Thursday, October 4, 2012

ಅಮ್ಮನಿಗೆ ವಯಸ್ಸಾಗುತ್ತಿದೆ...




ಕಣ್ಣುಗಳು ಆಳಕ್ಕೆ ಇಳಿದಿದ್ದವು. ಕೆನ್ನೆಗಳೂ ಕಾಣಲಿಲ್ಲ, ಕೆನ್ನೆ ಮೇಲಿದ್ದ ಗುಳಿಯೂ ಮಾಯವಾಗಿತ್ತು. ವೀಳ್ಯದೆಲೆ ತಿಂದು ಬಾಯಿ ಕೆಂಬಣ್ಣಕ್ಕೆ ತಿರುಗಿತ್ತು. ಹಲ್ಲುಗಳೂ ಇರಲಿಲ್ಲ. ಬೊಕ್ಕು ಬಾಯಿ ಅಗಲಿಸಿ ನಕ್ಕಾಗ ಮಗುವಿನಂತೆ ಕಂಡಳು. ಮಕ್ಕಳು ಬಿಟ್ಟರೆ ಇನ್ಯಾವ ನೆನಪುಗಳೂ ಅವಳಿಗಿಲ್ಲ. ಒಂದೊಂದು ಸಲ ಮಗುವಿನಂತೆ ರಚ್ಚೆ ಹಿಡಿಯುತ್ತಾಳೆ, ಇನ್ನೊಂದು ಸಲ ಗಂಭೀರವಾಗಿ ಜಗಲಿ ಮೇಲೆ ಕುಳಿತು ತನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾಳೆ.

ಊರಿನ ಸೋಮನ ಅಮ್ಮಂಗೆ ವಿಧವಾ ವೇತನ, ಆಶ್ರಯ ಯೋಜನೆ ಜಾರಿಯಾಗಬೇಕಾದರೆ ಗ್ರಾಮ ಪಂಚಾಯ್ತಿಯಿಂದ ಹಿಡಿದು ತಾಲೂಕು ಕಚೇರಿ, ತಹಶೀಲ್ದಾರ್ ಅಂತ ಸುತ್ತಾಡಿದ್ದು ಅವಳೇ. ಊರಿನ ಹೆಂಗಳೆಯರ ಮಧ್ಯದಲ್ಲಿ ನಾಯಕಿಯಾಗಿ ಮೆರೆದವಳು ಅವಳೇ. ಅವರ ಸಮಸ್ಯೆ, ದೂರು-ದುಮ್ಮಾನಗಳನ್ನು ತಂದು ಹರವಿದರೆ ಅದಕ್ಕೆ ಪರಿಹಾರ ಸೂಚಿಸುವವಳು ಅವಳೇ. ಐದು ಎಕರೆ ಜಮೀನಿನಲ್ಲಿ ತೆಂಗು-ಕಂಗು, ಬಾಳೆಗಳನ್ನು ನೆಟ್ಟು ನಿತ್ಯ ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದಳು. ಮುಂಜಾವು ಹೊತ್ತಿಗೇ ಎದ್ದು ದನಕರುಗಳನ್ನು ತೊಳೆದು, ಹಾಲು ಕರೆದು, ಗಂಜಿ ಕುಡಿದು ತೋಟಕ್ಕೆ ಹೋದರೆ ಸೂರ್ಯ ಮೇಲೇರುವ ಹೊತ್ತಿಗೆ ವಾಪಸ್ ಬರುತ್ತಿದ್ದಳು. ಅನ್ನ-ಹಸಿವು, ನೀರಡಿಕೆಗಳ ಗುಂಗಿಲ್ಲದೆ ತನ್ನ ಕೆಲಸದಲ್ಲೇ ದೇವರನ್ನು ಕಂಡವಳು ಅವಳು. ಕೂಲಿ-ನಾಲಿಗೆ ಹೋಗುವುದು ಅವಮಾನವೆಂದು ಬಗೆದು ತನ್ನ ತೋಟವನ್ನೇ ನಂದನವನ ಆಗಿಸಿ, ಬಟ್ಟಲು ಅನ್ನ ಸಂಪಾದಿಸಿದವಳು.

ಗಂಡ ಬಿಟ್ಟು ಇನ್ನೊಬ್ಬಳ ತೆಕ್ಕೆ ಸೇರಿದಾಗ ಅತ್ತು-ಕರೆದು ರಂಪ ಮಾಡಿ ಹೋದದ್ದು ಹೋಯಿತು, ಮಕ್ಕಳ ನಗುವಿನಲ್ಲೇ ನನ್ನ ಸುಖವಿದೆ ಎಂದುಕೊಂಡವಳು. ಮಗ ಹೊಸ ಕೊಡೆ, ಹೊಸ ಬಟ್ಟೆ ಬೇಕೆಂದಾಗ ಕಿವಿಯೋಲೆ ಅಡವಿಟ್ಟು ಬಣ್ಣದ ಕೊಡೆ ತಂದವಳು. ಪ್ರತಿಷ್ಠಿತ ಕಾಲೇಜಿನಲ್ಲಿ ಮಕ್ಕಳಿಗೆ ಸೀಟು ಸಿಗಬೇಕೆಂದು ತಿಂಗಳುಗಟ್ಟಲೆ ಬಿರುಬಿಸಿಲಿಗೂ ನಡೆದರೂ ದಣಿವಾಗದವಳು. ಅಕ್ಷರಗಳ ಅರಿವಿಲ್ಲದೆಯೇ ಕಾನೂನು, ಲೋಕಜ್ಞಾನ ಪಡೆದವಳು.

ಅಮ್ಮಾ..ಎಂದಾಗ "ಮಗಳೇ' ಎನ್ನುವ ಪುಟ್ಟ ನಗು ಮುಖದಲ್ಲಿ. ನಮಗೆ ಎಲ್ಲವನ್ನೂ ಅರ್ಥಮಾಡಿಸಿದ ಅವಳಿಗೆ ಇಂದು ಏನೂ ಅರ್ಥವಾಗುವುದಿಲ್ಲ. ನೆನಪುಗಳು ಮಾಸಿಹೋಗುತ್ತಿವೆ. ಉಂಡಿದ್ದು, ನಕ್ಕಿದ್ದು, ಮಾತಾಡಿದ್ದು ಎಲ್ಲವೂ ಅರೆಕ್ಷಣದ ನೆನಪುಗಳು. ವಯಸ್ಸನ್ನು ಹಿಡಿದು ನಿಲ್ಲಿಸೋಣ ಅಂದ್ರೆ ಅದೂ ಕೈಲಾಗುತ್ತಿಲ್ಲ. ಅಮ್ಮ ವಯಸ್ಸಿನೊಂದಿಗೆ ನಡೆಯುತ್ತಿದ್ದಾಳೆ.

Saturday, August 25, 2012

ಅಮ್ಮನ ತಿಜೋರಿ


ಅಮ್ಮ ಮೊದಲ ಬಾರಿ ಆ ಪೆಟ್ಟಿಗೆ ತೆರೆದಿದ್ದು ನೆನಪಿದೆ. ಅಂದು ಅಮ್ಮ ನಸುಕೆಂಪು ಬಣ್ಣದ ನೈಲಾನ್ ಸೀರೆ ಉಟ್ಟಿದ್ದಳು. ಅದು ಬೇಸಿಗೆಕಾಲವಾಗಿತ್ತು. ಏಣಿ ಹತ್ತಿ ಅಟ್ಟದಿಂದ ಆ ಪೆಟ್ಟಿಗೆಯನ್ನು ತಂದು ಮನೆಯ ಜಗಲಿಯಲ್ಲಿ ಇಟ್ಟಳು. ಪೆಟ್ಟಿಗೆ ಮೇಲೆ ತುಂಬಿದ ಮಸಿ, ಧೂಳನ್ನು ಬಟ್ಟೆಯಿಂದ ಒರೆಸಿ, ಸೆರಗಿನಲ್ಲಿದ್ದ ಬೀಗದ ಕೀಯಿಂದ ಪೆಟ್ಟಿಗೆ ತೆರೆದಳು. ನಾನು ಕಾಲು ಮಡಿಚಿ ಅದನ್ನೇ ಎವೆಯಿಕ್ಕದೆ ನೋಡುತ್ತಿದ್ದೆ. ತೆರೆಯುವ ಮೊದಲೇ ಯಾವುದಕ್ಕೂ ಕೈ ಹಾಕಬೇಡ ಎಂದು ಆದೇಶ ಹೊರಡಿಸಿದ್ದಿರಿಂದ ನಾನು ಕೈ-ಕಾಲು ಬಿಗಿಹಿಡಿದು ಸುಮ್ಮನೆ ಕೂರಬೇಕಾಗಿತ್ತು.

ಅಮ್ಮನ ಬಳಿ  ಇದ್ದಿದ್ದು ಕಬ್ಬಿಣದ ಪೆಟ್ಟಿದೆ.  ಅದಕ್ಕೆಕೆಂಪು ಮತ್ತು ಹಸಿರು ಬಣ್ಣ ಬಳಿಯಲಾಗಿತ್ತು. ಅದರ ಬೀಗದ ಚಿನ್ನದ ಬಣ್ಣ. ದೊಡ್ಡ ಬೀಗ ಅದು. ಅದರ ಕೀ ಯಾವಾಗಲೂ ಅಮ್ಮನ ಸೆರಗಿನ ಗಂಟಿನಲ್ಲಿರುತ್ತಿತ್ತು. ಎಲ್ಲೇ ಹೋದರೂ ಅಮ್ಮ ಅದನ್ನು ಜೊತೆಗೆ ಕೊಂಡೊಯ್ಯುವಳು. ಅಂಗಡಿಗೆ, ಪಕ್ಕದ್ಮನೆಗೆ, ಸಂತೆಗೆ ಹೋದಾಗಲೆಲ್ಲಾ ಸೆರಗಿನಲ್ಲಿದ್ದ ಆ ಕೀಯನ್ನು ಪದೇ ಪದೇ ಮುಟ್ಟಿ ನೋಡುತ್ತಿದ್ದಳು. ಅದ್ಯಾಕೆ ಸೆರಗಿನಲ್ಲಿ ಇಟ್ಟುಕೊಳ್ತೀಯಾ ಎಂದು ಕೇಳಿದರೆ, ಬಿದ್ದುಹೋದರೆ ನನ್ನ ಜೀವನನೇ ಮುಗಿದಂತೆ. ಅದಕ್ಕೆ ಯಾವಾಗಲೂ ಜೊತೆಗೆ ಇಟ್ಟುಕೊಳ್ಳುತ್ತೇನೆ ಎನ್ನುವ ಸಮಜಾಯಿಷಿ ಆಕೆಯದು.

ತೆರೆದಾಗ ಮೊದಲು ತೋರಿಸಿದ್ದು ಅಮ್ಮನ ಮದುವೆ ಸೀರೆ. ಅವಳ ಮದುವೆಗೆ ಎರಡೇ ಸೀರೆ ತೆಗೆದಿದ್ದಂತೆ. ಅಮ್ಮ ಮದ್ವೆಗೆ ಖರ್ಚಾಗಿದ್ದು ಕೇವಲ 103 ರೂಪಾಯಿ. ಮದ್ವೆಗೆ ಏನೇನು ಖರ್ಚು ಮಾಡಿದ್ದೆ ಎಂದು ಅದನ್ನು ಲೆಕ್ಕ ಬರೆಸಿಟ್ಟಿದ್ದಳು. ಅವಳ ಮದ್ವೆಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನೂ ಹಸಿರು ಬಣ್ಣದ ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿಸಿಟ್ಟಿದ್ದಳು. ಮತ್ತೊಂದು ಬಿಳಿ ಬಣ್ಣದ ಕವರ್ ತೆಗೆದಳು. ಅದರಲ್ಲಿ ಏನೇನೋ ದಾಖಲೆಗಳು, ರಸೀದಿಗಳು ತುಂಬಿದ್ದವು. ನೋಡು ಓದು. ಎಂದು ಕೊಟ್ಟಳು. "ತೆರಿಗೆ'' ಎಂದು ಬರೆದಿತ್ತು. ಅದನ್ನು ಹಾಗೇ ಓದಿ ಹೇಳಿದಾಗ, ಅಮ್ಮ ಅದು ಮನೆ ತೆರಿಗೆ ಕಟ್ಟಿದ ರಸೀದಿ,  ಮನೆಗೆ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು..ಎಂದು ಅದರ ವಿವರಗಳನ್ನು ನೀಡಿದಳು. ಮತ್ತೆ ಇನ್ನೊಂದು ಕೆಂಪು ಬಣ್ಣದ ಕವರ್ ತೆಗೆದಳು; ಅದರಲ್ಲಿ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಇದ್ದವು...ಹೀಗೆ ಪ್ರತಿ ಕವರ್ ಕೂಡ ಬೇರೆ ಬೇರೆ ಬಣ್ಣ ಹೊಂದಿರುತ್ತಿತ್ತು, ಅಮ್ಮ ಕವರಿನ ಬಣ್ಣದ ಮೇಲೆಯೇ ಅದೇನೆಂದು ಗುರುತು ಇಟ್ಟುಕೊಂಡಿದ್ದಳು. ಜೊತೆಗೆ, ಆ ಕವರ್ ಗಳನ್ನು ಅಷ್ಟೇ ಶಿಸ್ತಿನಿಂದ ಇಟ್ಟುಕೊಳ್ಳುತ್ತಿದ್ದಳು. ಅಮ್ಮನ ಬಳಿ ಅವಳ ಮದ್ವೆಯ ಫೋಟೋ ಇರಲಿಲ್ಲ, ಆದರೆ, ಅಮ್ಮನ ಅಪ್ಪ ಎಂದರೆ ಅಜ್ಜನ ವಿಭಿನ್ನ ಭಂಗಿಯ ಚೆಂದದ ಫೋಟೋಗಳಿದ್ದವು. ಅವುಗಳು ಹಾಳಾಗದಂತೆ ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿಸಿಟ್ಟಿದ್ದಳು.

ಅಜ್ಜನ ಮೇಲೆ ಅಮ್ಮಂಗೆ ಅಪಾರ ಪ್ರೀತಿ. "ನಾನು ನನ್ನಪ್ಪನ ತರ' ಎನ್ನುವಳು. ಪದೇ ಪದೇ ಅಜ್ಜನ ಫೋಟೋ ನೋಡಿ ಖುಷಿಪಡುವಳು. ಜೊತೆಗೆ, ಅಜ್ಜನ ಜೊತೆ ಬೇಟೆಗೆ ಹೋಗಿದ್ದು, ಕಳ್ಳು ತೆಗೆಯಲು ಹೋಗಿದ್ದು, ಗದ್ದೆಗೆ ಉಳಲು ಹೋಗಿದ್ದು, ಅಜ್ಜ ಹೊಡೆದಿದ್ದು, ಹೆಗಲ ಮೇಲೆ ಕೂರಿಸಿಕೊಂಡು ಹೋಗಿದ್ದು, ಕಳ್ಳಭಟ್ಟಿ ಮಾಡಿ ಅಜ್ಜ ಪೊಲೀಸರಿಗೆ ಸಿಕ್ಕಿಬಿದ್ದಾಗ...ಅಮ್ಮನೇ ಬಿಡಿಸಿಕೊಂಡು ಬಂದಿದ್ದು...ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದಳು. ಅಜ್ಜನ ಬಗ್ಗೆ ಹೇಳುವಾಗಲೆಲ್ಲಾ ಅಮ್ಮನ ಕಣ್ಣುಗಳಲ್ಲಿ ಹೆಮ್ಮೆಯ ಭಾವ ಒಡಮೂಡುತ್ತಿತ್ತು. ಅಮ್ಮನ ಕಬ್ಬಿಣದ ಪೆಟ್ಟಿಗೆ ಈಗಲೂ ಇದೆ. ಐವತ್ತೈದು ದಾಟಿದ ಅಮ್ಮ ಈಗಲೂ ಪೆಟ್ಟಿಗೆಯನ್ನು ಜೋಪಾನವಾಗಿಟ್ಟಿದ್ದಾಳೆ.




Sunday, July 29, 2012

ನಮ್ಮನೆಗೆ ಟಿವಿ ಬಂತು!



ನಮ್ಮನೆಗೆ ಟಿವಿ ಬಂತು ಎಂದು ಹೇಳೋದು ಎಂಥ ವಿಚಿತ್ರ ಸುದ್ದಿ ಎಂದು ಅನಿಸುತ್ತೆ ಅಲ್ವೇ? ಈಗ ಯಾರ ಮನೆಯಲ್ಲಿ ಟಿವಿ, ಕಂಪ್ಯೂಟರ್ ಇಲ್ಲ ಅಂತ ಕೇಳ್ತೀವಿ. ಆದರೆ, ಪುತ್ತೂರಿನ ಪುಟ್ಟದೊಂದು ಹಳ್ಳಿ ಕಳೆಂಜೋಡಿ ಎಂಬಲ್ಲಿಗೆ ಮೊನ್ನೆ ಮೊನ್ನೆ ಕರೆಂಟು ಬಂತು. ಅಲ್ಲಿ ಇದ್ದಿದ್ದು 12 ಮನೆಗಳು ಮಾತ್ರ. ಪುಟ್ಟ ದ್ಬೀಪ ತರ ಇತ್ತು. ಸುತ್ತಮುತ್ತ ದಟ್ಟ ಕಾಡು., ಕರೆಂಟು ಕಂಬ ಹಾಕೋದೇ ಕಷ್ಟ ಅನ್ತಾ ಇದ್ರು. ಆದರೆ. ತಿಂಗಳ ಹಿಂದೆ ನಮ್ಮ ಹಳ್ಳಿಗೆ ಕರೆಂಟು ಬಂದಿದೆ. ಸರ್ಕಾರಿ ಯೋಜನೆಯಡಿಯಲ್ಲಿ ಮನೆಗಳಲ್ಲಿ ಎರಡು ಮೂರು ವಿದ್ಯುತ್ ದೀಪ ಬೆಳಗುತ್ತಿದೆ. ಚಿಮಿಣಿ ದೀಪ ನೋಡಿದ ಇಲ್ಲಿನ ಹೆಂಗಸರಿಗೆಲ್ಲಾ ಫುಲ್ ಖುಷಿ. ದಟ್ಟಕಾಡಿನ ನಡುವೆ ಪುಟ್ಟ ಪುಟ್ಟ ತೋಟಗಳ ನಡುವೆ ಇದ್ದ ಮನೆಗಳಲ್ಲಿ ಮೂರ್ನಾಲ್ಕು ಚಿಮಿಣಿ ದೀಪಗಳು. ಬೀಡಿ ಸುರುಟುವ ಹೆಂಗಸರೆಲ್ಲಾ ಈ ಚಿಮಿಣಿಗಳನ್ನೇ ಅವಲಂಬಿಸಿದ್ದರು. ಎಷ್ಟೊ ಬಾರಿ ನಿದ್ದೆಗಣ್ಣಿನಲ್ಲಿ ಬೀಡಿ ಸುರುಟುತ್ತಿರುವಾಗ ಆ ದೀಪ ಹಾಗೇ ಬಿದ್ದು, ಬೀಡಿಗಳೆಲ್ಲಾ ಸೀಮೆಎಣ್ಣೆ ವಾಸನೆ ಬಂದು ಆ ಬೀಡಿಗಳೇ ವ್ಯರ್ಥ ಆಗುತ್ತಿದ್ದವು. ಈಗ ಹೆಂಗಳೆಯರೆಲ್ಲಾ ವಿದ್ಯುತ್ ದೀಪ ದಡಿಯಲ್ಲಿ ಬೀಡಿ ಸುರುಟುತ್ತಿದ್ದಾರೆ.

ನನ್ನ ತಮ್ಮಾಇಂದು ಬೆಳ್ಳಂಬೆಳಿಗ್ಗೆ ಫೋನು ಮಾಡಿದ್ದ. ಹಲೋ ಅನ್ನೋಕೆ ಮೊದಲೇ ಅಕ್ಕಾ ಟಿವಿ ಬಂತು ಅಂದ. ಕೇಬಲ್ ಹಾಕಿಸಿದ್ಯಾ? ಅಂತ ಕೇಳಿದೆ. ಎಲ್ಲಾ ಹಾಕಿಸಿದ್ದೀನಿ ಅಂದ. ಮೊದಲು ನನಗೆ ಮಾತೇ ಹೊರಡಲಿಲ್ಲ. ನನ್ನ ತಮ್ಮ ಮತ್ತು ನಾನು ಒಂದ್ಸಲ ಪಕ್ಕದೂರ ಗೌಡ್ರ ಮನೆಗೆ ಟಿವಿ ಬಂದಾಗ ಅದನ್ನು ನೋಡಲು ಅಲ್ಲಿಗೆ ಹೋಗಿದ್ದು ನೆನಪಾಯಿತು ನಮ್ಮ ಹಳ್ಳಿ ದಾಟಿ ಗೌಡ್ರ ಮನೆಗೆ ಹೋಗಬೇಕಿತ್ತು. ಆಗ ನನ್ನ ವಯಸ್ಸಿನ್ನೂ ಹತ್ತು ದಾಟಿರಲಿಲ್ಲ. ಊರಿನವರೆಲ್ಲಾ ಟಿವಿ ನೋಡಲು ಬರುತ್ತಿದ್ದರು. ಮಕ್ಕಳಂತೂ ಗೌಡ್ರ ಮನೆಯ ವರಾಂಡದಲ್ಲಿ ಎದುರು ಸಾಲಿನಲ್ಲಿ ಚಾಪೆ ಹಾಸಿ ಕೂರುತ್ತಿದ್ದರು.ನನ್ ತಮ್ಮ ಫೋನ್ ಮಾಡಿದಾಗ ಎಲ್ಲವೂ ಒಮ್ಮೆಲೇ ನೆನಪಾಯಿತು.

ಟಿವಿ ಬಂದ ಖುಷಿಯನ್ನು ಅಮ್ಮಂಗೆ ಕೇಳೋಣ ಅನಿಸ್ತು. ಅಮ್ಮಾ, ಫುಲ್  ಖುಷೀನಾ ಅಂಥ ಕೇಳಿದೆ. ಅದಕ್ಕೆ ಅಮ್ಮಾ, ಏನು ಸೌಂಡು ಮಗಾ, ನನಗೆ ತಲೆ ಧಿಮ್ ಅನ್ಯಾ ಇದೆ. ನಿನ್ನೆಯಿಂದ ಮನೆಯಲ್ಲಿ ಜಾತ್ರೆ. ಏನೇನೋ ಹಾಕ್ತಾನೆ...ನೋಡ್ತಾರೆ. ನನಗಿನ್ನೂ ಅಭ್ಯಾಸವಾಗಬೇಕು ಅಂದ್ರು. ಮೊದಲೇ ಬಿಪಿ ಪೇಶೆಂಟು ಆಗಿರುವ ಅಮ್ಮಂಗೆ ಮೊದಲೇ ಗಜಿಬಿಜಿ, ಸದ್ದು&ಗದ್ದಲ ಆಗೋಲ್ಲ. ಸರಿ ಹೋಗುತ್ತೆ ಬಿಡಮ್ಮಾ ಅಂದೆ. ನಮ್ಮನೆಗೆ ಟಿವಿ ಬಂತು ಅಂಥ (ನಮ್ ಜನರೇಷನ್) ಕೇಳುವ ಸುದ್ದಿ ನಿಮಗೆ ಏನನಿಸಿತ್ತು?

Tuesday, May 29, 2012

ಪ್ರಜಾವಾಣಿಯಲ್ಲಿ "ಧರಿತ್ರಿಯ ಚಿತ್ರಗಳು "



ಧರಿತ್ರಿ! ಇದು ಬ್ಲಾಗ್ ಹೆಸರು. ಇಲ್ಲಿನ ಬರಹಗಳಿಗೆ ಬಂದಿರುವ ಕಮೆಂಟುಗಳನ್ನು ಆಧರಿಸಿ ಹೇಳುವುದಾದರೆ ಬ್ಲಾಗಿತಿಯ ಹೆಸರು ಚಿತ್ರಾ. ತಮ್ಮ ಬಗ್ಗೆ ಹೆಚ್ಚೇನೂ ಹೇಳಿಕೊಳ್ಳದ ಚಿತ್ರಾ- `ನನ್ನೂರು ಕರಾವಳಿ ತೀರ. ಅಮ್ಮ, ಬದುಕು, ಪ್ರೀತಿ ಅಂದ್ರೆ ಅಕ್ಕರೆ` ಎಂದು ಸಕ್ಕರೆಯಂತೆ ಮಾತನಾಡಿ ಸುಮ್ಮನಾಗುತ್ತಾರೆ. 


ಕರಾವಳಿ ತೀರದ ಈ ಹೆಣ್ಣುಮಗಳು ಈಗ ಬೆಂಗಳೂರು ನಿವಾಸಿ ಎನ್ನಲಿಕ್ಕೆ ಅವರ ಬರಹಗಳೇ ಸಾಕ್ಷಿಯಾಗಿವೆ. ಮಲ್ಲೇಶ್ವರದಲ್ಲಿ ಕೊಂಡ ಅವರ ಕೊಡೆಗೀಗ ಮೂರನೇ ಮಳೆಗಾಲವಂತೆ. ಬೆಂಗಳೂರಿನಲ್ಲಿ ಬಿಸಿಲನ್ನೇ ಹೆಚ್ಚು ನೋಡಿರುವ ಅವರ ಕೊಡೆ, ಈಚೆಗೆ ಮಂಗಳೂರಿಗೆ ಹೋಗಿದ್ದಾಗ ಭರ್ಜರಿ ಮಳೆಯಲ್ಲಿ ಒದ್ದೆಯಾಯಿತಂತೆ. 


ಬೆಂಗಳೂರಿನ ಕೊಡೆ ಮಾತ್ರವಲ್ಲ, ಬಾಲ್ಯದ ದಿನಗಳ ಬಗೆಬಗೆ ಕೊಡೆಗಳ ಬಗ್ಗೆಯೂ ಅವರ ನೆನಪಿನ ಲಹರಿ ಹರಿದಿದೆ. ಯಜಮಾನರ ರೇನ್‌ಕೋಟ್ ಬಗ್ಗೆಯೂ ಚಿತ್ರಾ ಆಪ್ತವಾಗಿ ಬರೆದಿದ್ದಾರೆ. ಆಪ್ತತೆ ಯಾಕೆಂದರೆ, ಅದು ಅಪ್ಪ ಕೊಡಿಸಿದ ರೇನ್‌ಕೋಟು!


`ಬೆಳಗು ಇಬ್ಬನಿಯ ನಗು ಚೆಂದ`, `ಜೀವನ ಪ್ರೀತಿಯ ಅನುಭೂತಿ` ಎನ್ನುವುದು `ಧರಿತ್ರಿ` (http://dharithrick.blogspot.in) ಶೀರ್ಷಿಕೆಯ ಅಡಿಬರಹಗಳು. ಇಬ್ಬನಿಯ ನಗು ಮತ್ತು ಜೀವನ ಪ್ರೀತಿ ಎರಡರ ಆರ್ದ್ರತೆಯೂ ಅವರ ಬರಹಗಳಲ್ಲಿದೆ. ಊರಿನ ನೆನಪುಗಳು, ಅಲ್ಲಿನ ಜನ-ಜೀವನ, ಬೆಂಗಳೂರಿನಲ್ಲಿ ಕಂಡ ಚಿತ್ರಗಳು- ಹೀಗೆ ಚಿತ್ರಾ ಕಾಣಿಸುವ `ಭಾವಚಿತ್ರ`ಗಳು ಸಾಕಷ್ಟು. ಅವರ ಬರಹಕ್ಕೆ ಕಥನ ಗುಣವೂ ಇದೆ.


ಮಗಳ ಮಡಿಲು ತುಂಬಲೆಂದು ದೇವರುಗಳ ಪ್ರಾರ್ಥಿಸುತ್ತಿದ್ದ ಅಪ್ಪನನ್ನು ನೆನಪಿಸಿಕೊಳ್ಳುವ ಈ ಹೆಣ್ಣುಮಗಳು ಬರೆಯುತ್ತಾರೆ: “ಮೊನ್ನೆ ನಮ್ಮ ಮದುವೆಗೆ ಎರಡು ವರ್ಷ. ಕಳೆದ ವರ್ಷ ದೇವರ ಮನೆಯಲ್ಲಿ ಅಪ್ಪ-ಅಮ್ಮ ಇಬ್ಬರೂ ನಿಂತು ಅಕ್ಷತೆ ಹಾಕಿ ಹರಸಿದ್ದರು. ಈ ಬಾರಿ ಅಮ್ಮ ಒಬ್ಬಳೇ ಇದ್ದಳು! ವರಾಂಡದಲ್ಲಿದ್ದ ಅಪ್ಪನ ಫೋಟೋಗೆ ಮಲ್ಲಿಗೆ ಹಾರ ಹಾಕಿ ನಮಸ್ಕರಿಸಿದೆ. ನನ್ನ ಕಣ್ಣುಗಳು ಒದ್ದೆಯಾದವು. ಅಪ್ಪ ತುಟಿ ಬಿಚ್ಚಲಿಲ್ಲ, ಮೊಮ್ಮಗು ಎಲ್ಲಿ ಎಂದು ಕೇಳಲಿಲ್ಲ. ಕಪ್ಪಗಿನ ದಪ್ಪ ಕನ್ನಡಕದೊಳಗಿನಿಂದ ನನ್ನ ನೋಡಿದ. ಅಪ್ಪ ಕೋಪಿಸಿಕೊಂಡಿರಬೇಕೆಂದು ನಾನೂ ಮಾತಿಲ್ಲದೆ ಸುಮ್ಮನಾದೆ”. ವೇದನೆ ಹಾಗೂ ಪ್ರಾರ್ಥನೆ ಎರಡನ್ನೂ ಕಥೆಯ ಚೌಕಟ್ಟಿನೊಳಗೆ ಒಳಗೊಂಡ ಈ ಬರಹ ಓದುಗರ ಕಣ್ಣನ್ನೂ ಒದ್ದೆಯಾಗಿಸುತ್ತದೆ.


`ಭೂತಾಯಿಗೆ ಕಾಗೆ ಮುಟ್ಟುವುದು!`- `ಧರಿತ್ರಿ` ಕಣಜದಲ್ಲಿನ ಮತ್ತೊಂದು ಸೊಗಸಾದ ಬರಹ. ಚಿತ್ರಾ ಬರೆಯುತ್ತಾರೆ-
ಇವತ್ತು ಭೂತಾಯಿಗೆ ಕಾಗೆ ಮುಟ್ಟಿದೆ. ನೀವು ಜಾಸ್ತಿ ಜಗ್ಳ ಆಡಬಾರದು. ಜಗ್ಳ ಆಡಿದ್ರೆ ಭೂಮಿತಾಯಿ ಬೇಜಾರುಪಟ್ಕೊಳ್ತಾಳೆ... ಅಮ್ಮ ಬೆಳ್ಳಂಬೆಳಿಗ್ಗೆ ರೊಟ್ಟಿ ತಟ್ಟುತ್ತಾ ಹೇಳುತ್ತಿದ್ದಳು. ಒಲೆ ಮೇಲೆ ಕಲ್ಲಿನ ಕಾವಲಿಯಲ್ಲಿ ರೊಟ್ಟಿ ಬೇಯುತ್ತಿತ್ತು. ಮೊದಲ ರೊಟ್ಟಿ ನನಗೇ ಸಲ್ಲಬೇಕೆನ್ನುವುದು ತಮ್ಮನ ವಾದ. ಇದೇ ಸಿಟ್ಟಲ್ಲಿ ಒಲೆಯೊಳಗಿದ್ದ ಕಟ್ಟಿಗೆಯನ್ನು ಹಿಂದೆ-ಮುಂದೆ ಜಾರಿಸುತ್ತಿದ್ದ. ನನಗೆ ಕೊಡೆಂದು ಅಮ್ಮನ ಸೆರಗು ನಾನು ಹಿಡಿದುಕೊಂಡಿದ್ದೆ. 


ಅಮ್ಮನ ಮಾತು ಒಗಟು. ಅರೆ! ಕಾಗೆ ಮುಟ್ಟುವುದಕ್ಕೂ, ನಾವು ಜಗ್ಳ ಆಡೋದಕ್ಕೂ ಏನು ಸಂಬಂಧ? ಅಮ್ಮನ ಕೇಳಿಯೇ ಬಿಟ್ಟೆ.
`ನೋಡು ಪಕ್ಕದ್ಮನೆ ಲಲಿತಕ್ಕ ಕಾಗೆ ಮುಟ್ಟಿದೆ ಅಂತ ತಿಂಗ್ಳಲ್ಲಿ ಮೂರು ದಿನ ಹೊರಗಡೆ ಕೂರ‌್ತಾಳೆ. ಆಗ ಅವಳಿಗೆ ಅವ್ಳ ಅಮ್ಮ ಏನೂ ಕೆಲ್ಸ ಕೊಡಲ್ಲ. ಮನೆ ಹಿಂದಿನ ಕೋಣೆಯಲ್ಲಿ ಲಲಿತಕ್ಕ ಸುಮ್ಮನೆ ಮಲಗಿರ‌್ತಾಳೆ. ಹಂಗೆ, ಭೂಮಿತಾಯಿಗೂ ಕಾಗೆ ಮುಟ್ಟಿದೆ. ಅವಳಿಗೆ ನೋವು ಕೊಡಬಾರದು, ಸಿಟ್ಟು ಮಾಡಿ ಜಗಳ ಮಾಡಿಕೊಂಡ್ರೆ ಅವಳಿಗೆ ಬೇಜಾರಾಗುತ್ತೆ. ನೀವು ಸುಮ್ಮನಿರಬೇಕು` ಎಂದು ಹೇಳುತ್ತಿದ್ದಳು.


`ಹಾಗಾದ್ರೆ ಲಲಿತಕ್ಕನ ತರ ಭೂತಾಯಿಗೂ ತಿಂಗಳಿಗೊಮ್ಮೆ ಕಾಗೆ ಮುಟ್ಟುತ್ತಾ?` ತಮ್ಮನ ಮಾತು ಅಮ್ಮನನ್ನು ಪೇಚಿಗೆ ಸಿಲುಕಿಸಿತ್ತು. `ಮನುಷ್ಯರು ತಿಂಗಳಿಗೊಮ್ಮೆ, ಭೂತಾಯಿ ವರ್ಷಕ್ಕೊಮ್ಮೆ` ಎಂದಷ್ಟೇ ಹೇಳಿ, ನಮ್ಮಿಬ್ಬರಿಗೆ ಬೈದು ಸುಮ್ಮನಾಗಿಸುತ್ತಿದ್ದಳು. ಅಮ್ಮನ ಮಾತು ನಂಬಿದ ನಾವಿಬ್ಬರೂ ಜಗಳವಾಡದೆ ಸುಮ್ಮನಿರುತ್ತಿದ್ದೆವು. 
ವರ್ಷದಲ್ಲಿ ಒಂದು ಸಲ ಭೂತಾಯಿಗೆ ಕಾಗೆ ಮುಟ್ಟುತ್ತಿತ್ತು. ಅಮ್ಮ ತುಳಸಿ ಗಿಡದ ಪಕ್ಕದಲ್ಲಿ ಮಸಿಯಿಂದ ಚೌಕ ತರ ಮಾಡಿ, ಅಲ್ಲಿ ಸೀಗೆಕಾಯಿ, ಮಸಿ ತುಂಡು ಇಡುತ್ತಿದ್ದಳು. ನಾಲ್ಕನೇ ದಿನಕ್ಕೆ ಅದೇ ಜಾಗದಲ್ಲಿ ಸೆಗಣಿ ಸಾರಿ, ಬಾಳೆಲೆ ಹಾಕುತ್ತಿದ್ದಳು. ಬಳಿಕ ಅದರ ಮೇಲೆ ಎಣ್ಣೆ, ಅರಿಶಿನ, ಕುಂಕುಮ, ಬಳೆ, ಹೂವುಗಳನ್ನು ಇಟ್ಟು ಭೂಮಿಗೆ ಎಣ್ಣೆ ಬಿಡುತ್ತಿದ್ದಳು. `ಭೂಮಿತಾಯಿ ಸ್ನಾನ ಮಾಡಿಕೊಂಡು ಬಂದಿರ‌್ತಾಳೆ` ಎನ್ನುವ ಅಮ್ಮ, ಒಂದು ಎಲೆಯಲ್ಲಿ ರೊಟ್ಟಿ, ಸಾರು ಹಾಕಿಡುತ್ತಿದ್ದಳು. 
ಭೂತಾಯಿ ತಿಂದ ಮೇಲೆ ನಾವು ಅಂಗಳದಲ್ಲೇ ಕುಳಿತು ತಿನ್ನುತ್ತಿದ್ದೆವು. ತುಳುವಿನಲ್ಲಿ ಪುಯಿಂತೆಲ್ (ಮಕರ ಮಾಸ) ತಿಂಗಳಿನ ಕೊನೆಯ, ಅಂದ್ರೆ 27, 28, 29ನೇ ದಿನ ಕೆಡ್ಡಸ ಎಂದು ಆಚರಿಸುತ್ತಾರೆ. ಆ ಮೂರು ದಿನವೂ ಭೂಮಿತಾಯಿಗೆ ನೋವಾಗುವ ಯಾವುದೇ ಕೆಲಸಗಳನ್ನು ಅಮ್ಮ ಮಾಡುತ್ತಿರಲಿಲ್ಲ, ತೋಟದ ಕೆಲಸಗಳಿಗೆ ರಜೆ, ಹೊಲ ಗದ್ದೆಗಳಲ್ಲೂ ಹಾರೆ-ಗುದ್ದಲಿಗಳ ಸದ್ದಿಲ್ಲ. ಸಾಮಾನ್ಯವಾಗಿ ಜನವರಿ-ಫೆಬ್ರುವರಿ ತಿಂಗಳಲ್ಲಿ ಈ ಹಬ್ಬ ಬರುತ್ತದೆ. ಇಂದು ಅಮ್ಮನೂ ಕೆಡ್ಡಸ ಮರೆತುಬಿಡ್ತಾರೆ”.


ಇದು ಚಿತ್ರವತ್ತಾದ ಬರಹ ಅಲ್ಲವೇ?


"ಪ್ರಜಾವಾಣಿಗೆ ಥ್ಯಾಂಕ್ಸ್ "


http://prajavani.net/include/story.php?news=8495&section=56&menuid=13

Monday, April 30, 2012

ನನ್ನ ಕೊಡೆಗೆ ಮೂರನೇ ಮಳೆಗಾಲ

ನನ್ನ ಕೊಡೆಗೆ ಮೂರನೇ ಮಳೆಗಾಲ. ಬೆಂಗಳೂರಿನ ಬಿಸಿಲಿಗೆ ಬಾಡಿ ಬಸಳೆಯಂತೆ ಬಾಗುವ ಕೊಡೆ ಮಂಗಳೂರ ಮಳೆಗೆ ಖುಷಿ-ಖುಷಿಯಿಂದ ಕೆಂದಾವರೆಯಾಗಿದೆ. ಮೆರೂನ್ ಬಣ್ಣದ ಕೊಡೆ ನನ್ನದು. ೨೦೦೯ರ ಫೆಬ್ರುವರಿ ಕೊನೆಯ ವಾರ ಮಲ್ಲೇಶ್ವರಂನ ೮ನೇ ಕ್ರಾಸ್‌ನಲ್ಲಿ ಚೌಕಾಸಿ ಮಾಡಿ ತೆಕೊಂಡಿದ್ದೆ. ಮುನ್ನೂರು ಹೇಳಿದವ ಕೊನೆಗೆ ನೂರರ ಎರಡು, ಐವತ್ತರ ಒಂದು ನೋಟು ಕೊಟ್ಟಾಗ ಸುಮ್ಮನಾಗಿದ್ದ. ವಿಶೇಷ ಅಂದ್ರೆ ಅದು ನನ್ನ ಮದ್ವೆಗೆ ತೆಕೊಂಡ ಕೊಡೆ. ಎರಡು ಮಳೆಗಾಲದಲ್ಲಿ ಈ ಕೊಡೆ ನನಗೆ ಆಸರೆ ನೀಡಿದೆ.
ಮೊನ್ನೆ ಮೊನ್ನೆ ಏಪ್ರಿಲ್ ೨೬. ಮಂಗಳೂರಿಗೆ ಹೋಗಿದ್ದೆ. ಬೆಳ್ಳಂಬೆಳಿಗ್ಗೆಯೇ ಮಳೆಶುರುವಾಗಿತ್ತು. ಕದ್ರಿ ದೇವಾಲಯದ ಹತ್ತಿರದ ಸಣ್ಣ ಬೆಟ್ಟ ಹತ್ತುವಾಗಲೇ ಜೋರು ಮಳೆ ಬರಬೇಕೇ? ನನ್ನ ಮೆರೂನ್ ಕೊಡೆ ಬ್ಯಾಗಿನಿಂದ ಹೊರತೆಗೆದೆ.  ಬೆಂಗಳೂರಿನಲ್ಲಿ ಮಳೆಗಾಲಕ್ಕಿಂತ ಬರೀ ಬಿಸಿಲನ್ನೇ ನೋಡಿದ ನನ್ನ ಕೊಡೆ ಖುಷಿಯಿಂದ ಬಿಡಿಸಿಕೊಂಡಿತ್ತು. ಧಾರಾಕಾರ ಮಳೆ. ನಾನು-ನನ್ನವರು ಇಬ್ಬರಿಗೂ ಕೊಡೆಯ ಆಸರೆ. ಹೊಟೇಲ್ ರೂಮ್‌ನಲ್ಲಿ ಫ್ಯಾನ್ ಗಾಳಿಗೆ ಒಣಗಿಸಿ ಮತ್ತೆ ಮಡಚಿಟ್ಟಿದೆ. ಬೆಂಗಳೂರಿನಲ್ಲಿ ಎರಡು ಮೂರು ದಿನಗಳಿಂದ ಬರೀ ಮೋಡ. ಪುಟ್ಟ ಬ್ಯಾಗ್‌ನೊಳಗೆ ಬೆಚ್ಚಗೆ ಮಲಗಿರುವ ನನ್ನ ಕೊಡೆಗೆ ಮತ್ತೆ ಮತ್ತೆ ಜೋರುಮಳೆಗೆ ಮೈಯೊಡ್ಡುವ ತವಕ

*****


ನಮ್ಮವ್ರ ರೈನ್ ಕೋಟ್!
ಅಪ್ಪ ತಂದು ಕೊಟ್ಟ ರೈನ್‌ಕೋಟ್‌ಗೆ ಇದು ಎರಡನೇ ಮಳೆಗಾಲ. ಆಗೋಮ್ಮೆ-ಈಗೊಮ್ಮೆ ಬೀಳುವ ಬೆಂಗಳೂರ ಮಳೆಗೆ ಈ ಕೋಟ್ ಇನ್ನೂ ಪೂರ್ತಿ ಒದ್ದೆಯಾಗಿಲ್ಲ. ಈ ವರ್ಷವಾದರೂ ಮಳೆಯಲ್ಲಿ ನೆನೆಯುವ ಅದೃಷ್ಟ ರೈನ್‌ಕೋಟ್‌ಗೆ ಸಿಗಬಹುದೇನೋ ಎನ್ನುತ್ತಾರೆ ನಮ್ಮೆಜಮಾಜನ್ರು. ಬೆಳ್ಳಂಬೆಳಿಗ್ಗೆ ಆಕಾಶ ತುಂಬಾ ಕಪ್ಪುಮೋಡ ಮುಸುಕಿದ್ದನ್ನು ನೋಡಿ ಕೂಡಿಟ್ಟ ರೈನ್‌ಕೋಟ್ ಅನ್ನು ಕೊಟ್ಟು ಕಳಿಸಿದ್ದೀನಿ. ಆದರೆ, ದಿನ ಮೂರಾದರೂ ರೈನ್‌ಕೋಟ್ ಒದ್ದೆಯಾಗಿಲ್ಲ.

**-*-*-*-*-*-*-*-*-*

ಉದ್ದ ಕಾಲಿನ ದೊಡ್ಡ ಕೊಡೆ
ಸ್ಕೂಲ್‌ಗೆ ಹೋಗುತ್ತಿದ್ದಾಗ ಕೊಡೆಗೆ ಮನೆಯಲ್ಲಿ ಕುರುಕ್ಷೇತ್ರವೇ ನಡೆಯುತ್ತಿತ್ತು. ನನ್ನ ಬಣ್ಣದ ಕೊಡೆ ಬೇಕೆಂದು ತಮ್ಮನ ಹಠ. ಬಣ್ಣದ ಕೊಡೆ ಹುಡುಗಿಯರಿಗೆ ಮಾತ್ರ ಎಂಬ ನನ್ನ ತಿಳುವಳಿಕೆಯ ವಾದ.ಕೊನೆಗೆ ತಮ್ಮನದೇ ಕೈ ಮೇಲು. ನಾನು ಅವನ ಉದ್ದ ಕಾಲಿನ ದೊಡ್ಡ ಕೊಡೆ ಹಿಡಿದು ಹೊರಟರೆ, ತಮ್ಮ ಬಣ್ಣದ ಕೊಡೆ ಹಿಡಿದು ನಗುತ್ತಿದ್ದ.  ಬಸ್‌ನಲ್ಲಿ ಹೋಗುವಾಗ ದೊಡ್ಡ ಕೊಡೆ ನೋಡಿ ಕಂಡಕ್ಟರ್ ಕಿರಿ. ಊರುಗೋಲು ತರ ಹಿಡಿದುಕೊಂಡು ರಶ್‌ನಲ್ಲಿ ಬಸ್ ಹತ್ತಿದರೆ ಸಿಕ್ಕ ಸಿಕ್ಕವರಿಗೆಲ್ಲ ಕೊಡೆ ತಾಗುತ್ತಿತ್ತು. ಎಲ್ಲರದೂ ಬೈಗುಳವೇ. ಅದಕ್ಕೆ ಒಂದು ದಿನ ದೊಡ್ಡ ಕೊಡೆಯ ಕಡ್ಡಿ ಮುರಿದು ಅಮ್ಮಂಗೆ ಸುಳ್ಳು ಹೇಳಿದ್ದೆ. ಕೊಡೆಯ ಕಡ್ಡಿ ಮುರಿದಿದೆ. ನನಗೆ ಸ್ವಿಚ್ ಕೊಡೆ ಬೇಕೆಂದು! ಸ್ವಿಚ್ ಕೊಡೆ ಅಂದ್ರೆ ಮಾಮೂಲಿ ಸ್ವಿಚ್ ಒತ್ತಿದರೆ
ಬಿಡಿಸಿಕೊಳ್ಳುವ ಕೊಡೆ. ಅಮ್ಮ ಅದನ್ನೂ ತಂದುಕೊಟ್ಟಿದ್ದಳು. ಇನ್ನೊಂದ್ಸಲ ಅಮ್ಮ ತಾವರೆ ಕೊಡೆ ತಂದಿದ್ದಳು.ತಾವರೆ ಕೊಡೆಯ ಕಡ್ಡಿಗಳು ತಾವರೆ ಆಕಾರಗಳವು. ಮಳೆಗಾಲದಲ್ಲಿ ಮೂರು ಮೈಲಿ ನಡೆದು, ಹೊಲ -ಗದ್ದೆ ದಾಟಿದ್ದು, ತುಂಬಿದ ಹೊಳೆಯಲ್ಲಿ ಭಯಪಡುತ್ತಲೇ ದಡ ಸೇರಿದ್ದು., ಭಾರೀ ಗಾಳಿಗೆ ಕೊಡೆ ಕೈಕೊಟ್ಟಾಗ ಗೆಳೆಯ-ಗೆಳತಿಯರ ಜೊತೆ ಒಂದೇ ಕೊಡೆಯೊಳಗೆ ಹೆಜ್ಜೆ ಹಾಕಿದ್ದು...ಅಬ್ಬಾ! ಮಳೆಗಾಲದ ಕೊಡೆ ನೆನಪು ಅದ್ಭುತ.

Tuesday, April 24, 2012

ಭೂತಾಯಿಗೆ ಕಾಗೆ ಮುಟ್ಟುವುದು!

ಇವತ್ತು ಭೂತಾಯಿಗೆ ಕಾಗೆ ಮುಟ್ಟಿದೆ. ನೀವು ಜಾಸ್ತಿ ಜಗ್ಳ ಆಡಬಾರದು. ಜಗ್ಳ ಆಡಿದ್ರೆ ಭೂಮಿತಾಯಿ ಬೇಜಾರುಪಡ್ಕೊಳ್ತಾಳೆ...ಅಮ್ಮ ಬೆಳ್ಳಂಬೆಳಿಗ್ಗೆ ರೊಟ್ಟಿ ತಟ್ಟುತ್ತಾ ಹೇಳುತ್ತಿದ್ದಳು. ಒಲೆ ಮೇಲೆ ಕಲ್ಲಿನ ಕಾವಲಿಯಲ್ಲಿ ರೊಟ್ಟಿ ಬೇಯಿತ್ತಿತ್ತು. ಮೊದಲ ರೊಟ್ಟಿ ನನಗೇ ಸಲ್ಲಬೇಕೆನ್ನುವುದು ತಮ್ಮನ ವಾದ. ಇದೇ ಸಿಟ್ಟಲ್ಲಿ ಒಲೆಯೊಳಗಿದ್ದ ಕಟ್ಟಿಗೆಯನ್ನು ಹಿಂದೆ-ಮುಂದೆ ಜಾರಿಸುತ್ತಿದ್ದ. ನನಗೆ ಕೊಡೆಂದು ಅಮ್ಮನ ಸೆರಗು ನಾನು ಹಿಡಿದುಕೊಂಡಿದ್ದೆ.

ಅಮ್ಮನ ಮಾತು ಒಗಟು. ಅರೆ! ಕಾಗೆ ಮುಟ್ಟುವುದಕ್ಕೂ, ನಾವು ಜಗ್ಳ ಆಡೋದಕ್ಕೂ ಏನು ಸಂಬಂಧ? ಅಮ್ಮನ ಕೇಳಿಯೇ ಬಿಟ್ಬಿ.

ನೋಡು ಪಕ್ಕದ್ಮನೆ ಲಲಿತಕ್ಕ ಕಾಗೆ ಮುಟ್ಟಿದೆ ಅಂತ ತಿಂಗ್ಳಲ್ಲಿ ಮೂರು ದಿನ ಹೊರಗಡೆ ಕೂರ‍್ತಾಳೆ. ಆಗ ಅವಳಿಗೆ ಅವ್ಳ ಅಮ್ಮ ಏನೂ ಕೆಲ್ಸ ಕೊಡಲ್ಲ. ಮನೆ ಹಿಂದಿನ ಕೋಣೆಯಲ್ಲಿ ಲಲಿತಕ್ಕ ಸುಮ್ಮನೆ ಮಲಗಿರ‍್ತಾಳೆ. ಹಂಗೆ, ಭೂಮಿತಾಯಿಗೂ ಕಾಗೆ ಮುಟ್ಟಿದೆ. ಅವಳಿಗೆ ನೋವು ಕೊಡಬಾರದು, ಸಿಟ್ಟು ಮಾಡಿ ಜಗಳ ಮಾಡಿಕೊಂಡ್ರೆ ಅವಳಿಗೆ ಬೇಜಾರಾಗುತ್ತೆ. ನೀವು ಸುಮ್ಮನಿರಬೇಕು ಎಂದು ಹೇಳುತ್ತಿದ್ದಳು.

‘ಹಾಗಾದ್ರೆ ಲಲಿತಕ್ಕನ ತರ ಭೂತಾಯಿಗೂ ತಿಂಗಳಿಗೊಮ್ಮೆ ಕಾಗೆ ಮುಟ್ಟುತ್ತಾ?’ ತಮ್ಮನ ಮಾತು ಅಮ್ಮನನ್ನು ಪೇಚಿಗೆ ಸಿಲುಕಿಸಿತ್ತು. ‘ಮನುಷ್ಯರು ತಿಂಗಳಿಗೊಮ್ಮೆ, ಭೂತಾಯಿ ವರ್ಷಕ್ಕೊಮ್ಮೆ’ ಎಂದು ಅಷ್ಟೇ ಹೇಳಿ, ನಮ್ಮಿಬ್ಬರಿಗೆ ಬೈದು ಸುಮ್ಮನಾಗಿಸುತ್ತಿದ್ದಳು. ಅಮ್ಮನ ಮಾತು ನಂಬಿದ ನಾವಿಬ್ಬರೂ ಜಗಳವಾಡದೆ ಸುಮ್ಮನಿರುತ್ತಿದ್ದೇವು.


ವರ್ಷದಲ್ಲಿ ಒಂದು ಸಲ ಭೂತಾಯಿಗೆ ಕಾಗೆ ಮುಟ್ಟುತ್ತಿತ್ತು. ಅಮ್ಮ ತುಳಸಿ ಗಿಡದ ಪಕ್ಕದಲ್ಲಿ ಮಸಿಯಿಂದ ಚೌಕ ತರ ಮಾಡಿ, ಅಲ್ಲಿ ಸೀಗೆಕಾಯಿ, ಮಸಿ ತುಂಡು ಇಡುತ್ತಿದ್ದಳು. ನಾಲ್ಕನೇ ದಿನಕ್ಕೆ ಅದೇ ಜಾಗದಲ್ಲಿ ಸೆಗಣಿ ಸಾರಿ, ಬಾಳೆಲೆ ಹಾಕುತ್ತಿದ್ದಳು. ಬಳಿಕ ಅದರ ಮೇಲೆ ಎಣ್ಣೆ, ಅರಿಶಿನ, ಕುಂಕುಮ, ಬಳೆ, ಹೂವುಗಳನ್ನು ಇಟ್ಟು ಭೂಮಿಗೆ ಎಣ್ಣೆ ಬಿಡುತ್ತಿದ್ದಳು. ‘ಭೂಮಿತಾಯಿಯನ್ನು ಸ್ನಾನ ಮಾಡಿಕೊಂಡು ಬಂದಿರ‍್ತಾಳೆ’ ಎನ್ನುವ ಅಮ್ಮ, ಒಂದು ಎಲೆಯಲ್ಲಿ ರೊಟ್ಟಿ, ಸಾರು ಹಾಕಿಡುತ್ತಿದ್ದಳು. ಭೂತಾಯಿ ತಿಂದ ಮೇಲೆ ನಾವು ಅಂಗಳದಲ್ಲೇ ಕುಳಿತು ತಿನ್ನುತ್ತಿದ್ದೆವು.

ತುಳುವಿನಲ್ಲಿ ಪುಯಿಂತೆಲ್(ಮಕರ ಮಾಸ) ತಿಂಗಳಿನ ಕೊನೆಯ ಅಂದ್ರೆ ೨೭, ೨೮, ೨೯ನೇ ದಿನ ಕೆಡ್ಡಸ ಎಂದು ಆಚರಿಸುತ್ತಾರೆ. ಭೂಮಿ ಹೊರಗಾಗಿದ್ದಾಳೆ ಎಂದು ಹೇಳುತ್ತಿದ್ದರು. ಆ ಮೂರು ದಿನವೂ ಭೂಮಿತಾಯಿಗೆ ನೋವಾಗುವ ಯಾವುದೇ ಕೆಲಸಗಳನ್ನು ಅಮ್ಮ ಮಾಡುತ್ತಿರಲಿಲ್ಲ, ತೋಟದ ಕೆಲಸಗಳಿಗೆ ರಜೆ, ಹೊಲ ಗದ್ದೆಗಳಲ್ಲೂ ಹಾರೆ-ಗುದ್ದಲಿಗಳ ಸದ್ದಿಲ್ಲ. ಸಾಮಾನ್ಯವಾಗಿ ಜನವರಿ-ಫೆಬ್ರುವರಿ ತಿಂಗಳಲ್ಲಿ ಈ ಹಬ್ಬ ಬರುತ್ತದೆ. ಇಂದು ಅಮ್ಮನೂ ಕೆಡ್ಡಸ ಮರೆತುಬಿಡ್ತಾರೆ!

Tuesday, April 17, 2012

ಆ ಕೆಂಪು ದೀಪದ ಸಿಗ್ನಲ್‌ನಲ್ಲಿ

ಅಲ್ಲಿ ಕೆಂಪು ಲೈಟ್ ಬಿತ್ತು. ಡ್ರೈವರ್ ಬ್ರೇಕ್ ಹಾಕಿದ. ಬಸ್ ನಿಂತಿತು. ಬಸ್‌ನಲ್ಲಿದ್ದವರೆಲ್ಲಾ ಉಸ್ಸಾಪ್ಪಾ ಎಂದು ನಿಟ್ಟುಸಿರು ಬಿಟ್ಟರು. ಡ್ರೈವರ್ ಮುಖ ಗಂಟಿಕ್ಕಿತು. ಬಸ್‌ನೊಳಗೆ ಉಸಿರುಗಟ್ಟಿಸುವ ವಾತಾವರಣ. ಸೀಟಿನಲ್ಲಿ ಕುಳಿತವರು, ಸೀಟಿಲ್ಲದೆ ನಿಂತವರು ಎಲ್ಲರ ಮುಖದಲ್ಲಿ ದಣಿವಿನ ದನಿ.

ಹೊರಗಿನ ಗಾಳಿ ಬೇಕನಿಸಿತು. ಕೊಂಚ ಮುಖ ಹೊರಹಾಕಿದೆ. ಪಕ್ಕದಲ್ಲಿದ್ದ ಕಾಂಪೌಂಡಿನಲ್ಲಿ ಮೈಸೂರ್ ಪ್ಯಾಲೇಸ್ ಚಿತ್ರ. ಸುಂದರವಾಗಿ ಬಿಡಿಸಿದ ಕಲಾವಿದನಿಗೊಂದು ಮನಸ್ಸಲ್ಲೇ ಶಹಭಾಷ್ ಹೇಳಿದೆ. ನೋಡು ನೋಡುತ್ತಿದ್ದಂತೆ ನಲವತ್ತು ದಾಟಿದ ಗಂಡಸೊಬ್ಬ ಬಂದು ಅದೇ ಕಾಂಪೌಂಡ್ ಮೇಲೆ ಉಚ್ಚೆ ಹೊಯ್ದ! ಇದೇ ಕಲೆಗೆ ಬಿಬಿಎಂಪಿ ಕೋಟಿ-ಕೋಟಿ ಖರ್ಚು ಮಾಡಿದೆ. ವ್ಯವಸ್ಥೆಯ ಕಾಳಜಿಯ ಹೊರುವವರಾರು? ಪ್ರಶ್ನೆಗಿನ್ನೂಉತ್ತರ ಸಿಕ್ಕಿಲ್ಲ.

ಯೋಚನೆಗಳು ತಲೆಕೊರೆಯುತ್ತಿರುವಾಗಲೇ ಮುಖದೆದುರೇ ಟಪ್! ಚಪ್ಪಾಳೆ ಬಿತ್ತು. ಕಂಡಕ್ಟರ್ ಕೊಟ್ಟ ಎರಡು ರೂಪಾಯಿ ಪಾವಳಿಯನ್ನು ಮಂಗಳಮುಖಿಯ ಕೈಗೆ ಹಾಕಿ ನಿಟ್ಟುಸಿರು ಬಿಟ್ಟೆ. ಅಲ್ಲೇ ಇದ್ದ ಹೆಲ್ಮೆಟ್ ಹಾಕಿದ ಚೆಂದದ ಹುಡುಗನ ಬೆನ್ನಿಗೊಂದು ಗುದ್ದಿ ಕೈಯೊಡ್ಡಿದಳು. ಪುಡಿಗಾಸು ಹಾಕಿದ. ಕೆನ್ನೆಗೊಂದು ಮುತ್ತಿಟ್ಟು ಮುಂದೆ ಸಾಗಿದಳು.
ದಪ್ಪ ಕನ್ನಡ ಇಟ್ಟಿದ್ದ ನುಡವಯಸ್ಕನೊಬ್ಬ ಚಿಲ್ರೆಗಾಗಿ ಎಸಿ ಕಾರಿನ ಬಾಗಿಲು ತಟ್ಟಿದರೆ, ಆತ ಬಾಗಿಲೇ ತೆಗೆಯದೆ ನಕ್ಕು ಸುಮ್ಮನಾದ. ಪಕ್ಕದಲ್ಲೇ ನಿಂತಿದ್ದ ಬೈಕ್‌ನಲ್ಲಿ ಕುಳಿತ ಯುವಕನೊಬ್ಬ ತನ್ನ ಹಿಂದೆ ಕುಳಿತ ಯುವತಿಯ ಕೈ ಅದುಮಿದ. ಅವಳು ನಾಚಿ ನಗೆಮಲ್ಲಿಗೆ ಚೆಲ್ಲಿದಳು. ಮುಂದೆ ನೋಡಿದೆ, ಬಿರುಬಿಸಿಲಿನಲ್ಲಿ ಟ್ರಾಫಿಕ್ ಪೊಲೀಸ್ ಸೋತುಹೋಗಿದ್ದ.
ಕಣ್ಣ ರೆಪ್ಪೆ ಮೇಲಿಂದ ದಣಿವಿನ ಬೆವರು ಇಳಿಯುತ್ತಿತ್ತು!

ಮತ್ತೆ ಹಸಿರು ಲೈಟ್. ಬಸ್ ಮುಂದೆ ಸಾಗಿತು. ಬಸ್‌ನಲ್ಲಿ ಸೀಟಿಲ್ಲದೆ ನಿಂತವರು, ಕಚೇರಿಗೆ ಹೊರಟ ಏಳು ತುಂಬಿದ ಯುವತಿ, ಆಫೀಸ್‌ಗೆ ಲೇಟಾಯ್ತು ಬಾಸ್ ಕೈಯಲ್ಲಿ ಬೈಸಿಕೊಳ್ಳಬೇಕೆಂದು ಕುಳಿತಲ್ಲೇ ಚಡಪಡಿಸುವ ಕೆಲವರು, ಮೊದಲ ಕ್ಲಾಸ್ ಮಿಸ್ ಆಯ್ತು, ಮ್ಯಾಥ್ಸ್ ಮೇಷ್ಟ್ರ ಬೈಗುಳಕ್ಕೆ ರೆಡಿಯಾಗೋಣ ಎಂದು ಪೋಲಿ ಜೋಕು ಬಿಡುವ ಕಾಲೇಜು ಹುಡುಗ್ರು..ಎಲ್ಲರಿಗೂ ಬದುಕಿನ ಅನಿವಾರ್ಯತೆ!

ಮತ್ತದೇ, ಕೆಂಪು ಲೈಟ್. ಡ್ರೈವರ್ ಗಂಟಿಕ್ಕಿದ ಮುಖದೊಂದಿಗೆ ಬಸ್ ನಿಲ್ಲಿಸಿದ. ಕಂಡಕ್ಟರ್ ಬೆಂಗ್ಳೂರಿಗೆ ಹಿಡಿಶಾಪ ಹಾಕ್ದ. ಪಕ್ಕದಲ್ಲಿ ನಿಂತಿದ್ದ ಬಸ್‌ನಿಂದ ಅಜ್ಜಿಯೊಬ್ಬಳು ಕತ್ತು ಉದ್ದ ಮಾಡಿ ಉಫ್ ಎಂದು ವೀಳ್ಯದೆಲೆ ಜಗಿದು ಉಗಿದಳು. ಬೈಕ್‌ನಲ್ಲಿದ್ದ ಹೆಲ್ಮೆಟ್‌ಧಾರಿ ಹುಡುಗ ತಲೆ ಮೇಲೆ ಬಿತ್ತು. ತೆಳುಮೀಸೆಯ ಆ ಹುಡುಗ ಅಜ್ಜಿಗೆ ಹಿಡಿಶಾಪ ಹಾಕಿ ತಾನೇ ಸೋತ! ಅಷ್ಟೊತ್ತಿಗೆ ಲೇಡಿಸ್ ಸೀಟಿನಲ್ಲಿ ಕುಳಿತು ದರ್ಬಾರ್ ತೋರಿಸಿದ್ದ ಪುರುಷನಿಗೊಬ್ಬನಿಗೆ ಮಂಗಳಾರತಿ ಆಗುತ್ತಿತು. ೧೪ ಸಿಗ್ನಲ್‌ಗಳನ್ನು ದಾಟಿ ಆಫೀಸ್‌ಗೆ ತಲುಪುವಷ್ಟರಲ್ಲಿ ಬದುಕಿನ ವಿವಿಧ ಮುಖಗಳಿಗೆ ನಾನು ಸಾಕ್ಷಿಯಾಗಿದ್ದೆ.