'ಅಕ್ಕು ಈ ಸರ್ತಿ ಜಾತ್ರೆಗಾಂಡಲಾ ಬಲಾ, ಏತ್ ವರ್ಷ ಆಂಡ್ ಜಾತ್ರೆಗ್ ಬರಂತೆ..? ಏಪಲಾ ನಿನ್ನ ಕೆಲಸ ಮುಗಿಯರೆ ಇಜ್ಜಿ. ಕೆಲಸ ಏಪಲಾ ಉಪ್ಪಂಡು, ಜಾತ್ರೆ ವರ್ಷಗೊರೆನೆ ಬರ್ಪುನಿ(ಅಕ್ಕು..ಈ ಸಲ ಆದ್ರೂ ಜಾತ್ರೆಗೆ ಬಾ..ಎಷ್ಟು ವರ್ಷ ಆಯಿತು ಜಾತ್ರೆಗೆ ಬರದೆ. ಕೆಲಸ ಯಾವಾಗಲೂ ಇರುತ್ತೆ, ಜಾತ್ರೆ ಬರೋದು ವರ್ಷಕೊಮ್ಮೆ ಮಾತ್ರ) ನಮ್ಮೂರ ಜಾತ್ರೆ ಕುರಿತು ಅಮ್ಮ ಇತ್ತೀಚೆಗೆ ಫೊನ್ ಮಾಡಿದಾಗ, 'ಆಯ್ತಮ್ಮ, ಬರ್ತೀನಿ ಇರು. ಅರ್ಜೆಂಟ್ ಮಾಡಿದ್ರೆ ನಾ ಬರೊಲ್ಲ" ಅಂತ ನನ್ನ ಮಾಮೂಲಿ ಪ್ರೀತಿಯ ಸಿಟ್ಟನ್ನೇ ತೋರಿಸಿದ್ದೆ. ಬೆಂಗಳೂರಿಗೆ ಬರೋಕೆ ಮೊದಲು ಬಿಡಿ ಓದಿನ ನಿಮಿತ್ತ ಮನೆಯಿಂದ ಹೊರ ನಡೆದ ಮೇಲೆ ನನಗೆ ಊರ ಜಾತ್ರೆ ನೋಡೋ ಭಾಗ್ಯ ಕೂಡಿ ಬರಲೇ ಇಲ್ಲ!
ನಮ್ಮೂರಿನ ಜಾತ್ರೆ ಬರೋದು ಫೆಬ್ರವರಿ-ಮಾರ್ಚ ತಿಂಗಳಲ್ಲಿ. ಒಂಬತ್ತು ದಿನಗಳ ಕಾಲ ನಡೆಯುವ ಈ ಜಾತ್ರೆ ಎಂದರೆ ಮನೆ ಮನೆಯಲ್ಲೂ ಜಾತ್ರೆ. ಊರಿನ ಮನೆ ಮನೆಯಲ್ಲಿ ನೆಂಟರ ಸಂಭ್ರಮ. ದೂರದೂರಿನ ಗಂಡನ ಮನೆಯಿಂದ ತವರು ಮನೆಗೆ ಬರೋ ಹೆಣ್ಣುಮಕ್ಕಳ ಮನತುಂಬಾ ಖುಷಿಯ ರಂಗೋಲಿ. ಅದೂ ಹೊಸದಾಗಿ ಮದುವೆಯಾದವರ ಸಂಭ್ರಮ ಕೇಳೋದೇ ಬೇಡ. ಮನೆ ಮನೆಗೆಲ್ಲಾ ಸಗಣಿ ಸಾರಿ, ಒಂಬತ್ತು ದಿನಗಳ ಕಾಲವೂ ಮನೆಯಲ್ಲಿ ನೆಂಟರ, ಮಕ್ಕಳ ಖುಷಿಯ ಸಡಗರ. ಒಂಬತ್ತು ದಿನಗಳ ಕಾಲ ನಿತ್ಯ ಜಾತ್ರೆಗೆ ಹೋಗೋದು. ತಲೆತುಂಬಾ ಮಲ್ಲಿಗೆ ಘಮಘಮ, ಕೈತುಂಬಾ ಬಳೆಗಳ ಸದ್ದು, ಕಾಲಿಗೆ ಗೆಜ್ಜೆ, ಪರ್ಸ್ನಲ್ಲಿ ವರ್ಷದಿಂದ ಜಾತ್ರೆಗೆಂದು ಕೂಡಿಟ್ಟ ಚಿಲ್ಲರೆ ಹಣ, ಹೊಸ ಡ್ರೆಸ್ಸು..!! ಅಬ್ಬಾ..ಜಾತ್ರೆ ನೋಡೋದಕ್ಕಿಂತ ಹೊಸದಾಗಿ ಮಿರುಗೋ ನಮ್ಮನ್ನು ನಾವೇ ನೋಡಿಕೊಳ್ಳುವುದೂ ಒಂದು ಜಾತ್ರೆಯಂತೆ! ಆಮೇಲೆ ಕೆಲವು ಊರ ಹುಡುಗಿಯರನ್ನೆಲ್ಲಾ ವರ ನೋಡೋಕೆ ಬರುತ್ತಿದ್ದೂ ಜಾತ್ರೆಗೆ... ಹುಡುಗಿ ಓಕೆ ಆದ್ರೆ..ಆಮೇಲೆ ಮನೆಗೆ ಬಂದು ನೋಡೋ ಕಾರ್ಯಕ್ರಮ. ಅಷ್ಟೇ ಅಲ್ಲ, ಒಂದಿಷ್ಟು ಊರ ಮಂದಿಯೆಲ್ಲಾ ಜೊತೆಗೆ ಹರಟಲೂ ಆ ಜಾತ್ರೆಯಲ್ಲಿ ಸಾಧ್ಯವಾಗುತ್ತಿತ್ತು.
ನನಗೆ ನೆನಪಿರೋದು ನಾನು ಆರನೇ ಕ್ಲಾಸಿನಲ್ಲಿರುವಾಗ ನಮ್ಮೂರ ದೇವಸ್ಥಾನಕ್ಕೆ ಬ್ರಹ್ಮಕಲೋಶೋತ್ಸವ ಆಗಿ, ಆ ವರ್ಷವೇ ಜಾತ್ರೆ ಪ್ರಾರಂಭವಾಗಿದ್ದು. ಆವಾಗ ಅಮ್ಮ ನನಗೆ ಹಸಿರು ಚೂಡಿದಾರ ತಂದಿದ್ರು. ಅಲ್ಲಿಯವರೆಗೆ ನಾ ಚೂಡಿ ಹಾಕಿರಲೇ ಇಲ್ಲ! ಅದೇ ಮೊದಲು..ಊರ ಜಾತ್ರೆಯಂದು ಅಮ್ಮ ತಂದ ಕಡು ಹಸಿರು ಚೂಡಿಯನ್ನು ಧರಿಸಿ ಮಿರ ಮಿರ ಮಿನುಗಿದ್ದೆ. ಎರಡು ಜಡೆ ಹಾಕಿ ಅಮ್ಮ ತಲೆ ತುಂಬಾ ಮಂಗಳೂರು ಮಲ್ಲಿಗೆ ಮುಡಿಸಿದ್ರು. ಭಾಳ ಖುಷಿ ನನಗೆ. ಅಜ್ಜಿ ಜೊತೆ ಜಾತ್ರೆಗೆ ಹೋಗಿ, ಜಾತ್ರೆ, ದೇವರು, ಜನರನ್ನು ನೋಡೋದಕ್ಕಿಂತ ನನ್ನ ಹೊಸ ಚೂಡಿದಾರವನ್ನು ಮತ್ತೆ ಮತ್ತೆ ನೋಡಿಕೊಳ್ಳುವುದರಲ್ಲೇ ಮೈಮರೆತಿದ್ದೆ. ಎಲ್ಲಿ ಪಿನ್ ಹಾಕಿದ್ದ ವೇಲ್ ಜಾರುತ್ತೋ, ಪ್ಯಾಂಟ್ ನಲ್ಲಿ ಮಣ್ಣಾಗುತ್ತೋ ಅಂತ ಪ್ಯಾಂಟನ್ನು ಒಂದು ಕಡೆಯಿಂದ ಎತ್ತಿಕೊಂಡು ನಡೆಯುತ್ತಿದ್ದ ನನ್ನ ನೋಡಿ ಮನೆಯಲ್ಲಿ ಎಲ್ರೂ ನಗುತ್ತಿದ್ದರು. ಆ ಚೂಡಿದಾರ ಎಷ್ಟು ಇಷ್ಟವಾಗಿತ್ತು ಅಂದ್ರೆ ಏಳನೇ ಕ್ಲಾಸಿನಲ್ಲಿ ಫೋಟೋ ಸೆಶನ್ ಗೂ ಅದೇ ಚೂಡಿದಾರ ಧರಿಸಿದ ಹುಚ್ಚಿ ನಾನು!
ಮತ್ತೆ ಊರ ಜಾತ್ರೆ ಬಂದಾಗಲೆಲ್ಲಾ ಹೊಸ ಡ್ರೆಸ್ಸು ತೆಗೆದುಕೊಡುತ್ತಿದ್ದರು. ಊರ ಜಾತ್ರೆ ನಮಗೆ ಅಮ್ಮನ ಬಳಿ ಹೊಸ ಡ್ರೆಸ್ಸು ತೆಗೆಸಿಕೊಡು ಎಂದು ರಚ್ಚೆ ಹಿಡಿಯಲು ಒಳ್ಳೆ ಅವಕಾಶ. ಡ್ರೆಸ್ಸು ತೆಗೆಸಿಕೊಡದಿದ್ರೆ ನಾವು ಜಾತ್ರೆಗೇ ಬರಲ್ಲ ಅಂತ ಜಗಳವಾಡೋ ನಮಗೆ ಡ್ರೆಸ್ಸು ತೆಗೆಸಿಕೊಡದೆ ಅನ್ಯ ಮಾರ್ಗಗಳೇ ಇರಲಿಲ್ಲ! ಯಾಕಂದ್ರೆ ಜಾತ್ರೆ ಬಂತೆಂದರೆ ಊರಿನ ಮಕ್ಕಳೆಲ್ಲಾ ಹೊಸ ಡ್ರೆಸ್ಸು ಹಾಕೋರು. ಜಾತ್ರೆಗೆ ಹೋದರೆ ಐಸ್ ಕ್ರೀಂ ತಿನ್ನಲೇಬೇಕು...ಮನೆಯಿಂದ ಹೊರಟಾಗಲೇ ಸಿಕ್ಕವರಲೆಲ್ಲಾ ಐಸ್ ಕ್ರೀಂ ಕೊಡಿಸ್ತೀರಾ ಮಾಮ...ಎನ್ನುತ್ತಾ ಐಸ್ ಕ್ರೀಂ ತೆಗೆದುಕೊಡೋರ ಹಿಂದೆ ಓಡೋ ಚಾಳಿ ನನ್ನದು. ಆಮೇಲೆ ಬಲೂನ್ ನನ್ನ ಫೇವರಿಟ್.
ಇಂದಿಗೆ ಜಾತ್ರೆಗೆ ಹೋಗದೆ ಏಳೆಂಟು ವರ್ಷಗಳಾಗಿದೆ. ಹತ್ತನೇ ಕ್ಲಾಸು ಮುಗಿದ ಮೇಲೆ ಜಾತ್ರೆ ನೋಡೋ, ಜಾತ್ರೆಯಲ್ಲಿ ಹೊಸ ಡ್ರೆಸ್ಸು ಹಾಕಿ ಮಿರುಗೋ ಅವಕಾಶನೇ ಸಿಕ್ಕಿಲ್ಲ. ಆದ್ರೂ ನಮ್ಮೂರ ಜಾತ್ರೆ ನೆನಪಾಗುತ್ತೆ. ಜಾತ್ರೆಗೆ ಬಿಡದೆ ಕರೆದೊಯ್ಯುವ ಅಜ್ಜಿ ನೆನಪಾಗುತ್ತಾಳೆ. ಜಾತ್ರೆಯ ಬಲೂನ್, ಐಸ್ ಕ್ರೀಂ ನೆನಪಾಗುತ್ತೆ. ಒಂದು ಸಲ ನನ್ನ ಚಪ್ಪಲಿ ಯಾರಿಗೋ ಬಲಿಯಾಗಿದ್ದು ನೆನಪಾಗುತ್ತೆ. ತಲೆತುಂಬಾ ಮುಡಿದ ಮಲ್ಲಿಗೆ ಪರಿಮಳ, ಕಾಲ್ಗೆಜ್ಜೆ, ಬಳೆಯ ಕಿಣಿಕಿಣಿ ನಿನಾದ, ಪಂಜಕಜ್ಜಾಯ ತಿನ್ನೋ ಆಸೆಯಿಂದ ಭಟ್ರ ಬಳಿ ಹೋಗಿ ಎರಡೆರಡು ಸಲ ದಕ್ಷಿಣೆ ಹಾಕಿದ್ದು ನೆನಪಾಗುತ್ತೆ. ಏನ ಮಾಡಲೀ..ಬೆಂಗಳೂರಿನ ಬದುಕ ಸುಂದರವಾಗಿ ಕಾಣುತ್ತೆ ಆದ್ರೆ ಮನಸ್ಸು ಮಾತ್ರ ನನ್ನ ಜಾತ್ರೆನ, ನನ್ನ ಹಸಿರ ಹಳ್ಳೀನ ಮಿಸ್ ಮಾಡ್ಕೋತಾ ಇದ್ದೀನಿ ಅನ್ನುತ್ತೆ. ಏನೋ ಬರೆಯಕೆ ವಿಷ್ಯ ಸಿಗ್ಲಿಲ್ಲ..ನಮ್ಮೂರ ಜಾತ್ರೆ ನೆನಪಾತು. ಒಪ್ಕೋತೀರಲ್ಲಾ...?!
Subscribe to:
Post Comments (Atom)
21 comments:
Nice .. post .. Continue like this ...
nija...oorina jaatre endare adeno puLaka... nimma lekhana chennagide... namagu nammoora jatre nenapisibittiri...dhanyavadagaLu..
ಹೌದು ರೀ,
ನೀವು ಹೇಳಿದ್ದು ಸರಿ,
ಜಾತ್ರೆ ಅಂದ್ರೆ ದೊಡ್ಡ ಹಬ್ಬ ಇದ್ದಂತೆ, ಊರ ಜನ ಸೇರಿ ಒಂದಾಗಿ ಮಾಡುವ ಹಬ್ಬ.
ಜೀವನದ ಜಂಜಾಟದಲಿ ಅವುಗಳಿಗೆ ನಮ್ಮಲ್ಲಿಗ ಸಮಯ ಇಲ್ಲದಾಗಿದೆ..
ನಾಳೆ ಸೋಮವಾರ ನಮ್ಮ ಊರ ಜಾತ್ರೆ..
ನನ್ನ ತಮ್ಮ, ತಂಗಿ , ಅಪ್ಪ, ಅಮ್ಮ ಎಲ್ಲರು ಸೇರಿ ಬಾ ಎಂದು ಕರೆದರು,
ಕೆಲಸದ ಒತ್ತಡದಿಂದ ಹೋಗುವ ಹಾಗಿಲ್ಲ... :(
chennagide nim jaathre anubhava.
nangu haLe nenapaaytu...
ella thara aaTa, suttaaTa..etc
nimmooru yaavooru helale illa
ಧರಿತ್ರಿ
ಹಾಂ ಹಳೆಯ ಒಳ್ಳೆಯ ನೆನಪುಗಳನ್ನು ಚೆನ್ನಾಗಿ (ನೆನೆಸಿ ನೆನೆಸಿ ) ನೆನಪಿಸಿಕೊಂಡು,,,,ನಮ್ಮ ನೆನಪನ್ನು recall ಮಾಡೋಕೆ ಅವಕಾಶ ಮಾಡ್ಕೊಡ್ತಿರ..... ವೆರಿ ನೈಸ್...ಅಂಡ್ ವೆರಿ ಗುಡ್ article.... ಇದನ್ನು ಓದುತ್ತ ...ನನಗೆ ನಮ್ಮ ಊರಿನ ಜಾತ್ರೆ, ಹಬ್ಬ , ಸಡಗರದ ನೆನಪಾದವು...... ಇಂತಹ ಹಬ್ಬದಲ್ಲಿ ಖುಷಿ ಇಂದ ಓಡಾಡುವುದೇ ಒಂದು ಮಜಾ.... ಹಾ ನಿಮಗೆ ಬಲೂನ್ ಇಷ್ಟ ಅಂತ ಹೇಳಿದ್ರಲ್ವ.. ಇದಕ್ಕೆ ನನ್ನ ತರ್ಲೆ ಸ್ನೇಹಿತನ ನೆನಪು ಆಯಿತು... ಅವನು ಏನು ಮಾಡ್ತಾ ಇದ್ದ ಅಂದ್ರೆ. ಬೆರಳಿನ ಸಂದಿನಲ್ಲಿ ಗುಂಡುಸೂಜಿ ಇಟ್ಕೊಂಡು ಜಾತ್ರೆ ಮದ್ಯದಲ್ಲಿ ಸಿಗೋ ಬೆಲೂನ್ ಅನ್ನು ಡಂ.. ಡಂ..!! ಅಂತ ಅನಿಸ್ತ ಇದ್ದ, ಆಮೇಲೆ ಏನು ಗೊತ್ತಿಲ್ವೇನೋ ಅನ್ನೋಹಾಗೆ ಹೊರಟು ಹೋಗ್ತಾ ಇದ್ದ. ನಾವು ಹಿಂದೆ ಇಂದ ನೋಡಿ ನೋಡಿ ಖುಷಿ ಪಡ್ತಾ ಇದ್ವಿ......
(ನಾನ್ ಮಾತ್ರ ಹಾಗೆ ಮಾಡಲಿಲ್ಲಪ್ಪ ಸುಮ್ನೆ ಮಾಡೋದನ್ನ ನೋಡ್ತಾ ಮಜಾ ತಗೋತಾ ಇದ್ದೆ ಅಸ್ತೆ.. ನಾನು ಒಳ್ಳೆ ಹುಡುಗ ಗೊತ್ತ..:-) ).......
ಗುರು
ಜಾತ್ರೆಯ ನೆನಪುಗಳು ಸಖತ್ ಆಗಿವೆ.
ಹೀಂಗ್ ಮರುಕ್ತಾ ಕೂಕಂಡ್ರಾತ್ತ? ಈವರ್ಸ ಜಾತ್ರಿ ಇತ್ತಂಬ್ರು ವಂದ್ 8 ದಿಸ ರಜೆ ಹಾಕಿ ಹ್ವಾಯ್ ಬನ್ನಿ ಮಾರ್ರೆ !!!!!!!!!!!!!!!!.
ನಾವಂತೂ ವಿದೇಸ್ದಾಗಿತ್ತು ಆತ್ತಿಲ್ಲೆ ನಿಮ್ಗೆ ಬೆಂಗ್ಳೂರಿಂದ ಹ್ವಾಪ್ಕಾತ್ತಿಲ್ಯ?
ಧರಿತ್ರಿ,
ಜಾತ್ರೆಯ ಸುಂದರ ಚಿತ್ರಗಳನ್ನು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ನಂತರ ನೋಡುವ ಹಾಗೆ ಭಾವಪೂರ್ವಕವಾಗಿ ಕಟ್ಟಿಕೊಟ್ಟಿದ್ದೀಯಾ....ಕೊನೆಗೂ ಪ್ರೇಮಪತ್ರಗಳ ಬೇಲಿಯಿಂದ ಹೊರಬಂದೆಯೆಲ್ಲಾ ಅದೇ ಖುಷಿ..
"ಅಬ್ಬಾ..ಜಾತ್ರೆ ನೋಡೋದಕ್ಕಿಂತ ಹೊಸದಾಗಿ ಮಿರುಗೋ ನಮ್ಮನ್ನು ನಾವೇ ನೋಡಿಕೊಳ್ಳುವುದೂ ಒಂದು ಜಾತ್ರೆಯಂತೆ!"
"ಜಾತ್ರೆ, ದೇವರು, ಜನರನ್ನು ನೋಡೋದಕ್ಕಿಂತ ನನ್ನ ಹೊಸ ಚೂಡಿದಾರವನ್ನು ಮತ್ತೆ ಮತ್ತೆ ನೋಡಿಕೊಳ್ಳುವುದರಲ್ಲೇ ಮೈಮರೆತಿದ್ದೆ. ಎಲ್ಲಿ ಪಿನ್ ಹಾಕಿದ್ದ ವೇಲ್ ಜಾರುತ್ತೋ, ಪ್ಯಾಂಟ್ ನಲ್ಲಿ ಮಣ್ಣಾಗುತ್ತೋ ಅಂತ ಪ್ಯಾಂಟನ್ನು ಒಂದು ಕಡೆಯಿಂದ ಎತ್ತಿಕೊಂಡು ನಡೆಯುತ್ತಿದ್ದ ನನ್ನ ನೋಡಿ ಮನೆಯಲ್ಲಿ ಎಲ್ರೂ ನಗುತ್ತಿದ್ದರು."
ಇವೆರಡು ಪ್ಯಾರಗಳು ನಿನ್ನ ಅಂದಿನ ಆನುಭವವನ್ನು ಕಟ್ಟಿಕೊಡುತ್ತವೆ...ಇಂಥವನ್ನು ನಾನು ನೀರೀಕ್ಷಿಸಿದ್ದೆ...
ಹೀಗೆ ಹೊಸತು ಬರಲಿ...
ಧನ್ಯವಾದಗಳು.
ನಮ್ಮೂರಲ್ಲೂ ಜಾತ್ರೆ ಆಗುತ್ತೆ ನಾನೇ ಈಗೀಗ ಹೋಗಿಲ್ಲ, ತೇರು(ರಥ) ಎಳೆಯೊದು, ಜಾತ್ರೆಯಲ್ಲಿ ತಿರುಗಾಡೊದು, ಬಲೂನು, ಕಾರು, ಪೀಪಿ ಹಟ ಮಾಡಿ ಕೊಡಿಸಿಕೊಂಡಿದ್ದು ಎಲ್ಲ ನೆನಪಿಗೆ ಬಂತು, ಚೆನ್ನಾಗಿದೆ ಹೀಗೇ ಬರೆಯುತ್ತಿರಿ...
ತುಂಬಾ ಚೆನ್ನಾಗಿ ಜಾತ್ರೆ ಅನುಭವವನ್ನು ಬರೆದಿದ್ದೀರಿ ಧರಿತ್ರಿ.. ನನಗೂ ನಮ್ಮೂರ ಜಾತ್ರೆ, ಅಲ್ಲಿನ ತೇರು ಎಲ್ಲ ನೆನಪಾಯ್ತು..
ಧರಿತ್ರಿ,
ಮತ್ತೆ ಮತ್ತೆ ಹಳೆಯ ನೆನಪುಗಳ ಕದತಟ್ಟಿ ಹೊಸಹೊಸ ವಿಷಯಗಳನ್ನು ನಮಗೆ ತಿಳಿಸುತ್ತಿದ್ದಿ. ವರ್ಷಕ್ಕೊಮ್ಮೆ ಬರುವ ಜಾತ್ರೆಯೆ೦ಬ ಜಾತ್ರೆಯ ಗು೦ಗು ವರ್ಷಪೂರ್ತಿ ಮನಸ್ಸಿನಲ್ಲಿ ರಿ೦ಗಣಿಸುತ್ತಿತ್ತು ಅಲ್ಲವೇ ? ಆ ದಿನಗಳ ಸ೦ಭ್ರಮದ ಬಗ್ಗೆ ನೀನು ಬರೆದುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ, ಯಾಕೆ೦ದರೆ ಅವು ನನ್ನ ಅನುಭವಗಳೊ೦ದಿಗೂ ಸಾಮ್ಯತೆ ಪಡೆದ ಕ್ಷಣಗಳ೦ತಿವೆ. ಆದರೆ ದಿನಕಳೆದ೦ತೆ ಜಾತ್ರೆಯೆಡೆಗಿನ ಸ೦ಭ್ರಮ, ಸಡಗರ ಕಡಿಮೆಯಾಗುತ್ತಿದೆ. ಈಗಿನ ಮಕ್ಕಳಿಗೂ ಅ೦ತಹ ಸ೦ಭ್ರಮೋಲ್ಲಾಸ ಇದ್ದ೦ತಿಲ್ಲ, ಕಾರಣ ಭಾವಶೂನ್ಯತೆಯೋ ಅಥವಾ ಬೇರೇನೋ ಗೊತ್ತಾಗುತ್ತಿಲ್ಲ. ಮುದ್ದಾದ ಲೇಖನ.
ಧಾತ್ರಿ
ನಿಮ್ಮ ಭಾವಪೂರ್ಣ ಬರಹ ಕಣ್ನಮು೦ದೆ ಜಾತ್ರೆಯ ಚಿತ್ರವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಜಾತ್ರೆಯ ದಿನ ನೀಲಿಚೂಡಿದಾರ ತೊಟ್ಟು ಓಡಾಡಿದ ಕ್ಷಣಗಳ ಅನುಭವ ಅನನ್ಯ ಅಲ್ಲವೇ ? ನಿಮ್ಮ ಬರಹದಿ೦ದ ನನಗು ನನ್ನ ಊರಿನ ವೀರಭದ್ರ ದೇವರ ಜಾತ್ರೆಯ ದಿನ ಕದ್ದು ಸಿಗರೇಟು ಸೇದಿದ್ದು ನೆನಪಾಯಿತು. ಚೆನಾಗಿದೆ.
@ರೂಪಾ, ಮನಸ್ಸು, ಜಯಶಂಕರ್, ಬಿಸಿಲ ಹನಿ ಉದಯ್ ಸರ್ ..ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.
@ಶಿವಪ್ರಕಾಶ್..ಬೆಂಗಳೂರಿಗೆ ಬಂದ ಮೇಲೆ ನಂದೂ ಅದೇ ಪಾಡು. ಧನ್ಯವಾದಗಳು
@ಹರೀಶ್ ಸರ್..ನನ್ನೂರು ಕರಾವಳಿ ಅಂದ ಮೇಲೆ ಮುಗೀತು..ನಾ ಕರಾವಳಿ ಹುಡ್ಗಿ. ಪ್ರತಿಕ್ರಿಯೆಗೆ ಧನ್ಯವಾದಗಳು.
@ಪ್ರಭುರಾಜ್,..ಹೀಗೇ ಬರ್ತಾ ಇರಿ. ಧನ್ಯವಾದಗಳು
@ಗೋದಾವರಿ..ಧರಿತ್ರಿ ಕಡೆಯಿಂದ 'ಧರಿತ್ರಿ'ಗೆ ಸ್ವಾಗತ. ಬರ್ತಾ ಇರಿ.
@ಮೂರ್ತಿ ಸರ್..8 ದಿವ್ಸ ರಜಾ ಕೊಡಲ್ಲಾಂತವ್ರೆ ನಮ್ ಬಾಸ್. ಏನ ಮಾಡೋದು ಮಾರಾಯ್ರೆ(:) ಧನ್ಯವಾದಗಳು.
@ಪರಾಂಜಪೆಯಣ್ಣ...ನೀವಂದಿದ್ದು ನಿಜ. ಹಳ್ಳಿಯಲ್ಲಿ ಜಾತ್ರೆ ಇದ್ತರೂ ಎಂದಿನ ಕಳೆ ಅದ್ರಲ್ಲಿ ಇರಲ್ಲ. ಅದಕ್ಕೆ ಬದುಕು artificial ಆಗಿಬಡ್ತೋ ಅನ್ನೋ ಭಯ ನನ್ನ ಕಾಡ್ತಾ ಇರುತ್ತೆ.
@ಗುರುಪ್ರಸಾದ್..ನನ್ನ ಲೇಖನ ಓದಿ ನೀವೂ ಜಾತ್ರೆಯು ಸಂಭ್ರಮ ನೆನೆದು ಖುಷಿಗೊಂಡಿದ್ದಕ್ಕೆ ಧನ್ಯವಾದಗಳು. ನಿಮ್ ಫ್ರೆಂಡ್ ಥರ ನನ್ನ ತಮ್ಮ ಮಾಡ್ತಾ ಇದ್ದ. ನೆನೆದು ನಾನೂ ನಗುವಾದೆ. ಬರ್ತಾ ಇರಿ. ಧನ್ಯವಾದಗಳು ಗುರು.
@ಶಿವಣ್ಣ..ಶಿವಣ್ಣ ನನ್ನ ಜಾತ್ರೆಯ ಅನುೌಬದಲ್ಲಿ ನೀವೂ ಖುಷಿಗೊಂಡಿರಿ ಅದೇ ಖುಷಿ ನನಗೆ.
ಧರಿತ್ರಿಯಲ್ಲಿ ನಾ ಬರೆದಿದ್ದು ಮೂರೇ ಮೂರು ಪ್ರೇಮಪತ್ರಗಳು. ಮೂರು ಬರೆದಾಗಲೇ ನಾ ಪ್ರೇಮಪತ್ರಗಳ ಗುಂಗಿಲ್ಲಿದ್ದೆ ಅನ್ತಿರಲ್ಲಾ? ಯಾವುದೇ ಬರವಣಿಗೆ ಬರೆದರೂ,ಅಥವಾ ಯಾವುದೇ ಅನುಭವವಾದರೂ ಆ ಗುಂಗಿನಲ್ಲಿ ನಾನಿರೋದು ತೀರಾ ಕಡಿಮೆ. ಕೇವಲ ನನ್ನ ಬರಹ ಬರೆದು ಮುಗಿವಷ್ಟರವರೆಗೆ ಮಾತ್ರ ನಾನಲ್ಲಿ ಸಂಪೂರ್ಣವಾಗಿ ಹುದುಗಿ ಹೋಗಿರ್ತೀನಿ.
ಇನ್ನು ನೀವು ವಾಸ್ತವಿಕ ಲೇಖನಗಳನ್ನು ಬರೆ ಅಂದಿರಿ. ಅದಕ್ಕೆ ನನ್ನ ಪ್ರತಿಕ್ರಿಯೆ. ಕಳೆದ ಬಾರಿ ಬರೆದ 'ತವರೂರ ಮನೆ ನೋಡ ಬಂದೆ' ಲೇಖನದಲ್ಲಿ 'ತವರ ಪ್ರೀತಿಯ ಚಪ್ಪರದಡಿ ಯಲ್ಲಿ ನಾ ಸಪ್ತಪದಿ ತುಳಿದಿದ್ದೆ' ಎಂದು ಬರೆದಿದ್ದು ನಿಮಗೇ ಗೋತ್ತು. ಇದು ವಾಸ್ತವ ಅನುಭವವಲ್ಲ ಕಲ್ಪನೆ. ಒಂದು ವೇಳೆ ನಾನು ಈ ಲೇಖನವನ್ನೂ ಪಕ್ಕಾ ವಾಸ್ತವಿಕ ಅನುಭವಗಳ ಮೇಲೆ ಹೆಣೆಯಬೇಕು ಎಂದುಕೊಂಡಿದ್ದರೆ, ನನ್ನ ಮದುವೆ ಆದ ಮೇಲೆಯೇ ಬರೆಯಬೇಕಾಗಿತ್ತು!! ಅಲ್ವೇ? ನೀವು ವಾಸ್ತವ ಲೇಖನಗಳನ್ನು ನಿರೀಕ್ಷಿಸುವುದೇನೋ ಸರಿ...ಹಾಗಂತ ಎಲ್ಲವನ್ನೂ ವಾಸ್ತವಿಕ ನೆಲೆಯಲ್ಲೇ ಬರಿಬೇಕನ್ನುವುದು ನನ್ನ ಮಟ್ಟಿಗೆ ಸಾಧ್ಯವಾಗುತ್ತಿಲ್ಲ. ಇದರಲ್ಲೇ ಕೆಲವು ವಾಸ್ತವ ಅನುಭವದ ಲೇಖನಗಳನ್ನು ಬರೆದಿರುವೆ. ಬಹಳಷ್ಟು ಸಲ ನಾ ಪಡೆದ ಪುಟ್ಟ ಅನುಭವಗಳಿಗೆ ಕಲ್ಪನೆಯ ಗೆರೆ ಮೂಡಿಸಿ ಲೇಖನವಾಗಿಸೋದು ನನ್ನ ಕಲೆ ಅಷ್ಟೆ. ಬರ್ತಾ ಇರಿ. ಧನ್ಯವಾದಗಳು.
-ಧರಿತ್ರಿ
ಜಾತ್ರೆಯ ನೆನಪುಗಳು ಮುದ್ದಾಗಿ ಮೂಡಿ ಬಂದಿವೆ.
@ಗುರುರಾಜ್..ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಅದೇ ಜಾತ್ರೆಯಲ್ಲಿ ನೀಲಿಚೂಡಿದಾರದಲ್ಲಿ ಮಿನುಗಿದ್ದೇ ಅನನ್ಯ ಅನುಭವ, ಮಧುರ ನೆನಪು.
ಜಾತ್ರೇಲಿ ಸಿಗರೇಟ್ ಸೇದಿದ್ರಾ?..(:))))))
@ಸುನಾಥ್ ಸರ್..ವಂದನೆಗಳು ಬರ್ತಾ ಇರಿ.
-ಧರಿತ್ರಿ
yhedeundu, yaan jathre poande mast varsha aand. :(
ಧರಿತ್ರಿಯವರೇ,
ಜಾತ್ರೆಯ ವಿವರಣೆ ಚನ್ನಾಗಿದೆ, ನನಗೂ ನನ್ನ ಬಾಲ್ಯದ ನೆನಪುಗಳು ಜೀವಂತವಾದವು ಓದುತ್ತಿದ್ದಂತೆ. ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ
ಹೀಗೆಯೇ ಬರೆಯುತ್ತಿರಿ
ಜಾತ್ರೆ..ಹೌದು..ನಮಗೆ ನಮ್ಮ ಪ್ರಾಥಮಿಕ ಶಾಲಾ ದಿನಗಳಲ್ಲಿ ಸಿದ್ದಾರೂಢನ ಜಾತ್ರೆ ಅಂತ ಒಂದು ಪಾಠ ಇತ್ತು.
ಪಾಠವನ್ನು ಓದುವುದಕ್ಕಿಂತ ಅನುಭವಿಸಿ ಅಭಿನಯಿಸಿ ಮಕ್ಕಳಿಗೆ ಮನದಟ್ಟು ಮಾಡುವುದರಲ್ಲಿ ನಮ್ಮ ‘ಈ ಸ್ತೂರು ಮೇಸ್ಟ್ರು‘ ಎತ್ತಿದ ಕೈಯಾಗಿದ್ದರು, ಅವರೇ ನಮ್ಮನ್ನು ಮೊದಲಿಗೆ ಜಾತ್ರೆ ಅಂದ್ರೆ ಏನು ಅನ್ನೋದನ್ನ ಅನುಭವಿಸಿ ತಿಳಿಸಲು ನಮ್ಮ ಊರಿನಿಂದ ಎರಡು ಕಿ.ಮೀ ದೂರದ ಎಚ್.ಕ್ರಾಸ್ ಪರಿಷೆಗೆ ಕರೆದೊಯ್ದಿದ್ದರು...ಈಗ ಸುಮಾರು ೧೫-೨೦ ವರ್ಷಗಳಿಂದ ಆ ಜಾತ್ರೇನೇ ನೋಡೋಕೆ ಆಗಿಲ್ಲ, ತುಂಬಾ ಮನಸಾಗುತ್ತೆ ಆ ದಿನಗಳನ್ನ ಮತ್ತೆ ಅನುಭವಿಸೋಕೆ...ನಿಮಗೆ ಅವಕಾಶ ಸಿಕ್ಕಿದೆ..ಬಿಡಿ ಎಲ್ಲ..ಕಂಪ್ಯೂಟರ್, ಪ್ರೋಗ್ರಾಮಿಂಗ್ ಎಲ್ಲ..ಹೋಗಿ ಮತ್ತೊಮ್ಮೆ ನಿಮ್ಮ ಬಾಲ್ಯದ ದಿನಗಳಿಗೆ..ಅಮ್ಮನ ಪ್ರೀತಿಯ ಬುತ್ತಿ ಜಾತ್ರೆಯಲ್ಲಿ ತಿಂದು ಮತ್ತೆ ಧರಿತ್ರಿ-4th std ಆಗಿಬಿಡಿ....
ಅವಕಾಶ ಮತ್ತೆ ಆಹ್ವಾನ ಎಲ್ಲರಿಗೂ ಸಿಗೊಲ್ಲ.
All the best for the JATRE
ಹಳೆಯ ನೆನಪುಗಳನ್ನು ನಿರೂಪಿಸಿದ ರೀತಿ ನವಿರಾಗಿದೆ. ಸಣ್ಣ ಸಣ್ಣ ವಿಷಯಗಳಿಗೂ ಸೂಕ್ಷ್ಮತೆಯ ಮೆರುಗು ನೀಡಿದ್ದೀರಿ. ಬರವಣಿಗೆಯ ‘ಜಾತ್ರೆ’ ಹೀಗೆಯೇ ಮುಂದುವರೆಯಲಿ. ‘ಊರುದಾರುಂದು ಬರವಣಿಗೆಡ್ ಗೊತ್ತಾಪುಂಡು’ ಉಜಿರೆನಾ?
@ಬಾಲು ಸರ್..ದಾದ ಮಲ್ಪುನಿ? ಎನ್ ನಗ ಬೇಜಾರಾಪುಂಡು..ಊರುದು ಜಾತ್ರೆ, ಕೋಲ ಮಾತೆಗ್ ಲಾ ಪೋವೋಡುದುಂಡು ಆಪುಂಡತ್ತೆ. ಸೊಲ್ಮೆಲು ಸರ್.
@ಜಲನಯನ ಸರ್, ಪ್ರತಿಕ್ರಿಯೆಗೆ ಧನ್ಯವಾದಗಳು ಸರ್. ಹೆಂಗೇ ಆಗಲಿ 4th std? ಯಯಾತಿ ಯೌವನ ಧರಿಸಿದಂಗೆ ಆಗುತ್ತಾ>? ಹಾಗ್ತಾ ಇದ್ರೆ ನಾ ಅವಕಾಶ ಬಿಡ್ತಾನೆ ಇರಲಿಲ್ಲ. ಮತ್ತೆ ನಮ್ಮೂರ ಜಾತ್ರೇಲಿ ಮಿರ ಮಿರ ಮಿನುಗುತ್ತಿದ್ದೆ ಗೊತ್ತಾ?
@ಗುರುಮೂರ್ತಿ ಸರ್..ನಿಮಗೂ ಧನ್ಯವಾದಗಳು. ಬರ್ತಾ ಇರಿ
@ಲಕ್ಷ್ಮಿಕಾಂತ ಧರಿತ್ರಿಗೆ ಸ್ವಾಗತ. ಧನ್ಯವಾದಗಳು. ಬರ್ತಾ ಇರಿ ಆಯಿತಾ? ಹೌದು..ನಾನೂ ಊರಿನವಳೇ..
-ಧರಿತ್ರಿ
Post a Comment