ ನಿಂದ ಹೊರಟಾಗ ವಾಕಿಂಗ್ ಗೆ ರೆಡಿಯಾಗೋನು, ಮಲ್ಲಿಗೆ ಮತ್ತು ಗುಲಾಬಿ ಹೂವು ತಂದು ನನ್ನ ತಲೆಗೆ ಮುಡಿಸಿ ನನ್ನ ನೋಡಿ ಖುಷಿಪಡೋನು, ನೀನು ಮದುವೆಯಾಗುವ ತನಕ ನಿನ್ನ ಜೊತೆ ಇದ್ದುಬಿಡ್ತೀನಿ...ಆಮೇಲೆ ನಿಮ್ಮನೆ ಪಕ್ಕನೇ ನಂಗೊಂದು ರೂಮ್ ಮಾಡಿ ಕೊಡಕ್ಕಾ ಎಂದು ನಿತ್ಯ ತಮಾಷೆ ಮಾಡೋ ನನ್ನ ಪುಟ್ಟ ತಮ್ಮನನ್ನು ಕಂಡಾಗ ನನ್ನೆಲ್ಲಾ ನೋವುಗಳು ಕರಗಿ, ಮನಸ್ಸು ಖುಷಿಯ ಕಡಲಲ್ಲಿ ತೇಲಿಬಿಡುತ್ತೆ. ನನ್ ಪುಟ್ಟ ಮನೆಯಲ್ಲಿ ಖುಷಿಯ ಸಾಗರವನ್ನೇ ತಂದಿಡುವ ನನ್ನ ತಮ್ಮನ ಸಹನೆ ಕಂಡಾಗ, ಛೇ! ಆ ತಾಳ್ಮೆಯನ್ನು ದೇವರು ನನಗೇಕೆ ಕೊಟ್ಟಿಲ್ಲ ಅನಿಸುತ್ತೆ. ನೋವು-ನಲಿವಿಗೆ ಪ್ರೀತಿಯ ಅಮ್ಮನಾಗಿ, ತಿದ್ದಿ-ತೀಡುವ ಅಕ್ಕರೆಯ ಗೆಳೆಯನಾಗಿ, ಬುದ್ಧಿ ಹೇಳುವ ಅಕ್ಕ-ಅಣ್ಣನಾಗಿರುವ ನನ್ನ ತಮ್ಮನಂದ್ರೆ ಅಮ್ಮನಷ್ಟೇ ನಂಗೆ ಪ್ರೀತಿ.
ಪುಟ್ಟಾ....
ನಿನ್ನೊಳಗೆ ತೂರಿಬರುವ
ಬೆಳಕಿನ ಕಿರಣಗಳನ್ನು ಹಿಡಿದಿಡು....
ಬದುಕಿನ ಎದೆಯಿಂದ ಎದೆಗೆ
ಪ್ರೀತಿಯ ಗಾಳಿ ಸೋಕಿಬಿಡು..
ಎಲ್ಲರ ನೋವು-ನಲಿವುಗಳ ಜೊತೆಯಾಗಿ ನಲಿದುಬಿಡು..ನನ್ನ ತಮ್ಮನಾಗಿ!
ನಿನ್ನೊಳಗೆ ತೂರಿಬರುವ
ಬೆಳಕಿನ ಕಿರಣಗಳನ್ನು ಹಿಡಿದಿಡು....
ಬದುಕಿನ ಎದೆಯಿಂದ ಎದೆಗೆ
ಪ್ರೀತಿಯ ಗಾಳಿ ಸೋಕಿಬಿಡು..
ಎಲ್ಲರ ನೋವು-ನಲಿವುಗಳ ಜೊತೆಯಾಗಿ ನಲಿದುಬಿಡು..ನನ್ನ ತಮ್ಮನಾಗಿ!
ಸವಿಮನದ ಹೊಲದಲ್ಲಿ
ಪ್ರೀತಿ ಪ್ರೇಮ ಸ್ನೇಹಗಳು
ಬೆಳೆದು ನಿಲ್ಲಲಿ, ಸುಗ್ಗಿ ಅರಳಲಿ
ನಿನ್ನ ಬಾಳು ಸದಾ ಹಸಿರಾಗಿರಲಿ..
ಪ್ರೀತಿ ಪ್ರೇಮ ಸ್ನೇಹಗಳು
ಬೆಳೆದು ನಿಲ್ಲಲಿ, ಸುಗ್ಗಿ ಅರಳಲಿ
ನಿನ್ನ ಬಾಳು ಸದಾ ಹಸಿರಾಗಿರಲಿ..
ಪುಟ್ಟಾ...ನಿನಗಿದೋ ಹುಟ್ಟುಹಬ್ಬದ ಶುಭಾಶಯಗಳು.
23 comments:
ಧರಿತ್ರಿ.
ಬರಹ ಮತ್ತು ಭಾಂದವ್ಯದ ಆಳ ಎರಡು ತುಂಬಾ ಚೆನ್ನಾಗಿದೆ....
ನಿಮ್ಮ ತಮ್ಮನಿಗೆ ನನ್ನ ಕಡೆಯಿಂದ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳನ್ನು ತಪುಪಿಸಿ ಬಿಡಿ.
ಕ್ಷಮಯಾ ಧರಿತ್ರಿ
ನಿಮ್ಮ ಪ್ರೀತಿ-ಕೋಪ-ತಾಪ ಗಳ ನಡುವೆ ನಿನ್ನನ್ನು ಭರಿಸುತ್ತ, ನಿನಗೆ ಭ್ರಾತೃಪ್ರೀತಿಯನ್ನು ಧಾರೆಯೆರೆದು ನಿನಗೆ ಸ೦ತಸದ ಕ್ಷಣಗಳನ್ನು ಕೊಡುತ್ತಾ, ನಿನ್ನ ನೋವಿಗೆ ಹೆಗಲಾಗುವ ತಮ್ಮ ಸ೦ದೇಶನ ಹುಟ್ಟುಹಬ್ಬಕ್ಕೆ ನನ್ನ ಕಡೆಯಿ೦ದ ಹಾರ್ದಿಕ ಶುಭಸ೦ದೇಶಗಳು. ಚಿರಕಾಲ ಇರಲಮ್ಮ ಈ ಪ್ರೀತಿ-ಬ೦ಧ. ಆಪ್ತವಾಗಿದೆ ಬರಹ, ಬರಹದೊಳಗಿನ ಭಾವನೆ.
ಇದನ್ನು ಓದಿ, ನಾನೇ ತಮ್ಮನ ಜಾಗದಲ್ಲಿ ಕೂತಿದ್ದೆ.
ನನಗೆ ಅಕ್ಕ ಇಲ್ಲ, ಆದ್ದರಿಂದ ಈ ಅನುಭವದಿಂದ ವಂಚಿತ.
ಬರಹ ಫರ್ಸ್ಟ್ ಕ್ಲಾಸ್.
ಕಟ್ಟೆ ಶಂಕ್ರ
ಧರಿತ್ರಿ ಅವರೇ,
ನಿಮ್ಮಂತಹ ಅಕ್ಕನನ್ನು ಪಡೆದ, ಆ ತಮ್ಮ ಧನ್ಯ..
ಹಾಗು, ಅವನಂತ ತಮ್ಮನನ್ನು ಪಡೆದ, ನೀವು ಕೂಡ ಧನ್ಯ.
ನಿಮ್ಮ ತಮ್ಮನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...
ಧರಿತ್ರಿಯವರೇ,
ನಿಮ್ಮ ತಮ್ಮನಿಗೆ ನನ್ನ ಪರವಾಗಿ ಹುಟ್ಟು ಹಬ್ಬದ ಶುಭಾಶಯಗಳು, ಅವನ ಮೇಲೆ ನೀವು ಇಟ್ಟಿರುವ ಪ್ರೀತಿ ಮೆಚ್ಚುವಂತದ್ದೆ, ಒಳ್ಳೆಯ ಬರಹ ಎಂದಿನಂತೆ, ನಿಮ್ಮ ಹಾಗೂ ನಿಮ್ಮ ತಮ್ಮನ ಪ್ರೀತಿ ಎಂದಿಗೂ ಹೀಗೆ ಇರಲಿ
ತಮ್ಮನ ಮೇಲಿನ ಪ್ರೀತಿ, ಅಕ್ಕರೆಯನ್ನು ಯಾವ ಅಕ್ಕನೂ ಇದಕ್ಕಿಂತ ಚೆನ್ನಾಗಿ ಹೇಳಲಾರಳೇನೋ. ತುಂಬಾ ಚೆನ್ನಾಗಿದೆ. ಇಷ್ಟವಾಯಿತು.
ನಿಮ್ಮ ಆ ಮುದ್ದು ತಮ್ಮನಿಗೆ ನನ್ನ ಕಡೆಯಿಂದಲೂ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ ಥರಾ ಕವನ ಬರೆಯೋಕೆಲ್ಲ ಬರಲ್ಲ; ಅದ್ಕೇ, ಇಷ್ಟೇ ಹೇಳಬಲ್ಲೆ :)
- ಉಮೀ
ನಿಮಗೆ ನಿಮ್ಮ ತಮ್ಮನಿಗೆ ಅಭಿನಂದನೆಗಳು .ಲೇಖನ ತುಂಬಾ ಚೆನ್ನಾಗಿದೆ.
-ಮಲ್ಲಿಕಾರ್ಜುನ.ಡಿ.ಜಿ.
ಧರಿತ್ರಿಯವರೇ,
ಬರಹ ತುಂಬಾ ಆಪ್ಯಾಯಮಾನವಾಗಿದೆ... ಓದಿದ ಪ್ರತಿಯೂಬ್ಬರಿಗೂ, ತಮ್ಮ ಒಡಹುಟ್ಟಿದವರೊಡನೆ ಕಳೆದ ಮಧುರ ಕ್ಷಣಗಳು ನೆನಪಿಗೆ ಬರುವಂತೆ ಮಾಡುತ್ತವೆ... ಅಂತಹ ತಮ್ಮನಿರುವುದಕ್ಕಾಗಿ ಹಾಗೂ ಆ ಅನುಭವಗಳನ್ನು ಇಷ್ಟು ಭಾವನಾತ್ಮಕವಾಗಿ ಬರೆದುದಕ್ಕಾಗಿ ಪ್ರೀತಿಯ ಅಭಿನಂದನೆಗಳು!
- ದಿವ್ಯಾ
ಧರಿತ್ರಿ,
ಎಷ್ಟು ಚೆನ್ನಾಗಿ ಬರೆದಿದ್ದೀರಿ, ವಾಹ್....ಇದರಿಂದನೇ ಗೊತ್ತಾಗುತ್ತೆ ನೀವು ಎಷ್ಟು ಭಾವ ಜೀವಿ ಎಂದು.. ಅದಕ್ಕೆ ನೀವು ಅಸ್ತು ಬೈದರು, ಕೊಪಿಸಿಕೊಂಡರು ನಿಮ್ಮ ತಮ್ಮ ನಿಮ್ಮ ಬಿಟ್ಟು ಹೋಗದೆ ಇರುವುದು ....
ನಿಮ್ಮ ತಮ್ಮನಿಗೆ ನಮ್ಮ ಕಡೆ ಇಂದಾನು ಹುಟ್ಟು ಹಬ್ಬದ ಶುಭಾಶಯ ಹೇಳಿ ಬಿಡಿ....
ಗುರು
ನನ್ನ ರೂಮಿನಲ್ಲಿ ನಾನೊಬ್ಬನೇ ಇದ್ದದ್ದಕ್ಕೋ, ಸ್ವಂತ ಅಕ್ಕ ತಂಗಿಯರಿಲ್ಲದ ನನಗೆ ಎಲ್ಲ ಭಾವನಾತ್ಮಕ ಸೊದರಿಯರ ನೆನಪಾಗಿ ಬಿಕ್ಕಿ ಬಿಕ್ಕಿ ಆತ್ತು ನಂತರ ಕಾಮೆಂಟ್ ಬರೆಯೋಣ ಎಂದು ಕುಳಿತರೆ ಒಂದಕ್ಷರವನ್ನೂ ಬರೆಯಲಾಗುತ್ತಿಲ್ಲ.
ನಿಮ್ಮ ತಮ್ಮನಿಗೆ ನನ್ನ ಪರವಾಗಿನ ಹುಟ್ಟು ಹಬ್ಬದ ಶುಭಹಾರೈಕೆಗಳನ್ನ ತಿಳಿಸಿಬಿಡಿ.
ಧರಿತ್ರಿ ಅವರೆ...
ಚೆಂದದ ಬರಹದೊಂದಿಗೆ ಅಂದದ ಶುಭಾಶಯ ಕೋರಿದ್ದೀರಿ.
ನಿಮ್ಮ ತಮ್ಮನವರಿಗೆ ನನ್ನದೂ ಶುಭಾಶಯಗಳು.
ಭಾಂದವ್ಯದ ಬೆಸುಗೆ ಪ್ರೀತಿಗೆ ಆಸರೆಯಾಗಿದೆ. ತುಂಬಾ ಚೆನ್ನಾಗಿದೆ ನಿಮ್ಮ ಅಕ್ಕ ತಮ್ಮನ ಪ್ರೀತಿ ... ಸದಾ ಹೀಗೆ ಹಸಿರಾಗಿರಲೆಂದು ಆಶಿಸುತ್ತೇನೆ. ನನಗೆ ಈ ಅನುಭವವಿಲ್ಲ ಆದರು ನಿಮ್ಮ ಲೇಖನ ಅನುಭವ ಮೂಡಿಸಿದೆ. ನಿಮ್ಮ ಪ್ರೀತಿಯ ತಮ್ಮನಿಗೆ ನಮ್ಮ ಕಡೆಯಿಂದ ಹುಟ್ಟು ಹಬ್ಬದ ಶುಭಾಶಯಗಳು. ಕೊನೆತನಕ ನಿಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗಲಿ ಪ್ರೀತಿ ಚಿರಾಯುವಾಗಿರಲಿ.
ಧನ್ಯವಾದಗಳು
ಬಾವನಾ ಜೀವಿ ದರಿತ್ರಿ,
ಅಕ್ಕ ತಮ್ಮರ ಬಾಂದವ್ಯಕ್ಕೆ ಹೊಸ ಅರ್ಥ ಕೊಟ್ಟ ಈ ಲೇಖನ ತುಂಬಾ ಅಬಿನಂದನಾರ್ಹ. ನಿಮ್ಮಂತ ಅಕ್ಕನ ಪಡೆದ ಆತ ನಿಜವಾಗಿ ಪುಣ್ಯವಂತ. ಯಾಂತ್ರಿಕವಾದ ಈಗಿನ ಜೀವನದಲ್ಲಿ ಯಾಂತ್ರಿಕವಾಗಿಯೇ ವಿಶ್ ಮಾಡುವ ಈ ಕಾಲದಲ್ಲಿ ತಾವು ತಮ್ಮನಿಗಾಗಿ ಒಂದು ಸುಂದರ ಬರಹವನ್ನೇ ಬರೆದು ತಮ್ಮ ಪ್ರೀತಿ ತೋರಿಸಿದ್ದು ತುಂಬಾ ಅಪ್ಯಾಯಮಾನವಾಗಿದೆ.
ನನ್ನದೊಂದು "ಹುಟ್ಟು ಹಬ್ಬದ ಶುಬಾಶಯ ಹೇಳಿ" .
Hello Darithri,
chennagide baraha :)
tammana bage istela iruthe anta nange igle gotagidu
huttu habbada subhshayagalu nimma tamanige :)
ಅಕ್ಕ - ತಮ್ಮನ ಪ್ರೀತಿನೋ? ಅಮ್ಮ ಮಗನ ಪ್ರೀತಿನೋ ತಿಳಿಯೋದು ಕಷ್ಟವಾಗುತ್ತಿದೆ.
ಧರಿತ್ರೀ, ಹೃದಯಸ್ಪರ್ಶಿಯಾಗಿದೆ ನಿಮ್ಮ ತಮ್ಮನ ಬಗ್ಗೆ ಬರೆದ ಬರಹ. ಧನ್ಯವಾದಗಳು. ನೀವು ಹವ್ಯಕರಾ?
ನಿಮ್ಮ ವರ್ಣನೆ ಭಾವನೆಗೆ ನಿಲುಕದ್ದು ಧರಿತ್ರಿ... ತಮ್ಮನಿಗೆ ನನ್ನ ಕಡೆಯಿಂದ ಶುಭಾಶಯ ತಿಳಿಸಿ
ಧರಿತ್ರಿ,
ನೀನು ನಿಜಕ್ಕೂ ಈಗ ಅಕ್ಕ .
ತಮ್ಮನ ಮೇಲಿನ ಪ್ರೀತಿ..ಅಕ್ಕರೆ...ವಾತ್ಸಲ್ಯ ವಿಚಾರದಲ್ಲಿ ನೀನು ಕ್ಷಮಯಾ ಧರಿತ್ರಿ....
ಅವಾಗವಾಗ ಕೋಪಬಂದರೆ ತಾಳ್ಮೆ ಕಳೆದುಕೊಳ್ಳುವ ಹುಡುಗಿ...ನಿನ್ನ ತಮ್ಮನ ಮೇಲೆ ಮಾತ್ರವಲ್ಲ...ಬೇರೆಯವರ ಮೇಲು...[ನನಗೂ ಅನುಭವವಾಗಿದೆ...] ಅದನ್ನು ನೀನೆ ಬರೆದಿದ್ದೀಯಾ..
ಬರವಣಿಗೆಯಲ್ಲಿ ಪ್ರೀತಿ ಉಕ್ಕಿ ಹರಿಯುತ್ತದೆ...
ನಿನ್ನ ತಮ್ಮನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...
Wonderful narration
@ರಾಜೇಶ, ಶಿವಪ್ರಕಾಶ್, ಹರೀಶ್ ಸರ್, ಪರಾಂಜಪೆಯಣ್ಣ,ಮಲ್ಲಿಯಣ್ಣ, ಗುರುಮೂರ್ತಿ ಸರ್...ನಿಮ್ಮ ಶುಭಾಶಯಗಳನ್ನು ತಮ್ಮನಿಗೆ ತಿಳಿಸಿರುವೆ. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.
@ಶಂಕ್ರಣ್ಣ..ತಮ್ಮನ ಜಾಗದಲ್ಲಿ ಕುಳಿತು ನನ್ನ ಲೇಖನ ಓದಿದ್ದಕ್ಕೆ ಧನ್ಯವಾದಗಳು...ಹಾಗೇ ನನ್ನ ಲೇಖನಕ್ಲೆ ಮಾರ್ಕ್ಸ್ ಬೇರೆ ಕೊಟ್ಟಿದ್ದೀರಾ...!! ಖುಷಿ ಆತು.
@ಉಮೇಶ್, ಶಾಂತಲಕ್ಕ..ಎಲ್ಲಾ ಅಕ್ಕಂದಿರು ಹೀಗೆ ತಮ್ಮಂದಿರನ್ನು ಪ್ರೀತಿ ಮಾಡಿರಬಹುದು ಎಂದನಿಸುತ್ತೆ. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.
@ದಿವ್ಯಾಮಲ್ಯ..ನಮಸ್ತೆ. ಧರಿತ್ರಿಗೆ ಪ್ರೀತಿಯ ಸ್ವಾಗತ. ಹೀಗೇ ಬರುತ್ತಿರಿ. ನಿಮ್ಮ ಪ್ರೋತ್ಸಾಹ ನನ್ನ ಿನ್ನಷ್ಟು ಬರೆಯುವಂತೆ ಪ್ರೇರೇಪಿಸಲಿವೆ. ಧನ್ಯವಾದಗಳು.
@ಗುರು..ತಮ್ಮನಿಗೆ ನಿಮ್ಮ ಶುಭಾಶಯ ಹೇಳಿದ್ದೀನಿ. ನಾನು ಭಾವಜೀವಿ ಆಗಿರಬಹುದೇನೋ..ಆದರೆ ನಾನು ತುಂಬಾ ಪ್ರೀತಿಸೋರು ಅದು ಅಮ್ಮನಾಗಲೀ, ತಮ್ಮನಾಗಲೀ, ಅಣ್ನಂದಿರಾಗಲೀ,.,.,ಅವರ ಬಗ್ಗೆ ಬರೆಯುವಾಗ ನಾನಲ್ಲಿ ಅವರ ಪ್ರೀತೀನ ಅನುಭವಿಸುತ್ತಾ ಬರೇತೀನಿ. ಧನ್ಯವಾದಗಳು.
@ಮೂರ್ತಿ ಸರ್..ನನ್ನ ಲೇಖನ ಓದಿ ಬದುಕಿನ ಮಧುರ ಸಂಬಂಧವೊಂದು ನಿಮ್ಮ ಕಾಡಿದೆ. ಯಾವತ್ತೂ ಪ್ರತಿಯೊಬ್ಬರ ಬದುಕು ಅಷ್ಟೇ, "ಇರುವುದೆಲ್ವವ ಬಿಟ್ಟು ಇಲ್ಲದುದುರ ಕಡೆಗೆ ತುಡಿಯುವುದೇ ಜೀವನ" ಅಂತಾರೆ. ಅತ್ತು ಮನಸ್ಸು ಸಮಾಧಾನ ಮಾಡಿಕೊಂಡಿರಿ..ಇಲ್ಲದಿರುವುದರ ಕುರಿತೂ ಚಿಂತಿಸುವುದು ಕೂಡ ಒಂದು ರೀತಿ ಖುಷಿ ತರುತ್ತೆ. ಆ ಭಾವಸಂಬಂಧಗಳ ಮೌಲ್ಯವನ್ನು ನಮಗೆ ಅರಿವು ಮಾಡುತ್ತೆ ಅಲ್ಲವೇ. ಧನ್ಯವಾದಗಳು ಸರ್.
@ಮನಸ್ಸು..ಪ್ರೀತಿಯಿಂದ ಪ್ರತಿಕ್ರಿಯಿಸಿ, ನನ್ ತಮ್ಮನಿಗೆ ನೀವು ಹೇಳಿರೋ ಶುಭಾಶಯವನ್ನು ಅಷ್ಟೇ ಪ್ರೀತಿಯಿಂದ ನನ್ನ ತಮ್ಮನಿಗೆ ತಿಳಿಸಿರುವೆ ಆಯಿತಾ?
@ಮೋಹನ್ ..ನಿಮ್ಮ ಶುಭಾಶಯಗಳನ್ನು ತಿಳಿಸಿರುವೆ. ಹೀಗೇ ಬರುತ್ತೀರಿ ಧರಿತ್ರಿ ಕಡೆಗೆ..ಪ್ರೀತಿಯಿರಲಿ. ಧನ್ಯವಾದಗಳು.
@ವೀಣಾ ನಮಸ್ತೆ...ನಿಮ್ಮ ಶುಭಾಶಯಗಳು ನನ್ನ ತಮ್ಮನ ಮಡಿಲು ಸೇರಿದೆ. ಪ್ರತಿಯೊಂದು ಭಾವಸಂಬಂಧಗಳು ಹೀಗೇ ಇರುತ್ತವೆ. ಧನ್ಯವಾದಗಳು.
@ಅಂತರ್ವಾಣಿ..ಅಮ್ಮ-ಮಗನ ಪ್ರೀತಿ ಅಂದ್ರೂ ತಪ್ಪೇನಲ್ಲ.
@ಶಿವಣ್ಣ..ನಮಸ್ತೆ. ನನ್ನ ಬೆನ್ನು ತಟ್ಟಿದ್ದಕ್ಕೆ ಧನ್ಯವಾದಗಳು. ನನಗೆ ಅಕ್ಕ ಇಲ್ಲಾಂದ್ರೂ..ಅಕ್ಕನಾಗಿದ್ದೇನಲ್ಲಾ ಅಂತ ಖುಷಿ. ಕೋಪ..ಅಣ್ನಾವ್ರೇ ಅದು ಸ್ವಲ್ಪ ಹೊತ್ತು ಮತ್ತೆ ಬರೋಲ್ಲ...ಹಾಗೆಲ್ಲ ಟೂ ಬಿಡಲ್ಲ ಆಯಿತಾ? ಮತ್ತೆ ನೀವಾಗಿಯೇ ಮುನಿಸಿಕೊಂಡ್ರೆ ನಾ ಮಾತೇ ಆಡೊಲ್ಲ..ಇದು ಧರಿತ್ರಿ. ಧನ್ಯವಾದಗಳು. ಬರ್ತಾ ಇರಿ ಶಿವಣ್ಣ.
@ನಿತಿನ್..ಲೇಖನ ಓದುವುದರ ಜೊತೆಗೆ ಓದಿ ಅನುಭವಿಸಿದ್ದಕ್ಕೆ ಧನ್ಯವಾದಗಳು. ಬರ್ತಾ ಇರಿ..
@ ಅನಾಮಿಕರೇ..ನಿಮ್ಮ ಹೆಸರು ಹೇಳಿ ಪ್ರತಿಕ್ರಿಯೆ ಮಾಡ್ತಾ ಇದ್ರೆ ನಾನಿನ್ನೂ ಖುಷಿಪಡ್ತಾ ಇದ್ದೆ. ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಅದೇ ಹವ್ಯಕ?? ಹೆಂಗೆ ಗೊತ್ತಾತು?
ನಿಮ್ಮೆಲ್ಲರ ಪ್ರೀತಿಯ ಶುಭಾಶಯ ಕೇಳಿ ನನ್ನ ತಮ್ಮ ಸ್ವರ್ಗಕ್ಕೆ ಮೂರೇ ಗೇಣು ಅನ್ನೋ ಹಾಗೇ ಖುಷಿಪಡುತ್ತಿದ್ದ. ಈವಾಗ ನನ್ನಗಿಂತಲೂ ನಿಮ್ಮ ಮೇಲೆನೇ ಪ್ರೀತಿ ಜಾಸ್ತಿ ಆಗಿಬಿಟ್ಟಿದೆ.(:)
-ಧನ್ಯವಾದಗಳು.
ಧರಿತ್ರಿ
-ಧರಿತ್ರಿ
preethi thumbida baraha, nimma thammanige nan kade inda lu shubhashaya thilisi!
ಧರಿತ್ರಿಯವರೆ, ಬರಹ ಓದಿ ನನ್ನಕ್ಕನ ನೆನಪಾಯ್ತು. ಅದಕ್ಕೆ ಥ್ಯಾಂಕ್ಸ್...
chendada tamma, preetiya akka..:)
Post a Comment