Wednesday, April 8, 2009

ಮೀಸೆ ಜಿರಲೆ ಸಮರದಲ್ಲಿ ನಂದೇ ಮೇಲುಗೈ?!

ಏನು ಬರೆಯಬಹುದು? ವಸ್ತುನೇ ಇಲ್ಲವಲ್ಲ...ಎಂಬ ಚಿಂತೆ ಒಂದು ಬದಿಯಿಂದ ನನ್ನ ತಲೆಯನ್ನು ಕೊರೆಯುತ್ತಿದ್ದರೆ ಥಟ್ಟನೆ ನೆನಪಾಗಿದ್ದು ನನ್ನ ಮನೆಯಲ್ಲಿ ನನಗೂ-ಜಿರಲೆಗೂ ನಡೆದ ಭೀಕರ ಸಮರ. ಕಳೆದ ಅಕ್ಟೋಬರ್ 16ರಂದು ಕೋರಮಂಗಲದ ಸುಂದರ ಮನೆಗೆ ಕಾಲಿಟ್ಟಾಗ ಯಾಕೋ ನನಗೆ ಜಿರಲೆಗಳು ತೀರ ಕಾಟ ಕೊಟ್ಟವು. ಹಲ್ಲಿ, ಜಿರಳೆ,ಇರುವೆ ಗಳಿಲ್ಲದ ಮನೆ ಅದು ಮನೆಯೇ ಅಲ್ಲವ೦ತೆ. ಇವೆಲ್ಲ ನಮ್ಮ ಸಮೀಪ ಸ೦ಬ೦ಧಿಗಳೇನೋ ಅನ್ನುವ೦ತೆ ನಮ್ಮೊದಾನೆ ಸ೦ಘ ಜೀವನ ನಡೆಸುತ್ತ, ನಮ್ಮ ಮನೆಯ ಅ೦ದ, ನೈರ್ಮಲ್ಯವನ್ನು ಹಾಳುಗೆಡವುತ್ತ ನಮ್ಮ ವೈರಿಗಳ೦ತೆ ವರ್ತಿಸ್ತಾವೆ. ಅದ್ಕೇ ಇರ್ಬೇಕು ಕೆಲವರು ಒಲ್ಲದ, ಇಷ್ಟವಿಲ್ಲದ ನೆ೦ಟರನ್ನು "ಹಕ್ಲೆಗಳು"(ತುಳು ಭಾಷೆಯಲ್ಲಿ ಜಿರಲೆಗೆ ಹಕ್ಲೆ ಅಂತಾರೆ) ಅ೦ತ ಜಿರಲೆಗೆ ಹೋಲಿಸಿ ಬೈಯ್ಯುವುದು.


ತಿಂಡಿ ಮಾಡಿಟ್ಟರೆ ಅದರ ಮೇಲೆ ಸವಾರಿ ಮಾಡಿ ಅದನ್ನು ಮತ್ತೆ ತಿನ್ನದಂತೆ ಮಾಡೋದು, ತೊಳೆದಿಟ್ಟ ಪಾತ್ರೆ, ಅಕ್ಕಿ, ತಿಂಡಿ-ತಿನಿಸು ಏನೇ ಮುಚ್ಚಿಡದೆ ಇದ್ದರೆ ಅದರ ಮೇಲೆ ಓಡಾಡಿ ಅದನ್ನು ಮೂಸಿ ನಾವು ಮತ್ತೆ ಅತ್ತ ಹೋಗದಷ್ಟು ಕೆಟ್ಟ ವಾಸನೆ ಬರಿಸುತ್ತಿದ್ದವು. ನನಗಂತೂ ದಿನಾ ಜಿರಲೆ ಓಡಿಸೋದು, ಪಾತ್ರೆ ತೊಳೆಯುವುದು, ಅಂತೂ-ಇಂತೂ ಸ್ವಚ್ಛ ಮಾಡೋದ್ರಲ್ಲೇ ಅರ್ಧ ಸಮಯ ವ್ಯರ್ಥ ಆಗುತ್ತಿತ್ತು. ಎಂಥ ಮಾಡೋದು ಮಾರಾಯ್ರೆ? ಎಲ್ಲಿ ನೋಡಿದ್ರೂ ಜಿರಲೆ ಕಾಟ. ರಾತ್ರಿ ಎದ್ದು ದೀಪ ಹಚ್ಚಿದ್ರೆ ಥರ ಥರ ಓಡಿ ಮೂಲೆ ಮೂಲೆ ಸೇರೋ ಜಿರಲೆಗಳನ್ನು ಕಂಡಾಗ ನಂಗೆ ಸಿಟ್ಟು ಬಂದು ನಿದ್ದೆ ಮಾಡದಿದ್ರೂ ಪರವಾಗಿಲ್ಲ ಒಂದೆರಡು ಕೊಂದು ಮಲಗುತ್ತಿದ್ದೆ. ಅದಕ್ಕೆ ನಮ್ಮ ಓನರ್ ಆಂಟಿ ಒಂದು ಉಪಾಯ ಹೇಳಿದ್ರು...ನೀನು ಜಿರಲೆ ಕಡ್ಡಿ ಹತ್ತಿಸಿಬಿಟ್ಟು..ಒಂದು ಇಡೀ ದಿನಾ ಮನೆ ಬಾಗಿಲು ಹಾಕಿ ನೀ ಹೊರಗಡೆ ಹೋಗಿರು...ಮತ್ತೆ ನೀ ವಾಪಾಸು ಬರುವಾಗ ನಿನ್ನ ರೂಮಲ್ಲಿ ರಾಶಿ ರಾಶಿ ಹೆಣಗಳು ಬಿದ್ದಿರುತ್ತವೆ ಅಂತ. ಒಳ್ಳೆ ಉಪಾಯ ಅನಿಸ್ತು..ಮತ್ತೆ ಶವ ಸಂಸ್ಕಾರ ಎಲ್ಲವನ್ನೂ ನಾನೇ ಮಾಡಬೇಕಲ್ಲಾ...ಅದಕ್ಕೆ ಮನೆಯಿಂದ ಹೊರಗೆ ಹೋಗೋದು ಬೇಡ..ನಾ ಮನೆಯಲ್ಲಿದ್ದುಕೊಂಡೇ ಕಡ್ಡಿ ಹಚ್ಚಿಟ್ಟು. ..ಶವ ಬಿದ್ದ ಹಾಗೇ ಪ್ಲಾಸ್ಟಿಕ್ ಕವರ್ ಗೆ ತುಂಬಿಸಿಬಿಡೋದು ಅಂದುಕೊಂಡು ಹಾಗೇ ಮಾಡಿದೆ. ಹುಡುಗೀಯರು ಮೀಸೆ ಇರೋ ಗಂಡಸರಿಗಿಂತಲೂ ಮೀಸೆ ಇರೋ ಜಿರಳೆಗಳಿಗೆ ಅದಕ್ಕೆ ಹೆದರುತ್ತಾರೆ೦ಬ ನ೦ಬಿಕೆ ಇದೆ. ನಂಗಂತೂ ಯಾರ ಮೀಸೆ ಹೆದರಿಕೆನೂ ಇಲ್ಲ ಬಿಡಿ. ಮೊನ್ನೆ ನಮ್ಮ ಸಾಗರದಾಚೆ ಇರೋ ಅಣ್ಣನೊಬ್ಬ ಹೇಳ್ತಾ ಇದ್ದ, ಆ ಜಿರಲೆಗಳ ಮೀಸೆ ಹಿಡಕೊಂಡು ನನ್ ಹೆಂಡತಿಗೆ ಹೆದರಿಸ್ತಾ ಇದ್ದೆ ಅಂತ.

ಮೊನ್ನೆ ಭಾನುವಾರ. ಬೆಳಿಗ್ಗೆ ಆರು ಗಂಟೆಗೆ ಎದ್ದು ಕಡ್ಡಿ ಹಚ್ಚಿಡುವ ಕೆಲಸ ಮಾಡಿದೆ. ಹಾಸಿಗೆಯಲ್ಲಿದ್ದ ನನ್ನ ತಮ್ಮ ಜಿರಲೆ ಕಡ್ಡಿಯ ಕೆಟ್ಟ ವಾಸನೆಗೆ ಜಿರಲೆ ಥರನೇ ವಿಲವಿಲ ಒದ್ದಾಡತೊಡಗಿದ್ದ. ಒಂದೆಡೆ ಬೈಗುಳಗಳ ಸುರಿಮಳೆ. ನಾನು ಕೈ , ಮೂಗು-ಬಾಯಿಗೆ ಗ್ಲೌಸ್ ಹಾಕೊಂಡು ಕೈಗೆ ಇನ್ನೊಂದು ಪ್ಲಾಸ್ಟಿಕ್ ಕಟ್ಟಿಕೊಂಡು..ಜಿರಲೆ ಕಡ್ಡಿ ವಾಸನೆ ಸಹಿಸಲಾಗದೆ ತಲೆ ತಿರುಗಿ ಜಿರಲೆಗಳು ಪಟಪಟನೆ ನೆಲದ ಮೇಲೆ ಬೀಳುತ್ತಿದ್ದವು. ಮತ್ತೊಂದೆಡೆ ಕೆಟ್ಟ ವಾಸನೆಗೆ ಮೂಲೆಯಿಂದ ಮೂಲೆಗೆ ಓಡಾಡುವ ಜಿರಲೆಗಳು, ಇನ್ನೊಂದೆಡೆ ಸಿಕ್ಕೆಲೆಲ್ಲಾ ತಲೆ ಮೇಲೆ , ಬೆನ್ನ ಮೇಲೆ ಬೀಳೋ ಜಿರಲೆಗಳು, ಜಿರಲೆ ಮರಿಗಳು..ಮನೆಯೆಲ್ಲಾ ಕೆಟ್ಟ ವಾಸನೆ. ಕೆಲವು ಸಾಯುತ್ತಿದ್ದರೆ, ಇನ್ನು ಕೆಲವು ಓಡುವಾಗ ನಾನು ಕೈಯಿಂದ ಹಿಡಿದು ಅದರ ತಲೆಯನ್ನೆಲ್ಲಾ ಜಜ್ಜಿ ಕೊಂದು ಬಿಡುತ್ತಿದ್ದೆ. ಕೊಂದು ಕೊಂದು, ಜಿರಲೆ ಹಿಂದೆ ಓಡಾಡಿ ನನ್ನ ಕೈ- ಕಾಲುಗಳೂ ಸುಸ್ತು ಹೊಡೆದಿದ್ದವು. ಆಶ್ಚರ್ಯವೆಂದರೆ ಅಂದು ಆರು ಗಂಟೆಗೆ ಎದ್ದರೂ ನಾನು ಹಲ್ಲಜ್ಜಿರಲಿಲ್ಲ., ಮುಖ ತೊಳೆದಿರಲಿಲ್ಲ...ತಮ್ಮ ಬೈದುಕೊಳ್ಳುತ್ತಲೇ ಇದ್ದ..ನೀನು ಊರಲ್ಲಿ ಹೊಲದಲ್ಲಿ ಕೆಲಸ ಮಾಡಕೆ ಲಾಯಕ್ಕು ಅನ್ತಾ ಇದ್ದ. ಯಾರು ಏನಂದ್ರೂ ನಂಗಂತೂ ಜಿರಲೆ ಕೊಲ್ಲಲೇ ಬೇಕಿತ್ತು..ಆ ಸಮರದಲ್ಲಿ ನಂಗೆ ಜಯ ಸಿಗಲೇಬೇಕಿತ್ತು.

ಗಂಟೆ ಹನ್ನೊಂದು...ಹೊಟ್ಟೆ ಚುರುಗುಟ್ಟುತ್ತಿತ್ತು. ನನ್ನ ಪ್ರೀತಿಯ ಅಣ್ಣ ನಿರಂಜನಣ್ಣನ ಫೋನ್..
"ನಾ ನಿನ್ನ ಮನೆ ಬಳಿ ಇದ್ದೀನಿ....ಮನೆಯಲ್ಲೇ ಇದ್ದೀಯಾ? ...." ಎಂಥ ಕಿರಿಕಿರಿಯಪ್ಪಾ ಅಂದುಕೊಂಡೆ ಮನಸ್ಸಲ್ಲಿ. ಎಂಥ ಮಾಡೋದು? ನೀವು ಮನೆಗೆ ಬರಬೇಡ ಅನ್ನಕ್ಕೆ ಸರಿಯಾಗಲ್ಲ....ಅದೂ ಮೊದಲ ಬಾರಿಗೆ ಮನೆ ಬಳಿ ಬಂದು ತಂಗಿ ಜೊತೆ ಮಾತನಾಡಬೇಕು ಎಂದು ಖುಷಿಯಿಂದ ಬಂದಿದ್ದಾರೆ. ಯಾರ ಮನಸ್ಸಾದ್ರೂ ಬರೋದು ಬೇಡ ಅನ್ನೋದೇ? ಆಯ್ತು...ಬಾ ಅಣ್ಣ ಅಂದು...ಅಲ್ಲೇ ಪಕ್ಕದಲ್ಲಿನ ಹೊಟೇಲಿನಿಂದ ತಿಂಡಿ ತಂದೆ. ಅಣ್ಣನನ್ನು ಮನೆಯೊಳಗೆ ಕರೆದುಕೊಂಡು ಬರುತ್ತಿದ್ದರೆ...ಕೆ.ಆರ್. ಮಾರ್ಕೆಟ್ ಥರ ಗಜಿಬಿಜಿ ಅನ್ನೋ ಮನೆ ನೋಡಿ ಅಣ್ಣ ಏನಂತಾರೋ ಅನ್ನೋ ಪುಟ್ಟ ಭಯ ಮನಸ್ಸಿನಲ್ಲಿ. ಇರಲಿ ಬಿಡಿ..ಅಣ್ಣ ಏನಾದ್ರೂ ಹೇಳಿದ್ರೆ...ಅವರಿಗೆ ಮಂಗಳಾರತಿ ಮಾಡಿಬಿಡೋದು ಅಂದುಕೊಂಡು ಕರೆದುಕೊಂಡು ಬಂದೆ...,ಜಿರಲೆ ವಾಸನೆ,, ಜಿರಲೆ ಕಡ್ಡಿ ವಾನೆ, ಇನ್ನೊಂದು ಮತ್ತೂ ಪ್ರಾಣ ಭಯದಿಂದ ಓಡಾಡುತ್ತಿದ್ದ ಜಿರಲೆಗಳು! ಬದುಕಿನ ಉಳಿವಿಗಾಗಿ ಹಪಿಹಪಿಸುತ್ತಿದ್ದ ಜಿರಲೆಗಳ ಮಧ್ಯೆ...ನನ್ನಣ್ಣನಿಗೆ ಸೆಟ್ ದೋಸೆ, ಟೀ ನೀಡಿ ಖುಷಿಪಟ್ಟಿದ್ದೆ. ಜೊತೆಗೆ ಅಣ್ಣನಿಂದ ನಾ ಮಾಡಿದ ಟೀಗೂ ಶಹಭಾಷ್ ಗಿರಿ ಸಿಕ್ತು. ಅದು ಮತ್ತೊಂದು ಖುಷಿ. ಯಾವಾಗಲೂ ನಂಗೆ ಅಣ್ಣದಿರಿಂದ ಶಹಭಾಷ್ ಗಿರಿ ಗಿಟ್ಟಿಸಿಕೊಳ್ಳೋದಂದ್ರೆ ಭಾರೀ ಇಷ್ಟ. ಒಂದು ಗಂಟೆ ನನ್ನ ಜೊತೆ ಖುಷಿ ಖುಷಿಯಾಗಿ ಕಳೆದ ಅಣ್ಣ ಮತ್ತೆ ನನ್ನ ಬಿಟ್ಟು ಅವರ ದಾರಿ ಹಿಡಿದರು. ಜಿರಳೆ ಕೊಲ್ಲುವ ಉದ್ದೇಶದಿ೦ದ ಟಿ.ವಿ.ಜಾಹೀರಾತಿನಲ್ಲಿ ತೋರಿಸುವ೦ತೆ ನಾನು ಕೈಗೆ ಗ್ಲೌಸ್ ಹಾಕಂಡು ಸಮರ ಸಿ೦ಹಿಣಿಯ೦ತೆ ಗರ್ಜಿಸುತ್ತ, ಜೀವ ಉಳಿಸಲು ತತ್ತರಿಸುತ್ತಿದ್ದ ಜಿರಲೆಗಳ ಬೆನ್ನಟ್ಟಿ ಹೊಡೆಯುತ್ತಿದ್ದ ದೃಶ್ಯವನ್ನು ಕ೦ಡು ಮೊದಲ ಬಾರಿ ಮನೆಗೆ ಬ೦ದಿದ್ದ ಅಣ್ಣ ಯಾಕೋ ಹೆಚ್ಚು ಮಾತನಾಡಲೇ ಇಲ್ಲ. ನಾನು ಮತ್ತೆ ನನ್ನ ಸಮರ ಮುಂದುವರೆಸಿದ್ದೆ..ಸಮರ ಕಾರ್ಯಾಚರಣೆ ಮುಗಿಸಿ,ಕದನವಿರಾಮ ಘೋಷಿಸಿ, ಮನೆ ಶುಚಿಗೊಳಿಸಿ, ಸ್ನಾನ ಮಾಡಿ ಹೊರಬ೦ದು ಇನ್ನೇನು ಜಿರಳೆ ಗಳ ಸಮಸ್ಯೆ ಬಗೆಹರಿಯಿತು ಎ೦ಬ ಖುಷಿಯಲ್ಲಿ, ಜೊತೆಗೆ ಅಣ್ಣನ ಜೊತೆ ತಿಂಡಿ ತಿಂದ ಖುಷಿಯಲ್ಲಿ ಮನಸ್ಸು ತೂಗು ಉಯ್ಯಾಲೆಯಲ್ಲಿ ನಲಿದಾಡುತ್ತಿದ್ದಾಗ ಸೂರ್ಯ ನೆತ್ತಿಯಿಂದ ಕೆಳಗಿಳಿಯುತ್ತಿದ್ದ. ಒ೦ದು ಪುಸ್ತಕವನ್ನು ಓದಿಗೆ೦ದು ಅಲಮಾರದಿ೦ದ ತೆಗೆಯಹೊರಟಿದ್ದೆ. ಪ್ರತ್ಯಕ್ಷ ವಾಯಿತಲ್ಲ ಇನ್ನೊ೦ದು,ಮತ್ತೊ೦ದು ಜಿರಳೆ. ಇದೊ೦ದು ಮುಗಿಯದ ಸಮಸ್ಯೆ... ನಮ್ಮ ದೇಶವನ್ನು ಕಾಡುತ್ತಿರುವ ಭಯೋತ್ಪಾದಕರಂತೆ, ಸರ್ಕಾರಿ ಕಚೇರಿ, ವಿಧಾನಸೌಧ-ಶಾಸಕರ ಭವನದಲ್ಲಿರುವ 'ಭ್ರಷ್ಟಾಸೂರ'ರಂತೆ!

ಈಗ ಮತ್ತೊಂದು ಸಮರಕ್ಕೆ ಸಿದ್ಧವಾಗುತ್ತಿದ್ದೇನೆ....ಮುಂದಿನ ಸಮರದಲ್ಲಿ ಗ್ಯಾರಂಟಿ ಪೂರ್ತಿ ಗೆಲುವು ನಂದೇ ಎನ್ನೋ ವಿಶ್ವಾಸ ನನ್ನದು.

Sunday, April 5, 2009

ಸಂಗೀತ ಅಮ್ಮನಂತೆ..?!

ಸಂಗೀತ ಅಮ್ಮನಂತೆ..
ಕೈ ಕೊಟ್ಟು ಹೋದ ಗೆಳೆಯ-ಗೆಳತಿಯ ನೆನಪು ಕಾಡಿದಾಗ, ಆಫೀಸ್ ನಲ್ಲಿ ಬಾಸ್ ಕಿರಿಕಿರಿ ಮಾಡಿದಾಗ, ಸ್ಕೂಲ್ ನಲ್ಲಿ ಟೀಚರ್ ಬೈದಾಗ, ನಿಮ್ಮ ಆತ್ಮೀಯ ಸ್ನೇಹಿತರು ಮಾತು ಬಿಟ್ಟಾಗ, ಅಮ್ಮನತ್ತ ಹುಸಿಮುನಿಸು ತೋರಿ ಕೋಪದಿಂದ ಫೋನ್ ಕುಕ್ಕಿ ಮತ್ತೆ ಮನಸ್ಸು ಭಾರವಾದಗ, ಜೊತೆಗಿದ್ದ ಆಪ್ತರು ಜೀವನಪರ್ಯಂತ ದೂರವಾಗೋ ಸನ್ನಿವೇಶ ಎದುರಾದರೆ, ಜೀವನದ ಜಂಜಾಟಗಳಿಂದ ಬದುಕು ಭಾರವೆನಿಸಿದಾಗ, ಸಂಬಂಧಗಳ ಕೊಂಡಿ ಕಳಚಿ ಹೃದಯ ಚಿರ್ರೆಂದು ನೋವಿಂದ ಚೀರಿದಾಗ, ಯಾರಲ್ಲೂ ಹೇಳಿಕೊಳ್ಳಲಾಗದ ಅವ್ಯಕ್ತ ದುಃಖಭಾವ ನಿಮ್ಮ ನಿರಂತರ ಕಾಡಿದಾಗ....ನನಗೆ ಸಂಗೀತ ಅಮ್ಮನಂತೆ ಅನಿಸುತ್ತೆ..ಒಂದಲ್ಲ..ಎರಡಲ್ಲ..ಎಷ್ಟೋ ಬಾರಿ ನನಗೆ ಹೀಗನಿಸಿದ್ದುಂಟು. ಅಮ್ಮನಪ್ಪುಗೆಯ ಹಿತ, ಖುಷಿ, ನೆಮ್ಮದಿ ನೀಡಿದುಂಟು.

ಹೌದು..ಮತ್ತೆ ಹೇಳ್ತೀನಿ ಸಂಗೀತ ಅಮ್ಮನಂತೆ. ಪ್ರೀತಿಯ ಮಡಿಲಾಗುತ್ತೆ. ಮಮತೆಯ ಸಂತೈಸುವ ಒಡಲಾಗುತ್ತೆ. ಅಕ್ಕರೆಯಿಂದ ಲಾಲಿ ಹಾಡುತ್ತೆ. ನಿದ್ದೆ ಬಾರದ ಕಣ್ಣುಗಳಿಗೆ ಜೋಜೋ ಹಾಡಿ ತಟ್ಟಿ ನಿದ್ದೆ ಬರಿಸುತ್ತೆ. ಹಸಿವಿನಿಂದ ಅಳೋ ಮಗುವಂತ ಮನಸ್ಸಿಗೆ ಹಾಲುಣಿಸುತ್ತೆ. ಪ್ರೀತಿಯ ಬಂಧನದಲ್ಲಿ ಬಿಗಿದಪ್ಪು ನಮ್ಮ ಹೃದಯ ಹಗುರಾಗಿಸುತ್ತೆ. ಸಾಹಿತ್ಯ, ಭಾಷೆ, ಲಯ, ಮಾಧುರ್ಯ ಎಲ್ಲವನ್ನೂ ಮೀರಿದ ಅವ್ಯಕ್ತವಾದ ಖುಷಿಯ ಗಳಿಗೆಯೊಂದನ್ನು ಸುಮಧುರ ಹಾಡೊಂದು ನಮಗೆ ನೀಡುತ್ತೆ.

ನಂಗೆ ಹಾಡು ಬರೆಯಕೆ ಬರಲ್ಲ. ಲಯ, ತಾಳ ಇದಾವುದೂ ತಿಳಿದಿಲ್ಲ. ಆದರೆ ಒಂದು ಸುಂದರ ಕವಿತೆಯನ್ನು ಮನಸ್ಸು ಸಂತೋಷದಿಂದ ಅನುಭವಿಸುತ್ತೆ. ಸುಮಧುರ ಇಂಪು ಗೀತೆಯ ಅನನ್ಯ ಅನುಭೂತಿಗೆ ಹೃದಯ ಮನಸ್ಸು ಕಿವಿಯಾಗುತ್ತೆ. ಒಂದಷ್ಟು ಹೊತ್ತು..ಒಂದಷ್ಟು ಕ್ಷಣ ನಾನಲ್ಲಿ ನನಗೆ ಗೊತ್ತಿಲ್ಲದೆಯೇ ಕಳೆದುಹೋಗುತ್ತೇನೆ. ಕುವೆಂಪು, ಬೇಂದ್ರ ಅಜ್ಜ, ಕೆ ಎಸ್ ಎನ್, ಅಡಿಗರ ಪ್ರೀತಿ, ಜೀವನದ ಕುರಿತಾದ ಸುಂದರ ಕವಿತೆಗಳು ನಮ್ಮ ಬದುಕಿನಲ್ಲೂ ಮಾತಿಗಿಳಿದಂತೆ ಭಾಸವಾಗುತ್ತದೆ. ಮನಸ್ಸು ಮಲ್ಲ್ಲಿಯಾಗುತ್ತದೆ. ಹೃದಯ ಆರ್ದೃ ಗೊಳ್ಳುತ್ತೆ. ಬದುಕೆಲ್ಲಾ ನಾದಮಯ ಅನಿಸಿಬಿಡುತ್ತೆ.

ಸುನಾಮಿಯಂತೆ ಥಟ್ಟನೆ ಬಂದಪ್ಪಳಿಸುವ ಅಮ್ಮನ ನೆನಪು, ಅಮ್ಮನ ಲಾಲಿ ನೆನಪು, ಎದೆಯಾಳದಲ್ಲಿ ಗುಬ್ಬಚ್ಚಿಯಂತೆ ಅವಿತಿದ್ದ ನೆನಪು, ಅಮ್ಮನೂರಿನ ಹಸಿರೆಲೆಗಳ ಹಳ್ಳಿ ನೆನಪು, ಮತ್ತೆ ಮತ್ತೆ ಮನದಲ್ಲಿ ಮೆರವಣಿಗೆ ಮಾಡುವ ಸುಂದರ ಕುಮಾರಧಾರ ನೇತ್ರಾವತಿ ನೆನಪು, ಅಣ್ಣ-ತಮ್ಮನ ನೆನಪು, ಬದುಕುಳಿಯದ ಅಜ್ಜ-ಅಜ್ಜಿಯ ನೆನಪು, ಬಿಟ್ಟು ಹೋದ ಅಪ್ಪನ ನೆನಪು, ನಮ್ಮ ಪುಟ್ಟ ಕರು ಅಪ್ಪಿಯ ನೆನಪು, ಕಳೆದುಹೋದ ಗೆಳತಿಯ ನೆನಪು...ಕಾಡಿದಾಗ ನಾ ಸುಮಧುರ ಹಾಡುಗಳಿಗೆ ಕಿವಿಯಾಗುತ್ತೇನೆ.

ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೇ
ಮಲಗು ಚೆಲ್ವಿನ ತೆರೆಯೆ ಮಲಗು ಒಲ್ಮೆಯ ಸಿರಿಯೆ
ಮಲಗು ತೊಟ್ಟಿಲ ಸಿರಿಯೆ ದೇವರಂತೆ
ಮಲಗು ಮುದ್ದಿನ ಗಿಣಿಯೆ ಮಲಗು ಮುತ್ತಿನ ಮಣಿಯೆ
ಮಲಗು ಚಂದಿರನೂರ ಕೂಗುವೆಯಂತೆ ....

ಹಾಡು ಕೇಳಿದರೆ ಸಾಕು ಅಮ್ಮ ಬಂದು ತೊಡೆ ಮೇಲೆ ಮಲಗಿಸಿ ತಟ್ಟಿ ಲಾಲಿ ಹಾಡಿದಂತಾಗುತ್ತೆ. ನನ್ನ ಕೋಣೆಯ ಕಿಟಕಿ ಸಂದಿನಿಂದ ಕಾಣುವ ಚಂದಿರಿನ ಮುಖ ನೋಡುತ್ತಲೇ ನಾ ಅರಿವಿಲ್ಲದೆ ನಿದ್ದೆ ಬಾರದ ಕಣ್ಣುಗಳು ನಿದ್ದೆಯ ಮಂಪರಿಗೆ ಜಾರುತ್ತವೆ.
ಏನೂ ಬೇಡ..ಮನಸ್ಸು ಸರಿ ಇಲ್ಲ..ನಂಗೇನೂ ಮಾಡಕ್ಕಾಗಲ್ಲ ಎಂದು ಮನಸ್ಸು ರಾಗ ಎಳೆಯುವಾಗಲೇ ಕನ್ನಡದ ಒಳ್ಳೆಯ ಕವಿತೆಗಳ ಇಂಪನ್ನು ಅನುಭವಿಸಿ. ನಿಮ್ಮ ಮನಸ್ಸಿಗೆ ಖುಷಿಯಾಗದಿದ್ದರೆ ಮತ್ತೆ ಹೇಳಿ!

ಕೊನೆಗೆ,
ನಿಮ್ಮ ಖುಷಿಗೆ ಗೋಪಾಲಕೃಷ್ಣ ಅಡಿಗರ 'ಮಹಾಪೂರ' ಕವನದ ಸಾಲುಗಳು...
ಅಮೃತವಾಹಿನಿಯೊಂದು ಹರಿಯುತಿದೆ ಮಾನವನ
ಎದೆಯಿಂದಲೆದೆಗೆ ಸತತ.........
ಇಂದೆಲ್ಲ ನಾಳೆ ಹೊಸ ಭಾನು ಬಗೆ ತೆರೆದೀತು...
ಕರಗೀತು ಮುಗಿಲ ಬಳಗಾ....
ಇಂದೆಲ್ಲ ನಾಳೆ ಹೊಸ ಭಾನು ಬಗೆ ತೆರೆದೀತು...
ಕರಗೀತು ಮುಗಿಲ ಬಳಗಾ....
ಬಂದೀತು ಸೊಗೆಯ ಮಳೆ..
ತುಂಬೀತು ಎದೆಯ ಹೊಳೆ...
ಬಂದೀತು ಸೊಗೆಯ ಮಳೆ..
ತುಂಬೀತು ಎದೆಯ ಹೊಳೆ...
ತೊಳೆದೀತು ಒಳಗು ಹೊರಗಾ...


ಹೌದು..ಸಂಗೀತ ಅಮ್ಮನಂತೆ...?!!

Wednesday, April 1, 2009

ಸುರೇಶ ಬೆಂಗಳೂರು ಸಿಟಿ ನೋಡಿದ್ದು

ಆತನ ಹೆಸರು ಸುರೇಶ. ಕಾಸರಗೋಡಿನ ಪುಟ್ಟದೊಂದು ಹಳ್ಳಿ ಅವನ ಮನೆ. ಹೊಲ-ಗದ್ದೆ ಕೆಲಸಗಳನ್ನೇ ನೋಡಿಕೊಳ್ಳುತ್ತಿದ್ದ ಈತ ಮುಗ್ಧ ಯುವಕ. ಪೋಲಿ-ಪುಂಡಾಟಿಕೆಯಿಲ್ಲ, ಹುಡುಗ್ರ ಜೊತೆ ಸೇರಿ ಓಡಾಟವಿಲ್ಲ. ಅಮ್ಮನ ಮುದ್ದಿನ ಮಗ. ಅವನಾಯಿತು, ಹೊಲಗದ್ದೆಗಳ ಕೆಲಸ, ತೋಟದ ಕೆಲಸ, ದನಕರುಗಳನ್ನು ನೋಡಿಕೊಳ್ಳೊದು, ಬೆಳಿಗೆದ್ದು ಹಾಲು ಕರೆದು ಡೈರಿಗೆ ಮಾರಿ ಬರುವುದು..ಈಗ ಹಳ್ಳಿಯ ಸುಂದರ ಸೊಬಗಿನಲ್ಲಿ ಬೆಳೆದ ಮುಗ್ಧ, ಪ್ರಾಮಾಣಿಕ ಸುರೇಶನಿಗೆ ನಗರ ಅಂದ್ರೆ ಅದೇನೋ ಕುತೂಹಲವಂತೆ. ಒಂದು ಸಲ ಅವನ ಸಂಬಂಧಿಕ ಹುಡುಗನೊಬ್ಬ ಸುರೇಶನನ್ನು ಬೆಂಗಳೂರಿಗೆ ಕರೆದುಕೊಂಡು ಬಂದ.

ವಿಲ್ಸನ್ ಗಾರ್ಡ್ನ್ನಲ್ಲಿ ಸುರೇಶನ ಸಂಬಂಧಿಕನ ರೂಮ್. ಎಲ್ಲಾ ಬ್ಯಾಚುಲರ್ ಹುಡುಗ್ರು. ಸುರೇಶನೂ ಒಂದು ವಾರ ಬೆಂಗಳೂರು ಸುತ್ತಿ ಹೋಗೋಣ ಅಂತ ಬಂದಿದ್ದ. ರೂಮ್ ಹುಡುಗ್ರು ಎಲ್ಲಾ ನಿತ್ಯ ಕೆಲಸಕ್ಕೆ ಹೋಗೋರು. ರಜೆಯಿಲ್ಲ. ಸುರೇಶನ ಬಳಿ, ಬೆಂಗಳೂರು ರೌಂಡ್ ಹಾಕೊಂಡು ಬಾ ಅಂದ್ರತೆ. ಮೆಜೆಸ್ಟಿಕ್ ಗೆ ಹೋದ್ರೆ ಬೆಂಗಲೂರು ಸುತ್ತಾಕೆ ತುಂಬಾ ಸುಲಭ..ಎಲ್ಲಾ ಕಡೆಗೂ ಹೋಗುವ ಬಸ್ಸುಗಳು ಮೆಜೆಸ್ಟಿಕ್ ನಿಂದಲೇ ಹೊರಡುತ್ತವೆ ಅಂದ್ರಂತೆ. ಸರಿ ಎಂದ ಸುರೇಶ ಬೆಂಗಳೂರು ಸಿಟಿ ಸುತ್ತೋಕೆ ರೆಡಿಯಾದ. ಬೆಳಿಗ್ಗೆ 10ರ ಸುಮಾರಿಗೆ ಮೆಜೆಸ್ಟಿಕ್ ಗೆ ಹೊರಟ. ಮೆಜೆಸ್ಟಿಕ್ ನಿಂದ ನಿಂತು ನೋಡಿದರೆ ಎದುರುಗಡೆ ಬೆಂಗಳೂರು ಸಿಟಿ ನೈರುತ್ಯ ರೈಲ್ವೆ ಕಾಣಿಸುತ್ತೆ. ಸುರೇಶ ಬೆಂಗಳೂರು ಸಿಟಿ ಅಂದ್ರೆ ಇದೇ ಅಂದುಕೊಂಡು ಸೀದಾ ರೈಲ್ವೆ ನಿಲ್ದಾಣ ಸುತ್ತಾಕೆ ಹೊರಟ.

ಗಿಜಿಗಿಡುವ ಜನರು, ಲಗೇಜುಗಳು, ಕೂಲಿಗಳು...ಇವನಿಗೆ ನೋಡಿಯೇ ತಲೆ ಗಿರ್ರ ಅನಿಸ್ತಂತೆ. ಒಂದೆಡೆ ಹೊಸ ಜಾಗ, ಅಪರಿಚಿತ ಮುಖ. ಆದರೂ ನೋಡಿಕೊಂಡು ಬಿಡೋಣ ಅಂತ ಪ್ಲಾಟ್ ಫಾರ್ಮ್ ಒಳಗೆ ಹೋಗಿದ್ದಾನೆ. ರೈಲುಗಳನ್ನೆಲ್ಲಾ ನೋಡುತ್ತಿದ್ದಾನೆ. ಕೈಯಲ್ಲಿ ಪ್ಲಾಟ್ ಫಾರ್ಮ ಟಿಕೆಟ್ ಇಲ್ಲ. ಅದು ಮಾಡಿಸಿಕೊಬೇಕು ಅಂತ ಅವನಿಗೆ ಗೊತ್ತೂ ಇಲ್ಲ. ಹಾಗಂತ ಯಾರೂ ಹೇಳೂ ಇಲ್ಲ. ತಪಾಸಣೆಗೆ ಬಂದ ಅಧಿಕಾರಿಗಳು ಬಂಧಿಸಿಬಿಟ್ಟರು. ತಪಾಸಣೆ ಮಾಡಿದ್ರು. ಈತ ಅಳೋದು ಬಿಟ್ರೆ ಬೇರೇನೂ ಮಾಡ್ತಿಲ್ಲ. ಸಂಜೆತನಕ ಅತ್ತು ಅತ್ತು ಹಣ್ಣಾದ ಮೇಲೆ ಇವನ ರೂಮ್ ಮೆಟ್ ಗಳು ಹೋಗಿ ಆಮೇಲೆ ಕರೆದುಕೊಂಡು ಬಂದ್ರು. ಅಂದೇ ನಾ ಊರಿಗೆ ಹೋಗ್ತೀನಿ ಅಂತ ರಚ್ಚೆ ಹಿಡಿದ ಸುರೇಶ ಬಸ್ಸು ಹತ್ತಿ ಹೊರಟೇಬಿಟ್ಟ. ಮತ್ತೆಂದೂ ಬೆಂಗಳೂರಿಗೆ ಮುಖ ಹಾಕಿ ನೋಡೇ ಇಲ್ಲ.
ಇತ್ತೀಚೆಗೆ ನನ್ನ ತಮ್ಮನೊಬ್ಬನನ್ನು ಊರಿಂದ ಇಲ್ಲಿಗೆ ಕರೆಸಿದೆ. ಬಂದಿದ್ದೇ ತಡ ಅಕ್ಕಾ ಊರಿಗೆ ಹೋಗ್ತೀನಿ..ಇಲ್ಲಿ ಬೋರ್ ಆಗುತ್ತೆ ಅಂತ ಜಗಳವಾಡಕೆ ಶುರುಹಚ್ಚಿದ. ಎರಡು ದಿನದಲ್ಲಿ ನಾ ಕಳಿಸಿಕೊಟ್ಟೆ. ಅವನ ಬಸ್ಸು ಹತ್ತಿಸಕೆ ಮೆಜೆಸ್ಟಿಕ್ ತನಕ ನಾನು ನಮ್ಮ ಸಂಬಂಧಿಕರೊಬ್ಬರ ಜೊತೆ ಹೋಗುತ್ತಿದ್ದಂತೆ ಅವರು ನನ್ ತಮ್ಮನಿಗೆ ಸುರೇಶ ಬೆಂಗಳೂರು ಸಿಟಿ ನೋಡಿದ ಕಥೆಯನ್ನು ವಿವರಿಸಿದ್ದರು. ಈವಾಗ ಸುರೇಶ ಮದುವೆಯಾಗಿ ಆರಾಮವಾಗಿ ಊರಲ್ಲಿದ್ದಾನೆ.

ನೋಡ್ರೀ ಈ ಸಲ ಧರಿತ್ರಿ ನಿಮ್ ಕಣ್ಣಲ್ಲಿ ನೀರು ತರಿಸಿಲ್ಲ..ನಗೋ ಥರ ಬರೆಯೋಕೆ ಬರಲ್ಲ..ಆದ್ರೂ ಅತ್ತ ನಗೂನು ಅಲ್ಲ ಇತ್ತ ಅಳೂನು ಅಲ್ಲದ ಘಟನೆಯನ್ನು ಬ್ಲಾಗಿಸಿದ್ದೇನೆ. ಆಗಾಗ ನೆನಪಾಗುವ ಸುರೇಶನ ಅವಸ್ಥೆಗೆ ನಂಗೇ ನಗಬೇಕೋ ಅಳಬೇಕೋ ಗೊತ್ತಾಗ್ತಿಲ್ಲ ಮಾರಾಯ್ರೆ.

Monday, March 23, 2009

ತವರೂರ ಮನೆ ನೋಡ ಬಂದೆ...

ಮಲಗು ಚೆಲ್ವಿನ ತೆರೆಯೆ ಮಲಗು ಒಲ್ಮೆಯ ಸಿರಿಯೆ
ಮಲಗು ತೊಟ್ಟಿಲ ಸಿರಿಯೆ ದೇವರಂತೆ
ಮಲಗು ಮುದ್ದಿನ ಗಿಣಿಯೆ ಮಲಗು ಮುತ್ತಿನ ಮಣಿಯೆ
ಮಲಗು ಚಂದಿರನೂರ ಕೂಗುವೆಯಂತೆ ....

ಇಂಪಾದ ಹಾಡು ಕೇಳುತ್ತಿದ್ದಂತೆ ಯಾಕೋ ಥಟ್ಟನೆ ತವರು ನೆನಪಾಯಿತು. ಪ್ರೀತಿಯ ಮಡಿಲಲ್ಲಿ ಜೋಕಾಲಿ ಹಾಡುತ್ತಾ ಹಾಲುಣಿಸಿದ ಅಮ್ಮ ನೆನಪಾದಳು. ನಾ ಅತ್ತರೂ ಕಿರುಚಿದರೂ ದಣಿಯದೆ ಕಂಗಳಲ್ಲಿ ಬೆಳದಿಂಗಳು ಮೂಡಿಸಿದ ತವರು ನೆನಪಾಯಿತು. ತಪ್ಪಿ ನಡೆದ ದಾರಿಯಲ್ಲಿ ಸರಿ ದಾರಿ ತೋರಿಸಿ ಬದುಕ ತುಂಬಾ ಕನಸುಗಳ ಚಿತ್ತಾರ ಮೂಡಿಸಿ ಭವಿಷ್ಯಕ್ಕೆ ಬೆಳಕಿನ ಮುನ್ನುಡಿ ಬರೆದ ನನ್ನವ್ವ ನೆನಪಾದಳು. ಹುಣ್ಣಿಮೆ ರಾತ್ರೀಲಿ ಚಂದಿರನನ್ನು ಕೊಂಡಾಡುತ್ತಾ, ಬೆಳಗು ಇಬ್ಬನಿಯ ನಗುವನ್ನು ತೋರುತ್ತಾ, ಪ್ರೀತಿ, ಮಮತೆ, ತ್ಯಾಗ, ವಾತ್ಸಲ್ಯದ ಪಾಠ ಬೋಧಿಸಿದ ಅಮ್ಮನ ಮಡಿಲು ನೆನಪಾಯಿತು

ಹ್ಲಾಂ..!..ಗೊತ್ತೇ ಆಗಲಿಲ್ಲ.

ಸರಿದೇ ಹೋಗಿತ್ತು ಸಮಯ. ಅವಳಪ್ಪುಗೆಯಲ್ಲಿ ರಚ್ಚೆ ಹಿಡಿಯುತ್ತಾ, ಉಚ್ಚೆ ಒಯ್ಯುತ್ತಾ ಬೆಳೆದ ನನ್ನ ಅಳು, ತರಲೆ ಅಮ್ಮನಿಗೆ ಕಿರಿಕಿರಿ ಎನಿಸುತ್ತಿರಲಿಲ್ಲ. ದಿನವಿಡೀ ಎತ್ತಿ ಆಡಿಸಿದ ಆ ದೇವರ ಕೈಗಳಿಗೆ ನಾ ಭಾರವಾಗುತ್ತಿರಲಿಲ್ಲ. ಎಂಥ ಮಾಯೆ? ಎದ್ದು ನಡೆಯುತ್ತಿದ್ದೆ.. ಪ್ರಪಂಚನಾ ಅಚ್ಚರಿಯಿಂದ ದಿಟ್ಟಿಸುತ್ತಿದ್ದ ನನ್ನ ಕಣ್ಣುಗಳಿಗೆ 'ಪಾಠ' ಹೇಳಿಕೊಡುತ್ತಿತ್ತು ಆ ತವರು. ಬೆಳಗೆದ್ದು ಖುಷಿ ಖುಷಿಯಲ್ಲಿ ಮನೆ ಮುಂದೆ ರಂಗೋಲಿ ಇಡುತ್ತಿದ್ದೆ. . ಆಗವಳು ನನ್ನ ಎತ್ತಿ ಆಡಿಸುತ್ತಿರಲಿಲ್ಲ, ಚಂದಿರನ ತೋರಿಸಿ ಹೊಗಳುತ್ತಿರಲಿಲ್ಲ. ಜೋಕಾಲಿ ಆಡಿಸುತ್ತಿರಲಿಲ್ಲ. ಅವಳೆತ್ತರಕ್ಕೆ ಬೆಳೆದ ನನ್ನ ನೋಡಿ ಅಮ್ಮ ಅದೆಷ್ಟು ಖುಷಿಪಡುತ್ತಿದ್ದಳು. ನನ್ನ ನೋಡುತ್ತಲೇ ಅಣ್ಣನ ಕಿವಿಯಲ್ಲಿ ಅದೇನೋ ಪಿಸುಗುಟ್ಟುತ್ತಿದ್ದಳು. ಆತ ತುಂಟನಗೆ ಬೀರುತ್ತಿದ್ದ. ಅವನ ಕಣ್ಣುಗಳ ತುಂಟತನಕ್ಕೆ ಚಂಗನೆ ಜಿಂಕೆಯಂತೆ ಹಾರಿ ಅವನ ತೋಳು ಸೇರುತ್ತಿದ್ದೆ. ನಾ ಮಗುವಾಗಿರುವಾಗ ಎತ್ತು ಮುದ್ದಾಡುತ್ತಿದ್ದ, ಲಂಗ ಧಾವಣಿ ತೊಡಿಸುತ್ತಿದ್ದ ಅಣ್ಣ ಈವಾಗ ಖುಷಿಯ ನಗು ಚೆಲ್ಲುತ್ತಿದ್ದ. ಅದ ನೋಡಿ ಅಮ್ಮನ ಕಣ್ಣಲ್ಲೂ ಖುಷಿಯ ಮಿನುಗು, ಪ್ರೀತಿಯ ಜಿನುಗು. ಬಾನಿನತ್ತ ನೋಡಿ ಅದೇನೋ ಕೈಜೋಡಿಸಿ ಬೇಡುತ್ತಿದ್ದಳು..ಅವಳದೇ ಭಾಷೆಯಲ್ಲಿ.

ಹ್ಲಾಂ..! ತವರು...

ತವರಿನ ಪ್ರೀತಿಯ ಚಪ್ಪರದಡಿಯಲ್ಲಿ ನಾ ಸಪ್ತಪದಿ ತುಳಿದಿದ್ದೆ. ದಶಕಗಳು ಸರಿದಿವೆ. ಅಮ್ಮನೆತ್ತರಕ್ಕೆ ಬೆಳೆದ ನಾನೂ 'ಅಮ್ಮ'ನಾಗಿದ್ದೆ. ಆದರೆ, ಇದ ಕಂಡು ಖುಷಿ ಪಡಲು ಅಮ್ಮನಿರಲಿಲ್ಲ ಜೊತೆಯಲ್ಲಿ.! ಆದರೆ, ಆಕೆ ಕಲಿಸಿದ ಬದುಕಷ್ಟೇ ಉಳಿದಿತ್ತು. ಮತ್ತೆ ಬಂದಿದ್ದೆ ನಾ ತವರಿಗೆ. ಅಣ್ಣನೊಬ್ಬ ಉಳಿದಿದ್ದ, ಬದುಕಿಗೆ ಜೀವಂತಿಕೆ ಕಟ್ಟಿಕೊಟ್ಟ, ಜೀವನಕ್ಕೆ ಅಪೂರ್ವ ಸೌಂದರ್ಯ ಕಟ್ಟಿಕೊಟ್ಟ, ಖುಷಿಯಲ್ಲಿ ನಕ್ಕು ನಗಿಸಿದ ಆ ತವರು ಕಾಣಲು ಮತ್ತೆ ನಾ ಬಂದಿದ್ದೆ. ಆದರೆ ಅದೇಕೋ ಖಾಲಿ ಖಾಲಿ...ಮನೆಯೆದುರು ನಾ ಇಟ್ಟ ರಂಗೋಲಿ ಮಾಸಿತ್ತು, ಆದರೆ ನೆನಪಷ್ಟೇ ಉಳಿದಿತ್ತು. ಅಮ್ಮನಂತ ಅಣ್ಣನ ತೋಳು ನನ್ನ ಪ್ರೀತಿಗೆ ಹಾತೊರೆದಂತೆ ಕಾಣಲಿಲ್ಲ. ನಕ್ಕು ನಗಿಸಿದ ತುಂಟಾಟ, ಲಗೋರಿಯಾಟ ಆಡಿದ ಅಣ್ಣನ ಮುಖದಲ್ಲಿ ಎಂದಿನ ನಗೆ ಬೆಳಕಿರಲಿಲ್ಲ. ಅತ್ತಿಗೆಯ ಮುಖ ನನ್ನಮ್ಮನಂತೆ ನನ್ನ ಸ್ವಾಗತಿಸಲಿಲ್ಲ. ತನ್ನ ಕೋಣೆಯೊಳಗೆ ಕುಳಿತ ಅಣ್ಣ ಹಾಗೇ ಬಾಗಿಲು ಹಾಕಿದ್ದ. ಮತ್ತೆಂದೂ ತೆರೆಯಲಿಲ್ಲ....ಆದರೆ..ನನ್ನೊಳಗಿನ ಪ್ರಶ್ನೆಗಳಿಗೆ ಅಲ್ಲಿ ಉತ್ತರವಿರಲಿಲ್ಲ..ಯಾಕಂದರೆ ಆತ ನನ್ನ 'ಅಣ್ಣ' ಆಗಿದ್ದ. ಪ್ರೀತಿಯ ತವರಾಗಿದ್ದ. ಮಮತೆಯ ಮಡಿಲಾಗಿದ್ದ.

ಮತ್ತದೇ ಹಾಡು ...ಗುನುಗಿತು...ಮನದೊಳಗೆ..

ತವರೂರ ಮನೆ ನೋಡ ಬಂದೆ...
ತಾಯ ನೆನಪಾಗಿ ಕಣ್ಣೀರ ತಂದೆ...


ಬಾಗಿಲ ಮುಂದೆ ರಂಗೋಲಿ
ಬಾಗಿ ಇಡುತ್ತಿದ್ದೆ ನಾನಾ ತರದಲ್ಲಿ ...

ಮತ್ತೆ ತೆರಳಿದೆ..'ನನ್ನೂರಿಗೆ' ಅಲ್ಲಿ...!!!

ಫೋಟೋ ಕೃಪೆ: http://www.flickr.com/

Thursday, March 19, 2009

ಒಂಟಿತನವೆಂಬುವುದು ಎಂಥ ವಿಚಿತ್ರ ಸಂಗತಿ?

ಒಂದು ಪುಟ್ಟ ಮನೆ. ಒಂದು ಹಾಲ್. ಒಂದು ಬೆಡ್ ರೂಂ. ಒಂದು ಕಿಚನ್. ಒಂದು ಬಾತ್ ರೂಂ. ಹಾಲ್ ನಲ್ಲೊಂದು ಟಿವಿ. ಅಚ್ಚುಕಟ್ಟಾಗಿ ಜೋಡಿಸಿಟ್ಟ ನನ್ನ ಪ್ರೀತಿಯ ಪುಸ್ತಕಗಳು, ರೂಂ.ನಲ್ಲಿ ಗೋದ್ರೇಜ್, ಕಿಚನ್ ನಲ್ಲಿ ಪಾತ್ರೆಗಳು, ತರಕಾರಿ, ಸಾಮಾಗ್ರಿಗಳು ಇನ್ನೇನೇನೋ...
ಎದುರಗಡೆ ಸುಂದರವಾದ ಮನೆ, ಅಲ್ಲಿ ಅಪ್ಪ-ಅಮ್ಮಂದಿರ ಜೊತೆ ಹರಟುತ್ತಾ ಕೂರುವ ಚೆಂದದ ಹುಡುಗ, ಮನೆ ಮುಂದೆ ಆಟಾಡೋ ಪುಟಾಣಿ ಮಕ್ಕಳು, ಪ್ರೀತಿಯಿಂದ ಆಂಟಿ ಎಂದು ಕೂಗುವ ಒಂದೂವರೆ ಚರ್ಷದ ಪಾಪು ಶ್ರೇಯಸ್ಸು.....ಇದು ನಿತ್ಯ ಕಣ್ಣೋಟಗಳು.
ಇದೇನಿದ್ದರೂ ನಾ ಒಂಟಿ ಅನಿಸಿಬಿಡುತ್ತೆ. ಸಂಜೆಯ ತಂಗಾಳಿಗೆ ಮೈಯೊಡ್ಡಿ ನಿಂತರೂ ನಾ ಒಂಟಿ ಅನಿಸುತ್ತೆ. ನನ್ನ ಸಿಟ್ಟಿನಂತೆಯೇ ಒಂಟಿತನವನ್ನೂ ನಾ ತುಂಬಾ ದ್ವೇಷಿಸುತ್ತೇನೆ.

"ಒಂಟಿತನವೆಂಬುವುದು ಎಂಥ ವಿಚಿತ್ರ ಸಂಗತಿ? ಎಂಥ ಭಯಾನಕ ಸಂಗತಿ? ನಾವು ಅದರ ಸಮೀಪ ಸುಳಿಯಲೂ ಬಯಸುವುದಿಲ್ಲ. ಒಂದೊಮ್ಮೆ ಹಾಗೇನಾದರೂ ಆದರೆ ನಾವು ಅದರಿಂದ ದೂರ ಓಡಿಹೋಗುತ್ತೇವೆ. ಒಂಟಿತನದಿಂದ ಪರಾರಿಯಾಗಲು, ಅದನ್ನು ಮುಚ್ಚಿಹಾಕಲು ಏನೆಲ್ಲಾ ಮಾಡುತ್ತೇವೆ?" ಜೆ. ಕೃಷ್ಣಮೂರ್ತಿ ಬರೆದ ಸಾಲುಗಳನ್ನು ಅದೆಷ್ಟು ಬಾರಿ ಓದುತ್ತೇನೋ ನಂಗೇ ಗೊತ್ತಿಲ್ಲ.
ಕಡಲ ಕಿನಾರೆಯ ತಂಪು ವಾತಾವರಣದಲ್ಲಿ ಮರಳ ಮೇಲೆ ಆಡೋ ಆಸೆ. ಬೆಳದಿಂಗಳ ರಾತ್ರೀಲಿ ಮೋಡಗಳ ನಡುವೆ ಕಣ್ಣಮುಚ್ಚಾಲೆಯಾಡುವ ಚಂದಿರನ ಕಣ್ತುಂಬಾ ನೋಡೋ ಆಸೆ. ಸುಂದರವಾಗ ಪುಷ್ಪಗಳಿಂದ ತುಂಬಿರುವ ಉದ್ಯಾನವನದಲ್ಲಿ ಏಕಾಂಗಿಯಾಗಿ ಕುಳಿತು ತಂಪು ಗಾಳಿ ಸೇವಿಸೋ ಆಸೆ. ಸಂಜೆಗತ್ತಲಲ್ಲಿ ಒಬ್ಬಳೇ ವಾಕಿಂಗ್ ಹೋಗುವಾಸೆ. ಇಲ್ಲೇಲ್ಲಾ ನಾ ಏಕಾಂಗಿಯೇ ಇರುತ್ತೇನೆ. ಮನಸ್ಸೆಲ್ಲಾ ಖಾಲಿ ಖಾಲಿ ಅನಿಸಿಬಿಡುತ್ತೆ. ಎಲ್ಲೋ ಮರೆತುಹೋಗಿದ್ದ ನೆನಪುಗಳು ಧುತ್ತನೇ ಮನದಂಗಳದಲ್ಲಿ ಮೂಡಿಬಿಡುತ್ತೆ. ಖುಷಿಪಡಲೆಂದು ಹಾತೊರೆದ ಮನಸ್ಸಿನ್ನು ಒಂಟಿತನ ಕಾಡಿಬಿಡುತ್ತೆ, ಯಾಕೋ ಹೃದಯ ಭಾರ ಅನಿಸಿಬಿಡುತ್ತೆ....ಬೇಡ..ಹೇ ಒಂಟಿತನ ನೀ ದೂರಹೋಗು ಅಂತೀನಿ...ಐ ಹೇಟ್ ಯೂ ಅಂತೀನಿ....
ಮನೆತುಂಬಾ ಮಕ್ಕಳಾಟ, ಇಲ್ಲಾಂದ್ರೆ ಸ್ನೇಹಿತರ ಕೂಟ. ಅಣ್ಣ, ತಮ್ಮಂದಿರ ಜೊತೆ ಜಗಳವಾಡೋದೇ ವಾಸಿ..ಈ ಒಂಟಿತನ ಬೇಡಪ್ಪಾ. ಎಷ್ಟೋ ಬಾರಿ ಒಂಟಿತನ ಎಂದರಾದಗ ಪ್ರೀತಿಯ ಪುಸ್ತಕಗಳೂ ಸಾಥ್ ನೀಡಲಾರವು. ಫೋನಿನಲ್ಲಿ ಗಂಟೆ-ಗಟ್ಟಲೆ ಮಾತನಾಡಿದ ಗೆಳೆಯ/ಗೆಳತಿಯರ ಮಾತುಗಳೂ ಸಾಥ್ ನೀಡುವುದಿಲ್ಲ. ಅದಕ್ಕೆ ಅನ್ನೋದು ಅಲ್ವೇ..ಒಂಟಿ ಒಂಟಿಯಾಗಿರೋದು ಬೋರೇ ಬೋರ್! ಒಂಟಿಯಾಗಿ ಕಡಲ ಕಿನಾರೆಗೆ ಹೋಗಬಾರದು. ಸುಂದರ ಬೆಳದಿಂಗಳಲ್ಲಿ ಕನಸು ಕಾಣೋ ರಿಸ್ಕ ತಕೋಬಾರ್ದು ಅನಿಸಿಬಿಡುತ್ತೆ.

ನಾ ನಿಮ್ ಜೊತೆಗೆ ನಗುನಗುತ್ತಾ ನಲಿಬೇಕು. ನಿಮ್ಮ ಜೊತೆ ಸೇರಿ ಕಡ್ಲೆಕಾಯಿ ಮೆಲ್ಲುತ್ತಿರಬೇಕು. ನಿಮ್ಮ ಫ್ರೀ ಜೋಕುಗಳನ್ನು ಕೇಳಿ ಹೊಟ್ಟೆ ಹಣ್ಣಾಗುವಂತೆ ನಗಬೇಕು. ಪ್ರೀತಿಯ ಅಮ್ಮ, ತಮ್ಮ, ಅಣ್ಣಂದಿರ, ತಂಗಿಯರ ಜೊತೆಗೆ ದಿನಾ ಅವರನ್ನು ನೆರಳಂತೆ ಹಿಂಬಾಲಿಸುತ್ತಿರಬೇಕು. ಅವರ ಜೊತೆಗೇ ಊಟ ಮಾಡಬೇಕು. ಅವರ ಪ್ರೀತಿಯ ಜೋಗುಳ ಲಾಲಿಯಲ್ಲಿ ನಾ ನಿದ್ದೆ ಮಂಪರಿಗೆ ಜಾರಬೇಕು. ಎಲ್ಲೂ ನಾ ಒಂಟಿಯಾಗಿ ಇರಲೇಬಾರದು. ..ಇಲ್ಲ..ಇಲ್ಲ..ಜೀವನಪರ್ಯಂತ ನಾ ಒಂಟಿತನವನ್ನು ತುಂಬಾ ಹೇಟ್ ಮಾಡ್ತೀನಿ....ನಂಗದು ಕೊಂಚವೂ ಇಷ್ಟವಿಲ್ಲ. ಒಂಟಿತನ ಎಂಬುವುದು ಎಂಥ ವಿಚಿತ್ರ ಸಂಗತಿ ಕಣ್ರೀ.

Wednesday, March 18, 2009

ಧರಿತ್ರಿ ನನ್ನ ಕನಸು..

ನಾನು ಧರಿತ್ರಿ..
ಕರಾವಳಿಯ ಪುಟ್ಟ ಹಳ್ಳಿ ನನ್ನೂರು. ಬದುಕು, ಅಮ್ಮ, ಪ್ರೀತಿ ಅಂದ್ರೆ ಅಕ್ಕರೆ ಜಾಸ್ತಿ. ಬದುಕಂದ್ರೆ ತುಂಬಾನೇ ಪ್ರೀತಿಸ್ತೀನಿ..ಪ್ರೀತಿಸುವುದೆಂದರೆ ಅದು ಬದುಕಂತೀನಿ. ಧರಿತ್ರಿ ನನ್ನ ಭಾವದಲೆಗಳಿಗೆ ವೇದಿಕೆಯಾಗಲಿದ್ದಾಳೆ. ನಿಮ್ ಥರ ನನ್ನದೂ ಒಂದು ಬ್ಲಾಗ್. ಧರಿತ್ರಿ ನನ್ನ ಅದಮ್ಯ ಕನಸು. ಸದಾ ಏನಾದ್ರೂ ಬರೀಬೇಕು ಅನ್ನೋದು ನನ್ ಮನಸ್ಸಿನ ತುಡಿತ. ಬರವಣಿಗೆ ಅನ್ನೋದು ನಿಂತ ನೀರಾಗಬಾರದು..ಅದಕ್ಕೆ ಈ ಧರಿತ್ರಿ ಆಸರೆಯಾಗುತ್ತಾಳೆ ಅನ್ನೋ ನಂಬಿಕೆ. ನಿಮ್ಮ ಪ್ರೋತ್ಸಾಹ, ಬೆನ್ನು ತಟ್ಟೋದು, ಕೆಟ್ಟದು ಅನಿಸಿದ್ರೆ ಥೂ! ಎಂದು ಉಗಿದ್ರೂ ನಾ ಸಹಿಸಬಲ್ಲೆ..ತಪ್ಪಾದ ಹೆಜ್ಜೆಗಳನ್ನು ತಿದ್ದಿ ಮತ್ತೆ ಸರಿಪಡಿಸಿಕೊಳ್ಳಬಲ್ಲೆ.
ಭಾವನೆ, ಬದುಕು, ನೆನಪುಗಳ ಕನವರಿಕೆ, ಕನಸು, ಅನುಭವದ ಪಿಸುಮಾತುಗಳು, ಸಿಹಿ-ಕಹಿ ನುಡಿಗಳು ಎಲ್ಲವೂ ಈ ಧರಿತ್ರಿಯಲ್ಲಿ ನಿರಂತರ ಚೆಲ್ಲಿಬಿಡ್ತೀನಿ. ಖಂಡಿತ ಪುರುಸೋತ್ತು ಮಾಡಿಕೊಂಡು ಓದುತ್ತೀರಲ್ಲಾ..
ಇಂತೀ, ನಿಮ್ಮ
ಧರಿತ್ರಿ