ಬೆಳ್ಳಂಬೆಳಿಗ್ಗೆ ಐದೂವರೆ. ಅಮ್ಮ ಎಬ್ಬಿಸಿದ್ದಳು. ಇವತ್ತು ನಮಗೆ ಹಬ್ಬ ಕಣಮ್ಮ ಸಿಹಿ ಮಾಡಬೇಕು. ಮನೆ ಮುಂದೆ ತೊಳೆದು ರಂಗೋಲಿ ಹಾಕಬೇಕು. ಅಮ್ಮನ ಮಾತುಗಳು ಕಿವಿಗೆ ಬೀಳುತ್ತಿದ್ದಳು. ಚಳಿಯಲ್ಲಿ ಬೆಚ್ಚಗೆ ಮುದುಡಿ ಮಲಗಿದ್ದ ನನಗೆ ಏಳಲೂ ಮನಸ್ಸಾಗುತ್ತಿರಲಿಲ್ಲ. ಆದರೆ, ಏಳಲೇಬೇಕಿತ್ತು!. ಅಮ್ಮ ಬೆಳಕು ಮೂಡುವ ಮೊದಲೇ ನಾಲ್ಕಕ್ಕೆ ಅಲಾರಂ ಇಟ್ಟು ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಉಟ್ಟು ದೇವರ ಕೋಣೆಯಲ್ಲಿ ಸದ್ದು ಮಾಡುತ್ತಿದ್ದಳು. ಮೊಬೈಲ್‌ನಲ್ಲಿ ವಿಷ್ಣು ಸಹಸ್ರನಾಮ ಬರುತ್ತಿತ್ತು. ಅಮ್ಮನ ದೇವರ ಭಕ್ತಿಗೆ ನನ್ನೆಜಮಾನ್ರು ಎದ್ದು ವಟವಟ ಅಂದು ಕಣ್ಣು ದೊಡ್ಡದು ಮಾಡಿದ್ರು!
ಎದ್ದುಬಿಟ್ಟು ಮನೆಯ ಎದುರು ಒಂಚೂರು ಜಾಗಕ್ಕೆ ತೊಳೆದು ಸೆಗಣಿ ಸಾರಿದೆ. ಹುಟ್ಟಿನಿಂದ ಮದುವೆ ಆಗೋ ತನಕ ಸಗಣಿ ಸಾರೋ ಕೆಲಸ ಮಾಡದ ನಾನು, ಒಂಚೂರು ಜಾಗಕ್ಕೆ ಅಂದು ಸಗಣಿ ಸಾರಿದೆ. ಹಳ್ಳಿಯಲ್ಲಿರುವಾಗ ಹಟ್ಟಿಯಿಂದ ತಂದ ಸಗಣಿ ಘಮ ಎನ್ನುತ್ತಿತ್ತು. ಬೆಂಗಳೂರಿನಲ್ಲಿ ಅದೆಲ್ಲಿಂದಲೋ ತಂದಿಟ್ಟ ಸಗಣಿಯ ವಾಸನೆಯೇ ಮೂಗಿಗೆ ಗೊತ್ತಾಗಲಿಲ್ಲ!. ಸೆಗಣಿ ಸಾರಿ, ಮನೆಮುಂದೆ ರಂಗೋಲಿ ಹಾಕಿದೆ. ಚೆಂದಕ್ಕೆ ಚುಕ್ಕೆ ಇಟ್ಟು ರಂಗೋಲಿ ಹಾಕಲು ಬಾರದಿದ್ದರೂ ತಾವರೆ, ಗುಲಾಬಿ...ಹೀಗೆ ಬಗೆಬಗೆಯ ಹೂವುಗಳು, ಎಲೆಗಳನ್ನು ಬಿಡಿಸಿ ಬಣ್ಣಗಳನ್ನು ತುಂಬಿದೆ. ತುಳಸಿ ಗಿಡದ ಸುತ್ತಲೂ ರಂಗೋಲಿ ಹಾಕಿದೆ. ಜೊತೆಗೆ, ಮಾವಿನ ಎಲೆಗಳನ್ನು ತಂದು ಬಾಗಿಲಿಗೆ ತೋರಣ ಕಟ್ಟಿದೆ. ಅಷ್ಟೊತ್ತಿಗಾಗಲೇ ಅಮ್ಮ ದೇವರ ಮೂರ್ತಿಗಳನ್ನೆಲ್ಲ ತೊಳೆದು, ಪೂಜೆ ಶುರುಮಾಡಿದ್ದಳು. ಅಡುಗೆ ಮನೆಯಲ್ಲಿ ಅಗರಬತ್ತಿ, ಗಂಧ ಘಮಘಮ ಎನ್ನುತ್ತಿತ್ತು. ಅಮ್ಮನಿಗೆ ಹೊಟ್ಟೆ ಚುರುಗುಟ್ಟುತ್ತಿದ್ದರೂ ದೇವರ ಭಕ್ತಿಯಲ್ಲಿ ಹಸಿವೇ ಮರೆತುಹೋಗಿತ್ತು. ಎಲ್ಲಾ ಮುಗಿದು ಹೊಟ್ಟೆಗೆ ತಿಂಡಿ ಹೋಗುವಷ್ಟರಲ್ಲಿ ಗಂಟೆ ಹತ್ತು ದಾಟಿತ್ತು.
ಅಪ್ಪ ಹೋಗಿ ವರ್ಷದ ನಂತರ ಮತ್ತೆ ನಮ್ಮನೆಯಲ್ಲಿ ಸಿಹಿಯಡುಗೆ ಆರಂಭವಾಗಿತ್ತು. ಮನೆಮುಂದೆ ರಂಗೋಲಿ ಮೂಡಿತ್ತು. ಅರಶಿನ-ಕುಂಕುಮ-ಹೂವುಗಳ ಚಿತ್ತಾರವಿತ್ತು. ಮುತ್ತೈದೆಯರಿಗೆ ಬಾಗಿನ ಅಮ್ಮನೇ ರೆಡಿಮಾಡಿದ್ದಳು. ಸಿಹಿ ಎಂದು ಕೇಸರಿಬಾತ್, ಪಾಯಸ ಮಾಡಿ ನನಗೂ-ನಮ್ಮಜೆಮಾನ್ರಿಗೆ ಬಡಿಸುವಾಗ ಅಮ್ಮನ ಕಣ್ಣುಗಳು ತುಂಬಿಕೊಂಡಿದ್ದವು. ಸಾವರಿಸಿಕೊಂಡು ಹೇಳಿದಳು; ಅಪ್ಪನಿಗೆ ಕೇಸರಿಬಾತ್ ಭಾಳ ಇಷ್ಟ.
3 comments:
ಮೊನ್ನೆ ಹೀಗೆ ಇನ್ನೊಬ್ಬ ಬ್ಲಾಗಿಗರು ತಂದೆಯ ಬಗ್ಗೆ
ಬರೆದಿದ್ದರು, ಎಷ್ಟು ಬರೆದರೂ ಕಡಿಮೆ ಏನೂ ಹೇಳಲು ತೋಚದ ಸ್ಥಿತಿ .
ನೀವು ಸಿಹಿ ಉಂಡದ್ದು ನೋಡಿ ಅವರಿಗೆ ಖುಷಿಯಾಗಿರಬಹುದು.
pl increase the line spacing. It is difficult to read
please increase the line spacing it is difficult to read
Post a Comment