Saturday, August 25, 2012

ಅಮ್ಮನ ತಿಜೋರಿ


ಅಮ್ಮ ಮೊದಲ ಬಾರಿ ಆ ಪೆಟ್ಟಿಗೆ ತೆರೆದಿದ್ದು ನೆನಪಿದೆ. ಅಂದು ಅಮ್ಮ ನಸುಕೆಂಪು ಬಣ್ಣದ ನೈಲಾನ್ ಸೀರೆ ಉಟ್ಟಿದ್ದಳು. ಅದು ಬೇಸಿಗೆಕಾಲವಾಗಿತ್ತು. ಏಣಿ ಹತ್ತಿ ಅಟ್ಟದಿಂದ ಆ ಪೆಟ್ಟಿಗೆಯನ್ನು ತಂದು ಮನೆಯ ಜಗಲಿಯಲ್ಲಿ ಇಟ್ಟಳು. ಪೆಟ್ಟಿಗೆ ಮೇಲೆ ತುಂಬಿದ ಮಸಿ, ಧೂಳನ್ನು ಬಟ್ಟೆಯಿಂದ ಒರೆಸಿ, ಸೆರಗಿನಲ್ಲಿದ್ದ ಬೀಗದ ಕೀಯಿಂದ ಪೆಟ್ಟಿಗೆ ತೆರೆದಳು. ನಾನು ಕಾಲು ಮಡಿಚಿ ಅದನ್ನೇ ಎವೆಯಿಕ್ಕದೆ ನೋಡುತ್ತಿದ್ದೆ. ತೆರೆಯುವ ಮೊದಲೇ ಯಾವುದಕ್ಕೂ ಕೈ ಹಾಕಬೇಡ ಎಂದು ಆದೇಶ ಹೊರಡಿಸಿದ್ದಿರಿಂದ ನಾನು ಕೈ-ಕಾಲು ಬಿಗಿಹಿಡಿದು ಸುಮ್ಮನೆ ಕೂರಬೇಕಾಗಿತ್ತು.

ಅಮ್ಮನ ಬಳಿ  ಇದ್ದಿದ್ದು ಕಬ್ಬಿಣದ ಪೆಟ್ಟಿದೆ.  ಅದಕ್ಕೆಕೆಂಪು ಮತ್ತು ಹಸಿರು ಬಣ್ಣ ಬಳಿಯಲಾಗಿತ್ತು. ಅದರ ಬೀಗದ ಚಿನ್ನದ ಬಣ್ಣ. ದೊಡ್ಡ ಬೀಗ ಅದು. ಅದರ ಕೀ ಯಾವಾಗಲೂ ಅಮ್ಮನ ಸೆರಗಿನ ಗಂಟಿನಲ್ಲಿರುತ್ತಿತ್ತು. ಎಲ್ಲೇ ಹೋದರೂ ಅಮ್ಮ ಅದನ್ನು ಜೊತೆಗೆ ಕೊಂಡೊಯ್ಯುವಳು. ಅಂಗಡಿಗೆ, ಪಕ್ಕದ್ಮನೆಗೆ, ಸಂತೆಗೆ ಹೋದಾಗಲೆಲ್ಲಾ ಸೆರಗಿನಲ್ಲಿದ್ದ ಆ ಕೀಯನ್ನು ಪದೇ ಪದೇ ಮುಟ್ಟಿ ನೋಡುತ್ತಿದ್ದಳು. ಅದ್ಯಾಕೆ ಸೆರಗಿನಲ್ಲಿ ಇಟ್ಟುಕೊಳ್ತೀಯಾ ಎಂದು ಕೇಳಿದರೆ, ಬಿದ್ದುಹೋದರೆ ನನ್ನ ಜೀವನನೇ ಮುಗಿದಂತೆ. ಅದಕ್ಕೆ ಯಾವಾಗಲೂ ಜೊತೆಗೆ ಇಟ್ಟುಕೊಳ್ಳುತ್ತೇನೆ ಎನ್ನುವ ಸಮಜಾಯಿಷಿ ಆಕೆಯದು.

ತೆರೆದಾಗ ಮೊದಲು ತೋರಿಸಿದ್ದು ಅಮ್ಮನ ಮದುವೆ ಸೀರೆ. ಅವಳ ಮದುವೆಗೆ ಎರಡೇ ಸೀರೆ ತೆಗೆದಿದ್ದಂತೆ. ಅಮ್ಮ ಮದ್ವೆಗೆ ಖರ್ಚಾಗಿದ್ದು ಕೇವಲ 103 ರೂಪಾಯಿ. ಮದ್ವೆಗೆ ಏನೇನು ಖರ್ಚು ಮಾಡಿದ್ದೆ ಎಂದು ಅದನ್ನು ಲೆಕ್ಕ ಬರೆಸಿಟ್ಟಿದ್ದಳು. ಅವಳ ಮದ್ವೆಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನೂ ಹಸಿರು ಬಣ್ಣದ ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿಸಿಟ್ಟಿದ್ದಳು. ಮತ್ತೊಂದು ಬಿಳಿ ಬಣ್ಣದ ಕವರ್ ತೆಗೆದಳು. ಅದರಲ್ಲಿ ಏನೇನೋ ದಾಖಲೆಗಳು, ರಸೀದಿಗಳು ತುಂಬಿದ್ದವು. ನೋಡು ಓದು. ಎಂದು ಕೊಟ್ಟಳು. "ತೆರಿಗೆ'' ಎಂದು ಬರೆದಿತ್ತು. ಅದನ್ನು ಹಾಗೇ ಓದಿ ಹೇಳಿದಾಗ, ಅಮ್ಮ ಅದು ಮನೆ ತೆರಿಗೆ ಕಟ್ಟಿದ ರಸೀದಿ,  ಮನೆಗೆ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು..ಎಂದು ಅದರ ವಿವರಗಳನ್ನು ನೀಡಿದಳು. ಮತ್ತೆ ಇನ್ನೊಂದು ಕೆಂಪು ಬಣ್ಣದ ಕವರ್ ತೆಗೆದಳು; ಅದರಲ್ಲಿ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಇದ್ದವು...ಹೀಗೆ ಪ್ರತಿ ಕವರ್ ಕೂಡ ಬೇರೆ ಬೇರೆ ಬಣ್ಣ ಹೊಂದಿರುತ್ತಿತ್ತು, ಅಮ್ಮ ಕವರಿನ ಬಣ್ಣದ ಮೇಲೆಯೇ ಅದೇನೆಂದು ಗುರುತು ಇಟ್ಟುಕೊಂಡಿದ್ದಳು. ಜೊತೆಗೆ, ಆ ಕವರ್ ಗಳನ್ನು ಅಷ್ಟೇ ಶಿಸ್ತಿನಿಂದ ಇಟ್ಟುಕೊಳ್ಳುತ್ತಿದ್ದಳು. ಅಮ್ಮನ ಬಳಿ ಅವಳ ಮದ್ವೆಯ ಫೋಟೋ ಇರಲಿಲ್ಲ, ಆದರೆ, ಅಮ್ಮನ ಅಪ್ಪ ಎಂದರೆ ಅಜ್ಜನ ವಿಭಿನ್ನ ಭಂಗಿಯ ಚೆಂದದ ಫೋಟೋಗಳಿದ್ದವು. ಅವುಗಳು ಹಾಳಾಗದಂತೆ ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿಸಿಟ್ಟಿದ್ದಳು.

ಅಜ್ಜನ ಮೇಲೆ ಅಮ್ಮಂಗೆ ಅಪಾರ ಪ್ರೀತಿ. "ನಾನು ನನ್ನಪ್ಪನ ತರ' ಎನ್ನುವಳು. ಪದೇ ಪದೇ ಅಜ್ಜನ ಫೋಟೋ ನೋಡಿ ಖುಷಿಪಡುವಳು. ಜೊತೆಗೆ, ಅಜ್ಜನ ಜೊತೆ ಬೇಟೆಗೆ ಹೋಗಿದ್ದು, ಕಳ್ಳು ತೆಗೆಯಲು ಹೋಗಿದ್ದು, ಗದ್ದೆಗೆ ಉಳಲು ಹೋಗಿದ್ದು, ಅಜ್ಜ ಹೊಡೆದಿದ್ದು, ಹೆಗಲ ಮೇಲೆ ಕೂರಿಸಿಕೊಂಡು ಹೋಗಿದ್ದು, ಕಳ್ಳಭಟ್ಟಿ ಮಾಡಿ ಅಜ್ಜ ಪೊಲೀಸರಿಗೆ ಸಿಕ್ಕಿಬಿದ್ದಾಗ...ಅಮ್ಮನೇ ಬಿಡಿಸಿಕೊಂಡು ಬಂದಿದ್ದು...ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದಳು. ಅಜ್ಜನ ಬಗ್ಗೆ ಹೇಳುವಾಗಲೆಲ್ಲಾ ಅಮ್ಮನ ಕಣ್ಣುಗಳಲ್ಲಿ ಹೆಮ್ಮೆಯ ಭಾವ ಒಡಮೂಡುತ್ತಿತ್ತು. ಅಮ್ಮನ ಕಬ್ಬಿಣದ ಪೆಟ್ಟಿಗೆ ಈಗಲೂ ಇದೆ. ಐವತ್ತೈದು ದಾಟಿದ ಅಮ್ಮ ಈಗಲೂ ಪೆಟ್ಟಿಗೆಯನ್ನು ಜೋಪಾನವಾಗಿಟ್ಟಿದ್ದಾಳೆ.




2 comments:

ಸುಷ್ಮಾ ಮೂಡುಬಿದಿರೆ said...

ಚಂದದ ಬರಹ ಅಕ್ಕಾ..
ಹಿರಿಯರ ಮುಗ್ದತೆ, ಕಾಳಜಿ.. ನಿಮ್ಮ ಲೇಖನದಲ್ಲಿ ನವಿರಾಗಿ ನಿರೂಪಿಸಲ್ಪಡುತ್ತದೆ..

sunaath said...

ಚಿತ್ರಾ,
ನಿಮ್ಮ ನೆನಪುಗಳು ತುಂಬ ಆತ್ಮೀಯವಾಗಿರುತ್ತವೆ. ಓದುವಾಗ ನಿಮ್ಮ ನೆನಪುಗಳಲ್ಲಿ ಪಾಲ್ಗೊಳ್ಳುತ್ತಿರುವ ಭಾವನೆ ಬರುತ್ತದೆ. ಅಮ್ಮನ ನೆನಪು ಸೊಗಸಾಗಿದೆ.