Thursday, June 13, 2013

ಒಂದು ವಾಕಿಂಗ್ ಮುಂಜಾವು



ದಟ್ಟಮರಗಳ ನಡುವೆ ಅಗಲ ರಸ್ತೆಗಳು, ರಸ್ತೆ ತುಂಬಾ ಗುಲ್ ಮೊಹರ್, ಚಿನ್ನದ ಹೂವು, ಪಿಂಕ್ ಕ್ಯಾಸಿಯಾ ...ಬಣ್ಣ-ಬಣ್ಣದ ಪುಷ್ಪಗಳ ಚಿತ್ತಾರ. ಇನ್ನೂ ಬೀದಿ ದೀಪ ಆರದ ಐದರ ಹೊತ್ತಿನಲ್ಲಿ ಹೂವ ಹಾಸಿನ ರಸ್ತೆ ಮೇಲೆ ನಡೆಯುವುದೇ ಚೆಂದ. ಹೂವುಗಳಿಂದ ಕಂಗೊಳಿಸುವ ಮರಗಳ ನಡುವೆ ಸೂರ್ಯ ಕೆಂಪೇರುವುದು ಕಣ್ಮನಸಿಗೆ ಹಬ್ಬ. ಹಾಳು ಸೆಖೆ...ಆದರೂ, ಪುಷ್ಪ ಚಿತ್ತಾರವನ್ನು ನೋಡಿದರೆ "ಇರಲಿ ಬೇಸಿಗೆ ಕಾಲ'' ಎನ್ನುತ್ತಿತ್ತು ಮನಸ್ಸು.

****************
ರಾಜಕಾರಣಿಯೊಬ್ಬನ ದೊಡ್ಡ ಗೇಣಿನ ಬಂಗಲೆ. ಅದರೆದುರು ಹತ್ತಾರು ಕಾರುಗಳು, ರಾತ್ರಿಯಿಡೀ ನಿದ್ದೆಯಿಲ್ಲದೆ ತೂಕಡಿಸುವ ಸೆಕ್ಯೂರಿಟಿ ಗಾರ್ಡ್ ಗಳು.

****************
ಅದು ದೈವಭಕ್ತ ಹೆಂಗಸರ ವಾಕಿಂಗ್. ಯಾರದೋ ಕಾಂಪೌಂಡ್ ಗೆ ಹತ್ತಿ ಪೂಜೆಗಾಗಿ ಹೂವುಗಳನ್ನು ಕಿತ್ತು ಸೆರಗಿನಲ್ಲಿ ತುಂಬಿಸಿಕೊಳ್ಳುತ್ತಿದ್ದರು. "ನಾಯಿಗಳಿವೆ ಎಚ್ಚರಿಕೆ' ಎಂಬ ಬೋರ್ಡಿಗೂ ಅವರು ಹೆದರಲಿಲ್ಲ!.

****************
ಒಂದು ವರ್ಷದ ಹಿಂದೆ ಆ ಕೌಂಪೌಂಡಿನಲ್ಲಿ ಮೇಣದ ಗಣಪತಿ ಬಂದು ಕುಳಿತಿದ್ದಾನೆ. ವಾಕಿಂಗ್ ಹೋಗುವವರೆಲ್ಲಾ ಆ ಗಣಪತಿಗೆ ಸೆಲ್ಯೂಟ್ ಹೊಡೆದೇ ಮುಂದೆ ಸಾಗುತ್ತಾರೆ. ಅವನೆದುರು ಇರುವ ಡಬ್ಬಕ್ಕೆ ಬೆಳ್ಳಂಬೆಳಗ್ಗೆ ನೋಟು ತುಂಬುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯಾಕೋ ಗಣಪತಿ ದಿನ ಹೋದಂಗೆ ಶ್ರೀಮಂತನಾಗುತ್ತಿದ್ದಾನೆ!
****************

ಎಂಬತ್ತು ದಾಟಿರುವ ತಾತನ ಹಿಂದೆ ಏಳೆಂಟು ಬೀದಿನಾಯಿಗಳು ಸುತ್ತುತ್ತಿದ್ದವು. ನೋಡಿದರೆ, ಅಜ್ಜ ನಾಯಿಗಳಿಗಾಗಿ ತಿಂಡಿ ತಂದಿದ್ದರು. ಪ್ರತಿದಿನ ವಾಕ್ ಹೋಗುವಾಗ ಬೀದಿ ನಾಯಿಗಳ ಕಾಟ ತಡೆಯಲಾರದೆ ಅವರು ಈಗ ನಾಯಿಗಳಿಗೆ ತಿಂಡಿ ತರುವ ಅಭ್ಯಾಸ ಮಾಡಿಕೊಂಡಿದ್ದಾರಂತೆ!.
****************

ಮನೆಯ ಕೆಲಸದಾಕೆ...ಮನೆಮುಂದೆ ಬಿದ್ದಿದ ಕಸದರಾಶಿಗೆ ಬೆಂಕಿ ಹಚ್ಚುತ್ತಿದ್ದಳು. ಅದರಿಂದ ದಟ್ಟಹೊಗೆ, ಕೆಟ್ಟವಾಸನೆ. ಬೆಳಿಗ್ಗೆಯಾದರೂ ಶುದ್ಧ ಗಾಳಿ ಸಿಗಲೆಂದು ಮೂಗು ಬಯಸುತ್ತಿದ್ದರೆ...ಒಮ್ಮೆಲೇ ಕೆಮ್ಮು ಬರತೊಡಗಿತು.
****************

ಬೀದಿ ದೀಪಗಳು ನಿಧಾನಕ್ಕೆ ಆಫ್ ಆಗತೊಡಗಿದವು. ಇನ್ನೇನೋ ಸೂರ್ಯ ಬರುವ ಹೊತ್ತು. ರಸ್ತೆ ಮೇಲಿನ ಹೂವಿನ ಚಿತ್ತಾರ ಮಬ್ಬು ಮುಂಜಾವಿನಲ್ಲಿ ಇನ್ನಷ್ಟು ಮೋಹಕ. ಯೋಚನೆಗಳಿಗೆ ನೂರಾರು ದಾರಿಗಳು. ಮುಂದೆ ಸಾಗಿದರೆ ಬಂಗಲೆಯೊಂದರ ಪಕ್ಕದಲ್ಲಿ ಗೊರಕೆ ಸದ್ದು ಕೇಳುತ್ತಿತ್ತು. ಪಾಪ, ರಾತ್ರಿಯಿಡೀ ಎಚ್ಚರವಿದ್ದ ಸೆಕ್ಯೂರಿಟಿ ಆರು ಗಂಟೆ ಹೊತ್ತಿಗೆ ನಿದ್ದೆಗೆ ಜಾರಿದ್ದ!.
****************

ಯಾರದೋ ಮನೆ, ಮನೆಯೆದುರು ಹೂವು ಕುಂಡಗಳ ಅಲಂಕಾರ, ಇನ್ನ್ಯಾರದೋ ಮನೆಯ ಸೆಕ್ಯೂರಿಟಿ ತನ್ನ ಜೊತೆಗೆ ವಾಕಿಂಗ್ ಬಂದ ನಾಯಿಯನ್ನು ಅಲ್ಲಿ "ನಿತ್ಯಕರ್ಮ'' ಮಾಡಿಸುತ್ತಿದ್ದ!. ಇನ್ನೂ ಮುಂದೆ ಹೋದರೆ ಗಾಡಿ ತೊಳೆಯುವ ಹುಡುಗ "ರಂಗೋಲಿ'' ಮೇಲೆ ನೀರು ಹಾಕಿದನೆಂದು ಮನೆಯೊಡತಿ ಬೈಯುತ್ತಿದ್ದಳು.
****************

" ಥೂ....ಮಗ'' ಕಾಫಿ ಮಾರುವ ಅಜ್ಜಿ ದೊಡ್ಡ ಸ್ವರದಲ್ಲಿ ಬೈಯುತ್ತಿದ್ದಳು. ಆ ಏರಿಯಾದ ಸೆಕ್ಯೂರಿಟಿ ಗಾರ್ಡ್ ಗಳಿಗೆ ಮುಂಜಾವು ಶುರುವಾಗುವುದೇ ಅಜ್ಜಿಯ ಬಿಸಿ-ಬಿಸಿ ಕಾಫಿ ಮೂಲಕ. ಹತ್ತಾರು ಮಂದಿ ಯಾವಾಗಲೂ ಅಜ್ಜಿ ಮುಂದೆ ಕಾಫಿಗಾಗಿ ಕ್ಯೂ ನಿಂತಿರುತ್ತಾರೆ. ಒಂದೊಂದು ದಿನ ಅಜ್ಜಿ ಖುಷಿಯಲ್ಲಿರುತ್ತಾಳೆ, ಕೆಲವೊಮ್ಮೆ ಜಮದಗ್ನಿಯಾಗುತ್ತಾಳೆ. ತಿಂಗಳ ಕೊನೆಯಲ್ಲಿ ಎಲ್ಲರಿಗೂ ಸಾಲದ ಮೇಲೆ ಕಾಫಿಯಂತೆ. ಒಬ್ಬ ಎರಡು ತಿಂಗಳಿಂದ ಬಿಟ್ಟಿ ಕಾಫಿ ಕುಡಿದು ಸಾಲ ತೀರಿಸಿಲ್ಲ ಎಂದು ಅಜ್ಜಿಗೆ ಸಿಟ್ಟು ನೆತ್ತಿಗೇರಿತ್ತು.
*********************

ಗಂಟೆ ಆರೂವರೆ. ಸೂರ್ಯ ನಿಧಾನಕ್ಕೆ ಮೇಲೇರುತ್ತಿದ್ದ. ಬಂದ ದಾರಿಯಲ್ಲೇ ವಾಪಸ್ ಹೊರಟೆ. ಹೂವ ಚಿತ್ತಾರ ಬೀದಿ ಗುಡಿಸುವವಳ ಪೊರಕೆಗೆ ಸಿಕ್ಕು ಕಸದರಾಶಿಯಾಗಿದ್ದವು. ಮನೆ ಗೇಟ್ ತೆರೆದರೆ, ಅಮ್ಮ ಹೊಸಿಲಿಗೆ ರಂಗೋಲಿ ಹಾಕಿ, ಅರಿಶಿಣ-ಕುಂಕುಮ ಹಚ್ಚಿದ್ದಳು. ಪತಿದೇವರಿಗೆ ಮಾತ್ರ ಇನ್ನೂ ಬೆಳಗಾಗಿರಲಿಲ್ಲ!!!

1 comment:

sunaath said...

ಬೆಳಗಿನ ತಿರುಗಾಟದ ದೃಶ್ಯಗಳ ಸುಂದರ ವಿವರಣೆ ಕೊಟ್ಟಿದ್ದೀರಿ.
ಬೆಳಗಿನಲ್ಲಿ ನಾಯಿಗಳ ನಿತ್ಯಕರ್ಮವನ್ನು ಎಲ್ಲಿಬೇಕಂದರಲ್ಲಿ ಮಾಡಿಸುವವರ ದುರಭ್ಯಾಸವನ್ನು ನಾನೂ ನೋಡಿ ಬೇಜಾರು ಪಟ್ಟಿದ್ದೇನೆ. ಇರಲಿ, ಚೆಲುವಿನೊಂದಿಗೆ ಕುರೂಪವೂ ಜೊತೆಯಾಗಿಯೇ ಇರುತ್ತದೆ ಏನೋ!