Saturday, December 25, 2010

ಅರ್ಥವಾಗದವಳು!

ಹೇಳಬೇಕನಿಸಿದರೂ ಹೇಳಲಾಗಲಿಲ್ಲ. ಬದುಕಿನ ಬಂಡಿ ಇಷ್ಟು ದೂರ ತಂದು ನನ್ನ ನಿಲ್ಲಿಸಿದೆ. ಇಳಿಹೊತ್ತು, ಇಳಿವಯಸ್ಸು. ಇಂದು ನೀನು ಏನೇ ಹೇಳಿದರೂ ಅದು ನನಗೆ ಕುತೂಹಲ, ಅಚ್ಚರಿ ಮೂಡಿಸುತ್ತೆ. ಅರ್ಥವಾಗದೆ ಬಿಟ್ಟ ಕಣ್ಣುಗಳಿಂದ ನಿನ್ನ ನೋಡಿ ‘ಏನು ಮಗನೇ?’ ಎಂದು ಕೇಳಿದರೆ, ಅದು ನಿನಗರ್ಥವಾಗಲ್ಲಮ್ಮ ಎನ್ನುತ್ತೀಯಾ. ಅಂದು ನಿನಗೆ ಅರ್ಥ ಮಾಡಿಸಿದ ಅಮ್ಮನಿಗೆ ಇಂದು ಅರ್ಥ ಮಾಡಿಸುವ ಸ್ಥಿತಿಯಲ್ಲಿ ನೀನಿಲ್ಲ . ನಿನ್ನ ಪಾಲಿಗೆ ಒಮ್ಮೊಮ್ಮೆ ಅಮ್ಮ ಅರ್ಥವಾಗದವಳು!

೬೦ ವರ್ಷದ ಹಿಂದೆ ನಿನ್ನ ಸ್ಕೂಲಿಗೆ ಕಳುಹಿಸಿದ್ದೆ. ಸೂರ್ಯ ಮುಳುಗುವ ಹೊತ್ತು ಅದೇ ಕಬ್ಬಿಣದ ಗೇಟಿನಲ್ಲಿ ನಿಂತು ಸ್ಕೂಲಿನಿಂದ ಬರುವ ನಿನಗಾಗಿ ಕಾಯುತ್ತಿದ್ದೆ. ನಿನ್ನ ‘ಅಮ್ಮಾ’ ಕರೆಗಾಗಿ. ಆ ಸಂಜೆ ಹೊತ್ತಿನಲ್ಲಿ ಉಪ್ಪಿಟ್ಟು ಮಾಡಿ ನಿನಗಾಗಿ ಕಾಯುವುದೇ ನನಗೆ ಹೆಮ್ಮೆ. ಇದು ಒಡಲಾಳದ ದನಿ. ಎಲ್ಲವೂ ನನ್ನದೆಯ ನೆನಪು.

ಕಾಲ ನಿಲ್ಲುವುದಿಲ್ಲ. ಬದುಕು ಚಲಿಸುತ್ತದೆ. ಮನುಷ್ಯ ಇದಕ್ಕೆ ಹೊರತಲ್ಲ. ಎಷ್ಟೋ ಬಾರಿ ಇದನ್ನೆಲ್ಲಾ ನಿನ್ನ ಬಳಿ ಕುಳಿತು, ನಿನ್ನ ಕಣ್ಣುಗಳನ್ನು ನೋಡುತ್ತಲೇ ಹೇಳಬೇಕನಿಸುತ್ತೆ. ಆದರೆ, ನಿನ್ನ ದಿನನಿತ್ಯದ ಜಂಜಾಟದ ನಡುವೆ ಅಮ್ಮನ ಮಾತು ಕೇಳಲು ಅದೆಲ್ಲಿ ಸಮಯವಿರುತ್ತೆ? ಎಂದು ಎಲ್ಲವನ್ನೂ ಮೌನದೊಳಗೆ ಹೂತುಬಿಡ್ತೀನಿ.

ನಿಂಗೊತ್ತು ಅಮ್ಮನಿಗೆ ೮೦ ದಾಟಿದೆ. ಕೂದಲು ಬೆಳ್ಳಿಯಾಗಿದೆ. ಹಲ್ಲುಗಳು ಕಾಣಿಸುತ್ತಿಲ್ಲ. ಮುಖದಲ್ಲಿದ್ದ ನಗುನೂ ಮಾಸುತ್ತಿದೆ. ಕಣ್ಣುಗಳು ಗುಳಿಬಿದ್ದಿವೆ. ಬೆನ್ನು ಬಾಗಿದೆ. ಹಗಲಿಡೀ ತೋಟದೊಳಗೆ ಬದುಕು ಕಂಡಿದ್ದ ಅಮ್ಮ ಇಂದು ಊರುಗೋಲು ಹಿಡಿದು ನಡೆಯುತ್ತಿದ್ದಾಳೆ. ನಿನಗೆ ಹಿಡಿ ಅನ್ನ ಉಣಿಸಿದ ಆ ಬೆರಳುಗಳು ಇಂದು ನಡುಗುತ್ತಿವೆ. ನೀನು ನಿತ್ಯ ಮಾಡಿಸುವ ಆ ಜಳಕಕ್ಕೂ ನನ್ನ ಮೈ ಒಗ್ಗುತ್ತಿಲ್ಲ. ಪ್ರೀತಿಯಿಂದ ನೀಡಿದ ಹಿಡಿತುತ್ತು ನನಗೆ ರುಚಿಸುತ್ತಿಲ್ಲ.ಅರ್ಥವಿಲ್ಲದ ಕನಸುಗಳಿಗೂ ಜೀವವಿಲ್ಲ. ಪ್ರೀತಿಯ ಸವಿ ಅನುಭವಿಸುವ ಹೊತ್ತುನೂ ಕಳೆದುಹೋಗಿದೆ. ನಿನಗನಿಸಬಹುದು ಅಮ್ಮ ಅರ್ಥವಾಗದವಳು!, ಆದರೆ ಇದು ಅರ್ಥವಾಗದ ವಯಸ್ಸು. ಕಾಲ ಹಕ್ಕಿಯಂತೆ ಹಾರುತಿದೆ. ಈಗ ನನಗೆ ಕೊನೆಯ ಹೊತ್ತು.
೪೦ ವರ್ಷದ ಹಿಂದೆ ನೋಡಿದ ಕಸ್ತೂರಿ ನಿವಾಸದ ಹಾಡು ನೆನಪಾಗುತ್ತದೆ.

ಮೈಯನ್ನೇ ಹಿಂಡಿ ನೊಂದರೂ
ಕಬ್ಬು ಸಿಹಿಯ ಕೊಡುವುದು

ತೇಯುತಲಿದ್ದರೂ ಗಂಧದ ಪರಿಮಳ
ತುಂಬಿ ಬರುವುದು
ತಾನೇ
ಉರಿದರೂ ದೀಪವು ಮನೆಗೆ
ಬೆಳಕು ತರುವುದು....


ಪ್ರಕಟ: http://www.hosadigantha.in/epaper.php?date=12-08-2010&name=12-08-2010-13

11 comments:

ಸಾಗರದಾಚೆಯ ಇಂಚರ said...

tumbaa touching lekhana
maneya nenapu bantu

sunaath said...

ಹಣ್ಣೆಲೆ ಕಳಚುವಾಗ ಹಸಿರೆಲೆ ನಗುತ್ತಿರುತ್ತದೆ. ಇದುವೇ ಜೀವನ. ಒಂದು ಭಾವಪೂರ್ಣ ಲೇಖನಕ್ಕಾಗಿ ಅಭಿನಂದನೆಗಳು.

Anonymous said...

waw....ಮಾಗಿದ ವಯಸ್ಸಿನ ಭಾವನೆಗಳ ಚಿಕ್ಕದಾದ ಚೊಕ್ಕದಾದ ನಿರೂಪಣೆ.

ಜಲನಯನ said...

ಮನದ ಕದವ ತಟ್ಟವುದು ಅಂದರೆ ಇದೇ ಏನೋ...ಚನ್ನಾಗಿದೆ..ಅಮ್ಮನ ಮನದಾಳದಲ್ಲಿ ಮುದ್ದುಮಗಳು ಕುಳಿತು ಮಾತಹೊರಡಿಸಿ ಬರೆದರೆ..ಈ ಲೇಖನವಾಗುತ್ತೆ...ಅಮ್ಮನ ಆರೋಗ್ಯಕ್ಕೆ ಶುಭ ಹಾರೈಕೆ ಚಿತ್ರಾ

ಆನಂದ said...

ನಾನೂ ನಮ್ಮಮ್ಮಂಗೆ 'ನಿನಗರ್ಥವಾಗಲ್ಲಮ್ಮ, ಈಗ ಬೇಡ' ಅಂತ ಹೇಳ್ತಿರ್ತೀನಿ.
ಅವಳೂ, 'ನಿಂಗೊತ್ತಾಗಲ್ಲ, ಈಗ್ಲೇ ಸರಿ' ಅಂತ ಹೇಳ್ತಿರ್ತಾಳೆ.
ನಮ್ಮನೇಲಿ ಇಬ್ಬರಿಗೂ ಮತ್ತೊಬ್ಬರು ಅರ್ಥವಾಗಲ್ಲ... ( ಮನೇಲಿ ಮದುವೆ ವಿಚಾರ ನಡೀತಿದೆ ) :-)

ಲೇಖನ ಚೆನ್ನಾಗಿದೆ

ಸುಷ್ಮಾ ಮೂಡುಬಿದಿರೆ said...

ತುಂಬಾ ಚೆನ್ನಾಗಿ ಬರೆದಿದ್ದೀರಿ ಅಕ್ಕಾ...ಇದಕ್ಕಿಂತ ಹೆಚ್ಚು ಏನು ಹೇಳಲೂ ತೋಚುತ್ತಿಲ್ಲ...ಮನಸ್ಸನ್ನ ಹಿಡಿದಿಟ್ಟು ಯೋಚಿಸುವಂತೆ ಮಾಡಿದೆ.. ಅಭಿನಂದನೆಗಳು.,

shridhar said...

Iduve Jeeva .. Iduve Jeevana ...

ಸುಧೇಶ್ ಶೆಟ್ಟಿ said...

bhaavukavaagittu baraha chithra avare....

Ambika said...

Superr...Nanage tumba tumba ishtavaayitu..

rashmi said...

saralavada padagala balake,..sogasada niroopane

rashmi said...
This comment has been removed by the author.