Wednesday, July 15, 2009

ನನ್ನೊಳಗಿನ ಇಬ್ಬನಿ ಹನಿಗಳು...

ಜೀವನ ಪ್ರೀತಿಯ ಅನುಭೂತಿ!

ಒಂದೇ ಒಂದು ಕ್ಷಣಕ್ಕೆ ನೀನು ಕವಿತೆಯಾಗು, ಮಳೆ ಬರ್ತಾ ಇದೆ!

ಬದುಕಿನಲ್ಲಿ ಇಟ್ಟಿದ್ದು ಎರಡನೇ ಹೆಜ್ಜೆ, ಅದರಲ್ಲಿ ಒಂದು ನೀನು!

ಮನಸ್ಸು ಒಣಗಿತ್ತು, ಥಟ್ಟನೆ ನೆನಪುಗಳು ಮುತ್ತಿದವು!

ನಗುಮಳೆಯಲ್ಲಿ ತೊಯ್ದುಬಿಡ್ತೀನಿ, ಕವನ ಬರೇತೀಯಾ ಹೇಳು!

ಒಡೆಯದಿರು ಕನ್ನಡೀನಾ..ಮತ್ತೆ ಒಂದಾಗಿಸೋಕೆ ಆಗೋಲ್ಲ.

ನಾನ್ಯಾಕೆ ನಗಬೇಕು..ನಿನ್ನ ನಗುವೇ ನನ್ನೊಳಗಿರುವಾಗ!

ಅಂದು ತುಂಬಾ ಅತ್ತಿದ್ದೆ. ನೀನು ಅಮ್ಮನಾಗಬೇಕಂದಿತ್ತು ಮನಸ್ಸು!

ನಿನ್ನ ನಗು ಮತ್ತು ಕಣ್ಣುಗಳನ್ನು ಪ್ರೀತಿಸ್ತೀನಿ. ಖುಷಿಯಲ್ಲಿದ್ದಾಗ ಬೆಳಕು ಕೊಡು.

ಯಾಕೋ ಕಾಡುತ್ತಿವೆ ಬಚ್ಚಿಟ್ಟುಕೊಂಡ ನೆನಪುಗಳು, ಆದರೆ ಅವುಗಳಿಗೆ ಜೀವವಿರಲಿಲ್ಲ!

ಕನಸು ಕಲ್ಲಾಗುವ ಮೊದಲು, ಹುಣ್ಣಿಮೆ ಬೆಳದಿಂಗಳು ಸೂಸಿಬಿಡು, ನಾನೂ ನಗುತ್ತೇನೆ..ನಿನ್ನಂತೆ!

ಬೆಳದಿಂಗಳಲ್ಲಿ ಕಲ್ಲು ಬೆಂಚಿನ ಮೇಲೆ ಕುಳಿತ ಎನಗೆ ಅಮ್ಮ ನೀಡಿದ ತುತ್ತು ನೆನಪಾಯಿತು, ಅಲ್ಲಿ ನಗುತ್ತಿದ್ದೆ!

Thursday, July 9, 2009

ನಾವ್ಯಾಕೆ 'ಮಗು'ವಿನ 'ನಗು'ವಾಗೊಲ್ಲ...?

ಹೌದು, ಆ ಮಗು ನನ್ನ ನೋಡಿ ಮುಗುಳುನಗು ಸೂಸಿಬಿಡ್ತು. ಏನೋ ಯೋಚನೆಯಲ್ಲಿ ಮುಳುಗಿದ್ದ ನಾನೂ ನಕ್ಕುಬಿಟ್ಟೆ...ನನಗರಿವಿಲ್ಲದೆಯೇ! ನಿಮಗೂ ಹಾಗೇ ಆಗಬಹುದು. ಹೌದು..ಅದಕ್ಕೆ ಕಾರಣ ಆ ಪುಟ್ಟ ಮಗುವಿನ ನಗು! ಹೌದು..ಮಕ್ಕಳು ನಕ್ಕರೆ ಹಾಗೇ ಸಕ್ಕರೆಯಂತೆ!. ನಾವು ನಮ್ಮನ್ನೇ ಮರೆತುಬಿಡುವಷ್ಟು ಚೆನ್ನಾಗಿ ನಗುತ್ತವೆ. ಎಷ್ಟೋ ಬಾರಿ ನನ್ನ ಮನಸ್ಸು ಆ ಮಗುವಿನಂತೆ ನಾನೂ ನಗಲು ಸಾಧ್ಯವಾಗುತ್ತಿದ್ದರೆ ಎಂದನಿಸುತ್ತೆ. ನಮ್ಮನೆ ಪಕ್ಕದ ಮಗು ಯಾಮಿನಿ ನಿತ್ಯ ಬಂದು ನಾನು ಸಿಟ್ಟಲ್ಲಿ ಗೊಣಗುಟ್ಟುತ್ತಿದ್ದರೂ ಆಂಟಿ ಆಫಿಸ್ ನಿಂದ ಯಾವಾಗ ಬಂದ್ರೀ? ಅಂತ ಕೇಳಿದಾಗ ಸಿಟ್ಟೆಲ್ಲ ಜರ್ರನೆ ಇಳಿದುಹೋಗುತ್ತೆ. ಮೊದಲ ಮಹಡಿಯಲ್ಲಿರುವ ಶ್ರೇಯಸ್ಸು ನನ್ನ ಚಪ್ಪಲ ಸದ್ದಿಗೆ ಬಾಗಿಲ ಬಳಿ ಬಂದು ಸಂದಿಯಲ್ಲಿ ನಿಂತು ಮುಗ್ಧವಾಗಿ ನಕ್ಕಾಗ ಮನತುಂಬಿ ಬಿಡುತ್ತೆ. ಬೆಳಿಗ್ಗೆಯಿಂದ ಸಂಜೆ ತನಕ ಆಫೀಸ್ ನಲ್ಲಿ ದುಡಿದು ದಣಿದರೂ ಆ ದಣಿವನ್ನೆಲ್ಲಾ ಆ ನಗು ನುಂಗಿಬಿಡುತ್ತೆ. ನಾನು ಈ ಹಿಂದೆ 'ನಾನೂ ಮಗುವಾಗಿರಬೇಕಿತ್ತು' ಎಂಬ ಬರಹ ಬರೆದಾಗ 'ಮಕ್ಕಳ ಜೊತೆ ನೀನು ಮಗುವಾಗಿಬಿಡು' ಅಂತ ಸಲಹೆ ನೀಡಿದವರು ಅದೆಷ್ಟೋ ಮಂದಿ. ಹೌದು, ನಂಗೂ ಹಾಗೇ ಅನಿಸುತ್ತೆ..ಪುಟ್ಟ ಮಕ್ಕಳ ಜೊತೆ ನಾವೂ ಮಕ್ಕಳಾಗಿಬಿಡೋದು ಎಷ್ಟು ಖುಷಿ ಕೊಡುತ್ತೆ ಅಂತ.

ಓನರ್ ಆಂಟಿಯ ಮಗು ಮನೀಷ್ ಬಂದು ತೊಡೆ ಮೇಲೆ ಕುಳಿತು ಬ್ಯಾಗೆಲ್ಲಾ ಡೈರಿ ಮಿಲ್ಕ್ ಕೊಡು ಎಂದು ಪೀಡಿಸಿದಾಗ ಅದೇ ಒಂಥರಾ ಖುಷಿ. ಬ್ಯಾಟ್ ಹಿಡಿಯಲು ಬಾರದ ಮಕ್ಕಳ ಜೊತೆ ನಾವೂ ಬ್ಯಾಟ್ ಹಿಡಿದು ಆಡೋದು ಅದೂ ಒಂಥರಾ ಖುಷಿ. ಕಾಲು ಜಾರಿ ದೊಪ್ಪನೆ ನೆಲದ ಮೇಲೆ ಬಿದ್ದ ಮಗುವನ್ನು ಸಂತೈಸಿದಾಗ ಆ ಮಗು ನೋವನ್ನೆಲ್ಲಾ ಮರೆತು ನಗುತ್ತೆ ಅಲ್ವಾ? ಅದೂ ಒಂದು ನೆಮ್ಮದಿಯ ಖುಷಿ. ಮಕ್ಕಳು ನಕ್ರೆ ಖುಷಿ, ಅತ್ರೂನೂ ಖುಷಿ, ಹೇಗಿದ್ರುನೂ ಮಕ್ಕಳು ಚೆಂದವೇ, ಅದಕ್ಕೆ ಮಕ್ಕಳನ್ನು ದೇವರಿಗೆ ಹೋಲಿಸುತ್ತಾರೆ. ಇನ್ನು ಕೆಲ ಮಕ್ಕಳು ತೊಟ್ಟಿಲಲ್ಲಿ ಮಲಗಿ ನಿದ್ದೆ ಮಾಡುತ್ತಿರುವಾಗಲೇ ನಗುತ್ತವೆ..ನನ್ನ ತಮ್ಮ ಹಾಗೇ ನಗುವಾಗ ಅಮ್ಮ ಹೇಳುತ್ತಿದ್ದ ನೆನಪು: ಮಗು ಅಂದ್ರೆ ದೇವರು ಪುಟ್ಟಾ, ಅದಕ್ಕೆ ನೋಡು ಇವ ನಗುತ್ತಾನೆ ಅಂತ!

ಹೌದು, ನಾವೂ ಮಕ್ಕಳಾಗಿರುವಾಗ ಹೀಗೆ ತೊಟ್ಟಿಲಲ್ಲಿ ನಕ್ಕಿರಬಹುದು, ಅತ್ತಿರಬಹುದು, ಅಲ್ಲೇ ಉಚ್ಚೆ ಹೊಯ್ದಿರಬಹುದು. ಆವಾಗ ಎಷ್ಟು ಮಂದಿ ನಮ್ಮ ಮುದ್ದಿಸುತ್ತಿದ್ದರು, ಆಟವಾಡಿಸುತ್ತಿದ್ದರು. ನಮ್ಮ ಜೊತೆ ಎಷ್ಟೋ ಮಂದಿ ಮಕ್ಕಳಾಗುತ್ತಿದ್ದರು ಎಂದನಿಸುತ್ತೆ. ಆದರೆ ಯಾಕೋ ಒಂದು ಪುಟ್ಟ ನೋವು ನಿತ್ಯ ನನ್ನೆದೆ ಕಾಡುತ್ತೆ, ಪೀಡಿಸುತ್ತೆ, ನೋಯಿಸುತ್ತೆ.
ಅದೇ ಪುಟ್ಟ ಮಗುವಾಗಿದ್ದಾಗ ಜಗತ್ತಿಗೇ 'ನಗು'ವಾಗಿದ್ದ ಈ ಮನುಷ್ಯ ಅದೇಕೆ ಕಳ್ಳನಾಗುತ್ತಾನೆ, ದರೋಡೆ ಮಾಡುವವನಾಗುತ್ತಾನೆ, ಸಮಾಜಕ್ಕೆ ಕಳಂಕವಾಗುತ್ತಾನೆ, ತಾಯಿ ಸಮಾನಳಾದ ಹೆಣ್ಣನ್ನು ಅತ್ಯಾಚಾರ ಮಾಡಿ ಬೀದಿಗೆಸೆಯುತ್ತಾನೆ, ಮೋಸ, ವಂಚನೆಯ ಕೂಪಕ್ಕೆ ತನ್ನ ಒಡ್ಡಿಕೊಳ್ಳುತ್ತಾನೆ? ಪುಟ್ ಪಾತ್ ನಲ್ಲಿ ನಡೆಯೋ ಬಡಬಗ್ಗರ ಮೇಲೆ ತನ್ನ ವಾಹನ ಸವಾರಿ ಮಾಡಿ 'ಕೊಲೆಗಾರ' ನಾಗುತ್ತಾನೆ? ಏಕೆ ಕನಸುಗಳನ್ನು ಕೊಂದು ಕೊಚ್ಚಿಹಾಕುತ್ತಾನೆ? ತನ್ನ ಗೋರಿಯನ್ನು ತಾನೇ ಯಾಕೆ ಕಟ್ಟಿಕೊಳ್ಳುತ್ತಾನೆ? ಬದುಕಿನ ಇತಿಹಾಸದಲ್ಲಿ 'ನಾಯಕ' ನಾಗುವಅದೇಕೆ 'ಖಳನಾಯಕ' ನಾಗುತ್ತಾನೆ? ಅಯ್ಯೋ ಆ ಪುಟ್ಟ ಮಗು ಅದೇಕೋ ಭಯೋತ್ಪಾದಕನಾದ? ಇಂಥ ಮಿಲಿಯನ್ ಡಾಲರ್ ಪ್ರಶ್ನೆಗಳು ನನ್ನ ನಿತ್ಯ ಕಾಡುತ್ತವೆ.

ಹೌದು, ಪ್ರತಿ ಮಾನವನೂ ಹುಟ್ಟುವಾಗ ಒಳ್ಳೆಯವನಾಗಿರುತ್ತಾನೆ, ಸುತ್ತಲ ಸಮಾಜ ಅವನನ್ನು ಕೆಟ್ಟವನಾಗಿಸುತ್ತದೆ ಯಾರೋ ತಿಳಿದವರು ಹೇಳಿದ ಮಾತು ನೆನಪಾಗುತ್ತಿದೆ. ಪುಟ್ಟ ಮಗುವಾಗಿದ್ದಾಗ ಸಮಸ್ತವನ್ನೂ , ಸಮಸ್ತರನ್ನೂ ಪ್ರೀತಿಸುವ ನಮ್ಮ ಮನಸ್ಸು ದೊಡ್ಡವರಾದಂತೆ ಪ್ರೀತಿಗೊಂದು ಪರಿಧಿ, ಸ್ನೇಹಕ್ಕೊಂದು ಪರಿಧಿ, ಬದುಕಿನ ಹೆಜ್ಜೆ-ಹೆಜ್ಜೆಯ ಬಾಂಧವ್ಯಗಳನ್ನೂ 'ಪರಿಧಿ'ಯೊಳಗೆ ಹಾಕಿಬಿಡುತ್ತವೆ. ಮಗುವಿನಂತೆ ಪ್ರೀತಿಸುವ, ಮಗುವಿನಂತೆ ನಕ್ಕು ಖುಷಿಕೊಡುವ ಆ ಮುಗ್ಧ, ಪ್ರಾಮಾಣಿಕ ಮನಸ್ಸು ಯವುದೋ 'ಪರಿಧಿ' ಯೊಳಗೆ ಸುತ್ತುತ್ತಿರುತ್ತೆ ಎಂದನಿಸುತ್ತೆ. ಜೀವನದಲ್ಲಿ ಪ್ರೀತಿ, ಸ್ನೇಹ-ಬಾಂಧವ್ಯಗಳ ಅನನ್ಯ ಅನುಭೂತಿಯಿಂದ 'ಬದುಕುವವರು' ವಂಚಿತರಾಗೋದು ಹೀಗೇ ಅಲ್ಲವೇ?

ಹೌದು, ಈ ದೇಶ ಮಗುವಿನ ನಗು ಸೂಸೋದು ಯಾವಾಗ? ಮತ್ತೆ ಮತ್ತೆ ಕೇಳುತ್ತಿದ್ದೆ ನನ್ನ ಅಂತರಾತ್ಮ ಕಂಗಳಲ್ಲಿ ಭರವಸೆಯ ಹುಣ್ಣಿಮೆ ಬೆಳಕು ಸೂಸುತ್ತಾ?!





Monday, June 29, 2009

ಅದ್ಯಾಕೋ ಅಕ್ಷರಗಳು ಖಾಲಿ ಪುಟದಲಿ ಮೂಡಲಿಲ್ಲ..!

ನಾನ್ಯಾಕೆ ಬರೆಯುತ್ತೇನೆ? ಅದೇ ನನ್ನ ಖುಷಿಗೆ, ನನ್ನ ಬರಹದ ತುಡಿತವನ್ನು ಇಲ್ಲಿ ಹಂಚಿಕೊಳ್ಳೋದಕ್ಕೆ. ನನ್ನೊಳಗಿನ ಪುಟ್ಟ ಪುಟ್ಟ ಖುಷಿಯ ಕ್ಷಣಗಳನ್ನು ನಿಮ್ಮ ಜೊತೆ ಹಂಚಿಕೊಳ್ಳೋದಕ್ಕೆ. ಮನದ ಮೂಲೆಯಲ್ಲಿದ್ದ ದುಗುಡ-ದುಮ್ಮಾನಗಳನ್ನು ನಿಮ್ಮ ಜೊತೆ ಹಂಚಿಕೊಂಡು ಮನಸ್ಸು ತಿಳಿಯಾಗಿಸೋದಕ್ಕೆ. ನನ್ನೊಳಗಿನ ಕನಸುಗಳನ್ನು ನಿಮ್ಮ ಜೊತೆ ಹಂಚಿ, ವಿಶ್ ಪಡೆಯೋದಕ್ಕೆ. ಹೌದು. ಹೇಳಲಾಗದ ಮಾತು, ಬಚ್ಚಿಡಲಾಗದ ಭಾವನೆಗಳನ್ನು ಇಲ್ಲಿ ಬಿಚ್ಚಿಡೋದಕ್ಕೆ. ಜಗತ್ತಿನ ಸತ್ಯ-ಮಿಥ್ಯಗಳನ್ನು ಕಂಡು ಕಂಗಳು ನೀರಾದಾಗ ಮನಸ್ಸು ಶುಭ್ರಗೊಳಿಸೋದಕ್ಕೆ ನಾ ಬರೆಯುತ್ತೇನೆ. ಜೀವನ ಪ್ರೀತಿಯಲ್ಲಿ ಮಿಂದು ಮನಸ್ಸು ಖುಷಿಗೊಂಡಾಗ 'ಬದುಕೆಷ್ಟು ಸುಂದರ' ಅಂತ ಖುಷಿಯಿಂದ ಬರೆದುಬಿಡ್ತೀನಿ. ಅದೇ ಇರೋ ಜೀವನದಲ್ಲಿ ಪುಟ್ಟ ಕಷ್ಟಗಳನ್ನೇ ಸಹಿಸಿಕೊಳ್ಳಲಾಗದೆ ಹೃದಯ ಭಾರವಾದಾಗ ಮತ್ತದೇ ಬೇಸರ..ಅದೇ ಹಾಡು..ಅನ್ನೋಕೂ ಈ ಅಕ್ಷರಲೋಕವೇ ಸಾಥ್ ನೀಡೋದು.

ತುಂಬಾ ದಿನಗಳಾಯ್ತು...ಏನೂ ಬರೆಯಕ್ಕಾಗ್ತಿಲ್ಲ. ..ಬರೆಯಲಿಲ್ಲ. ಒಂದಷ್ಟು ಕೆಲಸ ಹೆಗಲ ಮೇಲೆ ಬಿದ್ದಾಗ, ಒಂದಷ್ಟು ಹೊತ್ತು ವ್ಯರ್ಥ ಮಾತುಗಳಲ್ಲಿ ಕಳೆದುಹೋದಾಗ, ಮನೆಯ ಚಿಂತೆ ಕಾಡತೊಡಗಿದಾಗ..ಏನೋ ಒಂಥರಾ ಮನಸ್ಸು ಗೊಂದಲಗಳಲ್ಲಿ ಸಿಕ್ಕಾಗ ಬರೆಯಲು ಕುಳೀತರೂ ಬರೆಯಲಕ್ಕಾಗುತ್ತಿಲ್ಲ. ನನ್ನೊಳಗಿನ ಮಾತುಗಳಿಗೆ ಈ ಬ್ಲಾಗ್ ವೇದಿಕೆ ಅಂದ್ರೂ ಆಗ್ತಿಲ್ಲ. ತುಂಬಾ ನನ್ನನ್ನು ನಾನೇ ಬೈದುಕೊಂಡಿದ್ದೆ. ಹೀಯಾಳಿಸಿಕೊಂಡಿದ್ದೆ. ಖಾಲಿ ಪುಟಗಳನ್ನು ರಾಶಿ ಹಾಕೊಂಡು ಏಕಾಂಗಿಯಾಗಿ ಪೆನ್ನು ಹಿಡಿದು ಕುಳಿತರೂ ಕೈಗಳಲ್ಲಿ ಅಕ್ಷರಗಳು ಮೂಡುತ್ತಿಲ್ಲ, ಭಾವನೆಗಳು ಮಾತಾಡುತ್ತವೆ. ಕಣ್ಣುಗಳು ಮಾತಾಡುತ್ತವೆ, ಮೌನಗಳೂ ಮಾತಾಡುತ್ತವೆ. ಕಿವಿ ಇಂಪಾದ ಹಾಡುಗಳತ್ತ ತುಡಿಯುತ್ತದೆ. ಹೃದಯ ಜೀವನಪ್ರೀತಿಯ ಹುಡುಕಾಟದಲ್ಲಿ ಕಳೆಯುತ್ತೆ. ಮನಸ್ಸು ಮಣ್ಣುಗೂಡಿದ ಪ್ರೀತಿಯನ್ನು ನೆನೆಯುತ್ತೆ. ಆದರೆ ಅಕ್ಷರಗಳು ಖಾಲಿ ಪುಟದ ಮೇಲೆ ಬೀಳುತ್ತಿಲ್ಲ. ಕೈಯಲ್ಲಿರುವ ಪೆನ್ನು ಖಾಲಿ ಪುಟದ ಮೇಲೆ ಬಿಂದುವನ್ನಷ್ಟೇ ಇಟ್ಟು ಸುಮ್ಮನಿದ್ದೆ.

ಏನೇನೋ ಯೋಚನೆಗಳು..ಅಮೂರ್ತ ಕಲ್ಪನೆಗಳು. ಸತ್ಯ, ಪ್ರಾಮಾಣಿಕತೆ, ನಿಷ್ಕಲ್ಮಶ ಪ್ರೀತಿ ಯಾಕೋ ಢಾಳಾಗಿ ಕಾಣುತ್ತವೆ. ಪ್ರಾಮಾಣಿಕವಾಗಿ ಕೆಲ್ಸ ಮಾಡಿದ್ರೂ ಬಾಸ್ ಕೈಯಲ್ಲಿ ಬೈಸಿಕೊಳ್ತೀವಿ. ಬದುಕಿನಲ್ಲಿ ಮಾನವೀಯ ಬಾಂಧವ್ಯ, ಜೀವನಪ್ರೀತಿಯ ಕುರಿತು ಮಾತನಾಡೋರು ವೇದಿಕೆ ಮೇಲೆಯಷ್ಟೇ ಗೊಣಗುತ್ತಾರೆ. ಜೀವನ ಅಂದ್ರೆ ನಮ್ಮೂರ ಆಟದ ಮೈದಾನ ಅನ್ನೋರು ಕೆಲವರು, ಇನ್ನು ಕೆಲವರು ಜೀವನನಾ ಸೀರಿಯಸ್ ಆಗಿ ತಕೋಪಾ ಅಂತ ಬೋಧನೆ ಮಾಡ್ತಾರೆ. ಆದರೆ ಬೋಧನೆ ಮಾಡಿದವರಾರು ನಿಜವಾದ ಜೀವನಾನ ಕಂಡೋರಿಲ್ಲ, ಜೀವನದಲ್ಲಿ ಉದ್ದಾರವೂ ಆಗಿಲ್ಲ! ಇರಲಿ ಏನೇನೋ ಯೋಚನೆಗಳು..

ನೆನಪಾದುವು ಜಿ.ಎಸ್.ಎಸ್. ಅವರ ಕವನದ ಸಾಲುಗಳು.......
ನಾನು ಬರೆಯುತ್ತೇನೆ...
ನನ್ನ ಸಂವೇದನೆಗಳನ್ನು,
ಕ್ರಿಯೆ-ಪ್ರತಿಕ್ರಿಯೆಗಳನ್ನು,
ದಾಖಲು ಮಾಡುವುದಕ್ಕೆ..!
ನಿಂತ ನೀರಾಗದೆ ಮುಂದಕ್ಕೆ
ಹರಿಯುವುದಕ್ಕೆ...
ನನ್ನನ್ನು ನಾನು ಕಂಡುಕೊಳ್ಳುವುದಕ್ಕೆ...
ನಾನು ಬರೆಯುತ್ತೇನೆ
ಋಷಿಯ ನೋವಿಗೆ...
ರೊಚ್ಚಿಗೆ ಮತ್ತು ಹುಚ್ಚಿಗೆ..
ಅಥವಾ ನಂದಿಸಲಾರದ ಕಿಚ್ಚಿಗೆ...!


ಹೌದು..ಮತ್ತೆ ನಾನು ಬರೆಯುತ್ತೇನೆ..ನನ್ನೊಳಗನ್ನು ತೆರೆದಿಡುತ್ತೇನೆ..ಮುಂದಿನ ಬರಹ ಸದ್ಯದಲ್ಲಿಯೇ ನಿಮ್ಮೆದುರು ಕಾಣಲಿದೆ. ಬರ್ತಾ ಇರಿ..ಬೆನ್ನುತಟ್ಟುತ್ತಿರಿ..

Saturday, June 13, 2009

ಆಕೆಯೂ ನಗುತ್ತಾಳೆ..ದುಃಖಗಳನ್ನು ಎದೆಯೊಳಗಿಟ್ಟು!

ಅವಳು ನೆನಪಾಗುತ್ತಾಳೆ...!

ತುಂಬಾ ಸುಂದರ ಹುಡುಗಿ..ಥೇಟ್ ಕನಸುಳ್ಳ ಹುಡುಗಿ..ಭರವಸೆಯ ಹುಡುಗಿ. ಕತ್ತಿನಲ್ಲೊಂದು ತಾಳಿ..ಬದುಕಿಗೆ ಬೇಲಿ. ಅವಳ ನಗುವಿನಲ್ಲಿ ಕಾಣೋದು ಬರೀ ಬೆಳಕು..ನೋವಿನ ಕಣ್ಣೀರಿಲ್ಲ. ನಿತ್ಯ ನಗುತ್ತಾ ಬಾಳೋಳು..ಹುಣ್ಣಿಮೆಯ ತಂಪು ಬೆಳದಿಂಗಳಂತೆ! ಹೌದು..ಆಕೆಗೆ ನನಗಿಂತ ಮೂರು-ನಾಲ್ಕು ವರ್ಷ ಹೆಚ್ಚಾಗಿರಬಹುದು. ನಿತ್ಯ ಅವಳನ್ನು ನೋಡ್ತೀನಿ..ನಗುತ್ತಾಳೆ..ಪ್ರೀತಿಯ ಮಾತಾಡುತ್ತಾಳೆ. ಹೌದು, ಒಂದು ಖುಷಿಯ ಮಾತು ಸಾವಿರಾರು ದುಃಖಗಳಿಗೆ ಪರಿಹಾರ ನೀಡುತ್ತೆ..ಹಸಿದ ಹೊಟ್ಟೆಗೆ ಅನ್ನ ನೀಡುತ್ತೆ, ಬಾಯಾರಿದವನಿಗೆ ಒಂದು ಲೋಟ ನೀರು ನೀಡಿದಂತೆ ..ಅನ್ನೋದ್ರಲ್ಲಿ ನಂಬಿಕೆಯಿಟ್ಟ ನನ್ನಂಥವರಿಗೆ ಪ್ರೀತಿಯಿಂದ ಮಾತನಾಡಿಸುವವರನ್ನು ಕಂಡರೆ ಅಕ್ಕರೆ. ಆಕೆಯಲ್ಲೂ ನನಗೆ ಅಕ್ಕರೆ..ಪ್ರೀತಿ! ಎದುರುಗಡೆ ಸಿಕ್ಕಾಗ ಪುಟ್ಟದೊಂದು ನಗು..ಖುಷಿಯ ಹಿತ-ಮಿತ ಮಾತು. ಕುತ್ತಿಗೆಯಲ್ಲಿ ಜೋತುಬಿದ್ದಿದ್ದ ತಾಳಿ ಮಾತ್ರ ನನ್ನೊಳಗೆ ನೂರಾರು ಪ್ರಶ್ನೆಗಳಿಗೆ ಉತ್ತರ ಹೇಳದೆ ಮೌನವಾಗಿತ್ತು. ಹೌದು, ಹೆಣ್ಣಿನ ಬದುಕಿನಲ್ಲಿ ಸಪ್ತಪದಿ..ಅದಕ್ಕಿರುವಷ್ಟು ಮಹತ್ವ ಬಹುಶಃ ಬೇರೇನಕ್ಕೂ ಇರಲಿಕ್ಕಿಲ್ಲ ಅನಿಸುತ್ತೆ..'ತಾಳಿ' ಹೆಣ್ಣಿನ ಬದುಕೂ ಹೌದು!

ಅವಳು...ನನ್ನೊಳಗಿನ ಪ್ರಶ್ನೆಗೆ ಆಕೆ ಉತ್ತರ ಹೇಳಲಿಲ್ಲ..ನಾನು ಕೇಳಲಿಲ್ಲ...ಕೇಳೋದೂ ಸರಿ ಅನಿಸಲಿಲ್ಲ! ಅವಳು ಆ ಪುಟ್ಟ ಮನೆಯಲ್ಲಿ ಒಬ್ಬಳೇ..ಎಲ್ಲಾ ರಾತ್ರಿಗಳೂ ಅವಳಿಗೆ ಕನವರಿಕೆ ಮಾತ್ರ. ಬರೇ ಕನಸುಗಳು ಮಾತ್ರ. ಅಲ್ಲೇ ಇರುವ ಆಂಟಿ ಒಬ್ಬರು ಮೊನ್ನೆ ನಮ್ಮನೆಗೆ ಬಂದಾಗ ಅವಳ ಕಥೆಯನ್ನೇ ಬಿಚ್ಚಿಟ್ಟರು. ನನಗರಿವಿಲ್ಲದೆ ನಾನು ಕಣ್ಣೀರಾಗಿದ್ದೆ. ಇಂದಿಗೂ ನಗುವಿನ ಹಿಂದಿನ ಕಥೆಯನ್ನು ನೆನೆಸಿಕೊಳ್ಳುತ್ತಾ ನನ್ನ ಹೆಣ್ಣು ಹೃದಯನೂ ರೋಧಿಸುತ್ತೆ,. ಬದುಕು ಎಷ್ಟು ಕ್ರೂರ ಅನಿಸಿಬಿಡುತ್ತೆ.

ಹೌದು! ಅವಳಿಗೆ ಮದುವೆಯಾಗಿದೆ..ಒಂದು ವರುಷದ ಹಿಂದೆ! ಅದಕ್ಕೆ ಕುತ್ತಿಗೆಯಲ್ಲಿ ತಾಳಿ ಇದೆ.! ತುಂಬಾ ಬಡಕುಟುಂಬದ ಹೆಣ್ಣುಮಗಳು. ಒಪ್ಪೊತ್ತಿನ ಅನ್ನಕ್ಕೂ ಅವಳ ಮನೆಯಲ್ಲಿ ಕಷ್ಟ. ಅದಕ್ಕೆ ಆಕೆಯನ್ನು ಅರುವತ್ತು ವರುಷ ದಾಟಿದ ಒಬ್ಬನಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. ಅವನಿಗೆ ಈಗಾಗಲೇ ಮದುವೆಯಾಗಿ. ಮೂರು ಹೆಣ್ಣುಮಕ್ಕಳಿದ್ದಾರೆ. ಅವರಿಗೆ ಮದುವೆಯಾಗಿ..ಅವನಿಗೆ ಮೊಮ್ಮಕ್ಕಳೂ ಇದ್ದಾರೆ! ಅವನಿಗೆ ಗಂಡು ಮಕ್ಕಳಿಲ್ಲ..ಕೈತುಂಬಾ ಹಣವಿದೆ. ಗಂಡು ಮಕ್ಕಳಿಲ್ಲ ಅನ್ನೋ ಕಾರಣಕ್ಕೆ ಇವಳನ್ನು ಮದುವೆಯಾಗಿದ್ದಾನೆ...ಅದೂ ಮೊದಲನೆಯ ಹೆಂಡತಿ, ಮಕ್ಕಳಿಗೆ ಗೊತ್ತಿಲ್ಲದಂತೆ! ಬೇರೆ ಮನೆ ಮಾಡಿ ಕೊಟ್ಟಿದ್ದಾನೆ..ವಾರದಲ್ಲಿ ಒಂದೆರಡು ಸಲ ಬೈಕ್ ಓಡಿಸಿಕೊಂಡು ಬರುತ್ತಾನೆ..ಅವನ ಬೈಕಿನ ಸದ್ದಿಗೆ ಆಕೆ ಖುಷಿಯಿಂದ ಓಡಿ ಬಂದು ಬಾಗಿಲು ತೆಗೆಯುತ್ತಾಳೆ. ಸಂಜೆ ವಾಪಾಸ್ ಅವನ ಮನೆಗೆ ಹೋಗುತ್ತಾನೆ..ಅವನ ಗಾಡಿ ಹೋಗುವಾಗ ಮತ್ತೆ ಹಿಂದಿನಿಂದ ಗೇಟ್ ಬಳಿ ಬಂದು ನೋಡುತ್ತಾಳೇ ಆ ಹೆಣ್ಣಮಗಳು..ಆತ ಬಂದಾಗ ಕಂಡ ಖುಷಿ, ಆತ ಮರಳಿದಾಗ ಅವಳ ಮುಖದ ಮೇಲೆ ಇರಲ್ಲ!

ಆ ಪುಟ್ಟ ಮನೆಯೊಳಗೇ ತನ್ನೆಲ್ಲಾ ಕನಸು ಕಟ್ಟೋಳು ಆಕೆ. ಹಗಲು-ರಾತ್ರಿಗಳು ಅವಳಿಗೆ ಅದೇ ಮನೆಯೊಳಗೆ. ಭರವಸೆಯ ನಾಳೆಗೂ ಅಲ್ಲೇ ಪುಟ್ಟ ಮನೆಯೊಳಗೆ...ಅದೇ ಆಕೆಯ ಬದುಕು! ನೋಡೋ ಕಣ್ಣುಗಳೆದುರು ನಗುತ್ತಾಳೆ..ದುಃಖವನ್ನೇ ಎದೆಯೊಳಗೆ ಮಡುಗಿಟ್ಟು! ಹೌದು..ಆಕೆಯ ಆತ್ಮವಿಶ್ವಾಸ ಮೆಚ್ಚಬೇಕು..ಹೆಣ್ಣಿಗೆ ತಾಳಿ..ಎಷ್ಟು ಮುಖ್ಯ ಅನಿಸಿಬಿಡುತ್ತೆ ಅವಳನ್ನು ಕಂಡಾಗ. ಆ 'ತಾಳಿ'ಗಾಗಿ ಆಕೆಯದು ಈ 'ಬದುಕು'! ಆದರೆ ಸುತ್ತಲ ಜನ ..ನನಗೆ ಕಥೆ ಹೇಳಿರುವ ಆ ಆಂಟಿಯ ಕಣ್ಣಲ್ಲಿ ಆಕೆಯ ಮೇಲೆ 'ಅನುಮಾನದ ಹುತ್ತ'! .ಆದರೆ 'ಗಂಡ' ಮಾತ್ರ ಸಾಕ್ಷಾತ್ ಶ್ರೀರಾಮ..! ಥೂ! ಅನಿಸಿತ್ತು.

ಯಾಕೋ ಮೊನ್ನೆಯಿಂದ ಆ ನಗುವಿನ ಹಿಂದಿನ ಕತೆ..ಮನಸ್ಸನ್ನು ತೀರಾ ರೋಧಿಸುವಂತೆ ಮಾಡಿಬಿಡ್ತು. ಹೀಗಾಗಬಾರದಿತ್ತು..ಆದರೆ ಆಕೆಗೂ ಅನಿವಾರ್ಯು..ನಗಬೇಕು..ಬಾಳಬೇಕು!

Thursday, June 4, 2009

ಈ ಪ್ರೀತಿ ಬದುಕಿನ ಶ್ರೇಷ್ಠ ಘಟ್ಟದಲ್ಲಿ ನಿಂತು ಗೌರವಿಸುತ್ತೆ..

ಗೆಳತಿ ಶ್ರೀ ಮೊನ್ನೆ "ನಮ್ಮ ಪೀಲು ಹೋಯ್ತು... ನಮ್ಮನ್ನೆಲ್ಲ ಬಿಟ್ಟು" ಕಂಗಳು ಒದ್ದೆಯಾಗಿಸಿ, ನನ್ನ ಮನಸ್ಸನ್ನೂ ಒದ್ದೆಯಾಗಿಸಿದ್ದಳು. ಹೌದು, ಅವಳ ಪ್ರೀತಿಯ ನಾಯಿ ಪೀಲು ಧಾರವಾಡದ ಅವಳ ಮನೆಯಲ್ಲಿ ಎಲ್ಲರನ್ನು ಬಿಟ್ಟುಹೋಗಿತ್ತಂತೆ. 'ಪೀಲುಗೆ ಇಂಜೆಕ್ಞನ್ ಕೊಟ್ಟಾಗ ಅಪ್ಪಾಜಿಗೆ ಕಣ್ಣಲ್ಲಿ ನೀರು ಬಂತಂತೆ,,ಅದಕ್ಕೆ ಡಾಕ್ಟರ್ ಅವರನ್ನು ಹೊರಗಡೆ ಕಳಿಸಿದ್ರಂತೆ. ಆಮೇಲೆ ವಾಚ್ ಮನ್ ಪೀಲುನ ಮಣ್ಣು ಮಾಡಿದ್ರಂತೆ. ಅದಕ್ಕೆ ಹೊಟ್ಟೆಯಲ್ಲಿ ಟ್ಯೂಮರ್ ಆಗಿತ್ತು ಕಣೇ. ಅಪ್ಪಾಜಿ ಪೀಲುನ ಮಗುವಿನಂತೆ ನೋಡಿಕೊಂಡಿದ್ರು' ಅಂತ ಹೇಳುತ್ತಿದ್ದಳು ಶ್ರೀ.

ಬಹುಶಃ ಮನುಷ್ಯ-ಮನುಷ್ಯ ಸಂಬಂಧಗಳಿಗಿಂತಲೂ ಕೆಲವೊಮ್ಮೆ ಪ್ರಾಣಿ-ಮನುಷ್ಯರ ಸಂಬಂಧ ಗಾಢವಾಗಿರುತ್ತೆ, ನಿಷ್ಕಲ್ಮಶ, ಪ್ರಾಮಾಣಿಕವಾಗಿರುತ್ತೆ. ನಮ್ಮನೆಯ ಕರು, ನಮ್ಮನೆಯ ಪ್ರೀತಿಯ ಬೆಕ್ಕು, ನಾಯಿಮರೀನ ನಾವು ನಮ್ಮನೆ ಮಕ್ಕಳ ಥರ ನೋಡಿಕೊಳ್ಳ್ತೀವಿ. ಅವುಗಳೂ ಅಷ್ಟೇ..ನಮ್ಮ ಮೇಲೆ ಅವು ತೋರಿಸುವ ನಿಷ್ಕಲ್ಮಶ ಪ್ರೀತಿನ ಕಂಡಾಗ ನಮ್ಮ ಮನೆ-ಮನಸ್ಸು ತುಂಬಿಬಿಡುತ್ತೆ. ಒಂದು ಕ್ಷಣ ಅವುಗಳು ನಮ್ಮೆದುರು ಇಲ್ಲಾದಾಗ ಅವುಗಳಿಗಾಗಿ ನಮ್ಮ ಕಣ್ಣುಗಳು ಹುಡುಕಾಡುತ್ತವೆ. ಅದರಲ್ಲೂ ನಾಯಿಯನ್ನು ಅತ್ಯಂತ ಕೃತಜ್ಞ ಪ್ರಾಣಿ ಅಂತಾರೆ. ಎಷ್ಟೋ ವರುಷಗಳ ಹಿಂದೆ ನಾವು ಒಂದು ನಾಯಿಗೆ ರೊಟ್ಟಿ ತುಂಡನ್ನು ಹಾಕಿದ್ರೆ ಅದು ಜೀವನವೀಡೀ ನಮ್ಮ ನೋಡಿದಾಗ ಬಾಲ ಅಲ್ಲಾಡಿಸಿ, ಕಿವಿ ನಿಮಿರಿಸಿ ಪ್ರೀತಿ ವ್ಯಕ್ತಪಡಿಸುತ್ತೆ.

ನಾನು ಶಾಲೆಗೆ ಹೋಗೋ ಸಮಯದಲ್ಲಿ ನಮ್ಮನೆಯಲ್ಲಿ ಒಂದು ನಾಯಿ ಇತ್ತು. ಸಕತ್ತ್ ಡುಮ್ಮ ನಾಯಿ...ಗುಂಡು-ಗುಂಡಾಗಿ ನೋಡಕ್ಕೂ ತುಂಬಾ ಸುಂದರವಾಗಿತ್ತು. ಅದಕ್ಕೆ ನನ್ನ ತಮ್ಮ 'ದೊಲ್ಲ' ಅಂತ ಹೆಸರಿಟ್ಟಿದ್ದ. ಅದಕ್ಕೂ ಮಲಗೋಕೆ ಚೆಂದದ ದಿಂಬು ಎಲ್ಲಾ ರೆಡಿಮಾಡಿದ್ದ ನನ್ನ ತಮ್ಮ. ರಾತ್ರಿ ತಮ್ಮನಿಗೆ ನಿದ್ದೆ ಬರೋ ತನಕ ಅದು ನಮ್ಮ ಜೊತೆನೇ ನಿದ್ದೆ ಮಾಡುತ್ತಿತ್ತು. ಆಮೇಲೆ ಎದ್ದು ಹೋಗಿ ಜಗಲಿಯಲ್ಲಿ ಮನೆ ಕಾಯುತ್ತಿತ್ತು. ನಾವು ಶಾಲೆಗೆ ಹೋಗುವಾಗ ಅರ್ಧದಾರಿ ತನಕ ನಮ್ಮ ಜೊತೆಗೆ ಬರೋ ದೊಲ್ಲ, ಆಮೇಲೆ ಸಂಜೆಯೂ ನಾವು ಶಾಲೆ ಬಿಡುವ ಹೊತ್ತಿಗೆ ಮನೆ ಗೇಟ್ ಎದುರು ಕುಳಿತು ಕಾಯುತ್ತಿತ್ತು. ನಾವು ಬರೊದೇ ತಡ..ನಮ್ಮ ಜೊತೆ ಅದಕ್ಕೂ ಏನಾದ್ರೂ ತಿನ್ನಬೇಕು..ಇಲ್ಲಾಂದ್ರೆ ನಮ್ಮ ಮೈಮೇಲ್ಲ ಹಾರಿ ಕಚ್ಚೋ ಕೆಲಸ ಮಾಡುತ್ತಿತ್ತು. ನನ್ನ ತಮ್ಮನಿಗಂತೂ ದೊಲ್ಲ ಅಂದ್ರೆ ನಮಗೆಲ್ಲರಿಗಿಂತಲೂ ಹೆಚ್ಚು ಪ್ರೀತಿ.

ಆದರೆ ಆ ದೊಲ್ಲ ಬದುಕಿದ್ದು ಎರಡನೇ ವರುಷ. ನಮ್ಮನೆಯ ಪಕ್ಕದ್ಮನೆಯ ನಾಯಿ ಅದಕ್ಕೆ ಕಚ್ಚಿ ಹೊಟ್ಟೆಗೆ ಗಾಯವಾಗಿತ್ತು. ಹಾಗಾಗಿ ತುಂಬಾ ದಿನ ಅದು ಮಲಗಿದ್ದಲ್ಲೇ ಇತ್ತು..ತಮ್ಮ ಆರೈಕೆ ಮಾಡ್ತಾ ಇದ್ದ. ಮತ್ತೆ ಎದ್ದು ನಡೆಯಲಾರಂಭಿಸಿದರೂ ತೀರ ಓಡಾಟ ಕಷ್ಟವಾಗುತ್ತಿತ್ತು. ಕೊನೆಗೊಂದು ದಿನ ನಾವು ಶಾಲೆಯಿಂದ ಬರುವಾಗ ದೊಲ್ಲ ಇರಲಿಲ್ಲ..ಎಲ್ಲಿ ಹುಡುಕಿದ್ರೂ ಸಿಕ್ಕಿರಲಿಲ್ಲ. ಒಂದು ದಿನ ಕಳೆದ ಮೇಲೆ ನಮ್ಮ ತೋಟದ ಬದಿಯಲ್ಲಿ ನಮ್ಮ ದೊಲ್ಲ ಚಿಕ್ಕ ಪೊದೆಗೆ ಸಿಕ್ಕಹಾಕೊಂಡು ಹೆಣವಾಗಿದ್ದ. ನನ್ನ ತಮ್ಮ 'ಅಮ್ಮ ನೀನೇ ಕೊಂದಿದ್ದು ನನ್ನ ದೊಲ್ಲನ..ನನ್ನನ್ನೂ ಕೊಂದುಬಿಡು' ಅಂತ ಅಳುತ್ತನೇ ಇದ್ದ. ಎರಡು ದಿವಸ ಊಟ ಮಾಡದೆ ಕುಳಿತಿದ್ದ. ಆದ್ರೂ ಅದನ್ನು ಹೂತ ಜಾಗದಲ್ಲಿ ಮತ್ತೆ ಮತ್ತೆ ಹೋಗಿ ಅಳುತ್ತಿದ್ದ. ವರುಷ ಅದೆಷ್ಟು ಸರಿದರೂ ದೊಲ್ಲನ ನೆನಪು ಬದುಕಾಗೇ ಇದೆ.

ನಿನ್ನೆ ಶ್ರೀ ಪೀಲು ಬಗ್ಗೆ ಹೇಳಿದಾಗ..ದೊಲ್ಲನೂ ನೆನಪಾದ..ಕಣ್ತುಂಬಿ ಬಂತು. ಕೆಲವೊಮ್ಮೆ ಮನುಷ್ಯ-ಮನುಷ್ಯ ನಡುವಿನ ಬಾಂಧವ್ಯ, ಪ್ರೀತಿನ ಕಂಡಾಗ ಮೂಕ ಪ್ರಾಣಿಯ ಪ್ರೀತಿಯೇ ಶ್ರೇಷ್ಠ ಅನಿಸುತ್ತೆ. ಈ ಪ್ರೀತಿ ಕನ್ನಡಿಯಂತೆ ಒಡೆಯಲ್ಲ, ನೋವು ಕೊಡಲ್ಲ, ಮನಸ್ಸು ಚುಚ್ಚೊಲ್ಲ, ಒಮ್ಮೊಮ್ಮೆ ಹೃದಯ ಭಾರವಾಗಿಸಲ್ಲ..ಪರಿಪರಿಯಾಗಿ ನಮ್ಮ ಕಾಡುತ್ತೆ, ಸಿಹಿನೆನಪಾಗುತ್ತೆ, ಬದುಕಿನ ಶ್ರೇಷ್ಠ ಘಟ್ಟದಲ್ಲಿ ನಿಂತು ನಮ್ಮನ್ನು ಗೌರವಿಸುತ್ತೆ ...ಏನಂತೀರಿ?

Sunday, May 31, 2009

ನಿಮ್ಮ ಭವಿಷ್ಯ ಹೇಳತೇನ್ರೀ!

ನಿನ್ನೆಯ ಕನ್ನಡಪ್ರಭ ಸಾಪ್ತಾಹಿಕ ಓದುತ್ತಿದ್ದಂತೆ ಸುರೇಶ್ ವೆಂ. ಕುಲಕರ್ಣಿ ಎಂಬುವವರು ಬರೆದ ಬೇಂದ್ರೆ ಬದುಕಿನ ಪುಟ್ಟ ಘಟನೆಯೊಂದು ಕಣ್ಣಿಗೆ ಬಿತ್ತು. ಬೇಂದ್ರೆ ಅಜ್ಜ ಅಂದ್ರೆ ನಂಗೆ ತುಂಬಾ ಇಷ್ಟ. ಬದುಕಿನ ಜೊತೆ ನೇರ ಮಾತಿಗಿಳಿಯುವ ಅವರ ಕವನಗಳು ನಂಗಿಷ್ಟ. ಬೇಂದ್ರೆ ಕುರಿತಾಗಿ ಬರೆಯುವ ಸುನಾಥ್ ಅಂಕಲ್ ಬ್ಲಾಗ್ ಸಲ್ಲಾಪ, ಗೋದಾವರಿ ಮೇಡಂ ಎಲ್ಲಾರ ಬರಹಗಳನ್ನು ಓದುತ್ತಿರುವೆ. ಇದೀಗ ಕನ್ನಡಪ್ರಭದಲ್ಲಿ ಬಂದಿರುವ ಸುರೇಶ್ ವೆಂ. ಕುಲಕರ್ಣಿ ಅವರ ಬರಹಗಳನ್ನು ತೆಗೆದು ಯಥಾವತ್ತಾಗಿ ಹಾಕೊಂಡಿರುವೆ..ಇದು ಕೃತಿಚೌರ್ಯ ಅಲ್ಲ, ಬೇಂದ್ರೆ ಕುರಿತಾದ ಇಂಥ ಘಟನೆಗಳನ್ನು ಸಂಗ್ರಹಿಸುವತ್ತ ನನ್ನ ಪುಟ್ಟ ಹೆಜ್ಜೆಯಷ್ಟೇ.

"ಬೆಳಗಿನ ಏಳು ಗಂಟೆಯಾಗಿತ್ತು. ಬೇಂದ್ರೆಯವರು ಮನೆಮುಂದಿನ ಗೇಟಿನ ಹತ್ತಿರ ಬಿಳಿಧೋತರ, ಕರೇಕೋಟು ಮ್ಯಾಲೆ ಕುಲಾಯಿಟೋಪಿ ಹಾಕಿಕೊಂಡು, ಕೋಟಿನ ಕಿಸೆಯಲ್ಲಿ ಕೈ ಇಟಕೊಂಡು, ಆ ಕಡೆ-ಈ ಕಡೆ ಶತಪಥ ಹಾಕುತ್ತಾ ಇದ್ದರು. ಅವರನ್ನು ನೋಡಿ, ಒಬ್ಬ ವ್ಯಕ್ತಿ 'ಅಜ್ಜಾರ ಒಳಗೆ ಬರಬಹುದಾ?' ಅಂತ ಕೇಳಿದ.
ಬೇಂದ್ರೆ: ಯಾಕ, ನಿನ್ನ ಹೆಸರೇನು? ಯಾವೂರು?
ಭವಿಷ್ಯಗಾರ: ನಾನು ಊರೂರು ತಿರತೇನ್ರೀ. ನಿಮ್ಮ ಭವಿಷ್ಯ ಹೇಳತೇನ್ರಿ?
ಬೇಂದ್ರೆ: ಭವಿಷ್ಯವನ್ನು ಯಾವ ಆಧಾರದ ಮೇಲೆ ಹೇಳತೀ?
ಭವಿಷ್ಯಗಾರ: ನಿಮ್ಮ ಮುಖಾ ನೋಡಿ, ಕೈನೋಡಿ, ಹಸ್ತಾಕ್ಷರ ನೋಡಿ ಭವಿಷ್ಯವನ್ನು ಹೇಳತೇನ್ರಿ. ನಿಮ್ಮ ನಕ್ಷತ್ರ ಹೇಳಿದರ ಅದರ ಮ್ಯಾಲಿಂದನೂ ನಿಮ್ಮ ಭವಿಷ್ಯವನ್ನ ಹೇಳತೇನ್ರೀ.
ಬೇಂದ್ರೆ: ನಕ್ಷತ್ರದ ಬಗ್ಗೆ ನಿನಗೆ ಛಲೋ ತಿಳೀತದೇನು?
ಭವಿಷ್ಯಗಾರ: ತಿಳಿತದ್ರೀ

ಬೇಂದ್ರೆ: ಈಗ 'ವೇಗಾ' ಅಂದರ 'ಅಭಿಜಿತ್ ನಕ್ಷತ್ರ' ಎಲ್ಲೆ ಬರತದ?

ಭವಿಷ್ಯಗಾರ: (ವಿಚಾರಿಸಿ) ಗೊತ್ತಿಲ್ಲರಿ..
ಬೇಂದ್ರೆ: ಇರಲಿ, ಈಗ ನನಗೆ ಭವಿಷ್ಯ ಕೇಳೋದೇನಿಲ್ಲ. ನಿನ್ನ ವೇಳ್ಯಾ ತೊಗೊಂಡದ್ದಕ್ಕ 'ಫೀ' ಏನು?
ಭವಿಷ್ಯಗಾರ: ನಾನು ಭವಿಷ್ಯವನ್ನು ಹೇಳದs 'ಫೀ' ತೊಗೋಳ್ಳೋದಿಲ್ಲ. ಭವಿಷ್ಯವನ್ನು ಕೇಳಿರಿ ತೊಗೋತೀನಿ.
ಬೇಂದ್ರೆ: ನನ್ನ ಭವಿಷ್ಯವನ್ನು ಕೇಳೋದಿಲ್ಲ, ನಡೀಯಿನ್ನ.
ಭವಿಷ್ಯಗಾರ: ಊರಲ್ಲಿ ಹೋಗಲಿಕ್ಕೆ ಸಿಟಿಬಸ್ಸು ಎಲ್ಲಿ ನಿಲ್ಲತಾವು?
ಬೇಂದ್ರೆಯವರು ತಮ್ಮ ಮನೆಯ ಗೇಟಿನವರೆಗೆ ಹೋಗಿ, ಬಸ್ಸು ಎಲ್ಲಿ ನಿಲ್ಲತಾವು
ಅನ್ನೋದನ್ನು ಸ್ವತಃ ತಾವೇ ಹೋಗಿ ತೋರಿಸಿದರು. ಭವಿಷ್ಯವನ್ನು ಹೇಳುವವನು ನಾಲ್ಕು ಹೆಜ್ಜೆ ಮುಂದ ಹೋಗಿದ್ದ, ಅಷ್ಟರಾಗ ಬೇಂದ್ರೆಯವರು ಅವನನ್ನು ಕರೆದು, 'ನೀ ಖರೇನ ಭವಿಷ್ಯ ಹೇಳತೀ?
ಭವಿಷ್ಯಗಾರ: ಯಾಕ್ರೀ? ಕೇಳ್ಯಾರ ನೋಡ್ರೀ, ಹಿಂದಿನದು, ಮುಂದಾಗೋದು ಎಲ್ಲಾನೂ ಹೇಳತೀನಿ.
ಬೇಂದ್ರೆ: ಇಲ್ಲಾ, ಬೆಳಿಗ್ಗೆ ಎದ್ದ ಕೂಡಲೇ, ಯಾರ ಮನಿಗೆ ಹೋದ್ರ, ಭವಿಷ್ಯ ಕೇಳತಾರ? ಯಾರು ಕೇಳೊದಿಲ್ಲ? ಅನ್ನೋದು ನಿನಗs ತಿಳೀದs ನೀನು ಬೇರೆಯವರಿಗೆ ಹ್ಯಾಂಗ ಭವಿಷ್ಯವನ್ನು ಹೇಳತೀ?
ಭವಿಷ್ಯಗಾರ ಮರುಮಾತನಾಡದೆ ಬಸ್ ಸ್ಟಾಫಿಗೆ ಬಂದ.
ಚಿತ್ರಕೃಪೆ: ಅಂತರ್ಜಾಲ

Friday, May 22, 2009

ಥತ್!! ..ಈ ಜಡಿಮಳೆ ನನ್ನ ಕನಸುಗಳಿಗೆ ಸಾಥ್ ನೀಡಲಿಲ್ಲ..

ಮಳೆಯೇ ಶಿವರಾಯ ಓ ತಂದೆ
ಯಾವ ದೇವರಿಲ್ಲ ನಿನ ಮುಂದೆ..
ಯಾವತ್ತೋ ಕೇಳಿದ ಜನಪದ ಹಾಡಿನ ಸಾಲುಗಳು ಮತ್ತೆ ಮತ್ತೆ ನನ್ನೊಳಗೆ ಗುನುಗಿದವು. ಇತ್ತೀಚೆಗೆ ಬೆಂದ ಕಾಳೂರಿನ ಇಳೆಯಂಗಳಕ್ಕೆ ತುಂತುರು ಮಳೆ ಹನಿ ಸ್ಪರ್ಶಿಸಿದಾಗ ನೆನಪುಗಳ ಮೆರವಣಿಗೆಯಲ್ಲಿ ನನ್ನದೂ ಪುಟ್ಟ ಪಯಣವಾಗಿಸಿದ್ದೆ. ಬಾಲ್ಯದ ಭಾವಗೀತೆಗಳನ್ನು ತುಂತುರು ಮಳೆಹನಿಯ ಝೇಂಕಾರದೊಂದಿಗೆ ಮೆಲುಕುಹಾಕಿದ್ದೆ. ತಣ್ಣನೆಯ ಗಾಳಿ, ಮುತ್ತಿನ ನೀರ ಹನಿಗೆ ಸಂಭ್ರಮಗೊಂಡ ಪುಟ್ಟ ಮಕ್ಕಳು, ಮೊದಲ ಮಳೆ ಹನಿಯ ಸ್ಪರ್ಶದಿಂದ ಪುಳಕಿತಗೊಂಡ ಇಳೆ, ಗೂಡು ಸೇರುವ ತವಕದ ಹಕ್ಕಿಗಳ ಕಲರವ ಧರಿತ್ರಿಯಲ್ಲೂ ಒಂದು ಬಗೆಯ ಸಂಭ್ರಮದ ಹಬ್ಬವಾಗಿಸಿತ್ತು. ಹ್ಲಾಂ..ನೀವೇ ಓದಿದ್ರಲ್ಲಾ..ತುಂತುರು ಮಳೆಯಲ್ಲಿ ನೆನಪುಗಳ ಮೆರವಣಿಗೆ!!

ಆದರೆ, ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಸುರಿವ ಜಡಿಮಳೆ ಅದೇಕೋ ನನ್ನೊಳಗಿನ ಬೆಚ್ಚಗಿನ ಭಾವಕ್ಕೆ ಸಾಥ್ ನೀಡುತ್ತಿಲ್ಲ. ರಪರಪನೆ ಸುರಿವ ಮಳೆಹನಿಗಳಿಗೆ
ಕನಸುಗಳು ಗೂಡು ಕಟ್ಟೊಲ್ಲ. ಮುತ್ತಿನ ಹನಿಗಳ ಜೊತೆ ಆಡಿಬಿಡೋಣ ಎಂದೂ ಅನಿಸಲ್ಲ. ಮನೆಯೊಳಗೆ ಕುಳಿತು ಹಪ್ಪಳ ಸಂಡಿಗೆ ಮೆಲ್ಲುತ್ತಾ ವರುಣನ ಭೂ ಚುಂಬನ ನೋಡಿ ಖುಷಿಪಡೋಣ ಅಂದ್ರೂ ಈ ಬೆಂಗ್ಳೂರು ಮಳೆ ಮನೆ ಸೇರಕ್ಕೆ ಮೊದಲೇ ಗುಡುಗು-ಸಿಡಿಲ ಆರ್ಭಟ ಹೊತ್ತು ತಂದು ಮನಸ್ಸನ್ನೇ ಮುದುಡಿಸಿ ಬಿಡುತ್ತೆ. ಹೌದು, ಆ ಸಂಜೆಗೂ-ಬೆಂಗಳೂರಿನಲ್ಲಿ ಸುರಿಯೋ ಮಳೆಗೂ ಅದೇನೋ ಬಂಧ ..ಸಂಜೆಯಾಗುವಾಗಲೇ ಧೋ ಎಂದು ಮಳೆ ಸರಿಬೇಕಾ!
ಥತ್! ಕೆಟ್ಟ ಸಿಟ್ಟು ಬಂದು ಬಿಡುತ್ತೆ. ಈ ಮಳೆಯನ್ನು ಅನುಭವಿಸೋಕೆ ಆಗೊಲ್ಲ ಅಂತ ಅಲ್ವಾ? ಅಂತ ನಿರಾಶೆಯ ಕರಿಮೋಡ ನನ್ನನ್ನೇ ಆವರಿಸಿಬಿಡುತ್ತೆ.

ಮೊನ್ನೆ ಸುರಿದ ಜಡಿಮಳೆಗೆ ಬೆಂಗಳೂರಿನ ಡಾಂಬರ್ ರಸ್ತೆಗಳೆಲ್ಲ ಹಳ್ಳ-ಹೊಳೆ, ಮಹಾನದಿಗಳಾಗಿದ್ದವು. ಬಿರುಸಿನಿಂದ ಬೀಸಿದ ಗಾಳಿಯ ಅಟ್ಟಹಾಸಕ್ಕೆ ನನ್ನ ಪ್ರೀತಿಯ ಛತ್ರಿಯ ಬೆನ್ನೆಲುಬುಗಳೆಲ್ಲಾ ಮುರಿದು ನುಜ್ಜು-ಗುಜ್ಜಾಗಿ, ಆ ಮುದ್ದಿನ ಛತ್ರಿ ನನ್ನೆದೆ ಅಪ್ಪಿಕೊಂಡು ಮಲಗಿಬಿಟ್ಟಿತ್ತು. ಕಾಲಲ್ಲಿದ್ದ ಕಪ್ಪಗಿನ ಶೂ ಮಣ್ಣು ಮೆತ್ತಿಕೊಂಡು ನನ್ನನ್ನೂ ಹೊರಲಾಗದೆ ಬಸವಳಿದಿತ್ತು. ಮಳೆ ಬಿದ್ದ ರಭಸಕ್ಕೆ ನನ್ನ ದೇಹ ಸೋತು ಸುಣ್ಣವಾಗಿತ್ತು. ಅಟೋ ಎಂದು ಕೈಹಿಡಿದರೆ 2-3 ಕಿಮೀಗೂ 100 ಮೇಲೆ ಕೇಳಿದ್ರೆ ನಾ ಹ್ಯಾಂಗ ಕೊಡಲಿ? ಎಂದು ಮುನಿಸಿಕೊಂಡಿದ್ದೆ ..ಅಟೋ ಮಂದಿ ಜೊತೆ! ಬಸ್ಸು ಹುಡುಕಾಡಿದರೆ ನೀರ ಮೇಲೆ ನಿಂತ ಬಸ್ಸುಗಳು ಕದಲದೆ, ಅಲ್ಲೇ ಜಾಮ್ ಆಗಿಬಿಟ್ಟಿದ್ದವು. .! ಈ ಬೆಂಗಳೂರು ಮಳೆ ಅಂದ್ರೆ ಹಂಗೇ..ಅಯ್ಯೋ ಕರ್ಮಕಾಂಡ ಬೇಡವೇ ಬೇಡ..ಅಂದ ಶಾಪ ಹಾಕುತ್ತಾ ರಪರಪನೆ ಕೆನ್ನೆ ಮೇಲೆ ಬಡಿದ ಮಳೆಹನಿಯನ್ನು ಒರೆಸಿಕೊಳ್ಳುತ್ತಾ ಮಳೆರಾಯನ ಜೊತೆ ಕೋಪಿಸಿಕೊಂಡೆ..ಬಾ ಮಳೆಯೇ..ಎಂದು ಮನಸ್ಸು ಹಾಡಲೇ ಇಲ್ಲ!

ಹೌದು, ಈ ಬೆಂಗಳೂರಲ್ಲಿ ಮಳೆ ಬಂದ್ರೆ..ಹಂಗೆ ರಸ್ತೆಗಳೆಲ್ಲಾ ನದಿಗಳಾಗಿಬಿಡೋದು. ಕೇಬಲ್, ಟೆಲಿಫೋನ್ ನವರು ಅಗೆದ ಗುಂಡಿಗಳು, ಬಿಬಿಎಂಪಿ ಅವರ ಕರ್ಮಕಾಂಡ ಕೆಲಕೆಲಸಗಳಿಗೆ ರಸ್ತೆಯನ್ನೆಲ್ಲಾ ಅಗೆದು ಎತ್ತರ-ತಗ್ಗು ಮಾಡಿ, ಈ ಜಡಿಮಳೆಗೆ ನಡೆದು ಹೋಗೋರು ಆ ಗುಂಡಿಯಲ್ಲಿ ಬಿದ್ರೂ ಕೇಳೋರು ಯಾರಿಲ್ಲ. ಬೇಸಿಗೆ, ಮಳೆ, ಚಳಿಗಾಲ...ಹೀಗೆ ಎಲ್ಲಾ ಕಾಲದಲ್ಲೂ ಈ ರಸ್ತೆಗಳ ಬದಿ ಗುಂಡಿಗಳನ್ನು ತೋಡುತ್ತಾನೆ ಇರೋರು ಬಿಬಿಎಂಪಿಯವ್ರು! ಮೊನ್ನೆ ಮೊನ್ನೆ ನಾನೂ ನಿಂತ ನೀರ ಮೇಲೆ ನಡೆದು ಪಾದಗಳು ಧೊಪ್ಪನೆ ಗುಂಡಿಯೊಳಗೆ ಬಿದ್ದಾಗ ನನ್ನ ಎತ್ತಿದ್ದು ನನ್ನ ಕಲೀಗ್.

ಮೊನ್ನೆ ಮಳೆಗಾಲ ಆರಂಭವಾದಾಗ ಬಿಬಿಎಂಪಿ ಆಯುಕ್ತರು, ನಾವು ಮಳೆ ಎದುರಿಸೋಕೆ ರೆಡಿ ಎಂದು ತೊಡೆ ತಟ್ಟಿ ಹೇಳಿದ್ದಾರೆ! ಆದರೆ ಕಳೆದ ಸಲನೂ ಅವರು ಹಾಗೇನೇ ಹೇಳಿ..ಕೊನೆಗೆ ಜೋರು ಮಳೆಗೆ ಮನೆ-ಮನೆಗೆಲ್ಲಾ ನೀರು ನುಗ್ಗಿದಾಗ ಪ್ರತಿಷ್ಠಿತ ಬಡಾವಣೆಗಳಿಗೆ ಮಾತ್ರ ಹೋಗಿ ವಾಪಾಸಾಗಿ ಕೊನೆಗೆ ಮಾಧ್ಯಮದಲ್ಲೆಲ್ಲಾ ಬಿಸಿಬಿಸಿ ಸುದ್ದಿಯಾದಾಗ ಒಂದೆರಡು ಕೊಳಗೇರಿಗಳಿಗೆ ಹೋಗಿ ಕೈತೊಳೆದುಕೊಂಡ್ರು.

ಇರಲಿ ಬಿಡಿ..ಈ ಬೆಂಗಳೂರಿನಲ್ಲಿ ಭೋರ್ಗರೆವ ಮಳೆ ಅದೇಕೋ ನಂಗೆ ಹಳ್ಳಿಯ ಮುಗ್ಧತೆ, ಖುಷಿಯ ಕಚಗುಳಿ ತರುತ್ತಿಲ್ಲ. ಜಡಿಮಳೆಗೆ ನಮ್ಮೂರ ತೋಟದಲ್ಲಿ ಹಸಿರೆಳೆಗಳನ್ನು ನೋಡುತ್ತಾ ನೆನೆದ ಸಂಭ್ರಮ ತರುತ್ತಿಲ್ಲ! ಥತ್..ಇರಲಿಬಿಡಿ...!!