Sunday, August 23, 2009

ಅಕ್ಕನಿಗೆ ಪ್ರೀತಿಯ ನೆನಪುಗಳು...

ಅಕ್ಕಾ..ನಿನ್ನೆ ಗೌರಿ-ಗಣೇಶ ಹಬ್ಬ. ನಿನ್ನ ತುಂಬಾ ನೆನಪಾಯ್ತು. ಸೂರ್ಯ ಮೂಡೋ ಹೊತ್ತಿಗೆ ಎದ್ದು ಸ್ನಾನ ಮಾಡಿ ದೇವರೆದುರು ದೀಪ ಹಚ್ಚಿ ಆರತಿ ಎತ್ತುವಾಗ ನಿನ್ನ ನೆನಪಾಯ್ತು. ಪಾಯಸ ಮಾಡಿ ಮಾವ, ಅಣ್ಣ, ತಮ್ಮ, ಪಕ್ಕದ್ಮನೆಯ ಪುಟ್ಟ ಮಕ್ಕಳಿಗೆ ಬಡಿಸುವಾಗ ನಿನ್ನ ನೆನಪು ತೀರಾ ಕಾಡಿತ್ತು. ಅಕ್ಕಾ... ಹಬ್ಬ ಬಂದರೆ ಮನೆಮುಂದೆ ಚೆಂದದ ರಂಗೋಲಿ ಇಡೋಕೆ ನೀನಿಲ್ಲ ಅಂದಿತ್ತು ಮನ.

ಅಕ್ಕಾ..ನಿನ್ನೆ ನಾ ಸೀರೆ ಉಟ್ಟಿದ್ದೆ ಗೊತ್ತಾ? ನನ್ನ ಇಷ್ಟದ ಬಣ್ಣ ಮೆರೂನ್ ಕಲರ್ ಸೀರೆ ಉಟ್ಟು, ಕೈ ತುಂಬಾ ಬಳೆ, ತಲೆ ತುಂಬಾ ಮಲ್ಲಿಗೆ ಮುಡಿದಿದ್ದೆ. ಆದರೆ, ನಂಗೆ ನೋಡು ಸೀರೆ ಉಡೋಕೆ ಬರಲ್ಲ..ಅದಕ್ಕೆ ಪಕ್ಕದ್ಮನೆಯ ಆಂಟಿ ಚೆನ್ನಾಗಿ ಸೀರೆ ಉಡಿಸಿದ್ರು ಅಕ್ಕಾ. ನೀನಿರುತ್ತಿದ್ದರೆ ನೋಡು ನೀನೇ ಉಡಿಸುತ್ತಿದ್ದೆಯಲ್ಲಾ? ತಲೆತುಂಬಾ ಹೂವು ಉಟ್ಟು, ಹಣೆಗೊಂದು ಬಿಂದಿಗೆ ಉಟ್ಟು ನೀನೂ ನನ್ನ ಜೊತೆ ಖುಷಿಪಡುತ್ತಿದ್ದೆ ಅಲ್ವಾ? ನನ್ನ ತಂಗಿ ಚೆನ್ನಾಗ್ ಕಾಣ್ತಾಳೆ ಅಂತ ಹೆಮ್ಮೆ ಪಡುತ್ತಿದ್ದೆಯಲ್ಲಾ.

ಅಕ್ಕಾ ನಿನ್ನೆ ದೇವಸ್ಥಾನಕ್ಕೆ ಹೋಗಿದ್ದೆ. ಹಣ್ಣುಕಾಯಿ ಮಾಡಿಸಿ ದೇವರ ಬಳಿಯೂ ನೀನು ಬೇಕೆಂದು ಬೇಡಿಕೊಂಡೆ. ನೀನು ಜೊತೆಗಿರುತ್ತಿದ್ದರೆ ನೀನೂ ನನ್ನ ಜೊತೆ ಬರ್ತಾ ಇದ್ದೆ. ನಿನ್ನ ಪುಟ್ಟ ಮಕ್ಕಳು ನನ್ನ ಮಡಿಲಲ್ಲಿ ಪ್ರೀತಿಯಾಟ ಆಡುತ್ತಿದ್ದವಲ್ಲಾ. ಏನು ಮಾಡೋದು ಹೇಳು...ದೇವರು ನಂಗೆ ನಿನ್ನ ಕೊಡಲೇ ಇಲ್ಲ ನೋಡು. ದೇವರ ಮೇಲೂ ಕೆಟ್ಟ ಸಿಟ್ಟು ಬರುತ್ತೆ...ಎಲ್ಲಾ ಕೊಟ್ಟು ಅಕ್ಕನನ್ನು ನಂಗೆ ಕೊಟ್ಟಿಲ್ಲ ಅನ್ನೋ ಕೊರಗು ನಂದು.

ಅಕ್ಕಾ..ಈ ಬಾರಿ ನಾನು ಹಬ್ಬಕ್ಕೆ ಅಮ್ಮನೂರಿಗೆ ಹೋಗಿಲ್ಲ. ಕೃಷ್ಣಾಷ್ಟಮಿಯ ದಿನವೇ ಹೋಗಿಬಂದೆ. ಅಮ್ಮಾ ಇಂದು ಬೆಳಿಗ್ಗೆ ಫೋನು ಮಾಡಿದ್ರು. ಯಾಕೆ ಗೊತ್ತಾ? ನಾನೂನು ಹುಟ್ಟಿದ್ದು ಗಣೇಶ ಹಬ್ಬದ ದಿನ. ಇವತ್ತು ಅಮ್ಮನೂ ಗಣಪತಿ ದೇವಸ್ತಾನಕ್ಕೆ ಹಣ್ಣುಕಾಯಿ ಹೂವು, ಬೆಲ್ಲ ತಕೊಂಡು ಹೋಗಿ ನನ್ನ ಲೆಕ್ಕದಲ್ಲಿ ಪೂಜೆ ಮಾಡಿಸಿದೆ ಅಂದ್ರು. ಅಮ್ಮಂಗೆ ನನ್ನ ಹುಟ್ಟಿದ ದಿನ ಅಂದ್ರೆ ಅದು ಚೌತಿ ದಿನವೇ ಹೊರತು ಆಗಸ್ಟ್ 2 ಅಂದ್ರೆ ಅವರು ನಂಬೊಲ್ಲ. ಅಮ್ಮ ಓದಿಲ್ಲ ಅಕ್ಕಾ..ಅದಕ್ಕೆ ನೋಡು ಅವರು ಪ್ರತಿ ವರ್ಷ ಚೌತಿಯನ್ನೇ ನೆನಪಿಟ್ಟುಕೊಳ್ಳುತ್ತಾರೆ. ಅಮ್ಮನ ಮುಗ್ಧತೆಗೆ ಮನಸಾರೆ ವಂದಿಸಿದೆ.
ಅಕ್ಕಾ..ಯಾಕೋ ನಿತ್ಯ ಅಂದುಕೊಳ್ಳುತ್ತಿದ್ದೆ ಮನ..

ನನಗೂ, ನನ್ನ ಬದುಕಿನಲ್ಲಿ ಸುಗ್ಗಿಯ ಸಂಭ್ರಮದಿಂದ ಮೆರೆಯೋಕೆ ನೀನಿರಬೇಕಿತ್ತು...
ನನ್ನ ನೀನು, ನಿನ್ನ ನಾನು ತುಂಬಾ ಪ್ರೀತಿಸುವವರಾಗಿರಬೇಕಿತ್ತು...
ಮನದ ಕದ ತೆರೆದು...ಪ್ರೀತಿಯ ಮಳೆಯಲ್ಲಿ ತೋಯಿಸಲು ನೀನಿರಬೇಕಿತ್ತು...
ನನ್ನ ಮೌನ-ಮಾತು, ಹುಸಿಮುನಿಸು, ಮುಂಗೋಪದ ಜೊತೆ ಸಾಥ್ ನೀಡಲು ನೀನಿರಬೇಕಿತ್ತು...
ಅಕ್ಕಾ..ನೀನು ಯಾವಾಗ ಬರ್ತೀಯಾ....ಹೇಳು ಬೇಗ...
ಇಂತೀ ನಿನ್ನ
ತಂಗಿ

Wednesday, August 19, 2009

ಆ ಪ್ರಶ್ನೆ ನನ್ನ ಆತ್ಮವನ್ನು ಚುಚ್ಚಿಬಿಟ್ಟಿತ್ತು...

ಮೊನ್ನೆ ಮೊನ್ನೆ ಸ್ವಾತಂತ್ರ್ಯ ದಿನ ಆಚರಿಸಿದ್ದೂ ಆಯಿತು..ಅದೂ ಪೊಲೀಸರ ಬಿಗಿಬಂದೋಬಸ್ತ್ ನಲ್ಲಿ! ಇದು ನಮ್ಮ ಹಣೆಬರಹ ಬಿಡಿ. ಪ್ರತಿಯೊಂದು ಕಾರ್ಯಕ್ರಮಕ್ಕೂ ಪೊಲೀಸರ ಸರ್ಪಗಾವಲು. ಕೃಷ್ಣದೇವರಾಯ ಕಾಲದಲ್ಲಿ ಚಿನ್ನವನ್ನು ರಸ್ತೆಯಲ್ಲಿಟ್ಟು ಮಾರಾಟ ಮಾಡುತ್ತಿದ್ದುದು ಇಲ್ಲೇನಾ ಎಂಬ ಶಂಕೆ ಮೂಡುತ್ತಿದೆ. ಅದಿರಲಿ, ಮೊನ್ನೆ ಸ್ವಾತಂತ್ರ್ಯ ದಿನದಂದು ಗೆಳತಿಯ ಮನೆಯಲ್ಲಿ ಸುಮ್ನನೆ ಕುಳಿತು ಟಿವಿ ನೋಡುತ್ತಿದೆ. ಗತಕಾಲದ ಇತಿಹಾಸವನ್ನು ಮತ್ತೆ ಮೆಲುಕು ಹಾಕುವ ಚಿತ್ರಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು..ಹೀಗೇ ಬೇರೆ ಬೇರೆ ಚಾನೆಲ್ ಗಳಲ್ಲಿ ಸ್ವಾತಂತ್ರ್ಯ ಆಚರಣೆ ಭರ್ಜರಿಯಾಗೇ ನಡೆಯುತ್ತಿತ್ತು. ಯಾವುದೋ ಒಂದು ಚಾನೆಲ್ ನೋಡಿದಾಗ 'ನಮ್ಮ ದೇಶದ ಹೀರೋ'ಗಳೆಂಬ ಕಾರ್ಯಕ್ರಮ ನಡೆಯುತ್ತಿತ್ತು. ಥಟ್ಟನೆ ಕಣ್ಣುಹಾಯಿಸಿದೆ, ಕ್ರಿಕೆಟ್ ತಾರೆಗಳಿಬ್ಬರನ್ನು 'ಹೀರೋಸ್ ಆಫ್ ಇಂಡಿಯಾ' ಸ್ತಾನದಲ್ಲಿ ಕುಳಿತುಕೊಳ್ಳಿಸಿ ಸಂವಾದಕ್ಕೆ ಅವಕಾಶ ನೀಡಲಾಗಿತ್ತು. ಕಿಕ್ಕಿರಿದ ಜನರು. 'ನೀವು ಯಾರನ್ನು ಯಾವಾಗ ಮದುವೆ ಆಗ್ತೀರಾ?', 'ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಇಷ್ಟನಾ?' 'ನಿಮಗೆ ಯಾವ ಹುಡುಗಿಯಾದ್ರೂ ಪಪೋಸ್ ಮಾಡಿದ್ಳಾ?' ಇಂಥ ಪ್ರಶ್ನೆಗಳ ಸುರಿಮಳೆ ವೀಕ್ಷಕರ ಕಡೆಯಿಂದ ಬರುತ್ತಿತ್ತು.

ಚಾನೆಲ್ ಆಫ್ ಮಾಡಿ ಕುಳಿತವಳಿಗೆ ಶಾಲಾ ದಿನಗಳಲ್ಲಿ ಟೀಚರ್ ಹೇಳಿಕೊಟ್ಟ ನಮ್ಮ 'ಹೀರೋ'ಗಳ ಬಗ್ಗೆ ಯೋಚನೆ ಮೂಡತೊಡಗಿತ್ತು.

ಹೌದು, ಶಾಲಾದಿನಗಳಲ್ಲಿ ನನ್ನ ಬೆಂಚಿನ ಪಕ್ಕದ ಗೋಡೆಗೆ ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ಮಹಾತ್ನಾಗಾಂಧೀಜಿ ಯ ದೊಡ್ಡ ಫೋಟೋಗಳನ್ನು ಅಂಟಿಸಿದ್ದರು. ನಿತ್ಯ ನಮ್ಮ ಟೀಚರ್ ಕ್ಲಾಸಿಗೆ ಬಂದವರೇ ದೇಶದ ಮಹಾನ್ ನಾಯಕರ ಕುರಿತು ಹೇಳೋರು. ಅವರ ಸಾಹಸಗಾಧೆಗಳನ್ನು ಪರಿಚಯಿಸೋರು. ಅವರ ಜೀವನ ಮೌಲ್ಯವನ್ನು ನಮಗೂ ಅರಿವಾಗಿಸೋರು. ಅವರು ನಮ್ಮ 'ನಾಯಕ'ರು ಅನ್ನೋರು. ಕೈಗೆ 'ರಾಷ್ಟ್ರಪಿತರು' ಎಂಬ ಪುಸ್ತಕ ನೀಡಿ ಒಬ್ಬೊಬ್ಬರಾಗಿ ಓದೋಕೆ ಹೇಳೋರು. ನಾವೆಲ್ಲ ಏರಿದ ಧ್ವನಿಯಲ್ಲಿ ಓದಿದ್ದೇವೆ. ಇವರೇ ನಮ್ಮ ನಾಯಕರೆಂದು ಒಪ್ಪಿಕೊಂಡಿದ್ದೇವೆ. ಭಲೇ ಮಗು...ಅಂತ ಟೀಚರ್ ಬಾಯಿಂದ ಹೊಗಳಿಸಿಕೊಂಡಿದ್ದೇವೆ. ಸ್ವಾತಂತ್ರ್ಯ ಬಂದಾಗ ಹೊಸ ಯುನಿಫಾರ್ಮ್ ಹಾಕಿ ನಮ್ಮೂರ ಶಾಲೆಯಿಂದ ನಾಲ್ಕೈದು ಕಿಮೀ ದೂರ ಮೆರವಣಿಗೆಯಲ್ಲಿ ಸಾಗಿದ್ದೇವೆ. ಗಾಂಧೀ ಕೀ ಜೈ, ಭೋಸ್ ಕೀ ಜೈ, ಭಗತ್ ಕೀ ಜೈ, ಶಾಸ್ತ್ರೀಜಿ ಕೀ ಜೈ ಅಂತ ಕೂಗುತ್ತಾ ಸಾಗಿದ್ದೇವೆ. ಕೂಗುತ್ತಲೇ ತ್ರಿವರ್ಣ ಧ್ವಜ ಹಾರಿಸಿದ್ದೇವೆ. ದೇಶಭಕ್ತಿ ಗೀತೆ ಹಾಡಿದ್ದೇವೆ. ಸ್ವಾತಂತ್ರ್ಯವೆಂದು ಬೀಗಿದ್ದೇವೆ. ನಮಗೆ ಪೊಲೀಸರ ಸರ್ಪಗಾವಲು ಬೇಕಿರಲಿಲ್ಲ. ಜೊತೆಗೆ ಟೀಚರ್ ಗಳು ಇದ್ದರು. ನಾಯಕರ ಹೆಸರುಗಳನ್ನು ಕೂಗಿ ಸಾಗುವಾಗ ಮೈಯೆಲ್ಲಾ ರೋಮಾಂಚನ. ಆ ನಮ್ಮ ಪುಟ್ಟ ಮನಸ್ಸಿನಲ್ಲಿ ನಿಜವಾದ ದೇಶನಾಯಕರು ನೆಲೆಹೂರಿದ್ದರು. ನಾವು ಹಾಗೇ ಆಗಬೇಕು ಅಂತ ಕನಸು ಕಂಡಿದ್ದೇವೆ. ಹೌದು, ನಾನೂ ಹೊರತಾಗಿರಲಿಲ್ಲ. ಭಗತ್ ಸಿಂಗ್ ಬದುಕಿನಕಥೆಯನ್ನು ಮತ್ತೆ ಮತ್ತೆ ಓದುತ್ತಿದೆ. ಗಾಂಧೀಜಿಯ ಸತ್ಯಾನ್ವಷಣೆಯನ್ನು ಓದಿ ನಾನೂ ಚಕಿತಳಾಗಿದ್ದೆ. ಆಗ ಸ್ವಾತಂತ್ರ್ಯ ಆಚರಿಸುವುದೂ ನಮಗೂ ಹಬ್ಬ. ಖುಷಿಯ ಹಬ್ಬ, ಸಂಭ್ರಮ ಸಡಗರದ ಹಬ್ಬ. ಏನೋ ಉತ್ಸಾಹ.

ಕುಳಿತಲ್ಲಿಯೇ ಯೋಚಿಸುತ್ತಿದ್ದೆ...ಆದರೆ ಈಗ? ಎಂಬ ಪ್ರಶ್ನೆ ನನ್ನ ಆತ್ಮಕ್ಕೆ ಚುಚ್ಚಿಬಿಟ್ಟಿತ್ತು!!

ನಮ್ಮ ಹೀರೋಗಳು ಯಾರು? ಬಹುತೇಕರ ಹೀರೋಗಳು ಕ್ರಿಕೆಟ್ ತಾರೆಗಳು, ಸಿನಿಮಾ ತಾರೆಗಳ ಮಟ್ಟಿಗಷ್ಟೇ ಸೀಮಿತವಾಗಿದೆ. ನಮ್ಮಮ್ಮ-ನಮ್ಮಪ್ಪನೇ ನಮಗೆ ಹೀರೋಗಳು ಅನ್ನೋರು ಈಗ ಕಡಿಮೆಯೇ. ಕ್ರಿಕೆಟ್ ತಾರೆಗಳು ಅಥವಾ ಸಿನಿಮಾ ನಟ-ನಟಿಯರನ್ನು ಹೀರೋಗಳೆಂದು ಪರಿಗಣಿಸಬೇಡಿ ಅನ್ನೋ ದನ್ನು ಹೇಳುತ್ತಿಲ್ಲ,. ಅದು ನನ್ನ ಉದ್ದೇಶವೂ ಅಲ್ಲ. ಆದರೆ. ನಮ್ಮ ನಿಜವಾದ ಹೀರೋಗಳನ್ನು ಕಂಡುಕೊಳ್ಳುವಲ್ಲಿ ನಾವು ತುಕ್ಕು ಹಿಡಿದಿದ್ದೇವೆ ಅನ್ನೋದಷ್ಟೇ ನನ್ನ ಮನದ ನೋವು. ಒಬ್ಬ ಚೆಂದದ ನಟ ಅಥವಾ ನಟಿ ಪರದೆ ಮೇಲೆ ಚೆನ್ನಾಗಿ ಅಭಿನಯಿಸಿದರೆ ಅವರೇ ನಮ್ಮ ಹೀರೋಗಳಾಗುತ್ತಾರೆ. ಓರ್ವ ಬ್ಯಾಟ್ಸ್ ಮನ್ ನಾಲ್ಕೈದು ಸಿಕ್ಸ್ ಬಾರಿಸಿದ್ರೆ ಬಾಲ್ ಹೋಗುವ ರಭಸ ನೋಡಿಯೇ ನಾವು ಅವನನ್ನು ಹೀರೋ ಅಂಥ ಅಪ್ಪಿಕೊಳ್ಳುತ್ತೇವೆ...ಇರಲಿ. ಅಪ್ಪಿಕೊಳ್ಳಿ ಬೇಡ ಅನ್ನಲ್ಲ. ಆದರೆ, ಹೀರೋ ಅನ್ನುವ ಪದವೇ ಅರ್ಥ ಕಳೆದುಕೊಂಡಿದೆ ಅಲ್ವಾ? ಅಂತೀನಿ ಅಷ್ಟೇ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರು, ದೇಶವನ್ನು ಹಗಲಿರುಳೂ ಕಾಯುವ ಯೋಧರು, ನಮ್ಮ ಬದುಕು ನೀಡಿದ ಪ್ರೀತಿಯ ಅಪ್ಪ-ಅಮ್ಮ, ಬದುಕಿಗೆ ದಾರಿ ತೋರಿದ ಗುರುಗಳು, ದಿನವಿಡೀ ಬೆವರು ಸುರಿಸಿದ ಅನ್ನದಾತನಂದ ಸಹನಾಮಯಿಗಳು ನಮಗೆ ಯಾವಾಗ 'ಹೀರೋ'ಗಳಾಗುವುದು? ಟೀಚರ್ ಹೇಳಿದ ಹೀರೋಗಳು, ಸ್ವಾತಂತ್ರ್ಯ ಬರೇ ಶಾಲಾ ದಿನಗಳಿಗಷ್ಟೇ ಸೀಮಿತವಾಯಿತಲ್ಲಾ ಅನ್ನೋ ನೋವು ನನ್ನ ತುಂಬಾ ಕಾಡಿತ್ತು. ಬದಲಾವಣೆಯೇ ಜಗದ ನಿಯಮ..ಆದರೆ....!
ಬೇಡ ಹೆಚ್ಚು ಬರೆಯಲ್ಲ..

Monday, July 27, 2009

...ಕಣವಿಯವರ ಒಂದಿಷ್ಟು ಸಾಲುಗಳು...

ಎಲ್ಲೋ ಓದಿದ ಚೆನ್ನವೀರ ಕಣವಿ ಅವರ ಕವನದ ಸಾಲುಗಳು ನನಗೆ ಇಷ್ಟವಾಗಿ ನನ್ನ ಪುಟ್ಟ ಡೈರಿಯಲ್ಲಿ ಬರೆದಿಟ್ಟಿದ್ದೆ. ನೀವೂ ಓದಿಕೊಳ್ಳಿ.

"ಬರೆದ ಕವಿತೆಯ ಭಾರ ಬರೆಯದ ಕವಿತೆಗಳಿಗಿಂತ ಹೆಚ್ಚಲ್ಲ"

"ಪ್ರಕೃತಿ ತನ್ನೆದೆಯ ಮಧುವಾಟಿಕೆಯ ತೆರೆದಿರಲು
ಅದನು ಹೀರದೆಯೆ ಸಾಗಬಹುದೇ?
ಯಾರಿಗೀ ಸುಂದರತೆ ಯಾರಿಗೀ ಪರವಶತೆ?
ಯಾರ ಸುಖಕೀ ಸೃಷ್ಟಿ ನಿನಗಲ್ಲದೇ?"


"ಮಾಯೆಯಿಕ್ಕುವ ಕರದ ತಾಲಲಯಕ್ಕೆ
ದೇಶಕಾಲಗಳು ನರ್ತಿಸುತ ಸಾಗಿವೆ"

"ಬಾಲ್ಯದಿಂದಲೂ ಮುಗಿಲ ಕಂಡು
ಮೈಮರೆತ ದಿನಗಳೆನಿತು!
ಅವುಗಳಾಟದಲ್ಲಿ ಮೈಯಮಾಟದಲ್ಲಿ
ಜೀವ ತುಂಬಿಬಂತು"


"ಮುಗಿಲ ಬೆಳಕಿನ ಬೀಜ ಮರವಾಗಿ ನೆಲವ ತಬ್ಬಿತ್ತು"

"ಏನಾದರೂ ಆಗಲಿ, ಹಾಡು ನಿಲ್ಲಿಸಬೇಡ
ದೀಪ ಪಟ್ಟನೆ ಆರಿ ಹೋಗಬಹುದು
ನನ್ನೆದೆಯ ಕತ್ತಲೆಯ ಕಣ್ಣುಕಪ್ಪಡಿ ಮತ್ತೆ
ಮೂಲೆ-ಮೂಲೆಗೆ ಹೋಗಿ ಹಾಯಬಹುದು"


"ಬಾಳಪುಟದಲ್ಲಿ ಬಾಲ್ಯವೆಂಬುವುದೊಂದು
ಅಳಿಸಲಾರದ ಮಧುರ ಭಾವಗೀತ"

"ಬದುಕು ಸೋಲಾದರೂ ಕಾಡು ಪಾಲದರೂ
ಹಾಡು ಬಿಟ್ಟುಳಿದವನ ಪಾಡು ಬೇಡ
ನೀನೆನ್ನ ದೈವತವು ಹಾಡೆನ್ನ ಜೀವಿತವು
ಮತ್ತೆ ಮತ್ತುಳಿದವರ ಮಾತು ಬೇಡ"


"ಮೆಲ್ಲದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ
ಹೆಣ್ಣ ಕಣ್ಣಂಚಿನಲ್ಲಿ ತುಳುಕುವಂತೆ"

"ಹೊಗೆ ನಟ್ಟು ಹೋಗಿರುವ ಮನದ ಮನೆಗೋಡೆಗಳು
ಸುಣ್ಣ-ಬಣ್ಣವನೆಂದು ಕಾಣಬಹುದು?
ಇಲ್ಲಣವು ಜೋತಿರುವ ಜೇಡಬಲೆ ನೇತಿರುವ
ಬೆಳಕಿಂಡಿಯಲ್ಲಿ ಬೆಳಕದೆಂತುಬಹುದು?"


"ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ"

ಜೀವನಪ್ರೀತಿಗೆ ಪರಿಧಿಯ ಹಂಗೇಕೆ?

ಜೀವನ ಪ್ರೀತಿಯ ಅನುಭೂತಿ ...!

ಯಾಕೋ ಇದ್ದಕಿದ್ದಂತೆ ಮತ್ತೆ ಮತ್ತೆ ಕಾಡೋ ನನ್ನೋಳಗಿನ ಇಬ್ಬನಿ ಹನಿಯಿದು. ತುಂಬಾ ಸಲ ಜೀವನ ಪ್ರೀತಿಯ ಅನುಭೂತಿಯೇ? ಅನ್ನೋ ಅನುಮಾನದ ಪ್ರಶ್ನೆ ನನ್ನೊಳಗೆ ಕಾಡಿದ್ದರೂ, ಹೌದು, ಈ ಬದುಕು ಪ್ರೀತಿಯ ಅನುಭೂತಿ ಅನ್ನುತ್ತಿದ್ದೆ ನನ್ನ ಆತ್ಮಸಾಕ್ಷಿ. ಒಂದು ಕ್ಷಣ ಕಣ್ಣಂಚು ಒದ್ದೆಯಾದರೂ, ನೋವು-ನಲಿವಿನ ಗೆರೆಗಳು ಕಣ್ಣಂಚಿನಲ್ಲಿ ಸರಿದು ಹೋದರೂ 'ಜೀವನವೇ ಪ್ರೀತಿಯ ಅನುಭೂತಿ' ಎಂದನಿಸುತ್ತೆ. ಹೌದು, ಈ ಜಗತ್ತು, ಈ ಜನ್ರು, ಈ ಪ್ರಕೃತಿ, ಈ ಪ್ರಾಣಿ ಪ್ರಪಂಚ, ಈ ಸರ್ವ ಜೀವಸಂಕುಲವನ್ನು ಕಲಿಯೋಕೆ, ತಿಳಿಯೋಕೆ ಅದೆಷ್ಟೋ ವರುಷಗಳು ಸರಿದಿವೆ. ಅಮ್ಮನ ಎದೆಹಾಲಿನ ಹಠ ಬಿಟ್ಟು ಅದೆಷ್ಟು ವರುಷ ಸರಿದಿದೆ ಅಲ್ವಾ?

ಅಲ್ಲಿಂದ ಇಲ್ಲಿತನಕ ಜೀವನವನ್ನು ಪ್ರೀತಿಸುತ್ತಾ, ನನ್ನಂತೆ ಇತರರು ಅನ್ನುತ್ತಾ, ಆತ್ಮಸಾಕ್ಷಿಯ ಮಾತಿಗೆ ತಲೆದೂಗುತ್ತಾ ಬಂದಿರೋವರಿಗೆ ಜೀವನದಲ್ಲಿ ಪ್ರೀತಿಯ ಅನುಭೂತಿ ಪಡೆಯೋದೇ ಒಂದು ಅದೃಷ್ಟ ಅನ್ನಬೇಕು. ಮೊನ್ನೆ ಮೊನ್ನೆ ನನ್ನ ಪ್ರೀತಿಯ ಗೆಳೆಯ ಚೆಂದದ ಸಾಲೊಂದು ಬರೆದುಕೊಡು ಎಂದಾಗ ನಂಗೆ ಥಟ್ಟನೆ ಹೊಳೆದ ವಾಕ್ಯ: ಜೀವನ ಪ್ರೀತಿಯ ಅನುಭೂತಿ!

ನಿಮಗೂ ಹಾಗೇ ಅನಿಸಲ್ವಾ ಹೇಳಿ? ಮನುಷ್ಯನಿಗೆ ಏಳೇಳು ಜನ್ಮವಿರುತ್ತೆ ಅಂಥ ನಮ್ಮಜ್ಜಿ ಹೇಳಿದ ನೆನಪು. ಹೌದು, ಅದಕ್ಕೆ ಮಾನವ ಜನ್ಮ ದೊಡ್ಡದು, ಅದನ್ನು ಹಾಳು ಮಾಡಿ ಕೊಳ್ಲದಿರಿ ಹುಚ್ಚಪ್ಪಗಳಿರಾ! ಎಂದು ಹಾಡಿದ್ದಿರಬೇಕು ದಾಸರು. ಹುಲ್ಲು, ಪೊದೆ, ಪ್ರಾಣಿಗಳಾಗಿ ಹುಟ್ಟುವ ಬದಲು ಮನುಷ್ಯನಾಗಿ ಹುಟ್ಟೋದೇ ಲೇಸು ಅಂತಾರೆ ಹಿರಿಯರು.

ಹುಟ್ಟಿದ ಮೇಲೆ, ಹುಟ್ಟಿ ಬೆಳೆದ ಮೇಲೆ ಇದೆಲ್ಲಾ ನೆನೆಪಾಗುತ್ತೆ ಕಣ್ರೀ. ಹೌದು, ನಾನೂ ಹುಟ್ಟಿದ್ದೇನೆ..ಮನುಷ್ಯಳಾಗಿ! ಒಂದಿಷ್ಟು ಭಾವನೆಗಳು, ಒಂದಿಷ್ಟು ಪ್ರಿತಿ, ಒಳ್ಳೆಯದೆನಿಸುವ ಜೀವನ, ಹೃದಯದಲ್ಲಿ ಒಂದಿಷ್ಟು ಕನಸು, ಅಮ್ಮನ ಮಮತೆ, ವಾತ್ಸಲ್ಯ, ಎಲ್ಲನೂ ದೇವ್ರು ಕೊಟ್ಟಿದ್ದಾನೆ. ಹಸಿವ ಹೊಟ್ಟೆಗೆ, ಉಡೋ ಬಟ್ಟೆಗೆ, ಬಸ್ಸಿಗೆ ಓಡಾಡೋಕೆ, ಅಮ್ಮನ ಕನಸಿಗೆ ಜೀವ ತುಂಬೋಕೆ: ಕೈಗೊಂದು ಪುಟ್ಟ ಕೆಲಸ! ಆಸರೆಗೆ ಪುಟ್ಟದೊಂದು 'ಮನೆ', ಅದೇ ನನ್ನ ಪಾಲಿನ 'ಅರಮನೆ'. ಅಕ್ಷರಗಳಿಗೆ ಜೀವ ತುಂಬೋಕೆ ಒಂದಿಷ್ಟು ಸುಂದರ ಭಾವನೆಗಳು, ನನ್ನಂತೆ ಪರರೂ ಎನ್ನೋ ಪುಟ್ಟದಾದ ಮನಸ್ಸು, ಇತತರ ನೋವು-ನಲಿವಿಗೆ ಸ್ಪಂದಿಸುವ ಹೃದಯ..ಸಾಕಲ್ವೇ? ಬದುಕನ್ನು ಪ್ರೀತಿಸೋಕೆ!

ನಿನ್ನೆ ಸುನಂದಾ ಬೆಳಗಾಂವಕರ ಅವರ, 'ಕೊಡುವುದೇನು, ಕೊಂಬುದೇನು?' ಪುಸ್ತಕ ಓದುತ್ತಿದ್ದೆ. ಅವರೊಂದು ಕಡೆ ಹೇಳುತ್ತಾರೆ, "'ದೇವರು ಈ ಜೀವನವನ್ನು ಪ್ರೀತಿಸುವುದಕ್ಕೆಂದೇ ಕೊಟ್ಟಿದ್ದಾನೆ, ದ್ವೇಷಿಸುವುದಕ್ಕಲ್ಲ. ಪ್ರೀತಿ, ದ್ವೇಷ ಬೆಳಕು ನೆಳಲಿನ ಆಟ. ದ್ವೇಷಿಸುತ್ತಾ ಬದುಕುವುದು ಒಂದು ಶಾಪ. ಪ್ರೀತಿಸುತ್ತಾ ಬದುಕುವುದು ಒಂದು ವರ"!

ಬಹುಶಃ ಈ ಪುಟ್ಟ ಲೇಖನಕ್ಕೆ ಸ್ಫೂರ್ತಿ ಕೂಡ ಇದೇ ಸತ್ವಯುತವಾದ ಶಬ್ಧಗಳಿರಬಹುದು. ಜೀವನಪ್ರೀತಿಗೆ ಪರಿಧಿ ಬೇಡ, ಅದು ಶರಧಿಯಂತೆ ಪ್ರವಹಿಸಲಿ. ಪ್ರೀತಿಗೆ ಹಂಗು ಬೇಡ..ನಮ್ಮ ಬದುಕನ್ನೇ ಪ್ರೀತಿಸಿ ಬಿಡೋಣ. ಅಲ್ಲಿ ಅನನ್ಯತೆಯಿದೆ, ಪ್ರಾಮಾಣಿಕತೆ ಇದೆ, ನಿಷ್ಕಲ್ಲಶ ಭಾವನೆಯಿದೆ. ಮತ್ತೇನು ಬೇಕು? ಒಂಬತ್ತು ತಿಂಗಳು ಹೊತ್ತು, ಹೆತ್ತು, ಸಲಹಿ, 'ನಾವೀಗ ದೊಡ್ಡವರಾಗಿದ್ದೇವೆ' ಅನ್ನೋದನ್ನು ಹೇಳಿಕೊಳ್ಳುವಂತೆ ಮಾಡಿರುವ 'ಅಮ್ಮನೆಂಬ ದೇವರು' ನೀಡಿದ ಈ ಅಮೂಲ್ಯ ಬದುಕಿಗೆ?

Wednesday, July 15, 2009

ನನ್ನೊಳಗಿನ ಇಬ್ಬನಿ ಹನಿಗಳು...

ಜೀವನ ಪ್ರೀತಿಯ ಅನುಭೂತಿ!

ಒಂದೇ ಒಂದು ಕ್ಷಣಕ್ಕೆ ನೀನು ಕವಿತೆಯಾಗು, ಮಳೆ ಬರ್ತಾ ಇದೆ!

ಬದುಕಿನಲ್ಲಿ ಇಟ್ಟಿದ್ದು ಎರಡನೇ ಹೆಜ್ಜೆ, ಅದರಲ್ಲಿ ಒಂದು ನೀನು!

ಮನಸ್ಸು ಒಣಗಿತ್ತು, ಥಟ್ಟನೆ ನೆನಪುಗಳು ಮುತ್ತಿದವು!

ನಗುಮಳೆಯಲ್ಲಿ ತೊಯ್ದುಬಿಡ್ತೀನಿ, ಕವನ ಬರೇತೀಯಾ ಹೇಳು!

ಒಡೆಯದಿರು ಕನ್ನಡೀನಾ..ಮತ್ತೆ ಒಂದಾಗಿಸೋಕೆ ಆಗೋಲ್ಲ.

ನಾನ್ಯಾಕೆ ನಗಬೇಕು..ನಿನ್ನ ನಗುವೇ ನನ್ನೊಳಗಿರುವಾಗ!

ಅಂದು ತುಂಬಾ ಅತ್ತಿದ್ದೆ. ನೀನು ಅಮ್ಮನಾಗಬೇಕಂದಿತ್ತು ಮನಸ್ಸು!

ನಿನ್ನ ನಗು ಮತ್ತು ಕಣ್ಣುಗಳನ್ನು ಪ್ರೀತಿಸ್ತೀನಿ. ಖುಷಿಯಲ್ಲಿದ್ದಾಗ ಬೆಳಕು ಕೊಡು.

ಯಾಕೋ ಕಾಡುತ್ತಿವೆ ಬಚ್ಚಿಟ್ಟುಕೊಂಡ ನೆನಪುಗಳು, ಆದರೆ ಅವುಗಳಿಗೆ ಜೀವವಿರಲಿಲ್ಲ!

ಕನಸು ಕಲ್ಲಾಗುವ ಮೊದಲು, ಹುಣ್ಣಿಮೆ ಬೆಳದಿಂಗಳು ಸೂಸಿಬಿಡು, ನಾನೂ ನಗುತ್ತೇನೆ..ನಿನ್ನಂತೆ!

ಬೆಳದಿಂಗಳಲ್ಲಿ ಕಲ್ಲು ಬೆಂಚಿನ ಮೇಲೆ ಕುಳಿತ ಎನಗೆ ಅಮ್ಮ ನೀಡಿದ ತುತ್ತು ನೆನಪಾಯಿತು, ಅಲ್ಲಿ ನಗುತ್ತಿದ್ದೆ!

Thursday, July 9, 2009

ನಾವ್ಯಾಕೆ 'ಮಗು'ವಿನ 'ನಗು'ವಾಗೊಲ್ಲ...?

ಹೌದು, ಆ ಮಗು ನನ್ನ ನೋಡಿ ಮುಗುಳುನಗು ಸೂಸಿಬಿಡ್ತು. ಏನೋ ಯೋಚನೆಯಲ್ಲಿ ಮುಳುಗಿದ್ದ ನಾನೂ ನಕ್ಕುಬಿಟ್ಟೆ...ನನಗರಿವಿಲ್ಲದೆಯೇ! ನಿಮಗೂ ಹಾಗೇ ಆಗಬಹುದು. ಹೌದು..ಅದಕ್ಕೆ ಕಾರಣ ಆ ಪುಟ್ಟ ಮಗುವಿನ ನಗು! ಹೌದು..ಮಕ್ಕಳು ನಕ್ಕರೆ ಹಾಗೇ ಸಕ್ಕರೆಯಂತೆ!. ನಾವು ನಮ್ಮನ್ನೇ ಮರೆತುಬಿಡುವಷ್ಟು ಚೆನ್ನಾಗಿ ನಗುತ್ತವೆ. ಎಷ್ಟೋ ಬಾರಿ ನನ್ನ ಮನಸ್ಸು ಆ ಮಗುವಿನಂತೆ ನಾನೂ ನಗಲು ಸಾಧ್ಯವಾಗುತ್ತಿದ್ದರೆ ಎಂದನಿಸುತ್ತೆ. ನಮ್ಮನೆ ಪಕ್ಕದ ಮಗು ಯಾಮಿನಿ ನಿತ್ಯ ಬಂದು ನಾನು ಸಿಟ್ಟಲ್ಲಿ ಗೊಣಗುಟ್ಟುತ್ತಿದ್ದರೂ ಆಂಟಿ ಆಫಿಸ್ ನಿಂದ ಯಾವಾಗ ಬಂದ್ರೀ? ಅಂತ ಕೇಳಿದಾಗ ಸಿಟ್ಟೆಲ್ಲ ಜರ್ರನೆ ಇಳಿದುಹೋಗುತ್ತೆ. ಮೊದಲ ಮಹಡಿಯಲ್ಲಿರುವ ಶ್ರೇಯಸ್ಸು ನನ್ನ ಚಪ್ಪಲ ಸದ್ದಿಗೆ ಬಾಗಿಲ ಬಳಿ ಬಂದು ಸಂದಿಯಲ್ಲಿ ನಿಂತು ಮುಗ್ಧವಾಗಿ ನಕ್ಕಾಗ ಮನತುಂಬಿ ಬಿಡುತ್ತೆ. ಬೆಳಿಗ್ಗೆಯಿಂದ ಸಂಜೆ ತನಕ ಆಫೀಸ್ ನಲ್ಲಿ ದುಡಿದು ದಣಿದರೂ ಆ ದಣಿವನ್ನೆಲ್ಲಾ ಆ ನಗು ನುಂಗಿಬಿಡುತ್ತೆ. ನಾನು ಈ ಹಿಂದೆ 'ನಾನೂ ಮಗುವಾಗಿರಬೇಕಿತ್ತು' ಎಂಬ ಬರಹ ಬರೆದಾಗ 'ಮಕ್ಕಳ ಜೊತೆ ನೀನು ಮಗುವಾಗಿಬಿಡು' ಅಂತ ಸಲಹೆ ನೀಡಿದವರು ಅದೆಷ್ಟೋ ಮಂದಿ. ಹೌದು, ನಂಗೂ ಹಾಗೇ ಅನಿಸುತ್ತೆ..ಪುಟ್ಟ ಮಕ್ಕಳ ಜೊತೆ ನಾವೂ ಮಕ್ಕಳಾಗಿಬಿಡೋದು ಎಷ್ಟು ಖುಷಿ ಕೊಡುತ್ತೆ ಅಂತ.

ಓನರ್ ಆಂಟಿಯ ಮಗು ಮನೀಷ್ ಬಂದು ತೊಡೆ ಮೇಲೆ ಕುಳಿತು ಬ್ಯಾಗೆಲ್ಲಾ ಡೈರಿ ಮಿಲ್ಕ್ ಕೊಡು ಎಂದು ಪೀಡಿಸಿದಾಗ ಅದೇ ಒಂಥರಾ ಖುಷಿ. ಬ್ಯಾಟ್ ಹಿಡಿಯಲು ಬಾರದ ಮಕ್ಕಳ ಜೊತೆ ನಾವೂ ಬ್ಯಾಟ್ ಹಿಡಿದು ಆಡೋದು ಅದೂ ಒಂಥರಾ ಖುಷಿ. ಕಾಲು ಜಾರಿ ದೊಪ್ಪನೆ ನೆಲದ ಮೇಲೆ ಬಿದ್ದ ಮಗುವನ್ನು ಸಂತೈಸಿದಾಗ ಆ ಮಗು ನೋವನ್ನೆಲ್ಲಾ ಮರೆತು ನಗುತ್ತೆ ಅಲ್ವಾ? ಅದೂ ಒಂದು ನೆಮ್ಮದಿಯ ಖುಷಿ. ಮಕ್ಕಳು ನಕ್ರೆ ಖುಷಿ, ಅತ್ರೂನೂ ಖುಷಿ, ಹೇಗಿದ್ರುನೂ ಮಕ್ಕಳು ಚೆಂದವೇ, ಅದಕ್ಕೆ ಮಕ್ಕಳನ್ನು ದೇವರಿಗೆ ಹೋಲಿಸುತ್ತಾರೆ. ಇನ್ನು ಕೆಲ ಮಕ್ಕಳು ತೊಟ್ಟಿಲಲ್ಲಿ ಮಲಗಿ ನಿದ್ದೆ ಮಾಡುತ್ತಿರುವಾಗಲೇ ನಗುತ್ತವೆ..ನನ್ನ ತಮ್ಮ ಹಾಗೇ ನಗುವಾಗ ಅಮ್ಮ ಹೇಳುತ್ತಿದ್ದ ನೆನಪು: ಮಗು ಅಂದ್ರೆ ದೇವರು ಪುಟ್ಟಾ, ಅದಕ್ಕೆ ನೋಡು ಇವ ನಗುತ್ತಾನೆ ಅಂತ!

ಹೌದು, ನಾವೂ ಮಕ್ಕಳಾಗಿರುವಾಗ ಹೀಗೆ ತೊಟ್ಟಿಲಲ್ಲಿ ನಕ್ಕಿರಬಹುದು, ಅತ್ತಿರಬಹುದು, ಅಲ್ಲೇ ಉಚ್ಚೆ ಹೊಯ್ದಿರಬಹುದು. ಆವಾಗ ಎಷ್ಟು ಮಂದಿ ನಮ್ಮ ಮುದ್ದಿಸುತ್ತಿದ್ದರು, ಆಟವಾಡಿಸುತ್ತಿದ್ದರು. ನಮ್ಮ ಜೊತೆ ಎಷ್ಟೋ ಮಂದಿ ಮಕ್ಕಳಾಗುತ್ತಿದ್ದರು ಎಂದನಿಸುತ್ತೆ. ಆದರೆ ಯಾಕೋ ಒಂದು ಪುಟ್ಟ ನೋವು ನಿತ್ಯ ನನ್ನೆದೆ ಕಾಡುತ್ತೆ, ಪೀಡಿಸುತ್ತೆ, ನೋಯಿಸುತ್ತೆ.
ಅದೇ ಪುಟ್ಟ ಮಗುವಾಗಿದ್ದಾಗ ಜಗತ್ತಿಗೇ 'ನಗು'ವಾಗಿದ್ದ ಈ ಮನುಷ್ಯ ಅದೇಕೆ ಕಳ್ಳನಾಗುತ್ತಾನೆ, ದರೋಡೆ ಮಾಡುವವನಾಗುತ್ತಾನೆ, ಸಮಾಜಕ್ಕೆ ಕಳಂಕವಾಗುತ್ತಾನೆ, ತಾಯಿ ಸಮಾನಳಾದ ಹೆಣ್ಣನ್ನು ಅತ್ಯಾಚಾರ ಮಾಡಿ ಬೀದಿಗೆಸೆಯುತ್ತಾನೆ, ಮೋಸ, ವಂಚನೆಯ ಕೂಪಕ್ಕೆ ತನ್ನ ಒಡ್ಡಿಕೊಳ್ಳುತ್ತಾನೆ? ಪುಟ್ ಪಾತ್ ನಲ್ಲಿ ನಡೆಯೋ ಬಡಬಗ್ಗರ ಮೇಲೆ ತನ್ನ ವಾಹನ ಸವಾರಿ ಮಾಡಿ 'ಕೊಲೆಗಾರ' ನಾಗುತ್ತಾನೆ? ಏಕೆ ಕನಸುಗಳನ್ನು ಕೊಂದು ಕೊಚ್ಚಿಹಾಕುತ್ತಾನೆ? ತನ್ನ ಗೋರಿಯನ್ನು ತಾನೇ ಯಾಕೆ ಕಟ್ಟಿಕೊಳ್ಳುತ್ತಾನೆ? ಬದುಕಿನ ಇತಿಹಾಸದಲ್ಲಿ 'ನಾಯಕ' ನಾಗುವಅದೇಕೆ 'ಖಳನಾಯಕ' ನಾಗುತ್ತಾನೆ? ಅಯ್ಯೋ ಆ ಪುಟ್ಟ ಮಗು ಅದೇಕೋ ಭಯೋತ್ಪಾದಕನಾದ? ಇಂಥ ಮಿಲಿಯನ್ ಡಾಲರ್ ಪ್ರಶ್ನೆಗಳು ನನ್ನ ನಿತ್ಯ ಕಾಡುತ್ತವೆ.

ಹೌದು, ಪ್ರತಿ ಮಾನವನೂ ಹುಟ್ಟುವಾಗ ಒಳ್ಳೆಯವನಾಗಿರುತ್ತಾನೆ, ಸುತ್ತಲ ಸಮಾಜ ಅವನನ್ನು ಕೆಟ್ಟವನಾಗಿಸುತ್ತದೆ ಯಾರೋ ತಿಳಿದವರು ಹೇಳಿದ ಮಾತು ನೆನಪಾಗುತ್ತಿದೆ. ಪುಟ್ಟ ಮಗುವಾಗಿದ್ದಾಗ ಸಮಸ್ತವನ್ನೂ , ಸಮಸ್ತರನ್ನೂ ಪ್ರೀತಿಸುವ ನಮ್ಮ ಮನಸ್ಸು ದೊಡ್ಡವರಾದಂತೆ ಪ್ರೀತಿಗೊಂದು ಪರಿಧಿ, ಸ್ನೇಹಕ್ಕೊಂದು ಪರಿಧಿ, ಬದುಕಿನ ಹೆಜ್ಜೆ-ಹೆಜ್ಜೆಯ ಬಾಂಧವ್ಯಗಳನ್ನೂ 'ಪರಿಧಿ'ಯೊಳಗೆ ಹಾಕಿಬಿಡುತ್ತವೆ. ಮಗುವಿನಂತೆ ಪ್ರೀತಿಸುವ, ಮಗುವಿನಂತೆ ನಕ್ಕು ಖುಷಿಕೊಡುವ ಆ ಮುಗ್ಧ, ಪ್ರಾಮಾಣಿಕ ಮನಸ್ಸು ಯವುದೋ 'ಪರಿಧಿ' ಯೊಳಗೆ ಸುತ್ತುತ್ತಿರುತ್ತೆ ಎಂದನಿಸುತ್ತೆ. ಜೀವನದಲ್ಲಿ ಪ್ರೀತಿ, ಸ್ನೇಹ-ಬಾಂಧವ್ಯಗಳ ಅನನ್ಯ ಅನುಭೂತಿಯಿಂದ 'ಬದುಕುವವರು' ವಂಚಿತರಾಗೋದು ಹೀಗೇ ಅಲ್ಲವೇ?

ಹೌದು, ಈ ದೇಶ ಮಗುವಿನ ನಗು ಸೂಸೋದು ಯಾವಾಗ? ಮತ್ತೆ ಮತ್ತೆ ಕೇಳುತ್ತಿದ್ದೆ ನನ್ನ ಅಂತರಾತ್ಮ ಕಂಗಳಲ್ಲಿ ಭರವಸೆಯ ಹುಣ್ಣಿಮೆ ಬೆಳಕು ಸೂಸುತ್ತಾ?!





Monday, June 29, 2009

ಅದ್ಯಾಕೋ ಅಕ್ಷರಗಳು ಖಾಲಿ ಪುಟದಲಿ ಮೂಡಲಿಲ್ಲ..!

ನಾನ್ಯಾಕೆ ಬರೆಯುತ್ತೇನೆ? ಅದೇ ನನ್ನ ಖುಷಿಗೆ, ನನ್ನ ಬರಹದ ತುಡಿತವನ್ನು ಇಲ್ಲಿ ಹಂಚಿಕೊಳ್ಳೋದಕ್ಕೆ. ನನ್ನೊಳಗಿನ ಪುಟ್ಟ ಪುಟ್ಟ ಖುಷಿಯ ಕ್ಷಣಗಳನ್ನು ನಿಮ್ಮ ಜೊತೆ ಹಂಚಿಕೊಳ್ಳೋದಕ್ಕೆ. ಮನದ ಮೂಲೆಯಲ್ಲಿದ್ದ ದುಗುಡ-ದುಮ್ಮಾನಗಳನ್ನು ನಿಮ್ಮ ಜೊತೆ ಹಂಚಿಕೊಂಡು ಮನಸ್ಸು ತಿಳಿಯಾಗಿಸೋದಕ್ಕೆ. ನನ್ನೊಳಗಿನ ಕನಸುಗಳನ್ನು ನಿಮ್ಮ ಜೊತೆ ಹಂಚಿ, ವಿಶ್ ಪಡೆಯೋದಕ್ಕೆ. ಹೌದು. ಹೇಳಲಾಗದ ಮಾತು, ಬಚ್ಚಿಡಲಾಗದ ಭಾವನೆಗಳನ್ನು ಇಲ್ಲಿ ಬಿಚ್ಚಿಡೋದಕ್ಕೆ. ಜಗತ್ತಿನ ಸತ್ಯ-ಮಿಥ್ಯಗಳನ್ನು ಕಂಡು ಕಂಗಳು ನೀರಾದಾಗ ಮನಸ್ಸು ಶುಭ್ರಗೊಳಿಸೋದಕ್ಕೆ ನಾ ಬರೆಯುತ್ತೇನೆ. ಜೀವನ ಪ್ರೀತಿಯಲ್ಲಿ ಮಿಂದು ಮನಸ್ಸು ಖುಷಿಗೊಂಡಾಗ 'ಬದುಕೆಷ್ಟು ಸುಂದರ' ಅಂತ ಖುಷಿಯಿಂದ ಬರೆದುಬಿಡ್ತೀನಿ. ಅದೇ ಇರೋ ಜೀವನದಲ್ಲಿ ಪುಟ್ಟ ಕಷ್ಟಗಳನ್ನೇ ಸಹಿಸಿಕೊಳ್ಳಲಾಗದೆ ಹೃದಯ ಭಾರವಾದಾಗ ಮತ್ತದೇ ಬೇಸರ..ಅದೇ ಹಾಡು..ಅನ್ನೋಕೂ ಈ ಅಕ್ಷರಲೋಕವೇ ಸಾಥ್ ನೀಡೋದು.

ತುಂಬಾ ದಿನಗಳಾಯ್ತು...ಏನೂ ಬರೆಯಕ್ಕಾಗ್ತಿಲ್ಲ. ..ಬರೆಯಲಿಲ್ಲ. ಒಂದಷ್ಟು ಕೆಲಸ ಹೆಗಲ ಮೇಲೆ ಬಿದ್ದಾಗ, ಒಂದಷ್ಟು ಹೊತ್ತು ವ್ಯರ್ಥ ಮಾತುಗಳಲ್ಲಿ ಕಳೆದುಹೋದಾಗ, ಮನೆಯ ಚಿಂತೆ ಕಾಡತೊಡಗಿದಾಗ..ಏನೋ ಒಂಥರಾ ಮನಸ್ಸು ಗೊಂದಲಗಳಲ್ಲಿ ಸಿಕ್ಕಾಗ ಬರೆಯಲು ಕುಳೀತರೂ ಬರೆಯಲಕ್ಕಾಗುತ್ತಿಲ್ಲ. ನನ್ನೊಳಗಿನ ಮಾತುಗಳಿಗೆ ಈ ಬ್ಲಾಗ್ ವೇದಿಕೆ ಅಂದ್ರೂ ಆಗ್ತಿಲ್ಲ. ತುಂಬಾ ನನ್ನನ್ನು ನಾನೇ ಬೈದುಕೊಂಡಿದ್ದೆ. ಹೀಯಾಳಿಸಿಕೊಂಡಿದ್ದೆ. ಖಾಲಿ ಪುಟಗಳನ್ನು ರಾಶಿ ಹಾಕೊಂಡು ಏಕಾಂಗಿಯಾಗಿ ಪೆನ್ನು ಹಿಡಿದು ಕುಳಿತರೂ ಕೈಗಳಲ್ಲಿ ಅಕ್ಷರಗಳು ಮೂಡುತ್ತಿಲ್ಲ, ಭಾವನೆಗಳು ಮಾತಾಡುತ್ತವೆ. ಕಣ್ಣುಗಳು ಮಾತಾಡುತ್ತವೆ, ಮೌನಗಳೂ ಮಾತಾಡುತ್ತವೆ. ಕಿವಿ ಇಂಪಾದ ಹಾಡುಗಳತ್ತ ತುಡಿಯುತ್ತದೆ. ಹೃದಯ ಜೀವನಪ್ರೀತಿಯ ಹುಡುಕಾಟದಲ್ಲಿ ಕಳೆಯುತ್ತೆ. ಮನಸ್ಸು ಮಣ್ಣುಗೂಡಿದ ಪ್ರೀತಿಯನ್ನು ನೆನೆಯುತ್ತೆ. ಆದರೆ ಅಕ್ಷರಗಳು ಖಾಲಿ ಪುಟದ ಮೇಲೆ ಬೀಳುತ್ತಿಲ್ಲ. ಕೈಯಲ್ಲಿರುವ ಪೆನ್ನು ಖಾಲಿ ಪುಟದ ಮೇಲೆ ಬಿಂದುವನ್ನಷ್ಟೇ ಇಟ್ಟು ಸುಮ್ಮನಿದ್ದೆ.

ಏನೇನೋ ಯೋಚನೆಗಳು..ಅಮೂರ್ತ ಕಲ್ಪನೆಗಳು. ಸತ್ಯ, ಪ್ರಾಮಾಣಿಕತೆ, ನಿಷ್ಕಲ್ಮಶ ಪ್ರೀತಿ ಯಾಕೋ ಢಾಳಾಗಿ ಕಾಣುತ್ತವೆ. ಪ್ರಾಮಾಣಿಕವಾಗಿ ಕೆಲ್ಸ ಮಾಡಿದ್ರೂ ಬಾಸ್ ಕೈಯಲ್ಲಿ ಬೈಸಿಕೊಳ್ತೀವಿ. ಬದುಕಿನಲ್ಲಿ ಮಾನವೀಯ ಬಾಂಧವ್ಯ, ಜೀವನಪ್ರೀತಿಯ ಕುರಿತು ಮಾತನಾಡೋರು ವೇದಿಕೆ ಮೇಲೆಯಷ್ಟೇ ಗೊಣಗುತ್ತಾರೆ. ಜೀವನ ಅಂದ್ರೆ ನಮ್ಮೂರ ಆಟದ ಮೈದಾನ ಅನ್ನೋರು ಕೆಲವರು, ಇನ್ನು ಕೆಲವರು ಜೀವನನಾ ಸೀರಿಯಸ್ ಆಗಿ ತಕೋಪಾ ಅಂತ ಬೋಧನೆ ಮಾಡ್ತಾರೆ. ಆದರೆ ಬೋಧನೆ ಮಾಡಿದವರಾರು ನಿಜವಾದ ಜೀವನಾನ ಕಂಡೋರಿಲ್ಲ, ಜೀವನದಲ್ಲಿ ಉದ್ದಾರವೂ ಆಗಿಲ್ಲ! ಇರಲಿ ಏನೇನೋ ಯೋಚನೆಗಳು..

ನೆನಪಾದುವು ಜಿ.ಎಸ್.ಎಸ್. ಅವರ ಕವನದ ಸಾಲುಗಳು.......
ನಾನು ಬರೆಯುತ್ತೇನೆ...
ನನ್ನ ಸಂವೇದನೆಗಳನ್ನು,
ಕ್ರಿಯೆ-ಪ್ರತಿಕ್ರಿಯೆಗಳನ್ನು,
ದಾಖಲು ಮಾಡುವುದಕ್ಕೆ..!
ನಿಂತ ನೀರಾಗದೆ ಮುಂದಕ್ಕೆ
ಹರಿಯುವುದಕ್ಕೆ...
ನನ್ನನ್ನು ನಾನು ಕಂಡುಕೊಳ್ಳುವುದಕ್ಕೆ...
ನಾನು ಬರೆಯುತ್ತೇನೆ
ಋಷಿಯ ನೋವಿಗೆ...
ರೊಚ್ಚಿಗೆ ಮತ್ತು ಹುಚ್ಚಿಗೆ..
ಅಥವಾ ನಂದಿಸಲಾರದ ಕಿಚ್ಚಿಗೆ...!


ಹೌದು..ಮತ್ತೆ ನಾನು ಬರೆಯುತ್ತೇನೆ..ನನ್ನೊಳಗನ್ನು ತೆರೆದಿಡುತ್ತೇನೆ..ಮುಂದಿನ ಬರಹ ಸದ್ಯದಲ್ಲಿಯೇ ನಿಮ್ಮೆದುರು ಕಾಣಲಿದೆ. ಬರ್ತಾ ಇರಿ..ಬೆನ್ನುತಟ್ಟುತ್ತಿರಿ..