Thursday, March 8, 2012

ನೀನೆಷ್ಟು ಧೈರ್ಯವಂತೆ ಕಣಮ್ಮಾ?


ಅಮ್ಮ ಇವತ್ತು ನಿಂಗೆ ಪತ್ರ ಬರೀಲೇಬೇಕು. ಇಂದು ಮಹಿಳಾ ದಿನ. ಬೆಳಿಗೆದ್ದು ಟಿವಿ. ಪತ್ರಿಕೆಗಳನ್ನು ನೋಡಿದೆ. ಸಾಧಕಿ ಮಹಿಳೆಯರ ಗುಣಗಾನ. ಶೋಷಣೆಗಳ ಕಣ್ಣೀರು. ಆದರೆ, ನನಗೆ ನೆನಪಾಗಿದ್ದು ಇವೆಲ್ಲವುಗಳನ್ನು ಮೀರಿ ಬದುಕಿದ ನೀನು. ನನ್ನಮ್ಮ ಎಷ್ಟು ಒಳ್ಳೆಯವಳು, ನನ್ನಮ್ಮ ಎಷ್ಟು ಬುದ್ಧಿವಂತೆ, ಅಕ್ಷರಗಳ ಪರಿಚಯವಿಲ್ಲದಿದ್ದರೂ ಅದೆಷ್ಟು ಜ್ಞಾನವಂತೆ ನನ್ನಮ್ಮ ಅನಿಸ್ತು. ನಿನ್ನ ಬಗ್ಗೆ ಹೆಮ್ಮೆಯಿಂದ ಬೀಗಿದೆ. ಈಗ ನನಗೆ ನೀನಿಲ್ಲದ ಹೊತ್ತು. ಗಂಡನ ಜೊತೆಗೆ ಬದುಕು ಕಟ್ಟಿದ್ದೀನಿ. ಇದು ಪ್ರತಿ ಹೆಣ್ಣು ಮಗಳ ಜೀವನದ ಅನಿವಾರ್ಯತೆ.

ನನಗಿನ್ನೂ ನೆನಪಿದೆ ಅಮ್ಮ. ನನ್ನ ಕಲಿಕೆಗೆ ನೀನೆಷ್ಟು ಕಷ್ಟಪಟ್ಟೆ ಅಂತ. ಅಪ್ಪ ನಮ್ಮ ಬಿಟ್ಟುಹೋದ, ಅಜ್ಜ ಮನೆಯಿಂದಲೇ ಹೊರಹಾಕಿದ. ಒಪ್ಪೊತ್ತಿನ ಅನ್ನಕ್ಕೂ ಪರದಾಡುವ ಸಂದರ್ಭ. ಬರೀ ಬೀಡಿ ಸುರುಟಿ ನನ್ನ ಓದಿಸಿದೆ, ಡಿಗ್ರಿ ಕೊಡಿಸಿದೆ, ಕ್ಲಾಸಿನಲ್ಲಿ ಫಸ್ಟ್ ಬರುವಂತೆ ಮಾಡಿದೆ. ನಾನು ಸ್ಕೂಲಿಗೆ ಹೋಗುತ್ತಿದ್ದಾಗ ಪಕ್ಕದ್ಮನೆಯ ಗೌಡ್ರ ಮನೆಯ ಮಕ್ಕಳ ಬುತ್ತಿಯಲ್ಲಿದ್ದ ರೊಟ್ಟಿ ನನಗೂ ಬೇಕೆಂದು ರಚ್ಚೆ ಹಿಡಿದಾಗ ರೊಟ್ಟಿ ಮಾಡಿಕೊಟ್ಟೆ. ಗೌಡ್ರ ಮಗಳ ಹಕ್ಕಿಗಳ ಚಿತ್ರವಿರುವ ಬಣ್ಣದ ಬ್ಯಾಗ್ ಕೇಳಿದಾಗ ಅದನ್ನೂ ತಂದಿತ್ತೆ. ಮನೆಯಲ್ಲಿ ಓದಲು ಟೇಬಲ್, ಕುರ್ಚಿ ಬೇಕೆಂದಾಗ ಅದನ್ನೂ ಮಾಡಿಸಿಕೊಟ್ಟೆ. ರಜೆ ಕಳೆದು ಸ್ಕೂಲಿಗೆ ಕಳುಹಿಸುವಾಗ ಹೊಸ ಬಟ್ಟೆಗಳನ್ನು ತೊಡಿಸಿ ಶಾಲೆಗೆ ಕಳುಹಿಸಿದೆ. ವಾರದ ಕೊನೆಯಲ್ಲಿ ಐಸ್‌ಕ್ಯಾಂಡಿಗೆ ದುಡ್ಡು ಬೇಕೆಂದಾಗ ನಾಲ್ಕಾಣೆ ಕೊಡಲು ನೀನು ಮರೆಯಲಿಲ್ಲ.

ಪರೀಕ್ಷೆ ಮಾರ್ಕ್ಸ್ ಕಾರ್ಡಿಗೆ ಸೈನ್ ಹಾಕೋಕೆ ಹೇಳಿದಾಗ ಶಾಲೆಗೇ ಬಂದು ಹೆಬ್ಬೆಟ್ಟು ಒತ್ತಿದೆ. ಅರ್ಥವಾಗದನ್ನು ಮೇಷ್ಟ್ರ ಬಳಿ ಕೇಳಿ ತಿಳ್ಕೊಂಡೆ. ಸ್ಕೂಲ್ ಡೇ ದಿನ ನನ್ನ ಜೊತೆಗೆ ಬಂದು ವೇದಿಕೆ ಮುಂದೆ ಕುಳಿತೆ. ವೇದಿಕೆಯಲ್ಲಿ ಮಿಂಚುತ್ತಿದ್ದ ನನ್ನ ನೋಡಿ ಹೆಮ್ಮೆಪಟ್ಟೆ. ಬಹುಮಾನಗಳು ಸಿಕ್ಕಾಗ ಎದ್ದು ನಿಂತು ಚಪ್ಪಾಳೆ ತಟ್ಟಿದೆ. ಇನ್ನೂ ಒಂದು ತಮಾಷೆ ಎಂದರೆ, ಆರಂಭದಲ್ಲಿ ಸ್ಕೂಲ್‌ಗೆ ಹೋಗಲು ಭಯಪಡುತ್ತಿದ್ದ ನನ್ನ ಜೊತೆ ನೀನು ಸ್ಕೂಲ್‌ಗೆ ಬಂದು ಕೂರುತ್ತಿದ್ದಿ ಅಲ್ವಾ? ಎಂಥ ಒಳ್ಳೆಯ ಅಮ್ಮ ನೀನು?

ನನಗಿನ್ನೂ ನೆನಪಿದೆ ಅಮ್ಮ. ನಿನಗೆ ಓದು ಬರದಿದ್ದರೂ, ಚಿತ್ರಗಳನ್ನು ನೋಡಿಯೇ ಪಾಠ ಹೇಳುತ್ತಿದ್ದೆ. ಕಥೆ ಹೇಳುತ್ತಿದ್ದೆ.. ಅದ್ಹೆಂಗೇ ಮಗ್ಗಿ ಹೇಳುತ್ತಿದ್ದೆ ನನಗೇ ಅಚ್ಚರಿ. ನನ್ನಮ್ಮ ಅಕ್ಷರ ಗೊತ್ತಿಲ್ಲದ ವಿದ್ಯಾವಂತೆ ಅಂತ ಹೆಮ್ಮೆಪಡುತ್ತಿದ್ದೇನೆ. ಹೋದಲೆಲ್ಲಾ ಹೆಬ್ಬೆಟ್ಟು ಒತ್ತುತ್ತಿದ್ದ ನಿನಗೆ ಸಹಿ ಮಾಡೋಕೆ ನಾನು ಕಲಿಸಿದ್ದೆ. ಒಂದೇ ದಿನದಲ್ಲಿ ಸಹಿ ಹಾಕಲು ಕಲಿತ ನಿನ್ನ ಬುದ್ದಿಮತ್ತೆಗೆ ಸಲಾಂ ಅಮ್ಮ. ಕಾನೂನು ಕಟ್ಟಳೆ, ಜಮೀನು ವ್ಯವಹಾರ, ತೋಟದ ಕೆಲ್ಸ ಎಲ್ಲವನ್ನೂ ನೀಟಾಗಿ ಮಾಡೋ ನಿನ್ನ ಜ್ಞಾನ ಯಾರಿಗೇನು ಕಡಿಮೆ?

ನನ್ನಪ್ಪ ನಮ್ಮ ಬಿಟ್ಟುಹೋದಾಗ ನನಗಿನ್ನೂ ಎರಡು ವರ್ಷ. ದಟ್ಟಕಾಡಿನ ಮಧ್ಯೆ ಮುಳಿಹುಲ್ಲಿನ ಮನೆಯಿತ್ತು. ಸುತ್ತಮುತ್ತ ಮನೆಗಳಿಲ್ಲ. ಮನೆಗೆ ಬಿದಿರ ಬಾಗಿಲು. ಮಳೆಗಾಲದಲ್ಲಿ ಹಾವುಗಳ ಕಾಟ. ರಾತ್ರಿಯಿಡೀ ಚಿಮಿಣಿ ದೀಪ ಹಚ್ಚಿಕೊಂಡು ಬೆಳಕಿನೆದುರು ಮೌನವಾಗಿ ನನ್ನ ಎದೆಗವಚಿಕೊಂಡು ಕೂರುತ್ತಿದ್ದೆ . ಆಗ ಅಜ್ಜ-ಅಜ್ಜಿ ನೆರವಾಗಲಿಲ್ಲ. ಸಂಬಂಧಿಕರ ಕರೆ ಇರಲಿಲ್ಲ. ಸಮಾಧಾನ ಹೇಳಬೇಕಾದ ನನ್ನ ಕಣ್ಣುಗಳಷ್ಟೇ ಮಾತನಾಡುತ್ತಿದ್ದವು. ಜಗತ್ತಿನ ಅರಿವೂ ನನಗಿರಲಿಲ್ಲ. ಆ ಪುಟ್ಟ ಗುಡಿಸಲಿನಲ್ಲೇ ಎಂಥ ಅದ್ಭುತವಾದ ಬದುಕು ಕಟ್ಟಿದೆ ನೀನು?

ಕಷ್ಟಗಳು ಬಂದಾಗ ಇನ್ನೊಬ್ಬರ ಮನೆಯೆದುರು ಹೋಗಿ ಗೋಳೋ ಎಂದು ಅಳಲಿಲ್ಲ ನೀನು. ಕೆಲಸ ಕೊಡಿ ಎಂದು ಬೇಡಲಿಲ್ಲ ನೀನು. ಅಸಹಾಯಕಳಾಗಿ ಕೈ ಕಟ್ಟಿ ಕುಳಿತಿಲ್ಲ ನೀನು. ಬದುಕು ನೀಡದ ಅಪ್ಪ-ಅಮ್ಮನಿಗೆ, ಗಂಡನಿಗೂ ಬೈಯಲಿಲ್ಲ ನೀನು. ಬದಲಾಗಿ ಬೀಡಿ ಸುರುಟಿದೆ, ಹಸುಗಳನ್ನು ಸಾಕಿದೆ, ಆಡುಗಳನ್ನು ಸಾಕಿದೆ, ಎಮ್ಮೆಗಳನ್ನು ಸಾಕಿ ಹಾಲು ಕರೆದು ಕೈ ತುಂಬಾ ನೋಟು ಎಣಿಸಿದೆ. ತೆಂಗಿನಗಿಡ, ಅಡಿಕೆ ಗಿಡ, ಬಾಳೆ ಗಿಡ, ಕರಿಮೆಣಸು ಬೆಳೆದೆ. ಜೋಳ ಬಿತ್ತಿದೆ. ನಿನ್ನ ಕೈತೋಟದಲ್ಲೇ ಕೃಷಿಯ ಅರಮನೆ ಕಟ್ಟಿ ನನ್ನ ಬೆಳೆಸಿದೆ. ಪುಟ್ಟದಾದ ಮನೆ ಕಟ್ಟಿ ಸೂರು ಮಾಡಿಕೊಂಡೆ. ಎಂಥ ಧೈರ್ಯವಂತೆ ಅಮ್ಮ ನೀನು? ಪ್ರತಿ ಸಲ ನಿನ್ನ ಬಗ್ಗೆ ಬರೀತೀನಿ, ಹೇಳ್ಕೋತೀನಿ. ನೀನು ಬರೆದು ಮುಗಿಯದ ಕಾವ್ಯ, ನಿರಂತರವಾಗಿ ಹರಿಯೋ ತೊರೆ. ಇವತ್ತಿಗೆ ಇಷ್ಟು ಸಾಕು. ಪತ್ರ ಓದಿ ಒಂದೇ ಒಂದ್ಸಲ ಬಾಯಿ ಅಗಲಿಸಿ ಜೋರಾಗಿ ನಕ್ಕುಬಿಡು ಕೇಳಿಸಿಕೊಳ್ತಿನಿ

(ಫೋಟೋ: ಗೂಗಲ್‌ನಲ್ಲಿ ಹುಡುಕಿದಾಗ ಸಿಕ್ಕಿದ್ದು!!)

Tuesday, March 6, 2012

ನನ್ನವನಿಗೆ ಸುಮ್ನೆ ಒಂದು ಪತ್ರ

ಕಳೆದುಹೋಯಿತು ಎರಡು ವಸಂತ. ಸುಖಾಸುಮ್ಮನೆ ಕುಳಿತು ಹಿಂತಿರುಗಿ ನೋಡಿದಾಗ ಅರೆ! ೨ ವರ್ಷ ಅನ್ನೋ ಅಚ್ಚರಿ. ಅಕ್ಷರಗಳಲ್ಲೇ ಬದುಕಿನ ಅರಮನೆ ಕಟ್ಟಿದ್ದು , ಅಕ್ಷರಗಳನ್ನೇ ಪ್ರೀತಿಯ ಮುತ್ತಾಗಿ ಪೋಣಿಸಿದ್ದು ಎಲ್ಲವೂ ಸಿಹಿಸಿಹಿ ನೆನಪು. ಎರಡು ವರ್ಷಗಳ ಹಿಂದೆ ಸಂಬಂಧಗಳ ನಡುವೆ ಹರಿದಾಡಿದ್ದ ಪತ್ರಗಳನ್ನು ಮತ್ತೆ ಬಿಚ್ಚಿ ನೋಡುವ ಖುಷಿ.

ಆರಂಭದಲ್ಲಿದ್ದ ಸಿಟ್ಟು-ಸಿಡುವಿನ ಕಾವು ಈಗಿಲ್ಲ. ಆಗೊಮ್ಮೆ -ಈಗೊಮ್ಮೆ ಗೆಳೆಯರ ಮಧ್ಯೆ ನೆನಪಾಗುತ್ತಿದ್ದ ಸಿಗರೇಟಿನ ಹೊಗೆಯಿಲ್ಲ. ಈಗಲೂ ನೀನು ಆಗಾಗ ನೊರೆ ಉಕ್ಕಿಸುವ ಬಿಯರ್ ಬಾಟಲಿ ಮೇಲೆ ಕೊಂಚ ಮುನಿಸಿದೆ. ಇರಲಿಬಿಡು!

ಸುಖಾಸುಮ್ಮನೆ ರೇಗುವ ನಿನ್ನ ಮುಖದಲ್ಲಿ ನಗುವಿನ ಕಮಲ ಅರಳಿದೆ. ಮಾತು-ಮಾತಿಗೂ ಮುನಿಯುತ್ತಿದ್ದ ನನ್ನಲ್ಲೂ ನಗು ಅರಳಿದೆ, ಬದುಕು ಸುಖಿಸುತ್ತಿದೆ. ಬದುಕು ತುಂಬಾ ಖುಷಿಯ ಸುಗ್ಗಿ ಹರಿಸಿದ್ದಿ. ನನ್ನದೆಯ ತುಂಬಾ ಹೊಸಹೊಸ ಕನಸುಗಳ ಕಸುವು ಮಾಡಿದ್ದಿ. ಹೆಚ್ಚೇನೂ ಹೇಳಲ್ಲ. ಅಕ್ಕರೆಯ ಅರಮನೆಯಲ್ಲಿ ಕವಿ ಹೇಳಿದಂತೆ ನಾನೊಂದು ಪುಟ್ಟಕೊಳ, ನೀನದರ ಜೀವಜಲ.

Saturday, March 3, 2012

ನನಗೊಬ್ಳು ನಾದಿನಿ ಬಂದ್ಳು


ನನಗೊಬ್ಬನೇ ತಮ್ಮ. ಅಮ್ಮನ ಜೊತೆಗೆ ಕೃಷಿಗೆ ಯಜಮಾನ. ಮೊನ್ನೆ-ಮೊನ್ನೆ ಅವನಿಗೂ ಮದುವೆ ಆಯಿತು. ನನ್ನ ಮದುವೆ ಹಳ್ಳಿ ಸೊಬಗನ್ನೆಲ್ಲಾ ಮೈತುಂಬಿಸಿಕೊಂಡಿರಲಿಲ್ಲ. ಆದರೆ, ತಮ್ಮನಿಗೆ ಚಾನ್ಸ್ ಸಿಕ್ಕಿತು. ಹಸಿರು ವನದ ನಡುವಿರುವ ನಮ್ಮನೆಯಲ್ಲೇ ಮದುವೆ.

ವಾರದ ಮೊದಲೇ ಮನೆಯಂಗಳದಲ್ಲಿ ತೆಂಗಿನ ಮಡಲಿನ ಚಪ್ಪರದ ಶೃಂಗಾರ. ಮಾವಿನ ತಳಿರುಗಳ ತೋರಣ ಚಪ್ಪರಕ್ಕೆ ರಂಗು ತಂದಿತ್ತು. ಅಗಳವಾದ ಅಂಗಳ. ಸುತ್ತಲೂ ಅಮ್ಮ ನೆಟ್ಟ ಹೂವಿನ ಗಿಡಗಳು. ನಮ್ಮನೆಯ ಬಾವಿಯಲ್ಲಿ ನೀರಿಗೆ ಬರವಿಲ್ಲ, ಹಾಗಾಗಿ, ಹೂವಿನ ಗಿಡಗಳೂ ಹಸುರು ಹಸುರಾಗಿವೆ. ಅಂಗಳದಿಂದ ಇಳಿಯುತ್ತಲೇ ತೋಟ, ಸುತ್ತಮುತ್ತ ದೊಡ್ಡ ದೊಡ್ಡ ಮರಗಳು. ಮದುವೆಗೆಂದು ಸಿಂಗಾರಗೊಂಡ ಮನೆಯೇ ಮದುಮಗಳಂತೆ ಕಂಗೋಳಿಸುತ್ತಿತ್ತು.

ಮದುವೆಗೆ ತಮ್ಮನದೇ ಓಡಾಟ. ಅಮ್ಮನಿಗೆ ಆರೋಗ್ಯದ ಚಿಂತೆ. ದೂರದೂರಿನಲ್ಲಿ ಗಂಡನ ಹುಡುಕಿದ ನನಗೆ ಮನೆ ಹತ್ತಿರವಿರಬಾರದಿತ್ತೇ ಅನಿಸುತ್ತಿದೆ ನಿಜ. ತಮ್ಮನ ಮದುವೆಗೆ ನಾನೇ ಓಡಾಟ ಮಾಡಬೇಕನಿಸಿತ್ತು. ಅನಿವಾರ್ಯ ಬದುಕು. ಬೆಂಗಳೂರಲ್ಲಿ ಇನ್ನೊಂದು ಅಮ್ಮ ಸಿಕ್ಕಿದ್ದಾರೆ, ಅದು ಅತ್ತೆಮ್ಮ. ಮೂರು ದಿನಗಳ ಮೊದಲು ತವರು ಸೇರಿದೆ. ತಮ್ಮನಿಗೆ ಗಡಿಬಿಡಿ.
ಮದುವೆ ಗಂಡಿಗೆ ರೆಸ್ಟ್ ಇಲ್ಲ. ಜೊತೆಗೆ ವಾರದ ಮೊದಲೇ ತಯಾರಿ. ಸುತ್ತಮುತ್ತಲಿನ ಗೌಡ್ರ ಹೆಂಡ್ತಿಯರು ಮನೆಯಲ್ಲಿ ಠಿಕಾಣಿ.



ನಮ್ಮ ಅಪ್ಪನ, ಅಜ್ಜಿಯ ಕಡೆಯವರೆಲ್ಲಾ ಮನೆ ತುಂಬಿಕೊಂಡಿದ್ದರು. ಮಾತು, ಹಾಸ್ಯ, ನಗು, ಖುಷಿ-ಖುಷಿಯ ಜಾತ್ರೆ. ನನ್ನ ಅಜ್ಜನ ಕಡೆಯವರು ಆರು ಮಂದಿ ಅತ್ತಿಗೆ ಆಗಬೇಕಾದವ್ರು ಇದ್ದಾರೆ. ಎಲ್ಲರೂ ಎರಡು ದಿನ ಮೊದಲೇ ಮನೆ ಸೇರಿದ್ದರು. ಅವರು ಬಂದ್ರೆ ಸಾಕು ಮನೆಯಲ್ಲಿ ಜನಜಾತ್ರೆ. ಅಡುಗೆ ಮನೆಯಲ್ಲೂ ಅವರದೇ ಕಾರುಬಾರು. ನಮ್ಮನೆಯ ಹಿಂದೆ ಅಡುಗೆಗೆಂದೇ ಚಪ್ಪರದ ಹಾಲ್ ರೆಡಿಯಾಗಿತ್ತು. ಸುತ್ತಮುತ್ತಲಿನ ಮನೆಗಳಿಂದಲೇ ಪಾತ್ರೆಗಳನ್ನು ತಂದದ್ದಾಯಿತು.ಇದಕ್ಕೇನೂ ಬಾಡಿಗೆ ರೊಕ್ಕವಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಕೆಲ್ಸ. ಸಾಗಣಿ ಸಾರಿದ ಅಂಗಳದಲ್ಲೇ ತರಕಾರಿ ಹಚ್ಚುವ ಕೆಲಸ

ಮದುವೆಗೆ ಮೊದಲ ದಿನ ಮದರಂಗಿ ಶಾಸ್ತ್ರ. ರಾತ್ರಿಯಿಡೀ ಪರಸ್ಪರ ಅಂಗೈಯಲ್ಲಿ ಚಿತ್ತಾರ ಬಿಡಿಸುವ ಕೆಲಸ. ಆಗಾಗ, ನಡುರಾತ್ರಿಯಲ್ಲೂ ಪಟಾಕಿಗಳ ಸದ್ದು. ಯಾರಿಗೂ ನಿದ್ದೆಯಿಲ್ಲ. ಹಾಡು-ಆಟಗಳಲ್ಲೇ ಕಳೆದುಹೋಗುವ ಸಮಯ. ಚಂದ್ರ ಮರೆಯಾಗಿ ಸೂರ್ಯ ಕಾಣುವ ತನಕವೂ ಮಾತಿನ ಜಾತ್ರೆ.

ಸೂರ್ಯ ಮೇಲೆರುವ ಹೊತ್ತಿಗೇ ಹೆಣ್ಣಿನ ಕಡೆಯವರ ದಿಬ್ಬಣ. ಲುಂಗಿ-ರುಮಾಲು ಸುತ್ತಿದ ಬಂಟರು. ಮೈ ತುಂಬಾ ಒಡವೆಯಲ್ಲಿ ಸೀರೆಯುಟ್ಟ ಹೆಂಗಳೆಯರ ನಗೆಚೆಲುವು. ತೋಟದಲ್ಲೆಲ್ಲಾ ಓಡಾಡಿ ಖುಷಿಪಡುವ ಪುಟಾಣಿಗಳ ಕಲರವ. ಮದುವೆಯಾಗದ ಗಂಡುಮಕ್ಕಳ ಕಣ್ಣಲ್ಲಿ ಹುಡುಕಾಟ. ನನ್ನ ಯಾರು ನೋಡುತ್ತಾರೋ ನಾಚಿಕೆಯಲ್ಲಿ ಮುದುಡಿದ ಹುಡುಗಿರ ಕಣ್ಣುಗಳು. ಅಕ್ಕನ ಜೊತೆಗೆ ಆಗಾಗ ಕ್ಯಾಮರಾಕ್ಕೆ ಪೋಸು ಕೊಡುವ ಮದುಮಗಳ ತಂಗಿ. ಚಿನ್ನ-ಬಣ್ಣಗಳಿಂದ ದೂರವಿದ್ದ ನನಗೆ ಅಮ್ಮನಿಂದ ಬೈಗುಳ. ಕೈ ತುಂಬಾ ಬಳೆ ಹಾಕು, ಒಡವೆ ಹಾಕೋ, ಮುಡಿಗೆ ಹೂವ ಮುಡಿ, ನೀಟಾಗಿ ಸೀರೆಯುಟ್ಟುಕೋ,..ಹೇಳಿ ಹೇಳಿ ಅಮ್ಮನಿಗೇ ಸುಸ್ತು. ಮಗಳ ಬಗ್ಗೆ ಕೊಂಚ ಕೋಪ. ಅಂತೂ ಮದುವೆ ಮುಗಿಯಿತು. ಮನೆಗೆ ಮಗಳೊಬ್ಬಳು ಬಂದ ಖುಷಿ ಅಮ್ಮನಿಗೆ, ಹೆಂಡ್ತಿ ಬಂದ ಖುಷಿ ತಮ್ಮನಿಗೆ, ಅಮ್ಮನ ಮಾತುಗಳಿಗೆ ಕಿವಿಯಾಗಿ, ಬದುಕಿಗೆ ಸಾಥ್ ನೀಡುವ ಗಟ್ಟಿಗಿತ್ತಿ ನಾದಿನಿ ಬಂದ ಖುಷಿ ನನಗೆ.

Wednesday, February 1, 2012

ನಮ್ಮೂರಿಗೆ ಕರೆಂಟು ಬರುತ್ತಿದೆ....



ನಮ್ಮೂರಿಗೆ ಕರೆಂಟು ಬರುತ್ತಿದೆ. ಕಂಬಗಳನ್ನು ಹಾಕೋಕೆ ಗುಂಡಿ ತೋಡಿದ್ದಾರೆ. ಏಪ್ರಿಲ್ ಒಳಗೆ ಕರೆಂಟು ಬರಬಹುದು ಮಗಾ. ಆಮೇಲೆ ಸೀಮೆಎಣ್ಣೆ ಖರ್ಚಿಲ್ಲ. ನಿಂಗೆ ಊರಿಗೆ ಬಂದ್ರೆ ಬೋರಾಗಕ್ಕಿಲ್ಲ. ಕರಂದ್ಲಾಜೆ ಶೋಭಕ್ಕನೇ ಕರೆಂಟು ಕಳಿಸಿರಬೇಕು....ಹೀಗೆ ಪಕ್ಕದ್ಮನೆ ಅಜ್ಜಿಯ ನಾನ್ ಸ್ಟಾಪ್ ಮಾತುಗಳು ಮುಂದುವರೆಯುತ್ತಲೇ ಇದ್ದವು.
ಬೆಂಗಳೂರಿನಿಂದ 8 ಗಂಟೆಗಳ ಪ್ರಯಾಣ ಮಾಡಿ ನಮ್ಮನೆಗೆ ತಲುಪುವಷ್ಟರಲ್ಲಿ ಉಸ್ಸಪ್ಪಾ ಎಂದು ಜಗಲಿ ಮೇಲೆ ಕುಳಿತು ಒಂದು ಚೊಂಬು ನೀರು ಕುಡಿದು ಸುಧಾರಿಸಿಕೊಳ್ಳುತ್ತಿದ್ದೆ. ಹೀಗಿದ್ದರೂ ನಾನು ಊರಿಗೆ ಹೋದ ಖುಷಿಯಲ್ಲಿ ಅಜ್ಜಿ ಕರೆಂಟು ಪುರಾಣವನ್ನು ಹೇಳುತ್ತಲೇ ಇತ್ತು. ಪುತ್ತೂರು ತಾಲೂಕಿನ ದೋಳ್ಳಾಡಿ ಗ್ರಾಮದಲ್ಲಿ ಕಳೆಂಜೋಡಿ ಎಂಬಲ್ಲಿರುವುದು ನಮ್ಮನೆ. ಸುತ್ತಲೂ ದಟ್ಟ ಕಾಡು, ಹಸಿರು ಹಸಿರು. ವರ್ಷವಿಡೀ ಕೂಲ್ ಕೂಲ್. ನೀರಿಗೆ ಬರವಿಲ್ಲ. ಕೂಲಿ-ನಾಲಿಗೆ ಬರವಿಲ್ಲ. ಊರಮಂದಿಗೆಲ್ಲ ಸಾಹುಕಾರರು. ತೋಟವಿದೆ, ಬೇಕಾದಷ್ಟು ಜಮೀನಿದೆ. ಅಡಿಕೆ, ತೆಂಗಿನ ಗಿಡಗಳು ಬೇಸಿಗೆಯಲ್ಲೂ ಹಸಿರಾಗಿರುತ್ತವೆ. ತೋಟ ತುಂಬಾ ದನಕರುಗಳು ಅಂಬಾ ಅನ್ನುತ್ತವೆ. ಇಲ್ಲಿರುವುದು ಬರೇ ಹತ್ತು ಮನೆ. ದ್ವೀಪದಂತೆ, ಆದರೆ ಸುತ್ತಲೂ ನೀರಿಲ್ಲ, ಬದಲಾಗಿ ಆಕಾಶದೆತ್ತರಕ್ಕೆ ಬೆಳೆದ ಮರಗಳಿವೆ. ಹಾಗಾಗಿ, ಈ ಕರೆಂಟು ಮರಗಳನ್ನು, ಕಾಡನ್ನು ದಾಟಿ ಬರಬೇಕು. ಇಷ್ಟು ವರ್ಷಗಳ ಕಾಲ ನಮ್ಮೂರಿಗೆ ಕರೆಂಟು ಕನಸಾಗಿತ್ತು. ಈಗ ಗುಂಡಿ ತೋಡಿದ್ದಾರೆ


ನಮ್ಮ ಅಮ್ಮ ಸಣ್ಣವರಿರುವಾಗ ಮನೆಮುಂದೆ ಆನೆ, ಹುಲಿ ನೋಡಿದ್ದಾರಂತೆ. ಈಗಲೂ ಕಡವೆ, ಮೊಲ, ಕಾಡುಹಂದಿ, ಕೋತಿಗಳು ಅಂಗಳಕ್ಕೆ ಬಂದು ನಕ್ಕು ಓಡುತ್ತವೆ. ಅಂಥ ಕಾಡುಹಳ್ಳಿಯಿಂದ ಸ್ಕೂಲಿಗೆ ಹೋಗಬೇಕಾದರೆ ಕನಿಷ್ಠ ಏಳು ಕಿ.ಮೀ. ನಡೆಯುತ್ತಿದೆ. ಹೋಗುವಾಗ ಏಳು, ಬರುವಾಗ ಏಳು. ದಿನದಲ್ಲಿ 14 ಕಿ.ಮೀ. ನಡಿಗೆ. ಆಗ ಕಾಲುಗಳು ದಣಿಯುತ್ತಿರಲಿಲ್ಲ. ಸುಸ್ತು ಅನ್ನೋ ಪದವೇ ಗೊತ್ತಿರಲಿಲ್ಲ. ಓಡಾಡಲು ಗಾಡಿ ಬೇಕನಿಸುತ್ತಿರಲಿಲ್ಲ. ಚಿಮಿಣಿ ದೀಪದಡಿ ಓದಿದರೂ ತರಗತಿಯಲ್ಲಿ ಮೊದಲ ಸ್ಥಾನ ಬಿಟ್ಡುಕೊಡುತ್ತಿರಲಿಲ್ಲ. ಪಠ್ಯ-ಪಠ್ಯೇತರ ಎರಡರಲ್ಲೂ ಮೊದಲ ಸ್ಥಾನ ನನ್ನದಾಗಿತ್ತು. ಊರಿಗೆ ಹೋದಾಗ ಎಲ್ಲವೂ ನೆನಪುಗಳು ಕಣ್ಣಂಚಿನಲ್ಲೇ ಸರಿದುಹೋದವು.

ಕರೆಂಟಿಲ್ಲದ ಆ ಊರಿನಲ್ಲಿ, ಅಷ್ಟೊಂದು ದೂರ ನಡೆದು ಓದಿದ್ದೆ. ಅದೇ ದಟ್ಟಕಾಡಿನ ನಡುವಿನ ಮನೆಯಲ್ಲಿ ಅಮ್ಮ ಕಲಿಸಿದ ಬದುಕಿಗೆ ರೆಕ್ಕೆ ಕಟ್ಟಿ ಬೆಂಗಳೂರಿಗೆ ಹಾರಿಬಂದಿದ್ದು. ಈಗ ಊರಿಗೆ ಹೋದರೆ 1 ಕಿ.ಮೀ. ನಡೆಯುವುದೂ ಕಷ್ಟವಾಗುತ್ತಿದೆ. ಬೆಂಗಳೂರಿನಿಂದ ಊರಿಗೆ ಹೋದಾಗ ಅಮ್ಮ ಸಂಜೆ ಚಿಮಿಣಿ ದೀಪ ಹಚ್ಚಿ ಹೇಳುತ್ತಾಳೆ, ಬೆಂಗಳೂರಿನಲ್ಲಿ ಕರೆಂಟು ನೋಡಿ, ಇಲ್ಲಿ ರಾತ್ರಿ ಬೋರ್ ಅನಿಸಬಹುದೆಂದು!

ಒಂದು ಸಲ ಅಮ್ಮ ಹೇಳಿದ್ದಳು: ಮೆಣಸಿನಕಾಯಿ ಗಿಡ ಕೊಡ್ತೀನಿ. ತಕೊಂಡು ಹೋಗಿ ನೆಡು ಎಂದು. ಅಮ್ಮನ ಮಾತು ನನಗೆ ಅಚ್ಚರಿಯಾದರೂ ಅವಳಿಗೆ ಸಹಜ. ನಾನು ಹೇಳಿದೆ: ಬೆಂಗಳೂರಲ್ಲಿ ಮೆಣಸಿನಗಿಡ ಹಾಕೋಕೆ ಜಾಗ ಸಿಗಲ್ಲ ಎಂದು. ಬಳಿಕ ಅಮ್ಮನ ಒಂದು ವಾರದ ಮಟ್ಟಿಗೆ ಬೆಂಗಳೂರಿಗೆ ಕರೆದುಕೊಂಡು ಬಂದೆ. ಒಂದು ವಾರ ನಮ್ಮನೆ ಅವಳಿಗೆ ಬಂಧನ ಅನಿಸಿಬಿಟ್ಟಿತು. ಬರೇ ವಾಹನ, ಕಟ್ಟಡಗಳೇ ಇವೆ. ಅಲ್ಲಿ. ಒಂದೇ ಒಂದು ಹಸಿರು ಗಿಡನೂ ಕಾಣಿಸಲ್ಲ ಅಂದಳು. ಒಂದು ವಾರದ ಬಂಧನದಿಂದ ಕಳಚಿ ವಾಪಸ್ ಊರಿಗೆ ಹೋದವಳು ಊರ ಮಂದಿ ಹೇಳಿದಾಗ, ಅಲ್ಲಿ ಕೃಷಿ, ತೋಟ, ಗದ್ದೆ, ದನಗಳು ಏನೂ ಇಲ್ಲ. ಬರಡು ಭೂಮಿ ಅಂದ್ಳತೆ.





Sunday, December 18, 2011

ಹೆಣ್ಣು- ರಾಜಿ

ಅದು ಅಪ್ಪ ಹೋದ ಮರುದಿನ. ಅಪ್ಪ ನಮ್ಮನ್ನೆಲ್ಲಾ ಬಿಟ್ಟು ದೂರ ಹೋಗಿದ್ದ. ಅಮ್ಮ ಒಬ್ಬಳಾಗಿದ್ದಳು. ಕಣ್ಣೀರನ್ನೆಲ್ಲಾ ನುಂಗಿ ಕಲ್ಲಾಗಿದ್ದಳು. ರಾತ್ರಿ ಇಡೀ ನಿದ್ದೆ ಮಾಡದ ಅಮ್ಮ ಸೂರ್ಯ ಬರುವ ಮೊದಲೇ ಬಾಗಿಲು ತೆರೆದಿದ್ದಳು.
ಎದುರುಮನೆಯ ಅಮ್ಮನ ವಯಸ್ಸಿನ ಹೆಂಗಸು ನಿತ್ಯ ಸಂಜೆ ಜಗಲಿಕಟ್ಟೆಯಲ್ಲಿ ಹಾಜರಾಗುವಳು. ಸುಖ-ದುಃಖವೆಂದು ಮಾತಿಗಿಳಿಯುವಳು. ಅಪ್ಪ ಹೋದ ದಿನ ಅಮ್ಮನಿಗೆ ಸಮಾಧಾನದ ಮಾತುಗಳ ಹೇಳಿದವಳು.
ಆದರೆ, ಅಪ್ಪ ಹೋದ ಮರುದಿನ ಬಾಡಿಹೋದ ಮುಖದೊಂದಿಗೆ ಅಮ್ಮ ಬಾಗಿಲು ತೆರೆದಾಗ ಎದುರುಮನೆಯ ಬಾಗಿಲು ದಡಕ್ಕಂತ ಮುಚ್ಚಿತು. ದರಿದ್ರ, ಗಂಡ ಕಳಕೊಂಡವಳು! ಎಂದು ಆಕೆ ಉಸುರಿದ್ದು ಅಮ್ಮನ ಕಿವಿಗೆ ಬೀಳದಿರಲಿಲ್ಲ, ಅಮ್ಮನ ಕಣ್ಭಲ್ಲಿ ಕಣ್ಣೀರು ಬತ್ತಿಹೋಗಿತ್ತು. ಮುಚ್ಚಿದ ಮನೆಬಾಗಿಲು ಕಂಡು ನಿಟ್ಟುಸಿರು ಬಿಟ್ಟು ಅಮ್ಮ ಮೌನವಾದಳು.
***********
ಅಂದು ಅಪ್ಪನ ವೈಕುಂಠ ಸಮಾರಾಧನೆ ದಿನ. ಮುತ್ಯೈದೆಯರಿಂದ ಅರಿಶಿನ ಕುಂಕುಮ ಕೊಡಲು ಆದೇಶಿಸಿದರು. ಬೆಳ್ಲಿ ತಟ್ಟೆ ಎತ್ತಿಕೊಂಡು ನಾನು ಸರತಿ ಸಾಲಿನಲ್ಲಿ ಕುಳಿತು ಅರಿಶಿನ, ಕುಂಕುಮ ಹಂಚಿದೆ. ಮುತ್ಯೈದೆಯರ ಸರತಿ ಸಾಲಿನಲ್ಲಿ ಕುಳಿತ ಅಮ್ಮ ಸುಮ್ಮನಾದಳು. ಅಪ್ಪನಿರುವಾಗ ಅರಿಶಿನ ಕುಂಕುಮ ಎಂದರೆ ಮುಂದೆ ಬಂದು ಮುತ್ಯೈದೆ ಭಾಗ್ಯ ನೀಡು ದೇವಾ ಎಂದು ತಾಳಿಗೆ ಅರಿಶಿನ ಹಚ್ಚುತ್ತಿದ್ದ ಅಮ್ಮನಿಗೆ ಅರಿಶಿನ ಪಡೆಯುವ ಕನಿಷ್ಠ ಭಾಗ್ಯ ಇಲ್ಲದ ಈ "ಕಟ್ಟುಪಾಡು'ಗಳ ಬಗ್ಗೆ ಉತ್ತರವಿಲ್ಲದೆ ನಾನೂ ರಾಜಿಯಾಗಿದ್ದೆ!

Wednesday, December 7, 2011

ಅಗಲಿದ ಅಪ್ಪನೆಂಬ ಅಕ್ಕರೆಗೆ...


ನೀನು ಸುಮ್ಮನೆ ಮಲಗಿದ್ದೆ, ಮೌನವಾಗಿ. ಆ ಗಾಜಿನ ಪೆಟ್ಟಿಗೆಯೊಳಗೆ ಮಲಗಿದ್ದ ನಿನ್ನ ನೋಡುವಾಗ ನಿನ್ನ ಬಿಳಿಮೀಸೆಯಡಿಗಿನ ಮುಗ್ಧ ನಗು ನೆನಪಾಗುತ್ತಿತ್ತು. ಮತ್ತೆ ಮಾತಿಗೆ ತುಟಿಬಿಚ್ಚುವಂತೆ ಭಾಸವಾಗುತ್ತಿತ್ತು. ಪುಟ್ಟಾ ಎಂದು ಕೂಗುತ್ತಿಯೇನೋ, ಕಣ್ಣುಗಳಲ್ಲೇ ನಗುತ್ತಿಯೇನೋ ಅಂದುಕೊಂಡೆ.
ಆದರೆ ನೀ ನಗಲಿಲ್ಲ, ನಾನು ಅತ್ತೆ, ಗೋಳಾಡಿದೆ. ಮನಸ್ಸು, ಹೃದಯ ಕಣ್ಣೀರಾದರೂ ನೀನು ಬರಲೇ ಇಲ್ಲ. ನಿನ್ನ ಅಪ್ಪಾ ಎಂದು ಕೂಗುವ ಹಕ್ಕನ್ನೂ ನಾ ಕಳೆದುಕೊಂಡೆ. ಅಪ್ಪನಿಲ್ಲದ ಜಾಗದಲ್ಲಿ ನೀನು ಅಪ್ಪನಾಗಿ ಬಂದಾಗ ನಾನು ಮಾಮ ಎಂದು ಮಮಕಾರ ತೋರಲಿಲ್ಲ, ಅಪ್ಪಾ ಎಂದೆ. ನೀನು ಸೊಸೆ ಎನ್ನಲಿಲ್ಲ, ಮಗಳೇ ಎಂದು ಎದೆಗಪ್ಪಿಕೊಂಡೆ.
ಆ ಸಂಜೆ ಹೊತ್ತು ನೀನು ಇದ್ದಕಿದ್ದಂತೆ ಉಸಿರಾಡುವುದನ್ನು, ಮಾತನಾಡುವುದನ್ನು, ನಗುವುದನ್ನು, ನಿನ್ನ ಪಾಡಿಗೆ ಗೊಣಗುವುದನ್ನು, ಅಮ್ಮನ ಜೊತೆ ಸುಖಾಸುಮ್ಮನೆ ಜಗಳವಾಡುವುದನ್ನು ನಿಲ್ಲಿಸಿದಾಗ ದೇವರ ಮೇಲೆ ಕೆಟ್ಟ ಸಿಟ್ಟು ಬಂತು! ನಿನ್ನ ಮರಳಿ ಕೊಡು ಎಂದು ಕಣ್ಣೀರಿಟ್ಟರೂ ದೇವರು ಕಿಂಚಿತ್ತೂ ದಯೆ ತೋರಲೇ ಇಲ್ಲ.

ರಾತ್ರಿಯಿಡೀ ಮನೆಯೆದುರು ಬೆಂಕಿ ಹಾಕಿ ಕುಳಿತೆ. ಮನೆಯೊಳಗೆ ಗಾಜಿನ ಪೆಟ್ಟಿಗೆಯಲ್ಲಿ ಮಂಜುಗಡೆಯ ತಂಪಿಗೆ ನೀನೂ ಮಂಜಾಗುತ್ತಿದ್ದೆ. ಕಿಸಾಗೋತಮಿ ಕಥೆ ನೆನಪಾಯಿತು. ಸಾವಿಲ್ಲದ ಮನೆಯ ಸಾಸಿವೆ ಗೌತಮಿಗೆ ಕೊನೆಗೂ ಸಿಗಲೇ ಇಲ್ಲ.
ಆದರೂ ಇಷ್ಟು ಬೇಗ ನನ್ನ, ನಿನ್ನ ಅಗಲುವಿಕೆ ನ್ಯಾಯವಲ್ಲ ಎನ್ನೋದು ನನ್ನ ತಕರಾರು. 25 ವಸಂತಗಳನ್ನು ದಾಟಿದ ನಂತರ ನೀನು ಸಿಕ್ಕಿದೆ, ಬಾಯಿ ತುಂಬಾ ಅಪ್ಪಾ ಎಂದು ನಿನ್ನ ಕರೆದೆ. ನಿನ್ನ ಹೆಗಲ ಮೇಲೆ ಕೈಯಿಟ್ಟಾಗ ಸಲಿಗೆ ಎಂದು ಬೈಯಲಿಲ್ಲ. ಎಪ್ಪತ್ತೈದು ದಾಟಿದ ನೀನು ಪದೇ ಪದೇ ನನ್ನ ಕೂಗಿದಾಗ ನಾನು ರೇಗಾಡಿದರೂ ಮಗಳೆಂದು ಸಹಿಸಿಕೊಂಡೆ.
ನೀನು ಕಣ್ಣಲ್ಲಿ ಕಣ್ಣಿಟ್ಟು ಸಾಕಿದೆ, ಕಿವಿಗೆ ಓಲೆ, ಜುಮುಕಿ ತಂದೆ, ಕೈಗಳಿಗೆ ಮಿನುಗು ಬಳೆಗಳನ್ನು ತಂದೆ, ಮುಡಿಗೆ ಮಲ್ಲಿಗೆ ಮೊಳ ತಂದೆ, ಕಣ್ಣಿಗೆ ಕಾಡಿಗೆ ತಂದೆ, ಕಾಲಿಗೆ ಸದ್ದುಗೈಯುವ ಗೆಜ್ಜೆ ತಂದೆ, ಮನೆ ತುಂಬಾ ಗೆಜ್ಜೆಯ ಸಪ್ಪಳ ಮಾಡಿದೆ. ಆದರೆ, ಒಂದೇ ಒಂದು ನಿನ್ನಾಸೆ ಈಡೇರಲಿಲ್ಲ, ನನಗೆ ಮೊಗ್ಗಿನ ಜಡೆ ಇಳಿಸಿ ನೋಡಬೇಕೆಂಬ ನಿನ್ನಾಸೆ ಈಡೇರಲೇ ಇಲ್ಲ. ದೇವರ ಅನ್ಯಾಯವಿದು!

Friday, July 15, 2011

ಅಮ್ಮ ತಂದ ಲಾಟರಿ

ಆಗ ಶಾಲೆಗೆ ದೊಡ್ಡ ರಜೆ. ಬೇಸಿಗೆ ರಜೆ ಅಂದ್ರೆ ಅದು ನಮ್ಮ ಪಾಲಿಗೆ ದೊಡ್ಡ ರಜೆ. ಅಕ್ಟೋಬರ್ ರಜೆ ಸಣ್ಣ ರಜೆ. ದೊಡ್ಡ ರಜೆ ಬಂದರೆ ಅಮ್ಮನಿಗೆ ಚಿಂತೆ. ಮುಂದಿನ ತರಗತಿಗೆ ಭಡ್ತಿ ಪಡೆಯೋ ಮಕ್ಕಳಿಗೆ ಹೊಸ ಯೂನಿಫಾರ್ಮ್, ಹೊಸ ಶೂ, ಹೊಸ ಬ್ಯಾಗ್, ಹೊಸ ನೋಟ್ ಬುಕ್, ಹೊಸ ಪೆನ್...ಹೀಗೆ ಮಕ್ಕಳನ್ನು ಹೊಸತರಲ್ಲಿ ಕಾಣುವ ಅಮ್ಮನ ಅತೀವ ಆಸೆ. ಅದಕ್ಕೆ ಅಮ್ಮ ಕಂಡುಕೊಳ್ಳುತ್ತಿದ್ದ ದಾರಿ ಲಾಟರಿ! ಅದು ಅವಳಿಗೆ ಬದುಕಿನ ಭರವಸೆ.


ಅಂದು ಅಮ್ಮ ಲಾಟರಿ ತಂದಿದ್ದಳು. ಊರಿನ ಬಂಟನೊಬ್ಬ ಲಾಟರಿಗೇ ಫೇಮಸ್ಸು. ಅವನಿಂದ ಲಾಟರಿ ಖರೀದಿಸಿದರೆ ಅದೃಷ್ಟ ಖಂಡಿತ ಅನ್ನೋದು ಅಮ್ಮನ ಗಟ್ಟಿ ನಂಬಿಕೆ. ವಿಶ್ವಾಸವಿದ್ದ ವ್ಯಕ್ತಿಯೊಬ್ಬ ಹೇಳಿದ ಮಾತ್ರಕ್ಕೆ, ಅಥವಾ ಅವನಿಂದ ಲಾಟರಿ ಪಡೆದರೆ ಬಹುಮಾನ ಗ್ಯಾರಂಟಿ ಅನ್ನೋ ಅಮ್ಮನ ಮುಗ್ಧತೆಯ ಮೂಢ ನಂಬಿಕೆ. ಲಾಟರಿ ತಂದ ತಕ್ಷಣ ಅದನ್ನು ದೇವರ ಫೋಟೋ ಮುಂದಿಟ್ಟು ನಮ್ಮೆಸರು ಹೇಳಿ ಕೈ ಮುಗಿದು ದೇವರೊಂದಿಗೆ ಮೌನವಾಗಿ ಮಾತನಾಡುತ್ತಿದ್ದ ಅಮ್ಮನ ದೇವಭಾಷೆ ನಮಗಂತೂ ಅರ್ಥವಾಗುತ್ತಲೇ ಇರಲಿಲ್ಲ!

ನಾನಿನ್ನೂ ಪ್ರೈಮರಿ. ಹತ್ತು ದಾಟದ ವಯಸ್ಸು. ಶಾಲೆಗೆ ರಜೆ. ದಿನಾ ಅಮ್ಮ ಸುರುಟಿದ ಬೀಡಿಗಳನ್ನು ಕೊಡಲು ಪೇಟೆಗೆ ಹೋಗುವಳು. ಅವಳ ಜೊತೆ ಪೇಟೆಗೆ ಹೋಗುವುದಂದರೆ ಬೆಂಗಳೂರಿನಲ್ಲಿ ರಜಾ ದಿನಗಳಲ್ಲಿ ಶಾಪಿಂಗ್ ಹೊರಟಹಾಗೆ! ಅಮ್ಮ ತೆಗೆದುಕೊಡುವ ನಾಲ್ಕಣೆಯ ಉರಿಗಡಲೆ ಕೂಡ ನಮಗೆ ಐಸ್ಕ್ರೀಂ, ಫ್ರುಟ್ ಸಲಾಡ್ ಸವಿದಂಥ ಖುಷಿ ನೀಡುತ್ತಿತ್ತು. ಅಮ್ಮನ ಜೊತೆಗೆ ಹೋದಾಗಲೆಲ್ಲಾ ಅಮ್ಮನ ಬಾಯಲ್ಲಿ ಲಾಟರಿ ಮಾಮನ ಕಥೆ. ಅದು ಅವಳ ಕನಸುಗಳ ದೊಡ್ಡ ಮೂಟೆಯಾಗಿರುತ್ತಿತ್ತು!

ಲಾಟರಿ ಮಾಮನ ಜೊತೆ ಲಾಟರಿ ತೆಗೆದುಕೊಂಡ್ರೆ ಶಾಲೆಗೆ ಹೋಗುವ ಹೊತ್ತಿಗೆ ಬಹುಮಾನ ಬರುತ್ತೆ. ಅರ್ಥಾತ್ ಕೈತುಂಬಾ ದುಡ್ಡು ಬರುತ್ತೆ. ಆಗ ಶಾಲೆ ಆರಂಭವಾಗುವಾಗ ಸಾಲ ಮಾಡೋ ಅಗತ್ಯವಿಲ್ಲ ಅನ್ನೋದು ಅಮ್ಮನ ಲೆಕ್ಕಾಚಾರ. ನನ್ನ, ತಮ್ಮನ ಹೆಸರಿನಲ್ಲಿ ಅಮ್ಮ ಲಾಟರಿ ತೆಗೆದುಕೊಳ್ಳುತ್ತಿದ್ದಳು. ಲಾಟರಿ ತೆಗೆದುಕೊಂಡಾಗಲೇ ತಮ್ಮ ತನಗೆ ಬೇಕಾದ ವಸ್ತುಗಳ ಉದ್ದದ ಪಟ್ಟಿ ಮುಂದಿಡುತ್ತಿದ್ದ. ಅದರಲ್ಲಿ ನಮ್ಮಿಬ್ಬರ ಪಾಲು ಆದ ಮೇಲೆ ಅಮ್ನಿಗೇನು ಅನ್ನೋ ಪ್ರಶ್ನೆ ಎದುರಾಗುತ್ತಿತ್ತು. ಅಮ್ಮನಿಗೆ ಸೀರೆ, ಚೈನು, ಬಳೆ...ಹೀಗೆ ಕೆಲವೊಂದು ವಸ್ತುಗಳ ಪಟ್ಟಿ ನಾವೇ ರೆಡಿ ಮಾಡುತ್ತಿದ್ದೇವು.


ಆಯಿತು ರಜಾ ಮುಗಿದೇ ಹೋಗುತ್ತಿತ್ತು. ಲಾಟರಿ ಮಾಮ ಸುಮ್ಮನಾಗುತ್ತಿದ್ದ. ಕೊಂಡ ಲಾಟರಿ ಸುದ್ದಿಯಾಗದೇ ಡ್ರಾ ಆಗುತ್ತಿತ್ತು. ಸಾಲ ಮಾಡಿ ಶಾಲೆಗೆ ಕಳುಹಿಸುವಾಗ ಅಮ್ಮನ ಮುಖದಲ್ಲಿ ಪುಟ್ಟ ನೋವು, ಲಾಟರಿ ಮಾಮನ ಮೇಲೆ ಸಾತ್ವಿಕ ಸಿಟ್ಟು. ಹೋಗಲಿ ಬಿಡಿ...ಇನ್ನೊಂದು ಲಾಟರಿಯಲ್ಲಿ ಬಹುಮಾನ ಬಂದೇ ಬಿಡುತ್ತೆ ಅನ್ನೋ ಮತ್ತದೇ ಹಳೆ ಮುಗ್ಧ ನಂಬಿಕೆ!