Friday, April 2, 2010

ಭಾವವೇ ನನ್ನದೆಯ ಕದ ಬಡಿಯದಿರು

ತುಂಬಾ ಸಲ ಹಾಗನಿಸಿದೆ, ಥತ್! ಈ ಭಾವಗಳನ್ನು ಹೆಕ್ಕಿ ಬಿಸಾಡಿಬಿಡಬೇಕೆಂದು. ಇದೇನು ಹುಚ್ಚು ಹುಡುಗಿ, ಭಾವಗಳನ್ನು ಹೊರತುಪಡಿಸಿದ ಬದುಕಿದೆಯೇ? ಎಂದು ನೀನು ಕೇಳಬಹುದು. ಹೌದು, ಭಾವಗಳನ್ನು ತುಂಬಾ ಪ್ರೀತಿಸಿದ್ದೆ, ಅವುಗಳನ್ನು ಹಾಗೇ ಬಾಚಿ ತಬ್ಬಿಕೊಂಡು ಮುದ್ದಾಡಿದ್ದೆ. ಒಂದೊಂದು ಸಲ ಪುಟ್ಟ ಮಗು ಥರ ಕಣ್ತುಂಬ ತುಂಬಿಕೊಂಡು ನನ್ನೆಲ್ಲಾ ವಿಷಾದಗಳಿಗೆ ವಿದಾಯ ಹೇಳಿದ್ದೆ. ನನ್ನದೆಯ ಬಡಿತದಲ್ಲೂ ಈ ಭಾವಗಳಿಗೆ ದನಿಯಾಗಿದ್ದೆ. ಇದು ಸುಳ್ಳಲ್ಲ, ನಿನ್ನಾಣೆಗೂ ನಿಜ.

ಆದರೆ, ಯಾಕೋ ಇಂದು ಈ ಭಾವಗಳೇ ಬೇಡ, ಎಲ್ಲೋ ದೂರಕ್ಕೆ ಬಿಸಾಕಿಬಿಡೋಣ ಅನಿಸ್ತಾ ಇದೆ. ನನ್ನೆದೆಯಲ್ಲಿ ನೋವಿನ ಎಳೆಗಳನ್ನು ಬಿಚ್ಚೋ ಬದಲು, ಹಾಗೇ ನನ್ನನ್ನು ಒಂಟಿಯಾಗಿ ಬಿಟ್ಟುಬಿಡು, ನನ್ನ ಪಾಡಿಗೆ ನಾನು ಇದ್ದುಬಿಡ್ತೀನಿ, ನಾನು ಯಾರಿಗೂ ಡಿಸ್ಟರ್ಬ್ ಕೊಡೊಲ್ಲ, ನನ್ನ ಮಾತಿಗೂ ಭಾಷೆಯಿಲ್ಲ, ಮೌನಕ್ಕೆ ಶರಣಾಗಿದ್ದೀನಿ. ನನ್ನದೆಯ ಕದ ಬಡಿಯದಿರು, ಅಲ್ಲಿ ನಾನು ಪ್ರೀತಿಸಿದ ಭಾವಗಳಿಗೆ ಜಾಗ ಕೊಡೊಲ್ಲ ಅಂತ ಸಿಟ್ಟಿನಿಂದ ಹೇಳುತ್ತಿದ್ದೇನೆ.

ತುಂಬಾ ಸಲ ಮನುಷ್ಯ ಹಾಗೆನೇ ಅಲ್ವಾ? ಒಂಟಿಯಾಗಿ ಇದ್ದುಬಿಡೋಣ ಅನಿಸುತ್ತೆ. ಭಾವಗಳ ಜೊತೆ-ಜೊತೆಗೇ ಜೀವಿಸೋ ಮನುಷ್ಯ ದಡಕ್ಕಂತ ಅಲೆಗಳಂತೆ ಬರುವ, ತಾನೇ ಎತ್ತಿ ಮುದ್ದಾಡಿದ ಆ ಭಾವಗಳಿಂದ ದೂರ ಇದ್ದುಬಿಡ್ತಾನೆ ಅಲ್ವಾ? ಆ ಕ್ಷಣ ಭಾವಗಳೆಂದರೆ ಸತ್ತು ಮಣ್ಣಾಗಿ ಹೋದ ತರಗಲೆಗಳಂತೆ! ಥತ್! ಹೀಗೆ ಆಗಬಾರದು,ಆದರೂ ಏಕಾಂಗಿಯಾಗಿರಬೇಕೆಂಬ ಹಂಬಲ. ಸುತ್ತಲ ಜಗತ್ತನ್ನು ಮರೆತು ತಾನೇ ಮೌನದ ಕನಸು ಕಾಣಬೇಕು, ಬದುಕಿನ ತರಂಗಗಳನ್ನು ಮೀರಿ ತಾನೊಬ್ಬನೇ ಸಂಭ್ರಮಿಸಬೇಕು, ನನ್ನೊಳಗಿನ ಕತ್ತಲು-ಬೆಳಕಿಗೆ ತಾನೊಬ್ಬನೇ ಬೆಳದಿಂಗಳಾಗಬೇಕು, ತನ್ನೆದುರು ಕಾಣುವ ಹಸುರು ಹಾಸಿನ ಮೇಲೆ ಏಕಾಂಗಿಯಾಗಿ ಕವಿತೆಯಾಗಬೇಕು, ಎಲ್ಲೋ ದೂರದ ನೀಲಿ ಸಮುದ್ರ ದಂಡೆಯಲ್ಲಿ ಒಂಟಿಯಾಗಿ ಮರಳಾಟ ಆಡಬೇಕು, ಅಲ್ಲಿ ಆಡೋ ಪುಟ್ಟ ಮಕ್ಕಳ ಜೊತೆ ನಾನೂ ಪುಟ್ಟ ಮಗುವಾಗಿಬಿಡಬೇಕು. ಈ ಭಾವಗಳ ಗೋಜೇ ಬೇಡಪ್ಪಾ ಅನಿಸಿಬಿಡುತ್ತೆ.

ಈ ಎಲ್ಲಾ ಭಾವ ತುಮುಲಗಳನ್ನು ಸ್ವಲ್ಪ ದಿನದ ಮಟ್ಟಿಗಾದರೂ ಗಂಟು ಕಟ್ಟಿ ಅಟ್ಟದ ಮೇಲೆ ಹಾಕುವುದು ಸ್ವಲ್ಪ ಜಾಣತನ ಇರಬಹುದೇನೂ ! "ಇಷ್ಟೊಂದು complex ಆಗ್ ಬೇಡ" ಅನ್ನೋ ನಿನ್ನ ಕಾಳಜಿ ಕೆಲವೊಂದು ಸಲ ಸರಿ ಅನ್ನಿಸಿದ್ರೂ , ಯಾವುದೂ ಒಂದು ಅಜ್ಞಾತಕ್ಕೆ ಹೋಗುವ ಆಸೆ. ನನ್ನ ಎಲ್ಲಾ ಮನದ ವಿಮರ್ಶೆ ಅಂತಿಮವಾಗಿ ನನ್ನ ಭಾವಕ್ಕೆ ಬಿಟ್ಟಿದ್ದು, ಪಕ್ಕಾ monopoly.

8 comments:

Anonymous said...

ಭಾವಗಳನ್ನ ಬಿಟ್ಟುಬಿಡ್ತೀನಿ ಅನ್ನೋ ಭಾವಕ್ಕೊಳಗಾದ್ರೆ ,
ಮತ್ತೊಂದು ಭಾವಕ್ಕೆ ಬಿದ್ದಂತೆಯೇ ಅಲ್ವಾ ? :)

ಚೆನ್ನಾಗ್ ಬರ್ದಿದೀರ :)

ಮನಸು said...

ಭಾವನೆ ನಮ್ಮನ್ನ ಬಿಟ್ಟು ಹೋಗೋಲ್ಲ ಎಲ್ಲಾ ಸಂದರ್ಭದಲ್ಲಿ ಒಂದೊಂದು ತರನಾದ ಭಾವನೆಗಳು ನಮ್ಮಲ್ಲಿ ಅಡಗಿರುತ್ತೆ .... ಗಂಟು ಮೂಟೆ ಕಟ್ಟೋದು ಹೇಗೆ ನನಗೆ ಗೊತ್ತಾಗುತ್ತಿಲ್ಲ.....ಹಹಹ... ತುಂಬಾ ಚೆನ್ನಾಗಿ ಬರಹ...

ಸುಧೇಶ್ ಶೆಟ್ಟಿ said...

ಭಾವಗಳ ಸೆಲೆಯಿ೦ದ ತಪ್ಪಿಸಿಕೊಳ್ಳುವುದು ಥು೦ಬಾ ಕಷ್ಟ :)

ಕೊನೆಯ ಪಾರ ತುಂಬಾ ಇಷ್ಟ ಆಯಿತು. :)

ಸೀತಾರಾಮ. ಕೆ. / SITARAM.K said...
This comment has been removed by the author.
ಸೀತಾರಾಮ. ಕೆ. / SITARAM.K said...

ಭಾವಗಳನ್ನು ಬಿಟ್ಟಿರಲಾಗದು. ಒ೦ಟಿಯಾಗಿದ್ದಾಗ ಭಾವಗಳ ತೀಕ್ಷಣತೆ ಇನ್ನು ಹೆಚ್ಚು. ಮಾತಿಲ್ಲದ ಮೌನದಲ್ಲಿರುವವರ ಮನದಲ್ಲಿ ಭಾವಗಳು ಸುನಾಮಿಯೆನ್ನೆಬ್ಬಿಸುತ್ತಿರುತ್ತದೆ. ಮಗುವಾಗಿ ಆಡುವಾಗಲೂ ಭಾವಗಳು ತದುಕುತ್ತಿರುತ್ತವೆ ಮನದ೦ಗಳದಲ್ಲಿ. ಇನ್ನು ಮಗುವಿನ ಮುಗ್ಧತೆಯ ಭಾವ, ಗದ್ದಲದಲ್ಲಿ ಕಳೆದುಹೋಗುವ೦ತಾ ಭಾವ, ಏಕಾ೦ತದ ಸುನಾಮಿ ಭಾವ, ಅಪ್ತರೊಡನೆಯ ಮಿಡಿತದ ಭಾವ, ಪ್ರೇಮದ ಭಾವ, ತೊಳಲಾಟದ ಭಾವ, ಇನ್ನೂ ಇತ್ಯದಿ ಭಾವಗಳ ಆಯ್ಕೆ ನಮಗೆ ಬಿಟ್ಟದ್ದು. ಆದರೇ ಪರಿಸ್ಥಿತಿಗನುಗುಣವಾಗಿ ಅವತರಿಸುವ ಭಾವಗಳನ್ನು ಬಿಟ್ಟಿರಲಾಗದು.
ಚೆ೦ದದ ಭಾವಪೂರ್ಣ ಲೇಖನ.

ವಿ.ರಾ.ಹೆ. said...

yes, exactly.!

ಸಾಗರದಾಚೆಯ ಇಂಚರ said...

ಭಾವನೆಗಳ ಬಗೆಗಿನ ನಿಮ್ಮ ಬರಹ ತುಂಬಾ ಇಷ್ಟಾ ಆಯಿತು

Anonymous said...

nice one..