Thursday, July 29, 2010

ಅಮ್ಮನಾಗುವ ಅತ್ತೆ...


ಅಂದು ಅತ್ತೆ ‘ನೀನು ಮನೆಗೆ ಭಾಗ್ಯಲಕ್ಷ್ಮಿ ಕಣಮ್ಮಾ, ಬಲಗಾಲಿಟ್ಟು ಒಳಗೆ ಬಾ’ ಎಂದು ಕರೆದು ಮನೆ ತುಂಬಿಸಿಕೊಂಡಾಗ ನಿಜಕ್ಕೂ ಹೌದಾ? ನನ್ನ ಅತ್ತೆ ನನ್ನ ಚೆನ್ನಾಗಿ ನೋಡ್ಕೋತಾರಾ? ಅತ್ತೆ-ಸೊಸೆ ಎಂದರೆ ಹಾವು-ಮುಂಗುಸಿಯಂತೆ ಎಂದು ಯಾರ್‍ಯಾರೋ ಹೇಳಿದ ಮಾತು ನೆನೆಪಾಗುತ್ತಿತ್ತು. ನನ್ನ ಒಳಮನಸ್ಸು ‘ನೀನೀಗ ಸೊಸೆ’ ಎಂದು ಸಾರಿ ಸಾರಿ ಹೇಳುತ್ತಿತ್ತು. ಬದುಕಿನ ಒಂದು ಘಟ್ಟದಿಂದ ಮತ್ತೊಂದು ಘಟ್ಟಕ್ಕೆ ಕಾಲಿಟ್ಟಾಗ ಆತಂಕ, ಖುಷಿ ಎಲ್ಲವೂ ಧುತ್ತೆಂದು ಮನದೊಳಗೆ ಮನೆಮಾಡಿತ್ತು.

ಹೌದು, ಮದುವೆಯಾಗಿ ಆಗಿನ್ನೂ ಒಂದು ವಾರ ಪೂರ್ತಿಯಾಗಿರಲಿಲ್ಲ. ಅತ್ತೆ ಮನೆಯಿನ್ನೂ ಹೊಸತು. ಇನ್ನೂ ಗಂಡನ ಮುಖ ಬಿಟ್ಟರೆ ಬೇರೆನೂ ಪರಿಚಯವಿಲ್ಲ. ಅಡುಗೆ ಮನೆಯಲ್ಲಿ ‘ಅತ್ತೆಯೇ ವಿಜ್ಞಾನಿ’. ಆ ವಿಜ್ಞಾನವನ್ನು ನಾನಿನ್ನೂ ಕರಗತಮಾಡಿಕೊಳ್ಳಬೇಕು. ಪುಟ್ಟ ಮಗುವಿನಂತೆ ಎಲ್ಲವನ್ನೂ ಗಂಡನೇ ಹೇಳಬೇಕು. ಅಂದು ನಾಳೆ ಶುಕ್ರವಾರ ಕಣಮ್ಮಾ, ಲಕ್ಷ್ಮಿ ಪೂಜೆ ಮಾಡಬೇಕು. ಬೇಗ ಎದ್ದುಬಿಡು ಎಂದು ರಾತ್ರಿಯೇ ಅತ್ತೆ ನೆನಪಿಸಿದಾಗ, ‘ನೆನೆಸಿಕೊಂಡಲ್ಲಿ ದೇವರಿದ್ದಾನೆ’ ಎಂದು ನಂಬಿಕೊಂಡಿದ್ದ ನನಗೆ ಅವರ ಎಚ್ಚರಿಕೆಯನ್ನೂ ಮೀರಲಾಗಲಿಲ್ಲ. ‘ಏಳ್ತೀನಮ್ಮ’ ಎಂದು ನಗುಮುಖದಿಂದಲೇ ಒಪ್ಪಿಕೊಂಡಾಗ ಖುಷಿಯಿಂದ ಅತ್ತೆ ‘ಜಾಣೆ’ ಎಂದು ಬೆನ್ನುತಟ್ಟಿದ್ದರು.

ಮರುದಿನ ಬೆಳಿಗ್ಗೆ ಬೇಗನೇ ಎದ್ದು ಸ್ನಾನ ಮಾಡಿ, ಸೀರೆಯುಟ್ಟು, ಕೈ ತುಂಬಾ ಬಳೆ, ಮುಡಿತುಂಬಾ ಹೂವು ಮುಡಿದು ಅತ್ತೆ ಹೇಳಿದಂತೆ ಲಕ್ಷ್ಮಿಯನ್ನು ಪೂಜಿಸಿದ್ದೆ. ನನಗೆ ಶ್ಲೋಕಗಳು ಗೊತ್ತಿಲ್ಲದಿದ್ದರೂ ಪಟಪಟನೆ ಶ್ಲೋಕಗಳನ್ನು ಬಾಯಿಪಾಠ ಮಾಡಿಕೊಂಡು ಹೇಳಿಕೊಡುತ್ತಿದ್ದ ಅತ್ತೆಯ ಪ್ರತಿಭೆಗೆ ನಾನೇ ಬೆರಗಾಗಿದ್ದೆ. ಬಹುಶಃ ಎಲ್ಲಾ ಅತ್ತೆಯರು ಹೀಗೇನೋ ಎಂದು ಮನಸ್ಸು ಕೇಳುತ್ತಿತ್ತು. ಹೊಸ ಬದುಕಿನಲ್ಲಿ ಹೊಸತರ ಬೆರಗು ನನ್ನೊಳಗೆ ಮನೆಮಾಡಿತ್ತು. ಆದ್ರೂ ಅತ್ತೆ-ಸೊಸೆಯರನ್ನು ಯಾಕೆ ಪರಸ್ಪರ ಶತ್ರುಗಳಂತೆ ಕಾಣ್ತಾರೆ? ಸಮಾಜವೇ ಹಾಕಿಕೊಟ್ಟ ಚೌಕಟ್ಟು ಇದಲ್ವಾ? ಸುಮ್ಮ ಸುಮ್ಮನೆ ಹೆಣ್ಣಿಗೆ ಹೆಣ್ಣೇ ಮರುಗುವ ‘ಹೆಣ್ಣು ಬದುಕು’ ಇದೆಯಾದರೂ ಪರಸ್ಪರ ಎತ್ತಿಕಟ್ಟುವ ಪರಂಪರೆಯನ್ನು ಸಮಾಜವೇ ಬೆಳೆಸಿದ್ದಲ್ವಾ? ಎಂದನಿಸುತ್ತಿತ್ತು.

ಅಂದು ಯುಗಾದಿ ಹಬ್ಬದಂದು ನನ್ನತ್ತೆ ನನಗೆ ಗುಲಾಬಿ ಬಣ್ಣದ ಹೊಸ ಚೂಡಿದಾರ್ ತಂದಾಗ ನಾನೆಷ್ಟು ಖುಷಿಪಟ್ಟಿದ್ದೆ? ಹೊಸ ಚೂಡಿಧಾರ್ ಧರಿಸಿ ಅತ್ತೆ ಕಾಲಿಗೆ ನಮಸ್ಕರಿಸಿ ಅಫಿಸಿಗೆ ಹೊರಟಾಗ ನನ್ನ ಹಣೆಗೆ ಕುಂಕುಮವಿಟ್ಟು ತಬ್ಬಿ ಮುತ್ತಿಟ್ಟ ಅತ್ತೆಯನ್ನು ಕಂಡಾಗ, ಅಮ್ಮ-ಅತ್ತೆನ ಅದೇಕೆ ಸಮಾಜ ಅಷ್ಟೊಂದು ಅಂತರದಲ್ಲಿ ಕಾಣುತ್ತೆ ಎಂದನಿಸಿತ್ತು. ಹೌದು, ಅತ್ತೆನೂ ಅಮ್ಮ ಆಗ್ತಾಳೆ, ಏಕಂದ್ರೆ ಅವಳು ಅಮ್ಮನಾಗಿದ್ದವಳು!

(ಹೊಸದಿಗಂತದಲ್ಲಿ ನಾನು ಬರೆಯುವ ಭಾವಬಿಂದು ಅಂಕಣದಲ್ಲಿ ಪ್ರಕಟ:
http://hosadigantha.in/epaper.php?date=07-29-2010&name=07-29-2010-15)

21 comments:

PARAANJAPE K.N. said...

ಓದಿ ಖುಷಿಯಾಯ್ತು, ತ೦ಗಿ ಒಳ್ಳೆ ಮನೆ ಸೇರಿದ್ದಾಳೆ ಅ೦ತ ತಿಳೀತು. ಚೆನ್ನಾಗಿರು.

ಮನಸಿನ ಮಾತುಗಳು said...

Yep!! Nice article.... :-)

ತೇಜಸ್ವಿನಿ ಹೆಗಡೆ said...

very touchy...liked it very much..

ಪ್ರಗತಿ ಹೆಗಡೆ said...

ಹೌದು ಧರಿತ್ರಿ ಮೇಡಂ,
ಸೊಸೆಯಂದಿರು ಮಗಳ ರೀತಿ ನಡ್ಕೊನ್ದ್ರೆ ಅತ್ತೆ ತಾಯಿ ಪ್ರೀತಿ ತೋರಿಸ್ತಾರೆ... ಚೆನ್ನಾಗಿ ಬರೆದಿದ್ದೀರಿ..

shridhar said...

ಚಿತ್ರಾ ಅವರೇ ..
ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣಿನ ಭಾವನೆಗಳನ್ನು ಚೆನ್ನಾಗಿ ಚಿತ್ರಿಸಿದ್ದೀರಿ ..
ನನ್ನಾಕೆಯೂ ಇದೆ ಪ್ರಶ್ನೆಯನ್ನು ಕೇಳಿದ್ದಳು... ಅತ್ತೆ ಮತ್ತು ಅಮ್ಮನಲ್ಲಿ ಅಂತರವೇಕೆ...
ಉತ್ತರ ಉಹೆಗೆ ನಿಲುಕದ್ದು .. ಸಮಾಜದಲ್ಲಿ ಕೆಟ್ಟ ಅಮ್ಮಂದಿರು ಇದ್ದಾರೆ.. ಹಾಗೆಯೆ ಅತ್ತೆಯರು ಕೂಡ..

ಮನದಾಳದಿಂದ............ said...

ಆರರೆ ಎಲ್ಲಾ ಅತ್ತೆಯರು ಅಮ್ಮನಾಗುವುದಿಲ್ಲ, ಎಲ್ಲಾ ಸೋಸೆಯರೂ ಮಗಳಾಗುವುದಿಲ್ಲ!
ಚಿಂತನಾರ್ಹ ಬರಹ!

sunaath said...

ಚಿತ್ರಾ,
ಓದಿ ಖುಶಿಯಾಯಿತು. ಸುಖದಿಂದ ಬಾಳಿರಿ ಎಂದು ಹಾರೈಸುತ್ತೇನೆ.

ಸುಮ said...

ಪರಸ್ಪರ ಸ್ವಲ್ಪ ಹೊಂದಾಣಿಕೆ .. ಕಾಳಜಿ ..ಪ್ರೀತಿ ತೋರಿದರೆ ಎಲ್ಲ ಅತ್ತೆ - ಸೊಸೆಯರೂ ತಾಯಿ-ಮಗಳೇ ಆಗುತ್ತಾರೆ ಅಲ್ಲವೆ? ಚಂದದ ಬರಹ ಚಿತ್ರ.

ವನಿತಾ / Vanitha said...

Nice article:))
I miss my atte n amma a lot!!

ವನಿತಾ / Vanitha said...

ಅದು ನಿಮ್ಮ್ಮದೇ ಫೋಟೋ ನ..?
Beautiful:-)

ದಿನಕರ ಮೊಗೇರ said...

ನಿಮ್ಮ ಅತ್ತೆ ಅಮ್ಮನಾಗೆ ಇರಿ.... ಅತ್ತೆ ಮನೆ ಅಮ್ಮನ ಮನೆ ಆಗಲಿ... ನಿಮ್ಮ ಬಾಳು ಹಸನಾಗಿರಲಿ.....

ಧರಿತ್ರಿ said...

ಪ್ರತಿಕ್ರಿಯಿಸಿದ, ಹಾರೈಸಿದ ಎಲ್ಲರಿಗೂ ಧನ್ಯವಾದಗಳು....
ವನಿತಾ ಅದು ನನ್ನ ಫೋಟೋ ಅಲ್ಲ...ನೆಟ್ ನಲ್ಲಿ ಸಿಕ್ಕಿದ್ದು.
&ಧರಿತ್ರಿ

ಮನಸು said...

ಚಿತ್ರ ನಿನ್ನ ಲೇಖನ ನಿನ್ನ ಹೊಸ ಜೀವನದ ಹೆಜ್ಜೆ ಹೇಗಿದೆ ಎಂದು ತಿಳಿಸುತ್ತೆ.......
ಒಳ್ಳೆಯ ಲೇಖನ ಮನಮುಟ್ಟುವಂತಿದೆ...

ಅನಂತ್ ರಾಜ್ said...

"ಅತ್ತೆನೂ ಅಮ್ಮ ಆಗ್ತಾಳೆ, ಏಕಂದ್ರೆ ಅವಳು ಅಮ್ಮನಾಗಿದ್ದವಳು!" ಅತ್ತೆ-ಸೊಸೆ ಸ೦ಬ೦ಧದ ಬಗ್ಗೆ ಉತ್ತಮ ಸ೦ದೇಶವನ್ನು ಕೊಟ್ಟಿದ್ದೀರಿ.
ಶುಭಾಶಯಗಳು
ಅನ೦ತ್

V.R.BHAT said...

Nice to read !

ಸುಧೇಶ್ ಶೆಟ್ಟಿ said...

thumba kushi aayithu odhi :)

V.Purushotham DIV SEC AIPEU GROUP C said...

athe katakke sustagiro ella henmakkulu nimmanna nodi hottekichupadtare

ಬಾಲು said...

ಓಹ್ ಗುಡ್ ಕಣ್ರೀ.
ಒಳ್ಳೆ ಅಮ್ಮನಾಗದವರು ಒಳ್ಳೆ ಅತ್ತೆ ಕೂಡ ಆಗಲಾರರು ಅನ್ಸುತ್ತೆ. :)

ಜಲನಯನ said...

ಬಹಳ ಚನ್ನಾಗಿದೆ....ಓದಿ ಖುಷಿಯಾಯ್ತು ಹಾಗೇ ತಂಗಿ ಭಾವನ ಬಾಳು ಸಂತೋಷ ಸಾಮರಸ್ಯದ ಬೀಡಾಗಲಿ ಎಂದು ಹಾರೈಸಿ...ಆದ್ರೆ..ನನ್ನ ಮುನಿಸಿದೆ...ಯಾಕೆ ಅಂತ ತಂಗಿಗೇ ಗೊತ್ತು....

ಸೀತಾರಾಮ. ಕೆ. / SITARAM.K said...

nice article!

ಧರಿತ್ರಿ said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು...
ಜಲನಯನ ಅಣ್ಣ...
ನಂಗೊತ್ತು ಏಕೆ ಮುನಿಸು ಅಂತ.ನಿಮ್ಮ ಪುಟ್ಟ ಮನೆಗೆ ಬರುತ್ತೇನೆ...

&ಚಿತ್ರಾ