Sunday, October 3, 2010

ನಿನ್ನ ಅಪ್ಪಾ ಅನ್ತೀನಿ...


ಅಂದಿನವರೆಗೆ ಅಪ್ಪಾ ಎಂಬ ಎರಡಕ್ಷರವನ್ನೇ ದ್ವೇಷಿಸುತ್ತಿದ್ದೆ. ಅಪ್ಪನ ಕುರಿತು ಬರೆಯಬೇಕಾದಾಗ, ಅಪ್ಪನ ಕುರಿತು ಹೇಳಬೇಕಾದಾಗ ಅಲ್ಲಿ ಭಾವಗಳಿಗೆ ಜೀವವೇ ಇರಲಿಲ್ಲ. ಏಕೆಂದರೆ ಅಪ್ಪನಾಗಬೇಕಾದವನು ಅಪ್ಪನ ಜವಾಬ್ದಾರಿ ನಿಭಾಯಿಸಲೇ ಇಲ್ಲ. ಮಗಳ ಕನಸುಗಳಿಗೆ, ಅವಳ ಸುಂದರ ಭಾವಗಳಿಗೆ ಜೀವ ನೀಡಲೇ ಇಲ್ಲ. ಅಂದು ಅಮ್ಮನ ಮಡಿಲಿಗೆ ಬಿದ್ದಾಗ ಆತ ಇನ್ಯಾರೋ ಕುತ್ತಿಗೆಗೆ ಮತ್ತೆ "ತಾಳಿ'ಯಾಗಿದ್ದ!

ಇಂದು ನಿನ್ನನ್ನೇ ಅಪ್ಪ ಎಂದು ಕರೆಯುತ್ತಿದ್ದೇನೆ. ಈವರೆಗೆ ನನ್ನ ಬಾಯಿಂದ ಹೊರಬೀಳದ ಅಪ್ಪಾ ಎಂಬ ಎರಡಕ್ಷರದ ಸುಂದರ ಸಂಬಂಧಕ್ಕೆ ಜೀವ-ಭಾವ ಕೊಟ್ಟಿದ್ದು ನೀನೇ. ನೀನು ಪುಟ್ಟೀ ಅಂತ ಕರೆದಾಗಲೆಲ್ಲಾ ಆ ನಿನ್ನ ಸುಂದರ ಕರೆಗೆ ಕರಗಿ ಖುಷಿಯಿಂದ ಕಂಗಳು ಒದ್ದೆಯಾಗುತ್ತಿದೆ, ದೇವ್ರ ಮೇಲೆ ಸಿಟ್ಟುಗೊಳ್ಳುತ್ತಿದ್ದೆ. ನಿನ್ನಂಥ ಒಳ್ಳೆ ಅಪ್ಪನ ಏಕೆ ಇಷ್ಟು ತಡವಾಗಿ ಕೊಟ್ಟೆ ಅಂತ!
ಹೆಣ್ಣೊಬ್ಬಳಿಗೆ ಅಮ್ಮನ ಆಸರೆ ಹೇಗೋ ಹಾಗೆಯೇ ಅಪ್ಪನಾಸರೆಯೂ ಬೇಕಲ್ವಾ? ನನ್ನ ಕ್ಲಾಸಿನ ಹುಡುಗಿಯರೆಲ್ಲ ಅಪ್ಪಾ..ಅಪ್ಪಾ..ಅಂಥ ಕರೆಯುವಾಗ, ತಮ್ಮ ಅಪ್ಪನ ಕುರಿತು ಹಿಗ್ಗಿನಿಂದ ಹೇಳುತ್ತಿರುವಾಗಲೆಲ್ಲಾ ನನ್ನಪ್ಪನಿಗೆ ಹಿಡಿಶಾಪ ಹಾಕುತ್ತಿದ್ದೆ. ನನಗೂ ಅಪ್ಪಾ ಬೇಕಿತ್ತು, ನನ್ನನ್ನು ಹೆಗಲ ಮೇಲೆ ಹೊತ್ತು ಪೇಟೆ ಸುತ್ತಿಸುವ ಅಪ್ಪಾ ಬೇಕಿತ್ತು ಎಂದನಿಸುತ್ತಿತ್ತು, ಏನು ಮಾಡುವುದು ಹೇಳು...ನನ್ನಪ್ಪ ಆವಾಗಲೇ ನನ್ನೆದುರಿನಿಂದ ಮರೆಯಾಗಿದ್ದ. ಅಪ್ಪನೆನಿಸಿಕೊಳ್ಳುವ ಕನಿಷ್ಠ ಅರ್ಹತೆಯನ್ನೂ ಕಳೆದುಕೊಂಡಿದ್ದ.

ಅದಕ್ಕೇ ನೋಡು ಅಪ್ಪಾ...ಈವಾಗ ನಾನು ನಿನ್ನ ಅಪ್ಪಾ ಅನ್ತೀನಿ. ಪುಟ್ಟ ಮಗು ಕೋಪಿಸಿಕೊಂಡಂತೆ ನಿನ್ನ ಜೊತೆ ಕೋಪಿಸಿಕೊಳ್ತೀನಿ. ಅದು ಕೊಡಿಸು, ಇದು ಕೊಡಿಸು ಅಂಥ ಹಠ ಹಿಡಿತೀನಿ. ನೋಡಿದವರಿಗೆ ನೀನು ನನ್ನ ಅಪ್ಪನೋ ಅಥವಾ ಮಾವನೋ ಅನ್ನೋ ಕನ್‌ಫ್ಯೂಸ್ ಹುಟ್ಟುಹಾಕ್ತೀನಿ. ನಿನ್ನ ನೋಡಿದ್ರೆ ಮಾವ ಅನ್ನೋ ಭಯ ಮೂಡಲ್ಲಪ್ಪ, ಅಪ್ಪ ಅನ್ನೋ ಪ್ರೀತಿ ಹುಟ್ಟುತ್ತೆ, ಮಮತೆ ಉಕ್ಕುತ್ತೆ, ಅಪ್ಪಾ ಸಿಕ್ಕಿದ್ದಾನೆ ಅನ್ನೋ ಗೌರವ, ಹೆಮ್ಮೆ ಮೂಡುತ್ತೆ. ಅದಕ್ಕೆ ನೋಡು ವೊನ್ನೆ ನಮ್ಮ ಡ್ರೈವರ್ ಮಾಮ, ನಾನು ನಿನ್ ಮಗಳೋ ಅಥವಾ ಸೊಸೆನೋ ಅಂಥ ಪ್ರಶ್ನೆ ಮಾಡಿದ್ರು. ನೀನು ತಂದುಕೊಡುವ ಚಾಕಲೇಟು, ಸೀರೆಗಳು, ಚೂಡಿದಾರ್ ಬಟ್ಟೆಗಳು, ಪ್ರತಿ ಶುಕ್ರವಾರ ತಂದುಕೊಡುವ ಎರಡು ವೊಳ ಮಲ್ಲಿಗೆ, ನನಗೆ ಸಣ್ಣ-ಪುಟ್ಟ ಜ್ವರ
ಬಂದ್ರೂ ನೀನು ಮಾಡಿಕೊಡುವ ಬಿಸಿ ಬಿಸಿ ಕಾಫಿ, ಆ ಹಳ್ಳಿ ಮದ್ದು ಯಾವ ಮಾವ ಮಾಡಿಕೊಡುತ್ತಾನೆ ಹೇಳು? ಅದಕ್ಕೆ ಮಾವನಂದ್ರೆ ನನಗೆ ಅಪ್ಪ.

ಜೀವನ ಅಂದ್ರೆ ಹೀಗೇ ಅಪ್ಪಾ...ಎಲ್ಲೋ ಮಿಸ್ ಆಗಿದ್ದು ಮತ್ತೆಲ್ಲೋ ಸಿಗುತ್ತೆ. ಸಣ್ಣವಳಿರುವಾಗ ನನ್ನಪ್ಪನ ಮಿಸ್ ಮಾಡ್ಕೊಂಡೆ. ಆವಾಗ ಅತ್ತು ಕರೆದರೂ ಆ ದೇವ್ರು ಅಪ್ಪನ ಕೊಡಲೇ ಇಲ್ಲ. ಈಗ ನೀನು ಸಿಕ್ಕಿದ್ದಿ, ಸಾಕು...ಎನಗೆ. ಇನ್ನೇನು ಬೇಕು ನೆಮ್ಮದಿಯ ಸಂಸಾರಕ್ಕೆ, ಭರವಸೆಯ ನಾಳೆಗಳಿಗೆ?

ಪ್ರಕಟ: http://hosadigantha.in/epaper.php?date=08-26-2010&name=08-26-2010-15

18 comments:

ತೇಜಸ್ವಿನಿ ಹೆಗಡೆ said...

Very Touchy.. Liked it very much :) ElrigU intha magaLu haagU appa siguvanthaagli..

ಸಾಗರದಾಚೆಯ ಇಂಚರ said...

ಧರಿತ್ರಿ,

ಭಾವನೆ ತುಂಬಿದ ಬರಹ,

ಪ್ರತಿ ಹೆಣ್ಣು ಮಕ್ಕಳು ಮಾವನನ್ನೇ ಅಪ್ಪ ಎಂದು ಅಂದುಕೊಂಡರೆ, ಪ್ರತೀ ಮಾವನು ಸೋಸೆಯನ್ನೇ ಮಗಳೆಂದು ಕರೆದರೆ,

ಪ್ರತೀ ಅತ್ತೆಯೂ ಮಗಳಂತೆ ಸೊಸೆಯನ್ನು ಮುದ್ದಡಿದರೆ ನೆಮ್ಮದಿ ನಮ್ಮ ಮನೆಯ ಬುಡದಿಂದ ಹೊರ ಹೋಗಲು ಸಾದ್ಯವೇ ಇಲ್ಲ

ನಿಮ್ಮ ಮಾತುಗಳು ಒಂದು ಪಾಠ ವಿದ್ದಂತೆ

ಮನಸು said...

chitra,
bahaLa dinagaLa nantara barita iddeeya oLLeya bhaava tumbida lekhana needi manassige mudaveniside.

inta magaLu ellarigu sigali

ಸವಿಗನಸು said...

ಭಾವಪೂರ್ಣ ಬರಹ,

PARAANJAPE K.N. said...

ತ೦ಗೀ, ನಿನ್ನ ಭಾವನೆಗಳ ಬಗ್ಗೆ ಮಾತೇ ಹೊರಡದಾಗಿದೆ. ಜೀವನದ ಅತಿ ಕಷ್ಟ ದಿನ ಗಳನ್ನು ಮತ್ತೆ ನೆನಪಿಸಿಕೊಳ್ತಿ ದೀಯಾ, ಒಳ್ಳೆಯ ದಿನಗಳು ಬರಲಿ ಎ೦ದು ಹಾರೈಕೆ.

ಸೀತಾರಾಮ. ಕೆ. / SITARAM.K said...

:-)

ಸುಮ said...

ಭಾವಪೂರ್ಣ ಬರಹ ಚೆನ್ನಾಗಿದೆ. ಎಲ್ಲ ಸಂಸಾರದಲ್ಲೂ ಇದೇ ರೀತಿಯ ಸಾಮರಸ್ಯವಿದ್ದರೆ ಚೆನ್ನ.

ಶರಶ್ಚಂದ್ರ ಕಲ್ಮನೆ said...

ಚಿತ್ರಾ, ಭಾವಪೂರ್ಣ ಬರಹ... ನಿಮ್ಮ ಜೀವನ ಹೀಗೆ ಸಂತಸದಾಯಕವಾಗಿರಲಿ....

ಅನಂತ್ ರಾಜ್ said...

"..ಎಲ್ಲೋ ಮಿಸ್ ಆಗಿದ್ದು ಮತ್ತೆಲ್ಲೋ ಸಿಗುತ್ತೆ.." ಇ೦ತಹ ಭರವಸೆಗಳ ರಥದಲ್ಲಿಯೇ ಜೀವನ ಯಾತ್ರೆ ಸಾಗುತ್ತಿರುತ್ತದೆ. ಹೃದಯಸ್ಪರ್ಶಿ ಬರಹ..ಧನ್ಯವಾದಗಳು.


ಅನ೦ತ್

Guruprasad said...

ಭಾವ ಭಾವನೆ ತುಂಬಿದ ಒಳ್ಳೆಯ ಬರಹ..... ಹಳೆಯ ದಿನಗಳನ್ನು ನೆನೆಸಿಕೊಳ್ಳದೆ...ಸಿಕ್ಕಿರುವ ಈ ಹೊಸ ಪ್ರೀತಿಯನ್ನು ಅನುಭವಿಸು....

ಪ್ರಗತಿ ಹೆಗಡೆ said...

ಮನ ಮಿಡಿಯುವ ಬರಹ...
ವಂದನೆಗಳು...

ವನಿತಾ / Vanitha said...

very touching..
Have a good time :-).

umesh desai said...

ಧರಿತ್ರಿ ಎಂದಿನಂತೆ ಸೊಗಸಾದ ಬರಹ

Shweta said...

akka,
you are right....
"..ಎಲ್ಲೋ ಮಿಸ್ ಆಗಿದ್ದು ಮತ್ತೆಲ್ಲೋ ಸಿಗುತ್ತೆ.." ishta aaytu..

Umesh Balikai said...

Nice write-up dharitri.. haudu... ello kaledikondiddanna innello padedukoltivi... nim maatu nija..

dhanyavaadagalu

ಮನದಾಳದಿಂದ............ said...

ಧರಿತ್ರಿ,
ಮನ ಮುಟ್ಟುವ ಬರಹ.........
ತುಂಬಾ ಇಷ್ಟ ಆಯ್ತು.

ದೀಪಸ್ಮಿತಾ said...

ಹೃದಯಸ್ಪರ್ಶಿ ಲೇಖನ

ಚುಕ್ಕಿ said...

"..ಎಲ್ಲೋ ಮಿಸ್ ಆಗಿದ್ದು ಮತ್ತೆಲ್ಲೋ ಸಿಗುತ್ತೆ.." ಖಂಡಿತ ಸಿಗುತ್ತೆ ಅಲ್ವಾ ಅಕ್ಕ??? ಆ ಭರವಸೆಯಲ್ಲೇ ನಾನೂ ಬದುಕುತ್ತಿದ್ದೀನಿ...