ಸಾಕು ಕಣೇ...ದೃಷ್ಟಿ ತಾಗುತ್ತೆ. ನಾಳೆ ಮುಡ್ಕೊಂಡು ಹೋಗುವಿಯಂತೆ ಅಮ್ಮ ಹೇಳಿದಾಗ ನನ್ನ ಗುಂಡು ಗುಂಡು ದಪ್ಪಾಗಿದ್ದ ಮುಖ ಇನ್ನಷ್ಟು ದಪ್ಪಗಾಗಿ ಟೊಮೆಟೋ ಬಣ್ಣಕ್ಕೆ ತಿರುಗುತ್ತಿತ್ತು. ಹೂವ ಅಂದ್ರೆ ಪ್ರಾಣ, ಹೂವ ಅಂದ್ರೆ ಖುಷಿ, ಹೂವ ಅಂದ್ರೆ ಚೆಂದ. ಹೂವ ಅಂದ್ರೆ ಸುವಾಸನೆ. ಹೂವ ಅಂದ್ರೆ ಪ್ರೀತಿ, ಹೂವ ಅಂದ್ರೆ ಹುಡುಗಿ, ಹೂವ ಅಂದ್ರೆ ಹಬ್ಬ....ಹೀಗೆ ಹೂವ ಅಂದ್ರೆ ನನ್ನ ದೃಷ್ಟೀಲಿ ಎಲ್ಲವೂ. ಸೊಂಟದಿಂದ ಕೆಳಗೆ ಬರೋ ಜಡೆಗೆ ಮುಡಿದರೆ ಅವತ್ತು ಮನಸ್ಸಿನೊಳಗೆ ಒಂದು ರೀತಿಯ ಖುಷಿ. ಅಮ್ಮ ಮೊಳಮಲ್ಲಿಗೆ ಸಾಕು ಕಣೇ...ಜಾಸ್ತಿ ಇಟ್ರೆ ಬೇರೆ ಹುಡುಗೀರಿಗೆ ಆಸೆಯಾಗಲ್ವೇನೋ? ಏನಾದ್ರೂ ಫಂಕ್ಷನ್ ಇದ್ರೆ ಮುಡ್ಕೊಂಡು ಹೋಗು ಅಂದ್ರೆ ಹುಸಿಮುನಿಸಿನಿಂದ ಕಣ್ಣು ಕೆಂಪಾಗುತ್ತಿತ್ತು. ಅದಕ್ಕೆ ಅಮ್ಮ ಅಷ್ಟೂದ್ದ ನೀಳ ಜಡೆಗೆ ಮಲ್ಲಿಗೆ ಮುಡಿಸಿ, ಮುಡಿಯ ಬುಡದಲ್ಲಿ ಕೆಂಪು ಗುಲಾಬಿ ಸಿಕ್ಕಿಸುವಳು. ನಮ್ಮೂರ ಮಂಗಳೂರ ಮಲ್ಲಿಗೆ ಸ್ವಲ್ಪ ಮುಡಿದರೆ ಸಾಕು ಮೈಲುಗಟ್ಟಲೆ ದೂರದವರೆಗೆ ಘಮ ಎನ್ನುತ್ತಿತ್ತು.
ಸೋಮವಾರ ಪುತ್ತೂರ ಸಂತೆ. ಪ್ರತಿ ಸಂತೆಗೆ ಅಮ್ಮ ಹಾಜರು. ವಾರದ ತರಕಾರಿ ಸಾಮಾನುಗಳೆಲ್ಲಾ ಒಮ್ಮೆಲೇ ತರೋಳು. ಜೊತೆಗೆ ಮಲ್ಲಿಗೆ.ಮಂಗಳವಾರ ಮಲ್ಲಿಗೆ ಮುಡಿಯೋ ಖುಷಿ. ಕ್ಲಾಸಿನಲ್ಲಿ ಅದೆಷ್ಟೋ ಹುಡುಗೀರು ನನ್ನ ಜಡೆ, ಮಲ್ಲಿಗೆ ನೋಡಿ ಆಸೆಪಡೋರೇ ಏನೋ. ನನ್ನೊಳಗೆ ಮಲ್ಲಿಗೆ ಮುಡಿದ ಖುಷಿ. ಕ್ಲಾಸಿನಲ್ಲಿ ಬೆಂಚಿಯಲ್ಲಿ ಕುಳಿತರೆ ಒಂದೆ ಒರಗುತ್ತಿರಲಿಲ್ಲ. ಎಲ್ಲಾದ್ರೂ ಮಲ್ಲಿಗೆ ಹಾಳಾದ್ರೆ!!. ಇಡೀ ದಿನ ಬೆನ್ನು ನೆಟ್ಟಗಾಗಿಸಿಕೊಂಡು ಕುಳಿತು ಸಂಜೆ ಹೊತ್ತಿಗೆ ನೋವು.
ಆಗ ಏಳನೇ ತರಗತಿಯಲ್ಲಿದ್ದೆ. ಶೇಷಪ್ಪ ಮೇಷ್ಟ್ರು ನಮಗೆ ಹೆಡ್ ಮೇಷ್ಟ್ರು. ಜಡೆಗಿಂತ ಉದ್ದ ಮಲ್ಲಿಗೆ ಮುಡಿದ ನನಗೆ ಕೇಳಿದ್ದರು."ಮಲ್ಲಿಗೆ ಅಂದ್ರೆ ಇಷ್ಟನಾ? ನಿಂಗೆ ಮಲ್ಲಿಗೆ ಅಂಥ ಹೆಸರಿಡೋಣ' ಅಂತ. ಕೆನ್ನೆ ಕೆಂಪಗಾಗಿಸಿಕೊಂಡು ಬಗ್ಗಿ ಕುಳಿತಿದ್ದೆ. ಹುಡುಗರೆಲ್ಲಾ "ಮಲ್ಲಿಗೆ..'' ಎಂದಿದ್ದು ಕೇಳಿಸಿತ್ತು.
ಏಳನೇ ತರಗತಿಯ ವಿದಾಯಕೂಟ. ಎಲ್ಲರಿಗೂ ಫೋಟೋ ತೆಗೆಸುವ ಖುಷಿ. ಅಂದು ಅಮ್ಮ ನನಗೆ ಎರಡು ಜಡೆ ಹಾಕಿದ್ದಳು. ಹಸಿರು ಚೂಡಿದಾರ. ಎರಡು ಜಡೆ, ಅದು ಎದೆಯಿಂದ ಕೆಳ ಬರುತ್ತಿತ್ತು. ಆ ಎರಡೂ ಜಡೆಗೆ ಎರಡೆರಡು ಮೊಳಮಲ್ಲಿಗೆ. ಮಲ್ಲಿಗೆ ಮೊಳ ಜಾರದಂತೆ ಐದಾರು ಕ್ಲಿಪ್ಗಗಳನ್ನು ಹಾಕಿದ್ದಳು. ಸಂಜೆ ಹೊತ್ತಿನಲ್ಲಿ ನಡೆದ ಫೋಟೋ ತೆಗೆಯುವ ಕಾರ್ಯಕ್ರಮದಲ್ಲಿ ನನ್ನೆರಡು ಜಡೆಗಳಿಗೇ ಕ್ಯಾಮರಾ ಕಣ್ಣು!. ಎರಡು ಜಡೆಗಳನ್ನು ಎದುರುಗಡೆ ಹಾಕಿಕೊಂಡು ಅದೆಷ್ಟು ಸಲ ಕ್ಲಿಕ್ ಕ್ಲಿಕ್. ಹೈಸ್ಕೂಲ್ ಮುಗಿಯುವ ಹೊತ್ತಿಗೆ ಪುತ್ತೂರು ಮಲ್ಲಿಗೆ ಮಾರುಕಟ್ಟೆಗೆ ಅಮ್ಮ ಚಿರಪರಿಚಿತಳಾಗಿದ್ದಳು. ಪ್ರತಿ ಸೋಮವಾರ ಅಮ್ಮ ಅಲ್ಲಿ ಹೋದ ತಕ್ಷಣ 'ಮಗಳಿಗೆ ಮಲ್ಲಿಗೆ ಬೇಕೇ?' ಎಂದು ಕೇಳಿ ಹಸಿಬಾಳೆಯಲ್ಲಿ ಮಲ್ಲಿಗೆ ಸುತ್ತಿ ಕೊಡೋರು.
ಡಿಗ್ರಿ ಮುಗ್ಸಿ ಬೆಂಗಳೂರಿಗೆ ಬಂದಾಯಿತು. ಇಲ್ಲಿ ಮಂಗಳೂರು ಮಲ್ಲಿಗೆಯ ಘಮ ಇಲ್ಲ. ನನ್ನ ಜಡೆಯೂ ಕಿರಿದಾಗಿದೆ. ಮೋಟುದ್ದ ಜಡೆಗೆ ಶುಕ್ರವಾರದಂದು ಅತ್ತೆಮ್ಮ ಪೂಜೆ ಮಾಡಿ ಪ್ರಸಾದವೆಂದು ಬೆರಳಷ್ಟು ಉದ್ದದ ಮಲ್ಲಿಗೆ ಮಾಲೆ ಕೊಡುತ್ತಾಳೆ. ಪುಟ್ಟ ಪುಟ್ಟ ಕೂದಲುಗಳನ್ನು ಬಿಗಿಹಿಡಿದು ಕ್ಲಿಪ್ ಹಾಕಿ, ಅರ್ಧ ಗಂಟೆ ತಲೆಯಲ್ಲಿ ಮಲ್ಲಿಗೆಯ ಘಮ. ಆಫೀಸ್ ಗೆ ಹೊರಟಾಗ ಅದನ್ನು ಕಿತ್ತು ಹಾಸಿಗೆ ಮೇಲೆ ಹಾಕಿಬಿಟ್ಟು ಹೊರಡ್ತೀನಿ. ಸಂಜೆ ಮನೆ ಸೇರುವ ಹೊತ್ತಿಗೆ ಅದು ಬಾಡಿಹೋಗಿ ನರಳುತ್ತಿರುತ್ತೆ.
ಮಲ್ಲಿಗೆಯ ಮೇಲೆ ಇನ್ನೂ ಪ್ರೀತಿ ಇದೆ. ಮನೆಮುಂದೆ ಮಲ್ಲಿಗೆ ಗಿಡ ಹಸುರಾಗಿದೆ. ಬೆಳಗೆದ್ದು ನೀರುಣಿಸ್ತೀನಿ. ಆಗಾಗ ಹಸಿರೆಲೆಗಳ ನಡುವೆ ಮೊಸರು ಚೆಲ್ಲಿದಂತೆ ಗುಂಡುಮಲ್ಲಿಗೆ ಅರಳುತ್ತೆ. ಮನಸಿನಲ್ಲಿ ಸಣ್ಣದೊಂದು ಖುಷಿ, ಜಡೆಯಿಲ್ಲದಿದ್ದರೂ, ಮನೆಯಂಗಳದಲ್ಲಿ ಮಲ್ಲಿಗೆಯ ಘಮ ಅರಳಿದೆಯೆಂದು.
4 comments:
ಮಲ್ಲಿಗೆ ಹೂ ಅದರ ಸುವಾಸನೆ ಅದರ ಬಣ್ಣವೇ ಚೆಂದಾ...
ಚೆನ್ನಾಗಿ ಮಲ್ಲಿಗೆ ಹೂ ಬೆಳೆದು ನಿನ್ನ ಮನಸನ್ನು ಮತ್ತಷ್ಟು ಖುಷಿ ಕೊಡಲಿ
ಮಲ್ಲಿಗೆ ಹೂ ಅದರ ಸುವಾಸನೆ ಅದರ ಬಣ್ಣವೇ ಚೆಂದಾ...ಚೆನ್ನಾಗಿ ಮಲ್ಲಿಗೆ ಹೂ ಬೆಳೆದು ನಿನ್ನ ಮನಸನ್ನು ಮತ್ತಷ್ಟು ಖುಷಿ ಕೊಡಲಿ
ಈಗ ಸ್ಕೂಲುಗಳಲ್ಲಿ ಮೊಳ ಮಲ್ಲಿಗೆ ಮುಡಿಯಲು ಬಿಡಲ್ಲ ಅನ್ಸತ್ತೆ. ನಾನೂ ಅಮ್ಮನಿಗೆ ನನಗೆ ಜೋಕಾಲಿ ತರಹ ಎರಡು ಜಡೆ ಮಧ್ಯೆ ಹೂ ಮೂಡಿಸು ಅಂತ ಹೇಳ್ತಿದ್ದೆ .ಸುಂದರ ನೆನಪುಗಳು .
Baravanige endinante uttamavaagide.......
Post a Comment