ಏನು ಬರೆಯಬಹುದು? ವಸ್ತುನೇ ಇಲ್ಲವಲ್ಲ...ಎಂಬ ಚಿಂತೆ ಒಂದು ಬದಿಯಿಂದ ನನ್ನ ತಲೆಯನ್ನು ಕೊರೆಯುತ್ತಿದ್ದರೆ ಥಟ್ಟನೆ ನೆನಪಾಗಿದ್ದು ನನ್ನ ಮನೆಯಲ್ಲಿ ನನಗೂ-ಜಿರಲೆಗೂ ನಡೆದ ಭೀಕರ ಸಮರ. ಕಳೆದ ಅಕ್ಟೋಬರ್ 16ರಂದು ಕೋರಮಂಗಲದ ಸುಂದರ ಮನೆಗೆ ಕಾಲಿಟ್ಟಾಗ ಯಾಕೋ ನನಗೆ ಜಿರಲೆಗಳು ತೀರ ಕಾಟ ಕೊಟ್ಟವು. ಹಲ್ಲಿ, ಜಿರಳೆ,ಇರುವೆ ಗಳಿಲ್ಲದ ಮನೆ ಅದು ಮನೆಯೇ ಅಲ್ಲವ೦ತೆ. ಇವೆಲ್ಲ ನಮ್ಮ ಸಮೀಪ ಸ೦ಬ೦ಧಿಗಳೇನೋ ಅನ್ನುವ೦ತೆ ನಮ್ಮೊದಾನೆ ಸ೦ಘ ಜೀವನ ನಡೆಸುತ್ತ, ನಮ್ಮ ಮನೆಯ ಅ೦ದ, ನೈರ್ಮಲ್ಯವನ್ನು ಹಾಳುಗೆಡವುತ್ತ ನಮ್ಮ ವೈರಿಗಳ೦ತೆ ವರ್ತಿಸ್ತಾವೆ. ಅದ್ಕೇ ಇರ್ಬೇಕು ಕೆಲವರು ಒಲ್ಲದ, ಇಷ್ಟವಿಲ್ಲದ ನೆ೦ಟರನ್ನು "ಹಕ್ಲೆಗಳು"(ತುಳು ಭಾಷೆಯಲ್ಲಿ ಜಿರಲೆಗೆ ಹಕ್ಲೆ ಅಂತಾರೆ) ಅ೦ತ ಜಿರಲೆಗೆ ಹೋಲಿಸಿ ಬೈಯ್ಯುವುದು.
ತಿಂಡಿ ಮಾಡಿಟ್ಟರೆ ಅದರ ಮೇಲೆ ಸವಾರಿ ಮಾಡಿ ಅದನ್ನು ಮತ್ತೆ ತಿನ್ನದಂತೆ ಮಾಡೋದು, ತೊಳೆದಿಟ್ಟ ಪಾತ್ರೆ, ಅಕ್ಕಿ, ತಿಂಡಿ-ತಿನಿಸು ಏನೇ ಮುಚ್ಚಿಡದೆ ಇದ್ದರೆ ಅದರ ಮೇಲೆ ಓಡಾಡಿ ಅದನ್ನು ಮೂಸಿ ನಾವು ಮತ್ತೆ ಅತ್ತ ಹೋಗದಷ್ಟು ಕೆಟ್ಟ ವಾಸನೆ ಬರಿಸುತ್ತಿದ್ದವು. ನನಗಂತೂ ದಿನಾ ಜಿರಲೆ ಓಡಿಸೋದು, ಪಾತ್ರೆ ತೊಳೆಯುವುದು, ಅಂತೂ-ಇಂತೂ ಸ್ವಚ್ಛ ಮಾಡೋದ್ರಲ್ಲೇ ಅರ್ಧ ಸಮಯ ವ್ಯರ್ಥ ಆಗುತ್ತಿತ್ತು. ಎಂಥ ಮಾಡೋದು ಮಾರಾಯ್ರೆ? ಎಲ್ಲಿ ನೋಡಿದ್ರೂ ಜಿರಲೆ ಕಾಟ. ರಾತ್ರಿ ಎದ್ದು ದೀಪ ಹಚ್ಚಿದ್ರೆ ಥರ ಥರ ಓಡಿ ಮೂಲೆ ಮೂಲೆ ಸೇರೋ ಜಿರಲೆಗಳನ್ನು ಕಂಡಾಗ ನಂಗೆ ಸಿಟ್ಟು ಬಂದು ನಿದ್ದೆ ಮಾಡದಿದ್ರೂ ಪರವಾಗಿಲ್ಲ ಒಂದೆರಡು ಕೊಂದು ಮಲಗುತ್ತಿದ್ದೆ. ಅದಕ್ಕೆ ನಮ್ಮ ಓನರ್ ಆಂಟಿ ಒಂದು ಉಪಾಯ ಹೇಳಿದ್ರು...ನೀನು ಜಿರಲೆ ಕಡ್ಡಿ ಹತ್ತಿಸಿಬಿಟ್ಟು..ಒಂದು ಇಡೀ ದಿನಾ ಮನೆ ಬಾಗಿಲು ಹಾಕಿ ನೀ ಹೊರಗಡೆ ಹೋಗಿರು...ಮತ್ತೆ ನೀ ವಾಪಾಸು ಬರುವಾಗ ನಿನ್ನ ರೂಮಲ್ಲಿ ರಾಶಿ ರಾಶಿ ಹೆಣಗಳು ಬಿದ್ದಿರುತ್ತವೆ ಅಂತ. ಒಳ್ಳೆ ಉಪಾಯ ಅನಿಸ್ತು..ಮತ್ತೆ ಶವ ಸಂಸ್ಕಾರ ಎಲ್ಲವನ್ನೂ ನಾನೇ ಮಾಡಬೇಕಲ್ಲಾ...ಅದಕ್ಕೆ ಮನೆಯಿಂದ ಹೊರಗೆ ಹೋಗೋದು ಬೇಡ..ನಾ ಮನೆಯಲ್ಲಿದ್ದುಕೊಂಡೇ ಕಡ್ಡಿ ಹಚ್ಚಿಟ್ಟು. ..ಶವ ಬಿದ್ದ ಹಾಗೇ ಪ್ಲಾಸ್ಟಿಕ್ ಕವರ್ ಗೆ ತುಂಬಿಸಿಬಿಡೋದು ಅಂದುಕೊಂಡು ಹಾಗೇ ಮಾಡಿದೆ. ಹುಡುಗೀಯರು ಮೀಸೆ ಇರೋ ಗಂಡಸರಿಗಿಂತಲೂ ಮೀಸೆ ಇರೋ ಜಿರಳೆಗಳಿಗೆ ಅದಕ್ಕೆ ಹೆದರುತ್ತಾರೆ೦ಬ ನ೦ಬಿಕೆ ಇದೆ. ನಂಗಂತೂ ಯಾರ ಮೀಸೆ ಹೆದರಿಕೆನೂ ಇಲ್ಲ ಬಿಡಿ. ಮೊನ್ನೆ ನಮ್ಮ ಸಾಗರದಾಚೆ ಇರೋ ಅಣ್ಣನೊಬ್ಬ ಹೇಳ್ತಾ ಇದ್ದ, ಆ ಜಿರಲೆಗಳ ಮೀಸೆ ಹಿಡಕೊಂಡು ನನ್ ಹೆಂಡತಿಗೆ ಹೆದರಿಸ್ತಾ ಇದ್ದೆ ಅಂತ.
ಮೊನ್ನೆ ಭಾನುವಾರ. ಬೆಳಿಗ್ಗೆ ಆರು ಗಂಟೆಗೆ ಎದ್ದು ಕಡ್ಡಿ ಹಚ್ಚಿಡುವ ಕೆಲಸ ಮಾಡಿದೆ. ಹಾಸಿಗೆಯಲ್ಲಿದ್ದ ನನ್ನ ತಮ್ಮ ಜಿರಲೆ ಕಡ್ಡಿಯ ಕೆಟ್ಟ ವಾಸನೆಗೆ ಜಿರಲೆ ಥರನೇ ವಿಲವಿಲ ಒದ್ದಾಡತೊಡಗಿದ್ದ. ಒಂದೆಡೆ ಬೈಗುಳಗಳ ಸುರಿಮಳೆ. ನಾನು ಕೈ , ಮೂಗು-ಬಾಯಿಗೆ ಗ್ಲೌಸ್ ಹಾಕೊಂಡು ಕೈಗೆ ಇನ್ನೊಂದು ಪ್ಲಾಸ್ಟಿಕ್ ಕಟ್ಟಿಕೊಂಡು..ಜಿರಲೆ ಕಡ್ಡಿ ವಾಸನೆ ಸಹಿಸಲಾಗದೆ ತಲೆ ತಿರುಗಿ ಜಿರಲೆಗಳು ಪಟಪಟನೆ ನೆಲದ ಮೇಲೆ ಬೀಳುತ್ತಿದ್ದವು. ಮತ್ತೊಂದೆಡೆ ಕೆಟ್ಟ ವಾಸನೆಗೆ ಮೂಲೆಯಿಂದ ಮೂಲೆಗೆ ಓಡಾಡುವ ಜಿರಲೆಗಳು, ಇನ್ನೊಂದೆಡೆ ಸಿಕ್ಕೆಲೆಲ್ಲಾ ತಲೆ ಮೇಲೆ , ಬೆನ್ನ ಮೇಲೆ ಬೀಳೋ ಜಿರಲೆಗಳು, ಜಿರಲೆ ಮರಿಗಳು..ಮನೆಯೆಲ್ಲಾ ಕೆಟ್ಟ ವಾಸನೆ. ಕೆಲವು ಸಾಯುತ್ತಿದ್ದರೆ, ಇನ್ನು ಕೆಲವು ಓಡುವಾಗ ನಾನು ಕೈಯಿಂದ ಹಿಡಿದು ಅದರ ತಲೆಯನ್ನೆಲ್ಲಾ ಜಜ್ಜಿ ಕೊಂದು ಬಿಡುತ್ತಿದ್ದೆ. ಕೊಂದು ಕೊಂದು, ಜಿರಲೆ ಹಿಂದೆ ಓಡಾಡಿ ನನ್ನ ಕೈ- ಕಾಲುಗಳೂ ಸುಸ್ತು ಹೊಡೆದಿದ್ದವು. ಆಶ್ಚರ್ಯವೆಂದರೆ ಅಂದು ಆರು ಗಂಟೆಗೆ ಎದ್ದರೂ ನಾನು ಹಲ್ಲಜ್ಜಿರಲಿಲ್ಲ., ಮುಖ ತೊಳೆದಿರಲಿಲ್ಲ...ತಮ್ಮ ಬೈದುಕೊಳ್ಳುತ್ತಲೇ ಇದ್ದ..ನೀನು ಊರಲ್ಲಿ ಹೊಲದಲ್ಲಿ ಕೆಲಸ ಮಾಡಕೆ ಲಾಯಕ್ಕು ಅನ್ತಾ ಇದ್ದ. ಯಾರು ಏನಂದ್ರೂ ನಂಗಂತೂ ಜಿರಲೆ ಕೊಲ್ಲಲೇ ಬೇಕಿತ್ತು..ಆ ಸಮರದಲ್ಲಿ ನಂಗೆ ಜಯ ಸಿಗಲೇಬೇಕಿತ್ತು.
ಗಂಟೆ ಹನ್ನೊಂದು...ಹೊಟ್ಟೆ ಚುರುಗುಟ್ಟುತ್ತಿತ್ತು. ನನ್ನ ಪ್ರೀತಿಯ ಅಣ್ಣ ನಿರಂಜನಣ್ಣನ ಫೋನ್..
"ನಾ ನಿನ್ನ ಮನೆ ಬಳಿ ಇದ್ದೀನಿ....ಮನೆಯಲ್ಲೇ ಇದ್ದೀಯಾ? ...." ಎಂಥ ಕಿರಿಕಿರಿಯಪ್ಪಾ ಅಂದುಕೊಂಡೆ ಮನಸ್ಸಲ್ಲಿ. ಎಂಥ ಮಾಡೋದು? ನೀವು ಮನೆಗೆ ಬರಬೇಡ ಅನ್ನಕ್ಕೆ ಸರಿಯಾಗಲ್ಲ....ಅದೂ ಮೊದಲ ಬಾರಿಗೆ ಮನೆ ಬಳಿ ಬಂದು ತಂಗಿ ಜೊತೆ ಮಾತನಾಡಬೇಕು ಎಂದು ಖುಷಿಯಿಂದ ಬಂದಿದ್ದಾರೆ. ಯಾರ ಮನಸ್ಸಾದ್ರೂ ಬರೋದು ಬೇಡ ಅನ್ನೋದೇ? ಆಯ್ತು...ಬಾ ಅಣ್ಣ ಅಂದು...ಅಲ್ಲೇ ಪಕ್ಕದಲ್ಲಿನ ಹೊಟೇಲಿನಿಂದ ತಿಂಡಿ ತಂದೆ. ಅಣ್ಣನನ್ನು ಮನೆಯೊಳಗೆ ಕರೆದುಕೊಂಡು ಬರುತ್ತಿದ್ದರೆ...ಕೆ.ಆರ್. ಮಾರ್ಕೆಟ್ ಥರ ಗಜಿಬಿಜಿ ಅನ್ನೋ ಮನೆ ನೋಡಿ ಅಣ್ಣ ಏನಂತಾರೋ ಅನ್ನೋ ಪುಟ್ಟ ಭಯ ಮನಸ್ಸಿನಲ್ಲಿ. ಇರಲಿ ಬಿಡಿ..ಅಣ್ಣ ಏನಾದ್ರೂ ಹೇಳಿದ್ರೆ...ಅವರಿಗೆ ಮಂಗಳಾರತಿ ಮಾಡಿಬಿಡೋದು ಅಂದುಕೊಂಡು ಕರೆದುಕೊಂಡು ಬಂದೆ...,ಜಿರಲೆ ವಾಸನೆ,, ಜಿರಲೆ ಕಡ್ಡಿ ವಾನೆ, ಇನ್ನೊಂದು ಮತ್ತೂ ಪ್ರಾಣ ಭಯದಿಂದ ಓಡಾಡುತ್ತಿದ್ದ ಜಿರಲೆಗಳು! ಬದುಕಿನ ಉಳಿವಿಗಾಗಿ ಹಪಿಹಪಿಸುತ್ತಿದ್ದ ಜಿರಲೆಗಳ ಮಧ್ಯೆ...ನನ್ನಣ್ಣನಿಗೆ ಸೆಟ್ ದೋಸೆ, ಟೀ ನೀಡಿ ಖುಷಿಪಟ್ಟಿದ್ದೆ. ಜೊತೆಗೆ ಅಣ್ಣನಿಂದ ನಾ ಮಾಡಿದ ಟೀಗೂ ಶಹಭಾಷ್ ಗಿರಿ ಸಿಕ್ತು. ಅದು ಮತ್ತೊಂದು ಖುಷಿ. ಯಾವಾಗಲೂ ನಂಗೆ ಅಣ್ಣದಿರಿಂದ ಶಹಭಾಷ್ ಗಿರಿ ಗಿಟ್ಟಿಸಿಕೊಳ್ಳೋದಂದ್ರೆ ಭಾರೀ ಇಷ್ಟ. ಒಂದು ಗಂಟೆ ನನ್ನ ಜೊತೆ ಖುಷಿ ಖುಷಿಯಾಗಿ ಕಳೆದ ಅಣ್ಣ ಮತ್ತೆ ನನ್ನ ಬಿಟ್ಟು ಅವರ ದಾರಿ ಹಿಡಿದರು. ಜಿರಳೆ ಕೊಲ್ಲುವ ಉದ್ದೇಶದಿ೦ದ ಟಿ.ವಿ.ಜಾಹೀರಾತಿನಲ್ಲಿ ತೋರಿಸುವ೦ತೆ ನಾನು ಕೈಗೆ ಗ್ಲೌಸ್ ಹಾಕಂಡು ಸಮರ ಸಿ೦ಹಿಣಿಯ೦ತೆ ಗರ್ಜಿಸುತ್ತ, ಜೀವ ಉಳಿಸಲು ತತ್ತರಿಸುತ್ತಿದ್ದ ಜಿರಲೆಗಳ ಬೆನ್ನಟ್ಟಿ ಹೊಡೆಯುತ್ತಿದ್ದ ದೃಶ್ಯವನ್ನು ಕ೦ಡು ಮೊದಲ ಬಾರಿ ಮನೆಗೆ ಬ೦ದಿದ್ದ ಅಣ್ಣ ಯಾಕೋ ಹೆಚ್ಚು ಮಾತನಾಡಲೇ ಇಲ್ಲ. ನಾನು ಮತ್ತೆ ನನ್ನ ಸಮರ ಮುಂದುವರೆಸಿದ್ದೆ..ಸಮರ ಕಾರ್ಯಾಚರಣೆ ಮುಗಿಸಿ,ಕದನವಿರಾಮ ಘೋಷಿಸಿ, ಮನೆ ಶುಚಿಗೊಳಿಸಿ, ಸ್ನಾನ ಮಾಡಿ ಹೊರಬ೦ದು ಇನ್ನೇನು ಜಿರಳೆ ಗಳ ಸಮಸ್ಯೆ ಬಗೆಹರಿಯಿತು ಎ೦ಬ ಖುಷಿಯಲ್ಲಿ, ಜೊತೆಗೆ ಅಣ್ಣನ ಜೊತೆ ತಿಂಡಿ ತಿಂದ ಖುಷಿಯಲ್ಲಿ ಮನಸ್ಸು ತೂಗು ಉಯ್ಯಾಲೆಯಲ್ಲಿ ನಲಿದಾಡುತ್ತಿದ್ದಾಗ ಸೂರ್ಯ ನೆತ್ತಿಯಿಂದ ಕೆಳಗಿಳಿಯುತ್ತಿದ್ದ. ಒ೦ದು ಪುಸ್ತಕವನ್ನು ಓದಿಗೆ೦ದು ಅಲಮಾರದಿ೦ದ ತೆಗೆಯಹೊರಟಿದ್ದೆ. ಪ್ರತ್ಯಕ್ಷ ವಾಯಿತಲ್ಲ ಇನ್ನೊ೦ದು,ಮತ್ತೊ೦ದು ಜಿರಳೆ. ಇದೊ೦ದು ಮುಗಿಯದ ಸಮಸ್ಯೆ... ನಮ್ಮ ದೇಶವನ್ನು ಕಾಡುತ್ತಿರುವ ಭಯೋತ್ಪಾದಕರಂತೆ, ಸರ್ಕಾರಿ ಕಚೇರಿ, ವಿಧಾನಸೌಧ-ಶಾಸಕರ ಭವನದಲ್ಲಿರುವ 'ಭ್ರಷ್ಟಾಸೂರ'ರಂತೆ!
ಈಗ ಮತ್ತೊಂದು ಸಮರಕ್ಕೆ ಸಿದ್ಧವಾಗುತ್ತಿದ್ದೇನೆ....ಮುಂದಿನ ಸಮರದಲ್ಲಿ ಗ್ಯಾರಂಟಿ ಪೂರ್ತಿ ಗೆಲುವು ನಂದೇ ಎನ್ನೋ ವಿಶ್ವಾಸ ನನ್ನದು.
30 comments:
“‘ಇನ್ನು ಕೆಲವು ಓಡುವಾಗ ನಾನು ಕೈಯಿಂದ ಹಿಡಿದು ಅದರ ತಲೆಯನ್ನೆಲ್ಲಾ ಜಜ್ಜಿ ಕೊಂದು ಬಿಡುತ್ತಿದ್ದೆ. ಕೊಂದು ಕೊಂದು, ಜಿರಲೆ ಹಿಂದೆ ಓಡಾಡಿ ನನ್ನ ಕೈ- ಕಾಲುಗಳೂ ಸುಸ್ತು ಹೊಡೆದಿದ್ದವು”’!!!
ಧರಿತ್ರಿ,
ಟಿವಿಯಲ್ಲಿ ಚಿರಲೇ ಓಡಿಸಲು ಒಬ್ಬಳು ಅಡ್ವರ್ಟೈಸ ಕೊಡುತ್ತಾಳೆ ನೋಡಿದೀರಾ ಅವಳ ನೋಡಿದರೆ ನನ್ನ ಮನೆಯವರು ಜಿರಲೆಗಿಂದ ಇವಳಿಗೆ ಒಡೆದು ಓಡಿಸಬೇಕು...ಇವಳ ಮುಕ ಜಿರಲೆಗಿಂದ ವಿಚಿತ್ರವಾಗಿ ಮಾಡಿದ್ದಾರೆ ಎನ್ನುತ್ತಾ ಇರುತ್ತಾರೆ...ನಿಮ್ಮ ಜಿರಲೆ ಲೇಖನ ನೋಡಿ ನೆನಪಾಯಿತು ನೀವು ಹಾಗೆ ಎಲ್ಲೋ ವೇಷ ದರಿಸಿದ್ದರೆಂದು.. ಮತ್ತೊಂದು ಮೊನ್ನೆ ನನ್ನ ಅಕ್ಕನ ಮಗಳು ಚಾಟ್ ನಲ್ಲೆ ಜಿರಲೆ ಬಂತು ನೋಡು ಎಂದು ಹೆದರಿಸುತ್ತಲಿದ್ದಳು.. ಹ ಹ ಹ ಕುವೈತ್ ನಲ್ಲಿ ಜಿರಲೆ ಹೆಚ್ಚಿವೆ ಆದರೆ ನನ್ನ ಮನೆಯಲ್ಲಿಲ್ಲ ಅದೇ ನಿರಾಳ ಹ ಹ ..
ಚೆನ್ನಾಗಿದೆ ಲೇಖನ...ಮುಂದಿನ ಹೋರಾಟಕ್ಕೆ ತಯಾರಿ ನಡೆಸಿ..
ಮುಂದಿನ ಸಮರಕ್ಕೆ ಮೊದಲು TV9 ಕರೆಸಿ. ಬ್ರೇಕಿಂಗ್ ನ್ಯೂಸ್ ಮಾಡಬಹುದು! :)
@ರಾಘವೇಂದ್ರ ಸರ್...ಪ್ರತಿಕ್ರಿಯೆಗೆ ಧನ್ಯವಾದಗಳು. ಅದೆಂಥ ನಾನು ಬರೆದ ಸಾಲನ್ನೇ ಪೇಸ್ಟ್ ಮಾಡಿಕೊಂಡಿದ್ದು...?!(:)
@ಮನಸ್ಸು ನಮಸ್ತೆ...ಬರಹ ಮೆಚ್ಚಿದ್ದಕ್ಕೆ ವಂದನೆಗಳು. ಮೇಡಂ..ಸ್ವಲ್ಪ ವೇಷ ಧರಿಸಬೇಕು..ಯಾಕಂದ್ರೆ ಮೈ-ಕೈ ಎಲ್ಲಾ ಕೆಟ್ಟ ವಾಸನೆ ಬರುತ್ತೆ.
-ಧರಿತ್ರಿ
ಧರಿತ್ರಿ,
ಜಿರಳೆ ಸ೦ಹಾರದ ನೆಪದಲ್ಲಿ ಅಪರೂಪಕ್ಕೆ ಬ೦ದ ಅಣ್ಣನಿಗೆ ಜಿರಳೆ ವಾಸನೆಯ ಚಹಾ ಮಾಡಿಕೊಟ್ಟು ಶಹಬ್ಬಾಸ್ ಗಿರಿ ಗಿಟ್ಟಿಸಿದೆಯಲ್ಲ, ನಿನ್ನ ಆ ಬಡಪಾಯಿ ಅಣ್ಣ ಇನ್ನೆ೦ಥ ಪಾಪದ ಗಿರಾಕಿ ಇರಬೇಕು. ಚೆನ್ನಾಗಿದೆ ಲೇಖನ.
ಜಿರಳೆ ಕೊಂದ ಕೊಲೆಗಾರ್ತಿ ನಾ ಬರಿಯೋ ಪ್ರತಿಕ್ರಿಯೆಗೆ ಸ್ಫೂರ್ತಿ...
ಒಂದು ಅಮಾಯಕ ಜೀವವನ್ನು ಕೊಂದುಬಿಟ್ಟಿರಲ್ಲ, ಛೇ ಛೇ ..
ತಮಾಷೆಗೆ ಹಾಗಂದೆ, ಬೇಜಾರ್ ಮಾಡ್ಕೋಬೇಡಿ :D
ನೀವು ಯುದ್ದದಲಿ ಜಯಶಾಲಿಯಾಗಿ ಎಂದು ಹಾರೈಸುತ್ತಿದ್ದೇನೆ...
ಒಳ್ಳೆಯ ಲೇಖನ..
ಧನ್ಯವಾದಗಳು
@ವಿಕಾಸ್ ನಿಮ್ ತಲೆಗೆ ಕೊಡಬೇಕು...ಕಣ್ರೀ. ಬೊಂಬಾಟ್ ತಲೆ , ಐಡಿಯಾ. ನೋಡೋಣ..ಮುಂದಿನ ಸಮರ ಶುರುವಾದಾಗ ಹೇಳ್ತೀನಿ ಏನೂಂತ.
@ಪರಾಂಜಪೆಯಣ್ಣ...ಮೋಸ, ನಿಮ್ಮದು ಸುಳ್ಳು ಆರೋಪ. ಅಣ್ಣಂಗೆ ಜಿರಲೆ ವಾಸನೆ ಚಹಾ ಕೊಟ್ಟು ಶಹಭಾಸ್ ಗಿಟ್ಟಿಸಿದ್ದಲ್ಲ. ನಾ ಮಾಡಿದ ಟೀ ಸೂಪರ್ರು ಆಗಿತ್ತು. ಅದಕ್ಕೆ ಅಣ್ಣ 80% ಅಂಕ ಕೊಟ್ಟಿದ್ದಾರೆ. ಹಂಗೆಲ್ಲ ಸುಮ್ನೆ ಆರೋಪ ಮಾಡಬೇಡಿ..ಟೀ ಚೆನ್ನಾಗಿ ಮಾಡ್ತೀನಿ. (:)
@ಶಿವಪ್ರಕಾಶ್..ಎಂಥದ್ದು ಮಾರಾಯ್ರೆ? ಕೊಲೆಗಾರ್ತಿ ಅಂದಿದ್ದು. ಪೋಲೀಸರು ನನ್ನ ಹಿಡ್ಕಂಡು ಹೋದ್ರೆ ಎಂಥ ಮಾಡೋದು? ಮತ್ತೆ ಧರಿತ್ರಿನೂ ಇಲ್ಲ ಬ್ಲಾಗನೂ ಇಲ್ಲ.
ಪ್ರೀತಿಯಿಂದ ಪ್ರತಿಕ್ರಿಯೆ ಬರೆದ ೆಲ್ಲರಿಗೂ ನನ್ನ ಪ್ರೀತಿಯ ನೆನೆಕೆಗಳು.
-ಧರಿತ್ರಿ
ಯಕ್ಕೋ,
ಜಿರಳೆ, ರಕ್ತ ಬೀಜಾಸುರನ ಸಂತತಿ. ಬಡ್ಡಿ ಮಗಂದು ನ್ಯೂಕ್ಲಿಯರ್ ಬಾಂಬ್ ಬಿದ್ರೂ ಬದುಕಿ ಉಳಿಯೋ ಜೀವ ಅದು, ಇನ್ನು ಆಫ್ಟರಾಲ್ ನಿನ್ ಕೈಲಿ ಸಾಯುತ್ವಾ ?
ಭ್ರಮೆ ನಿಂಗೆಲ್ಲೋ. ಎನಿವೇ, ಕೊಲೆಗಾರ್ತಿ ಆಗಿದ್ಯಾ.. ಸೀರಿಯಲ್ ಕಿಲ್ಲಿಂಗು ಮುಂದುವರೆಸು.
ಆದರೂ ಒಂದು ನಂಗೆ ಅರ್ಥ ಆಗ್ಲಿಲ್ಲ.. ನಾನೂ ಜಿರಲೇನಾ ಸಖತ್ತಾಗಿ ಹಿಡಿತೀನಿ, ಆದ್ರೆ ವಾಸನೆ ಯಾವತ್ತೂ ಬಂದಿಲ್ಲ.. ನೀನು ಬರೀ ಹಿಡೀತ್ಯೋ ಅಥವಾ ಹಿಡಿದು ಅದನ್ನ ಮೂಸಿ ನೋಡ್ತಿಯೋ ?
ಪ್ಲೀಸ್ ಆನ್ಸರ್ ಮೈ ಕ್ವೆಶ್ಚನ್ !!!
ಕಟ್ಟೆ ಶಂಕ್ರ
ಭಲೇ ಶಂಕ್ರಣ್ಣ..ನಿಮ್ಮ ಮಿಲಿಯನ್ ಡಾಲರ್ ಪ್ರಶ್ನೆಗೆ ನನ್ನ ಉತ್ತರ : ನಾನು ಬರೀ ಹಿಡಿದಿದ್ದಲ್ಲ ಮಾರಾಯ್ರೆ...ಕೈಗೆ ಗ್ಲೌಸ್ ಹಾಕಂಡು ಹಿಡಿದು ಜಜ್ಜಿ ಕೊಂದಿದ್ದು. ಜಿರಲೆ ಕಡ್ಡಿಯ ಕೆಟ್ಟವಾಸನೆಗೆ ಅದು ನೈಂಟಿ ಕುಡಿದವರಂಗೆ ಅಮಲಾಗಿ ಕೆಳಗೆ ಬೀಳ್ತಾವೆ(ವಿಶೇಷ ಸೂಚನೆ: ನಾನು ಕುಡಿದು ನೋಡಿಲ್ಲ, ಕುಡಿದರವನ್ನು ನೋಡಿದ್ದು) ಆವಾಗ ವೇಗವಾಗಿ ಅವಕ್ಕೆ ಓಡಕ್ಕೆ ಆಗಲ್ಲ. ಆಗ ಅದನ್ನು ಹಿಡಿದು ಕೊಲ್ಲುವುದು. ಇನ್ನೊಂದು ವಿಚಾರ ನನ್ನ ಮೂಗಿನ ವಿಷ್ಯದಲ್ಲಿ ನಂಗೆ ನಂಬಿಕೆಯಿದೆ...ಜಿರಲೆ ಮೂಸಿ ನೋಡದಿದ್ರೂ ಅದ್ರ ವಾಸನೆ ಮೂಗಿಗೆ ಬಡಿಯುತ್ತೆ ಗೊತ್ತಾ?
ಶಂಕ್ರಣ್ಣ..ನೀವೂ ನನ್ನ ಸರಣಿ ಕೊಲೆಗಾರ್ತಿ ಅಂದ್ರಾ? ಕಿಲ್ಲರ್ ಮಲ್ಲಿಕಾಂಗೆ ಗಲ್ಲು ಶಿಕ್ಷೆ ಆಗಿದ್ದು ನೆನಪಾಗುತ್ತೆ. ಯಪ್ಪಾ..ನೀವೆಲ್ಲ ಸೇರಿ ನನ್ನ ಕೋರ್ಟ್ ಹತ್ತಿಸಲ್ಲಾ ತಾನೇ?(:)
ಬರಹ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ಮತ್ತೆ ಬನ್ನಿ
-ಧರಿತ್ರಿ
ಜಿರಳೆ ಕೊಲ್ಲುವ ಯಂತ್ರದ ಜಾಹೀರಾತಿಗೆ ನೀವು ಯಾಕೆ ಟ್ರೈ ಮಾಡಬಾರದು :) ?
ಧರಿತ್ರಿ ಅವರೇ,
ಜಿರಳೆ ಅಂದ ಕೂಡಲೇ, ನನಗೆ ನನ್ನ ಪಿ ಯು ಸಿ ಯಾ ವಿಜ್ಞಾನ ಪ್ರಯೋಗಾಲಯದಲ್ಲಿ ನಾನು ಮಡಿದ ಪ್ರಯೋಗ ನೆನಪಿಗೆ ಬರುತ್ತದೆ. ಕಷ್ಟಪಟ್ಟು ಒಂದು ಜಿರಳೆ ಹಿಡಿದು ಅದನ್ನು ಕತ್ತರಿಸುವಾಗ ಮನಸ್ಸಿಗೆ ತುಂಬಾ ನೋವಾಗಿತ್ತು. ಮೊದಲ ಬಾರಿಗೆ ಒಂದು ಜೀವ ಹತ್ಯೆ ನಡೆದು ಹೋಗಿತ್ತು. ಆದರೆ ಇತ್ತೀಚಿಗೆ ಜಿರಳೆ ಕತ್ತರಿಸುವ ಪ್ರಯೋಗ ಮಾಡುತ್ತಿಲ್ಲ ಎಂದು ಕೇಳಲ್ಪಟ್ಟೆ.
ಮತ್ತೊಮ್ಮೆ ನೆನಪಿಸಿದ್ದಕ್ಕೆ ಧನ್ಯವಾದಗಳು. ಲೇಖನಕ್ಕೆ ಅಭಿನಂದನೆಗೆಳು.
ಧರಿತ್ರಿ ಅವರೇ,
ನಿಮ್ಮ ಎಲ್ಲಾ ಬರಹಗಳೂ ಚೆನ್ನಾಗಿವೆ.
ಯಾಕೋ ಕೋರಮಂಗಲದಲ್ಲಿ ಜಿರಳೆ ಕಾಟ ಜಾಸ್ತಿ ಅನ್ಸತ್ತೆ!
ನಮ್ಮ ಮನೆಯಲ್ಲೂ ಜಿರಳೆ ತುಂಬಿಕೊಂಡಿತ್ತು. ನನ್ನ room mate sooper woman ಥರ ರಾತ್ರಿ 3 ಗಂಟೆಗೆ baygon ಹೊಡ್ದು ಹೊಡ್ದು ಸಾಯ್ಸಿದ್ದು ನೆನಪಾಯ್ತು. ಅವತ್ತಿಂದ ಅವಳಿಗೆ ಜಿರಳೆ ಕಂಡ್ರೆ ಏನೋ ಜೋಶ್, ಒಂದು ಜಿರಳೆ ಕಂಡರೂ ಸಾಕು, ಪೊರಕೆ ಹಿಡ್ಕೊಂಡು ಯುಧ್ಧಕ್ಕೆ ನಿಂತ್ ಬಿಡ್ತಾಳೆ.
ನಿಮ್ಮ ಮುಂದಿನ ಯುಧ್ಧದಲ್ಲಿ ನಿಮಗೆ ಜಯ ಸಿಗಲಿ ಎಂದು ಹಾರೈಸುತ್ತೇನೆ.
ಛಲ ಬೇಕು ಮನುಜಂಗೆ ಜಿರಲೆಯನು ಬಿಡನೆಂದು.
ಧರಿತ್ರಿ, ನಿಮ್ಮ ಪ್ರಯತ್ನಗಳಿಗೆ ಶುಭ ಹಾರೈಕೆಗಳು!
ಧರಿತ್ರಿಗೆ ಸಣ್ಣ ಸಣ್ಣ ವಿಷಯಗಳ ವಿಶದ ನಿರೂಪಣೆ ಬಹಳ ಚನ್ನಾಗಿ ಕರಗತವಾಗಿದೆ
ಅಂದ್ಕೋತೀನಿ..ಅಂದ ಹಾಗೆ..."ಹಕ್ಲೆ"...yea.. ನನಗೆ ಈಗಲೇ ಗೊತ್ತಾದದ್ದು..ತುಳುವಿನಲ್ಲಿ ಜಿರಲೆಯನ್ನ ಹಕ್ಲೆ ಅಂತೀರಿ ಅಂತ..ಒಂಭತ್ತು ಸುಧೀರ್ಘ ವರ್ಷ ಮಂಗಳೂರಲ್ಲಿದ್ದೆ..ಆದರೂ ಈ "ಜಿರಲೆ" I mean ಈ ಹಕ್ಲೆ ನನ್ನ ಕೈಗೆ ಹತ್ಲೇ ಇಲ್ಲ.
ಚನ್ನಾಗಿದೆ ಪ್ರಸ್ತಾವನೆ..ಧರಿತ್ರಿ...
@ಹರೀಶ್ ಸರ್..ಯಂತ್ರ ಯಾಕೆ ಸರ್? ಸುನಾಥ್ ಸರ್ ಹೇಳಿರುವಂತೆ "ಛಲ ಬೇಕು ಮನುಜಂಗೆ ಜಿರಲೆಯನು ಬಿಡನೆಂದು"! ಮನುಷ್ಯನಿಗೆ ಅಸಾಧ್ಯವಾದುದು ಯಾವುದಿದೆ?
@ಸುನಾಥ್ ಸರ್...ನಮಸ್ತೆ. ನನ್ನ ಪ್ರತಿ ಬರಹವನ್ನು ಪುರುಸೋತ್ತು ಮಾಡಿಕೊಂಡು ಬಂದು ಓದುತ್ತಿರಲ್ಲಾ..ನಂಗೆ ತುಂಬಾ ಖುಷಿಯಾಗುತ್ತಿದೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ನನಗಿರಲಿ. ನಿಮ್ಮ ಶುಭಹಾರೈಕೆ ನನಗೆ ಇನ್ನಷ್ಟು ಧೈರ್ಯ ತುಂಬಲಿದೆ.
-ಧರಿತ್ರಿ
@ಜ್ಯೋತಿ ಮೇಡಂ...ನಮಸ್ತೆ. ಧರಿತ್ರಿಗೆ ಸ್ವಾಗತ. ನಿಮ್ಮ ಹಾರೈಕೆಗೆ ಧನ್ಯವಾದಗಳು. ಜೊತೆಗೆ ಬಿಡುವಿದ್ದಾಗ ಧರಿತ್ರಿಯತ್ತ ಬಂದುಬಿಡಿ. ಮೆಚ್ಚುಗೆಗೆ ಪ್ರೀತಿಯ ಸಲಾಂ.
@ಜಲನಯನ, ನಿಮಗೂ ಧರಿತ್ರಿಗೆ ಸ್ವಾಗತ. ಹಕ್ಲೆ ಹತ್ತಲೇ ಇಲ್ವಾ? ಹಾಗಾದ್ರೆ ಕೋರಮಂಗಲದಲ್ಲಿ ಮುಂದಿನ ಜಿರಲೆ ಸಮರದಲ್ಲಿ ತಾವೂ ಪಾಲ್ಗೊಳ್ಳಬಹುದು. ಉಚಿತ ಪ್ರವೇಶ. ಏನಂತೀರ?
@ಗುರುಮೂರ್ತಿ ಸರ್..ನನ್ನ ಪ್ರತಿ ಬರಹಕ್ಕೂ ಪ್ರತಿಕ್ರಿಯಿಸಿ ಪ್ರೋತ್ಸಾಯಿಸುತ್ತಿದ್ದೀರಿ. ಸರ್, ನಾನೂ ಪಿಯುಸಿ ಜಿರಲೆ ಕತ್ತರಿಸುವ ಪ್ರಯೋಗ ಮಾಡಿದ್ದೆ. ಆದರೆ ನನಗೆ ಜಿರಲೆ ಅಂದ್ರೆ ಆವಾಗ ಭಯ ಇತ್ತು...ಬೇರೆಯವರ ಜೊತೆ ಕತ್ತರಿಸಲು ಹೇಳುತ್ತಿದ್ದೆ. ಯಾರಿಗೆ ಬೇಕು ಜಿಯೋಲಜಿ ಫಿರೇಡು..ಯಪ್ಪಾ ವಾಸನೆ...
-ಧರಿತ್ರಿ
>>ಹಕ್ಲೆಗಳು
ನಮ್ಮೂರಂಗೂ ಜಿರ್ಲೆಗೆ ಹಕ್ಳಿ ಅಂಬುದು
ನಮ್ಮನೀಗೆ ಇಷ್ಟೆಲ್ಲಾ ಹಕ್ಳಿ ಇಲ್ಲಪ್ಪಾ, ವಾರಕ್ಕ್ಕೊಂದ್ ಸಲಿ ಮನಿ ಕಿಲೀನ್ ಮಾಡತ್
ಅಹಾ ಎಂಥ ಇಂಟರೆಸ್ಟಿಂಗ್ ಸಮರ..... ಧರಿತ್ರಿ ಎನ್ನುವ ಧೀರ ಮಹಿಳೆಯ ಸಾಹಸ ಓದಿ ಬಹಳ ಸಂತೋಷ ಆಯಿತು,,, ಅದು ಈ ಧೀರ ಮಹಿಳೆ ಅ ಪರಿ... ಮೀಸೆ ಸಾಮ್ರಾಜ್ಯದ ಮೇಲೆ ದಂಡೆತ್ತಿ ಹೋಗಿ. ಒಂದೊಂದೇ ಜಿರಳೆ ಗಳನ್ನೂ ಕೊಲ್ಲುವಾಗ ಅ ವೀರ ಮಹಿಳೆ.... ಯರ್ ಹೇಳಿ? ಹಾಂ ಒನಕೆ ಓಬವ್ವ ನೆನಪಾದರು,,, ಅಸ್ಟು ಜನರನ್ನು ಒನಕೆ ಇಂದ ಸಾಯಿಸಿದ ಒಬವ್ವಗೆ "ಒನಕೆ ಓಬವ್ವ" ಅಂತ ಹೆಸರು ಬಂತು,,,,
ಇಲ್ಲಿ ನೀವು ಇಷ್ಟು ಜಿರಳೆಗಳನ್ನು ಸಾಯಿಸಿದ್ದಕ್ಕೆ ಏನಾದ್ರು ಹೆಸರು ಕೊಡಬೇಕಲ್ವ.... yes.. ನಿಮ್ಮ ಹೊಸ ಹೆಸರು "ಜಿರಳೆ ಕಡ್ಡಿ ಧೀರ ಧರಿತ್ರಮ್ಮ" ...... ಹಾ ಹಾ... ಚೆನ್ನಾಗಿ ಇದೆ ಅಲ್ವ... ಇನ್ ಮೇಲೆ ಇದೆ ನಿಮ್ಮ ಅಡ್ಡ ಹೆಸರು,,,,, :-)
ಹೌದು ಕೋರಮಂಗಲದಲ್ಲಿ ಬರಿ ಸೊಳ್ಳೆ ಜಾಸ್ತಿ ಅಂತ ನೋಡಿದ್ದೇ,,, ನಮ್ಮ ದೊಡ್ಡಮ್ಮ ಮನೆ ಇರೋದು ಅಲ್ಲೇ,, ಅವರ ಮನೆಗೆ ಹೋದಾಗಲೆಲ್ಲ.... ಸಂಜೆ ಹೊತ್ತು ಒಂದು ಚೂರು ಬಾಗಿಲು ತೆಗೆಯೋಕ್ಕು ಬಿಡ್ತಾ ಇರಲಿಲ್ಲ,,, ಯಾಕೆ ಅಂದ್ರೆ ಒಂದು ರಾಶಿ ರಾಶಿ ಸೊಳ್ಳೆಗಳು ಮನೆ ಹೊಕ್ಕು ಬಿದುತಿದ್ದವು .... ಈಗ, ಜಿರಳೆ population ಕೂಡ ಜಾಸ್ತಿ ಆಗಿದಿಯ,,,
ಗುಡ್.. ಆಲ್ ದಿ ಬೆಸ್ಟ್ for ಕೋರಮಂಗಲದ ನಾಗರಿಕರಿಗೆ......
and also ನಿಮ್ಮ next ಸಮರಕ್ಕೆ all the best .....
ಪಾಲಚಂದ್ರ ಸರ್..ಮೆಚ್ಚುಗೆಗೆ ಧನ್ಯವಾದಗಳು. ಅಲ್ರೀ ನೀವು ರಿಪ್ಲೆ ಮಾಡಿದ್ದು ಯಾವ ಭಾಷೆ ಮಾರಾಯ್ರೆ? ಉತ್ತರ ಕನ್ನಡದ್ದಾ? ಕಿಲೀಸ್ ಮಾಡತ್...
@ಗುರು ಸರ್...ತುಂಬಾ ನಮಸ್ಕಾರ. ಭಾಳ ಚೆನ್ನಾಗೈತೆ ನಿಮ್ ಹೆಸ್ರು..ನನ್ ಪುಣ್ಯ ಒನಕೆ ಓಬವ್ವ ಅಂದಿಲ್ಲಾ ಬಿಡ್ರೀ. ನಮ್ಮನೆ ಕಡೆ ಸೊಳ್ಳೆ ಇಲ್ಲ ಕಣ್ರೀ..ಜಿರಲೆನೂ ಮುಂದಿನ ಸಮರದಲ್ಲಿ ಖಾಲಿಯಾಗಬಹುದು. ನಿಮ್ಮ al d bestಗೆ ತುಂಬಾ ಧನ್ಯವಾದಗಳು ಗುರು ಸರ್.
-ಧರಿತ್ರಿ
ಹ್ವಾಯ್ "ಕಿಲೀಸ್" ಅಲ್ದೆ, "ಕಿಲೀನ್" ಅಂದ್ರೆ ಕ್ಲೀನು ಅಂದ್ಕಂಡ್.
ಅಪ್ಪಟ ಕನ್ನಡಾನೇ ನಿಮ್ಮ ಕರಾವಳಿಗೆ ಹತ್ರದ ಕುಂದಾಪ್ರ ಕನ್ನಡ ಕಾಣಿ ಇದ್.
ಆಯ್ಯೋ ಧರಿತ್ರಿ...
ನೀನು ಹೀಗೆ ಬ್ಲಾಗಿನಲ್ಲಿ ಬರೆದಷ್ಟು ಸುಲಭವಾಗಿ ಜಿರಲೆಗಳನ್ನು ಸಾಯಿಸುವುದು...ಓಡಿಸುವುದು ಸುಲಭವಲ್ಲ...ಆಯ್ತ....
ಇದೇ ರೀತಿ ಹೇಮಾಶ್ರೀಯೂ ನಿನ್ನಂತೆ ಮಾಡಿದ ಯುದ್ದಗಳು ಒಂದೆರಡಲ್ಲ....ಅದರೂ ಅವಳು ಗೆಲ್ಲಲಿಲ್ಲ...ನೀನು ಮುಂದಿನ ಬಾರಿಯೂ ಗೆಲ್ಲುವುದಿಲ್ಲ...ಅಂತ ಹೇಳಿ ನಾನು ನಿನ್ನನ್ನು ನಿರುತ್ಸಾಹಗೊಳಿಸುವುದಿಲ್ಲ...
ಆದರೆ ಸತ್ಯವನ್ನು ಹೇಳುತ್ತೇನೆ ಕೇಳು...ಜಿರಲೆಗಳು ಮತ್ತು ಭಯೋತ್ಪಾದಕರು..ಎರಡು ಒಂದೆ...ನಾವೇನು ಮಾಡಿದರೂ ಕಂಟ್ರೋಲ್ ಮಾಡಲು ಸಾಧ್ಯವೇ ಆಗುವುದಿಲ್ಲ...ನನ್ನ ಹಳೆಮನೆಯನ್ನು ಖಾಲಿ ಮಾಡುವಾಗ ನಮ್ಮ ಮಂಚ, ಮತ್ತು ದೀವಾನ ಮಗುಚಿದಾಗ ಸಾವಿರಕ್ಕೂ ಹೆಚ್ಚು ಜಿರಲೆಗಳಿದ್ದವು...ಆಗ ಸಹಾಯಕ್ಕೆ ಬಂದರು ಪ್ರಕಾಶ್ ಹೆಗಡೆ...ಅವರೊಬ್ಬ ವೀರನನ್ನು ಕಳಿಸಿದರು...ಆತ ಮಾತು ಕಡಿಮೆ ಅದರೆ ಕೆಲಸ ಪಕ್ಕ. ಆತ ತಂದಿದ್ದ ಔಷದಿಯನ್ನು ಹೊಸಮನೆಗೆ ಸಿಂಪಡಿಸಿ ಹೋಗಿಬಿಟ್ಟ...ನಾನು ಉಳಿದ ಔಷದಿಯನ್ನು ಮಂಚ,
ದಿವಾನ,ಇತ್ಯಾದಿಗಳಿಗೆ[ನಿನ್ನಂತೆ ಎಲ್ಲಾ ರಕ್ಷಣೆಯನ್ನು ಮಾಡಿಕೊಂಡು ] ಸಿಂಪಡಿಸಿಬಿಟ್ಟೆ ಆ ವಾಸನೆಯನ್ನು ತಡೆದುಕೊಳ್ಳಲಾಗದೆ ಉಸಿರುಕಟ್ಟಿದಂತಾಗಿತ್ತು...ಅದು ತುಂಬಾ ಅಪಾಯಕಾರಿಯೂ ಆಗಿತ್ತು....ಆಗ ನೋಡು ಎರಡು ಗಂಟೆಗಳಲ್ಲಿ ಎಲ್ಲಾ ಜಿರಲೆ ಹುಳು ಇತ್ಯಾದಿ ಸತ್ತು ಹೋದವು...ಎಲ್ಲವನ್ನು ಕ್ಲೀನ್ ಮಾಡಿ ಹೊಸ ಮನೆಗೆ ತಂದಿದ್ದೇವೆ...
ಇದುವರೆಗೂ ಹೊಸಮನೆಯಲ್ಲಿ ಒಂದು ಜಿರಲೆ ಮೊಟ್ಟೆಯೂ ಕಾಣಲಿಲ್ಲ....ಹೇಮಾಶ್ರೀಗೆ ಹೆಚ್ಚು ನೆಮ್ಮದಿ..ನನಗೂ ಕೂಡ...
ಆಯ್ಯೋ ಜಿರಲೆ ಕತೆ ಬಿಡು...ನಿನ್ನ ಬರಹ ನಗುಬಂತು..ಮತ್ತು ನೀನು ಶಸ್ತ್ರಸಜ್ಜಿತಳಾದಾಗ ಹೇಗಿರುತ್ತೀಯಾ ನೋಡಬೇಕೆನಿಸಿತು..ನನಗೆ ಗೊತ್ತು ನೀನು ಯಾವ ಮೀಸೆಗೂ ಎದರುವುದಿಲ್ಲವೆಂದು...ಹೊಸ ವಿಚಾರವನ್ನು ಚೆನ್ನಾಗಿ ಅಯ್ಕೆ ಮಾಡಿಕೊ...ಅಂದರೆ ಇಂಥದ್ದನ್ನು ಆರಿಸಿಕೊಂಡು ಇಷ್ಟೊಂದು ಚೆನ್ನಾಗಿ ಬರೆಯೋದ...
ಹೋಗ್ಲಿ....ನಿನ್ನ ಜಿರಲೆ ಸಮಸ್ಯೆಗೆ ಬೇಗ ಪ್ರಕಾಶ್ ಹೆಗಡೆಯವರಿಗೆ ಫೋನ್ ಹಚ್ಚು...
ಮುಂದುವರಿಯಲಿ ಹೊಸತು...
@ಪಾಲಚಂದ್ರ...ಹ್ಲಾಂ! ನಂಗೇ ಗೊತ್ತಿರಲಿಲ್ಲ...ತಿಳಿಸಿಕೊಟ್ಟದ್ದಕ್ಕೆ ತುಂಬಾ ಥ್ಯಾಂಕ್ಸ್! ಮತ್ತೆ ಬರೋದನ್ನು ತಪ್ಪಿಸಬೇಡಿ. ಕುಂದಾಪ್ರ ಕನ್ನಡ ಭಾಳ ಕಷ್ಟ ನಂಗೆ. ವೇಗವಾಗಿ ಮಾತನಾಡಿದ್ರೆ ಒಂಚೂರು ಅರ್ಥವಾಗೋಲ್ಲ.
@ಶಿವಣ್ಣ...ಪ್ರೀತಿಯಿಂದ ಪ್ರತಿಕಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು. ನಾನು ಈ ಸಲ ಗೆಲ್ತೀನಿ ಅಂತ ಮಾತು ಕೊಡ್ತೀನಿ...ನೀವು ಗೆಲ್ಲಲ್ಲ ಅಂದ್ರೂ ನಾ ಸೋಲಲ್ಲ ಬಿಡಿ. ಅಂಥದ್ದೇನಾದ್ರೂ ಆದ್ರೆ ಪ್ರಕಾಶ್ ಹೆಗ್ಡೆ ಇದ್ದೇ ಇದ್ದಾರಲ್ಲಾ...ಅವರಿಗೇ ಹೇಳೋಣ ಅಲ್ವೇ?
-ಧರಿತ್ರಿ
ಧರಿತ್ರಿಯವರೆ,
ಈಗಷ್ಟೆ ನಿಮ್ಮ ಬ್ಲಾಗನ್ನು ಓದಿ ಮುಗಿಸಿದೆ. ಎಲ್ಲಾ ಬರಹಗಳು ತುಂಬಾ ಚನ್ನಾಗಿವೆ. ಅದರಲ್ಲೂ “ತವರೂರ ಮನೆ ನೋಡಲು ಬಂದೆ” ಓದುತ್ತಾ ಓದುತ್ತಾ ಏಕೋ ಗೊತ್ತಿಲ್ಲ ತುಂಬಾ ಭಾವುಕನಾಗಿ ಅತ್ತುಬಿಟ್ಟೆ. ಕೆಳಗಿನ ಸಾಲುಗಳಂತೂ ಅಮ್ಮನ ಪ್ರೀತಿ, ನೆನಪು- ನೇವರಿಕೆಗಳನ್ನು ತೆರೆದಿಡುತ್ತಾ ಓದುಗರ ಮನವನ್ನು ಕಲಕುವದರ ಜೊತೆಗೆ ಕೊನೆಯಲ್ಲಿ ಒಂದು ತೆರನಾದ ವಿಷಾದವನ್ನು ಉಳಿಸಿ ಬಿಡುತ್ತವೆ. “ತವರಿನ ಪ್ರೀತಿಯ ಚಪ್ಪರದಡಿಯಲ್ಲಿ ನಾ ಸಪ್ತಪದಿ ತುಳಿದಿದ್ದೆ. ದಶಕಗಳು ಸರಿದಿವೆ. ಅಮ್ಮನೆತ್ತರಕ್ಕೆ ಬೆಳೆದ ನಾನೂ 'ಅಮ್ಮ'ನಾಗಿದ್ದೆ. ಆದರೆ, ಇದ ಕಂಡು ಖುಷಿ ಪಡಲು ಅಮ್ಮನಿರಲಿಲ್ಲ ಜೊತೆಯಲ್ಲಿ.! ಆದರೆ, ಆಕೆ ಕಲಿಸಿದ ಬದುಕಷ್ಟೇ ಉಳಿದಿತ್ತು. ಮತ್ತೆ ಬಂದಿದ್ದೆ ನಾ ತವರಿಗೆ. ಅಣ್ಣನೊಬ್ಬ ಉಳಿದಿದ್ದ, ಬದುಕಿಗೆ ಜೀವಂತಿಕೆ ಕಟ್ಟಿಕೊಟ್ಟ, ಜೀವನಕ್ಕೆ ಅಪೂರ್ವ ಸೌಂದರ್ಯ ಕಟ್ಟಿಕೊಟ್ಟ, ಖುಷಿಯಲ್ಲಿ ನಕ್ಕು ನಗಿಸಿದ ಆ ತವರು ಕಾಣಲು ಮತ್ತೆ ನಾ ಬಂದಿದ್ದೆ. ಆದರೆ ಅದೇಕೋ ಖಾಲಿ ಖಾಲಿ...ಮನೆಯೆದುರು ನಾ ಇಟ್ಟ ರಂಗೋಲಿ ಮಾಸಿತ್ತು, ಆದರೆ ನೆನಪಷ್ಟೇ ಉಳಿದಿತ್ತು. ಅಮ್ಮನಂತ ಅಣ್ಣನ ತೋಳು ನನ್ನ ಪ್ರೀತಿಗೆ ಹಾತೊರೆದಂತೆ ಕಾಣಲಿಲ್ಲ. ನಕ್ಕು ನಗಿಸಿದ ತುಂಟಾಟ, ಲಗೋರಿಯಾಟ ಆಡಿದ ಅಣ್ಣನ ಮುಖದಲ್ಲಿ ಎಂದಿನ ನಗೆ ಬೆಳಕಿರಲಿಲ್ಲ. ಅತ್ತಿಗೆಯ ಮುಖ ನನ್ನಮ್ಮನಂತೆ ನನ್ನ ಸ್ವಾಗತಿಸಲಿಲ್ಲ. ತನ್ನ ಕೋಣೆಯೊಳಗೆ ಕುಳಿತ ಅಣ್ಣ ಹಾಗೇ ಬಾಗಿಲು ಹಾಕಿದ್ದ. ಮತ್ತೆಂದೂ ತೆರೆಯಲಿಲ್ಲ....ಆದರೆ..ನನ್ನೊಳಗಿನ ಪ್ರಶ್ನೆಗಳಿಗೆ ಅಲ್ಲಿ ಉತ್ತರವಿರಲಿಲ್ಲ..ಯಾಕಂದರೆ ಆತ ನನ್ನ 'ಅಣ್ಣ' ಆಗಿದ್ದ.”
ನಾವು ಬೆಳೆದಂತೆ ಬದಲಾಗುವ ಸಂಬಂಧಗಳು, ಬದಲಾಗುವ ಆಪ್ತರನ್ನು ನೋಡಿಯೇ ಮನಸ್ಸಿಗೆ ತುಂಬಾ ಖೇದವಾಗುತ್ತದೆ. ಅದಕ್ಕೆ ಸಹಾಯಕವಾಗುವ ವ್ಯಕ್ತಿಗಳು, ಘಟನೆಗಳು ಮತ್ತು ಘಾಷಿಗೊಳಿಸುವ ಬದುಕನ್ನು ನೆನೆದರೆ ನನಗೆ ಬದುಕಿನತ್ತ ಒಂದು ರೀತಿಯ ತಿರಸ್ಕಾರ ಬೆಳೆಯುತ್ತದೆ. ಪ್ರೀತಿಸುವ ಜೀವಗಳೇ ಇಲ್ಲವಾದ ಮೇಲೆ ಬದುಕಿದ್ದೂ ಏನು ಪ್ರಯೋಜನ? ಎಂದು ಒಮ್ಮೊಮ್ಮೆ ಅನಿಸಿಬಿಡುತ್ತದೆ. ಇದು ಆಧುನಿಕ ಕಾಲ ಬದುಕುವ ಪರಿಯೆ? ಅನಿವಾರ್ಯವೆ? ಕರ್ಮವೆ? ಒಂದೂ ಗೊತ್ತಾಗದೆ ನಿಟ್ಟುಸಿರು ಬಿಡುತ್ತೇನೆ.
ಆಧುನಿಕ ಬದುಕಿನಲ್ಲಿ ಸಂಬಂಧಗಳು ತೀರ ಸಂಕುಚಿತವಾಗುವದನ್ನು ಹಾಗೂ ಆತ್ಮೀಯರಿಂದಲೇ ದೂರಾಗುವ ಪರಿಯನ್ನು ತುಂಬಾ ಸೊಗಸಾಗಿ ನಿಮ್ಮದೇ ಭಾಷೆಯ ಲಯಗಾರಿಕೆಯಲ್ಲಿ ಕಟ್ಟಿಕೊಟ್ಟಿದ್ದೀರಿ. ನಿಮ್ಮ ಈ ಬರಹಕ್ಕೆ ನೂರು ನೂರು ಥ್ಯಾಂಕ್ಸ್ ಹೇಳಿದರೂ ಸಾಲದು. Anyway, keep writing and I wish you all the best.
ಮತ್ತೆ ದುಃಖದ ಲೇಖನ ಹಾಕಿದ್ದೀರಲ್ಲ.
ಪಾಪ ಜಿರಲೆಯ ಕಂಡು ದುಃಖ ಆಯ್ತು.
ಕ್ಷಮಯಾ ಧರಿತ್ರಿಯವರೆ,
ಮೀಸೆಬಿಟ್ಟ ಪ್ರಾಣಿ(ಜಿರಲೆ ಅಥವಾ ಗಂಡೋ?!)ಯನ್ನು ಕೊಚ್ಚಿ,ಕತ್ತರಿಸಬಲ್ಲ ಸಿಂಹಿಣಿ ನಾನು ಎಂದು ಬರೆದಿರುವುದನ್ನು ಯಾವ ಅರ್ಥದಲ್ಲಿ ತಗೋಬೇಕೋ ಗೊತ್ತಾಗುತ್ತಿಲ್ಲ!!!
ಜಿರಳೆ ಕೊಲ್ಲುವ ಮಹಿಳೆಗೆ Good Luck!
@ಅಂತರ್ವಾಣಿ ನಮಸ್ತೆ..ಏನ್ರೀ ಅಳು ಬರೋದು? ನಿಮಗೆ ನಾನು ಏನೂ ಬರೆದ್ರೂ ಅಳುನೇ. ನಾನೇನ ಮಾಡಲಿ ಸರ್? ಇನ್ನು ಮುಂದೆ ನನ್ ಬರಹ ಕಣ್ನೀರು ತರಿಸೋದಾದ್ರೆ ಉಚಿತವಾಗಿ ಕರ್ಚಿಪ್ ನೀಡಿರ್ತೀನಿ. ಒರೆಸಿಕೊಳ್ತಾ ಓದಿದ್ರೆ ಆಯಿತು. ಏನಂತೀರ?
@ಮಲ್ಲಿಯಣ್ಣ..ಕಾಲೆಳೆಯುವುದರ್ರಲ್ಲಿ ಭಾಳ ಹುಷಾರಿದ್ದೀರಾ ನೀವು. ನೋಡ್ಕೋತೀನಿ ನಿಮ್ಮನ್ನು. ಬೇರೆ ಯಾವ ಅರ್ಥ ಕಲ್ಪಿಸೋದು ಬೇಡ...ಬರೇ ಮೀಸೆ ಜಿರಲೆ ಕೊಲ್ಲುವ ಧರಿತ್ರಿ ಅಂದುಕೊಂಡರೆ ಸಾಕು.
-ಧರಿತ್ರಿ
ಪ್ರೀತಿಯ ಉದಯ್ ಸರ್ (ಬಿಸಿಲಹನಿ) ನಮಸ್ತೆ. ಮೊದಲನೆಯದಾಗಿ ನನ್ನ ಬ್ಲಾಗಿಗೆ ಮೊದಲ ಬಾರಿ ಬಂದು ಓದಿ, ಅಷ್ಟೇ ಪ್ರೀತಿಯಿಂದ ಪ್ರತಿಕ್ರಿಯೆ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್.
ಇತ್ತೀಚೆಗೆ ನಾನು ಮನೆಯಲ್ಲಿ 'ತವರೂರ ಮನೆ ನೋಡ ಬಂದೆ" ಜನಪದ ಗೀತೆ ಕೇಳ್ತಾ ಇದ್ದೆ. ಈ ಹಾಡನ್ನು ಕೇಳ್ತಾ ಇದ್ದಂತೆ ನನ್ನ ಕಣ್ಣಾಲಿಗಳೂ ನೀರಾಗಿದ್ದವು. ನನಗೆ ಗೊತ್ತಿಲ್ಲದೆಯೇ ಅತ್ತಿದ್ದೆ..ಅಷ್ಟೇ ಭಾವುಕತೆಯಿಂದ ಆ ಹಾಡಿನಲ್ಲಿರುವ ಸಾರಾಂಶವನ್ನೇ ನನ್ನದೇ ಭಾಷೆಯಲ್ಲಿ ಹೆಣೆದುಬಿಟ್ಟೆ. ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ...ಪ್ರೀತಿಯಿರಲಿ.
-ಧರಿತ್ರಿ
ಹ್ಹ ಹ್ಹ ಹ್ಹಾ... ಜಿರಳೆಗಳ ವಿರುದ್ಧ ಸಮರ! ತುಂಬಾ ಚೆನ್ನಾಗಿದೆ ಧರಿತ್ರಿ. ಆದ್ರೆ, ಜಿರಳೆ ವಿರುದ್ಧ ಹೋರಾಡೋಕೆ ನೀವೊಬ್ಬ ಪ್ರೊಫೆಶನಲ್ ಆಗಿರ್ಬೇಕು; ಗೋದ್ರೆಜ್ ಪೆಸ್ಟ್ ಕಂಟ್ರೋಲ್ ಥರಾ.
ನಿಮಗೆ ರಾಘವೇಂದ್ರ ರವರ (ಮೊದಲ) ಕಾಮೆಂಟ್ ಇನ್ನೂ ಅರ್ಥ ಆಗಿಲ್ಲ ಅಂದ್ರೆ ಆ ಸಾಲುಗಳನ್ನು ಇನ್ನೊಂದು ಸಲ ಓದಿ. ನಂಗೇನೋ ಆ ಸಾಲುಗಳಲ್ಲಿ ಸ್ವಲ್ಪ ವ್ಯಾಕರಣ ಶುದ್ಧಿಯ ಕೊರತೆ ಮತ್ತು ಸ್ವಲ್ಪ ವಿರೋಧಾಭಾಸಗಳಿವೆ ಅನ್ನಿಸ್ತು. ಬೇಜಾರ್ ಮಾಡ್ಕೊಬೇಡಿ, ಸುಮ್ನೇ ಹೇಳೋಣ ಅನ್ನಿಸ್ತು, ಹೇಳ್ದೆ ಅಷ್ಟೇ :)
ಹೀಗೆ ಬರೀತಾ ಇರಿ.
ಇಲ್ಲ, ನಾನು ವ್ಯಾಕರಣ, ಅಥವಾ ವಿರೋಧಾಭಾಸದ ಕುರಿತು ಹೇಳಲಿಲ್ಲ, “ಜಜ್ಜಿ ಕೊಂದು ಬಿಡು”ವ ಉತ್ಸಾಹದ ಕುರಿತು ಹೇಳುತ್ತಿದ್ದೆ ಅಷ್ಟೇ:-)
@ಉಮೇಶ್..ನಮಸ್ತೆ. ತಡವಾಗಿಯಾದರೂ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ಇನ್ನು ಜಿರಲೆ ಕೊಲ್ಲಕ್ಕೆ ಸ್ವಲ್ಪ ಪ್ರೊಪೆಶನಲ್ ಆಗಬೇಕು ಅನಿಸಿದೆ. ಹಂಗೇ ಮಾಡ್ತೀನಿ ಬಿಡಿ. ರಾಘವೇಂದ್ರ ಅವರ ಪ್ರತಿಕ್ರಿಯೆಗೆ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಧನ್ಯವಾದಗಳು.
@ರಾಘವೇಂದ್ರ ಸರ್...ನಿಮಗೂ ಧನ್ಯವಾದಗಳು.
-ಧರಿತ್ರಿ
Post a Comment