Thursday, February 21, 2013

ಮಂಗಳವಾರ ಮುಟ್ಟಾದವಳು

ಸಂಜೆ ಐದರ ಹೊತ್ತು. ತೋಟದಲ್ಲಿದ್ದ ಕರುವನ್ನು ಓಡಿಸಿಕೊಂಡು ಹಟ್ಟಿಯತ್ತ ಸಾಗಿದ್ದೆ. ಹಿಂದಿನಿಂದ ಬಂದು ನನ್ನ ನೋಡಿದ ಅಮ್ಮಾ "ಅಂಗಳದಲ್ಲೇ ನಿಂತುಕೋ ಮಗಳೇ...'' ಎಂದಾಗ ನನಗೆ ಅಚ್ಚರಿ. ನನ್ನ ನೋಟದಲ್ಲಿ ಪ್ರಶ್ನೆಯಿತ್ತು. ಅಮ್ಮ ನನ್ನ ಕಣ್ಣುಗಳ ಪ್ರಶ್ನೆಗೆ ಉತ್ತರಿಸಲಿಲ್ಲ. ಅಮ್ಮನ ಬಟ್ಟಲು ಕಣ್ಣುಗಳಲ್ಲಿ ಅದೇನೋ ಹೊಸ ಖುಷಿ, ಹೊಸ ಭಾವಗಳ ಪುಳಕ. ಸೀತಮ್ಮ, ಸರೋಜಿನಿ, ಕಮಲ, ಕೆಂಚಮ್ಮ...ಎಲ್ಲರೂ ಬಂದರು. ಎದುರುಮನೆಯಲ್ಲಿದ್ದ ಅಜ್ಜಿ, "ಏನ್ ಮರೀ ದೊಡ್ಡವಳಾಗಿದ್ದೀಯಾ?' ಎನ್ನುತ್ತಾ ಬಾಯೊಳಗಿದ್ದ ವೀಳ್ಯದೆಲೆಯನ್ನು ಅಂಗಳದ ಮೂಲೆಯಲ್ಲಿದ್ದ ಅಡಿಕೆ ಮರದ ಗಿಡದಡಿ ಉಗುಳಿದಳು. ಎಲ್ಲೋ ಆಟವಾಡುತ್ತಿದ್ದ ತಮ್ಮ ತಕ್ಷಣ ಬಂದು "ಅಕ್ಕಾ ಬಾ ಒಳಗಡೆ, ಏಕೆ ನಿಂತಿದ್ದೀಯಾ?' ಎಂದು ನನ್ನ ಕೈ ಹಿಡಿದು ಎಳೆಯತೊಡಗಿದ. ಅವನನ್ನು ಎತ್ತಿಕೊಂಡು ಹೋದ ಅಜ್ಜಿ ಸ್ನಾನ ಮಾಡಿಸಿಕೊಂಡು ಬಂದರು. ಹಸೆ ಮಧ್ಯದಲ್ಲಿ ನನ್ನ ಕುಳ್ಳಿರಿಸಿ, ನಾಲ್ಕು ಕಡೆಯಿಂದ ನಾಲ್ಕು ಮಂದಿ ಹೆಂಗಸರು ತಲೆಗೆ ನೀರೆರೆದರು.


ಅಕ್ಕಂಗೂ ಹೀಗೆ ಮಾಡಿದ್ದನ್ನು ನಾನು ನೋಡಿದ್ದೆ. ತೋಟದ ಮನೆಯಲ್ಲಿ ಅಡಗಿ ಕುಳಿತಿದ್ದ ಅಕ್ಕನ ಕರೆದುಕೊಂಡು ಬಂದ ಅಮ್ಮ ಅವಳನ್ನೂ ಹೀಗೆ ಅಂಗಳದಲ್ಲಿ ನಿಲ್ಲಿಸಿದ್ದಳು. ಊರ ಹೆಂಗಸರೆಲ್ಲಾ ಬಂದು ನೀರೆರೆದಿದ್ದರು. ಏಳು ದಿನ ಅಕ್ಕ ಒಬ್ಬಲೇ ಹೊರಗಿನ ಮನೆಯಲ್ಲಿ ಮಲಗುತ್ತಿದ್ದಳು. ಅಕ್ಕನ ಏಕೆ ಮನೆಯ ಹೊರಗಡೆ ಬರಲು ಬಿಡುವುದಿಲ್ಲ ಎಂದಾಗ ಅಮ್ಮ ಹೇಳಿದ್ದಳು, "ಅಕ್ಕನಿಗೆ ಕಾಗೆ ಮುಟ್ಟಿದೆ'''. ಊರೆಲ್ಲಾ ಕರೆದು ಅಮ್ಮ ಸಿಹಿಯೂಟ ಹಾಕಿಸಿದ್ದಳು. ನಾನು ದೊಡ್ಡವಳಾಗುವ ಹೊತ್ತಿಗೆ ಅಕ್ಕ ಮದುವೆಯಾಗಿ ಮಕ್ಕಳೂ ಇದ್ದವು.


ನನ್ನ ಸ್ನಾನ ಮಾಡಿಸಿ ಅಮ್ಮ ಮನೆಯ ಪಕ್ಕದಲ್ಲಿರುವ ಹೊರಗಿನ ಮನೆಗೆ ಕರೆದುಕೊಂಡು ಹೋದಳು. ಚಾಪೆಯೊಂದನ್ನು ಹಾಸಿ ಕುಳಿತುಕೋ ಎಂದಾಗ ಎದೆ ಢವಢವ ಎನ್ನುತ್ತಿತ್ತು. ಏಳು ದಿನಗಳ ಕಾಲ ಇಲ್ಲಿ ಹೇಗೆ ಮಲಗಲಿ ಎನ್ನುವ ಚಿಂತೆ ನನ್ನದು. ಎಲ್ಲಾ ಹೆಣ್ಣು ಮಕ್ಕಳಿಗೆ ಆಗುವ ರೀತಿಯಲ್ಲೇ ನಿನಗೂ ಆಗಿದೆ ಅಮ್ಮ ಎಂದಾಗ ಒಳಾರ್ಥಗಳು ತಿಳಿದವು.

"ಇವತ್ತು ಮಂಗಳವಾರ, ಅಮಾವಾಸ್ಯೆ'' ಅಜ್ಜಿ ಬಂದು ಹೇಳಿದಾಗ ಅಮ್ಮನ ಮುಖದಲ್ಲಿ ಭಯ, ಆತಂಕ. ಖುಷಿಯಲ್ಲಿ ಪುಳಕಗೊಂಡಿದ್ದ ಅಮ್ಮನ ಕಣ್ಣುಗಳು ದೊಡ್ಡದಾದುವು. ಹನಿನೀರು ಅಲ್ಲಿ ಜಿನುಗಿತು. ಸೆರಗಿನಿಂದ ಕಣ್ಣೊರೆಸಿಕೊಂಡಳು. ಅಜ್ಜಿ ಅಮ್ಮನ ನನ್ನ ಹತ್ತಿರದಿಂದ ದೂರ ಕರೆದುಕೊಂಡು ಹೋಗಿ ಕಿವಿಯಲ್ಲಿ ಪಿಸುಗುಟ್ಟಿದಳು. "ಇಂದು ಮಂಗಳವಾರ, ಅಮಾವಾಸ್ಯೆ. ಅಮಾವಾಸ್ಯೆ ದಿನ ಮುಟ್ಟಾದವರಿಗೆ ಮಕ್ಕಳಾಗುವುದಿಲ್ಲವಂತೆ. ನಮ್ಮಕುಟುಂಬದಲ್ಲಿ ಯಾರೂ ಮಂಗಳವಾರ ಮುಟ್ಟಾಗಿಲ್ಲ ನೋಡು. ಈ ಹೆಣ್ಣುಮಗುವಿಗೆ ಅದೇನು ಬಂತೋ. ಊರೆಲ್ಲಾ ಕರೆದು ಸಿಹಿಯೂಟ ಹಾಕೋದು ಬೇಡ. ಎಲ್ರಿಗೂ ಇವಳು ಮಂಗಳವಾರ ಮುಟ್ಟಾಗಿದ್ದಾಳೆ ಅಂತ ಗೊತ್ತಾಗುತ್ತೆ' ಅಂದಾಗ ಅಮ್ಮ ಜೋರಾಗಿ ಬಿಕ್ಕಿದಳು. ಅಜ್ಜಿಯ ಮೌಢ್ಯಕ್ಕೆ ಎದುರಾಡುವ ಧೈರ್ಯ ನನಗಿನ್ನೂ ಇರಲಿಲ್ಲ.

ಎರಡನೆಯ ದಿನ. ಹಿತ್ತಾಳೆಯ ತಟ್ಟೆಯಲ್ಲಿ ಮೆಂತ್ಯದನ್ನ ಮಾಡಿಕೊಂಡು ಬಂದ ಅಮ್ಮನ ಮುಖದಲ್ಲಿ ಖುಷಿ ಇರಲಿಲ್ಲ. ಬಾಚಿ ಅಪ್ಪಿಕೊಂಡು ಮುತ್ತುಕೊಟ್ಟು ಹೋದಳು. ಎದುರುಮನೆ ಶಾಂತಲಮ್ಮ ವಟವಟ ಅನ್ನುತ್ತಲೇ ಮನೆಯೊಳಗೆ ಕಾಲಿಟ್ಟಳು. "ಹೋಗಿ ಹೋಗಿ ನಿನ್ನ ಮಗಳು ಅಮಾವಾಸ್ಯೆ ದಿನ ಮುಟ್ಟಾಗಿದ್ದಲ್ಲಲ್ಲಾ? ಛೇ.ಛೇ. ಹೀಗಾಗಬಾರದಿತ್ತು. ನಿಂಗೆ ಮಕ್ಕಳನ್ನು ನೋಡುವ ಭಾಗ್ಯವೇ ಇಲ್ಲವೇನೋ'' ಅಂದುಬಿಡಬೇಕೇ?. "ದೇವರಿಟ್ಟಂಗೆ ಶಾಂತಲಾ'' ಎಂದು ಅಮ್ಮ ಸುಮ್ಮನಾಗಿದ್ದಳು. ಏಳು ದಿನಗಳು ಕಳೆದವು. ಅಮ್ಮ ಹೊಸ ಬಟ್ಟೆ ತಂದು ' ಮಗೂ, ಯಾವತ್ತಾದ್ರೂ ಸ್ಕೂಲ್ ಗೆ ಹೋಗುವಾಗ ಹಾಕ್ಕೊಂಡು ಹೋಗು' ಎಂದಿದ್ದಳು.

                                           *****
ಐದು ವರ್ಷಗಳ ಹಿಂದೆ ಮದುವೆಯಾಯಿತು. ಊರಿಗೆ ಹೋದಾಗಲೆಲ್ಲಾ ಅಮ್ಮ ಕೇಳುತ್ತಿದ್ದಳು "ಮುಟ್ಟು ಇನ್ನೂ ನಿಂತಿಲ್ವೇ?". ಎರಡು ವರ್ಷದ ಹಿಂದೆ ಅಮ್ಮನಿಗೆ ಹೇಳಿದ್ದೆ; "ಮುಟ್ಟು ನಿಂತಿದೆ'' ಎಂದು. ಈಗ ಮೊಮ್ಮಗಳ ಆರೈಕೆಯಲ್ಲಿ ಅರವತ್ತೈದರ ಅಮ್ಮನಿಗೆ ಇಪ್ಪತ್ತರ ಹುಮ್ಮಸ್ಸು. ಸಿಕ್ಕ ಸಿಕ್ಕವರಲ್ಲಿ ಬಟ್ಟಲು ಕಣ್ಣುಗಳ ತುಂಬಾ ನಗುತ್ತಾ ಅಮ್ಮ ಹೇಳುತ್ತಿದ್ದಾಳೆ: ಮಂಗಳವಾರ ಮುಟ್ಟಾದ ನನ್ನ ಮಗಳ ಮಡಿಲಿಗೆ ಲಕ್ಷ್ಮಿ ಬಂದಿದ್ದಾಳೆಂದು.!

4 comments:

Anuradha said...

ನನ್ನ ಕಣ್ಣು ಮಂಜಾಯಿತು , ಇನ್ನೂ ಮಂಗಳವಾರ ,ಅಮಾವಾಸ್ಯೆ ..ನಂಬಿಕೆ ಗಳು ಉಳಿದಿವೆ .. ಅಂತ ಆಶ್ಚರ್ಯ ವಾಗುತ್ತದೆ ,

sunaath said...

ಸಂಪ್ರದಾಯಗಳು ಎಷ್ಟು ವಿಚಿತ್ರ, ಅಲ್ಲವೆ?

ಗಿರೀಶ್.ಎಸ್ said...

ಇಂಥ ಮೂಢ ನಂಬಿಕೆಗಳು ಇನ್ನೂ ಜನರಲ್ಲಿ ಇರುವುದು ವಿಪರ್ಯಾಸವೇ ಸರಿ...ಇವುಗಳು ದೂರ ಆಗಬೇಕಿದೆ

Swarna said...

ಕೆಲ ಅಜ್ಜಿಗಳು ಬದಲಾಗಲು ಸಮಯ ತೆಗೆದುಕೊಳ್ಳುತ್ತಾರೆ ಬಿಡಿ . ಅಮ್ಮನ ಆತಂಕ ಅಮ್ಮನಾದ ಮೇಲೆ ಸ್ವಲ್ಪ ಅರ್ಥ ಆಗತ್ತೆ ರಾಮ ನವಮಿಯ ದಿನ ಮುಟ್ಟಾದ ಮೊಮ್ಮಗಳನ್ನ "ಎನೂ ಆಗಿಲ್ಲ ಮಗಳೇ ನಡಿ ಪಾನಕ ಕೋಸುಂಬರಿ ಮುಗಿದು ಹೋಗತ್ತೆ " ಅಂತ ಗುಡಿಗೆ ಕರೆದೊಯ್ದ ಅಜ್ಜಿಯನ್ನು ನಾನು ನೋಡಿದ್ದೇನೆ