Thursday, November 18, 2010

ನೀನು ಕವಿ, ನಾನು ಕವಿತೆ!


ಅದು ನನ್ನ ಮನೆ. ಹುಲ್ಲಿನ ಮಾಡಿನಿಂದ ಮಾಡಿದ ಪುಟ್ಟ ಮನೆ. ಮಣ್ಣಿನ ಗೋಡೆಯ ಚೆಂದದ ಮನೆ. ಅಂಗಳದಲ್ಲಿ ಹೂ ಗಿಡಗಳ ಚಿತ್ತಾರವಿರುವ ಚೆಂದದ ಅರಮನೆ. ನಾನಲ್ಲೇ ಕನಸು ಕಂಡಿದ್ದು. ಅದು ನಿನ್ನ ಕನಸು. ಎಲ್ಲೋ ಓದಿದ ಕವನಗಳು, ಎಲ್ಲೋ Uಚಿದ ಬರಹಗಳು...ಎಲ್ಲವೂ ನನ್ನೊಳಗೊಂದು ಹೊಸ ಭಾವಗಳಿಗೆ ಹುಟ್ಟು.

ನಿನ್ನಲ್ಲಿ ಕವನಗಳು ಹುಟ್ಟಬೇಕು, ನೀನು ಕವಿಯಾಗಬೇಕು. ಮುಗಿಲಲ್ಲಿ ನಿತ್ಯ ಕಾಣುವ ಆ ನೀಲಿ ಬಣ್ಣ ನಿನಗೆ ಹೊಸತೆನಿಸಬೇಕು. ನಿತ್ಯದ ಆ ಹಗಲು ನಿನಗೆ ಹೊಸತಾಗಬೇಕು. ಪ್ರತಿದಿನದ ಆ ಮುಂಜಾನೆ ನಿನ್ನಲ್ಲಿ ಹೊಸ ಬೆಡಗನ್ನು ಹುಟ್ಟಿಸಬೇಕು.ಆಕಾಶದಲ್ಲಿ ಮೂಡುವ ಕಾಮನಬಿಲ್ಲು, ಹಕ್ಕಿಗಳ ಕಲರವ, ನದಿನೀರಿನ ಜುಳುಜುಳು ನಾದ, ನಿಶ್ಚಲ ಸರೋವರಗಳು, ಚಲಿಸುವ ಮೋಡಗಳು, ಕಿವಿಗೆ ಇಂಪಾಗುವ ಸಂUತ...ಎಲ್ಲವೂ ನಿನ್ನಲ್ಲಿ ಕವಿತೆಗಳಾಗಬೇಕು.

ನನ್ನೊಳಗಿನಿಂದ ಹುಟ್ಟುವ ಭಾವಗಳು, ಮಾತಿಲ್ಲದ ಮೌನ ನಿನ್ನಲ್ಲಿ ಕವನಗಳಾಗಬೇಕು. ನನ್ನ ಕಿವಿಯಲ್ಲಿ ಮಿನುಗುವ ಮುತ್ತಿನೋಲೆ, ತುಟಿ ಮೇಲೆ ನಗುವ ಆ ಮೂಗುತಿ ಮಿಂಚು, ಕಣ್ಣರೆಪ್ಪೆಯಲ್ಲಿ ಕನವರಿಸುವ ಆ ಕನಸುಗಳು, ಕಾಲಿಗೆ ನೀ ತೊಡಿಸಿದ ಆ ಬೆಳ್ಳಿ ಕಾಲುಂಗುರ, ನಿನ್ನದೆಯನ್ನು ಖುಷಿಗೊಳಿಸುವ ಆ ಕಾಲ್ಗೆಜ್ಜೆ, ಕೈ ಬಳೆ ಸದ್ದು, ನಿನ್ನ ಕನ್ಸ್ ಮಾಡುವ ಮುಂಗುರುಳು, ತುಟಿಯಂಚಿನ ಮಿನುಗು ನಗು...ನಿನ್ನಲ್ಲಿ ಕವನಗಳಾಗಬೇಕು. ಅಷ್ಟೇ ನಾನು ಬಯಸಿದ್ದು. ಅಂದು ಆ ಪುಟ್ಟ ಮನೆಯಲ್ಲಿ ಹುಟ್ಟಿದ ಕನಸು ನಿಜವಾಗಿದೆ. ಅದು ನನ್ನ ಖುಷಿ, ನನ್ನ ಹೆಮ್ಮೆ. ಇಂದು ನಾನು ಕವನ, ನೀನು ಕವಿ, ಇನ್ಯಾರೋ ಕಿವಿ!!

ಬಾ ಗೆಳತಿ..
ಮಳೆ ಹನಿಯಲಿ
ಅಚ್ಚ- ಅಡವಿಯಲಿ
ನನ್ನ ಅಚ್ಚರಸಿ
ನಿನಗೆ ನನ್ನುಸಿರನು
ಬೆಚ್ಚಗೆ ಆಚ್ಛಾದಿಸಿ
ಒಲವ-ದೀಪ ಹಚ್ಚಿಟ್ಟು
ಜಗದ ಎಲ್ಲ
ಸಂಚಿಗೆ ಕಿಚ್ಚಿಟ್ಟು
ನನ್ನೀ ಕಂಗಳು
ಮುಚ್ಚುವ ತನಕ
ಕಣ್ರೆಪ್ಪೆಯಲಿ ಬಚ್ಚಿಟ್ಟು
ಸಾಕುವೆ ..ಬಾ ನನ್ನಚ್ಚರಸಿ...

ವೊದಲ ನೋಟಕ್ಕೆ ನೀನು ಬರೆದ ಕವನ ನಿನ್ನಂತೆ ನನ್ನಲ್ಲಿ ಹಸಿರು. ಇಲ್ಲಿ ನೀನು ಸೋತು ಗೆದ್ದೆ, ನಾನು ಗೆದ್ದು ಸೋತೆ!!
ಪ್ರಕಟ: http://hosadigantha.in/epaper.php?date=11-18-2010&name=11-18-2010-13

Wednesday, November 10, 2010

ಆ ಕೆಟ್ಟ ನೋವು.

ಕಳೆದ ವಾರ ನನ್ನಕ್ಕ ದೊಡ್ಡವಳಾಗಿದ್ದ ಕಥೆ ಹೇಳಿದೆ. ಇಂದು ಅಕ್ಕನೆತ್ತರಕ್ಕೆ ಬೆಳೆದ ನನ್ನ ಕಥೆ ಹೇಳ್ತೀನಿ.
ಅಂದು ನಾನು ಸುಮ್ಮನೆ ನಾಚಿಕೊಂಡ ದಿನ. ಎಲ್ಲರ ನೋಟಗಳು ನನ್ನತ್ತಲೇ ನೋಡುವಾಗ ಅದೇನೋ ಹೊಸ ಅನುಭವ. ಏನೋ ಒಂದು ಹೊಸತನ್ಮು ಪಡೆದುಕೊಂಡ ಹಾಗೇ. ನನ್ನಕ್ಕನಂತೆ ನಾನು ದೊಡ್ಡವಳಾಗಿದ್ದೇನೆಂದು ಅಂದುಕೊಳ್ಳೋದೇ ಅದೇನೋ ಖುಷಿ, ಅವ್ಯಕ್ತವಾದ ಹೆಮ್ಮೆ. ಯಾರಲ್ಲಾದ್ರೂ ಹೇಳಿಕೊಳ್ಳಬೇಕಂದ್ರೂ ಹೇಳಿಕೊಳ್ಳಲಾಗದ ಪುಟ್ಟ ಸಂತೋಷ. ಸ್ಕೂಲಿಗೆ ಚಕ್ಕರ್ ಏಕೆ ಹಾಕಿದ್ದೆಂದರೆ ಸುಮ್ಮನೆ ಜ್ವರವೆಂದು ಪಕ್ಕಾ ಸುಳ್ಳು ಹೇಳಿ ಮೇಷ್ಟ್ರ ಕೈಯಿಂದ ತಪ್ಪಿಸಿಕೊಂಡು ನಕ್ಕುಬಿಟ್ಟಿದ್ದೆ. ನನ್ನಲ್ಲಿ ನನ್ನನ್ನೇ ಕಾಣುವ ಸಂಭ್ರಮ. ಪುಟ್ಟ ಹಕ್ಕಿ ಮರಿಯೊಂದು ರೆಕ್ಕೆ ಬಲಿತು ಗೂಡಿನಿಂದ ಹೊರಬರುವ ಸಂಭ್ರಮದಂತೆ ನನ್ನೊಳಗೊಂದು ಹಬ್ಬದ ವಾತಾವರಣ. ಹೊಸ ಬಟ್ಟೆ, ಹೊಸ ದಿರಿಸು, ಹೊಸ ಗಳಿಗೆ.
ಅಮ್ಮನ ಮುಖದಲ್ಲಿಯೂ ‘ತಾಯ್ತನ’ದ ಮಿರುಗು.

ಆದರೆ, ಅವತ್ತೇನೋ ನನಗೆ ಆ ದಿನ ಹೊಸತಾಗಿತ್ತು. ಆದರೆ, ಅಂದಿನಿಂದ ಇಂದಿನವರೆಗೆ ನನ್ನನ್ನು ಹಿಂಡಿ ಹಿಪ್ಪೆಯಾಗಿಸುವ ಆ ನೋವು ಇದೆಯಲ್ಲಾ,..ಅದನ್ನು ನೆನೆಸಿಕೊಂಡಾಗ ಛೇ! ನಾನು ಹೆಣ್ಣಾಗಿ ಹುಟ್ಟಬಾರದಿತ್ತು ಎಂದನಿಸುತ್ತದೆ. ತಿಂಗಳಲ್ಲಿ ಆ ಒಂದು ದಿನವನ್ನು ನಾನು ತುಂಬಾ ದ್ವೇಷಿಸುತ್ತೇನೆ. ಅಂದು ಅನ್ನ. ನೀರು ಏನೂ ಬೇಡ ಎಂದನಿಸುತ್ತೆ. ಹೆಣ್ಣು ಬದುಕು ನೀಡಿದ ಆ ದೇವರನ್ನು ಅದೆಷ್ಟು ಬಾರಿ ಶಪಿಸಿದ್ದೇನೋ. ದೇವರು ಕಣ್ಣು ಬಿಡಲಿಲ್ಲ. ಪ್ರತಿ ತಿಂಗಳು ಆ ಕೆಟ್ಟ ನೋವು ನನ್ನನ್ನು ಹಿಂಡಿ ಹಿಪ್ಪೆಯಾಗಿಸುತ್ತದೆ. ನನ್ನ ಆ ಸುಂದರ ಕಣ್ಣುಗಳು ರಾತ್ರಿಯಿಡೀ ನಿದ್ದೆಯಿಲ್ಲದೆ ಬಳಲುತ್ತವೆ. ನನ್ನ ಆ ಮುಖ ಯಾವ ಉತ್ಸಾಹವೂ ಇಲ್ಲದೆ ಕಳೆಗುಂದುತ್ತದೆ. ಬೇಡ, ಆ ಅಸಹನೀಯ ನೋವನ್ನು ನನ್ನಿಂದ ಸಹಿಸಲಾಗುವುದಿಲ್ಲ. ಆ ಮೂರು ದಿನಗಳಲ್ಲಿ ಕಂಡಕಂಡವರೊಡನೆ ರೇಗಾಡ್ತೀನಿ. ಸಿಟ್ಟಿನಿಂದ ಮುಖ ಊದಿಸಿಕೊಂಡು ಬಿಡ್ತಿನಿ. ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಅತ್ತೆ-ಮಾವ, ಕೈಹಿಡಿದ ಗಂಡ, ಪ್ರೀತಿಯ ನನ್ನ ಮಕ್ಕಳು...ಯಾರನ್ನು ಕಂಡರೂ ನನಗೆ ಸಿಟ್ಟು, ಅಸಹನೆ. ನನ್ನ ಆಪೀಸ್‌ನ ಆ ಲ್ ಚಯರ್‌ನಲ್ಲಿ ಕುಳಿತು ಅಲ್ಲೇ ಖಿನ್ನಳಾಗ್ತೀನಿ. ನನ್ನ ಪ್ರೀತಿಸುವವರೂ ದ್ವೇಷಿಸುವವರಂತೆ ಕಾಣುತ್ತಾರೆ. ತುಂಬಾ ಸಲ ಅನಿಸಿದೆ; ನಾನು ಹುಡುಗನಾಗುತ್ತಿದ್ದರೆ, ಅದ್ಯಾವ ತೊಂದರೆಗಳೂ ನನಗಿರಲಿಲ್ಲ ಎಂದು!

ಇಷ್ಟೆಲ್ಲಾ ನೋವನ್ನು ಹೊಟ್ಟೆಯೊಳಗೇ ನುಂಗಿಕೊಂಡು ಕಷಾಯ ಮಾಡಿಕೊಂಡು ಕುಡಿಯುವಾಗ ಐದು ವರ್ಷದ ನನ್ನ ಮಗಳು ಬಂದು ಕೇಳುತ್ತಾಳೆ; ಯಾಕಮ್ಮಾ, ಕಷಾಯ ಕುಡಿತೀ ಎಂದು! ಏನನ್ನೂ ಅರಿಯದ ಆ ಮಗಳು ಹೀಗೆ ಕೇಳಿದಾಗ ನನ್ನ ಪಾಡಿಗೆ ನಾನಿರುತ್ತೇನೆ. ಅದ್ಯಾವ ಉತ್ತರಗಳೂ ಸಿಗದೆ ಆ ಪುಟ್ಟ ಮಗು ಬಿಟ್ಟ ಕಣ್ಣುಗಳಿಂದ ಪಿಳಿ ಪಿಳಿ ಎಂದು ನನ್ನ ನೋಡುತ್ತೆ. ಆ ಕ್ಷಣ ನನ್ನಮ್ಮ ನನಗೆ ನೆನಪಾಗುತ್ತಾಳೆ.

ಪ್ರಕಟ: http://hosadigantha.in/epaper.php?date=11-11-2010&name=11-11-2010-13

Wednesday, November 3, 2010

ಅಕ್ಕ ದೊಡ್ಡವಳಾಗಿದ್ದಳು!


ಅಂದು ಅಕ್ಕ ಇದ್ದಕಿದ್ದಂತೆ ಮನೆಯಿಂದ ಮಾಯವಾಗಿದ್ದಳು. ಅಮ್ಮನಿಗೆ ತುಟಿಯಂಚಿನಲ್ಲಿ ನಗು, ಅಜ್ಜಿ ಊರುಗೋಲು ಹಿಡಿದು ಮನೆಯ ಹಿಂಬದಿಯ ಆ ದಟ್ಟ ಕಾಡಿಗೆ ಹೊರಟಿದ್ದಳು. ಅಕ್ಕ ಆ ಮುಳ್ಳಿನ ಪೊದೆಯೊಳಗೆ ನುಗ್ಗಿ ಕುಳಿತು ಸುಮ್ಮನೆ ಒಬ್ಬಳೇ ಅಳುತ್ತಿದ್ದಳು. ‘ಅಕ್ಕಾ, ಏಕೆ ಅಳ್ತಿಯಾ?’ ಎಂದು ಕೇಳಿದಾಗ ಅಮ್ಮ ಸುಮ್ಮನಾಗುವಂತೆ ನನಗೆ ಗದರಿದ್ದರು. ಮುಂದಿನ ಯೋಚನೆಗಳಿಗೆ ಅವಕಾಶಗಳಿರಲಿಲ್ಲ. ಅಕ್ಕನನ್ನು ಕರೆದುಕೊಂಡು ಬಂದು ಅಂಗಳದಲ್ಲೇ ಕೂರಿಸಿ, ಬಟ್ಟೆ ಬದಲಾಯಿಸಿ ಸ್ನಾನ ಮಾಡಲು ಅಜ್ಜಿಯ ಸುಗ್ರಿವಾಜ್ಞೆ ಹೊರಡಿತ್ತು. ಅಮ್ಮ ನಮ್ಮೂರ ಹೊಳೆ ದಾಟಿ ಆಚೆ ಮನೆಯ ಹೆಂಗಳೆಯರನ್ನು ಕರೆದುಕೊಂಡು ಬಂದಳು. ಅವರೆಲ್ಲರ ನೋಟ ಅಕ್ಕನತ್ತ, ಅಕ್ಕನ ಕಣ್ಣುಗಳಲ್ಲಿ ನಾಚಿಕೆಯ ಕಾಮನಬಿಲ್ಲು.

ಅಕ್ಕ ದೊಡ್ಡವಳಾಗಿದ್ದಳು!!
ಅಂದು ಅಮ್ಮನ ತಲೆಯಲ್ಲಿ ಅಕ್ಕನ ಮದುವೆಯ ಚಿಂತೆ. ವೊನ್ನೆ ವೊನ್ನೆ ತನಕ ನನ್ನನ್ನು ಸ್ಕೂಲಿಗೆ ರೆಡಿ ಮಾಡಿ, ಅವಳೂ ಬ್ಯಾಗ್ ಹೆಗಲೇರಿಸಿಕೊಂಡು ನನ್ನ ಜೊತೆ ಹೆಜ್ಜೆ ಹಾಕುತ್ತಿದ್ದ ಅಕ್ಕನನ್ನು ಮರುದಿನ ಅಮ್ಮ ಶಾಲೆಗೆ ಹೋಗಬೇಡ ಎಂದು ಗದರಿ ಅಂಗಳದಲ್ಲಿ ನಿಲ್ಲಿಸಿದಳು. ಅಮ್ಮನೇ ಅಕ್ಕನಿಗೆ ರಜೆ ಘೋಷಿಸಿಬಿಟ್ಟಿದ್ದಳು! ಹಟ್ಟಿಯ ಪಕ್ಕದಲ್ಲಿರುವ ಪುಟ್ಟ ಕೋಣೆಯೇ ಆಕೆಯ ಮನೆಯಾಗಿತ್ತು. ಅಂದಿನವರೆಗೆ ಸಂಭ್ರಮದ ಬುಗ್ಗೆಯಾಗಿದ್ದ ಅಕ್ಕ ಅವಳನ್ನು ‘ಕೂಡಿ’ ಹಾಕಿದ ಕೋಣೆಯಲ್ಲಿ ಆಕೆ ಒಬ್ಬಂಟಿಯಾಗಿದ್ದಳು. ಅಲ್ಲಿಗೇ ಊಟ, ನೀರು, ಬಟ್ಟೆ ...ಎಲ್ಲವೂ ಅಲ್ಲಿಗೇ ಸರಬರಾಜಾಗುತ್ತಿತ್ತು. ಅವಳನ್ನು ಮುಟ್ಟಬಾರದು ಎಂದು ಅಮ್ಮ ಹೇಳಿದಾಗ ನನಗೆ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಆ ಕೋಣೆಯಲ್ಲಿ ಅಕ್ಕನನ್ನು ‘ಕೂಡಿ’ ಹಾಕಿದಾಗೆ ಭಾಸವಾಗಿತ್ತು. ಅಲ್ಲಿ ಹೋಗಬೇಡ, ಬಾವಿಯಿಂದ ನೀರು ಎತ್ತಬೇಡ, ತೋಟದ ಕಡೆ ಹೋದ್ರೆ ಅಲ್ಲಿ ದೇವರ ಗುಡಿ ಇದೆ, ಮನೆಯ ಜಗುಲಿನೂ ಮುಟ್ಟಬೇಡ, ನೀನು ಊಟ ಮಾಡಿದ ತಟ್ಟೆಯನ್ನು ಬೇರೆನೇ ಇಟ್ಟುಕೋ, ಲಂಗ ಧಾವಣಿ ಬೇಡ, ಸೀರೆ ಉಡಬೇಕು....ಇಂಥ ಉಪದೇಶಗಳಲ್ಲೇ ಅಮ್ಮ ಅಕ್ಕನನ್ನು ‘ಸೀಮಿತ ಪ್ರಜ್ಞೆ’ಗೆ ತಳ್ಳಿಬಿಟ್ಟಿದ್ದಳು.

ಅಕ್ಕನ ಬಿಟ್ಟು ಶಾಲೆಗೆ ಹೋದಾಗ ಮೇಷ್ಟ್ರು, ‘ನಿನ್ನಕ್ಕ ಎಲ್ಲಿ?’ ಎಂದು ಕೇಳಿದಾಗ ಎಲ್ಲರೆದುರು ಜೋರಾಗಿ ಅಕ್ಕ ದೊಡ್ಡವಳಾಗಿದ್ದಾಳೆಂದು ಹೇಳಿಬಿಟ್ಟಿದ್ದೆ. ಮೇಷ್ಟ್ರು ಉದ್ದದ ಕೋಲು ಹಿಡಿದು ಸುಮ್ನಿರೋ ಎಂದು ಗದರಿದ್ದು ಇನ್ನೂ ನೆನಪು. ಸುತ್ತಮುತ್ತಲಿನವರು ಮಗಳು ದೊಡ್ಡವಳಾದಳು, ಇನ್ನು ಮದುವೆಯ ಚಿಂತೆ ಎಂದಾಗ ಅಕ್ಕ ಪ್ರಶ್ನಾರ್ಥವಾಗಿ ನೋಡುತ್ತಿದ್ದಳು. ಅವಳಿಗಿನ್ನೂ ೧೪ ದಾಟಿರಲಿಲ್ಲ. ಇನ್ನೂ ಏಳನೇ ಕ್ಲಾಸು. . ಮಲ್ಲಿಗೆಯ ವೊಗ್ಗಿನಂತೆ ಆಗಷ್ಟೇ ಬಿರಿದ ಅವಳದು ಮದುವೆ-ಬದುಕು-ಬಂಧನ ಇದ್ಯಾವುದನ್ನೂ ಚಿಂತಿಸದ ವಯಸ್ಸು.

ಅಂದು ಅಕ್ಕನನ್ನು ನನ್ನಿಂದ ದೂರ ಇಟ್ಟಿದ್ದು ಅಮ್ಮನ ಮೇಲೆ ಕೆಟ್ಟ ಸಿಟ್ಟು ತರಿಸಿತ್ತು. ಅಮ್ಮ, ಅಜ್ಜಿ ಅದ್ಹೇಕೆ ಹೀಗೆ ಮಾಡಿದ್ರು? ಯಾವುದೂ ಅರ್ಥವಾಗಿರಲಿಲ್ಲ. ಆದರೆ, ಅಕ್ಕನೆತ್ತರಕ್ಕೆ ನಾನೂ ಬೆಳೆದಾಗ ಇದೆಲ್ಲವೂ ನನಗೂ ಅರ್ಥವಾಯಿತು. ಆದರೆ, ಅಕ್ಕನನ್ನು ಕೂಡಿ ಹಾಕಿದ ಕೋಣೆಯಲ್ಲಿ ನನ್ನನ್ನು ಕೂಡಿ ಹಾಕಲಿಲ್ಲ, ಅಕ್ಕನಂತೆ ನನ್ನನ್ನು ಅಮ್ಮನೇನೂ ಗದರಲಿಲ್ಲ. ಅಲ್ಲಿ ಹೋಗಬೇಡ, ಇಲ್ಲಿ ಹೋಗಬೇಡ...ಎಂಬ ಯಾವ ಚೌಕಟ್ಟುಗಳನ್ನು ಅಮ್ಮ ಹಾಕಿರಲಿಲ್ಲ. ಅಮ್ಮನ ತುಟಿಯಂಚಿನಲ್ಲಿ ನಗುವಷ್ಟೇ ಮೂಡಿತ್ತು. ಸಂಪ್ರದಾಯಗಳ ಚೌಕಟ್ಟುಗಳು ಅಂದು ಅರ್ಥ ಕಳೆದುಕೊಂಡಿದ್ದವು! ಇದೆಲ್ಲಾ Uಚುತ್ತಿರುವಾಗ ಪಿ.ಲಂಕೇಶ್ ಅವರ ನೀಲು ಕವಿತೆಯೊಂದು ನೆನಪಾಯಿತು.
ನನಗೆ ಅತ್ಯಂತ
ಸಂಕೋಚದ
ನೆನಪು
ಯಾವುದೆಂದರೆ

ನನ್ನ ಪ್ರೀತಿಯ ತಂದೆಗೆ
‘ಇನ್ನು ನನಗೆ ಸ್ನಾನ ಮಾಡಿಸಬೇಡ’
ಎಂದು ಲಂಗದಿಂದ ಸೀರೆಗೆ ಜಾರಿದ್ದು!!

ಬಹುಶಃ ಈ ಕವನದಲ್ಲಿ ಹೇಳಿದಂತೆ ಹೆಣ್ಣುಮಗಳೊಬ್ಬಳು ‘ಹರೆಯ’ಕ್ಕೆ ಬರುವುದು ಅವಳಿಗೆ ಅತ್ಯಂತ ನಾಚಿಕೆಯ ನೆನಪಾಗಿರಬೇಕು.

Wednesday, October 27, 2010

‘ಹಸಿರು’ ಕನಸುಗಳು

ಅಂದು ಶ್ರಾವಣ ಮಾಸದ ವೊದಲ ಮಂಗಳವಾರ.
ನನ್ನ ಪುಟ್ಟ ಜಡೆಯಲ್ಲಿ ಮಲ್ಲಿಗೆ ಮಾತಿಗಿಳಿದಿತ್ತು. ಕಿವಿಯಲ್ಲಿ ಕೆಂಪು ಹರಳಿನ ಓಲೆ ತೂಗುಯ್ಯಾಲೆಯಾಡುತ್ತಿತ್ತು. ಕೈಯಲ್ಲಿ ಬಣ್ಣದ ಹೊಸಬಳೆಗಳು ಮಿರಮಿರನೆ ಮಿನುಗುತ್ತಿದ್ದವು. ಕೈಯಲ್ಲಿ ಮದರಂಗಿಯ ಚಿತ್ತಾರ. ನಿತ್ಯ ಹಣೆಯಲ್ಲಿರುತ್ತಿದ್ದ ಸಣ್ಣ ಬಿಂದಿಯನ್ನು ತೆಗೆದು ಅತ್ತೆ ದೊಡ್ಡ ಬಿಂದಿಯನ್ನಿಟ್ಟಿದ್ದರು. ಆ ಬಿಂದಿ ಕೆಳಗಡೆ ಕುಂಕುಮ ನಳನಳಿಸುತ್ತಿತ್ತು. ಕೆನ್ನೆ ಅರಿಶಿನವಾಗಿತ್ತು. ಕೈ ಬೆರಳುಗಳಲ್ಲಿ ಪುಟ್ಟದಾದ ಚಿನ್ನದುಂಗುರ. ಆ ನರುಗೆಂಪು ರೇಷ್ಮೆ ಸೀರೆಯ ಜರಿಯಂಚು ಎದೆಮೇಲೆ ಹೊಳೆಯುತ್ತಿತ್ತು. ಕತ್ತಿನಲ್ಲಿ ‘ಮುತ್ಯೆದೆ’ಯ ರಂಗು...

ನನ್ನನ್ನು ನಾನೇ ನೋಡಿಕೊಳ್ಳುವ ತವಕ. ಕನ್ನಡಿ ಎದುರು ನಿಂತು ನಿಮಿಷಗಟ್ಟಲೆ ಕಳೆದಿದ್ದೆ, ನನ್ನೊಳಗೇ ಸಂಭ್ರಮಿಸಿದ್ದೆ. ತುಟಿಯಂಚಿನಲ್ಲಿ ಖುಷಿಯ ಮುಗುಳುನಗೆ. ‘ಇನ್ನೇನೂ ಕೆಲ ನಿಮಿಷ, ಪುರೋಹಿತರು ಬರುತ್ತಾರೆ. ಬಾಮ್ಮಾ...ಗೌರಿಯನ್ನು ಸಿಂಗರಿಸು’ ಅತ್ತೆಯಮ್ಮನ ಕರೆ ಕೇಳಿದಾಗ, ಜಿಂಕೆಯಂತೆ ಓಡಿ ದೇವರಮನೆಯಲ್ಲಿದ್ದೆ. ಆಗಿನ್ನೂ ಮುಂಜಾವಿನ ಐದೂವರೆ ಗಂಟೆ. ಸೂರ್ಯ ನಿಧಾನವಾಗಿ ಎದ್ದೇಳುತ್ತಿದ್ದ. ‘ಪತಿ ದೇವರು’ ಇನ್ನೂ ಹಾಸಿಗೆ ಬಿಟ್ಟಿರಲಿಲ್ಲ.

ಆ ಪುಟ್ಟ ಜಾಗದಲ್ಲಿ ಚೆಂದದ ರಂಗೋಲಿ ಹಾಕಿದ್ದೆ. ಅದರ ಮೇಲೆ ಮಣೆಯನ್ನಿಟ್ಟು ಗೌರಿ, ಗಣೇಶ ಮತ್ತು ಕಲಶವನ್ನಿಟ್ಟೆ. ಮಲ್ಲಿಗೆ, ಸೇವಂತಿಗೆ ಮತ್ತು ಬಿಡಿಹೂವುಗಳಿಂದ ಗೌರಿ ಸಿಂಗಾರಗೊಂಡಳು.
‘ನೀನೇ ಗೌರಿಯಂತೆ ಕಾಣ್ತಿಯಮ್ಮಾ’ ಮಾವನ ಉವಾಚಕ್ಕೆ ಕೆನ್ನೆಯಲ್ಲಿ ಕಾಮನಬಿಲ್ಲು ಮೂಡಿತ್ತು. ಮನದಲ್ಲಿ ಸಣ್ಣನೆಯ ಭಯ. ‘ಪುರೋಹಿತರು ಹೇಳಿದಂತೆ ಮಾಡು. ವೊದಲ ವರ್ಷ. ಭಕ್ತಿಯಿಟ್ಟು ಪೂಜೆ ಮಾಡು’ ಎಂದಾಗ ಎದೆಯೊಳಗೆ ಢವಢವ. ಪುರೋಹಿತರು ಬಂದೇ ಬಿಟ್ಟರು. ಒಂದೂವರೆ ಗಂಟೆಗಳ ಕಾಲ ಮಂಗಳಗೌರಿ ಪೂಜೆ ಮಾಡಿದ್ದಾಯಿತು. ತಂಬಿಟ್ಟು ದೀಪಗಳನ್ನು ಹಚ್ಚಿಕೊಂಡು ‘ಮಂಗಳ ಗೌರಿ’ ಕಥೆ ಕೇಳಿದ್ದಾಯಿತು.

ಅದು ಮದುವೆಯಾದ ವೊದಲ ವರ್ಷ. ಮಂಗಳಗೌರಿ ವ್ರತ ಮಾಡಿದರೆ ಗಂಡನಿಗೆ ಶ್ರೇಯಸ್ಸು, ಹಿರಿಯರು ಹಾಕಿಕೊಟ್ಟ ಭದ್ರ ಹೆಜ್ಜೆ. ಒಂದಾನೊಂದು ಕಾಲದಲ್ಲಿ ಜಯಪಾಲ ಅನ್ನೋ ರಾಜನಿಗೆ ಭವಾನಿ ದೇವಿಯ ಅನುಗ್ರಹದಿಂದ ‘ಸುಶೀಲೆ’ ಎನ್ನುವ ಮಗಳು ಜನಿಸುತ್ತಾಳಂತೆ. ಅವಳಿಗೂ ಮದುವೆಯಾಗುತ್ತದೆ, ಆದರೆ ಗಂಡ ಅಲ್ಪಾಯುಷಿ. ಸುಶೀಲೆಯು ಗಂಡನ ದೀರ್ಘಾಯುಷ್ಯಕ್ಕಾಗಿ ಮಂಗಳಗೌರಿ ವ್ರತ ಮಾಡಿದ್ದಳಂತೆ...ಅದೂ ಐದು ವರ್ಷಗಳ ಪ್ರತಿ ಶ್ರಾವಣಮಾಸದ, ಪ್ರತಿ ಮಂಗಳವಾರ! ಅವಳದು ಸುಖಸಂಸಾರವಾಯಿತಂತೆ...

ಹೀಗೆಂದು ಪುರೋಹಿತರು ಹೇಳಿಕೊಟ್ಟ ದೀರ್ಘಕಥೆಯನ್ನು ಗಿಳಿಯಂತೆ ಹೇಳಿದಾಗ ಮನಸ್ಸಿನಲ್ಲಿ ಅದೇನೋ ಅವ್ಯಕ್ತವಾದ ಖುಷಿ, ಸಂತೃಪ್ತಿಯ ಬೆಳಕು. ಹೆಣ್ಣಾಗಿದ್ದಕ್ಕೆ ಹೆಮ್ಮೆ. ಪೂಜೆ ಮುಗಿಯಿತು. ಶ್ರಾವಣ ಮಾಸದ ಆ ವೊದಲ ಮಂಗಳವಾರ ಹೊಸ ಬದುಕಿಗೊಂದು ಮುನ್ನುಡಿಯಾದಂತೆ ಭಾಸವಾಯಿತು. ‘ಪತಿ ದೇವರಿಗೆ’ ಪ್ರೀತಿಯಿಂದ ನಮಸ್ಕರಿಸಿದಾಗ ಆತನ ಕಣ್ಣುಗಳಲ್ಲಿ ‘ಹಸಿರು ಕನಸು’ಗಳು ಕಂಗೊಳಿಸುತ್ತಿದ್ದವು!.


Published: http://hosadigantha.in/epaper.php?date=10-28-2010&name=10-28-2010-13

Sunday, October 3, 2010

ನಿನ್ನ ಅಪ್ಪಾ ಅನ್ತೀನಿ...


ಅಂದಿನವರೆಗೆ ಅಪ್ಪಾ ಎಂಬ ಎರಡಕ್ಷರವನ್ನೇ ದ್ವೇಷಿಸುತ್ತಿದ್ದೆ. ಅಪ್ಪನ ಕುರಿತು ಬರೆಯಬೇಕಾದಾಗ, ಅಪ್ಪನ ಕುರಿತು ಹೇಳಬೇಕಾದಾಗ ಅಲ್ಲಿ ಭಾವಗಳಿಗೆ ಜೀವವೇ ಇರಲಿಲ್ಲ. ಏಕೆಂದರೆ ಅಪ್ಪನಾಗಬೇಕಾದವನು ಅಪ್ಪನ ಜವಾಬ್ದಾರಿ ನಿಭಾಯಿಸಲೇ ಇಲ್ಲ. ಮಗಳ ಕನಸುಗಳಿಗೆ, ಅವಳ ಸುಂದರ ಭಾವಗಳಿಗೆ ಜೀವ ನೀಡಲೇ ಇಲ್ಲ. ಅಂದು ಅಮ್ಮನ ಮಡಿಲಿಗೆ ಬಿದ್ದಾಗ ಆತ ಇನ್ಯಾರೋ ಕುತ್ತಿಗೆಗೆ ಮತ್ತೆ "ತಾಳಿ'ಯಾಗಿದ್ದ!

ಇಂದು ನಿನ್ನನ್ನೇ ಅಪ್ಪ ಎಂದು ಕರೆಯುತ್ತಿದ್ದೇನೆ. ಈವರೆಗೆ ನನ್ನ ಬಾಯಿಂದ ಹೊರಬೀಳದ ಅಪ್ಪಾ ಎಂಬ ಎರಡಕ್ಷರದ ಸುಂದರ ಸಂಬಂಧಕ್ಕೆ ಜೀವ-ಭಾವ ಕೊಟ್ಟಿದ್ದು ನೀನೇ. ನೀನು ಪುಟ್ಟೀ ಅಂತ ಕರೆದಾಗಲೆಲ್ಲಾ ಆ ನಿನ್ನ ಸುಂದರ ಕರೆಗೆ ಕರಗಿ ಖುಷಿಯಿಂದ ಕಂಗಳು ಒದ್ದೆಯಾಗುತ್ತಿದೆ, ದೇವ್ರ ಮೇಲೆ ಸಿಟ್ಟುಗೊಳ್ಳುತ್ತಿದ್ದೆ. ನಿನ್ನಂಥ ಒಳ್ಳೆ ಅಪ್ಪನ ಏಕೆ ಇಷ್ಟು ತಡವಾಗಿ ಕೊಟ್ಟೆ ಅಂತ!
ಹೆಣ್ಣೊಬ್ಬಳಿಗೆ ಅಮ್ಮನ ಆಸರೆ ಹೇಗೋ ಹಾಗೆಯೇ ಅಪ್ಪನಾಸರೆಯೂ ಬೇಕಲ್ವಾ? ನನ್ನ ಕ್ಲಾಸಿನ ಹುಡುಗಿಯರೆಲ್ಲ ಅಪ್ಪಾ..ಅಪ್ಪಾ..ಅಂಥ ಕರೆಯುವಾಗ, ತಮ್ಮ ಅಪ್ಪನ ಕುರಿತು ಹಿಗ್ಗಿನಿಂದ ಹೇಳುತ್ತಿರುವಾಗಲೆಲ್ಲಾ ನನ್ನಪ್ಪನಿಗೆ ಹಿಡಿಶಾಪ ಹಾಕುತ್ತಿದ್ದೆ. ನನಗೂ ಅಪ್ಪಾ ಬೇಕಿತ್ತು, ನನ್ನನ್ನು ಹೆಗಲ ಮೇಲೆ ಹೊತ್ತು ಪೇಟೆ ಸುತ್ತಿಸುವ ಅಪ್ಪಾ ಬೇಕಿತ್ತು ಎಂದನಿಸುತ್ತಿತ್ತು, ಏನು ಮಾಡುವುದು ಹೇಳು...ನನ್ನಪ್ಪ ಆವಾಗಲೇ ನನ್ನೆದುರಿನಿಂದ ಮರೆಯಾಗಿದ್ದ. ಅಪ್ಪನೆನಿಸಿಕೊಳ್ಳುವ ಕನಿಷ್ಠ ಅರ್ಹತೆಯನ್ನೂ ಕಳೆದುಕೊಂಡಿದ್ದ.

ಅದಕ್ಕೇ ನೋಡು ಅಪ್ಪಾ...ಈವಾಗ ನಾನು ನಿನ್ನ ಅಪ್ಪಾ ಅನ್ತೀನಿ. ಪುಟ್ಟ ಮಗು ಕೋಪಿಸಿಕೊಂಡಂತೆ ನಿನ್ನ ಜೊತೆ ಕೋಪಿಸಿಕೊಳ್ತೀನಿ. ಅದು ಕೊಡಿಸು, ಇದು ಕೊಡಿಸು ಅಂಥ ಹಠ ಹಿಡಿತೀನಿ. ನೋಡಿದವರಿಗೆ ನೀನು ನನ್ನ ಅಪ್ಪನೋ ಅಥವಾ ಮಾವನೋ ಅನ್ನೋ ಕನ್‌ಫ್ಯೂಸ್ ಹುಟ್ಟುಹಾಕ್ತೀನಿ. ನಿನ್ನ ನೋಡಿದ್ರೆ ಮಾವ ಅನ್ನೋ ಭಯ ಮೂಡಲ್ಲಪ್ಪ, ಅಪ್ಪ ಅನ್ನೋ ಪ್ರೀತಿ ಹುಟ್ಟುತ್ತೆ, ಮಮತೆ ಉಕ್ಕುತ್ತೆ, ಅಪ್ಪಾ ಸಿಕ್ಕಿದ್ದಾನೆ ಅನ್ನೋ ಗೌರವ, ಹೆಮ್ಮೆ ಮೂಡುತ್ತೆ. ಅದಕ್ಕೆ ನೋಡು ವೊನ್ನೆ ನಮ್ಮ ಡ್ರೈವರ್ ಮಾಮ, ನಾನು ನಿನ್ ಮಗಳೋ ಅಥವಾ ಸೊಸೆನೋ ಅಂಥ ಪ್ರಶ್ನೆ ಮಾಡಿದ್ರು. ನೀನು ತಂದುಕೊಡುವ ಚಾಕಲೇಟು, ಸೀರೆಗಳು, ಚೂಡಿದಾರ್ ಬಟ್ಟೆಗಳು, ಪ್ರತಿ ಶುಕ್ರವಾರ ತಂದುಕೊಡುವ ಎರಡು ವೊಳ ಮಲ್ಲಿಗೆ, ನನಗೆ ಸಣ್ಣ-ಪುಟ್ಟ ಜ್ವರ
ಬಂದ್ರೂ ನೀನು ಮಾಡಿಕೊಡುವ ಬಿಸಿ ಬಿಸಿ ಕಾಫಿ, ಆ ಹಳ್ಳಿ ಮದ್ದು ಯಾವ ಮಾವ ಮಾಡಿಕೊಡುತ್ತಾನೆ ಹೇಳು? ಅದಕ್ಕೆ ಮಾವನಂದ್ರೆ ನನಗೆ ಅಪ್ಪ.

ಜೀವನ ಅಂದ್ರೆ ಹೀಗೇ ಅಪ್ಪಾ...ಎಲ್ಲೋ ಮಿಸ್ ಆಗಿದ್ದು ಮತ್ತೆಲ್ಲೋ ಸಿಗುತ್ತೆ. ಸಣ್ಣವಳಿರುವಾಗ ನನ್ನಪ್ಪನ ಮಿಸ್ ಮಾಡ್ಕೊಂಡೆ. ಆವಾಗ ಅತ್ತು ಕರೆದರೂ ಆ ದೇವ್ರು ಅಪ್ಪನ ಕೊಡಲೇ ಇಲ್ಲ. ಈಗ ನೀನು ಸಿಕ್ಕಿದ್ದಿ, ಸಾಕು...ಎನಗೆ. ಇನ್ನೇನು ಬೇಕು ನೆಮ್ಮದಿಯ ಸಂಸಾರಕ್ಕೆ, ಭರವಸೆಯ ನಾಳೆಗಳಿಗೆ?

ಪ್ರಕಟ: http://hosadigantha.in/epaper.php?date=08-26-2010&name=08-26-2010-15

Monday, August 23, 2010

ಅಮ್ಮನಾದ ಅಣ್ಣನಿಗೆ...

ಅಂದು ನೀನು ಅತ್ತಿದ್ದೆ, ನನ್ನ ದೊಡ್ಡ ಬ್ಯಾಗನ್ನು ಎತ್ತಿ ಆ ಕೆಂಪು ಬಣ್ಣದ ಕಾರಿಗೆ ಹಾಕುವಾಗ ನೀನು ಮುಸಿ ಮುಸಿ ಅಳುತ್ತಿದ್ದುದನ್ನು ಕಂಡು ಒಂದು ಕ್ಷಣ ಅಚ್ಚರಿ. ಪ್ರತಿದಿನ ನೀನು ಅಳುಮುಂಜಿ ಎಂದು ರೇಗಿಸುತ್ತಾ, ನಿನ್ನಿಂದ ಬೈಗುಳ ತಿನ್ನುತ್ತಾ ಇದ್ದವಳಿಗೆ ಅಂದು ನೀನು ಅಳೋದು ನಿಜಕ್ಕೂ ವಿಸ್ಮಯ ಅನಿಸಿಬಿಡ್ತು. ಪ್ರೀತಿ ಅಂದ್ರೆ ಅದೇ ತಾನೇ? ನಿನ್ನ ಬಗ್ಗೆ ಯೋಚಿಸಿದಾಗಲೆಲ್ಲಾ ನನಗನಿಸುವುದು ಬಹುಶಃ ನನ್ನ ನೀನು ಪ್ರೀತಿ ಮಾಡಿದಷ್ಟೂ ಬೇರ್‍ಯಾವ ಅಣ್ಣಂದಿರೂ ಪ್ರೀತಿ ಮಾಡೊಲ್ಲ ಅಂತ! ಇದು ನನ್ನ ಹೆಮ್ಮೆ. ನಿನ್ನ ಮೇಲಿನ ಅತೀವ ಪ್ರೀತಿ, ವಿಶ್ವಾಸ.

ನಿನ್ನನ್ನು ಅಣ್ಣಾ ಅಂತ ಕೂಗೋದೇ ಒಂದು ಸಂಭ್ರಮ ಕಣೋ. ಅಂದು ನಾನು ಮದುವೆಯಾಗುತ್ತಿದ್ದೇನೆ ಅಂದಾಗ ಎಲ್ಲರಿಗಿಂತ ಖುಷಿ ಪಟ್ಟವನು ನೀನೇ ಅನಿಸುತ್ತೆ. ಹೋದಲೆಲ್ಲಾ ಸಿಕ್ಕ ಸಿಕ್ಕ ‘ಕಲ್ಲುದೇವರು’ಗಳ ಎದುರು ಮೂಕವಾಗಿ ನಿಂತು ನನ್ನ ತಂಗಿಗೆ ಮದುವೆಯಾಗಲಿ ಎಂದು ಬೇಡಿಕೊಳ್ಳುತ್ತಿದೆಯಲ್ಲಾ ಬಹುಶಃ ಅದರ ಫಲವೇ ಇರಬೇಕು ಅಂದುಕೊಂಡು ಮತ್ತೆ ಅದೇ ದೇಗುಲಗಳ ಮುಂದೆ ನಿಂತು ಹಣ್ಣು ಕಾಯಿ ಮಾಡಿಸಿದವನು ನೀನೇ! ನನ್ನಣ್ಣ ಎಂದು ನಿನ್ನ ನೂರು ಬಾರಿ ಕೂಗಿದರೂ ಯಾವತ್ತೂ ನೀನು ನನ್ನ ಎತ್ತಿ ಆಡಿಸಲಿಲ್ಲ, ಮುದ್ದು ಮಾಡಲಿಲ್ಲ, ಹೆಗಲ ಮೇಲೆ ಕುಳ್ಳಿರಿಸಿ ಪೇಟೆ ಸುತ್ತಾಡಿಸಿಲ್ಲ. ಆದರೂ ನಿನ್ನೊಳಗೇ ನನಗಾಗಿ ಕಾದಿಟ್ಟಿರುವ ಆ ಅನನ್ಯ ಪ್ರೀತೀನಾ ಕ್ಷಣ ಕ್ಷಣವೂ ಧಾರೆ ಎರೆಯುತ್ತಾ ಬಂದೆ.

ಅಂದು ನನ್ನ ನೀನು ಅತ್ತೆ ಮನೆಗೆ ಕಳುಹಿಸಿಕೊಡುವಾಗ ನನ್ನ ತಬ್ಬಿಕೊಂಡು ಅದೆಷ್ಟು ಅತ್ತುಬಿಟ್ಟಿಯಲ್ಲಾ. ಅಲ್ಲಿಯವರೆಗೆ ನಿನ್ನ ಕಣ್ಣಿಂದ ಒಂದು ಹನಿ ಬಿಂದು ಜಾರಿದ್ದನ್ನೂ ನಾ ನೋಡಿರಲಿಲ್ಲ. ಇಂದಿಗೂ ಆ ಮುಖ ಕಣ್ಣೆದುರು ತೇಲಿಬಂದರೆ ನಾನೂ ಕಣ್ಣೀರಾಗುತ್ತೇನೆ. ಸಮಾಜ, ಬದುಕಿನ ಪ್ರಶ್ನೆ ಬಂದಾಗ ಅಲ್ಲೆಲ್ಲಾ ನಿನ್ನ ಕಾಳಜಿಯ ಚೌಕಟ್ಟು ಹಾಕಿದ್ದೆ. ನನ್ನೊಳಗಿರುವ ಪ್ರತಿಭೆಗಳನ್ನು ಹೆಕ್ಕಿ ತೆಗೆದು ನನ್ನೆದುರಿಟ್ಟೆ. ಒಡಹುಟ್ಟಿಲ್ಲಾಂದ್ರೂ ಒಡನಾಡಿಯಾಗಿದ್ದೆ. ಬಹುಶಃ ನನ್ನ ಬಾಯಿಂದ ಅಣ್ಣಾ...ಎಂಬ ಶಬ್ಧ ಬಂದರೆ ಅದು ನಿನ್ನ ಕಿವಿಗೇ ಬೀಳುತ್ತೆ, ಏಕೆಂದರೆ ನೀನೋರ್ವನೇ ಆ ಅಣ್ಣ! ಅಮ್ಮನ ನೆನಪಾದಗೆಲ್ಲಾ ನೀನೇ ಅಮ್ಮ ಅಂದಿದ್ದೀನಿ, ಮೌನವಾಗಿ ನಿನ್ನೆದುರು ಮೂಕಳಂತೆ ಅತ್ತಿದ್ದೀನಿ. ಎಲ್ಲವನ್ನೂ ನಿನ್ನೆದುರು ಹರವಿ ಮನಸ್ಸು ಹಗುರವಾಗಿಸಿಕೊಂಡಿದ್ದೀನಿ. ಎಲ್ಲೋ ಕಳೆದುಹೋದ ಕನಸು, ಪ್ರೀತಿ, ದೂರದಲ್ಲೆಲ್ಲೋ ಬಿಟ್ಟು ಬಂದ ಅಮ್ಮ, ಆ ನನ್ನ ಪುಟ್ಟ ಮನೆ...ಹೀಗೆ ಎಲ್ಲಾ ಕಡೆ ‘ಮಿಸ್’ ಆದದ್ದನ್ನೆಲ್ಲಾ ಒಮ್ಮೆಲೇ ನನ್ನೆದುರು ತಂದಿಟ್ಟವನು ನೀನೇ.
೨೪ ರಕ್ಷಾ ಬಂಧನ. ಅದಕ್ಕೆ ನಿನಗೆ ಶುಭಾಶಯ ಹೇಳೋಣ ಅಂಥ ಪತ್ರ ಬರೆದಿದ್ದೀನಿ. ಬೊಗಸೆ ತುಂಬಾ ಪ್ರೀತೀನ ನಿನಗಾಗಿ ಇಟ್ಟಿದ್ದೀನಿ. ಪತ್ರನ ಜೋಪಾನವಾಗಿ ನಿನ್ನ ಬೀರುವಿನಲ್ಲಿ ಭದ್ರವಾಗಿಟ್ಟುಕೋ. ಶುಭಾಶಯಗಳು...
ಮತ್ತದೇ ನಿನ್ನ ಮಡಿಲಾಸೆ...
ಇಂತೀ
ನಿನ್ನ ತಂಗಿ

(ಪ್ರಕಟ: http://hosadigantha.in/epaper.php?date=08-19-2010&name=08-19-2010-15)

Wednesday, August 18, 2010

ಸಾವಿನ ಮನೆಯ ‘ನಗು’


ನಮ್ಮನ್ನು ಹೊತ್ತ ವಾಹನ ಮುಂದೆ ಸಾಗುತ್ತಿದ್ದರೆ, ಹಿಂದಿನಿಂದ ವೇಗವಾಗಿ
ಬರುವ ವಾಹನಗಳಿಗೆ ನಮ್ಮನ್ನು ಹಿಂದಿಕ್ಕಿ ಹೋಗುವ ತವಕ. ಪ್ರತಿಯೊಬ್ಬರಿಗೂ ತಮ್ಮ ಗುರಿಯನ್ನು ಮುಟ್ಟುವ ಹಂಬಲ. ಅದಕ್ಕಾಗೇ ಪೈಪೋಟಿ. ಮನಸ್ಸು ಹಿಂದಕ್ಕೆ ಹೊರಳಿತ್ತು.

ಅಂದು ಆ ಜೀವ ತನ್ನ ಪಾಡಿಗೆ ತಾನು ಮಲಗಿತ್ತು, ನಿಶ್ಯಬ್ದವಾಗಿ! ಈ ಲೋಕದ ಪರಿವೇ ಅದಕ್ಕಿಲ್ಲ. ಅದರೆದುರು ನಿಂತು ಅಳುವವರ ಪರಿಚಯ ಅದಕ್ಕಿಲ್ಲ. ಗೋಳಾಡುವವರು ಅವರ ಪಾಡಿಗೆ ಗೋಳಾಡುತ್ತಿದ್ದರು. ಆ ಇಳಿವಯಸ್ಸಿನಲ್ಲಿ ಲೋಕದ ಪರಿವೆಗೆ ‘ಶವ’ವಾಗಿದ್ದ ಆಕೆ,
ಬದುಕಿನ ‘ಪ್ರತಿಬಿಂಬ’ದಂತೆ ಕಾಣುತ್ತಿದ್ದಳು. ಒಂದು ಕಾಲದಲ್ಲಿ ಚಿಗರೆಯಂತೆ ಓಡಾಡಿದ್ದ ಆ ಜೀವ, ಅಂದು ಕೃಶವಾಗಿತ್ತು. ವಯಸ್ಸು ಸೌಂದರ್ಯವನ್ನು ಉಳಿಸಿಕೊಳ್ಳಲಿಲ್ಲ. ಕಣ್ಣುಗಳೂ ಮಸುಕಾಗಿದ್ದವು.

ಸಾವಿನಂಚಿನಲ್ಲಿರುವ ಆ ಮುಖಗಳೂ ಅವಳೆದುರು ನಿಂತು ಅತ್ತವು. ಅವರ ಕಂಗಳಲ್ಲೂ ನಾಳಿನ
ಬದುಕಿನ ಭಯವಿತ್ತು! ಇನ್ನೊಬ್ಬರ ‘ಸಾವ’ನ್ನು ನೋಡುತ್ತಲೇ ನಾಳೆ ಎದುರಾಗುವ ನಮ್ಮ ‘ಸಾವಿನ’ ಕುರಿತು ಚಿಂತಿಸುವುದು ಅದೆಷ್ಟು ಕ್ರೂರ? ಇಷ್ಟೆಲ್ಲಾ ಆದರೂ ದೂರದಲ್ಲಿ ನಿಂತು ನಗುತ್ತಿದ್ದ ಮಗುವಿಗೆ ಅದಾವುದರ ಪರಿವೇ ಇರಲಿಲ್ಲ.

ಆ ಮಗು ಮನೆಯೆದುರು ತೂಗು ಹಾಕಿದ್ದ ತೂಗುದೀಪ ಬೇಕೆಂದು ಹಠ ಹಿಡಿಯುತ್ತಿತ್ತು. ತಣ್ಣನೆ ಮಲಗಿದ್ದ ‘ಅನಾಥ ಜೀವ’ವನ್ನು ನೋಡಿ ನಗುತ್ತಿತ್ತು. ಅಮ್ಮನೊಂದಿಗೆ ಹಾಲು ಕುಡಿಬೇಕೆಂದು ರಚ್ಚೆ ಹಿಡಿಯುತ್ತಿತ್ತು. ತನ್ನ ಲೋಕದಲ್ಲೇ ಹಲವು ವಿಸ್ಮಯಗಳಿಗೆ ಮುನ್ನುಡಿಯಾಗುತ್ತಿತ್ತು.
ಬದುಕಿನ ದಾರಿಯಲ್ಲಿ ನಾಳೆ
ಬರುವ ‘ಸಾವಿನ’ ಸುಳಿವು ಅದಕ್ಕಿರಲಿಲ್ಲ. ಆ ಮುಗ್ಧ ನಗೆಗೆ ಸಾವಿನ ಮನೆಯಲ್ಲೂ ಪುಟ್ಟದೊಂದು ಭರವಸೆ ಮೂಡಿಸುವ ಪ್ರಯತ್ನ.
ಬದುಕು ಅಂದ್ರೆ ಇದೇನಾ?...ಮನವೆಂಬ ಶರಧಿಯಲ್ಲಿ ನೂರಾರು ಪ್ರಶ್ನೆಗಳ ಅಲೆ ಅಲೆಗಳು!
(ಪ್ರಕಟ: http://hosadigantha.in/epaper.php?date=08-12-2010&name=08-12-2010-15