Thursday, July 9, 2009

ನಾವ್ಯಾಕೆ 'ಮಗು'ವಿನ 'ನಗು'ವಾಗೊಲ್ಲ...?

ಹೌದು, ಆ ಮಗು ನನ್ನ ನೋಡಿ ಮುಗುಳುನಗು ಸೂಸಿಬಿಡ್ತು. ಏನೋ ಯೋಚನೆಯಲ್ಲಿ ಮುಳುಗಿದ್ದ ನಾನೂ ನಕ್ಕುಬಿಟ್ಟೆ...ನನಗರಿವಿಲ್ಲದೆಯೇ! ನಿಮಗೂ ಹಾಗೇ ಆಗಬಹುದು. ಹೌದು..ಅದಕ್ಕೆ ಕಾರಣ ಆ ಪುಟ್ಟ ಮಗುವಿನ ನಗು! ಹೌದು..ಮಕ್ಕಳು ನಕ್ಕರೆ ಹಾಗೇ ಸಕ್ಕರೆಯಂತೆ!. ನಾವು ನಮ್ಮನ್ನೇ ಮರೆತುಬಿಡುವಷ್ಟು ಚೆನ್ನಾಗಿ ನಗುತ್ತವೆ. ಎಷ್ಟೋ ಬಾರಿ ನನ್ನ ಮನಸ್ಸು ಆ ಮಗುವಿನಂತೆ ನಾನೂ ನಗಲು ಸಾಧ್ಯವಾಗುತ್ತಿದ್ದರೆ ಎಂದನಿಸುತ್ತೆ. ನಮ್ಮನೆ ಪಕ್ಕದ ಮಗು ಯಾಮಿನಿ ನಿತ್ಯ ಬಂದು ನಾನು ಸಿಟ್ಟಲ್ಲಿ ಗೊಣಗುಟ್ಟುತ್ತಿದ್ದರೂ ಆಂಟಿ ಆಫಿಸ್ ನಿಂದ ಯಾವಾಗ ಬಂದ್ರೀ? ಅಂತ ಕೇಳಿದಾಗ ಸಿಟ್ಟೆಲ್ಲ ಜರ್ರನೆ ಇಳಿದುಹೋಗುತ್ತೆ. ಮೊದಲ ಮಹಡಿಯಲ್ಲಿರುವ ಶ್ರೇಯಸ್ಸು ನನ್ನ ಚಪ್ಪಲ ಸದ್ದಿಗೆ ಬಾಗಿಲ ಬಳಿ ಬಂದು ಸಂದಿಯಲ್ಲಿ ನಿಂತು ಮುಗ್ಧವಾಗಿ ನಕ್ಕಾಗ ಮನತುಂಬಿ ಬಿಡುತ್ತೆ. ಬೆಳಿಗ್ಗೆಯಿಂದ ಸಂಜೆ ತನಕ ಆಫೀಸ್ ನಲ್ಲಿ ದುಡಿದು ದಣಿದರೂ ಆ ದಣಿವನ್ನೆಲ್ಲಾ ಆ ನಗು ನುಂಗಿಬಿಡುತ್ತೆ. ನಾನು ಈ ಹಿಂದೆ 'ನಾನೂ ಮಗುವಾಗಿರಬೇಕಿತ್ತು' ಎಂಬ ಬರಹ ಬರೆದಾಗ 'ಮಕ್ಕಳ ಜೊತೆ ನೀನು ಮಗುವಾಗಿಬಿಡು' ಅಂತ ಸಲಹೆ ನೀಡಿದವರು ಅದೆಷ್ಟೋ ಮಂದಿ. ಹೌದು, ನಂಗೂ ಹಾಗೇ ಅನಿಸುತ್ತೆ..ಪುಟ್ಟ ಮಕ್ಕಳ ಜೊತೆ ನಾವೂ ಮಕ್ಕಳಾಗಿಬಿಡೋದು ಎಷ್ಟು ಖುಷಿ ಕೊಡುತ್ತೆ ಅಂತ.

ಓನರ್ ಆಂಟಿಯ ಮಗು ಮನೀಷ್ ಬಂದು ತೊಡೆ ಮೇಲೆ ಕುಳಿತು ಬ್ಯಾಗೆಲ್ಲಾ ಡೈರಿ ಮಿಲ್ಕ್ ಕೊಡು ಎಂದು ಪೀಡಿಸಿದಾಗ ಅದೇ ಒಂಥರಾ ಖುಷಿ. ಬ್ಯಾಟ್ ಹಿಡಿಯಲು ಬಾರದ ಮಕ್ಕಳ ಜೊತೆ ನಾವೂ ಬ್ಯಾಟ್ ಹಿಡಿದು ಆಡೋದು ಅದೂ ಒಂಥರಾ ಖುಷಿ. ಕಾಲು ಜಾರಿ ದೊಪ್ಪನೆ ನೆಲದ ಮೇಲೆ ಬಿದ್ದ ಮಗುವನ್ನು ಸಂತೈಸಿದಾಗ ಆ ಮಗು ನೋವನ್ನೆಲ್ಲಾ ಮರೆತು ನಗುತ್ತೆ ಅಲ್ವಾ? ಅದೂ ಒಂದು ನೆಮ್ಮದಿಯ ಖುಷಿ. ಮಕ್ಕಳು ನಕ್ರೆ ಖುಷಿ, ಅತ್ರೂನೂ ಖುಷಿ, ಹೇಗಿದ್ರುನೂ ಮಕ್ಕಳು ಚೆಂದವೇ, ಅದಕ್ಕೆ ಮಕ್ಕಳನ್ನು ದೇವರಿಗೆ ಹೋಲಿಸುತ್ತಾರೆ. ಇನ್ನು ಕೆಲ ಮಕ್ಕಳು ತೊಟ್ಟಿಲಲ್ಲಿ ಮಲಗಿ ನಿದ್ದೆ ಮಾಡುತ್ತಿರುವಾಗಲೇ ನಗುತ್ತವೆ..ನನ್ನ ತಮ್ಮ ಹಾಗೇ ನಗುವಾಗ ಅಮ್ಮ ಹೇಳುತ್ತಿದ್ದ ನೆನಪು: ಮಗು ಅಂದ್ರೆ ದೇವರು ಪುಟ್ಟಾ, ಅದಕ್ಕೆ ನೋಡು ಇವ ನಗುತ್ತಾನೆ ಅಂತ!

ಹೌದು, ನಾವೂ ಮಕ್ಕಳಾಗಿರುವಾಗ ಹೀಗೆ ತೊಟ್ಟಿಲಲ್ಲಿ ನಕ್ಕಿರಬಹುದು, ಅತ್ತಿರಬಹುದು, ಅಲ್ಲೇ ಉಚ್ಚೆ ಹೊಯ್ದಿರಬಹುದು. ಆವಾಗ ಎಷ್ಟು ಮಂದಿ ನಮ್ಮ ಮುದ್ದಿಸುತ್ತಿದ್ದರು, ಆಟವಾಡಿಸುತ್ತಿದ್ದರು. ನಮ್ಮ ಜೊತೆ ಎಷ್ಟೋ ಮಂದಿ ಮಕ್ಕಳಾಗುತ್ತಿದ್ದರು ಎಂದನಿಸುತ್ತೆ. ಆದರೆ ಯಾಕೋ ಒಂದು ಪುಟ್ಟ ನೋವು ನಿತ್ಯ ನನ್ನೆದೆ ಕಾಡುತ್ತೆ, ಪೀಡಿಸುತ್ತೆ, ನೋಯಿಸುತ್ತೆ.
ಅದೇ ಪುಟ್ಟ ಮಗುವಾಗಿದ್ದಾಗ ಜಗತ್ತಿಗೇ 'ನಗು'ವಾಗಿದ್ದ ಈ ಮನುಷ್ಯ ಅದೇಕೆ ಕಳ್ಳನಾಗುತ್ತಾನೆ, ದರೋಡೆ ಮಾಡುವವನಾಗುತ್ತಾನೆ, ಸಮಾಜಕ್ಕೆ ಕಳಂಕವಾಗುತ್ತಾನೆ, ತಾಯಿ ಸಮಾನಳಾದ ಹೆಣ್ಣನ್ನು ಅತ್ಯಾಚಾರ ಮಾಡಿ ಬೀದಿಗೆಸೆಯುತ್ತಾನೆ, ಮೋಸ, ವಂಚನೆಯ ಕೂಪಕ್ಕೆ ತನ್ನ ಒಡ್ಡಿಕೊಳ್ಳುತ್ತಾನೆ? ಪುಟ್ ಪಾತ್ ನಲ್ಲಿ ನಡೆಯೋ ಬಡಬಗ್ಗರ ಮೇಲೆ ತನ್ನ ವಾಹನ ಸವಾರಿ ಮಾಡಿ 'ಕೊಲೆಗಾರ' ನಾಗುತ್ತಾನೆ? ಏಕೆ ಕನಸುಗಳನ್ನು ಕೊಂದು ಕೊಚ್ಚಿಹಾಕುತ್ತಾನೆ? ತನ್ನ ಗೋರಿಯನ್ನು ತಾನೇ ಯಾಕೆ ಕಟ್ಟಿಕೊಳ್ಳುತ್ತಾನೆ? ಬದುಕಿನ ಇತಿಹಾಸದಲ್ಲಿ 'ನಾಯಕ' ನಾಗುವಅದೇಕೆ 'ಖಳನಾಯಕ' ನಾಗುತ್ತಾನೆ? ಅಯ್ಯೋ ಆ ಪುಟ್ಟ ಮಗು ಅದೇಕೋ ಭಯೋತ್ಪಾದಕನಾದ? ಇಂಥ ಮಿಲಿಯನ್ ಡಾಲರ್ ಪ್ರಶ್ನೆಗಳು ನನ್ನ ನಿತ್ಯ ಕಾಡುತ್ತವೆ.

ಹೌದು, ಪ್ರತಿ ಮಾನವನೂ ಹುಟ್ಟುವಾಗ ಒಳ್ಳೆಯವನಾಗಿರುತ್ತಾನೆ, ಸುತ್ತಲ ಸಮಾಜ ಅವನನ್ನು ಕೆಟ್ಟವನಾಗಿಸುತ್ತದೆ ಯಾರೋ ತಿಳಿದವರು ಹೇಳಿದ ಮಾತು ನೆನಪಾಗುತ್ತಿದೆ. ಪುಟ್ಟ ಮಗುವಾಗಿದ್ದಾಗ ಸಮಸ್ತವನ್ನೂ , ಸಮಸ್ತರನ್ನೂ ಪ್ರೀತಿಸುವ ನಮ್ಮ ಮನಸ್ಸು ದೊಡ್ಡವರಾದಂತೆ ಪ್ರೀತಿಗೊಂದು ಪರಿಧಿ, ಸ್ನೇಹಕ್ಕೊಂದು ಪರಿಧಿ, ಬದುಕಿನ ಹೆಜ್ಜೆ-ಹೆಜ್ಜೆಯ ಬಾಂಧವ್ಯಗಳನ್ನೂ 'ಪರಿಧಿ'ಯೊಳಗೆ ಹಾಕಿಬಿಡುತ್ತವೆ. ಮಗುವಿನಂತೆ ಪ್ರೀತಿಸುವ, ಮಗುವಿನಂತೆ ನಕ್ಕು ಖುಷಿಕೊಡುವ ಆ ಮುಗ್ಧ, ಪ್ರಾಮಾಣಿಕ ಮನಸ್ಸು ಯವುದೋ 'ಪರಿಧಿ' ಯೊಳಗೆ ಸುತ್ತುತ್ತಿರುತ್ತೆ ಎಂದನಿಸುತ್ತೆ. ಜೀವನದಲ್ಲಿ ಪ್ರೀತಿ, ಸ್ನೇಹ-ಬಾಂಧವ್ಯಗಳ ಅನನ್ಯ ಅನುಭೂತಿಯಿಂದ 'ಬದುಕುವವರು' ವಂಚಿತರಾಗೋದು ಹೀಗೇ ಅಲ್ಲವೇ?

ಹೌದು, ಈ ದೇಶ ಮಗುವಿನ ನಗು ಸೂಸೋದು ಯಾವಾಗ? ಮತ್ತೆ ಮತ್ತೆ ಕೇಳುತ್ತಿದ್ದೆ ನನ್ನ ಅಂತರಾತ್ಮ ಕಂಗಳಲ್ಲಿ ಭರವಸೆಯ ಹುಣ್ಣಿಮೆ ಬೆಳಕು ಸೂಸುತ್ತಾ?!





17 comments:

Shweta said...

Bharavaseye badukallave Dharitri?

tumba chennagide nimma lekhana.ede modalu bandiddene.beliggeye tumba khushi aayitu.

PARAANJAPE K.N. said...

ಮಗುವಿನ೦ತೆ ಇರಬಯಸುವ, ಮಗುವಿನ ನಗುವಿನಲ್ಲಿ ನೋವ ಮರೆಯುವ, ಅಣ್ಣಾ ಚಾಕೊಲೇಟು ತ೦ದು ಕೊಡಿ ಎ೦ದು ಗೋಗರೆಯುವ, ತ೦ದು ಕೊಟ್ಟಾಗ ಮುಗ್ಧ ಮಗುವಿನ೦ತೆ ನಗು ಸೂಸುವ ನೀನು ನನ್ನ ಪ್ರಕಾರ ಒ೦ದು ಮಗುವೇ !! ಚೆನ್ನಾಗಿದೆ ಬರಹ. ವಿಚಾರ ಮಾಡಬೇಕಾದ, ಚಿ೦ತನೆಗೆ ಹಚ್ಚುವ ಬರಹ.

Naveen ಹಳ್ಳಿ ಹುಡುಗ said...

Dharitri.. Arthapurna vichara..
Namma tanavanna naavu marethaga mugda naguvu mareyaguthade..

sunaath said...

What a cute baby!

ಬಾಲು said...

nagutta iddare magu ok, ade aloke shuru madidre mathra not ok.
nange makkalannu aata aadisoke barolla, theera akkana makkalannu kooda nange manage madoke aagolla.

but nagtha, kunitha iro makkalu manasige kushi kodthare.

ಜಲನಯನ said...

ಧರಿತ್ರಿ,
ಏನು?? ಎಲ್ಲ್ಹೋಯ್ತು ಈ ಮಗು..?? ಅಂದ್ಕೊಳ್ತಿದ್ದ ಹಾಗೆ...ನಿಮ್ಮ ಚಿತ್ರದ ಮಗುವಿನ ರೀತಿ ಬಂದು ಬ್ಲಾಗಿಸಿ, ಮನಮೋಹಿಸಿಬಿಟ್ರಿ...ನನ್ನ reply ನೋಡ್ಲಿಲ್ಲ ಅಂತ ಕಾಣುತ್ತೆ ನಿಮ್ಮ just ಹಿಂದಿನ ಪೋಸ್ಟ್ ಗೆ. ಓಕೆ..ವಿಷಯಕ್ಕೆ ಬರ್ಲಾ..?
ಮಕ್ಕಳು..ಮನೇಲಿದ್ದರೆ..ಮನ ಮುದವಾಗುತ್ತೆ ಅನ್ನೋದು ಅಕ್ಷರಸಹ ನಿಜ,,,,ನನ್ನ ಮಗಳು ತನ್ನ ಅಮ್ಮನ ಜೊತೆ ಈಗ ಬೆಂಗಳೂರಲ್ಲಿ...ನಾನು ಇಲ್ಲಿ ಬಿಸಿಲ ಬೇಗೆಯಿಂದಲೇ ಆಡುಗೆಮಾಡುವಂಥ ಪರಿಸರದ ಕುವೈತ್ ನಲ್ಲಿ ನಾನು...ನನ್ನ ಹಾಗೆ -ಮನಸು- ಅವರ ಪತಿದೇವರೂ..ಇಲ್ಲಿ...ನಮಗೆ ನಮ್ಮ ಮಕ್ಕಳ ನೆನಪು ...
ಅಲ್ಲಾ...ಮನಸ್ಸಿನ ದುಗುಡಗಳಿಗೆ..ಔಷಧಿ ಅನ್ನೋದಕ್ಕೆ...ಮೀನಿನ ಅಂದದ ತೊಟ್ಟಿಯಿಡಿ, ದಿನಾ ಸ್ವಲ್ಪ ನಗಿ..ಎಂದೆಲ್ಲಾ ಹೇಳೋ ಡಾಕ್ಟರು...ಒಂದೆರಡು ಮಕ್ಕಳಜೊತೆ ಒಂದರ್ಧ ಘಂಟೆ ಕಾಲ ಕಳೀರಿ ಅಂತ ಯಾಕೆ ಹೇಳೊಲ್ಲಾ ಅಂತ...ಇದರಿಂದ ಮಕ್ಕಳಿಗೂ ಆಟಕ್ಕೆ ಜೊತೆ ನಮಗೂ...ಮನೋಲ್ಲಾಸ...
ಚನ್ನಾಗಿದೆ...ಬರಹ...ನಿಮ್ಮ ಮನದ ದುಗುಡಗಳನ್ನು ಬೆಳೆಯೋದಕ್ಕೆ ಅವಕಾಶಕೊಡದೆ ಹೇಗೆ ನಿಗ್ರಹಿಸಬಹುದು ಅನ್ನೋದು..ನಿಮಗೇ ಗೊತ್ತಿದೆಯಲ್ಲಾ...ಮತ್ತೆ...!!!???

Sushrutha Dodderi said...

again, it clashes:

http://hisushrutha.blogspot.com/2007/01/blog-post_23.html

ವನಿತಾ / Vanitha said...

ತುಂಬ ಒಳ್ಳೆಯ ಬರಹ ದರಿತ್ರಿ...
ನಿಜವಾಗಿಯೂ ಮಗುವಿಲ್ಲದ ಮನೆ ಬಿಕೋ ಎನ್ನುತ್ತಿರುತ್ತದೆ..ಅವಳು ಸ್ವಲ್ಪ ಹೊತ್ತು ಹೊರಗಡೆ ಆಡೋಕ್ಕೆ, ಅಥವಾ ಪಕ್ಕದ ಮನೆ ಗೆ ಹೋಗಿದ್ರೆ, ಅವಳು ಮನೆಗೆ ಬರುವ ತನಕ ಮನಸ್ಸಿಗೆ ಸಮಾಧಾನವಿರುದಿಲ್ಲ...
Liked ur blog..started following u..

Roopa said...

’ನಗು’ ಸಹಜ ಗುಣ, ಅದಕ್ಕೆ ಹುಟ್ಟಿದ ಕೆಲವೆ ದಿನಗಳಲ್ಲಿ ಮಗು ನಗಲು ಶುರುಮಾಡುತ್ತೆ.. ಆದ್ರೆ ಯಾಕೋ ಏನೋ ಬೆಳೆದಂತೆಲ್ಲಾ ಇದು ಮಾಯವಾಗುತ್ತೆ:(
ಯೋಚನೆಗೀಡು ಮಾಡಿದೆ ನಿಮ್ಮೀ ಲೇಖನ !!

"ಮುಗುವೆ
ನಿನ್ನ ನಗುವಲ್ಲಿದೆ ಮ್ಯಾಜಿಕ್ಕು!
ನಗುವೆ
ನಮ್ಮ ಜೀವನಕ್ಕೆ ಟಾನಿಕ್ಕು"... ಹಾಗೆ ಸುಮ್ನೆ ಗೀಚಿದ್ದು!

umesh desai said...

ಧರಿತ್ರಿ "ಆಸೆಯೆಂಬ ಬಿಸಿಲುಗುದುರೆ ಏಕೆ ಏರುವೆ ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ" ಎಫ್ ಎಂ ನಲ್ಲಿ ಅಣ್ಣಾವ್ರ ಹಾಡು
ಕಿಕ್ಕಿರಿದು ತುಂಬಿದ ಬಿಎಂಟಿಸಿ , ಹೊರಗಡೆ ಶನಿವಾರದ ಶಾಲೆ ದಿನ ಮಜಾ ಸವಿಯುವ ಮಕ್ಕಳು ನಿಮ್ಮ ಲೇಖನ ಎಲ್ಲ ಒಂದೇ
ದಾರದಲ್ಲಿ ಪೋಣಿಸಿದಂತಿದೆ ಅಲ್ಲವೇ . ಉತ್ತಮ ಬರಹ...
ಯಾಕೆ ನನ್ನ "ಮನೆಗೆ" ಬಂದೇ ಇಲ್ಲ....!

Prabhuraj Moogi said...

ಮಗು ನಗು.. ಪ್ರಾಸ ಕೂಡ ಹೊಂದುತ್ತೆ...ಅದಕ್ಕೇ ಇರಬೇಕು ಅವು ನಗೋದು... ಹೀಗೆ ಕೆಲವೊಂದು ಸಾರಿ ಶಾಲೆಗೆ ಹೋಗೊ ಆ ಪುಟಾಣಿಗಳ ನೋಡ್ತಾ ನಿಲ್ತಿದ್ದೆ ಮುಂಜಾನೆ ಯಾರಿಗೊ ಕಾಯಬೇಕಾದಾಗ, ಆಮೇಲೆ ಎಲ್ಲಿ ಮಕ್ಕಳ ಕಳ್ಳ ಅಂತ ತಿಳಿದಾರು ಹುಷಾರು ಅಂತ ಎಚ್ಚರಿಸಿದ ಮೇಲೆ ಬಿಟ್ಟಿದ್ದು... ಹೌದು ನಾನು ಕಳ್ಳನೆ ಅ ಮಕ್ಕಳ ನಗು ಕದಿಯಲು ನಿಂತಿದ್ದೆ!

ಕನಸು said...

ಧರಿತ್ರಿಯವರೇ
ನಾವ್ಯಾಕೆ ಮಗುವಿನ ನಗುವಾಗುವದಿಲ್ಲ ..? ಪ್ರಶ್ನೇ ಜೊತೆ ಜೊತೆಗೆ ನಗು ಮಗುವಿನಂತಿರ ಬೇಕು ಎಂಬ ಸೂಕ್ಷ್ಮತೆ ಎದ್ದು ಕಾಣುವದು ನಿಮ್ಮ ಲೇಖನದಲ್ಲಿ ಒಳ್ಳೆ ಬರಹ !!
ಧನ್ಯವಾದಗಳು

Umesh Balikai said...

ಮಗುವಿನ ಆ ಮುಗ್ಧ ನಗುವಿಗೆ ಮನಸೋಲದವರಾರು? ಎಷ್ಟೇ ಬಳಲಿಬಸವಳಿದಿರಲಿ ಆ ಮನಮೋಹಕ ನಗುವಿನಿಂದ ನವ ಚೈತನ್ಯ ಪಡೆಯುತ್ತೇವೆ. ಆ ನಗುವಿನಲ್ಲಿ ಸುಳ್ಳು, ಕಪಟ ಇರುವುದಿಲ್ಲ, ಅದಕ್ಕೇ ಮಗುವಿನ ಆ ನಗು ನಮಗೆಲ್ಲ ಇಷ್ಟವಾಗೋದು. ಆದರೆ ಮಗು ಬೆಳೆದಂತೆಲ್ಲ ಸುತ್ತಮುತ್ತಲ ಪರಿಸರದ ಪ್ರಭಾವ ಅದರ ಮೇಲಾಗಿ ಆ ದೈವಿಕ ನಗುವಿನ ಜಾಗದಲ್ಲಿ ಲೌಕಿಕ ಅಂಶಗಳು ಬಂದು ಸೇರುತ್ತವೆ. ನಮ್ಮ ದೇಶಕ್ಕಷ್ಟೇ ಅಲ್ಲ, ಇಡೀ ಲೋಕಕ್ಕೆ ಆ ಮಗುವಿನಂತ ನಗುವಿನ ಅವಶ್ಯಕತೆಯಿದೆ.

ಅರ್ಥಾವತ್ತಾದ, ವೈಚಾರಿಕ ಲೇಖನಕ್ಕೆ ಅಭಿನಂದನೆಗಳು.

ಸುಧೇಶ್ ಶೆಟ್ಟಿ said...

ನನ್ನ ಅಕ್ಕನ ಮಗು ಹುಟ್ಟಿದಾಗ ಅದು ತೊಟ್ಟಿಲಲ್ಲಿ ತನ್ನಷ್ಟಕ್ಕೆ ನಗುತ್ತಿದ್ದಾಗ ನನ್ನ ಅಕ್ಕ ಅನ್ನುತ್ತಿದ್ದಳು "ದೇವರು ಮಗುವನ್ನು ನಗಿಸುವುದು" ಎ೦ದು... ಎಷ್ಟು ಚೆನ್ನಾಗಿರುತ್ತಲ್ಲ ಆ ನಗು...

ನಿಮ್ಮ ಲೇಖನ ತು೦ಬಾ ಇಷ್ಟವಾಯಿತು....

shivu.k said...

ಧರಿತ್ರಿ,

ಬರಹ ಮಗುವಿನಂತೆ ಮುಗ್ದವಾಗಿ ತುಂಬಾ ಚೆನ್ನಾಗಿದೆ...ಮಗುವಾಗಿಬಿಡು ಅಂತ ಹೇಳಿದ್ದು ನಾನೆ ಅಂತ ನಿನ್ನ ಹಿಂದಿನ ಲೇಖನದಲ್ಲಿ ಹೇಳಿದ ನೆನಪು. ಮಗುವಾಗುವುದು ಅನ್ನುವುದಕ್ಕಿಂತ ಮಗು ಮನಸ್ಸು ನಮ್ಮಲ್ಲಿ ಇರುತ್ತೆ....ಮತ್ತೊಂದು ಮಗು ಮನಸ್ಸಿನ ಗೆಳೆಯ-ಗೆಳತಿ ಅಥವ ಮಗುವೇ ಸಿಕ್ಕಾಗ ಎಚ್ಚೆತ್ತುಕೊಳ್ಳುತ್ತದಲ್ಲವೇ...!

ಜಲನಯನ said...

ಧರಿತ್ರಿ, ನಿಮಗೆ ಎಸ್ಸೆಸ್ಕೆಗೆ ನನ್ನ ಈ ಬ್ಲಾಗ್ ಪೋಸ್ಟ್ ನೋಡೊಕೆ ಹೇಳಿದ್ದೆ, ನಿಮ್ಮ ಪ್ರತಿಕ್ರಿಯೆಗೂ ...ಆದ್ರೆ..ನೀವು ನೋಡಿಲ್ಲ...ಒಂದು ಒಳ್ಲೆ ಜೋಕನ್ನ ಮಿಸ್ ಮಾಡ್ಕೊಬೇಡಿ...
http://jalanayana.blogspot.com/2009/06/blog-post.html ಕ್ಲಿಕ್ ಮಾಡಿ ಬೇಗ....

ಧರಿತ್ರಿ said...

@ಶ್ವೇತಾ..ಧರಿತ್ರಿಗೆ ಸ್ವಾಗತ. ನಿತ್ಯ ಖುಷಿಯ ಕ್ಷಣಗಳು ನಿಮ್ಮದಾಗಲಿ.

@ಪರಾಂಜಪೆಯಣ್ಣ..ಅಯ್ಯೋ.!! ಇನ್ನಷ್ಟು ಚಾಕಲೇಟು ತಂದುಕೊಡಿ. ಹೆಹೆಹೆ! ಧನ್ಯವಾದಗಳು.

@ಹಳ್ಳಿ ಹುಡುಗ ನವೀನ್ ಥ್ಯಾಂಕ್ಸ್ಉಉಉ ಬಂದಿದ್ದಕ್ಕೆ, ಓದಿದ್ದಕ್ಕೆ, ಪ್ರತಿಕ್ರಿಯೆ ಮಾಡಿದ್ದಕ್ಕೆ

@ಸುನಾಥ್ ಅಂಕಲ್..ಯಾರೋ ಮೇಲ್ ಮಾಡಿದ್ರು ಆ ಮಗುನ! ನಿಜವಾಗ್ಲೂ ಸೋ ಕ್ಯೂಟ್.

@ಬಾಲು ಸರ್...ಕಾಲಾಯ ತಸೈಃ ನಮ!

@ಜಲನಯನ ಸರ್..ಮನಸ್ಸು ಅಕ್ಕ...ಹೌದು, ಹೇಳ್ತಾ ಇರ್ತಾರೆ. ನಿಮ್ಮ ಪ್ರತಿಕ್ರಿಯೆಗಳು ಯಾವಾಗಲೂ ನನಗೆ ತುಂಬಾ ಧೈರ್ಯ, ಖುಷಿಕೊಡುತ್ತವೆ. ಥ್ಯಾಂಕ್ಸ್ಯು....

@ಸುಶ್ರುತಣ್ಣ..ನೋಡೋ ಅದ್ಕೆ ಹೇಳೋದು ನೀನು ನನ್ನ ಅಣ್ಣಾಂತ. ನೀನೂ ಮಗು ಬಗ್ಗೆನೇ ಬರೆಯಬೇಕಾ?

@ವನಿತಾ..ನೀವಂದಿದ್ದು ನಿಜ.

@ಪುಟ್ಟಿಯ ಅಮ್ಮ..ನಿತ್ಯ ಬರ್ತಾ ಇರೀಮ್ಮ. ನಂಗೆ ನಿಮ್ಮ ಪಾಪು ಬ್ಲಾಗ್ ಭಾಳ ಇಷ್ಟವಾಯಿತು.

@ದೇಸಾಯಿ ಸರ್..ದೊಡ್ಡ ಮಾತು! ನಿತ್ಯ ಹರಸಿಬಿಡಿ...ಇನ್ನಷ್ಟು ಚಂದ ಬರೆತೀನಿ.

@ಪ್ರಭುರಾಜ್...ಪ್ರಾಸ? ನೀವು ಹೇಳಿದಾಗಲೇ ಗೊತ್ತಾಗಿದ್ದು. ಧನ್ಯವಾದಗಳು ಪ್ರಭುರಾಜ್(ನಿಮ್ಮಷ್ಟು ಚೆನ್ನಾಗ್ ಬರೆಯೋಕೆ ಬರಲ್ಲ)

@ಕನಸು..ಬರ್ತಾ ಇರಿ.

@ಉಮೇಶ್..ನೀವು ಹೇಳೋದು ನೂರಕ್ಕೆ ನೂರು ಸತ್ಯ. ಮನುಷ್ಯನ ದುಖ ಮರೆಸೋಕೆನೇ ದೇವ್ರು ಮಕ್ಕಳಿಗೆ ಅಷ್ಟು ಚಂದದ ನಗು ಕೊಟ್ಟಿರಬೇಕು ಅಲ್ವಾ?

@ಹೌದು..ಶಿವಣ್ಣ ಪಕ್ಕಾ ಸಲಹೆ ಕೊಟ್ಟವರು ನೀವೆನೇ. ನೋಡಿ ಈಗ ಮಗುವಾಗಿಬಿಟ್ಟೆ!

@ಜಲನಯನ ಸರ್...ನೋಡಿದ್ದೀನಿ..ಪ್ರತಿಕ್ರಿಯೆ ಮಾಡಿಲ್ಲವಷ್ಟೇ. ಕೆಲ್ಸ ಜೋರು..ಬೈಕೋಬೇಡಿ.

-ಧನ್ಯವಾದಗಳು
ಧರಿತ್ರಿ