ಆಗ ಶಾಲೆಗೆ ದೊಡ್ಡ ರಜೆ. ಬೇಸಿಗೆ ರಜೆ ಅಂದ್ರೆ ಅದು ನಮ್ಮ ಪಾಲಿಗೆ ದೊಡ್ಡ ರಜೆ. ಅಕ್ಟೋಬರ್ ರಜೆ ಸಣ್ಣ ರಜೆ. ದೊಡ್ಡ ರಜೆ ಬಂದರೆ ಅಮ್ಮನಿಗೆ ಚಿಂತೆ. ಮುಂದಿನ ತರಗತಿಗೆ ಭಡ್ತಿ ಪಡೆಯೋ ಮಕ್ಕಳಿಗೆ ಹೊಸ ಯೂನಿಫಾರ್ಮ್, ಹೊಸ ಶೂ, ಹೊಸ ಬ್ಯಾಗ್, ಹೊಸ ನೋಟ್ ಬುಕ್, ಹೊಸ ಪೆನ್...ಹೀಗೆ ಮಕ್ಕಳನ್ನು ಹೊಸತರಲ್ಲಿ ಕಾಣುವ ಅಮ್ಮನ ಅತೀವ ಆಸೆ. ಅದಕ್ಕೆ ಅಮ್ಮ ಕಂಡುಕೊಳ್ಳುತ್ತಿದ್ದ ದಾರಿ ಲಾಟರಿ! ಅದು ಅವಳಿಗೆ ಬದುಕಿನ ಭರವಸೆ.
ಅಂದು ಅಮ್ಮ ಲಾಟರಿ ತಂದಿದ್ದಳು. ಊರಿನ ಬಂಟನೊಬ್ಬ ಲಾಟರಿಗೇ ಫೇಮಸ್ಸು. ಅವನಿಂದ ಲಾಟರಿ ಖರೀದಿಸಿದರೆ ಅದೃಷ್ಟ ಖಂಡಿತ ಅನ್ನೋದು ಅಮ್ಮನ ಗಟ್ಟಿ ನಂಬಿಕೆ. ವಿಶ್ವಾಸವಿದ್ದ ವ್ಯಕ್ತಿಯೊಬ್ಬ ಹೇಳಿದ ಮಾತ್ರಕ್ಕೆ, ಅಥವಾ ಅವನಿಂದ ಲಾಟರಿ ಪಡೆದರೆ ಬಹುಮಾನ ಗ್ಯಾರಂಟಿ ಅನ್ನೋ ಅಮ್ಮನ ಮುಗ್ಧತೆಯ ಮೂಢ ನಂಬಿಕೆ. ಲಾಟರಿ ತಂದ ತಕ್ಷಣ ಅದನ್ನು ದೇವರ ಫೋಟೋ ಮುಂದಿಟ್ಟು ನಮ್ಮೆಸರು ಹೇಳಿ ಕೈ ಮುಗಿದು ದೇವರೊಂದಿಗೆ ಮೌನವಾಗಿ ಮಾತನಾಡುತ್ತಿದ್ದ ಅಮ್ಮನ ದೇವಭಾಷೆ ನಮಗಂತೂ ಅರ್ಥವಾಗುತ್ತಲೇ ಇರಲಿಲ್ಲ!
ನಾನಿನ್ನೂ ಪ್ರೈಮರಿ. ಹತ್ತು ದಾಟದ ವಯಸ್ಸು. ಶಾಲೆಗೆ ರಜೆ. ದಿನಾ ಅಮ್ಮ ಸುರುಟಿದ ಬೀಡಿಗಳನ್ನು ಕೊಡಲು ಪೇಟೆಗೆ ಹೋಗುವಳು. ಅವಳ ಜೊತೆ ಪೇಟೆಗೆ ಹೋಗುವುದಂದರೆ ಬೆಂಗಳೂರಿನಲ್ಲಿ ರಜಾ ದಿನಗಳಲ್ಲಿ ಶಾಪಿಂಗ್ ಹೊರಟಹಾಗೆ! ಅಮ್ಮ ತೆಗೆದುಕೊಡುವ ನಾಲ್ಕಣೆಯ ಉರಿಗಡಲೆ ಕೂಡ ನಮಗೆ ಐಸ್ಕ್ರೀಂ, ಫ್ರುಟ್ ಸಲಾಡ್ ಸವಿದಂಥ ಖುಷಿ ನೀಡುತ್ತಿತ್ತು. ಅಮ್ಮನ ಜೊತೆಗೆ ಹೋದಾಗಲೆಲ್ಲಾ ಅಮ್ಮನ ಬಾಯಲ್ಲಿ ಲಾಟರಿ ಮಾಮನ ಕಥೆ. ಅದು ಅವಳ ಕನಸುಗಳ ದೊಡ್ಡ ಮೂಟೆಯಾಗಿರುತ್ತಿತ್ತು!
ಲಾಟರಿ ಮಾಮನ ಜೊತೆ ಲಾಟರಿ ತೆಗೆದುಕೊಂಡ್ರೆ ಶಾಲೆಗೆ ಹೋಗುವ ಹೊತ್ತಿಗೆ ಬಹುಮಾನ ಬರುತ್ತೆ. ಅರ್ಥಾತ್ ಕೈತುಂಬಾ ದುಡ್ಡು ಬರುತ್ತೆ. ಆಗ ಶಾಲೆ ಆರಂಭವಾಗುವಾಗ ಸಾಲ ಮಾಡೋ ಅಗತ್ಯವಿಲ್ಲ ಅನ್ನೋದು ಅಮ್ಮನ ಲೆಕ್ಕಾಚಾರ. ನನ್ನ, ತಮ್ಮನ ಹೆಸರಿನಲ್ಲಿ ಅಮ್ಮ ಲಾಟರಿ ತೆಗೆದುಕೊಳ್ಳುತ್ತಿದ್ದಳು. ಲಾಟರಿ ತೆಗೆದುಕೊಂಡಾಗಲೇ ತಮ್ಮ ತನಗೆ ಬೇಕಾದ ವಸ್ತುಗಳ ಉದ್ದದ ಪಟ್ಟಿ ಮುಂದಿಡುತ್ತಿದ್ದ. ಅದರಲ್ಲಿ ನಮ್ಮಿಬ್ಬರ ಪಾಲು ಆದ ಮೇಲೆ ಅಮ್ನಿಗೇನು ಅನ್ನೋ ಪ್ರಶ್ನೆ ಎದುರಾಗುತ್ತಿತ್ತು. ಅಮ್ಮನಿಗೆ ಸೀರೆ, ಚೈನು, ಬಳೆ...ಹೀಗೆ ಕೆಲವೊಂದು ವಸ್ತುಗಳ ಪಟ್ಟಿ ನಾವೇ ರೆಡಿ ಮಾಡುತ್ತಿದ್ದೇವು.
ಆಯಿತು ರಜಾ ಮುಗಿದೇ ಹೋಗುತ್ತಿತ್ತು. ಲಾಟರಿ ಮಾಮ ಸುಮ್ಮನಾಗುತ್ತಿದ್ದ. ಕೊಂಡ ಲಾಟರಿ ಸುದ್ದಿಯಾಗದೇ ಡ್ರಾ ಆಗುತ್ತಿತ್ತು. ಸಾಲ ಮಾಡಿ ಶಾಲೆಗೆ ಕಳುಹಿಸುವಾಗ ಅಮ್ಮನ ಮುಖದಲ್ಲಿ ಪುಟ್ಟ ನೋವು, ಲಾಟರಿ ಮಾಮನ ಮೇಲೆ ಸಾತ್ವಿಕ ಸಿಟ್ಟು. ಹೋಗಲಿ ಬಿಡಿ...ಇನ್ನೊಂದು ಲಾಟರಿಯಲ್ಲಿ ಬಹುಮಾನ ಬಂದೇ ಬಿಡುತ್ತೆ ಅನ್ನೋ ಮತ್ತದೇ ಹಳೆ ಮುಗ್ಧ ನಂಬಿಕೆ!
9 comments:
ಬಹಳ ದಿನಗಳ ನ೦ತರ ಮನಃ ಕಲಕುವ ಬರಹ ಓದಿದೆ .ವಾಸ್ತವ ಬದುಕಿ ಕ್ರೂರತೆಯನ್ನ ಸರಳವಾಗಿ ಅಮ್ಮನ ಪ್ರೀತಿ ಮತ್ತು ಮುಗ್ದತೆ ಯೊ೦ದಿಗೆ ಬೆಸೆದು ಇಡೀ ಬದುಕನ್ನ ಸರಳವಾಗಿ ವ್ಯಖ್ಯಾನಿಸಿದಿಯಮ್ಮ .ವ೦ದನೆಗಳು
ಬಹಳ ದಿನ ಗಳ ನ೦ತರ ಹಳೆಯ ನೆನಪುಗಳ ಬರಹ ಹೊರಬಂದಿದೆ. ಚೆನ್ನಾಗಿದೆ.
ಅಮ್ಮನ ಮುಗ್ಧತೆ.. ಇಂದಲ್ಲಾ ನಾಳೆ ಲಾಟರಿ ಬರಬಹುದು ಎಂಬ ಮೂಢ ನಂಬಿಕೆ.
ಆರ್ಥಿಕ ಸ್ಥಿತಿಯನ್ನು ಮ್ಯಾನೇಜ್ ಮಾಡುತ್ತ, ಲಾಟರಿ ಹತ್ತೀತೆನ್ನುವ ತಾಯ ಹಂಬಲ, ಮಕ್ಕಳ ಮುಗ್ಧತೆಯನ್ನು ಚೆನ್ನಾಗಿ ನಿರೂಪಿಸಿರುವಿರಿ.
ಅರ್ಥಿಕ ಪರಿಸ್ಥಿತಿ ಗಳು ಹಾಗೇನೆ. ಬಹಳ ಕಾಲದ ನಂತರ ಬರೆದ ಒಂದು ಮನ ಮುಟ್ಟುವ ಲೇಖನ. ಈಗ ಊರಲ್ಲಿ ತುಂಬಾ ಮಳೆ. ತಲೆ ಮೇಲೆ ಕೊಪ್ಪೆ, ಕೊಡೆ ಹಿಡಿಕೊಂಡು ಹೋಗುವ ಮಕ್ಕಳ ಹಿಂದೆ ಅಪ್ಪ ಅಮ್ಮನದಿರ ಕನಸು, ಆಸೆಗಳು ಎಷ್ಟೋ..
ಅದೊಮ್ಮೆ ಒಂದು ತಪ್ಪು ಮಾಡಿದ್ದೆ..ಟೀಕೆಗಳ ಮಹಾಪೂರವೇ ಹರಿದ ದಿನಗಳು..ಬತ್ತಿ ಹೋದ ಆಸೆಗಳ ಮತ್ತೆ ಚಿಗುರಿಸಿದವಳು
ನನ್ನ ಅಮ್ಮ..ತಾಯ ಪ್ರೀತಿ ಅದು ಬೆಲೆ ಕಟ್ಟಲಾಗದ್ದು..
ಎಲ್ಲಾ ಅಮ್ಮ೦ದಿರು ಹೀಗೇನೆ ಅನಿಸುತ್ತದೆ. ತು೦ಬಾ ಇಷ್ಟವಾಯಿತು ಈ ಲೇಖನ ಚಿತ್ರಾ...
ತುಂಬಾ ದಿನಗಳಿಂದ ನಿಮ್ಮ ಬ್ಲಾಗ್ ನೋಡ್ತಾನೇ ಇದ್ದೆ, ಆದರೆ ಈ ಲೇಖನ ತುಂಬಾನೇ ಚೆನ್ನಾಗಿ ಮೂಡಿಬಂದಿದೆ. ಮತ್ತೊಮ್ಮೆ ನಮ್ಮ ಬಾಲ್ಯವನ್ನು, ಅಮ್ಮನ ನೆನಪನ್ನು ನೆನಪಿಸಿಕೊಟ್ಟಿದ್ದೀರಿ. ನಿಮಗೆ ಧನ್ಯವಾದಗಳು
ತುಂಬಾ ದಿನಗಳಿಂದ ನಿಮ್ಮ ಬ್ಲಾಗ್ ನೋಡ್ತಾನೇ ಇದ್ದೆ, ಆದರೆ ಈ ಲೇಖನ ತುಂಬಾನೇ ಚೆನ್ನಾಗಿ ಮೂಡಿಬಂದಿದೆ. ಮತ್ತೊಮ್ಮೆ ನಮ್ಮ ಬಾಲ್ಯವನ್ನು, ಅಮ್ಮನ ನೆನಪನ್ನು ನೆನಪಿಸಿಕೊಟ್ಟಿದ್ದೀರಿ. ನಿಮಗೆ ಧನ್ಯವಾದಗಳು
Post a Comment