Friday, April 17, 2009

ತುಂತುರು ಮಳೆಯಲ್ಲಿ ನೆನಪುಗಳ ಮೆರವಣಿಗೆ...

ತುಂತುರು ಮಳೆ! ಬೆಂಗಳೂರಿನ ನನ್ನ ಪುಟ್ಟ ಮನೆಯಂಗಳಕ್ಕೆ ವರುಣನ ಸ್ಪರ್ಶ. ನಾ ಹೊಸ ಮನೆಗೆ ಬಂದ ಮೇಲೆ ಇದೇ ಮೊದಲ ಬಾರಿಗೆ ಮಹಡಿ ಮನೆಯಲ್ಲಿ ಕುಳಿತು ತುಂತುರು ಮಳೆಯ ಹರ್ಷವನ್ನು ಸವಿದಿದ್ದೆ. ಅದೇನೋ ಖುಷಿ, ನಿತ್ಯ ಸೆಕೆಯಿಂದ ಮೈಯೆಲ್ಲಾ ಬೇಯುತ್ತಿದ್ದ ನನಗೆ ನಿನ್ನೆ ತಂಪು ಗಾಳಿಯ ಪುಳಕ. ಬೇಗನೆ ಅಡುಗೆ ಮಾಡಿ, ಸ್ನಾನ, ದೇವರಿಗೆ ದೀಪ ಹಚ್ಚಿ..ನನ್ನ ಪುಟ್ಟ ರೂಮಿನ ಕಿಟಕಿ ಬಳಿ ಕುಳಿತರೆ..ನಕ್ಷತ್ರಗಳೇ ಕಾಣದ ಕಪ್ಪನೆಯ ಆಗಸದಿಂದ ತುಂತುರು ಹನಿಗಳು ಜಿಟಿಯುತ್ತಿದ್ದವು. ಎದುರು ಮನೆಯ ಮಕ್ಕಳು ಟೆರೇಸ್ ಮೇಲೆ ಆಡಲು ಹೋಗುತ್ತಿದ್ದಂತೆ ಅವರಮ್ಮ ದೊಡ್ಡ ಸ್ವರದಿಂದ ಪುಟ್ಟ ಕಂದಮ್ಮಗಳಿಗೆ ಗದರುತ್ತಿದ್ದಳು. ಒಂದು ಕ್ಷಣ ಮಹಡಿ ಮೇಲಿಂದ ಕೆಳಗೆ ರಸ್ತೆಗಿಳಿದು..ಮಳೆಯಲ್ಲಿ ತೊಯ್ದು ಬಿಡೋಣ ಅನಿಸಿದ್ರೂ ಮನಸ್ಸೇಕೋ ಬೇಡ ಅಂದಿತ್ತು. ಬಾಗಿಲಲ್ಲಿ ನಿಂತು ಮಳೆಗೆ ಕೈ ಚಾಚಿ ಅಂಗೈಯಲ್ಲಿ ಆ ತುಂತುರು ಹನಿಗಳನ್ನು ಅಂಗೈಯಲ್ಲಿ ಹಿಡಿಯಹೊರಟರೆ. ಥತ್...! ಕೈಯಿಂದ ಜಾರಿಹೋಗಬೇಕೇ ಹನಿಗಳು...?!

ಬದುಕು ಏನಾದರೂ ಬಲುದೂರ ಹೋದರೂ
ಬರಲಾರದಿಂಥ ಬೇರೊಂದು ನೆನಪು
ಏನೆಲ್ಲಾ ಮರೆತರೂ ಯಾರೊಡನೆ ಬೆರೆತರೂ
ಮರುಕಳಿಸುತಿಹುದು ನೂರೊಂದು ನೆನಪು...
ಇಳೆಯಂಗಳದಲ್ಲಿ ಮಳೆರಾಯ ಕಲರವಗುಟ್ಟುತ್ತಿದ್ದರೆ, ನನ್ನೊಳಗಿನ ಭಾವಗಳು ಸರಿದು ಹೋದ ಬದುಕಿನ ಮಗ್ಗುಲಗಳನ್ನು ನೆನಪಿಸಿದವು. ಮಳೆ-ಮನ ಖುಷಿಯಲ್ಲಿ ನೆನಪುಗಳ ಮೆರವಣಿಗೆ, ಸಾಲು ಸಾಲು ನೆನಪುಗಳು..ಎದೆಯಲ್ಲಿ ಅಪ್ಪಿ ಬಚ್ಚಿಟ್ಟುಕೊಳ್ಳಲಾದಷ್ಟು! ಒಂದೆಡೆ ಕರೆಂಟ್ ಕಣ್ಣಾಮುಚ್ಚಾಲೆ..ಯಡಿಯೂರಪ್ಪ ಸರ್ಕಾರಕ್ಕೆ ಶಾಪ ಹಾಕುತ್ತಲೇ ಮೊಬೈಲ್ ಲೈಟ್ ಆನ್ ಮಾಡಿ ಹಾಗೇ ಖಾಲಿ ಹಾಳೆ ಮೇಲೆ ಗೀಚುತ್ತಿದ್ದೆ! ಅದೇ ನೆನಪುಗಳು...
ನಮ್ಮ ಹಳೆಮನೆ ಎದುರುಗಡೆ ಇದ್ದ ವಿಶಾಲವಾದ ಹಲಸಿನ ಮರ..ಅದರ ತುಂಬಾ ಹಲಸಿನಕಾಯಿಗಳ ಗೊಂಚಲು, ಊರಿನವರೆಲ್ಲಾ ಆ ಹಲಸಿನ ಹಣ್ಣುಗಳನ್ನು ಕೊಯ್ದು ತಂತಮ್ಮ ಮನೆಗೆ ಕೊಂಡೋಗುತ್ತಿದ್ದುದು, ನೆರೆಮನೆಯ ಗೋಪಾಲ ನಮ್ಮ ಕೆರೆಗೆ ಗಾಳ ಹಾಕಲು ಬರುತ್ತಿದ್ದು, ನಿತ್ಯ ನಮ್ಮನೆಗೆ ಬಂದು ಮದ್ದು ಅರೆದು ಕೊಡುತ್ತಿದ್ದ ಸೀತಮ್ಮಜ್ಜಿ, ಶೇಂದಿ ಇಳಿಸುತ್ತಿದ್ದ ನಮ್ಮಜ್ಜ ನಮಗೂ ಒಂದು ಚಮಚ ಶೇಂದಿ ಕುಡಿಸಿ ನಮ್ಮ ತಲೆಗೂ ಅಮಲಿನ ರುಚಿ ಹತ್ತಿಸಿದ್ದು, ಪಕ್ಕದ್ಮನೆ ಸೋಮುನ ಸೈಕಲ್ ಟಯರನ್ನೇ ಕದ್ದಿರುವ, ನನಗೆ ತಂದ ಡ್ರೆಸ್ ಗಳೇ ಬೇಕೆಂದು ರಚ್ಚೆ ಹಿಡಿಯುತ್ತಿದ್ದ ನನ್ನ ತಮ್ಮ, ಚಿಕ್ಕದಿರುವಾಗ ನಾನು ನೆರಳು ನೋಡಿದ್ರೆ ವಿಪರೀತ ಹೆದರಿಕೊಳ್ಳುತ್ತಿದ್ದುದು, ಸಂಸ್ಕೃತಿ-ಸದಾಚಾರಗಳಿಗೆ ಪ್ರೀತಿಯನ್ನೇ ಬಲಿಯಾಗಿಸಿದ ನಮ್ಮೂರಿನ ರಾಮು, ಮೂಲೆ ಸೇರಿದ ನನ್ನ ಪ್ರೀತಿಯ ರೇಡಿಯೋ.. ಹೀಗೆ ಸಾಲು ಸಾಲು ನೆನಪುಗಳು ಮನದ ಕದ ತಟ್ಟುತ್ತಿದ್ದವು. \ಕಳೆದು ಹೋದ ಗೆಳೆಯ/ಗೆಳತಿಯ ನೆನಪುಗಳು ಮಾತ್ರ ಯಾಕೋ ತುಂತುರು ಮಳೆಹನಿಯಂತೆ ಕಂಗಳಲ್ಲಿ ಜಿಟಿಯುತ್ತಿದ್ದವು..
ನಡುವೆ ನಮ್ಮ ಬಾವ ನೆನಪಾದ್ರು. ಆಗಿನ್ನೂ ನಾ ಸಣ್ಣ ಮಗು..ಅಮ್ಮನಷ್ಟೇ ಗೊತ್ತು. ನಮ್ಮನೆಯಿಂದ ಅತ್ತೆ ಮನೆಗೆ ಹೋಗಬೇಕಾದ್ರೆ ಕುಮಾರಧಾರ ನದಿ ದಾಟಿ ಹೋಗಬೇಕು. ರಸ್ತೆಗಳಿಲ್ಲ, ಬಸ್ಸು-ಜೀಪಿಗಳಿಲ್ಲ. ಬೇಸಿಗೆಯಲ್ಲಿ ಕುಮಾರಧಾರ ಬತ್ತಿಹೋಗುತ್ತೆ..ನದಿಯನ್ನು ಹಾಗೇ ದಾಟಬಹುದು..ಅಲ್ಲಿ ಜುಳು ಜುಳು ಸದ್ದುಗಳಿಲ್ಲ, ನೀರಿನ ಆರ್ಭಟದ ಹರಿವಿಲ್ಲ. ಅತ್ತೆ ಮನೆಗೆ ಹೋಗಬೇಕಾದ್ರೆ ಬಾವ ನನ್ನ ಹೆಗಲ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದು. ಬೇಗ ದೊಡ್ಡವಳಾಗು ನಿನ್ನ ನಾನೇ ಮದುವೆ ಆಗ್ತೀನಿ ಅಂತ ನೆಂಟರೆದುರು ತಮಾಷೆ ಮಾಡುತ್ತಿದ್ದ ಬಾವ ಈಗ ಮೂರು ಮಕ್ಕಳ ತಂದೆಯಾಗಿದ್ದು ನೆನಪಾಗಿ ತುಂತುರು ಮಳೆಯನ್ನು ನೋಡುತ್ತಲೇ ನನ್ನಷ್ಟಕ್ಕೆ ನಕ್ಕುಬಿಟ್ಟಿದ್ದೆ. ಮೂರನೇ ಕ್ಲಾಸಿನಲ್ಲಿರುವಾಗ ನನ್ನ ಕಡ್ಡಿ ಕದ್ದ ಕುಶಲ, ಸುಮ್ ಸುಮ್ಮನೆ ಹೊಡೆಯುತ್ತಿದ್ದ ಬೇಬಿ ಟೀಚರ್, ಹೊಟ್ಟೆ ನೋವೆಂದು ಕ್ಲಾಸಿಗೆ ಚಕ್ಕರ್ ಹಾಕುತ್ತಿದ್ದ ಕುಸುಮಾಧರ, ಸ್ಟಡಿ ಪಿರೇಡಿನಲ್ಲಿ ಮಾತನಾಡಿದ್ದೇನೆಂದು ಹೆಸರು ಬರೆದು ಕೊಟ್ಟು ಹೆಡ್ ಮಾಸ್ತರ ಕೈಯಿಂದ ಪೆಟ್ಟು ತಿನ್ನಿಸಿದ ಕ್ಲಾಸ್ ಲೀಡರ್ ಸುಂದರ, ಊರ ಜಾತ್ರೆಯಿಂದ ಸಕ್ಕರೆ ಮೀಠಾಯಿ ತಂದುಕೊಡುತ್ತಿದ್ದ ಪ್ರಕಾಶ, ಮಂಗಳ ವಾರಪತ್ರಿಕೆ ಮಧ್ಯೆ ಪ್ರೇಮ ಪತ್ರ ಬರೆದು ಕಳಿಸಿದ ತರ್ಲೆ ಗೆಳೆಯ, ಡುಂಡಿರಾಜ್ ಕವನಗಳನ್ನು ಕ್ಲಾಸಿನಲ್ಲಿ ಹೇಳುತ್ತಾ, ತಾನೇ ಬರೆದಿದ್ದು ಎಂದು ಸುಳ್ಳು ಹೇಳುತ್ತಿದ್ದ ಹಾಸನದಿಂದ ಬಂದಿರುವ ಹಿಂದಿ ಮೇಷ್ಟ್ರು, ರಕ್ಷಾಬಂಧನ ದಿನದಂದು 60 ವರ್ಷದ ಗಣಪತಿ ಮೇಷ್ಟ್ರಿಗೆ ರಾಖಿ ಕಟ್ಟಿದ ಕ್ಲಾಸಿನ ಮಹಾ ಜೋಕರ್ ಸದಾನಂದ...ಹೀಗೆ ಮನದಲ್ಲಿ ನೆನಪುಗಳ ಮೆರವಣಿಗೆ. ಕಿಟಕಿಯಾಚೆ ಇಣುಕಿದರೆ ತುಂತುರು ಮಳೆ ಹುಯ್ಯುತ್ತಲೇ ಇತ್ತು...
ಏನೋ ಒಂದು ತೊರೆದ ಹಾಗೇ
ಯಾವುದೋ ಒಂದು ಪಡೆದ ಹಾಗೇ
ಅಮ್ಮನ ಮಡಿಲ ಅಪ್ಪಿದ ಹಾಗೆ
ಕಣ್ಣಂಚಿನಲ್ಲಿ ಕಣ್ಣೀರ ನೆನಪು......

ಫೋಟೋ: ಎನ್.ಕೆ.ಎಸ್.

25 comments:

PARAANJAPE K.N. said...

ಧರಿತ್ರಿ,
"ನೆನಪುಗಳ ಮಾತು ಮಧುರ". ನಿನ್ನ ನೆನಪುಗಳ ಸರಮಾಲೆ ತು೦ತುರು ಮಳೆಯ ನೇಪಥ್ಯದಲ್ಲಿ ಅನಾವರಣಗೊ೦ಡ ಬಗೆ ಖುಷಿಕೊಟ್ಟಿತು. ಮಳೆಗೆ, ಇಳೆಯ ಜೊತೆಜೊತೆಗೆ ಮೈಮನಸ್ಸಿನ ಕೊಳೆಯನ್ನು ತೊಳೆಯುವ, ಮನದಲ್ಲಿ ಹೊಸಭಾವವನ್ನು ಸ್ಫುರಿಸುವ ಶಕ್ತಿ ಇದೆ. ಬಹಳ ದಿನಗಳಿ೦ದ ಬಿಸಿಲಬೇಗೆಗೆ ಕಾದಕಾವಲಿಯ೦ತಾಗಿದ್ದ ಬೆ೦ಗಳೂರೆ೦ಬ ಕಾ೦ಕ್ರೀಟ್ ಜ೦ಗಲ್ಲಿನಲ್ಲಿ ಭಾವನೆಗಳೇ ಸತ್ತುಹೋಗಿರುವ ಜನ ಹಾಯಾಗಿರುವಾಗ, ನೀನು ಹಳೆಯ ನೆನಪುಗಳನ್ನು ಕೆದಕಿ, ಕವನದ ಸಾಲುಗಳಿ೦ದ ಓರಣಗೊಳಿಸಿ, ಅಲ೦ಕರಿಸಿ ಕೊಟ್ಟಿದ್ದೀಯಾ. ಗುಡ್.

ಬಾಲು said...

ninne nanu manege hogabekadre male hani beeltha ittu, barutte andukondre alle ninthu hoithu, jothege power kooda!!!!

e malege adello medulina bala bhaga dalli adagi settle aagariva sumadura nenapu galanna hekki thegeyutte!!!

nanu e haalu benglur ge bandaginda malenaadina male na sikkapatte miss madkotha iddini.

male nenapu galu....nice one

Mohan Hegade said...

ಚೆಂದವೋ ಚೆಂದ ಈ ನೆನಪುಗಳ ಸಾಲು ಸಾಲುಗಳು,
ನವಿರಾದ ಪದಪುಂಜಗಳಿಂದ ಒಮ್ಮೆ ಬಾಲ್ಯಾವಸ್ತೆಯನ್ನು ನೆನಪಿಸಿದ
ಸುಂದರವಾದ ಬರಹಕ್ಕೆ ನಮೋ ನಮಃ..
ಮೈ ಅಟೋಗ್ರಾಪ್ ಈ ನೆನಪುಗಳ ನೆನಪಲ್ಲೇ ಜನರನ್ನು ತಲುಪಿಲ್ಲವೆ?
ದನ್ಯರಿ,

ಧರಿತ್ರಿ said...

@ಪರಾಂಜಪೆಯಣ್ಣ...
ನಿನ್ನೆ ಮಳೆ ಬರುವಾಗ ಭಾಳ ಖುಷಿ ಆಯಿತು ನಂಗೆ..ಕರೆಂಟು ಕಣ್ಣಮುಚ್ಚಾಲೆಯಾಡುತ್ತಿದ್ದರೂ ಹಠಕ್ಕೆ ಬಿದ್ದು ಬರೆದೇ ಬಿಟ್ಟೆ. ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

@ಬಾಲು ಸರ್ ನಮಸ್ತೆ. ಪ್ರತಿಯೊಬ್ರೂ ಅಷ್ಟೇ..ಬೆಂಗಲೂರಿಗೆ ಬಂದ ಹಳ್ಳಿಯ ಸುಂದರ ಬದುಕು, ನದಿ, ಮಳೆ, ಪ್ರೀತಿ, ಸಂಬಂಧ ಎಲ್ಲಾವನ್ನೂ ಮಿಸ್ ಮಾಡ್ಕೋತ್ತಿದ್ದಾರೆ..ಏನ್ ಮಾಡೋದು ಹೇಳಿ? ಹೊಟ್ಟೆಪಾಡಿಗೆ ಬೆಂಗಲೂರು ಅನಿವಾರ್ಯ ಆಗಿಬಿಟ್ಟಿದೆ ಅಲ್ವಾ?(ಮುಂದಿನ ಲೇಖನ ಇದ್ರ ಬಗ್ಗೆನೇ ಬರೆಯೋಣ ಅನಿಸ್ತಿದೆ. ಐಡಿಯಾ ಹೊಳೆಯಕ್ಕೆ ನಿಮ್ ಕಮೆಂಟು ಸ್ಫೂರ್ತಿ)

@ಮೋಹನ್ ಹೆಗಡೆಯವರಿಗೆ ಧನ್ಯವಾದಗಳು. ಬಾಲ್ಯದ ನೆನಪುಗಳ ಜೊತೆ ನೀವೂ ಮೆರವಣಿಗೆ ಹೊರಟು ಖುಷಿಪಟ್ಟಿದ್ದು ನನಗೂ ಖುಷಿಕೊಟ್ಟಿದೆ.

-ಧರಿತ್ರಿ

Ittigecement said...

ಧರಿತ್ರಿ....

ನಿಮ್ಮ ಲೇಖನ ಓದಿದರೆ ..
ಒಂದು ಮಧುರ ಭಾವಗೀತೆ ಕೇಳಿದ ಹಾಗಿರುತ್ತದೆ...
ಭಾವಲೋಕಕ್ಕೆ ಕರೆದೊಯ್ಯುತ್ತೀರಿ...

ನಿಮ್ಮ ಬ್ಲಾಗ್ ಅದಕ್ಕಾಗಿ ಇಷ್ಟವಾಗುತ್ತದೆ...

ಅಭಿನಂದನೆಗಳು...

Guruprasad said...

Hi ಧರಿತ್ರಿ
ಚೆನ್ನಾಗಿ ಇದೆ ನೆನಪುಗಳ ಮೆರವಣಿಗೆ ಸಾಲು ಸಾಲಿನ ಬರಹ ,,, ನೆನ್ನೆ ಅಚಾನಕ್ ಆಗಿ ಬಂದ ಮಳೆಗೆ thankx ಹೇಳಬೇಕು, ಯಾಕೆ ಹೇಳಿ....ನಿಮ್ಮ ನೆನಪುಗಳನ್ನು ತುಂತುರು ಮಳೆ ಹನಿಗಳಲ್ಲಿ ನೆನಸಿ , ನೆನಪಿಸಿ ಹೀಗೆ ಒಳ್ಳೆ ಬರಹ ಕೊಟ್ಟಿದಕ್ಕೆ ಅಲ್ಲರಿ...... ಸ್ವಲ್ಪ ಸೆಕೆ ಕಮ್ಮಿ ಆಯಿತು ಅಂತ .... ಹಾ ಹಾ... ( ಸುಮ್ನೆ ಜೋಕ್ ಮಾಡ್ತಾ ಇದ್ದೇನೆ )
ಥ್ಯಾಂಕ್ಸ್ ... ಚೆನ್ನಾಗಿ ಇದೆ... ಇಂತಹ ಬರಹ ಗಳಿಗೆ ಅಲ್ವ ನಿಮ್ ಬ್ಲಾಗ್ ಇಷ್ಟ ಆಗೋದು...(ಯಾರಿಗೆ :-))
ಹೀಗೆ ಬರೀತಾ ಇರಿ.....
ಗುರು

ಮನಸು said...

ಮಳೆರಾಯನ ಕಂಡು ಪುಳವಾದಿರಿ ಅಲ್ಲವೆ..? ಬಹಳ ಚೆಂದದ ಬೊಂಬೆಯೊಂದು ಚೆಂದದ ಬರಹ ಮೂಡಿಸಿದ್ದಾರೆ...ಮಳೆಯಲ್ಲಿ ನೆನೆಯುವುದೇ ಒಂದು ಖುಷಿ ಮರುಭೂಮಿಯಲ್ಲಿ ಈ ಮಾಸದಲ್ಲೂ ಮಳೆ ಬಂದಿದ್ದು ಕಂಡು ನಮಗೂ ಸಂತಸ ಜೊತೆಗೆ ಆವಿನಕಲ್ಲನ್ನು ಚಿಕ್ಕಮಕ್ಕಳಂತೆ ಆಯುವ ಕೆಲಸದಲ್ಲಿ ತೊಡಗಿದ್ದೆ ನನ್ನ ಕಚೇರಿಯಲ್ಲಿ ಎಲ್ಲರು ನನ್ನ ನೋಡಿ ನಗುತ್ತಲಿದ್ದರು ಹ ಹ ಹ.....ನೆನಪಿನಂಗಳಕೆ ಕರೆದೊಯ್ಯದಿರಿ ನೀವು
ಧನ್ಯವಾದಗಳು..

Shankar Prasad ಶಂಕರ ಪ್ರಸಾದ said...

ಇಳೆಗೆ ಬಿದ್ದ ಹನಿ ಮಳೆ
ತಂದಿದೆ ಮೊಳಕೆ, ಹುಲ್ಲು ಗರಿಕೆ..
ಮಳೆಯಲಿ ಮಿಂದಿಹ ಮನವು
ಬಿಚ್ಚಿದೆ ನೆನಪಿನ ಸರಮಾಲಿಕೆ

ಸೂಪರ್ರ್ ಆಗಿದೆ ಧರಿತ್ರಿ ಈ ಲೇಖನ..

ಕಟ್ಟೆ ಶಂಕ್ರ

ಶಿವಪ್ರಕಾಶ್ said...

ನೆನಪುಗಳ ಮಾತು ಮಧುರ..
ತುಂಬಾ ಚನ್ನಾಗಿವೆ ನಿಮ್ಮ ಚಿಕ್ಕಂದಿನ ಶಾಲೆಯ ನೆನಪುಗಳು ...
ಧನ್ಯವಾದಗಳು

ಧರಿತ್ರಿ said...

@ಪ್ರಕಾಶ್ ಸರ್..
ಬರಹ ಓದಿದ್ದಕ್ಕೆ, ಮೆಚ್ಚಿದ್ದಕ್ಕೆ ಧನ್ಯವಾದಗಳು. ಹಾಗೇ ಬರ್ತಾ ಇರಿ.

@ಗುರು ಧನ್ಯವಾದಗಳು. ನಿನ್ನೆಯ ಮಳೆಗೆ ನಾನು ಭಾಳ ಖುಷಿಪಟ್ಟಿದ್ದೀನಿ. ಎಷ್ಟು ಖುಷಿಯಾಯ್ತು ಗೊತ್ತಾ? ನಿನ್ನೆ ಮನೆಯೆಲ್ಲಾ ಕೂಲ್ ಕೂಲ್...ಸೂಪರ್ ಅಲ್ಲ..ಸೆಕೆನೂ ಇರಲಿಲ್ಲ. ಲೇಖನ ಬರೆದು ತಣ್ಣಗೆ ನಿದ್ದೆ..ಫುಲ್ ಖುಷಿ ಖುಷಿ.

@ಮನಸ್ಸು ನಮಸ್ತೆ..ಮಳೆ ಅಂದ್ರೆ ಹಂಗೇ ಅಲ್ವೇ? ನಾನು ಸಣ್ಣವಳಿರುವಾಗ ಮಳೆಯಲ್ಲಿ ನೆನೆಯುತ್ತಿದ್ದೆ. ಅದ್ರಲ್ಲೂ ಬೇಸಿಗೆ ಕಾಲ ಕಳೆದು ಮಳೆಗಾಲದ ಆರಂಭದಲ್ಲಿ ಇಳೆಗೆ ಮೊದಲ ಮಳೆ ಬಿದ್ದಾಗ ನಮಗೂ ಅಷ್ಟೇ ಖುಷಿ ಅಲ್ವೇ? ಬರಹ ಮೆಚ್ಚಿಕೊಂಡಿದ್ಕ್ಕೆ ಧನ್ಯವಾದಗಳು.

@ಶಂಕ್ರಣ್ಣ..ಕವನನಾನೇ ಬರೆದುಬಿಟ್ಟಿದ್ದೀರಿ..ಸೂಪರ್ ಅಲ್ವಾ? ಚೆನ್ನಾಗಿ ಬರೆದಿದ್ದೀರಾ. ಇನ್ನು ಕವನ ಬರೆಯೋಕೂ ಶುರುಮಾಡಿ ಶಂಕ್ರಣ್ಣ.

-ಧರಿತ್ರಿ

ಧರಿತ್ರಿ said...

@ಶಿವಪ್ರಕಾಶ್...ನನ್ ನೆನಪುಗಳ ಜೊತೆ ಒಂದಷ್ಟು ಹೊತ್ತು ಹೆಜ್ಜೆ ಹಾಕಿದ್ದಕ್ಕೆ ಧನ್ಯವಾದಗಳು.
-ಧರಿತ್ರಿ

ಸುಧೇಶ್ ಶೆಟ್ಟಿ said...

ಧರಿತ್ರಿಯವರೆ...

ಓದಿದ೦ತೆಲ್ಲಾ ನಾನು ನನ್ನ ಬಾಲ್ಯಕ್ಕೆ ಹೊರಟುಹೋದೆ... ಎಷ್ಟು ಚೆನ್ನಾಗಿರುತ್ತಿತ್ತು ಆ ಮಳೆಗಾಲದಲ್ಲಿ. ಆ ಬಾಲ್ಯ, ಆ ಮಳೆ.. ನೆನೆಸಿಕೊ೦ಡರೆ ಹೌದು ಕಣ್ಣ೦ಚಲ್ಲೊ೦ದು ಸಣ್ಣ ಬಿ೦ದು....

ನಾಸ್ಟಾಲ್ಜಿಕ್ ಅನುಭವ ಕೊಟ್ಟಿತು ನಿಮ್ಮ ಬರಹ...

ಹರೀಶ ಮಾಂಬಾಡಿ said...

ಸೆಖೆಯಲ್ಲಿ ಬೆವರೊರೆಸಿಕೊಳ್ಳುತ್ತಾ ತುಂತುರು ಮಳೆಯ ಬಗ್ಗೆ ಓದಿದೆ...ಬೇಗ ಮಳೆ ಬರಲಿ ಅನಿಸುತ್ತದೆ

ಬಿಸಿಲ ಹನಿ said...

ಧರಿತ್ರಿಯವರೆ,
ತುಂತುರು ಮಳೆಯಷ್ಟೆ ಖುಶಿಗೊಳಿಸುವ ನಿಮ್ಮ ನೆನಪುಗಳ ಮಳೆ ನನ್ನನ್ನು ನಿಜಕ್ಕೂ ಖುಶಿಗೊಳಿಸಿತು. ನಿಮ್ಮ ಭಾಷೆಗೆ ಕಾವ್ಯದ ಸ್ಪರ್ಶ ಇದೆ. ಹೀಗೆ ಕಾವ್ಯಮಯವಾಗಿ ಬರೆಯೋರನ್ನು ಕಂಡರೆ ನನಗೆ ಹೊಟ್ಟೆ ಉರಿ. ಅಂದ್ಹಾಗೆ ನೀವು ಬರಿ ನನ್ನ ಕವನಗಳನ್ನೆ ಮೆಚ್ಚಿಕೊಳ್ಳುವ ನೀವು ಯಾಕೆ ಕವನಗಳನ್ನು ಬರಯಬಾರದು?

Greeshma said...

ಕಿಟಕಿ ಪಕ್ಕ ತಂಪಾದ ಗಾಳಿ ಸವಿಯುತ್ತಾ, "ನೀ ಅಮೃತಧಾರೆ" ಪದ್ಯ ಕೇಳ್ತಾ, ನಿಮ್ಮ ಲೇಖನ ಓದಿದೆ . ಎಷ್ಟು ಖುಷಿ ಆಯ್ತು :)
ಸಕ್ಕತ್ತಾಗಿದೆ!

ಮಲ್ಲಿಕಾರ್ಜುನ.ಡಿ.ಜಿ. said...

ಮೊದಲ ಮಳೆಯ ಪುಳಕ ನಿಮಗಾಗಿದೆ. ನಮಗಿಲ್ಲಿ ಇನ್ನೂ ಉರಿಉರಿ ಬಿಸಿ. ಅದಕ್ಕೆ ತಂಪೆರಚಿದಂತಾಯಿತು ಲೇಖನ ಓದಿ.ಅಂಗೈಲಿ ಬಿದ್ದ ನಾಲ್ಕು ಹನಿಗೇ ಇಷ್ಟು ನೆನಪುಗಳ ನೇವರಿಕೆಗಳು, ಇನ್ನು ಧೋ.. ಎಂದು ಮಳೆ ಸುರಿದರೆ ಬ್ಲಾಗಿಗರೆಲ್ಲ ಕೊಚ್ಚಿ ಹೋಗಬಹುದೇನೋ ನಿಮ್ಮ ಆರ್ಭಟಕ್ಕೆ. ಮಿಂಚು, ಗುಡುಗು ಬಂದರೆ ನಮ್ಮನ್ನೆಲ್ಲ ಆ ದೇವರೇ ಕಾಪಾಡಬೇಕು!

ಮೂರ್ತಿ ಹೊಸಬಾಳೆ. said...

ಭೂತವನ್ನ ಅವಲೋಕಿಸಲು ಹಾಗು ಭವಿಷ್ಯವನ್ನು ಆಲೋಚಿಸಲು ಪ್ರಕೃತಿ ಮಳೆ ಬರಿಸಿ ನಮ್ಮನ್ನ ಮನೆಯಿಂದ ಹೊರಹೋಗದಂತೆ ಮಾಡುತ್ತದೆ ಎನ್ನುವುದು ನಿಮ್ಮ ಬರಹವನ್ನ ಓದುವಾಗ ಮನದಟ್ಟಾಗುತ್ತದೆ.
ಇಂತಹ ಹಲವಾರು ಉತ್ತಮ ಬರಹಗಳನ್ನು ನಿರೀಕ್ಷಿಸುತ್ತೇನೆ.

ಧರಿತ್ರಿ said...

@ಪ್ರೀತಿಯ ಸುಧೇಶ್...
ಆ ಮಳೆ, ಮಳೆಯಲ್ಲಿ ಬೆಳೆ, ಮಳೆ ಬಿದ್ದ ತಂಪಾದ ಇಳ, ಬಾಲ್ಯ, ತುಂಟಾಟ, ಮಳೆಗೆ ನಮ್ಮೂರ ಹಳ್ಳ ದಾಟಿದ್ದು...ಇದೆಲ್ಲ ಎಷ್ಟು ಬರೆದರೂ ಮಗಿಯದ ಕತೆ. ತಾವೂ ಯಾಕೆ ಬರೆಯಬಾರದು...ನಿಮ್ಮ ಬಾಲ್ಯದ ಕನವರಿಕೆಗಳ ಬಗ್ಗೆ?ಧನ್ಯವಾದಗಳು.

@ಹರೀಶ್ ಸರ್..ಮಳೆ ಬಂದಿಲ್ವಾ? ನಮ್ಮೂರಲ್ಲಿ? ನಮ್ ಕಡೆ ಮೊನ್ನೆ ಮಳೆ ಬಂದಿದೆ ಅಂದ್ರು ಅಮ್ಮ. ಬೇಗ ಮಳೆ ಬರಲಿ....

@ಉದಯ ಸರ್..ನಿಮ್ಮ ಪ್ರೀತಿ, ಪ್ರೋತ್ಸಾಹಕ್ಕೆ ನಾ ಆಭಾರಿ. ಕವನಗಳನ್ನು ಬರೆದೇ ಗೊತ್ತಿಲ್ಲ..ನೋಡೋಣ ಈ ಸಲ ಪ್ರಯತ್ನ ಮಾಡ್ತೀನಿ. ಏನಿಲ್ಲಾ ಅಂದ್ರೂ ಒಂದು ಡಬ್ಬ ಕವನ ಬರೆಯಕ್ಕಾದ್ರೂ ಪ್ರಯತ್ನ ಮಾಡ್ತೀನಿ. ಧನ್ಯವಾದಗಳು ಸರ್.

@ಮಲ್ಲಿಯಣ್ಣ...ನೀವು ಫೋಟೋಗ್ರಾಫಿ ಮಾತ್ರವಲ್ಲ ನನ್ ಕಾಲೆಳೆಯುವುದ್ರಲ್ಲೂ ನಂ.1. ಸ್ಥಾನ. ಧೋ! ಎಂದು ಮಳೆ ಸುರಿದರೂ..ನೀವು ಕೊಚ್ಚಿಹೋಗುವ ಹಾಗೆ, ನಿಮ್ಮನ್ನು ದೇವರು ಕಾಪಾಡೋ ಸ್ಥಿತಿ ನಾನು ತಂದಿಡಲ್ಲ. ನೀವು ನನ್ನ ಬ್ಲಾಗಿಗೆ ಬಂದು, ಸುರಿವ ಮಳೆಯ ತಂಪಿನಲ್ಲಿ ಮೆಲ್ಲಗೆ ಬಂದು ನನ್ನ ಬರಹ ಓದಿ ಖುಷಿಯಿಂದ ಹಿಂತಿರುಗೋ ಥರದ ಬರಹ ಬರೇತೀನಿ. ದೇವ್ರರನ್ನೆಲ್ಲಾ ಕರೀಬೇಡಿ ಅಣ್ಣಯ್ಯ! ಧನ್ಯವಾದಗಳು.

@ಮೂರ್ತಿ ಸರ್..ನಮಸ್ತೆ. ಪ್ರೋತ್ಸಹಕ್ಕೆ ಧನ್ಯವಾದಗಳು. ಖಂಡಿತ ನನ್ನಿಂದಾದಷ್ಟು ಉತ್ತಮವಾದ ಬರಹಗಳನ್ನು ಬರೆಯಲು ಪ್ರಯತ್ನಿಸುತ್ತೇನೆ.

@ಗ್ರೀಷ್ಮಾ..ಅಮೃತವರ್ಷಿಣಿಯ ತುಂತುರು ಅಲ್ಲಿ ನೀರ ಹಾಡು..ಹಾಡು ಕೇಳಬೇಕಾಗಿತ್ತು. ಪ್ರೀತಿ ಮಳೆಯಲ್ಲಿ ತೊಯ್ದು ಹೋಗ್ತಾ ಇದ್ದೀರೇನೋ
? ಧನ್ಯವಾದಗಳು.

-ಪ್ರೀತಿಯಿಂದ
ಧರಿತ್ರಿ

Anonymous said...

dharithri.. thumbaa chendagittu maLe... nenapa maLe...

Umesh Balikai said...

ಧರಿತ್ರಿ,

ತುಂತುರು ಮಳೆ ತರುವ ತಂಪಾದ ಸವಿನೆನಪುಗಳ ಮೆಲುಕು ತುಂಬಾ ಚೆನ್ನಾಗಿದೆ. ನಿಮ್ಮ ಲೇಖನ ಓದುತ್ತ ನನಗೂ ನಂ ಶಾಲೆಯ ಎಲ್ಲ ಸ್ನೇಹಿತ-ಸ್ನೇಹಿತೆಯರ, ಸುಮ್ ಸುಮ್ನೇ ಬಾರಿಸುತ್ತಿದ್ದ(:() ಮೇಷ್ಟ್ರ ನೆನಪಾಯಿತು. ಸುಂದರವಾದ ಲೇಖನ, ಅದಕ್ಕೊಪ್ಪುವ ಚಿತ್ರ, ಕವನಗಳು, ಓದಲು ತುಂಬಾ ಹಿತವಾಗಿತ್ತು.

ಮೊನ್ನೆಯ ಮಳೆ ನನಗೂ ತುಂಬಾ ಖುಷಿ ತಂತು, ಜೊತೆಗೆ ಸ್ವಲ್ಪ ಶೀತವನ್ನೂ.... ಆಕ್ಷೀ....!

- ಉಮೀ

ಸಾಗರದಾಚೆಯ ಇಂಚರ said...

ಧರಿತ್ರಿಯವರೇ,
ನಿಮ್ಮ ಲೇಖನ ತುಂಬಾ ಇಷ್ಟವಾಯಿತು, ಹೀಗೆಯೇ ಬರೆಯುತ್ತಿರಿ,
ನಿಮ್ಮ ಪ್ರೇಮ ಪತ್ರದ ಪಿ ಎಚ್ ಡಿ ಎಲ್ಲಿಗೆ ಬಂತು ಹ ಹ ಹ

ಧರಿತ್ರಿ said...

@ಶಮಾಕ್ಕ...ಧನ್ಯವಾದಗಳು ಅಕ್ಕ. ನನ್ನೀ ನೆನಪಿನ ಮಳೆಯಲ್ಲಿ ಮಿಂದಿದ್ದಕ್ಕೆ. ಬನ್ನಿ ಹೀಗೇ....

@ಉಮೇಶ್..ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಮತ್ತೆ ನಿಮಗೆ ಶೀತನಾ...ಮಳೆಗೆ ನೀವಂದ್ರೆ ಪ್ರೀತಿ ಜಾಸ್ತಿ ಇರಬೇಕು ಬಿಡಿ. ಸ್ವಲ್ಪ ದಿವಸ ಅಕ್ಷಿ ಮಾಡಿ..(:)

-ಧರಿತ್ರಿ

ಧರಿತ್ರಿ said...

@ಗುರುಮೂರ್ತಿ ಸರ್..ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹಾಗೇ ಪ್ರೇಮ ಪತ್ರ ಪಿಎಚ್ ಡಿ ನಾ? ಎಲ್ಲಾ ಸಿದ್ಧತೆ ಮಾಡ್ತಾ ಇದ್ದೀನಿ. ಆಮೇಲೆ ನಿಮಗೂ ತಿಳಿಸ್ತೀನಿ ಸರ್.
-ಧನ್ಯವಾದಗಳೊಂದಿಗೆ
ಧರಿತ್ರಿ

shivu.k said...

ಧರಿತ್ರಿ,

ಮೊದಲಿಗೆ ನನಗೆ ಅತಿಯಾದ ಕೆಲಸದ ಒತ್ತಡವಿದ್ದುದರಿಂದ ಬ್ಲಾಗಿಗೆ ಬರಲಾಗಲಿಲ್ಲ..ಕ್ಷಮೆಯಿರಲಿ...

ನಿನಗಲ್ಲಿ ಜೋರು ಮಳೆಯಾದರೆ ನಮಗಿಲ್ಲಿ ಮಳೇಯೇ ಇಲ್ಲ...ಬೀದಿ ಬೀದಿ..ರಸ್ತೆ ಸುತ್ತಾಡಿ ಬಣ್ಣ ಬದಲಾಗಿದ್ದ ನನಗೂ ಒಂದು ಸುತ್ತು ತಂಪಾದ ಮಳೆ ಬರಬಾರದೇ ಅನ್ನಿಸಿತ್ತು...

ನಿನ್ನ ಲೇಖನ ಓದುತ್ತಾ...ನಿನ್ನೆಲ್ಲಾ ನೆನಪುಗಳ ಮೆರವಣಿಗೆಯಲ್ಲಿ ತೇಲುತ್ತಾ ಹೋದಂತಾಯಿತು....ಜೊತೆಗೆ ಜೋರು ಮಳೆಯು ಸುರಿದಂತಾಯಿತು....

ಅದ್ಯಾಕೋ ಎಲ್ಲರಿಗೂ ಮಳೆ ಬಂದಾಗ ಸುಂದರ ನೆನಪುಗಳು ಗರಿಗೆದರುತ್ತವೆ..ನನಗೂ ಮಳೆ ಇಷ್ಟ...ಅದರೆ ಬಿಚ್ಚಿಕೊಳ್ಳುವ ನೆನಪುಗಳೆಲ್ಲಾ ಸುಂದರವಂತೂ ಖಂಡಿತ ಅಲ್ಲ...ಅದರ ಬಗ್ಗೆ ಎಂದಾದರೂ ಬರೆಯಬೇಕೆನಿಸುತ್ತದೆ...

ಧನ್ಯವಾದಗಳು...

ಎಂದಿನಂತೆ ಸುಂದರ ಬರಹ....

Anonymous said...

ಚೆನ್ನಾಗಿದೆ!!