Wednesday, October 27, 2010

‘ಹಸಿರು’ ಕನಸುಗಳು

ಅಂದು ಶ್ರಾವಣ ಮಾಸದ ವೊದಲ ಮಂಗಳವಾರ.
ನನ್ನ ಪುಟ್ಟ ಜಡೆಯಲ್ಲಿ ಮಲ್ಲಿಗೆ ಮಾತಿಗಿಳಿದಿತ್ತು. ಕಿವಿಯಲ್ಲಿ ಕೆಂಪು ಹರಳಿನ ಓಲೆ ತೂಗುಯ್ಯಾಲೆಯಾಡುತ್ತಿತ್ತು. ಕೈಯಲ್ಲಿ ಬಣ್ಣದ ಹೊಸಬಳೆಗಳು ಮಿರಮಿರನೆ ಮಿನುಗುತ್ತಿದ್ದವು. ಕೈಯಲ್ಲಿ ಮದರಂಗಿಯ ಚಿತ್ತಾರ. ನಿತ್ಯ ಹಣೆಯಲ್ಲಿರುತ್ತಿದ್ದ ಸಣ್ಣ ಬಿಂದಿಯನ್ನು ತೆಗೆದು ಅತ್ತೆ ದೊಡ್ಡ ಬಿಂದಿಯನ್ನಿಟ್ಟಿದ್ದರು. ಆ ಬಿಂದಿ ಕೆಳಗಡೆ ಕುಂಕುಮ ನಳನಳಿಸುತ್ತಿತ್ತು. ಕೆನ್ನೆ ಅರಿಶಿನವಾಗಿತ್ತು. ಕೈ ಬೆರಳುಗಳಲ್ಲಿ ಪುಟ್ಟದಾದ ಚಿನ್ನದುಂಗುರ. ಆ ನರುಗೆಂಪು ರೇಷ್ಮೆ ಸೀರೆಯ ಜರಿಯಂಚು ಎದೆಮೇಲೆ ಹೊಳೆಯುತ್ತಿತ್ತು. ಕತ್ತಿನಲ್ಲಿ ‘ಮುತ್ಯೆದೆ’ಯ ರಂಗು...

ನನ್ನನ್ನು ನಾನೇ ನೋಡಿಕೊಳ್ಳುವ ತವಕ. ಕನ್ನಡಿ ಎದುರು ನಿಂತು ನಿಮಿಷಗಟ್ಟಲೆ ಕಳೆದಿದ್ದೆ, ನನ್ನೊಳಗೇ ಸಂಭ್ರಮಿಸಿದ್ದೆ. ತುಟಿಯಂಚಿನಲ್ಲಿ ಖುಷಿಯ ಮುಗುಳುನಗೆ. ‘ಇನ್ನೇನೂ ಕೆಲ ನಿಮಿಷ, ಪುರೋಹಿತರು ಬರುತ್ತಾರೆ. ಬಾಮ್ಮಾ...ಗೌರಿಯನ್ನು ಸಿಂಗರಿಸು’ ಅತ್ತೆಯಮ್ಮನ ಕರೆ ಕೇಳಿದಾಗ, ಜಿಂಕೆಯಂತೆ ಓಡಿ ದೇವರಮನೆಯಲ್ಲಿದ್ದೆ. ಆಗಿನ್ನೂ ಮುಂಜಾವಿನ ಐದೂವರೆ ಗಂಟೆ. ಸೂರ್ಯ ನಿಧಾನವಾಗಿ ಎದ್ದೇಳುತ್ತಿದ್ದ. ‘ಪತಿ ದೇವರು’ ಇನ್ನೂ ಹಾಸಿಗೆ ಬಿಟ್ಟಿರಲಿಲ್ಲ.

ಆ ಪುಟ್ಟ ಜಾಗದಲ್ಲಿ ಚೆಂದದ ರಂಗೋಲಿ ಹಾಕಿದ್ದೆ. ಅದರ ಮೇಲೆ ಮಣೆಯನ್ನಿಟ್ಟು ಗೌರಿ, ಗಣೇಶ ಮತ್ತು ಕಲಶವನ್ನಿಟ್ಟೆ. ಮಲ್ಲಿಗೆ, ಸೇವಂತಿಗೆ ಮತ್ತು ಬಿಡಿಹೂವುಗಳಿಂದ ಗೌರಿ ಸಿಂಗಾರಗೊಂಡಳು.
‘ನೀನೇ ಗೌರಿಯಂತೆ ಕಾಣ್ತಿಯಮ್ಮಾ’ ಮಾವನ ಉವಾಚಕ್ಕೆ ಕೆನ್ನೆಯಲ್ಲಿ ಕಾಮನಬಿಲ್ಲು ಮೂಡಿತ್ತು. ಮನದಲ್ಲಿ ಸಣ್ಣನೆಯ ಭಯ. ‘ಪುರೋಹಿತರು ಹೇಳಿದಂತೆ ಮಾಡು. ವೊದಲ ವರ್ಷ. ಭಕ್ತಿಯಿಟ್ಟು ಪೂಜೆ ಮಾಡು’ ಎಂದಾಗ ಎದೆಯೊಳಗೆ ಢವಢವ. ಪುರೋಹಿತರು ಬಂದೇ ಬಿಟ್ಟರು. ಒಂದೂವರೆ ಗಂಟೆಗಳ ಕಾಲ ಮಂಗಳಗೌರಿ ಪೂಜೆ ಮಾಡಿದ್ದಾಯಿತು. ತಂಬಿಟ್ಟು ದೀಪಗಳನ್ನು ಹಚ್ಚಿಕೊಂಡು ‘ಮಂಗಳ ಗೌರಿ’ ಕಥೆ ಕೇಳಿದ್ದಾಯಿತು.

ಅದು ಮದುವೆಯಾದ ವೊದಲ ವರ್ಷ. ಮಂಗಳಗೌರಿ ವ್ರತ ಮಾಡಿದರೆ ಗಂಡನಿಗೆ ಶ್ರೇಯಸ್ಸು, ಹಿರಿಯರು ಹಾಕಿಕೊಟ್ಟ ಭದ್ರ ಹೆಜ್ಜೆ. ಒಂದಾನೊಂದು ಕಾಲದಲ್ಲಿ ಜಯಪಾಲ ಅನ್ನೋ ರಾಜನಿಗೆ ಭವಾನಿ ದೇವಿಯ ಅನುಗ್ರಹದಿಂದ ‘ಸುಶೀಲೆ’ ಎನ್ನುವ ಮಗಳು ಜನಿಸುತ್ತಾಳಂತೆ. ಅವಳಿಗೂ ಮದುವೆಯಾಗುತ್ತದೆ, ಆದರೆ ಗಂಡ ಅಲ್ಪಾಯುಷಿ. ಸುಶೀಲೆಯು ಗಂಡನ ದೀರ್ಘಾಯುಷ್ಯಕ್ಕಾಗಿ ಮಂಗಳಗೌರಿ ವ್ರತ ಮಾಡಿದ್ದಳಂತೆ...ಅದೂ ಐದು ವರ್ಷಗಳ ಪ್ರತಿ ಶ್ರಾವಣಮಾಸದ, ಪ್ರತಿ ಮಂಗಳವಾರ! ಅವಳದು ಸುಖಸಂಸಾರವಾಯಿತಂತೆ...

ಹೀಗೆಂದು ಪುರೋಹಿತರು ಹೇಳಿಕೊಟ್ಟ ದೀರ್ಘಕಥೆಯನ್ನು ಗಿಳಿಯಂತೆ ಹೇಳಿದಾಗ ಮನಸ್ಸಿನಲ್ಲಿ ಅದೇನೋ ಅವ್ಯಕ್ತವಾದ ಖುಷಿ, ಸಂತೃಪ್ತಿಯ ಬೆಳಕು. ಹೆಣ್ಣಾಗಿದ್ದಕ್ಕೆ ಹೆಮ್ಮೆ. ಪೂಜೆ ಮುಗಿಯಿತು. ಶ್ರಾವಣ ಮಾಸದ ಆ ವೊದಲ ಮಂಗಳವಾರ ಹೊಸ ಬದುಕಿಗೊಂದು ಮುನ್ನುಡಿಯಾದಂತೆ ಭಾಸವಾಯಿತು. ‘ಪತಿ ದೇವರಿಗೆ’ ಪ್ರೀತಿಯಿಂದ ನಮಸ್ಕರಿಸಿದಾಗ ಆತನ ಕಣ್ಣುಗಳಲ್ಲಿ ‘ಹಸಿರು ಕನಸು’ಗಳು ಕಂಗೊಳಿಸುತ್ತಿದ್ದವು!.


Published: http://hosadigantha.in/epaper.php?date=10-28-2010&name=10-28-2010-13

9 comments:

umesh desai said...

ಧರಿತ್ರಿ ನಿಮ್ಮ ಮೊದಲ ಮಂಗಳಾಗೌರಿಯ ಅನುಭವ ಹಿತವಾಗಿತ್ತು. ನಮ್ಮ ಕೆಲವು ಸಂಪ್ರದಾಯಗಳಲ್ಲಿ ಅಪಾರ ಅರ್ಥಇದೆ. ಮಹಾರಾಷ್ಟ್ರದಲ್ಲಿ ಈ ಮಂಗಳಾಗೌರಿಹಬ್ಬ ಭಾಳ ವಿಶೇಷವಾಗಿ ಆಚರಿಸುತ್ತಾರೆ.
ನನ್ನ ಬ್ಲಾಗಿಗೂ ಆಗಾಗ ಬರೋಣವಾಗಲಿ..

ಮನಸು said...

shubhavagali nimge... lekhana tumba chennagide

ವಾಣಿಶ್ರೀ ಭಟ್ said...

aa khushiya anubhavavilla.. bareda reeti tumba chennagide...

ಶ್ರೀನಿಧಿ.ಡಿ.ಎಸ್ said...

hun, nice one..

PARAANJAPE K.N. said...

ಚೆನ್ನಾಗಿದೆ ತ೦ಗೀ

Unknown said...

Super.. Noorkaala sukhavaagi baali..

ವಸಂತ ಕುಮಾರ್ ಆರ್, ಕೋಡಿಹಳ್ಳಿ said...

ಲೇಖನವಂತು ತುಂಬಾ ಚೆನ್ನಾಗಿ ಸೊಗಸಾಗಿ ಮೂಡಿಬಂದಿದೆ ಧನ್ಯವಾದಗಳು.

ವಸಂತ್

ಜಲನಯನ said...

ಚಿತ್ರ ಪುಟ್ಟಿಯ ಮೊದಲ ಮಂಗಳಗೌರಿ ಮಂಗಳಕರವಾಗಿದ್ದು...ಮತ್ತೆ ಮೊದಲ ದೀಪಾವಳಿಗೆ ತಯ್ಯಾರಿ ನಡುವೆ ಒಳ್ಳೆಯ ಲೇಖನ ಬಹಳ ದಿನ ನಿನ್ನ ಬ್ಲಾಗಿಗೆ ಬರಲಿಲ್ಲ ..ಮುನಿಸು ಬೇಡ...ಮತ್ತೆ ...ಆಯ್ತಾ...?/

ಸೀತಾರಾಮ. ಕೆ. / SITARAM.K said...

ಅನುಭವವನ್ನ ಚೆನ್ನಾಗಿ ಹಿಡಿದಿಟ್ಟಿದ್ದಿರಾ