Thursday, March 25, 2010

ಅಂತರಾಳ ಅಣಕವಾಟ


ಈ ಭಾವವನ್ನು ಎಲ್ಲೂ ಅಡಗಿಸಲು ಸಾದ್ಯವಿಲ್ಲವೇನೂ .. ನನ್ನ ಖುರ್ತಾ ಜೀಬಿನಲ್ಲಿ, ಜೋಡಿಸಿಟ್ಟ ಪುಸ್ತಕಗಳ ನಡುವೆ, ನನ್ನ ಕೀ ಬೋರ್ಡ್ ನ ಸಂದಿಗಳಲ್ಲಿ, ಅಣ್ಣನ ಸಿಗರೇಟು ಪ್ಯಾಕ್ ನಲ್ಲಿ ಕೊನೆಗೆ ಈ ಅಕ್ಷರಗಳ ಧೀರ್ಘ, ಒತ್ತು, ಸುಳಿಗಳ ನಡುವೆ ... ಛೆ !! ಎಷ್ಟೇ ಅಡಗಿಸಿಟ್ಟರು ಮತ್ತೆಲ್ಲೋ ಎದ್ದು ಬಂದು ತಲೆಗೆ ಮೊಟಕುತ್ತಿರುತ್ತವೆ. ಎಲ್ಲೋ ಓದಿದ ನೆನಪು - ಭಾವ , ಅವರವರ ಭಾವಕ್ಕೆ ಬೇಕಿದ್ದರೆ ಮಾತ್ರ. ಹೌದು ಈ ಭಾವ ನನಗೆ ಬೇಕಾಗಿತ್ತೇನೋ .
ಗಣಿತಕ್ಕೂ-ಕಾವ್ಯಕ್ಕೂ, ನನಗೂ-ನಿನಗೂ ಎಲ್ಲಕ್ಕೂ ಸಾಮ್ಯತೆ ತೋರಿ , ನಾನೇ ಪಯಣ ಬೆಳಸದ ನನ್ನ ದಾರಿಯಲ್ಲಿ ನನಗಿಂತಲೂ ಮುಂದೆ ಹೋಗಿ ನಿಂತ ದಾರಿ ಸೂಚಕ, ಈ ತರಹದ ಅತೀ ಭಾವುಕತೆಯನ್ನು ಯಾವುದೂ ಅಗೊಚಾರಕ್ಕೆ ಹರವಿಸಿದ ಹರ ಹರ ಮಹಾದೇವ. ಆ ನಿನ್ನ ಕಚ್ಚಾತನ, ಹುಳಿ, ಒಗರು, ಸ್ವಲ್ಪೇ ಸ್ವಲ್ಪ ತಿಕ್ಕಲುತನ , ಉಡಾಫೆ , ಹುಂಬತನ, ಎಷ್ಟು ಬಗೆದರು ತೀರದ ಪ್ರೀತಿ, ಪುಸ್ತಕಗಳ ನಡುವೆ ಮುಚ್ಚಿಟ್ಟ ನಿನ್ನ ಭಾವ ಚಿತ್ರಗಳು ಎಲ್ಲವೂ ಯಾವುದೂ ಹಳೆ ಮೌನವನ್ನು ನೆನಪಿಸುವ ಮತ್ತೊಂದು ಮೌನ.


ನಾ ಉಪಯೋಗಿಸೂ ಬಾಚಣಿಕೆ, ಪರ್ಸ್ , ಕಪ್ಪು ವಾಚು, ಕುರ್ತಾ ಹೀಗೆ ಇಂತಿಷ್ಟೇ ನನ್ನನ್ನು ಗುರುತಿಸಿಕೊಂಡು ನನ್ನ ಪಾಡಿಗೆ ನಾನಿದ್ದಾಗ, ದಕ್ಕನೆ ನನ್ನ ಎಲ್ಲಾ ಭಾವಗಳಿಗೆ ಪರಿಧಿ ಹಾಕಿದ ದೌಲತ್ತು ನಿನಗೇ ಇರಲಿ. ನನ್ನೆಲ್ಲ ನಗು , ಸಿಟ್ಟು -ಸೆಡವು, ತುಂಟಾಟಿಕೆ ಎಲ್ಲವನ್ನು ಅಕ್ಷರಗಳಲ್ಲಿ ಇಳಿಸುವುದು ಏನೂ ಒಂದು ತರಹ ವಿಚಿತ್ರ ಸಂಕಟ. ಯಾವುದೂ ಒಂದು ಹಳೆಯ ಹತಾಶೆ, ನಿನ್ನ ಕಂಡಾಗ ಯಾವುದೂ ಮಸಲತ್ತು ಮಾಡಿದವರ ಹಾಗೆ ನಗುವಾಗಿ ಗಾಳಿಗೆ ತೂರಿ ಹೋದಂತೆ ಅನುಭವ.


ಮತ್ತೆ ನಿನ್ನೊಂದಿಗೆ ಅದೇ ಹಳೆ ಪ್ರಾಮಾಣಿಕ ಕ್ಷಣಗಳನ್ನು ಮತ್ತೊಮ್ಮೆ ಪುರಸ್ಕರಿಸಿಬಿಡುವಾಸೆ. ಕೊನೆಗೆ ಸಿಕ್ಕಷ್ಟು ಬಾಚಿ-ಬಳಿದು ಮತ್ತಷ್ಟು ಕನಸುಗಳ ಹವಣಿಕೆಯಲ್ಲಿ ಕಾಯುವ ಭಾವ ಸ್ವಲ್ಪ ನಿರಾಳ . ಹವಣಿಸಿದೆಲ್ಲವು ಸಿಕ್ಕೊಡನೆ ಏಕ್ ಧಮ್ ಸೂಪರ್ ಹೈ-ವೇ, ಮತ್ತಷ್ಟು ಉದ್ದದ ಭಾವ. ತಿರುಗಿ ನೋಡಿದಾಗ ಪಯಣ ಇನ್ನು ಶುರುವಾಗಿಲ್ಲವೇನೂ..!! ಯಾವುದೂ ಒಂದು ನಾದಕ್ಕೆ ತಿರುಗಿ ಹೋಗುವ ಹುನ್ನಾರ


Photo: Santhosh Chidambar

7 comments:

Unknown said...

ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ
ಕರೆಯುವೆ ಕೈ -ಬೀಸಿ ,
ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು
ಪ್ರೀತಿಯ ಮಳೆ ಸುರಿಸಿ ................

ಸೀತಾರಾಮ. ಕೆ. / SITARAM.K said...

ಭಾವಗಳನ್ನು ಮುಚ್ಚಿಡಲು ಆಗುವದಿಲ್ಲ ಗಾಳಿಯ೦ತೇ.... ಅದು ಬೀಸಿದತ್ತ ಹೋಗುವ, ಎತ್ತೆತ್ತೋ ಸುತ್ತುವ, ಸುಳಿವ, ಭೊರ್ಗರೆವ, ಮ೦ದವಾಗುವ, ಏರುವ, ಇಳಿವ, ಊಹ್ಯದ, ಅನೂಹ್ಯದ, ನೀರ ಕದಡುವ ಮತ್ತು ಅಲೆ ಎಬ್ಬಿಸುವ, ಮರಗಿಡಗಳ ನಡುವೆ ಸು೦ಯ್ಯೆನ್ನುವ, ತರೆಗೆಲೆಗಳ ಉದುರಿಸುವ, ಬೆಟ್ಟ-ಬ೦ಡೆಗಳ ಜೋರಾಗಿ ತಟ್ಟಿ ತಿರುಗುವ ಮತ್ತು ಅದನ್ನು ಸ್ವಲ್ಪ ಸ್ವಲ್ಪ ಬಿ೦ದುವಿನಲ್ಲಿ ಚುರುಚುರಾಗಿಸುವ, ಕಣ್ಣಿಗೇ ಕಾಣದ, ಕೈಗೆ ಸಿಗದ ಇಷ್ಟೆಲ್ಲಾ ಇದ್ದೂ ಅನುಭವಕ್ಕೆ ಸದಾ ವೇದ್ಯವಾಗುವ ಗಾಳಿಗ೦ಧ.
ಚೆ೦ದದ ಲೇಖನ.

shridhar said...

Chitra Santhosh ,

Wish u both happy married life...

bhavakke ondu paridi embudilla .. ishyta bandalli saagutta .. kurutta elutta . etc etc etc ...

baraha chennagide ..
munduvariyali nimma bhavanegaLa maha poora ..

PARAANJAPE K.N. said...

ಚೆನ್ನಾಗಿದೆ, ಮು೦ದುವರಿಯಲಿ ನಿನ್ನ ಭಾವಯಾನ.

sunaath said...

ಒಬ್ಬ ವ್ಯಕ್ತಿ ಅಂದರೆ ಅವನ/ಳ ಭಾವನೆಗಳ ಪ್ರಪಂಚ. ಲೇಖನ ಭಾವಪೂರ್ಣವಾಗಿದೆ.

ಮನದಾಳದಿಂದ............ said...

ಬಾವಗಳಿಗೆ ಬೀಗವೆಲ್ಲಿ? ಬಿಗಿದಷ್ಟೂ ಬಿಚ್ಚಿಕೊಳ್ಳುವ ಸುಂದರ ಸ್ವಪ್ನಗಳು ಭಾವನೆಗಳು!
ಚೆನ್ನಾಗಿವೆ ನಿಮ್ಮ ಕವನದ ಸಾಲುಗಳು!

ಹರೀಶ ಮಾಂಬಾಡಿ said...

ಲೇಖನ ಚೆನ್ನಾಗಿದೆ :)
BEST WISHES