Saturday, June 12, 2010

ಅಳೋದು ವೀಕ್‌ನೆಸ್ ಅಲ್ಲ




ಅಳೋದು ನಿನ್ನ ವೀಕ್‌ನೆಸ್!
ಎಂದು ಬೈಯಬಹುದು, ಆದ್ರೆ ಅಳೋದ್ರಲ್ಲೂ ಒಂಥರಾ ಖುಷಿಯಿದೆ. ಅಂದು ಸ್ಕೂಲಿಗೆ ಹೋಗಲ್ಲ ಎಂದು ಅಮ್ಮನ ಸೆರಗು ಹಿಡಿದು ರಚ್ಚೆ ಹಿಡಿದಾಗ ಅಮ್ಮ ಉದ್ದ ಕೋಲಿನಲ್ಲಿ ಹೊಡೆದು ಶಾಲೆಗೆ ಕಳಿಸಿದ್ದು ನೆನಪಾಗುತ್ತೆ. ಕ್ಲಾಸಿನಲ್ಲಿ ನನ್ನ ಊದಿಕೊಂಡ ಮುಖ ನೋಡಿ ಮುಖ ಏಕೆ ಹೀಗಿದೆ ಎಂದಾಗ ಕಣ್ಣಿಗೆ ಕಸ ಬಿದ್ದಿದೆ ಎಂದು ಹಸಿ ಹಸಿ ಸುಳ್ಳು ಹೇಳಿದ್ದೆ. ಟೀಚರ್ ಬಳಿ ಹೇಳದಿದ್ರೂ ಅತ್ತು ಅತ್ತು ಸಮಾಧಾನ ಮಾಡಿಕೊಂಡಿದ್ದೆ. ಅಮ್ಮ ನೀಡಿದ ಬೆತ್ತದ ರುಚಿನೂ ಮರೆತೇ ಹೋಗಿತ್ತು.
ಹೌದು,ಅಳೋದ್ರಲ್ಲಿ ನಗುವಿಗಿಂತಲೂ ಹೆಚ್ಚಿನ ಸುಖ ಇದೆ. ಥೂ! ಅಳ್ತೀಯಾ ಎಂದು ಎಲ್ರೂ ನಮ್ಮ ಮೇಲೆ ರೇಗಬಹುದು. ಆದರೆ, ಅಳು ನನ್ನ ಶಕ್ತಿ, ಅಳು ನನಗೆ ಮತ್ತೆ ನಗುವಾಗುವ ಚೈತನ್ಯ, ಅಳು ನನ್ನೆಲ್ಲಾ ನೋವುಗಳನ್ನು ಮರೆಯೋಕಿರುವ ದಾರಿ. ಅಳು ಯಾವ ಹೆಣ್ಣಿನ ವೀಕ್ ನೆಸ್ ಕೂಡ ಅಲ್ಲ, ಹೆಣ್ಣಲ್ಲದೆ ಗಂಡು ಅಳೋಕ್ಕಾಗುತ್ತಾ? ಅಳು ಹೆಣ್ಣಿನ ಹುಟ್ಟು ಶಕ್ತಿ ಎಂದು ಹೇಳೋದು ನಂಗೆ ಹೆಮ್ಮೆನೇ.

ನಾನು ಅಮ್ಮನ ಮನೆಯಿಂದ ಗಂಡನ ಮನೆಗೆ ಬರುವಾಗ ಅತ್ತಿದ್ದೆ. ಅದು ಅಮ್ಮನ ಜೊತೆಗೆ, ಮನೆ ಜೊತೆಗೆ ಆಕೆ ಕಟ್ಟಿಕೊಂಡ ಅನನ್ಯ ಬಾಂಧವ್ಯ. ಗಂಡನೆದುರು ಗಳಗಳನೆ ಅಳಬಹುದು, ಅದು ಹೆಣ್ಣಿನ ವೀಕ್‌ನೆಸ್ ಅಲ್ಲ, ಗಂಡನ ಮೇಲಿನ ಪ್ರೀತಿ. ಮಕ್ಕಳು ತಪ್ಪು ಮಾಡಿದಾಗ ಕಣ್ಣೀರು ಒರೆಸುತ್ತಾ ಬುದ್ಧಿ ಹೇಳೋ ಅಮ್ಮ, ತನ್ನ ಗಂಡ ತಪ್ಪು ಮಾಡಿದಾಗಲೂ ಅಳುತ್ತಲೇ ಅವನೆದೆಯಲ್ಲಿ ಆಸರೆ ಪಡೆಯೋ ಪತ್ನಿ, ಅದು ಅವಳ ವೀಕ್ ನೆಸ್ ಅಲ್ಲ. ತನ್ನವರಲ್ಲದವರ ಎದುರು ಹೆಣ್ಣೊಬ್ಬಳು ಎಂದೂ ಅಳಲಾರಳು. ಅಳೋದ್ರ ಹಿಂದೆ ನೋವು, ಕಾಳಜಿ, ಪ್ರೀತಿ, ವಿಶ್ವಾಸ ಎಲ್ಲನೂ ಇರುತ್ತೆ.

ಕಳೆದುಕೊಂಡ ಅಜ್ಜ-ಅಜ್ಜಿಯ ನೆನಪು ಅಳು ತರಿಸಿಲ್ವಾ? ಎಲ್ಲೋ ಮರೆಯಾದ ಗೆಳತಿ ಅಥವಾ ಗೆಳೆಯನ ನೆನಪು ಕಾಡಿದಾಗ ಕಂಗಳು ಹನಿಗೂಡೋಲ್ವಾ? ತವರು ಮನೆಯ ನೆನಪಾದಾಗ ಗಂಡನ ಮಡಿಲಲ್ಲಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತಿಲ್ವಾ? ಈ ಅಳು ಕೂಡ ಬರೋದು ಎದುರಿಗೆ ನಮ್ಮ ಅಳುವನ್ನೂ ಸ್ವೀಕರಿಸುವವರು ಇದ್ದಾರೆ ಎಂದಾಗ ಮಾತ್ರ. ಕಣ್ಣಿರಿನ ಬೆಲೆ ತಿಳಿಯೋರು ನಮ್ಮೆದುರು ಇದ್ದಾಗ ಮಾತ್ರ. ಅದು ವೀಕ್ ನೆಸ್ ಅಲ್ಲ. ಪ್ರೀತಿ, ಸ್ನೇಹ, ಅನನ್ಯ ಬಾಂಧವ್ಯದ ಬೆಸುಗೆಯೊಂದಿದ್ದಲ್ಲಿ ಅಳು ಬರುತ್ತೆ. ಅದು ಯಾವ ಹೆಣ್ಣಿನ ವೀಕ್‌ನೆಸ್ ಅಲ್ಲ, ಅಳು ತನ್ನೊಳಗೆ ಪರಿಹಾರ ಕಂಡುಕೊಳ್ಳುವ ಪರಿ ಅಷ್ಟೇ.
ಪ್ರಕಟ: (http://hosadigantha.in/epaper.php?date=06-03-2010&name=06-03-2010-21)

Wednesday, May 19, 2010

ಭರವಸೆ ಬದುಕಿನ ಪ್ರೀತಿ

ಬೆಳಗೆದ್ದು ಸ್ನಾನ ಮಾಡುವ ಸೋಪು ಮೈಯನ್ನು ಬೆಳ್ಳಗಾಗಿಸುತ್ತೆ ಎನ್ನುವುದು ಒಂದು ಸಣ್ಣ ಭರವಸೆ , ನಿಜ ಗೊತ್ತು; ಎಷ್ಟೇ ತಿಕ್ಕಿದರೂ ಮೈಗೆ ಅಂಟಿ ಬಂತ ಬಣ್ಣ ಪೇರ್ಮನೆಂಟ್ ! ಹಲ್ಲುಜ್ಜುವ ಪೇಸ್ಟ್ ಖಂಡಿತಾ ಹಲ್ಲನ್ನು ಬೆಳ್ಳಗಾಗಿಸುವುದಿಲ್ಲ ಎಂಬುದು ಸತ್ಯ, ಆದರೂ ಸ್ವಲ್ಪ ಬೆಳ್ಳಗೆ ಕಾಣುತ್ತಿದೆ ಅನ್ನುವುದು ನಮ್ಮ ಸಣ್ಣ ನಂಬಿಕೆ !! ಬದುಕಿನ ಭರವಸೆ ಬೆಳ್ಳಂಬೆಳಿಗ್ಗೆ ಅಲ್ಲಿಂದಲೇ ಶುರುವಾಗೋದು ,

ಇಂದು ಗಂಡ ಮನೆಗೆ ಕುಡಿದು ಬರಲಾರ ಎಂಬ ಹೆಂಡತಿಯ ಭರವಸೆ , ಇನ್ನು ಸ್ವಲ್ಪೇ-ಸ್ವಲ್ಪ ದಿನ ನನಗೂ ಮದುವೆ ಆಗೇ ಆಗುತ್ತೆ, ನಾಳೆ ನನ್ನನ್ನು ನೋಡ ಬರುವ ಹುಡುಗ ನನ್ನನ್ನು ಒಪ್ಪೇ-ಒಪ್ಪುತ್ತಾನೆ ಎಂಬ ಭರವಸೆ ಹೊತ್ತ 30 ದಾಟಿದ ಯುವತಿ, ಎಂದಾದರೂ ಒಂದು ದಿನ ಆಕೆ ನನ್ನನ್ನು ಇಷ್ಟ ಪಟ್ಟಾಳು ಎಂಬ ಹುಡುಗನ ಸಣ್ಣ ಆಶಾ ಕಿರಣ. ಭರವಸೆಯ ಭಾವಗಳೇ ಹಾಗೆ ನಾವು ಬಿಟ್ಟರು ಅದು ನಮ್ಮನ್ನು ಬಿಡಲಾರವು. "ಭರವಸೆ ಬದುಕಿನ ಪ್ರೀತಿ".. ಬಹುಷಃ ನಾವು ಹುಟ್ಟುವ ಮೊದಲೇ ಬದುಕಿನ ಭರವಸೆಗಳು ನಮಗಾಗಿ ಹುಟ್ಟಿರುತ್ತವೆಯೇನೂ. ಅಡಿಗರು ಅದಕ್ಕೆ ಹೇಳಿರಬೇಕು " ಇಂದಲ್ಲ ನಾಳೆ ಹೊಸ ಬಾನು ಬಗೆ ತೆರೆದೀತು ಕರಗೀತು ಮುಗಿಲ ಬಳಗಾ...''

ಹಿಂದಿ ಗೀತಕಾರ ಶೈಲೇಂದ್ರ ಒಂದು ಕಡೆ ಹೀಗೆ ಬರೆಯುತ್ತಾರೆ: " ತು ಜ್ಹಿಂದಾ ಹೈ, ತೋ ಜ್ಹಿಂದಗಿ ಕಿ ಜೀತ್ ಪೆ ಯಕೀನ್ ಕರ್, ಅಗರ್ ಕಹಿ ಹೈ ಸ್ವರ್ಗ್ ತೋ ಉತರ್ ಲಾ ಜಮೀನ್ ಪರ್, ಯೆ ಗಮ್ ಕೆ ಔರ್ ಚಾರ್ ದಿನ್ ಸಿತಮ್ ಕೆ ಔರ್ ಚಾರ್ ದಿನ್ , ಯೆ ದಿನ್ ಭಿ ಜಾಯೆಂಗೆ ಗುಜ್ಹರ್, ಗುಜ್ಹರ್ ಗಯೇ ಹಜ್ಹಾರ್ ದಿನ್"

ನಿಜ ಸಾವಿರಾರು ದಿನಗಳು ಈಗಾಗಲೇ ಕಳೆದು ಹೋಗಿದೆ, ಈಗಿರುವ ಅಳಲು, ಖೇದ, ವೈರ ನಾಚಿಕೆ, ದೋಷ, ಕುಂದು ಕಳೆಯಲೇಬೇಕು. ಯೆ ದಿನ್ ಭಿ ಜಾಯೆಂಗೆ ಗುಜ್ಹರ್. ಈ ಭರವಸೆಯೇ ಹೀಗೆ. ರೆಕ್ಕೆ ಬಿಚ್ಚಿ ಹೃದಯದ ಟೊಂಗೆಯಲ್ಲಿ ಕೂತು ಯಾವ ಪದಗಳಿಲ್ಲದೆ ತನ್ನದೇ ಶೃತಿಯಲ್ಲಿ ನಿರಂತರ ಹಾಡುತ್ತಿರುತ್ತದೆ. ಪರಧಿಯುಳ್ಳ ನಿರಾಸೆಗಳನ್ನು ಬದುಕು ಸ್ವೀಕರಿಸಲೇ ಬೇಕಾಗುತ್ತದೆ , ಆದರೆ ಅನಂತ ಭರವಸೆ, ನಂಬಿಕೆ ಬದುಕಿನ safety vault.

Wednesday, April 21, 2010

ಭಾವಗೀತ


ಇಂದು ಮಳೆ ಬರುತ್ತಿದೆ. ಈ ಮಳೆನೇ ಹಾಗೇ, ಒಂದೊಂದು ಸಲ ಭಾವಕ್ಕೂ ಭಾಷೆ ಕೊಡೋದು, ಭಾಷೆಗೂ ಮಾತು ಕಲಿಸೋದು. ನೀನಿಲ್ಲದ ಹೊತ್ತಲ್ಲಿ ನಿನಗೆ ಚೆಂದದ ಪತ್ರ ಬರೀಬೇಕು ಅನಿಸಿತ್ತು. ಆದ್ರೂ, ನನ್ನೆಲ್ಲಾ ಭಾವಗಳನ್ನು ಒಟ್ಟಿಗೇ ಹರವಿದ್ರೂ ಯಾಕೋ ಬರೆಯಲಾಗುತ್ತಿಲ್ಲ. ಕಿಟಕಿಯಾಚೆ ನೋಡಿದರೆ ಅಲ್ಲಿ ತುಂತುರು ಹನಿಗಳು ಕಲರವ. ಸಣ್ಣವಳಿರುವಾಗ ಅಮ್ಮನ ಮನೆಯಲ್ಲಿ ಇದೇ ಮೊದಲ ಮಳೆಗೆ ಅಂಗಳಕ್ಕಿಳಿದು ಆಲಿಕಲ್ಲು ಹೆಕ್ಕಿ, ಜಾರಿ ಬಿದ್ದಿದ್ದು ಎಲ್ಲಾ ನೆನೆಪುಗಳು ಧಕ್ಕೆಂದು ಮನದ ಪರದೆಯಲ್ಲಿ ಮೂಡಿಬಿಟ್ಟವು. ಒಂದೆಡೆ ನಿನ್ನ ಆಗಮನದ ನಿರೀಕ್ಷೆ, ಮೊದಲ ಮಳೆಗೆ ಇಳೆ ಪುಳಕಗೊಂಡಂತೆ ನಿನ್ನ ಆಗಮನದ ನಿರೀಕ್ಚೆಯಲ್ಲಿ ಮನ ಸಂಭ್ರಮಿಸುತ್ತಿತ್ತು. ಭಾವಗಳು ಹೀಗೇನಾ? ನೆನಪಿನ ಚಿತ್ರಗಳ ಜೊತೆ-ಜೊತೆಗೆ ಅದೇನೋ ಚಡಪಡಿಕೆ, ಕುತೂಹಲ, ಅವ್ಯಕ್ತವಾದ ಆನಂದ, ಹಂಬಲಗಳ ತಾಕಲಾಟ. ನಿನಗೂ ಹಾಗೇ ಅನಿಸುತ್ತಾ ಹೇಳು?

ನನ್ನೆಲ್ಲಾ ಬದುಕಿನ ಭಾವಗಳನ್ನು ಹೆಕ್ಕಿ ನೋಡಿದಾಗಲೂ ಅಷ್ಟೇ, ಅವುಗಳಿಗೆ ನೀನೇ ಜೀವ, ನೀನೇ ಹುರುಪು-ಉತ್ಸಾಹ. ಅಲ್ಲೆಲ್ಲಾ ನೀನೇ ಕಾಣ್ತಿದ್ದೀಯಾ. ಮಾತು-ಮೌನ ಎಲ್ಲವುಗಳಿಗೆ ಭಾಷೆ ಕೊಟ್ಟೋನು ನೀನೇ ಕಣೋ. ಪ್ರೀತಿಯ ನಾವೆಯಲ್ಲಿ ನನ್ನ ಬದುಕಿನ ಅಸ್ತಿತ್ವವನ್ನು ಕಣ್ಣುರೆಪ್ಪೆಯಲ್ಲಿಟ್ಟುಕೊಂಡು ಸಾಕಿದ್ದೀಯಾ. ನಿನ್ನೆಲ್ಲಾ ಸಿಟ್ಟು, ಕೋಪ-ತಾಪಗಳನ್ನು ನನ್ನೆದುರು ಹೊರಹಾಕಿ, ನನ್ನೆದೆಯಲ್ಲಿ ಉಸಿರಾಗಿಬಿಟ್ಟಿದ್ದಿಯಾ. ನನ್ನೆಲ್ಲಾ ದುಗುಡ-ದುಮ್ಮಾನಗಳನ್ನು, ನಗು-ನಲಿವುಗಳನ್ನು ನಿನ್ನೆದುರು ಹರವಿ ಹೆಕ್ಕಿಕೋ ಎಂದಾಗ ಹಾಗೆ ಎಲ್ಲವನ್ನೂ ಹೆಕ್ಕಿಕೊಂಡಿದ್ದೆ ನೋಡು. ಅದೇ ಕಣೋ ಪ್ರೀತಿ. ಬೀಸೋ ಮಳೆ ಗಾಳಿಯನ್ನೂ ಲೆಕ್ಕಿಸದೆ, ವರ್ಷದ ಆಗಮನಕ್ಕೆ ಕಾಯುವ ಬರಡು ರೈತನಂತೆ ನೀನು ನನಗಾಗಿ ಕಾಯುತ್ತಿದ್ದೆ ನೋಡು, ನಾನೆಷ್ಟು ಹೆಮ್ಮೆ ಪಟ್ಟಿದ್ದೆ ಗೊತ್ತಾ?

ನನ್ನಲ್ಲಿ ಮುನಿಸಿಕೊಂಡು ಆ ಪುಟ್ಟ ಕೆರೆಯ ನಿಶ್ಚಲ ನೀರ ಮೇಲೆ ಕಲ್ಲುಗಳನ್ನು ಹೆಕ್ಕಿ ಬಿಸಾಡಿದಾಗಲೂ ಆ ಕಲ್ಲುಗಳು ಉಲಿದಿದ್ದು ನನ್ನ ಹೆಸರನ್ನೇ. ನೋವು-ನಲಿವು, ಸುತ್ತಲಿನ ಸತ್ಯ-ಮಿಥ್ಯ ಎಲ್ಲವನ್ನೂ ಪ್ರೀತಿಸೋಕೆ ಕಲಿಸಿ, ನನ್ನೊಳಗೊಂದು ಸಂಭ್ರಮದ ಬದುಕು ಕಟ್ಟಿ, ಕುಂಚ ಹಿಡಿದು ನಿಂತ ನನ್ನನ್ನು ನಿನ್ನೆದೆಯಲ್ಲಿ ಸ್ವಾತಿ ಮುತ್ತಾಗಿಸಿದವನು ನೀನೇ ಕಣೋ. ನನ್ನ ಮೌನದ ಪ್ರೀತಿ ಭಾಷೆಗೆ ಮಾತಾಗಿ, ಬದುಕು ಭವಿಷ್ಯದ ಚಿತ್ತಾರ ಬರೆದವನೂ ನೀನೇ. ನಿನ್ನ ಹುಸಿಮುನಿಸು, ನೀ ನಿತ್ಯ ಕುಟ್ಟುವ ಕೀ ಬೋರ್ಡಿನ ಸಂದಿನಲ್ಲಿ, ದಿನಕ್ಕೆ ನಾಲ್ಕು ಬಾರಿ ಸೇದುವ ಎರಡು ಸಿಗರೇಟು, ಅದರಿಂದ ಹೊರಬರುವ ದಟ್ಟ ಹೊಗೆ, ನೀನು ಕುಳಿತಿರುವ ಆ ಸುಂದರ ಕೋಣೆಯ ಕಿಟಕಿ ಮೂಲಕ ಹೊರಬರುವ ತಂಗಾಳಿ, ನಿನ್ನ ಎಲ್ಲಾ ಕಡೆಯೂ ನಾನಿದ್ದೀನಿ. ಆದರೆ, ನಿನ್ನ ಆಫೀಸ್ ನಲ್ಲಿ ನಿನ್ನ ಸೀಟಿನ ಪಕ್ಕ ಕುಳಿತಿರುವ ಆ ಕಪ್ಪು ಸುಂದರಿಯ ಎದೆಬಡಿತದಲ್ಲಿ ಮಾತ್ರ ನಾನಿರಲ್ಲ, ನಿನ್ನಾಣೆಗೂ!

***ಚಿತ್ರಾ ಸಂತೋಷ್
(ಹೊಸದಿಗಂತ ಪತ್ರಿಕೆಯ ನನ್ನ ವಾರದ ಕಾಲಂ 'ಭಾವಬಿಂದು'ನಲ್ಲಿ ಪ್ರಕಟ
http://hosadigantha.in/epaper.php?date=04-22-2010&name=04-22-2010-13

Friday, April 2, 2010

ಭಾವವೇ ನನ್ನದೆಯ ಕದ ಬಡಿಯದಿರು

ತುಂಬಾ ಸಲ ಹಾಗನಿಸಿದೆ, ಥತ್! ಈ ಭಾವಗಳನ್ನು ಹೆಕ್ಕಿ ಬಿಸಾಡಿಬಿಡಬೇಕೆಂದು. ಇದೇನು ಹುಚ್ಚು ಹುಡುಗಿ, ಭಾವಗಳನ್ನು ಹೊರತುಪಡಿಸಿದ ಬದುಕಿದೆಯೇ? ಎಂದು ನೀನು ಕೇಳಬಹುದು. ಹೌದು, ಭಾವಗಳನ್ನು ತುಂಬಾ ಪ್ರೀತಿಸಿದ್ದೆ, ಅವುಗಳನ್ನು ಹಾಗೇ ಬಾಚಿ ತಬ್ಬಿಕೊಂಡು ಮುದ್ದಾಡಿದ್ದೆ. ಒಂದೊಂದು ಸಲ ಪುಟ್ಟ ಮಗು ಥರ ಕಣ್ತುಂಬ ತುಂಬಿಕೊಂಡು ನನ್ನೆಲ್ಲಾ ವಿಷಾದಗಳಿಗೆ ವಿದಾಯ ಹೇಳಿದ್ದೆ. ನನ್ನದೆಯ ಬಡಿತದಲ್ಲೂ ಈ ಭಾವಗಳಿಗೆ ದನಿಯಾಗಿದ್ದೆ. ಇದು ಸುಳ್ಳಲ್ಲ, ನಿನ್ನಾಣೆಗೂ ನಿಜ.

ಆದರೆ, ಯಾಕೋ ಇಂದು ಈ ಭಾವಗಳೇ ಬೇಡ, ಎಲ್ಲೋ ದೂರಕ್ಕೆ ಬಿಸಾಕಿಬಿಡೋಣ ಅನಿಸ್ತಾ ಇದೆ. ನನ್ನೆದೆಯಲ್ಲಿ ನೋವಿನ ಎಳೆಗಳನ್ನು ಬಿಚ್ಚೋ ಬದಲು, ಹಾಗೇ ನನ್ನನ್ನು ಒಂಟಿಯಾಗಿ ಬಿಟ್ಟುಬಿಡು, ನನ್ನ ಪಾಡಿಗೆ ನಾನು ಇದ್ದುಬಿಡ್ತೀನಿ, ನಾನು ಯಾರಿಗೂ ಡಿಸ್ಟರ್ಬ್ ಕೊಡೊಲ್ಲ, ನನ್ನ ಮಾತಿಗೂ ಭಾಷೆಯಿಲ್ಲ, ಮೌನಕ್ಕೆ ಶರಣಾಗಿದ್ದೀನಿ. ನನ್ನದೆಯ ಕದ ಬಡಿಯದಿರು, ಅಲ್ಲಿ ನಾನು ಪ್ರೀತಿಸಿದ ಭಾವಗಳಿಗೆ ಜಾಗ ಕೊಡೊಲ್ಲ ಅಂತ ಸಿಟ್ಟಿನಿಂದ ಹೇಳುತ್ತಿದ್ದೇನೆ.

ತುಂಬಾ ಸಲ ಮನುಷ್ಯ ಹಾಗೆನೇ ಅಲ್ವಾ? ಒಂಟಿಯಾಗಿ ಇದ್ದುಬಿಡೋಣ ಅನಿಸುತ್ತೆ. ಭಾವಗಳ ಜೊತೆ-ಜೊತೆಗೇ ಜೀವಿಸೋ ಮನುಷ್ಯ ದಡಕ್ಕಂತ ಅಲೆಗಳಂತೆ ಬರುವ, ತಾನೇ ಎತ್ತಿ ಮುದ್ದಾಡಿದ ಆ ಭಾವಗಳಿಂದ ದೂರ ಇದ್ದುಬಿಡ್ತಾನೆ ಅಲ್ವಾ? ಆ ಕ್ಷಣ ಭಾವಗಳೆಂದರೆ ಸತ್ತು ಮಣ್ಣಾಗಿ ಹೋದ ತರಗಲೆಗಳಂತೆ! ಥತ್! ಹೀಗೆ ಆಗಬಾರದು,ಆದರೂ ಏಕಾಂಗಿಯಾಗಿರಬೇಕೆಂಬ ಹಂಬಲ. ಸುತ್ತಲ ಜಗತ್ತನ್ನು ಮರೆತು ತಾನೇ ಮೌನದ ಕನಸು ಕಾಣಬೇಕು, ಬದುಕಿನ ತರಂಗಗಳನ್ನು ಮೀರಿ ತಾನೊಬ್ಬನೇ ಸಂಭ್ರಮಿಸಬೇಕು, ನನ್ನೊಳಗಿನ ಕತ್ತಲು-ಬೆಳಕಿಗೆ ತಾನೊಬ್ಬನೇ ಬೆಳದಿಂಗಳಾಗಬೇಕು, ತನ್ನೆದುರು ಕಾಣುವ ಹಸುರು ಹಾಸಿನ ಮೇಲೆ ಏಕಾಂಗಿಯಾಗಿ ಕವಿತೆಯಾಗಬೇಕು, ಎಲ್ಲೋ ದೂರದ ನೀಲಿ ಸಮುದ್ರ ದಂಡೆಯಲ್ಲಿ ಒಂಟಿಯಾಗಿ ಮರಳಾಟ ಆಡಬೇಕು, ಅಲ್ಲಿ ಆಡೋ ಪುಟ್ಟ ಮಕ್ಕಳ ಜೊತೆ ನಾನೂ ಪುಟ್ಟ ಮಗುವಾಗಿಬಿಡಬೇಕು. ಈ ಭಾವಗಳ ಗೋಜೇ ಬೇಡಪ್ಪಾ ಅನಿಸಿಬಿಡುತ್ತೆ.

ಈ ಎಲ್ಲಾ ಭಾವ ತುಮುಲಗಳನ್ನು ಸ್ವಲ್ಪ ದಿನದ ಮಟ್ಟಿಗಾದರೂ ಗಂಟು ಕಟ್ಟಿ ಅಟ್ಟದ ಮೇಲೆ ಹಾಕುವುದು ಸ್ವಲ್ಪ ಜಾಣತನ ಇರಬಹುದೇನೂ ! "ಇಷ್ಟೊಂದು complex ಆಗ್ ಬೇಡ" ಅನ್ನೋ ನಿನ್ನ ಕಾಳಜಿ ಕೆಲವೊಂದು ಸಲ ಸರಿ ಅನ್ನಿಸಿದ್ರೂ , ಯಾವುದೂ ಒಂದು ಅಜ್ಞಾತಕ್ಕೆ ಹೋಗುವ ಆಸೆ. ನನ್ನ ಎಲ್ಲಾ ಮನದ ವಿಮರ್ಶೆ ಅಂತಿಮವಾಗಿ ನನ್ನ ಭಾವಕ್ಕೆ ಬಿಟ್ಟಿದ್ದು, ಪಕ್ಕಾ monopoly.

Wednesday, March 31, 2010

ಧರಿತ್ರಿ ಒಂದು ವರ್ಷದ ಮಗು!

ಈ ಮಾರ್ಚಗೆ ಧರಿತ್ರಿಗೆ ಒಂದು ವರುಷ. ಈಗ ನನ್ನ ಧರಿತ್ರಿ ಒಂದು ವರುಷದ ಮಗು. ಒಂದು ವರ್ಷದಲ್ಲಿ 38 ಬರಹಗಳನ್ನು ಕಂಡಿದ್ದಾಳೆ. ತುಂಬಾ ಕಡಿಮೆ ಅನಿಸುತ್ತಿದೆ. ಆದರೂ, ಏನೋ ಒಂಥರಾ ಖುಷಿ. ಅಷ್ಟಾದ್ರೂ ಬರೆದಿದ್ದೇನಲ್ಲಾ ಎಂಬ ಹೆಮ್ಮೆ. ಇನ್ನೂ ಧರಿತ್ರಿ ನಿರಂತರ, ನಿತ್ಯ ನಿರಂತರ.
ನಿಮ್ಮ ಪ್ರೋತ್ಸಾಹ, ಪ್ರೀತಿ ಅತ್ಯಗತ್ಯ. ಇರುತ್ತೆ ಅಲ್ವಾ? ನಂಗೊತ್ತು ಎಂದಿನಂತೆ ಈ ಧರಿತ್ರೀನಾ ಬೆನ್ನುತಟ್ಟುತ್ತಿರೆಂಬ ನಂಬಿಕೆ. ಪ್ರೀತಿಯಿರಲಿ. ಅದೇ ಭಾವಗಳೊಂದಿಗೆ ಮತ್ತೆ ನಿಮ್ಮ ಜೊತೆ ಮಾತಿಗಿಳಿಯುವೆ.
ವಂದನೆಗಳು
&ಚಿತ್ರಾ ಸಂತೋಷ್

Thursday, March 25, 2010

ಅಂತರಾಳ ಅಣಕವಾಟ


ಈ ಭಾವವನ್ನು ಎಲ್ಲೂ ಅಡಗಿಸಲು ಸಾದ್ಯವಿಲ್ಲವೇನೂ .. ನನ್ನ ಖುರ್ತಾ ಜೀಬಿನಲ್ಲಿ, ಜೋಡಿಸಿಟ್ಟ ಪುಸ್ತಕಗಳ ನಡುವೆ, ನನ್ನ ಕೀ ಬೋರ್ಡ್ ನ ಸಂದಿಗಳಲ್ಲಿ, ಅಣ್ಣನ ಸಿಗರೇಟು ಪ್ಯಾಕ್ ನಲ್ಲಿ ಕೊನೆಗೆ ಈ ಅಕ್ಷರಗಳ ಧೀರ್ಘ, ಒತ್ತು, ಸುಳಿಗಳ ನಡುವೆ ... ಛೆ !! ಎಷ್ಟೇ ಅಡಗಿಸಿಟ್ಟರು ಮತ್ತೆಲ್ಲೋ ಎದ್ದು ಬಂದು ತಲೆಗೆ ಮೊಟಕುತ್ತಿರುತ್ತವೆ. ಎಲ್ಲೋ ಓದಿದ ನೆನಪು - ಭಾವ , ಅವರವರ ಭಾವಕ್ಕೆ ಬೇಕಿದ್ದರೆ ಮಾತ್ರ. ಹೌದು ಈ ಭಾವ ನನಗೆ ಬೇಕಾಗಿತ್ತೇನೋ .
ಗಣಿತಕ್ಕೂ-ಕಾವ್ಯಕ್ಕೂ, ನನಗೂ-ನಿನಗೂ ಎಲ್ಲಕ್ಕೂ ಸಾಮ್ಯತೆ ತೋರಿ , ನಾನೇ ಪಯಣ ಬೆಳಸದ ನನ್ನ ದಾರಿಯಲ್ಲಿ ನನಗಿಂತಲೂ ಮುಂದೆ ಹೋಗಿ ನಿಂತ ದಾರಿ ಸೂಚಕ, ಈ ತರಹದ ಅತೀ ಭಾವುಕತೆಯನ್ನು ಯಾವುದೂ ಅಗೊಚಾರಕ್ಕೆ ಹರವಿಸಿದ ಹರ ಹರ ಮಹಾದೇವ. ಆ ನಿನ್ನ ಕಚ್ಚಾತನ, ಹುಳಿ, ಒಗರು, ಸ್ವಲ್ಪೇ ಸ್ವಲ್ಪ ತಿಕ್ಕಲುತನ , ಉಡಾಫೆ , ಹುಂಬತನ, ಎಷ್ಟು ಬಗೆದರು ತೀರದ ಪ್ರೀತಿ, ಪುಸ್ತಕಗಳ ನಡುವೆ ಮುಚ್ಚಿಟ್ಟ ನಿನ್ನ ಭಾವ ಚಿತ್ರಗಳು ಎಲ್ಲವೂ ಯಾವುದೂ ಹಳೆ ಮೌನವನ್ನು ನೆನಪಿಸುವ ಮತ್ತೊಂದು ಮೌನ.


ನಾ ಉಪಯೋಗಿಸೂ ಬಾಚಣಿಕೆ, ಪರ್ಸ್ , ಕಪ್ಪು ವಾಚು, ಕುರ್ತಾ ಹೀಗೆ ಇಂತಿಷ್ಟೇ ನನ್ನನ್ನು ಗುರುತಿಸಿಕೊಂಡು ನನ್ನ ಪಾಡಿಗೆ ನಾನಿದ್ದಾಗ, ದಕ್ಕನೆ ನನ್ನ ಎಲ್ಲಾ ಭಾವಗಳಿಗೆ ಪರಿಧಿ ಹಾಕಿದ ದೌಲತ್ತು ನಿನಗೇ ಇರಲಿ. ನನ್ನೆಲ್ಲ ನಗು , ಸಿಟ್ಟು -ಸೆಡವು, ತುಂಟಾಟಿಕೆ ಎಲ್ಲವನ್ನು ಅಕ್ಷರಗಳಲ್ಲಿ ಇಳಿಸುವುದು ಏನೂ ಒಂದು ತರಹ ವಿಚಿತ್ರ ಸಂಕಟ. ಯಾವುದೂ ಒಂದು ಹಳೆಯ ಹತಾಶೆ, ನಿನ್ನ ಕಂಡಾಗ ಯಾವುದೂ ಮಸಲತ್ತು ಮಾಡಿದವರ ಹಾಗೆ ನಗುವಾಗಿ ಗಾಳಿಗೆ ತೂರಿ ಹೋದಂತೆ ಅನುಭವ.


ಮತ್ತೆ ನಿನ್ನೊಂದಿಗೆ ಅದೇ ಹಳೆ ಪ್ರಾಮಾಣಿಕ ಕ್ಷಣಗಳನ್ನು ಮತ್ತೊಮ್ಮೆ ಪುರಸ್ಕರಿಸಿಬಿಡುವಾಸೆ. ಕೊನೆಗೆ ಸಿಕ್ಕಷ್ಟು ಬಾಚಿ-ಬಳಿದು ಮತ್ತಷ್ಟು ಕನಸುಗಳ ಹವಣಿಕೆಯಲ್ಲಿ ಕಾಯುವ ಭಾವ ಸ್ವಲ್ಪ ನಿರಾಳ . ಹವಣಿಸಿದೆಲ್ಲವು ಸಿಕ್ಕೊಡನೆ ಏಕ್ ಧಮ್ ಸೂಪರ್ ಹೈ-ವೇ, ಮತ್ತಷ್ಟು ಉದ್ದದ ಭಾವ. ತಿರುಗಿ ನೋಡಿದಾಗ ಪಯಣ ಇನ್ನು ಶುರುವಾಗಿಲ್ಲವೇನೂ..!! ಯಾವುದೂ ಒಂದು ನಾದಕ್ಕೆ ತಿರುಗಿ ಹೋಗುವ ಹುನ್ನಾರ


Photo: Santhosh Chidambar

Tuesday, March 23, 2010

ಮರಳಿ ಭಾವದೊಡಲಿಗೆ....



ಮದುವೆ ಕರೆಯೋಲೆ ಕೊಟ್ಟಾಯ್ತು. ಮದುವೆನೂ ಆಗೋಯ್ತು. ಕೆಲವರು ಇಲ್ಲೇ ವಿಶ್ ಮಾಡಿದ್ರು. ಕೆಲವರು ಮದುವೆಗೂ ಬಂದರು. ಐತಣಕೂಟಕ್ಕೂ ಬಂದರು. ಅದು ನಮಗೆ ಖುಷಿ. ಎಲ್ಲರಿಗೂ ನಬ್ಬಿಬ್ಬರ ಧನ್ಯವಾದಗಳು. ಹಾಗೇ ಇಟ್ಟಿಗೆ ಸಿಮೆಂಟಿನ ಪ್ರಕಾಶ್ ಹೆಗ್ಡೆ ತಮ್ಮ ಬ್ಲಾಗಿನಲ್ಲಿ "ಬ್ಲಾಗ್ ಲೋಕದ ಪರಿಣಯ' ಎಂದು ಬರೆದಿದ್ದರು. ಥ್ಯಾಂಕ್ಯೂ ಸರ್.


ಮದುವೆ ಗಡಿಬಿಡಿ ಎಲ್ಲಾ ಮುಗಿದುಹೋಯ್ತು. ಎಲ್ಲವೂ ಚೆನ್ನಾಗೇ ನಡೆಯಿತು. ಹಳೆಯ ಬದುಕು ಏನೋ ಹೊಸ ರೂಪ ಪಡೆದಂತೆ. ಮನೆಯವರ ಜವಾಬ್ದಾರಿನೂ ಮುಗಿದುಹೋಯ್ತು. ಈಗ ಮಾಮೂಲಿ ಆಫೀಸ್. ಮತ್ತೆ ಕೆಲಸ, ಅದೇ ಪತ್ರಿಕೆ, ಅದೇ ಆಫೀಸು, ಅದೇ ಜನರು, ಅದೇ ಓಡಾಟ, ಮನಸ್ಸು ಎಲ್ಲದಕ್ಕೂ ಮತ್ತೆ ಹೊಂದಿಕೊಳ್ಳಬೇಕನಿಸುತ್ತೆ. ಆದರೂ ಏನೋ ಖುಷಿಯ ಗುಂಗು. ಮದುವೆಗೆ ಮೊದಲು ದೇವರನ್ನು ನೀನೆಕೆ ಕಲ್ಲಾಗಿಬಿಟ್ಟೆ ಅಂತ ಬೈದಿದ್ದೆ. ತವರು ಬಿಡಬೇಕೆ? ಎಂದು ನೂರಾರು ಪ್ರಶ್ನೆಗಳ ಮಳೆ ಸುರಿದಿದ್ದೆ. ಆದರೆ, ದೇವರೇ ನಿನಗೆ ಬೈದುಬಿಟ್ಟೆ ಅಲ್ವ? ಅಂತ ಸಾರಿ ಅಂತ ಕೇಳ್ತಾ ಇದ್ದೀನಿ.


ಮದುವೆ ಗುಂಗಿನಿಂದ ಆಫೀಸು ಕೆಲಸಗಳನ್ನಷ್ಟೇ ಮಾಡುತ್ತಿದ್ದೆ. ಬ್ಲಾಗ್ ಬರಹಗಳತ್ತ ತಿರುಗಿ ನೋಡಲು ಸಮಯವಿರಲಿಲ್ಲ. ಇನ್ನು ಮತ್ತೆ ಬ್ಲಾಗ್ ಮುಂದುವರಿಸಬೇಕು. ನಾವಿಬ್ಬರೂ ಬ್ಲಾಗ್ ಬರಿಯಬೇಕು. ಇನ್ನು ಚೆನ್ನಾಗಿ ಬರೀಬೇಕು ಅಂತ ನಮ್ಮಾಸೆ. ನನ್ನ ಧರಿತ್ರಿ ಮತ್ತು ಶರಧಿ ಎರಡೂ ಬ್ಲಾಗ್ ಗಳು ನನ್ನ ಆತ್ಮೀಯು ಗೆಳತಿಯರು. ಇನ್ನು ಇವೆರಡನ್ನು ಚೆನ್ನಾಗಿ ಮುಂದುವರಿಸಬೇಕು. ಮತ್ತೆ ನಿಮ್ಮೆದುರಿಗೆ ಅದೇ ಪುಟ್ಟ ಪುಟ್ಟ ಬರಹಗಳೊಂದಿಗೆ ಕಾಣಿಸಿಕೊಳ್ಳುತ್ತೇವೆ. ಭಾವಗಳಿಗೆ ಬರವಿಲ್ಲ, ಅವುಗಳಿಗೇ ಅಕ್ಷರ ರೂಪ ತುಂಬುವಾಸೆ. ಎಲ್ಲೋ ಕಂಡ ಹಕ್ಕಿ, ಮುಗಿಲಲ್ಲಿ ತೇಲಾಡುವ ಮೋಡ, ನೆನಪಾಗುವ ಹುಟ್ಟೂರು, ಪ್ರೀತಿ ನೀಡಿದ ಒಡನಾಡಿಗಳು, ಗಂಡನ ಜೊತೆಗಿನ ಪುಟ್ಟ ಹುಸಿಮುನಿಸು, ಆಫೀಸ್ ನಲ್ಲಿನ ಕಿರಿಕಿರಿ, ಜಗತ್ತಿನಾಚೆಗಿನ ಭಾಷೆಯಿಲ್ಲದ ಭಾವಗಳು...ಎಲ್ಲವೂ ಅಕ್ಷರ ರೂಪ ಪಡೆಯಲಿವೆ. ಓದುತ್ತೀರಲ್ಲಾ...



ಪ್ರೀತಿಯಿಂದ
ಚಿತ್ರಾ ಸಂತೋಷ್