ಮೊನ್ನೆ ಮೊನ್ನೆ ಸ್ವಾತಂತ್ರ್ಯ ದಿನ ಆಚರಿಸಿದ್ದೂ ಆಯಿತು..ಅದೂ ಪೊಲೀಸರ ಬಿಗಿಬಂದೋಬಸ್ತ್ ನಲ್ಲಿ! ಇದು ನಮ್ಮ ಹಣೆಬರಹ ಬಿಡಿ. ಪ್ರತಿಯೊಂದು ಕಾರ್ಯಕ್ರಮಕ್ಕೂ ಪೊಲೀಸರ ಸರ್ಪಗಾವಲು. ಕೃಷ್ಣದೇವರಾಯ ಕಾಲದಲ್ಲಿ ಚಿನ್ನವನ್ನು ರಸ್ತೆಯಲ್ಲಿಟ್ಟು ಮಾರಾಟ ಮಾಡುತ್ತಿದ್ದುದು ಇಲ್ಲೇನಾ ಎಂಬ ಶಂಕೆ ಮೂಡುತ್ತಿದೆ. ಅದಿರಲಿ, ಮೊನ್ನೆ ಸ್ವಾತಂತ್ರ್ಯ ದಿನದಂದು ಗೆಳತಿಯ ಮನೆಯಲ್ಲಿ ಸುಮ್ನನೆ ಕುಳಿತು ಟಿವಿ ನೋಡುತ್ತಿದೆ. ಗತಕಾಲದ ಇತಿಹಾಸವನ್ನು ಮತ್ತೆ ಮೆಲುಕು ಹಾಕುವ ಚಿತ್ರಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು..ಹೀಗೇ ಬೇರೆ ಬೇರೆ ಚಾನೆಲ್ ಗಳಲ್ಲಿ ಸ್ವಾತಂತ್ರ್ಯ ಆಚರಣೆ ಭರ್ಜರಿಯಾಗೇ ನಡೆಯುತ್ತಿತ್ತು. ಯಾವುದೋ ಒಂದು ಚಾನೆಲ್ ನೋಡಿದಾಗ 'ನಮ್ಮ ದೇಶದ ಹೀರೋ'ಗಳೆಂಬ ಕಾರ್ಯಕ್ರಮ ನಡೆಯುತ್ತಿತ್ತು. ಥಟ್ಟನೆ ಕಣ್ಣುಹಾಯಿಸಿದೆ, ಕ್ರಿಕೆಟ್ ತಾರೆಗಳಿಬ್ಬರನ್ನು 'ಹೀರೋಸ್ ಆಫ್ ಇಂಡಿಯಾ' ಸ್ತಾನದಲ್ಲಿ ಕುಳಿತುಕೊಳ್ಳಿಸಿ ಸಂವಾದಕ್ಕೆ ಅವಕಾಶ ನೀಡಲಾಗಿತ್ತು. ಕಿಕ್ಕಿರಿದ ಜನರು. 'ನೀವು ಯಾರನ್ನು ಯಾವಾಗ ಮದುವೆ ಆಗ್ತೀರಾ?', 'ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಇಷ್ಟನಾ?' 'ನಿಮಗೆ ಯಾವ ಹುಡುಗಿಯಾದ್ರೂ ಪಪೋಸ್ ಮಾಡಿದ್ಳಾ?' ಇಂಥ ಪ್ರಶ್ನೆಗಳ ಸುರಿಮಳೆ ವೀಕ್ಷಕರ ಕಡೆಯಿಂದ ಬರುತ್ತಿತ್ತು.
ಚಾನೆಲ್ ಆಫ್ ಮಾಡಿ ಕುಳಿತವಳಿಗೆ ಶಾಲಾ ದಿನಗಳಲ್ಲಿ ಟೀಚರ್ ಹೇಳಿಕೊಟ್ಟ ನಮ್ಮ 'ಹೀರೋ'ಗಳ ಬಗ್ಗೆ ಯೋಚನೆ ಮೂಡತೊಡಗಿತ್ತು.
ಹೌದು, ಶಾಲಾದಿನಗಳಲ್ಲಿ ನನ್ನ ಬೆಂಚಿನ ಪಕ್ಕದ ಗೋಡೆಗೆ ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ಮಹಾತ್ನಾಗಾಂಧೀಜಿ ಯ ದೊಡ್ಡ ಫೋಟೋಗಳನ್ನು ಅಂಟಿಸಿದ್ದರು. ನಿತ್ಯ ನಮ್ಮ ಟೀಚರ್ ಕ್ಲಾಸಿಗೆ ಬಂದವರೇ ದೇಶದ ಮಹಾನ್ ನಾಯಕರ ಕುರಿತು ಹೇಳೋರು. ಅವರ ಸಾಹಸಗಾಧೆಗಳನ್ನು ಪರಿಚಯಿಸೋರು. ಅವರ ಜೀವನ ಮೌಲ್ಯವನ್ನು ನಮಗೂ ಅರಿವಾಗಿಸೋರು. ಅವರು ನಮ್ಮ 'ನಾಯಕ'ರು ಅನ್ನೋರು. ಕೈಗೆ 'ರಾಷ್ಟ್ರಪಿತರು' ಎಂಬ ಪುಸ್ತಕ ನೀಡಿ ಒಬ್ಬೊಬ್ಬರಾಗಿ ಓದೋಕೆ ಹೇಳೋರು. ನಾವೆಲ್ಲ ಏರಿದ ಧ್ವನಿಯಲ್ಲಿ ಓದಿದ್ದೇವೆ. ಇವರೇ ನಮ್ಮ ನಾಯಕರೆಂದು ಒಪ್ಪಿಕೊಂಡಿದ್ದೇವೆ. ಭಲೇ ಮಗು...ಅಂತ ಟೀಚರ್ ಬಾಯಿಂದ ಹೊಗಳಿಸಿಕೊಂಡಿದ್ದೇವೆ. ಸ್ವಾತಂತ್ರ್ಯ ಬಂದಾಗ ಹೊಸ ಯುನಿಫಾರ್ಮ್ ಹಾಕಿ ನಮ್ಮೂರ ಶಾಲೆಯಿಂದ ನಾಲ್ಕೈದು ಕಿಮೀ ದೂರ ಮೆರವಣಿಗೆಯಲ್ಲಿ ಸಾಗಿದ್ದೇವೆ. ಗಾಂಧೀ ಕೀ ಜೈ, ಭೋಸ್ ಕೀ ಜೈ, ಭಗತ್ ಕೀ ಜೈ, ಶಾಸ್ತ್ರೀಜಿ ಕೀ ಜೈ ಅಂತ ಕೂಗುತ್ತಾ ಸಾಗಿದ್ದೇವೆ. ಕೂಗುತ್ತಲೇ ತ್ರಿವರ್ಣ ಧ್ವಜ ಹಾರಿಸಿದ್ದೇವೆ. ದೇಶಭಕ್ತಿ ಗೀತೆ ಹಾಡಿದ್ದೇವೆ. ಸ್ವಾತಂತ್ರ್ಯವೆಂದು ಬೀಗಿದ್ದೇವೆ. ನಮಗೆ ಪೊಲೀಸರ ಸರ್ಪಗಾವಲು ಬೇಕಿರಲಿಲ್ಲ. ಜೊತೆಗೆ ಟೀಚರ್ ಗಳು ಇದ್ದರು. ನಾಯಕರ ಹೆಸರುಗಳನ್ನು ಕೂಗಿ ಸಾಗುವಾಗ ಮೈಯೆಲ್ಲಾ ರೋಮಾಂಚನ. ಆ ನಮ್ಮ ಪುಟ್ಟ ಮನಸ್ಸಿನಲ್ಲಿ ನಿಜವಾದ ದೇಶನಾಯಕರು ನೆಲೆಹೂರಿದ್ದರು. ನಾವು ಹಾಗೇ ಆಗಬೇಕು ಅಂತ ಕನಸು ಕಂಡಿದ್ದೇವೆ. ಹೌದು, ನಾನೂ ಹೊರತಾಗಿರಲಿಲ್ಲ. ಭಗತ್ ಸಿಂಗ್ ಬದುಕಿನಕಥೆಯನ್ನು ಮತ್ತೆ ಮತ್ತೆ ಓದುತ್ತಿದೆ. ಗಾಂಧೀಜಿಯ ಸತ್ಯಾನ್ವಷಣೆಯನ್ನು ಓದಿ ನಾನೂ ಚಕಿತಳಾಗಿದ್ದೆ. ಆಗ ಸ್ವಾತಂತ್ರ್ಯ ಆಚರಿಸುವುದೂ ನಮಗೂ ಹಬ್ಬ. ಖುಷಿಯ ಹಬ್ಬ, ಸಂಭ್ರಮ ಸಡಗರದ ಹಬ್ಬ. ಏನೋ ಉತ್ಸಾಹ.
ಕುಳಿತಲ್ಲಿಯೇ ಯೋಚಿಸುತ್ತಿದ್ದೆ...ಆದರೆ ಈಗ? ಎಂಬ ಪ್ರಶ್ನೆ ನನ್ನ ಆತ್ಮಕ್ಕೆ ಚುಚ್ಚಿಬಿಟ್ಟಿತ್ತು!!
ನಮ್ಮ ಹೀರೋಗಳು ಯಾರು? ಬಹುತೇಕರ ಹೀರೋಗಳು ಕ್ರಿಕೆಟ್ ತಾರೆಗಳು, ಸಿನಿಮಾ ತಾರೆಗಳ ಮಟ್ಟಿಗಷ್ಟೇ ಸೀಮಿತವಾಗಿದೆ. ನಮ್ಮಮ್ಮ-ನಮ್ಮಪ್ಪನೇ ನಮಗೆ ಹೀರೋಗಳು ಅನ್ನೋರು ಈಗ ಕಡಿಮೆಯೇ. ಕ್ರಿಕೆಟ್ ತಾರೆಗಳು ಅಥವಾ ಸಿನಿಮಾ ನಟ-ನಟಿಯರನ್ನು ಹೀರೋಗಳೆಂದು ಪರಿಗಣಿಸಬೇಡಿ ಅನ್ನೋ ದನ್ನು ಹೇಳುತ್ತಿಲ್ಲ,. ಅದು ನನ್ನ ಉದ್ದೇಶವೂ ಅಲ್ಲ. ಆದರೆ. ನಮ್ಮ ನಿಜವಾದ ಹೀರೋಗಳನ್ನು ಕಂಡುಕೊಳ್ಳುವಲ್ಲಿ ನಾವು ತುಕ್ಕು ಹಿಡಿದಿದ್ದೇವೆ ಅನ್ನೋದಷ್ಟೇ ನನ್ನ ಮನದ ನೋವು. ಒಬ್ಬ ಚೆಂದದ ನಟ ಅಥವಾ ನಟಿ ಪರದೆ ಮೇಲೆ ಚೆನ್ನಾಗಿ ಅಭಿನಯಿಸಿದರೆ ಅವರೇ ನಮ್ಮ ಹೀರೋಗಳಾಗುತ್ತಾರೆ. ಓರ್ವ ಬ್ಯಾಟ್ಸ್ ಮನ್ ನಾಲ್ಕೈದು ಸಿಕ್ಸ್ ಬಾರಿಸಿದ್ರೆ ಬಾಲ್ ಹೋಗುವ ರಭಸ ನೋಡಿಯೇ ನಾವು ಅವನನ್ನು ಹೀರೋ ಅಂಥ ಅಪ್ಪಿಕೊಳ್ಳುತ್ತೇವೆ...ಇರಲಿ. ಅಪ್ಪಿಕೊಳ್ಳಿ ಬೇಡ ಅನ್ನಲ್ಲ. ಆದರೆ, ಹೀರೋ ಅನ್ನುವ ಪದವೇ ಅರ್ಥ ಕಳೆದುಕೊಂಡಿದೆ ಅಲ್ವಾ? ಅಂತೀನಿ ಅಷ್ಟೇ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರು, ದೇಶವನ್ನು ಹಗಲಿರುಳೂ ಕಾಯುವ ಯೋಧರು, ನಮ್ಮ ಬದುಕು ನೀಡಿದ ಪ್ರೀತಿಯ ಅಪ್ಪ-ಅಮ್ಮ, ಬದುಕಿಗೆ ದಾರಿ ತೋರಿದ ಗುರುಗಳು, ದಿನವಿಡೀ ಬೆವರು ಸುರಿಸಿದ ಅನ್ನದಾತನಂದ ಸಹನಾಮಯಿಗಳು ನಮಗೆ ಯಾವಾಗ 'ಹೀರೋ'ಗಳಾಗುವುದು? ಟೀಚರ್ ಹೇಳಿದ ಹೀರೋಗಳು, ಸ್ವಾತಂತ್ರ್ಯ ಬರೇ ಶಾಲಾ ದಿನಗಳಿಗಷ್ಟೇ ಸೀಮಿತವಾಯಿತಲ್ಲಾ ಅನ್ನೋ ನೋವು ನನ್ನ ತುಂಬಾ ಕಾಡಿತ್ತು. ಬದಲಾವಣೆಯೇ ಜಗದ ನಿಯಮ..ಆದರೆ....!
ಬೇಡ ಹೆಚ್ಚು ಬರೆಯಲ್ಲ..
Subscribe to:
Post Comments (Atom)
24 comments:
ತ೦ಗಿ,
ನಿಮ್ಮ ಬರಹದೊಳಗಿನ ಆ೦ತರ್ಯ ಅರ್ಥವಾಯಿತು. ನಿಜ, ಇಂದಿನ ಯುವಕರಿಗೆ ಹೀರೊಗೆ೦ದರೆ ನೀನೇ ಹೇಳಿದ೦ತೆ ಕ್ರಿಕೆಟ್, ಸಿನಿಮಾ ತಾರೆಯರು. ನಿಜವಾದ ಅರ್ಥದಲ್ಲಿ ಅವರು ಜೀರೋಗಳು. ಆದರೆ ಇ೦ದಿನ ಪೀಳಿಗೆ ಅವರನ್ನು ಆರಾಧಿಸುವ, ಅನುಕರಿಸುವ ಪ್ರಸಕ್ತಿ ಶುರುವಾಗಿದೆ. ಸ್ವಾತ೦ತ್ರ್ಯ ಹೋರಾಟದ ಕಲಿಗಳು ಇಂದಿನ ಪೀಳಿಗೆಗೆ ಗೊತ್ತಿಲ್ಲ, ಅವರನ್ನು ಆ ನಿಟ್ಟಿನಲ್ಲಿ educate ಮಾಡುವ ಯತ್ನವು ನಮ್ಮ ವ್ಯವಸ್ತೆಯಲ್ಲಿಲ್ಲ. ಇನ್ನು ತು೦ಬಾ ದುಡ್ಡು ಕೂಡಿಟ್ಟ ಅಪ್ಪ ಇದ್ದಾರೆ ಮಕ್ಕಳು ಅವನನ್ನು ತಮ್ಮ ಪಾಲಿನ ಹೀರೊ ಅನ್ನಬಹುದೇನೋ? ಗೊತ್ತಿಲ್ಲ. ನಿನ್ನ ಬರಹ ಚೆನ್ನಾಗಿದೆ.
ಧರಿತ್ರಿ,
ನಿನ್ನ ಚಿಂತನ ಸಮರ್ಪಕವಾಗಿದೆ. ಆದರೆ ಅಧಿಕಾರದಲ್ಲಿದ್ದವರೇ ನಿಜವಾದ ಹೀರೋಗಳನ್ನು ಮೂಲೆಗೆ ಬಿಸಾಕಿದ್ದಾರೆ! ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಲಾದೀತು?
ಧರಿತ್ರಿ ಯವರೇ
ಲೇಖನ ಬಹಳ ಚೆನ್ನಾಗಿ ಬರೆದಿದ್ದೀರ ಸ್ವಲ್ಪ ಸಮಾಧಾನವಾಯ್ತು ,
ಕಾರಣ ಇತ್ತೀಚಿಗೆ ಯಾರೋ ಒಬ್ಬರು ಸಂಪದದಲ್ಲಿ ಗಾಂಧಿಜಿಯವರ ಬಗ್ಗೆ ಬಹಳ ಕೇವಲ ವಾಗಿ ಬರೆದಿದ್ದಾರೆ ಅದು ಓದಿ ಬಹಳ ಬೇಸರವಾಗಿತ್ತು.
ಧರಿತ್ರಿ ಯವರೇ
ಲೇಖನ ಬಹಳ ಚೆನ್ನಾಗಿ ಬರೆದಿದ್ದೀರ ಸ್ವಲ್ಪ ಸಮಾಧಾನವಾಯ್ತು ,
ಕಾರಣ ಇತ್ತೀಚಿಗೆ ಯಾರೋ ಒಬ್ಬರು ಸಂಪದದಲ್ಲಿ ಗಾಂಧಿಜಿಯವರ ಬಗ್ಗೆ ಬಹಳ ಕೇವಲ ವಾಗಿ ಬರೆದಿದ್ದಾರೆ ಅದು ಓದಿ ಬಹಳ ಬೇಸರವಾಗಿತ್ತು.
ಚಿಂತನಾರ್ಹ ಬರಹ... ಚೆನ್ನಾಗಿದೆ
ಬದಲಾವಣೆಯೇ ಜಗದ ನಿಯಮ.. ನಿಮ್ಮ ಆತ್ಮವನ್ನು ಚುಚ್ಚಿದ ವಿಷೆಗೆ ನೀವು ಕಡೆಯದಾಗಿ ಬರೆದ ಸಾಲುಗಳಿಗೆ ನಾವು ಹೊಂದಿಕೊಂದಿರಬಹುದು?????? ಹಾಗನ್ಸುತ್ತೆ ಅಲ್ವಾ. ಹಾಗೆ ಸುನಾತರು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ. ಈಗ ನಮ್ಮ ಪಾಡೆ ಹೀಗಿದೆ ಇನ್ನು ಮುಂದಿನ ಪಿಳಿಗೆಗಳ ಪರಿಸ್ಥಿತಿ??? ಆಗ ನೋಟು ನಾಣ್ಯಗಳಲ್ಲಿ ಕ್ರಿಕೆಟ್ ಹೀರೊನ ಮುಖ ಸ್ಟ್ಯಾಂಪಗಳಲ್ಲಿ ಸಿನಿಮಾ ನಾಯಕನ ಮುಖ, ರೌಡಿಗಳು ಈಗ ವಿಧಾನ ಸೌದದಲ್ಲಿ ಕಡಿಮೆ ಪ್ರಮಾಣದಲ್ಲಿದಾರೆ. ಮುಂದೆ ಬರಿ ಅವರೆ ತುಂಬಿರ್ತಾರೆ ಅಲ್ಲಿ. ಆಗ ಇದೇ ಮೀಡಿಯಾ ಜನ ಅವರ ಮುಂದೆ ನಿಂತು ಕೇಳ್ತಾರೆ ದೇಷಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿರೊದ್ರಲ್ಲಿ ನಿಮ್ಮ ಪಾಲೆಷ್ಟು ಅಂತ. ಉತ್ತರ ಬೇಲಿ ಸುತ್ತಿದ್ದು ಹಾರಿದ್ದು ಆಗಿರುತ್ತೆ. ಒಂದೇ ಮಾತರಮ್!!! ಸಮಯೋಚಿತ ಬರಹ
ಧರಿತ್ರಿ ಒಳ್ಳೇ ವಿಚಾರಅದ ಯಾವುದೋ ಸಿನೇಮಾಕ್ಕ ಬೆಳಿಗ್ಗೆ ಆರೂವರಿಗೆ ಪಾಳಿ ಹಚ್ಚಿ ಟಿಕೇಟ್ ಸಿಕ್ಕಿ ಅದನ್ನ ನೋಡಿ ಹೊರಗ ನಿಂತ
ಚಾನೆಲನವರ ಮುಂದ ಚೀರ್ಯಾಡೂ ಯುವಜನಾಂಗ ಹಿಂಗೂ ವಿಚಾರ ಮಾಡತದ ...ಓದಿ ಸಂತೋಷಆತು.. ಅಭಿನಂದನೆಗಳು..
ಧರಿತ್ರಿಯವರೇ ,
ನಿಮ್ಮ ದುಗುಡ ನಿಜ ... ನಾನು ಎಲ್ಲರಿಗು ಹೇಳುವುದು ಅದನ್ನೇ , ಸಿನಿಮ ತಾರೆಗಳು , ಕ್ರಿಕೆಟಿಗರು ಮಾತ್ರ ಹೀರೋಗಳಲ್ಲ ..ಸ್ವಾತಂತ್ರ್ಯ ಯೋಧರ ಬಗ್ಗೆ ತಿಳಿ ಹೇಳುವವರೇ ಈಗ ಕಮ್ಮಿ ಆಗಿರುವಾಗ , ಯುವ ಪೀಳಿಗೆಗೆ ಬೆನ್ನೆಲಬಗುವವರಾದರು ಯಾರು .. ಸಮಯೋಚಿತ ಬರಹ .. ಉತ್ತಮ್ ಕಳಕಳಿ ..
ಬದಲಾವಣೆ ಜಗದ ನಿಯಮ ..ಎಲ್ಲಿ ಮಟ್ಟಿಗೆ ಬದಲಾಗುತ್ತೇವೆ ಅನ್ನುವುದು ಜನರಿಗೆ ಬಿಟ್ಟಿದ್ದು , ಏನಂತೀರಾ ? ...
ಶ್ರೀಧರ್ ಭಟ್
http://spbhat-haratemane.blogspot.com/
ಅಮೇರಿಕದಲ್ಲಿ ಮೊನ್ನೆ ಸ್ವತಂತ್ರದಿನಾಚರಣೆ ದ್ವಜಾರೋಹಣಕ್ಕಾಗಿ ಭಾರತದಿಂದ ಶಾರುಕ್ ಖಾನ್ ಹೋಗಿದ್ದ ರೆಂಬ ಸುದ್ದಿ ಕೇಳೀ ನಾನೋ ಈ ಪ್ರಶ್ನೆಯನ್ನ ಕೇಳಿಕೊಂಡೆ.
ಉತ್ತಮ ಬರಹ
ಇಂತಿ
ವಿನಯ
ಧರಿತ್ರಿ,
ತುಂಬಾ ದಿನಗಳ ನಂತರ ಬಂದ ನಿಮ್ಮ ಬರಹ ನನ್ನ ಮನವನ್ನೂ ಕಲಕಿತು. ಆ ಪ್ರಶ್ನೆ ಯಾವಾಗಲೂ ನನ್ನ ಎದೆಯನ್ನೂ ಚುಚ್ಚುತ್ತಿರುತ್ತದೆ. ಆಯಾ ವಿಭಾಗದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ನಮಗೆ ಆ ವಿಭಾಗದವರೇ ನಮಗೆ ಹೀರೊಗಳಾಗಿರಲಿ, ಬೇಡ ಅನ್ನಲ್ಲ. ಆದರೆ ತೀರಾ ಸ್ವಾತಂತ್ರೋತ್ಸವದ ದಿನದಂಥ ದಿನದಂದು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಹೀರೊಗಳು, ದೇಶವನ್ನು ಕಾಯುತ್ತಿರುವ ನಿಜವಾದ ಹೀರೊಗಳು, ದೇಶಕ್ಕೆ ಅನ್ನ ನೀಡುತ್ತಿರುವ ಹೀರೊ ಗಳನ್ನು ನೆನೆಯುವುದು ಬಿಟ್ಟು ಬಣ್ಣದ ತಾರೆಗಳ, ಕ್ರಿಕೆಟ್ ತಾರೆಗಳ ಜಪ ಮಾಡುತ್ತಾ ಕೂರುವುದು ಅಸಮಂಜಸ ಅನಿಸುತ್ತದೆ. ಕುಬ್ಜ ಮನಸ್ಸಿನ, ಅಂಧ ಅಭಿಮಾನಿಗಳಿಗೆ ಇಂತವೆಲ್ಲ ಎಲ್ಲಿ ಅರ್ಥವಾಗುತ್ತೆ, ಹೇಳಿ. ಇಂಥವೆಲ್ಲ ನೋಡಿ ತಮ್ಮ ಹೀರೊಗಳನ್ನು ಆಯ್ದುಕೊಳ್ಳುವ ನಮ್ಮ ಮುಂದಿನ ಪೀಳಿಗೆಯ ಮಕ್ಕಳ ಬಗ್ಗೆ ಯೋಚಿಸಿದಾಗ ತುಂಬಾ ಆತಂಕವಾಗುತ್ತದೆ.
- ಉಮೇಶ್
ಧರಿತ್ರಿ,
ಈಗಿನ ಜನರ ಮನೋಭಾವಕ್ಕೆ ಕನ್ನಡಿ ಹಿಡಿವಂತಿದೆ ಲೇಖನ. ನಿಮ್ಮಲ್ಲಿ ಎದ್ದಿರುವ ಪ್ರಶ್ನೆಗೆ ನನ್ನಲ್ಲಂತೂ ಉತ್ತರವಿಲ್ಲ :( ಆ ಪ್ರಶ್ನೆ ನನ್ನನ್ನೂ ಸದಾ ಕಾಡುತ್ತಿರುವುದಂತೂ ಸತ್ಯ.
ಅಲ್ಲ್ರೀ..ಧರೆಯೊಳಗೆ ಕನ್ನಡಕ್ಕೆ ಬರವೆಂದು?? ಅಂತ ನಮ್ಮೆಲ್ಲರ ಅಂಬೋಣ..ಆದ್ರೆ ನೋಡಿ ಯಾ ಪಾಟಿ ಪರಭಾಷೀಯರು ಲಗ್ಗೆ ಇಡ್ತಾ ಇದ್ದಾರೆ ಕನ್ನಡಕ್ಕೆ..ನಮ್ಮಲ್ಲಿ ಪ್ರತಿಭೆ ಇಲ್ಲ ಅನ್ನೋದು ಪಲಾಯನವಾದ ಅಥವಾ ಸಬೂಬು..
ಚನ್ನಾಗಿದೆ ನಿಮ್ಮ ಚಿಂ(ತೆ)ತನ ಭರಿತ ಲೇಖನ
ಬರಹ ತುಂಬಾ ಚೆನ್ನಾಗಿದೆ, ಎಲ್ಲರನು ಚಿಂತೆಗೆ ತಳ್ಳುತ್ತದೆ
ಬರಹ ಚಿಂತನಾರ್ಹಚೆನ್ನಾಗಿದೆ.
ಧರಿತ್ರಿ,
ತುಂಬಾ ಸುಂದರ ಬರಹ, ಒಳ್ಳೆಯ ಚಿಂತನೆ,
ಧರಿತ್ರಿ,
ತುಂಬಾ ಒಳ್ಳೆಯ ಆಲೋಚನೆ. ಸದ್ಯ ನಮ್ಮ ಬ್ಲಾಗಿಗರನ್ನು ಗಮನಿಸಿದರೆ ಯಾರು ಇಂಥ ಸಿಲ್ಲಿ ಹೀರೊಗಳನ್ನು ಮಾಡಲ್ಲಾಗಿ ಇಟ್ಟುಕೊಂಡಿಲ್ಲವೆನ್ನುವುದೇ ಸಮಾಧಾನ.
ಒಳ್ಳೆಯ ಬರಹ...
ಇವತ್ತು ಸ್ವಾತಂತ್ರ ಅನ್ನೋದು ಒಂದು ಗೊಂದಲದ ಸ್ಥಿತಿ ಧರಿತ್ರಿಯವರೇ ನನ್ನ ಪ್ರಕಾರ ನಾವು ಸ್ವತಂತ್ರ ಅನ್ನೋ ಭ್ರಮೆಯಲ್ಲಿದ್ದೇವೆ ಅಷ್ಟೇ.ಒಮ್ಮೆ ನನ್ನ ಬ್ಲಾಗ್ ನೋಡಿ...
sahayaatri.blogspot.com
ಬರಹ ಚಿಂತನಾರ್ಹ.
ಧರಿತ್ರೀಯವ್ರೇ...
ತು೦ಬಾ ದಿನಗಳ ಮೇಲೆ ನಿಮ್ಮ ಬರಹ ಓದಿ ಖುಷಿ ಆಯಿತು.... ತು೦ಬಾ ಯೋಚಿಸಿ ಬರೆದಿರುವ ಹಾಗಿದೆ ಬರಹ... ಅದಕ್ಕೆ ಇಷ್ಟೊ೦ದು ತೀಕ್ಷ್ಣವಾಗಿ ಮೂಡಿ ಬ೦ದಿದೆ....
ಧರಿತ್ರಿಯವರೆ,
ಚಿಂತನೆಗೆ ಹಚ್ಚುವಂತಹ ಲೇಖನ. ಜನರ priorities ಬದಲಾಗುತ್ತಿದೆ. ಕಾಲಾಯ ತಸ್ಮೈ ನಮಹ. ನಮ್ಮ ಹಿಂದಿನವರಿಗೆ ಸ್ವಾತಂತ್ರದ ಮಹತ್ವ, ಅಗತ್ಯ ಗೊತ್ತಿತ್ತು ಹೋರಾಡಿದರು, ಗಳಿಸಿಕೊಟ್ಟರು. ಈಗ? ಮುಂದೆ?
ದೊಡ್ಡವರನ್ನು ಬಿಡಿ, ಚಿಕ್ಕ ಮಕ್ಕಳಿಗೂ ಈಗ ಶಾಲೆಯಲ್ಲಿ ಏನು ಕಲಿಸಿದರೂ... ಸಚಿನ್ ಬಗ್ಗೆ ಗೊತ್ತಿರುವಷ್ಟು ಶಾಸ್ತ್ರೀಜಿ ಅವರ ಬಗ್ಗೆ ಗೊತ್ತಿರುವುದಿಲ್ಲ, ಅವರು ಯಾರು ಅಂತ ಕೇಳದಿದ್ರೆ ನಮ್ಮ ಪುಣ್ಯ.
ನಮ್ ಮಾಸ್ತರೊಬ್ರು ಹೇಳ್ತಿದ್ರು... 'ಸ್ವಾತಂತ್ಯ್ರ ಅಂದ್ರೆ ಏನೂ ಅನ್ನೋದು ನನಗೂ ಸರಿಯಾಗಿ ತಿಳಿದಿಲ್ಲ. ಇನ್ನು ನನಗೆ ತಿಳಿದ ಮಟ್ಟಿಗೆ ನಿಮಗೆ ತಿಳಿಯೋದು ಕಷ್ಟ. ಆದ್ರೆ 'ಸ್ವೇಚ್ಛೆ' ಅಂದ್ರೆ ಏನೂ ಅಂತ ನಿಮಗೆ ಗೊತ್ತಾದ್ರೆ ಅದು ಸ್ವತಂತ್ರತೆಯ ಫಲ ಅನ್ನೋದೂ ತಿಳಿಯುತ್ತೆ' ಅಂತ.
sakkat baraha
Post a Comment