Thursday, April 18, 2013

ಭಾವಕ್ಕೆ ದಕ್ಕಿದ ಪ್ರಸಂಗಗಳು-3


ಮೊದಲ ಫೈಲ್ ನೇಮ್ "ಲೈಫ್" 
ಮೊದಲು ಡಿಟಿಪಿ ಕಲಿಯಬೇಕು....
"ತಿಂಗಳಿಗೆ ಮೂರು ಸಾವಿರ'' ಎಂದರು ದಪ್ಪ ಕನ್ನಡದ ಹೆಂಗಸು. ಅವರು ಕಂಪ್ಯೂಟರ್ ಟೀಚರ್.
ಪರ್ಸ್ ಮುಟ್ಟಿ ನೋಡಿಕೊಂಡೆ. ಅಮ್ಮ ಕೊಟ್ಟಿದ್ದು ಬರೀ ನಾಲ್ಕು ಸಾವಿರ..
ಬೆಂಗಳೂರು ಬರಡನಿಸಿತು. .."ನದಿಗೆ ಇಳಿದ ಮೇಲೆ ಈಜಿಲೇಬೇಕು. ಸಾಯೋದು ಅನ್ಯಾಯ''.
ಒಪ್ಪಿಕೊಂಡೆ. ಅಲ್ಲಿಯವರೆಗೆ ಮೌಸ್ ಮುಟ್ಟದ ನನ್ನ ಬೆರಳುಗಳು ಅದನ್ನು ಗಟ್ಟಿಯಾಗಿ ಹಿಡಿದುಕೊಂಡವು. ಫೈಲ್ ಗಳನ್ನು ತೆರೆದು ಅಕ್ಷರಗಳನ್ನು ಪೋಣಿಸುತ್ತಾ ಹೋದೆ. ಸೇವ್ ಕ್ಲಿಕ್ ಮಾಡಿದರೆ ಪೋಣಿಸಿದ ಅಕ್ಷರಗಳು ಅಲ್ಲೇ ಉಳಿಯುತ್ತವೆ. ಫೈಲ್ ಗೊಂದು ಹೆಸರುಕೊಡಬೇಕು ಎಂದು ಹೇಳಿಕೊಟ್ಟರು ಕಂಪ್ಯೂಟರ್ ಟೀಚರ್. ಅದಕ್ಕೊಂದು ಹೆಸರು ಕೊಟ್ಟೆ "ಲೈಫ್'' ಎಂದು!
ದಪ್ಪಶಾಯಿಯ ಪೆನ್ನಿನಲ್ಲಿ ಹೇಳಿಕೊಟ್ಟಿದ್ದನ್ನು ಬರೆದುಕೊಂಡೆ. ಕಲಿಕೆಗೊಂದು ನೋಟ್ ಬುಕ್!. ಮರುದಿನ ಕಾಪಿ-ಪೇಸ್ಟ್, ಡಿಲೀಟ್, ಆಲ್ಟ್ ಝಡ್....ಹೀಗೆ ಕೀಬೋರ್ಡ್ ಕಸರತ್ತು ಹೇಳಿಕೊಟ್ಟರು. ಬೆರಳುಗಳು ಜೋರಾಗಿ ಚಲಿಸುತ್ತಿದ್ದವು. ಕೀಬೋರ್ಡ್ ಕಟಕಟ ಶಬ್ಧಮಾಡತೊಡಗಿತು.
ಪೆನ್ನು, ಪೆನ್ಸಿಲ್, ದಿನ ಗೀಚುತ್ತಿದ್ದ ಡೈರಿ...ಎಲ್ಲವೂ ನನ್ನ ಆ ಪೆಟ್ಟಿಗೆಯಲ್ಲಿ ಸುಮ್ಮನೆ ಕುಳಿತಿವೆ. ಪೆನ್ನಿಗೆ ಇಂಕ್ ತುಂಬಿಸಿ ಏಳು ವರ್ಷ ಸರಿದಿದೆ. ಪೆನ್ ಹಿಡಿದರೆ ಯೋಚನೆಗಳು ಗಕ್ಕನೆ ನಿಂತುಬಿಡುತ್ತವೆ. ಮತ್ತೆ ಮೌಸ್ ಹಿಡಿಯುತ್ತೇನೆ.
***********
ಸಕಲ ಕೆಲಸ ವಲ್ಲಭ!
"ಅಮ್ಮ ಒಬ್ಬಳೇ ಮನೆಯಲ್ಲಿ. ಎಲ್ಲಾ ಕೆಲಸ ಮಾಡುವುದು ಕಷ್ಟವಾಗುತ್ತೆ''ಅವನಂದ.
"ಹ್ಲೂಂ..ಹೌದು, ನೀನು ಅಮ್ಮಂಗೆ ಹಲ್ಪ್ ಮಾಡೋಲ್ವಾ?''
"ಮಾಡ್ತೀನಿ...ತರಕಾರಿ ಹಚ್ಚಿಕೊಡ್ತೀನಿ. ನನ್ ಬಟ್ಟೇನಾ ನಾನೇ ಒಗೇತೀನಿ. ವಾರಕ್ಕೆ ಬೇಕಾಗುವಷ್ಟು ಬಟ್ಟೆಗಳನ್ನು ನಾನೇ ಇಸ್ತ್ರೀ ಮಾಡಿಕೊಳ್ತೀನಿ''
ಅವನಂದಾಗ,
"ಗುಡ್ ಪರ್ವಾಗಿಲ್ಲ...ಗಂಡನಾಗುವವನು ಸಕಲ ಕೆಲಸ ವಲ್ಲಭ'' ಎಂದುಕೊಂಡೆ ನಾನು.
***
ಮದುವೆಯ ಮೊದಲ ದಿನ. ಅವನ ಕೋಣೆ ಹೊಸತು. ಮಂಚ ಅಲಂಕಾರಗೊಂಡಿತ್ತು. ಮಲ್ಲಿಗೆಯ ಘಮ.
ಕೋಣೆಯೊಳಗೆ ಏನೇನಿದೆ ಎಂದು ನೋಡುವ ತವಕ ನನ್ನ ಕಣ್ಣುಗಳಿಗೆ.
ಪುಸ್ತಕ, ಪೆನ್ನುಗಳ ರಾಶಿ. ನೋಟ್ ಪುಸ್ತಕಗಳು, ಡೈರಿಗಳು, ಚಿಂದಿ-ಚಿಂದಿಯಾದ ಕಾಗದ ಚೂರುಗಳು...ನೋಡುತ್ತಲೇ ನಿಂತಿದ್ದೆ.
"ಏಕೆ ರೂಮ್ ಹಿಂಗಿಟ್ಟುಕೊಂಡಿದ್ದೀ..ಗಂಡುಮಕ್ಕಳೇ ಹಿಂಗೇ ಅನಿಸುತ್ತೆ'' ನಾನಂದೆ.
"ಮೊದಲ ದಿನ. ಸುತ್ತಮುತ್ತ ನೋಡಬೇಡ. ನನ್ನ ಕಣ್ಣುಗಳನ್ನಷ್ಟೇ ನೋಡು'' ಕೈ ಹಿಡಿದೆಳೆದು. ಸ್ವಿಚ್ ಬೋರ್ಡ್ ಒತ್ತಿದ. ಕೋಣೆ ಕತ್ತಲಾಯಿತು.
"ಪರ್ವಾಗಿಲ್ಲ ನನ್ ಗಂಡ ತುಂಬಾ ಓದ್ತಾನೆ..'' ಖುಷಿಪಟ್ಟೆ ಮನಸ್ಸಿನಲ್ಲಿ.
ಬೆಳಗಾಯಿತು...
ಅವನ ದೊಡ್ಡ ಬೀರು ತೆರೆದೆ.
ಅಬ್ಬಾ...ಬಟ್ಟೆ ರಾಶಿಗಳು...ಪ್ಯಾಂಟ್, ಶರ್ಟ್, ಟೀ-ಶರ್ಟ್, ಬನಿಯನ್, ನಿಕ್ಕರ್...ಎಲ್ಲವೂ ಮುದ್ದೆ ಮುದ್ದೆಯಾಗಿ ತುರುಕಿಸಿಡಲಾಗಿತ್ತು. ಒಂದು ಬಟ್ಟೆ ತೆಗೆದರೆ ಇನ್ನೊಂದು ಬೀಳುತ್ತಿತ್ತು...ಗೆದ್ದಲು ಹಿಡಿಯೋಕೆ ಬಾಕಿ!
"ಏನಿದು...ಬ್ಯಾಚುಲರ್ ಹುಡುಗ್ರು ಹೀಗೆನಾ?'' ಕೇಳಿದೆ.
"ಒಬ್ಬ ವ್ಯಕ್ತಿ ಬಚ್ಚಲಿನಲ್ಲಿ ಬದುಕುವ ಹಕ್ಕಿಯಾಗಬೇಕು! ಇದರಲ್ಲಿ ಕೂತುಕೊಂಡು ಆಕಾಶ ನೋಡಬೇಕು. ಸೂರ್ಯನನ್ನು ನೋಡಬೇಕು. ಸುತ್ತಲಿನ ಜಗತ್ತನ್ನು ನೋಡಬೇಕು. ಅದಕ್ಕೆ ಈ ಕೋಣೆಯಲ್ಲಿ ಸರಿಯಾದ ವಾತಾವರಣವಿದೆ! ನಾನು ಇಲ್ಲಿದ್ದು ಏನಾದರೂ ಬರೆಯಲು ಸಾಧ್ಯ. ಕೈಲಾಸಂ ಹೀಗನ್ನುತ್ತಿದ್ದರಂತೆ. ನಾನು ಕೋಣೆ ಒಂದು ಬಚ್ಚಲು, ನಾನಿಲ್ಲಿ ಹಕ್ಕಿ...'' ಮಾತು ನಿಲ್ಲದೆ ಓಡುತ್ತಿತ್ತು.
"ಅದ್ಸರಿ...ನೀನು ನನ್ನ ನೋಡಲು ಬಂದ ಮೊದಲ ದಿನ ನೀಟಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದೆ. ಯಾರು ಬಟ್ಟೆಗೆ ಇಸ್ತ್ರೀ ಮಾಡಿಕೊಟ್ರು?''
ನಗುತ್ತಾ ಅವನಂದ, "ನಾನು ಹೆಂಗೆ ಬೇಕೋ ಹಾಗೇ ಇದ್ದೋನು. ಆದ್ರೆ ಅವತ್ತು ಹಿಂಗೆ ಇದ್ರೆ ನೀನು ಕೈಕೊಟ್ರೆ ಅನಿಸುತ್ತು. ಅದಕ್ಕೆ ನೀಟಾಗಿ ಬಂದಿದ್ದೆ'' ಎಂದು ತುಂಟ ನಗೆ ನಕ್ಕ''.
***********
ಅಮ್ಮಂಗೂ ಮರೆತ ಕಾಗದ
ಊರಿಗೆ ಹೋದಾಗ ಅಮ್ಮ ಹೇಳುತ್ತಾಳೆ, "ಭಾಳ ಬದಲಾಗಿದ್ದೀ. ಮೊದಲಿನ ಮುಗ್ಧತೆ, ಜನ ನೋಡಿದರೆ ಭಯ ಎಲ್ಲವೂ ಮಾಯ. ಅಂದಹಾಗೆ ಈಗ ಕಾಗದ ಬರೆಯುವುದೇ ಇಲ್ಲ, ಏನ್ ಸೋಮಾರಿತನ ನಿಂಗೆ?''
ಅಮ್ಮನ ಮಾತು ಮುಗಿಯುವ ಮುನ್ನ
"ಫೋನ್ ಇದೆ...ಇನ್ನೇನು ಕಾಗದ ಬರೆಯೋದು? ಕಂಪ್ಯೂಟರ್ ನಿಂಗೆ ಅರ್ಥವಾಗಿಲ್ಲಾಂದ್ರೆ ಪಕ್ಕದ್ಮನೆ ರಮೇಶಂಗೆ ಗೊತ್ತು. ಅವ ನನ್ನನ್ನು ಕಂಪ್ಯೂಟರ್ನಲ್ಲಿ ತೋರಿಸ್ತಾನೆ.'' ನನ್ನ ಮಾತು ಕೇಳಿ ಅಮ್ಮಂಗೆ ಅಚ್ಚರಿ.
ನಾನು ಮತ್ತೆ ಬೆಂಗಳೂರಿಗೆ. ಸ್ಕೈಪ್ ತೆರೆಯುತ್ತೇನೆ. ಕಂಪ್ಯೂಟರ್ ನ ಆ ಪುಟ್ಟ ಕಿಂಡಿಯಲ್ಲಿ ನನ್ ಮಾತು, ಮುಖ ನೋಡಿ ಅಮ್ಮಂಗೆ ಜಗತ್ತು ಗೆದ್ದಂಥ ಖುಷಿ. ಈಗ ಕಾಗದ ಬರೆಯಲು ಹೇಳುವುದು ಅಮ್ಮಂಗೂ ಮರೆತುಹೋದಂತಿದೆ.

ಬಯಕೆಯ ಬಯಲ ಹುಡುಕಾಟ


ಕನಸ ಕಸುವೂ ಬೇಕು....
ಯಶದ ಹಾದಿಯ ಹೆಜ್ಜೆಗೆ 
ಬಯಕೆ ಬಯಲು 
ಎರಡೂ ಬೇಕು 
ಸಾಧನೆಯ ಕಾಲ್ಗೆಜ್ಜೆಗೆ...
ಆಟೋಗ್ರಾಫ್ ನ ಮೊದಲ ಪುಟದಲ್ಲಿದ್ದ ಸಾಲುಗಳನ್ನು ಮತ್ತೆ ಮತ್ತೆ ಓದಿಕೊಂಡೆ. ಪ್ರೀತಿಯ ಟೀಚರ್ ಬರೆದ ಸಾಲುಗಳಿವು. ಬೆಟ್ಟದಷ್ಟು ಕನಸುಗಳು ಎದೆಯೊಳಗೆ ಬೆಚ್ಚಗೆ ಮಲಗಿದ್ದವು. ಬೆಂಗಳೂರಿಗೆ ಹೋದರೆ ಏನಾದರೂ ಕೆಲಸ ಸಿಗುತ್ತೆ ಎಂಬ ಬಲ್ಲವರು ಹೇಳಿದ ಮಾತಿನಲ್ಲಿ ಗಟ್ಟಿ ನಂಬಿಕೆಯಿತ್ತು.

ಎಂಟನೇ ತರಗತಿಯಿಂದ ಗೀಚಿದ ಹಾಳು-ಮೂಳು ಬರಹಗಳು. ಹಳೇ ಡೈರಿಗಳು, ಪೆನ್ನು, ಪುಸ್ತಕ, ಅಮ್ಮ ಕೊಡಿಸಿದ ಭಗವದ್ಗೀತೆ, ಎಸ್ ಎಸ್ ಎಲ್ ಸಿ, ಡಿಗ್ರಿ , ಅಂಕಪಟ್ಟಿ, ಎಲೆಕ್ಷನ್ ಕಾರ್ಡ್, ಶಾಲೆ-ಕಾಲೇಜು ಆಟೋಗ್ರಾಫ್ ... ಎಲ್ಲವನ್ನೂ ಪ್ಯಾಕ್ ಮಾಡಿದ್ದೆ. ಮನಸ್ಸಿಗೆ ಮುಗ್ಧತೆಯ ಸಿಂಗಾರ...ಇದಕ್ಕೇ ಇರಬೇಕು ಹೊರಡುವ ಮುಂಚೆ ಅಮ್ಮ, ನನ್ನ ಪ್ರೀತಿಯ ಮೇಷ್ಟ್ರುಗಳು ಗಂಟೆ-ಗಟ್ಟಲೆ ಕುಳ್ಳಿರಿಸಿ ಕಿವಿಮಾತು ಹೇಳಿದ್ದು,

ರಾತ್ರಿ 9, ಬಸ್ ಹೊರಡುವ ಸಮಯ.
ಬಸ್ ಹತ್ತುವ ಮೊದಲು "ಬೆಂಗಳೂರು ಹೇಗಿದೆ ಎಂದು ಕಾಗದ ಹಾಕು. ಅಲ್ಲಿ ಜಾಗ ಹೇಗಿದೆ ಹೇಳು...ಮುಂದಿನ ಸಲ ಹೂಗಿಡ ತಕ್ಕೋಂಡು ಹೋಗಿವಿಯಂತೆ' ಅಮ್ಮ ನುಡಿದಳು.
ಕಲ್ಪನೆಯ ಬೆಂಗಳೂರು ತಲೆಯೊಳಗೆ ಗಿರಕಿ ಹೊಡೆಯತೊಡಗಿತು. "ಬೆಂಗಳೂರಲ್ಲಿ ಎಲ್ಲಾರೂ ಕೆಲಸ ಮಾಡೋರೇ. ಬೆಳಿಗ್ಗೆ ಮನೆಗೆ ಬೀಗ ಜಡಿದು ಹೋದರೆ ಸಂಜೆ ಸೂರ್ಯ ಕಂತುವ ಹೊತ್ತಿಗೆ ಮನೆ ಸೇರುವುದು. ಜನಜಂಗುಲಿ ಹೆಚ್ಚು, ತುಂಬಾ ಜೋಪಾನವಾಗಿರಬೇಕು. ಎಲ್ಲಾರೂ ಒಳ್ಳೆಯವರೆಂದು ನಂಬುವುದು ನಮಗೆ ನಾವೇ ಮೋಸ ಮಾಡಿಕೊಂಡಂತೆ. ಬೆಂಗಳೂರು ರಾತ್ರಿ ನೋಡಕೆ ಚೆಂದ, ಎತ್ತಲೂ ಲೈಟ್. ದೀಪದ ಬೆಳಕಿನಲ್ಲಿ ಓಡುವ ವಾಹನಗಳು, ಶಾಪಿಂಗ್ ಮಾಡುವವರ ಸಂಭ್ರಮ, ಇಲ್ಲಿ ರಾತ್ರಿ-ಹಗಲಿಗೆ ವ್ಯತ್ಯಾಸವೇ ಕಾಣುವುದಿಲ್ಲ' ಬೆಂಗಳೂರನ್ನು ಬಲ್ಲವರ ಮಾತುಗಳು ಮತ್ತೆ ಮತ್ತೆ ನೆನಪಾಗತೊಡಗಿದವು.

ಎಷ್ಟೊಂದು ನೆನಪುಗಳು...
ಯೋಚನೆಗಳ ನೆಗೆತ. ನಿಲ್ಲು ಅಂದರೆ ನಿಲ್ಲುತ್ತಿಲ್ಲ. ನನ್ನ ಹೊತ್ತ ಬಸ್ ಶಿರಾಡಿಘಾಟ್ ಹತ್ತುತ್ತಿತ್ತು. ತಿರುವುಗಳನ್ನು ದಾಟುವಾಗ ಬಸ್ ನ ಓಲಾಟಕ್ಕೆ ಸಕಲೇಶಪುರ ತಲುಪುವಷ್ಟರಲ್ಲಿ ಮೈ-ಕೈ ನೋವು. ಬೆಳಗಿನ ಜಾವ ಬಸ್ ಎಲ್ಲೋ ನಿಂತಿತು. ಬ್ಯಾಗ್ ಬಿಟ್ಟು ಇಳಿಯುವ ದೈರ್ಯ ಇಲ್ಲ, ಅಷ್ಟು ದೂರದ ಪ್ರಯಾಣ ಅದೇ ಮೊದಲು..ಯಾರಾದ್ರೂ ಹೊತ್ತೊಯ್ದರೆ ಎನ್ನುವ ಭಯ. ಸೂರ್ಯ ಕಾಣುವ ತನಕ ನನ್ನ ಕಣ್ಣಿಗೆ ಮಾತ್ರ ನಿದ್ದೆ ಹತ್ತಲಿಲ್ಲ.
ಬೆಂಗಳೂರು ನಗರಕ್ಕೆ ಸ್ವಾಗತ. ದೊಡ್ಡ ಹಸಿರು ಬೋರ್ಡ್ ಕಾಣಿಸಿತು.
ಕಂಡಕ್ಟರ್ ಗೆ ಕೇಳಿದೆ, "ಬೆಂಗಳೂರು ಅಂದ್ರೆ ಇದೇನಾ? ಇಳಿಯುವ ಜಾಗ ಮೆಜೆಸ್ಟಿಕ್ ಇನ್ನೆಷ್ಟು ದೂರವಿದೆ?''.
ನಿದ್ದೆಗಣ್ಣಲ್ಲಿ ಕಂಡಕ್ಟರ್ ಉಸುರಿದ; "ಹೇಳ್ತೀನಮ್ಮಾ....ಕೂತ್ಕೋ. ಸಿಟಿಗೆ ಇನ್ನೂ ದೂರವಿದೆ''
ನನ್ನೊಳಗೆ ಸಣ್ಣ ಗೊಂದಲ.
"ಮೆಜೆಸ್ಟಿಕ್ ಮತ್ತು ಸಿಟಿ ಬೇರೇನಾ?''
"ತಲೆ ತಿನ್ಬೇಡ. ಹೇಳ್ತೀನಿ. ಊರು ಗೊತ್ತಿಲ್ಲದ್ದು ಒಂಟಿ ಬಂದ್ ಬಿಡ್ತವೆ'' ದೊಡ್ಡ ಕಣ್ಣು ಮಾಡಿದ. ನಾನು ಸುಮ್ಮನಾದೆ.
ದೊಡ್ಡ ದೊಡ್ಡ ಗಾಡಿಗಳು., ಕಟ್ಟಡಗಳು, ಜನಜಂಗುಳಿ, ಫ್ಲೈ ಓವರ್ಗಳು, ಇನ್ನೊಂದೆಡೆ ಧೂಳು, ಗೋಡೆಗೆ ಉಚ್ಚೆ ಹೊತ್ಯೋರು, ಬೀದಿ ಬದಿಯಲ್ಲೇ ಮಲಗಿ ಎದ್ದೇಳುತ್ತಿರುವವರು, ಬೀದಿ ಗುಡಿಸುವವರು, ತರಕಾರಿ ಮಾರುವವರು, ಚಿಂದಿ ಆಯುವವರು, ಶಿಸ್ತು-ಅಶಿಸ್ತಿನ ಸಿಪಾಯಿಗಳು...ಎಲ್ಲರೂ ಒಟ್ಟಾಗಿ ನನಗೆ ಸ್ವಾಗತ ಕೋರಿದಂತಾಯಿತು.

ಮೆಜೆಸ್ಟಿಕ್...ಕಂಡಕ್ಟರ್ ಕೂಗು. 
ಎಲ್ಲರೂ ಬ್ಯಾಗ್ ಹೆಗಲಿಗೇರಿಸಿದರು. ನಾನೂ ಕೂಡ.
"ಪ್ಲಾಟ್ ನಂಬರ್ 8, ಬಸ್ ನಂ. 60, ಜಯನಗರ 4ನೇ ಬ್ಲಾಕ್' ಗೆಳತಿ ಕೊಟ್ಟ ವಿಳಾಸ.
ಮತ್ತೊಂದು ಬಸ್ ಹತ್ತಿದೆ. ಗಿಜಿಬಿಜಿ ಜನರು. ಅರ್ಧ ಗಂಟೆ ದಾರಿ. ಇಳಿಯುವ ಜಾಗ ಬಂತು.

                                            *****
ಎದೆಯೊಳಗಿದ್ದ ಬೆಚ್ಚಗಿನ ಕನಸುಗಳಿಗೆ ಹೊರಬರುವ ತವಕ. ನನಗೆ ಕನಸುಗಳನ್ನು ಕಸುವಾಗಿಸುವ ಬಯಕೆ. ಬಯಲು ಹುಡುಕುತ್ತಾ ಮುಂದಡಿ ಇಟ್ಟೆ.

Thursday, April 4, 2013

ಭಾವಕ್ಕೆ ದಕ್ಕಿದ ಪ್ರಸಂಗಗಳು--ಭಾಗ-2


ಅಮ್ಮನ ದೇವರಮೂಲೆ 
ಅಂದು ನಮಗಿಬ್ಬರಿಗೆ ಜೋರು ಜ್ವರ. ಅಮ್ಮ ಇಬ್ಬರನ್ನೂ ನಿಲ್ಲಿಸಿ ದೃಷ್ಟಿ ತೆಗೆದಳು. ದೃಷ್ಟಿ ತೆಗೆದ ಕಡ್ಡಿಗೆ ಬೆಂಕಿ ಹಚ್ಚಿದಾಗ ಪಟಪಟ ಎಂದು ಸದ್ದು ಮಾಡಿತು.
ಅಮ್ಮ ಬಂದು ಹೇಳಿದಳು,"ನೋಡಿ ಇಬ್ರಿಗೂ ದೃಷ್ಟಿ ಬಿದ್ದಿದೆ. ಅದಕ್ಕೆ ನೋಡು ಕಡ್ಡಿ ಪಟಪಟ ಎಂದು ಉರಿಯತೊಡಗಿತು'' ಎಂದು. ಇಬ್ಬರಿಗೂ ತುಟಿಯಂಚಿನಲ್ಲಿ ನಗು. ವೈದ್ಯರಿಗೆ ಕೊಟ್ಟ ದುಡ್ಡು ವೇಸ್ಟ್ ಆಯಿತಲ್ಲಾ...ಅಂಥ ಮನಸ್ಸಲ್ಲಿ.
ಮರುದಿನ ಬೆಳಿಗೆದ್ದು ನೋಡಿದರೆ ಅಡುಗೆ ಮನೇಲಿ ಪಾತ್ರೆ ತೊಳೆಯುವ ಸಿಂಕ್ ನ ಪಕ್ಕ ಹಿತ್ತಾಳೆ ಚೊಂಬಲ್ಲಿ ನೀರು, ನೀರ ಮೇಲೆ ತುಳಸಿ ದಳಗಳು. ನಾವಿಬ್ಬರೂ ಕಾಫಿ ಕುಡಿದು ಲೋಟ ತೊಳೆಯಲು ಹೋದರೆ,
"ಅಲ್ಲಿ ಮುಸುರೆ ಮಾಡಬೇಡಿ. ಅದು ದೇವರ ಮೂಲೆ ಅಂತೆ. ಅಲ್ಲಿ ನೀರಿಟ್ಟರೆ ಆರೋಗ್ಯ ಚೆನ್ನಾಗಿರುತ್ತೆ ಅಂತೆ'' ಅಮ್ಮನ ಆರ್ಡರ್.
"ಯಾರಮ್ಮಾ ಹೇಳಿದ್ದು ನಿಂಗೆ?"
"ನನ್ನ ವಾಕಿಂಗ್ ಫ್ರೆಂಡ್''
"ಅದೇನು ನಿನ್ ಫ್ರೆಂಡ್ ವಾಕಿಂಗ್ ರೂಟ್ ನಿಂದ ಅಡುಗೆಮನೆಗೂ ಬಂದ್ರಾ''
"ಹ್ಲೂಂ..ಅವರಿಗೆ ಜ್ಯೋತಿಷ್ಯ, ವಾಸ್ತು ಎಲ್ಲಾ ಗೊತ್ತಂತೆ. ನಾವು ಓಡಾಡುವ ಬಾಗಿಲು ಬದಲಾಗಬೇಕಂತೆ'
"ಅಮ್ಮಾ...ಅದೇನಿದ್ರೂ ವಾಕಿಂಗ್ ರೂಟ್ ಗೆ ಅಂದುಬಿಡು'' ಎಂದು ನನ್ನವ ಗದರಿದ. ಅಮ್ಮನ ಮುಖ ಸಣ್ಣಗಾಯಿತು.
ಆದರೆ, ಅಡುಗೆಮನೆಯ "ದೇವರ ಮೂಲೆ''ಯಲ್ಲಿ ಇಂದಿಗೂ ಚೊಂಬು ನೀರು ತಪ್ಪಿಲ್ಲ. ಅಲ್ಲಿ ಮುಸುರೆ ಪಾತ್ರೆಗಳನ್ನು ತೊಳೆಯುವಾಗಿಲ್ಲ. ಹಾಗಾಗಿ, ಮನೆಗೆಲಸದವಳಿಗೆ ದಿನಾ ಬೀಳುವ ಪಾತ್ರೆಗಳು ಹೆಚ್ಚಾಗುತ್ತಿವೆ. ಅವಳು "ಪಾತ್ರೆಗಳು ಜಾಸ್ತಿಯಾಗುತ್ತಿವೆ. ಸಂಬಳ ಜಾಸ್ತಿ ಕೊಡಿ'' ಎಂದು ರಚ್ಚೆ ಹಿಡಿದಿದ್ದಾಳೆ.
*********
ಬಣ್ಣದ ನಾಚಿಕೆ

ಅಂದು ನನ್ನೊಳಗೆ ಮೊಗ್ಗು ಮಲ್ಲಿಗೆ ಬಿರಿದ ಖುಷಿ. ಅಲ್ಲಿಯವರೆಗೆ ನಾಚಿಕೆ ಏನೂಂತ ಗೊತ್ತಿರಲಿಲ್ಲ. ಆದರೆ, ಅಂದು ಮಾತ್ರ ಸುಮ್ಮ-ಸುಮ್ಮನೆ ನಾಚಿಕೊಂಡಿದ್ದೆ. ಕಾರಣಗಳನ್ನು ಕೇಳಿದರೆ ಉತ್ತರ "ಗೊತ್ತಿಲ್ಲ''. ಆದರೆ ಮಾತು, ಮಾತಿಗೂ ಕೆನ್ನೆಯಲ್ಲಿ ...ಸೂರ್ಯೋದಯವಾಗುತ್ತಿತ್ತು,
ಮೈಯಲ್ಲಿ ಅದೇನೋ ಪುಳಕ... ಹೆಣ್ತನ ನನ್ನೊಳಗೆ ಹಡೆದಂತೆ. ತಲೆಯೊಳಗೆ ಕದ್ದು ಕೇಳಿದ ಸೀತಕ್ಕನ ಮಗಳು ದೊಡ್ಡವಳಾದ ಕತೆ...
ಎಲ್ಲವೂ ಸೇರಿ ಪಾದವನ್ನೇ ದಿಟ್ಟಿಸುತ್ತಿದ್ದ ಕಣ್ಣುಗಳಲ್ಲಿ ನಾಚಿಕೆ ಬಣ್ಣ ಪಡೆದಿತ್ತು...ಸುಮ್ಮನೆ ನಾಚಿಕೆ...ಕಾರಣಗಳೇ ಇಲ್ಲದ ನಾಚಿಕೆ.
ಅಂದು ಅಮ್ಮ ಉದ್ದ ಜಡೆ ಹಾಕಿ ಮಲ್ಲಿಗೆ, ಕೆಂಗುಲಾಬಿ ಮುಡಿಸಿದ್ದಳು. ಜಡೆ ಕೆನ್ನೆಬದಿಯಿಂದ ಕೆಳಗಿಳಿದಿತ್ತು...ಜಡೆಯ ತುದಿಯಲ್ಲಿ ಆಡುವ ನನ್ನ ಕಿರುಬೆರಳುಗಳಿಗೂ ನಾಚಿಕೆಯ ಹಂಗು. ಥತ್, ಬೆರಳನ್ನೂ ಬಿಡಲಿಲ್ಲ ನಾಚಿಕೆ! ವಾರದ ನಂತರ ಶಾಲೆಗೆ ಹೋಗಿದ್ದೆ. ಅಮ್ಮ ಕರೆದುಕೊಂಡು ಹೋಗಿ ಬಿಟ್ಟುಬಂದಿದ್ದಳು. "ಏಕೆ ರಜೆ'' ಎನ್ನುವುದಕ್ಕೆ ಅಮ್ಮನೇ ಹೆಡ್ ಮಾಸ್ತರ್ ಗೆ ತಿಳಿಸಿದ್ದಳು. ಆದರೆ, ಮುಡಿತುಂಬಾ ಮುಡಿದ ಘಮ್ಮನೆನ್ನುವ ಮಲ್ಲಿಗೆ ನೋಡಿ ಮೇಷ್ಟ್ರು ತರಗತಿಯಲ್ಲಿ ಕಿಸಕ್ಕನೆ ನಕ್ಕಾಗ ನನ್ನ ಕೆನ್ನೆಯಲ್ಲಿ ಹೋಳಿಯ ರಂಗಿನಾಟ!...ಥತ್...ಹಾಳು ನಾಚಿಕೆ...ಇಲ್ಲಿಯವರೆಗೆ ಇಲ್ಲದ್ದು ಈಗ್ಯಾಕೆ ಬಂತು? ಸಣ್ಣದೊಂದು ಹುಸಿಮುನಿಸು ನಾಚಿಕೆ ಮೇಲೆ!
ನಾಚಿಕೆ...ನಾಚಿಕೆ...ನಾಚಿಕೆ..ನನ್ನ ನಾನೇ ಮುಟ್ಟಿ ನೋಡಿಕೊಂಡು ಖುಷಿಪಡವಾಗಲೂ ಸುಮ್ಮ-ಸುಮ್ಮನೆ ನಾಚಿಕೆ."ನೀನು ದೊಡ್ಡವಳಾಗಿದ್ದೀಯಾ'' ಶಾಲೆಗೆ ಹೊರಡುವಾಗ ಅಜ್ಹಿಯ ಹಿತನುಡಿ ಕೇಳಿದಾಗಲೂ ನನ್ನೊಳಗೊಂದು ಕಿರುನಾಚಿಕೆ. ಬೇಡ, ಬೇಡ ಎಂದರೂ ನನ್ನ ಬಳಿ ಸರಿದಿತ್ತು ನಾಚಿಕೆ. ನನ್ನ ಕಣ್ಣಲ್ಲಿ, ಕಣ್ಣುರೆಪ್ಪೆಯಲ್ಲಿ, ನಗೆಮಾತಿನಲ್ಲಿ, ಅಂಗೈ&ಪಾದಗಳ ಬೆರಳ ತುದಿಯಲ್ಲಿ, ಕೆನ್ನೆಯಲ್ಲಿ...ಎಲ್ಲಾ ಕಡೆಯೂ ನಾಚಿಕೆಯ ಚಿತ್ತಾರ.

********
ನಾಲ್ಕನೇ ಪುಟದ ಭವಿಷ್ಯ
ಬೆಳಿಗ್ಗೆದ್ದ ತಕ್ಷಣ ಅಮ್ಮಂಗೆ ಪತ್ರಿಕೆ ಓದೋ ಅಭ್ಯಾಸ. ನನಗಿಂತ ಮೊದಲೇ ಏಳುವ ಅಮ್ಮ ಮೊದಲು ಹೊಸಿಲು ಗುಡಿಸಿ ರಂಗೋಲಿ ಹಾಕಿ ನಮ್ಮನೆಗೆ ಬರುವ ಪತ್ರಿಕೆಯ ನಾಲ್ಕನೇ ಪುಟವನ್ನು ತೆರೆಯುವಳು!. ಅಲ್ಲಿ ನೋಡುವುದು ದಿನಭವಿಷ್ಯ. ನಾವು ಎದ್ದ ತಕ್ಷಣ ಭವಿಷ್ಯವನ್ನು ಜ್ಯೋತಿಷಿಯಂತೆ ಬಡಬಡ ಎಂದು ಹೇಳೋಳು. ಒಂದು ದಿನ ನನ್ನವನ ಭವಿಷ್ಯ ಹೀಗಿತ್ತು.
"ಈ ದಿನವನ್ನು ನೀವು ಸಂತೋಷವಾಗಿ ಕಳೆಯಲಿದ್ದೀರಿ. ಮನೆಯಲ್ಲಿ ಎಲ್ಲರಿಗೂ ಶುಭಸುದ್ದಿ ನೀಡುವಿರಿ. ನಿಮ್ಮ ಬದುಕಿನಲ್ಲಿ ಹೊಸ ವ್ಯಕ್ತಿಯೊಬ್ಬರ ಪ್ರವೇಶವಾಗಲಿದೆ...'' ಸೋಫಾ ಮೇಲೆ ಕುಳಿತ ನನ್ನವನ ಮುಖದಲ್ಲಿ ಕಳ್ಳನಗು. ಯಾಕೋ ಅಮ್ಮ ಓದುವ ಧಾಟಿ ಕೇಳಿ ನನ್ನೆದೆ ಢವಢವ. ಅಮ್ಮನ ಮುಖದಲ್ಲಿ ಸಂತೋಷದ ಹೊಂಬೆಳಕು, ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟು ಖುಷಿ.
ಸ್ವಲ್ಪವೂ ನಗದ ನನ್ನ ನೋಡಿ ಅಮ್ಮನಿಗೆ ಅಚ್ಚರಿ. "ಯಾಕಮ್ಮಾ, ಒಳ್ಳೆಯ ಭವಿಷ್ಯ ಅಲ್ವೇನೇ? ಒಳ್ಳೆ ಬೆಪ್ಪು ತಕ್ಕಡಿ ತರ ನಿಂತಿದ್ದಿ. ಹೊಸ ವ್ಯಕ್ತಿಯ ಪ್ರವೇಶ ಅಂದ್ರೆ ನಮ್ಮನೆಗೆ ಹೊಸ ಕಂದಮ್ಮ ಬರುತ್ತೆ ಅಂತ. ಪೆದ್ದಿ ಕಣೇ ನೀನು'' ಎಂದಳು. ನನ್ನ ಸಂತೈಸುತ್ತಾ ನನ್ನವನಂದ
"ನಿನ್ ಬಿಟ್ಟು ಯಾವ ಹುಡುಗಿನೂ ಕಣ್ಣೆತ್ತಿ ನೋಡದವನು ನಿನ್ ಗಂಡ ಎಂದು ಹೆಮ್ಮೆ ಪಡು''. ಅಮ್ಮನೆಂದಳು "ಈ ವಯಸ್ಸಲ್ಲಿ ನಾನು ಟ್ಯೂಬ್ ಲೈಟ್. ಈ ಹುಡುಗ್ರ ಯೋಚನೆಗಳೇ ಅರ್ಥವಾಗೋಲ್ಲ''.

Friday, March 29, 2013

ಭಾವಕ್ಕೆ ದಕ್ಕಿದ ಪ್ರಸಂಗಗಳು


ಓಲೆ ಪ್ರೀತಿ
ಕೆ.ಆರ್. ಮಾರ್ಕೆಟ್ ನಿಂದ ಬಸ್ ಹತ್ತಿದೆ. ಹುಡುಗಿಯೊಬ್ಬಳು ಪಕ್ಕದಲ್ಲೇ ಬಂದು ಕುಳಿತಳು. ಒಂದೇ ಸಮನೆ ನನ್ನ ಕಿವಿಗಳನ್ನು ನೋಡುತ್ತಾ ಕುಳಿತಿದ್ದಳು.
ಅವಳು ಇಳಿಯುವ ಮೊದಲು "ಮೇಡಂ ನಿಮ್ಮ ಕಿವಿಯೋಲೆ ತುಂಬಾ ಚೆಂದ ಇದೆ'' ಅಂದಳು. "ಥ್ಯಾಂಕ್ಸ್'' ಅಂದೆ.
"ಏನು ಓದುತ್ತಿದ್ದೀಯಾ?'' ಕೇಳಿದೆ.
"ಪ್ರಥಮ ಪಿಯುಸಿ''
"ಯಾವ ಸ್ಕೂಲ್''
"ಇಲ್ಲೆ ಹತ್ತಿರದ ಕಾಲೇಜು''
"ನಿನ್ನ ಹೆಸರು?''
"ಆಯೆಷಾ'' ಎಂದು ನಕ್ಕಳು.
ಮತ್ತೆ ಅವಳಿಂದಲೇ ಪ್ರಶ್ನೆ "ನೀವು ಎಲ್ಲಿ ತಕ್ಕೊಂಡೀರಿ ಓಲೆನಾ?''
''ಮಲ್ಲೇಶ್ವರಂ ಫುಟ್ ಪಾತ್''
"ಎಷ್ಟು ರೂಪಾಯಿ?''
"ನಲವತ್ತು''
""ವಾಹ್, ಕಡಿಮೆ ರೇಟು. ಬಹಳ ಚೆನ್ನಾಗಿದೆ. ತುಂಬಾ ಚೆಂದ ಕಾಣಿಸುತ್ತೆ'' ಎಂದು ನಗುತ್ತಾ ಇಳಿದುಹೋದಳು. ನನಗೂ ಅವಳ ಕಿವಿಯೋಲೆ ಹೇಗಿದೆ ಎನ್ನುವ ತವಕ...ಆದರೆ, ಅದು ಕಾಣಿಸಲೇ ಇಲ್ಲ. ಏಕೆಂದರೆ,ಅವಳು ಬುರ್ಖಾ ಧರಿಸಿದ್ದಳು!.
***************
ಅವನ ಬೈಟು ಕಾಫಿ
ರಾತ್ರಿ ಎಂಟರ ಹೊತ್ತು. ಅಂದು ನಮಗಿಬ್ಬರಿಗೆ ಜಗಳವಾಗಿತ್ತು. ಇಬ್ಬರೂ ಬಿಡಲಿಲ್ಲ. ಮಾತಿಗೆ-ಮಾತು. ಒಂದು ರೀತಿಯಲ್ಲಿ ಕುರುಕ್ಷೇತ್ರ. ಕೆನ್ನೆ ಮೇಲೆ ಬಿತ್ತು ಅವನ ಕೈ. "ನಮ್ಮಮ್ಮನೂ ನಂಗೆ ಹೊಡೆದಿಲ್ಲ. ನೀನ್ಯಾಕೆ ಕೆನ್ನೆಗೆ ಹೊಡೆದೆ?' ಎಂದು ಅಳುತ್ತಾ ಕೇಳಿದೆ, "ಕೆನ್ನೆಗಲ್ಲದೆ ಇನ್ನೆಲ್ಲಿ ಹೊಡೀಬೇಕು?' ಎಂದ ಆತ. ನನ್ನ ಸಿಟ್ಟು ಇನ್ನಷ್ಟು ಹೆಚ್ಚಿತು. "ನೋಡು ನಿಂಗೆ ಡಿವೋರ್ಸ್ ಕೊಟ್ಟುಬಿಡ್ತೀನಿ...ಬೇಡ ನೀನು ನಂಗೆ'' ಎಂದೆ. ಒಂದರ್ಧ ಗಂಟೆಯಲ್ಲಿ ಹತ್ತು-ಹದಿನೈದು ಸಲ ಡಿವೋರ್ಸ್ ರಿಪೀಟ್ ಆಯ್ತು. ಅದಕ್ಕೆ ಆತ ಹೇಳಿದ. "ಅರೆರೆ, ಈಗ ರಾತ್ರಿ. ಲಾಯರ್ ಗಳು ಇರಲ್ಲಮ್ಮ. ನಾಳೆ ಬೆಳಿಗ್ಗೆ ಡಿವೋರ್ಸ್ ಕೊಡುವಿಯಂತೆ. ಈಗ ನಿದ್ದೆ ಮಾಡು'' ಎಂದ. ಅವನ ಮಾತು ಕೇಳಿ ನಗು ಬಂದರೂ ತೋರಿಸಿಕೊಳ್ಳದೆ, ಹೊದಿಕೆ ಹೊದ್ದು ನಿದ್ದೆಗೆ ಜಾರಿದೆ. ಬೆಳಿಗ್ಗೆ ನಾನು ಎದ್ದಾಗ ಆತ ನನ್ನೆದುರು ಕಾಫಿ ಹಿಡಿದು ನಿಂತಿದ್ದ. "ಡಿವೋರ್ಸ್ ಕೊಡ್ತಿಯಲ್ಲ...ಈವರೆಗೆ ನಿಂಗೆ ಕಾಫಿನೂ ಮಾಡಿಕೊಟ್ಟಿಲ್ಲ. ಅದ್ಕೆ ಇವತ್ತು ಕಾಫಿ ಮಾಡಿದ್ದೀನಿ...ಪ್ಲೀಸ್ ಬೈ ಟು ಕಾಫಿ'' ಎಂದಾಗ ನಗುತ್ತಲೇ ಅಡುಗೆಮನೆಗೆ ಓಡಿದೆ!
***************
ಗಾಳಿಮರದ ವಿಳಾಸ ನಾಪತ್ತೆ
ಆ ಗಾಳಿಮರ ನನಗೆ ಭಾಳ ಇಷ್ಟ. ಏಕಾಂತ ಕಲಿಸಿದ್ದು ಅದೇ ಗಾಳಿಮರ, ಬರೆಯಲು ಕಲಿಸಿದ್ದು ಅದೇ ಗಾಳಿಮರ, ಖುಷಿ-ದುಃಖಗಳಿಗೆ ಸಾಥ್ ನೀಡಿದ್ದು ಅದೇ ಗಾಳಿಮರ. ಬರೋಬ್ಬರಿ ಐದು ವರ್ಷಗಳ ಕಾಲ ಗಾಳಿಮರದೊಂದಿಗೆ ನಂಟು. ಮುಂಜಾವಿನ ಹೊತ್ತು ಬೇಗ ಎದ್ದು ಓದಲು ಕುಳಿತುಕೊಳ್ಳುವುದು ಅದೇ ಗಾಳಿಮರದಡಿ, ಸಂಜೆ ಕಾಲೇಜಿನಿಂದ ಬಂದ ತಕ್ಷಣ ಮತ್ತೆ ಪೆನ್ನು, ಪುಸ್ತಕಗಳ ಜೊತೆ ಕೂರುವುದು ಅದೇ ಗಾಳಿಮರದಡಿ. ಅದೆಷ್ಟೋ ಕವನಗಳು, ಕತೆಗಳು, ಪ್ರೇಮಪತ್ರಗಳು ,..ಎಲ್ಲವನ್ನೂ ಗೀಚಿದ್ದು ಅದೇ ಗಾಳಿಮರದಡಿ. ಮನೆಗೆ, ಸ್ನೇಹಿತರಿಗೆ ಎಲ್ಲರಿಗೂ ಪತ್ರ ಬರೆದಿದ್ದು ಅದೇ ಗಾಳಿಮರದಡಿ. ಅದಿರಲಿ, ಐದು ವರ್ಷಗಳ ಕಾಲ ವರ್ಷಕ್ಕೆರಡು ಬಾರಿ ನಡೆದ ಮಹಾ ಪರೀಕ್ಷೆಗಳಿಗೆ ಓದಿ ಓದಿ ಕಲಿತಿದ್ದು ಅದೇ ಗಾಳಿಮರದಡಿಯಲ್ಲಿ. ಮೊದಲ ಬಾರಿ ಆ ಮರದಡಿಯಲ್ಲಿ ಕುಳಿತು ನಿಟ್ಟುಸಿರುಬಿಟ್ಟಾಗ ಅದಿನ್ನೂ ಸಣ್ಣ ಗಿಡವಾಗಿದ್ದು, ಐದು ವರ್ಷಗಳ ಬಳಿಕ ಅದು ಬಲಿತು ಮರವಾಗಿತ್ತು, ವಿಶಾಲವಾಗಿ ಹರಡಿತ್ತು. ನನ್ನೊಬ್ಬಳಿಗೆ ಮಾತ್ರ ಹಲವಾರು ಮಂದಿಗೆ ನೆರಳು ನೀಡುತ್ತಿತ್ತು. ಮೊನ್ನೆ ಮೊನ್ನೆ ಮತ್ತೆ ಗಾಳಿಮರ ನೋಡಲು ಹೋಗಿದ್ದೆ...ಬರೋಬ್ಬರಿ ಏಳು ವರ್ಷಗಳ ಬಳಿಕ. ಆ ನನ್ನ ಪ್ರೀತಿಯ ಗಾಳಿಮರದ ವಿಳಾಸವೇ ಇರಲಿಲ್ಲ. ಅಲ್ಲೊಂದು ಅಂಗಡಿ ಇತ್ತು. ಅಲ್ಲಿ ಬಂದು ಬೀಡಿ-ಸಿಗರೇಟು ಸೇದುವ, ತರಕಾರಿ, ಅಕ್ಕಿ, ಸಾಮಾನು ಕೊಳ್ಳುವ ಮಂದಿ...ಯಾರಿಗೂ ಗೊತ್ತಿಲ್ಲ ಆ ಗಾಳಿಮರದ ವಿಳಾಸ!

Monday, March 25, 2013

ಗೌಡ್ರ ಬೋರ್ ವೆಲ್ ಮತ್ತು ನಮ್ಮನೆ ಬಾವಿ


ಗೌಡ್ರ ಮನೆಗೆ ಬೋರ್ ವೆಲ್ ಬಂತಂತೆ, ಇನ್ನೇನೋ ಬೇಸಿಗೆ ಬಿರುಸಾಗಿದೆ. ನಮ್ಮ ಬಾವೀಲಿ ನೀರು ಬತ್ತುತ್ತಾನೇ ಇರ್ಲಿಲ್ಲ. ಇನ್ನು ಈ ಮಂದಿ ಬೋರ್ ವೆಲ್ ಹಾಕಿಸಿದ್ರೆ ಅದ್ಯಾರ ಮನೆ ಮುಂದೆ ಬಿಂದಿಗೆ ಹಿಡಿಬೇಕೋ...ಅಮ್ಮ ಗೊಣಗುತ್ತಾ ಜಗುಲಿ ಮೇಲೆ ಕುಳಿತಿದ್ದಳು. ನನಗಿನ್ನೂ ಚಿಕ್ಕ ವಯಸ್ಸು. ಬೋರ್ ವೆಲ್ ಬರುವುದಕ್ಕೂ, ನಮ್ಮನೆ ಬಾವಿ ಬತ್ತೋದಕ್ಕೂ ಅದೆಂಥ ಸಂಬಂಧ ಉಂಟು? ಎಂದು ಕೇಳಿದೆ. "ಉಂಟು..ಸಂಬಂಧ... ನೀರು ಸಿಗೋತನಕ ಕೊರೀತಾರೆ..ಅಂತರ್ಜಲ ಬತ್ತಿಹೋಗುತ್ತೆ. ಆಗ ಸುತ್ತಮುತ್ತಲ ಬಾವಿಗಳ ನೀರು ಬತ್ತುತ್ತೆ' ಎಂದು ಆಕ್ರೋಶದಿಂದ ಹೇಳುತ್ತಿದ್ದಳು ಅಮ್ಮ. ಅಮ್ಮ ಹುಟ್ಟಿದಾಗಿನಿಂದ ನಮ್ಮನೆ ಬಾವಿ ಬತ್ತುವುದನ್ನೇ ನೋಡಿರಲಿಲ್ಲವಂತೆ. ಬರೀ ಆರು ಅಡಿಯಲ್ಲಿ ನೀರು. ವರ್ಷದ ಮೂರು ಕಾಲದಲ್ಲಿಯೂ ನೀರಿಗೆ ಬರವಿಲ್ಲ. ಬೇಸಿಗೆಯಲ್ಲಿ ಕೂಡ ಕುಡಿಯಲು, ದನ-ಕರುಗಳಿಗೆ, ತೆಂಗು-ಕಂಗುಗಳಿಗೆ ನೀರಿನ ಕೊರತೆ ಇರಲಿಲ್ಲ.

ದಿಢೀರನೆ ಗೌಡ್ರ ಮನೆಗೆ ಬೋರ್ ವೆಲ್ ಬಂದಿದ್ದು ಅಮ್ಮನ ತಲೆ ಚಿಟ್ಟು ಹಿಡಿಸಿತು. "ಹಾಳಾದವು...ಯಾರ ಹೊಟ್ಟೆಗೋ ಕನ್ನ ಹಾಕ್ತಾರೆ'' ಅಂತ ಬೈತಾನೆ ಇದ್ಳು. ಬೋರ್ ವೆಲ್ ಬಂದ ದಿನ ಅಮ್ಮ ನಿದ್ದೆ ಮಾಡಿರಲಿಲ್ಲ. ಗೌಡ್ರ ಬಳಿ ಹೋಗಿ "ನೀವು ಬೋರ್ ವೆಲ್ ಹಾಕಿದ್ರೆ ನಮ್ಮ ಬಾವಿ ಬತ್ತುತ್ತೆ'' ಎಂದು ಹೇಳಕ್ಕಾಗುತ್ತೆ? ಅದೂ ಇಲ್ಲ. ಅಮ್ಮಂಗೆ ಹೇಳಿದೆ "ನಾವು ಇನ್ನೊಂದು ಬಾವಿ ತೋಡೋಣ. ಆಗ ಎರಡು ಬಾವಿಗಳಲ್ಲಿ ನೀರಿರುತ್ತೆ ಅಲ್ವಾ?'' . ಅಮ್ಮಂಗೆ ಸಿಟ್ಟು ಬಂದು "ಸುಮ್ನಿರು..ಮಧ್ಯೆ ಬಾಯಿ ಹಾಕ್ಬೇಡ. ಎಲ್ಲಿ ತೋಡಿದ್ರೂ ಒಂದೇ...ಆದ್ರೆ ರಾಮಣ್ಣ ಜೋಯಿಸರು ಈಗಿರುವ ಬಾವಿ ನೀರನ್ನೇ ಕುಡಿಬೇಕು...'' ಎಂದು ಅದು-ಇದು, ದಿಕ್ಕು-ದಿಸೆ ಅಂತ ಮಾತಾಡತೊಡಗಿದಳು. ಅಮ್ಮನ ಸಾತ್ವಿಕ ಸಿಟ್ಟು ನನಗಾಗ ಅರ್ಥವಾಗಲಿಲ್ಲ.


ಮರುದಿನ ಬೋರ್ ವೆಲ್ ತೋಡುವ ಯಂತ್ರಗಳು ಗೌಡ್ರ ತೋಟಕ್ಕೆ ಬಂದವು. ನಮ್ಮೂರಿಗೆ ಅದೇ ಮೊದಲ ಬೋರ್ ವೆಲ್. ಹಾಗಾಗಿ, ಸುತ್ತಮುತ್ತಲಿನ ಎಲ್ಲರೂ ಬೋರ್ ವೆಲ್ ನೋಡಲು ಬಂದರು. ಮಕ್ಕಳಂತೂ ರಚ್ಚೆ ಹಿಡಿದು ಶಾಲೆಗೆ ಚಕ್ಕರ್ ಹಾಕಿ ಬೋರ್ ವೆಲ್ ತೋಡುವುದನ್ನು ನೋಡಲು ಬಂದಿದ್ದರು. ನಾನೂ ಅಮ್ಮನ ಸಿಟ್ಟನ್ನೂ ಕೇರ್ ಮಾಡದೆ ಗೌಡ್ರ ಮನೆಯತ್ತ ಓಡಿದೆ. ಏನು ಸೌಂಡ್...ಗುರ್...ಬುರ್...ಬೆಳಿಗ್ಗೆಯಿಂದ ಸಂಜೆ ತನಕ ಕೊರೆತಿದ್ದೇ ಕೊರೆದಿದ್ದು...ಒಂದೇ ಸಮನೆ ಅದೆಷ್ಟೋ ಎತ್ತರಕ್ಕೆ ನೀರಿನ ಬುಗ್ಗೆಗಳು ಚಿಮ್ಮತೊಡಗಿದವು. ಗೌಡ್ರ ಮುಖ ಖುಷಿಯಿಂದ ತಾವರೆಯಂತೆ ಅರಳುತ್ತಿತ್ತು.


ನೀರಿನ ಚಿಮ್ಮುವಿನಾಟ ನೋಡಿ ಜಿಂಕೆಯಂತೆ ನೆಗೆಯುತ್ತಾ ಮನೆಗೆ ಬಂದೆ. ಅಮ್ಮನ ಕಣ್ಣುಗಳು ಕೆಂಪಾಗಿ, ಮುಖ ಬಾಡಿಹೋಗಿತ್ತು. ರಾತ್ರಿ ಅನ್ನಕ್ಕೆ ಅಕ್ಕಿ ಬೀಸುತ್ತಾ ಕುಳಿತಿದ್ದಳು. "ಅಮ್ಮಾ ಮಾತಾಡು..'' ಎಂದೆ. "ಬೇಸಿಗೆ, ನಮ್ಮನೆ ಬಾವಿ ಬತ್ತಿದ್ರೆ ಯಾರ ಮನೆಗೆ ಹೋಗಿ ನೀರಿಗಾಗಿ ಬೇಡಲಿ'' ಎನ್ನುತ್ತಾ ದೇವರ ಮನೆಗೆ ಹೋಗಿ ಒಂದು ರೂಪಾಯಿ ನಾಣ್ಯವನ್ನು ಮನೆದೇವರು ಕಲ್ಲುರ್ಟಿಗೆ ಹರಕೆ ಇಟ್ಟು "ಬತ್ತದಿರಲಿ ಬಾವಿ'' ಎಂದಳು.
ಅಮ್ಮ ನಿತ್ಯ ದೀಪ ಹಚ್ಚುವಾಗ ನೀರಿಗಾಗಿ ಬೇಡೋದನ್ನು ಮರೆಯುತ್ತಿರಲಿಲ್ಲ. ಊರ ಸುತ್ತಮುತ್ತ ಇನ್ನೂ ಒಂದೆರಡು ಬೋರ್ ವೆಲ್ ಗಳು ಬಂದವು. ನಮ್ಮನೆ ಬಾವಿ ಬತ್ತತೊಡಗಿತು. ಬೇಸಿಗೆ ಬಂದ ತಕ್ಷಣ ಅಮ್ಮ "ಯಾರ ಮುಂದೆಯೂ ಬಿಂದಿಗೆ ಹಿಡಿದು ಬೇಡಲಾರೆ'' ಎಂದು "ಬಾವಿನ ಇನ್ನಷ್ಟು ಅಗೆಯುವ' ಕೆಲಸ ಮಾಡುತ್ತಾಳೆ...ಈಗಲೂ ಮಾಡುತ್ತಳೇ ಇದ್ದಾಳೆ...ಬರೀ "ಕುಡಿಯುವ ನೀರಿಗಾಗಿ''.


ಬೆಂಗಳೂರಿಂದ ಫೋನಾಯಿಸಿ ಕೇಳಿದ್ರೆ ಹೇಳುತ್ತಾಳೆ "ನಿಮ್ಮೂರಲ್ಲಿ ನೀರು ಉಂಟಾ? ನೋಡು ಮೊನ್ನೆ ಮೊನ್ನೆ ಬಾವಿ ಹೂಳೆತ್ತುವ ಕೆಲಸ ಮಾಡಿಸಿದೆ. ಅರ್ಧ ಅಡಿ ಹೆಚ್ಚು ಗುಂಡಿ ಮಾಡಲಾಗಿದೆ. ಪರ್ವಾಗಿಲ್ಲ ಕುಡಿಯಲು ನೀರು ಸಿಗುತ್ತದೆ. ಆದರೆ, ದನಕರುಗಳಿಗೆ ನೀರು ಸಿಗಲ್ಲ ಎಂದು ಸಾಕುವುದನ್ನೇ ಬಿಟ್ಟಿದ್ದೇನೆ. ತೆಂಗು, ಬಾಳೆ, ಅಡಿಕೆ ಗಿಡಗಳು ಮಾತ್ರ ಬೇಸಿಗೆಯಲ್ಲಿ ಬಾಡಿಹೋಗುತ್ತಿರುವುದನ್ನು ನೋಡಿ ಹೊಟ್ಟೆ ಉರಿಯುತ್ತಿದೆ. ಮನೆದೇವ್ರ ಕೃಪೆ..ಕುಡಿಯೋಕ್ಕಾದ್ರೂ ನೀರು ಸಿಗುತ್ತೆ'' ಎನ್ನುತ್ತಾಳೆ.

Thursday, March 21, 2013

ಅಮೆರಿಕನ್ ಒಬ್ಬನ ಕನಸಿನ ಕಥೆ

ಬೆಳಿಗ್ಗೆ ಹನ್ನೊಂದರ ಸಮಯ. ಪ್ರತಿನಿತ್ಯ ಬರುವ ಬಸ್ ಅಂದು ನಾನು ಬರುವ ಹೊತ್ತಿಗೆ ಹೋಗಿಬಿಟ್ಟಿತು. ಬಸ್ ನಿಲ್ದಾಣದಲ್ಲಿ ಕಾಯುತ್ತಾ ಕುಳಿತಿದ್ದೆ. ಐವತ್ತು ದಾಟಿದ ಮನುಷ್ಯ ಪಕ್ಕದಲ್ಲೇ ಬಂದು ಕುಳಿತ. ತಲೆಕೂದಲು ಬೆಳ್ಳಿಯಂತೆ ಫಳಫಳ ಎಂದು ಹೊಳೆಯುತ್ತಿತ್ತು. ನೋಡಿದ ತಕ್ಷಣ  ಈ ಅಸಾಮಿ ನಮ್ಮ ದೇಶದನಲ್ಲ ಎಂದು ಗೊತ್ತಾಗುತ್ತಿತ್ತು.

ನಾನು ಸುಮ್ಮನಿದ್ದರೂ ಆತನೇ ಮಾತಿಗೆಳೆದ. "ನಾನು ಶಿವಾಜಿನಗರಕ್ಕೆ ಹೋಗಬೇಕು. ಯಾವ ಬಸ್‌ನಲ್ಲಿ ಹೋಗಬಹುದು?'' ಎಂದು ಇಂಗ್ಲಿಷ್‌ನಲ್ಲಿ ಕೇಳಿದ. "ನೀವು ಎರಡು ಬಸ್ ಬದಲಾಯಿಸಬೇಕು. ಇಲ್ಲಿಂದ ನೇರವಾಗಿ ಅಲ್ಲಿಗೆ ಬಸ್ ಇಲ್ಲ'' ಎಂದು
ಅವನಿಗೆ ಬಸ್‌ಗಳ ನಂಬರ್ ಕೂಡ ಕೊಟ್ಟೆ. ಏಳೆಂಟು ಬಸ್ ಗಳ ನಂಬರನ್ನು ಪುಟ್ಟ ಡೈರಿಯಲ್ಲಿ ನೀಟಾಗಿ ಬರೆದಿಟ್ಟುಕೊಂಡ. ಡೈರಿಯನ್ನು ಜೇಬಿಗಿಳಿಸಿಕೊಂಡು "ಥ್ಯಾಂಕ್ಸ್'' ಅಂದು "ಭಾರತೀಯರು ಎಲ್ಲೇ ಹೋದರೂ ಸುಳ್ಳು ಹೇಳಲ್ಲ, ಹೆಮ್ಮೆಯಾಗುತ್ತದೆ'' ಎಂದು ಖುಷಿಯಿಂದ ಹೇಳಿದ.  ಜೊತೆಗೆ ಒಂದು ದಿನ ಮುಂಚೆ ಆತ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಬರುವಾಗ ದಾರಿ ಗೊತ್ತಾಗದೆ ಪರದಾಡಿದ್ದು, ಆಟೋದವನು ಮಾಡಿದ ಸಹಾಯವನ್ನೂ ನೆನಪಿಸಿಕೊಂಡ.

‘ನೀನು ಭಾರತಕ್ಕೆ ಏಕೆ ಭೇಟಿ ಮಾಡಿರುವೆ?' ಎಂದು ಕೇಳಿದೆ. ನನ್ನ ಪ್ರಶ್ನೆ ಕೊನೆಯಾಗುವ ಮೊದಲೇ ಆತ ಉತ್ತರ ಹೇಳಲು ಶುರುಮಾಡಿದ್ದ. "ನನ್ನ ಹೆಸರು ಸ್ಯಾಮ್.  ಯುಎಸ್‌ಎನಿಂದ ಬಂದಿದ್ದೇನೆ. ಭಾರತಕ್ಕೆ ಇದೇ ಮೊದಲು ಬಂದಿರುವೆ. ಭಾರತ ಸಾಂಸ್ಕೃತಿಕವಾಗಿ ಬಹಳಷ್ಟು ವೈವಿಧ್ಯ ಇರುವ ದೇಶ ಎಂದು ಕೇಳಿದ್ದೆ. ಇತ್ತೀಚೆಗೆ ಒಂದು ಬಾರಿ ಭಾರತದ ಕನಸು ಬಿತ್ತು. ಅದರಲ್ಲೂ ಬೆಂಗಳೂರು ನಗರಕ್ಕೆ ನಾನು ಬಂದಿಳಿದ ಹಾಗೆ ಕನಸು ಬಿತ್ತು. ಹಾಗಾಗಿ, ನನಗೆ ಇಲ್ಲಿಗೆ ಬಂದು ನೋಡಲೇಬೇಕು ಎಂದು ಡಿಸೈಡ್ ಮಾಡಿದೆ'' ಎಂದು ಬಹಳ ಖುಷಿಯಿಂದ ನಗುನಗುತ್ತಲೇ ಹೇಳಿಕೊಂಡ. ನನಗೆ ಅಚ್ಚರಿಯಾಯಿತು. ಕೇವಲ ''ಒಂದು ಕನಸಿನಿಂದಾಗಿ'' ಆತ ಅದೆಷ್ಟೋ ಡಾಲರ್ ಖರ್ಚು ಮಾಡಿ ಭಾರತವನ್ನು ನೋಡಲು ಬಂದ!.  ನಾಳಿನ ಬಗ್ಗೆ ಯೋಚನೆ ಮಾಡದೆ ಈ ಕ್ಷಣದ ಜೀವನವನ್ನು ಖುಷಿಯಿಂದ ಕಳೆಯುವುದೆಂದರೆ ಇದೇನಾ ಅನಿಸಿತ್ತು. ಸಣ್ಣದೊಂದು ನಗುವಿನೊಂದಿಗೆ ಆತನಿಗೆ ಮನಸ್ಸಿನಲ್ಲೇ ಸಲಾಂ ಎಂದೆ

ಕದ್ದು ಕೇಳಿದ ದೆವ್ವದ ಕತೆಗಳು


ನಾನು ಮಗುವಾಗಿದ್ದಾಗ ನಮ್ಮದು ಅವಿಭಕ್ತ ಕುಟುಂಬ. ಒಂದೇ ಮನೆಯಲ್ಲಿ ಹತ್ತು-ಹದಿನೈದು ಮಂದಿ. ರಾತ್ರಿ ಹೊತ್ತು ದೊಡ್ಡೋರೆಲ್ಲ ಜೊತೆಗೆ ಕುಳಿತು ಊಟ ಮಾಡೋರು. ಮಕ್ಕಳಿಗೆಲ್ಲಾ ಬೇಗ ಊಟ ಹಾಕಿ ಮಲಗಿಸಿಬಿಡೋರು. ಊಟಕ್ಕೆ ಕುಳಿತಾಗ ಮತ್ತು ಊಟದ ಬಳಿಕ ಒಂದಷ್ಟು ಹೊತ್ತು "ಮಕ್ಕಳಿಗೆ ತಿಳಿಯಬಾರದ ವಿಷಯಗಳನ್ನು'' ದೊಡ್ಡೋರೆಲ್ಲ ಮಾತಾಡೋರು. ಆ ಲಿಸ್ಟ್ ನಲ್ಲಿ ದೆವ್ವದ ಕತೆಯೂ ಇತ್ತು. ಮಕ್ಕಳೆಲ್ಲಾ ಮಲಗಿದ ಮೇಲೆ ಅಜ್ಜಿ ಎಲ್ಲರಿಗೂ ಬಡಿಸಿ ದೆವ್ವದ ಕತೆ ಶುರುಮಾಡೋಳು. ನಾವೆಲ್ಲ ಮುಸುಕು ಹೊದ್ದು ಮಲಗುತ್ತಿದ್ದೇವು. ಆದರೆ, ನನಗೆ ನಿದ್ದೆಯೇ ಬರುತ್ತಿರಲಿಲ್ಲ. ಹೊದಿಕೆಯೊಳಗೆ ಕಣ್ಣುಬಿಟ್ಟುಕೊಂಡು ಹಾಗೇ ದೆವ್ವದ ಕತೆಗಳನ್ನು ಕೇಳುತ್ತಿದ್ದೆ. ಆದರೆ, ಹೆಚ್ಚಿನ ಸಮಯದಲ್ಲಿ ಈ ದೆವ್ವದ ಕತೆಗಳು ನನ್ನ ನಿದ್ದೆಯನ್ನು ಕಸಿದುಕೊಂಡಿದ್ದಂತೂ ನಿಜ. ಇದರಲ್ಲಿ ಆಯ್ದ ಮೂರು ಕತೆಗಳು ಇಲ್ಲಿವೆ.

********
ನಮ್ಮಜ್ಜ ತಾಳೆಮರದಿಂದ ಶೇಂದಿ ತೆಗೆಯುತ್ತಿದ್ದ. ಮುಂಜಾನೆಯಿಂದ ಸಂಜೆ ಐದರ ತನಕ ಅಜ್ಜನಿಗೆ ಈ ಕೆಲ್ಸ. ಪ್ರತಿದಿನ ರಜೆ ಹಾಕದೆ ನಿಯತ್ತಾಗಿ ದುಡಿಯೋನು. ಸಂಜೆ ಹೊತ್ತು. ಐದು ಗಂಟೆಗೆ ಸೊಂಟಕ್ಕೆ ಕತ್ತಿ ಕಟ್ಟಿಕೊಂಡು ಅಜ್ಜ ಹೊರಟಿದ್ದ. ಅಜ್ಜಿನೂ ಜೊತೆಗೆ ಹೊರಟಿದ್ಳಂತೆ. ಇನ್ನೇನೋ ಸೂರ್ಯ ಮುಳುಗುವ ಸಮಯ. ಕತ್ತಲಾಗುತ್ತಿತ್ತು...ಅಜ್ಜಿಯನ್ನ ತಾಳೆಮರದ ಕೆಳಗೆ ನಿಲ್ಸಿ ಅಜ್ಜ ಶೇಂದಿ ತೆಗೆಯೋಕೆ ಹತ್ತಿದ್ದ. ಅಜ್ಜಿ ಅಲ್ಲೇ ಪಕ್ಕದಲ್ಲಿದ್ದ ಗೇರು ಮರದ ಕೆಳಗಡೆ ಕುಳಿತಿದ್ದಳಂತೆ. ಎದುರುಗಡೆ ಅಸ್ಪಷ್ಟ ಆಕೃತಿ ಬಂದು ಮಾತಾಡಿಸಿದಂತೆ ಕೇಳಿಸಿತಂತೆ. ಜೊತೆಗೆ, ಜೋರಾಗಿ ಚಪ್ಪಾಳೆ ತಟ್ಟಿತ್ತಿತ್ತು. ಅಜ್ಜಿಗೆ ಗಾಬರಿಯಾಗಿ ಅಜ್ಜನ ಜೋರಾಗಿ ಕೂಗಿದ್ಳಂತೆ. ಅಜ್ಜ ಮರದ ತುದಿಯಿಂದಲೇ ಹೇಳಿದ್ರಂತೆ, " ನಿನಗೆ ಶೇಂದಿ ಕೊಡ್ತೀನಿ. ಸುಮ್ಮನಿದ್ದುಬಿಡು'' ಎಂದು. ಚಪ್ಪಾಳೆ ಸದ್ದು ನಿಂತಿತು. ಅಜ್ಜ ಕೆಳಗಿಳಿದು ಒಂದು ತೆಂಗಿನ ಚಿಪ್ಪಿನಲ್ಲಿ ಶೇಂದಿ ಇಟ್ಟುಬಿಟ್ಟು ಅಜ್ಜಿನ ಕರೆದುಕೊಂಡು ವಾಪಾಸ್ ಆದ್ತಂತೆ.

********
ಅಜ್ಜ ಒಂದು ದಿನ ನಮ್ಮನೆಗೆ ಬರುತ್ತಿದ್ದ. ಅಜ್ಜನಿಗೆ ಹಗಲು ಹೊತ್ತು ಶೇಂದಿ ತೆಗೆಯೋ ಕೆಲ್ಸ. ರಾತ್ರಿ ಹೊತ್ತು ನಮ್ಮನೆಯ ದನ-ಆಡುಗಳನ್ನು ನೋಡಿಕೊಳ್ಳಲು ನಮ್ಮನೆಗೆ ಬರೋನು. ನಮ್ಮಮ್ಮ 11 ಆಡುಗಳು ಮತ್ತು 3 ದನಗಳನ್ನು ಸಾಕಿದ್ದಳು. ಬೆಳಿಗೆದ್ದು ಅವುಗಳ ಕೆಲ್ಸ ಜಾಸ್ತಿ ಇರೋದ್ರಿಂದ ಅಜ್ಜ ರಾತ್ರಿ ನಮ್ಮನೆಗೆ ಬಂದುಬಿಡೋನು. ಒಂದು ದಿನ ಅಜ್ಜ ಬರುವಾಗ ತುಂಬಾ ರಾತ್ರಿಯಾಗಿತ್ತು.  ಸಂಜೆ ಹೊತ್ತಿನ ಹುಳಿ ಶೇಂದೀನ ಹೊಟ್ಟೆಗೇರಿಸಿಕೊಂಡು ಸ್ವಲ್ಪ ಟೈಟಾಗೇ ಅಜ್ಜ ರಾತ್ರಿ ಹೊತ್ತು ನಮ್ಮನೆಗೆ ಹೊರಟಿದ್ದ. ದಟ್ಟಕಾಡಿನ ನಡುವೆ ಕಾಲುದಾರಿ. ಬರೀ ಪಾದಗಳನ್ನು ಊರಲಷ್ಟೇ ಜಾಗ. ಸುತ್ತಮುತ್ತ ದೊಡ್ಡ ದೊಡ್ಡ ಮರಗಳು, ಎತ್ತರಕ್ಕೆ ಬೆಳೆದ ಹುಲ್ಲು-ಪೊದೆಗಳು. ಅಜ್ಜ ಬರುತ್ತಿದ್ಧಂತೆ ನಡುದಾರಿಯಲ್ಲಿ ಬೆಳ್ಳಿ ಕೂದಲ, ಬಿಳಿದಾದ ಗಡ್ಡವುಳ್ಳ, ಉದ್ದದ ಮನುಷ್ಯ ಒಬ್ರು ಸಿಕ್ಕಿದ್ರಂತೆ. ಬಿಳಿ ಅಂಗಿಯನ್ನು ಧರಿಸಿದ ಆತ ಅಜ್ಜನ ಜೊತೆ ಎಲ್ಲಿಗೆ ಹೋಗುತ್ತಿದ್ದೀರಿ ಎಂದೆಲ್ಲಾ ವಿಚಾರಿಸಿದಾಗ ಅಜ್ಜ ಕಾಡೊಳಗಿನ ದಾರಿಯಲ್ಲಿ ಒಬ್ಬನೇ ಹೋಗುತ್ತಿದ್ದೇನೆ...ಜೊತೆ ಸಿಕ್ಕಂತಾಯಿತು ಎಂದುಕೊಂಡರಂತೆ. ಅರ್ಧದಾರಿ ತನಕ ಬಂದ ಬಿಳಿ ಅಂಗಿಯ ಮನುಷ್ಯ ಹಿಂದೆ ತಿರುಗಿ ನೋಡಿದರೆ ಇರಲಿಲ್ಲವಂತೆ!.

********
ನಮ್ಮನೆ ಊರುವುದು ಪುತ್ತೂರಿನ ಪುಟ್ಟ ಹಳ್ಳಿ. ರಸ್ತೆ ಇಲ್ಲದೆ ದಟ್ಟ ಕಾಡುಗಳ ನಡುವೆ ನಿಂತ ಆ ಹಳ್ಳಿಗೆ ಕರೆಂಟು ಬಂದಿದ್ದು ಏಳೆಂಟು ತಿಂಗಳ ಹಿಂದೆ. ರಾತ್ರಿ ಹೊತ್ತು ಹೊರಗಡೆ ಬರಲೂ ಭಯ. ಅಂಥಾದ್ರಲ್ಲಿ ದಿನಾ ಏಳು ಗಂಟೆಯ ಹೊತ್ತಿಗೆ ಒಂದು ಹಕ್ಕಿ ಕೂಗಲು ಶುರುಮಾಡುತ್ತೆ. 9.30 ತನಕ ಅದು ಕೂಗುತ್ತಲೇ ಇರುತ್ತೆ. ನಮ್ಮಜ್ಜಿ ಮತ್ತು ಅಜ್ಜನ ಲೆಕ್ಕದಲ್ಲಿ ಅದು ಯಾರದೋ ಪ್ರೇತ.  ನಾನಾಗ ಇನ್ನೂ ಸ್ಕೂಲ್ ಹತ್ತದ ಮಗು. ನಮ್ಮಜ್ಜನ ಬಳಿ ಗನ್ ಇತ್ತು. ಸಮಯ ಸಿಕ್ಕಾಗೆಲ್ಲಾ ಅಜ್ಜ ಗನ್ ಬೆನ್ನಿಗೇರಿಸಿಕೊಂಡು ಹೋಗುತ್ತಿದ್ದ. ಈ ಹಕ್ಕಿ ಕೂಗಾಟಕ್ಕೆ ಅಜ್ಜಿ ದಿನಾ ರಗಳೆ ತೆಗೆಯೋಳು. ಒಂದು ದಿನ ಅಜ್ಜ ಗನ್ ಬೆನ್ನಿಗೇರಿಸಿಕೊಂಡು ಹಕ್ಕಿನ ಶಿಕಾರಿ ಮಾಡಲು ಹೊರಟೇ ಬಿಟ್ಟ. ಅಜ್ಜ ಐದಾರು ಸಲ ಹೊಡೆದರೂ ಹಕ್ಕಿ ಸಿಗಲೇ ಇಲ್ಲ. ಅದು ಕೂಗ್ತಾನೆ ಇತ್ತು. "ಕೈಗೆ ಸಿಗದ ದೆವ್ವ'' ಎಂದುಕೊಂಡು ನಮ್ಮಜ್ಜ ಸುಮ್ಮನಾಗಿದ್ದ.