ನಿನ್ನೆದೆಯ ಉಸಿರ ಜಾಡಿನಲ್ಲಿ ಹಾಗೇ ಬೆಚ್ಚಗೆ ಕನಸುಗಳನ್ನು ಹರಡಿ ಬಿಡುವಾಸೆ. ಧುತ್ತೆಂದು ಎಲ್ಲಿಂದಲೋ ಬಂದು ಎರಗುವ ಆ ಕೆಂಪು ಕಣ್ಣಿನ ಸಿಟ್ಟು, ಸ್ವಾತಿಮುತ್ತಿನಂತೆ ತಂಪೆರಗುವ ಪ್ರೀತಿಯ ಅನನ್ಯ ಅನುಭೂತಿ, ಮೌನವಾಗಿ ಶೂನ್ಯದತ್ತ ಕಂಗಳು ನೆಟ್ಟರೆ ಎದೆಬಡಿವ ವಿಷಾದ, ಎಲ್ಲೋ ದೂರದಿ ತೇಲಿಬರುವ ಅಲೆಗಳನ್ನು ಕಂಡಾಗಿನ ನೋವು-ನಲಿವಿನ ಬಿಂಬ...ಬದುಕಿನ ವೈರುಧ್ಯಗಳ ತಾಕಲಾಟ...ಎಲ್ಲವನ್ನೂ ನಿನ್ನೆದೆಯ ಉಸಿರ ಜಾಡಿನಲ್ಲಿ ಹರಡಿಬಿಡುವಾಸೆ. ಆ ನಿನ್ನ ನಿಡುದಾದ ಉಸಿರಿನ ತಂಗಾಳಿಯಲ್ಲಿ ನಿನ್ನಂತರ್ಯದ ಬೆಳಕಬಿಂಬ ಕಾಣುವಾಸೆ.
ಮನುಷ್ಯ ಹೀಗೇನೆ ಅಲ್ವಾ? ಭಾವನೆಗಳ ತಾಕಲಾಟದಲ್ಲಿ ತಾನೂ ಗೆದ್ದು ಸೋಲುವವ, ಸೋತು ಗೆಲ್ಲುವವ! ನಾನೂ ವೈರುಧ್ಯಗಳಿಗೆ ಹೊರತಾಗಿಲ್ಲ ಬಿಡು. ನಿನ್ನೆದೆಯ ಕಣ್ಣ ತೆರೆದು ಒಂದು ಕ್ಷಣ ನಿಟ್ಟುಸಿರು ಬಿಟ್ಟುಬಿಡು. ಆ ಉಸಿರ ಜಾಡಿನಲ್ಲಿ ಕಂಗಳ ಹನಿಬಿಂದುವನ್ನು ಹಾಗೇ ಹರಿಯಬಿಡುವೆ...ನೀನು ಇಷ್ಟಪಡುವುದಾದರೆ! ನಿನ್ನೆದೆಯ ಹೊರತು ಅದಕ್ಕೆಲ್ಲಿದೆ ಜಾಗ? ಯಾರೋ ಉಸುರುವ ಮಧುರ ಧ್ವನಿಯ ಅದ್ಯಾವ ಹಾಡುಗಳೂ ನನ್ನ ಕಿವಿಗೆ ಇಂಪನಿಸುತ್ತಿಲ್ಲ, ನೀನು ಉಸುರುವ ಅದ್ಯಾವ ಮಾತುಗಳೂ ಸವಿಯೆನಿಸುತ್ತಿಲ್ಲ, ನಿನ್ನ್ಯಾವ ಕಣ್ಣ ನಗುವೂ ನನ್ನ ಮೂಗುತಿಯಡಿಯಲ್ಲಿ ನಗೆಮಿಂಚು ಮೂಡಿಸಿಲ್ಲ...ನಿನ್ನದೆಯ ನಿಡುದಾದ ಉಸಿರ ಬಿಟ್ಟು!
ಮೌನವಾಗಿ ನೆಲವ ತಬ್ಬುವ ವೊದಲು ಭಾವಕೊಡು ಈ ಬಿಂಬಗಳಿಗೆ, ಜೀವ ಕೊಡು ವೈರುಧ್ಯಗಳಿಗೂ! ಈ ವಿಷಾದ, ನೋವು, ಮೌನ, ಏಕಾಂತ, ಒಂಟಿತನ, ಅಸಹನೆ, ಸಿಟ್ಟು, ಬದುಕಿನ ವಿಮರ್ಶೆ... ಎಲ್ಲವುಗಳಿಂದಲೂ ಕಳಚಿಬಿಡುವೆ...ಒಂದು ಪುಟ್ಟ ನಿಟ್ಟುಸಿರಿನೊಂದಿಗೆ! ಇನ್ನು ನಿನ್ನ ಅಂತರ್ಯದ ನಿರ್ಧಾರಕ್ಕೆ ಬಿಟ್ಟಿದ್ದು.
****
ಪ್ರಕಟ: http://hosadigantha.in/epaper.php?date=06-24-2010&name=06-24-2010-14
Subscribe to:
Post Comments (Atom)
8 comments:
ಡಿಯರ್ ಮೇಡಂ,
``ನಿನ್ನ್ಯಾವ ಕಣ್ಣ ನಗುವೂ ನನ್ನ ಮೂಗುತಿಯಡಿಯಲ್ಲಿ ನಗೆಮಿಂಚು ಮೂಡಿಸಿಲ್ಲ...ನಿನ್ನದೆಯ ನಿಡುದಾದ ಉಸಿರ ಬಿಟ್ಟು!`` ಎಂತಹ ಮೋಹಕ ಭಾವನೆಯ ಕನಸು!!!
ತುಂಭಾ ಚೆನ್ನಾಗಿದೆ ನಿಮ್ಮ ಲೇಖನ. ಇ ಲೇಖನಕ್ಕೆ ಸ್ಪೂರ್ತಿ ಯಾರು ಅಂತ ಖಾಸಗಿಯಾಗಿ ಕೇಳಬಹುದಾ ಮೇಡಂ?
ಧನ್ಯವಾದಗಳೋಂದಿಗೆ
ಕನಸು
ವಾವ್..........
ಎಷ್ಟೊಂದು ಸುಂದರ ನುಡಿಗಳು...........
ಚೆನ್ನಾಗಿದೆ.
ನಿನ್ನೆಯ "ದಿಗಂತ" ದಲ್ಲಿ ಓದಿದೆ, ತು೦ಬ ಚೆನ್ನಾಗಿದೆ
ಚಿತ್ರಾ,
‘ಸಂತೋಷ’ ಸಿಗುವ ರೀತಿಯನ್ನು ಚೆನ್ನಾಗಿ ಬಣ್ಣಿಸಿದ್ದೀರಿ!
ದಟ್ಟನೆಯ ಭಾವನೆಗಳ ಸೋನೆಮಳೆಯಬರಹ ಮನಸ್ಸನ್ನು ಮುದಗೊಳಿಸಿ ಪ್ರಫುಲ್ಲವಾಗಿಸಿತು.
ಅತಿ ಸುಂದರ ಭಾವಗಳ ಸುಂದರ ಅಭಿವ್ಯಕ್ತಿ.ಇದು ಕವನವೋ,ಲೇಖನವೋ,ಕವನ ರೂಪೀ ಲೇಖನವೋ ಒಂದೂ ತಿಳಿಯದೆ,ದಂಗಾಗಿ ,ನೋಡುತ್ತಾ ಕುಳಿತಿದ್ದೇನೆ!ಹಾರ್ದಿಕ ಅಭಿನಂದನೆಗಳು.
ತುಂಬಾ ಸುಂದರ ಸಾಲುಗಳು
ಓ ಗೆಳತಿ, ನೀನೆಷ್ಟು ಭಾವನಾ ಜೀವಿ
Post a Comment