ನಮ್ಮನೆ ವರಾಂಡದಲ್ಲಿ ಕುಳಿತರೆ ಶೆಟ್ಟರ ದೊಡ್ಡ ಬಂಗ್ಲೆ ಕಾಣಿಸುವುದು. ಭಾನುವಾರದ ಸುಂದರ ಸಂಜೆ. ಗಾಳಿ ಮೌನವಾಗಿತ್ತು. ಸಂಜೆಯ ತಂಪಿನಲ್ಲಿ ನೆನಪುಗಳು ಬಿಚ್ಚಿದವು. ಶೆಟ್ಟರ ಮನೆಯಲ್ಲಿ ಮೊಮ್ಮಕ್ಕಳ ಕಲರವ. ಶೆಟ್ಟರಿಗೆ ಒಟ್ಟು ೧೨ ಮಂದಿ ಮೊಮ್ಮಕ್ಕಳು. ಅವರ ನಾಲ್ಕು ಜನ ಗಂಡು ಮಕ್ಕಳು, ನಾಲ್ವರಿಗೂ ಮದುವೆಯಾಗಿದೆ. ಹಾಗಾಗಿ,ಮೊಮ್ಮಕ್ಕಳ ಸಂಖ್ಯೆಒಂದು ಡಜನ್.
ಶೆಟ್ಟರ ಹೆಂಡ್ತಿ ಇರುವಾಗ ಮನೆಯಲ್ಲಿ ನಿತ್ಯವೂ ಸುಗ್ಗಿ. ನಾಲ್ವರು ಸೊಸೆಯರಿಗೆ ಕೆಲ್ಸವನ್ನು ಹಂಚುತ್ತಿದ್ದುದ್ದೇ ಶೆಟ್ಟರ ಹೆಂಡ್ತಿ. ಬೆಳಿಗ್ಗೆ ಎದ್ದಾಗ ನಿತ್ಯ ದಿನಚರಿಯ ವೇಳಾಪಟ್ಟಿ ಸೊಸೆಯಂದಿರ ಮುಂದೆ. ಮನೆಯ ದೊಡ್ಡ ವರಾಂಡದಲ್ಲಿ ಅತ್ತೆ ಕುಳಿತರೆ, ನಾಲ್ಕು ಕಡೆಗೂ ಕಣ್ಣು ನಡೆಯುತ್ತಿತ್ತು. ಬೆಳಗ್ಗೆ ತಿಂಡಿ ರೆಡಿ ಮಾಡುವುದರಿಂದ ಹಿಡಿದು ರಾತ್ರಿ ತನಕ ಎಲ್ಲವೂ ಅಚ್ಚುಕಟ್ಟಾಗಿ ನಡೆಯಬೇಕು.
ಮನೆಯಲ್ಲಿ ನಾಲ್ಕು ದೊಡ್ಡ ನಾಯಿಗಳಿವೆ. ಎಲ್ಲವೂ ಬೆಳಿಗ್ಗೆ-ಸಂಜೆ ವಾಕ್ ಮಾಡ್ತವೆ. ಇದರ ಉಸ್ತುವಾರಿಯೂ ಸೊಸೆಯಂದಿರದ್ದೆ. ಬೆಳಿಗ್ಗೆದ್ದರೆ ಮೊದಲ ಕೆಲ್ಸ ನಾಯಿಗಳನ್ನು ವಾಕ್ ಮಾಡಿಸುವುದು. ಅತ್ತೆಯ ಮಾತು ಮೀರಿ ಯಾವುದೇ ಕೆಲಸಗಳಿಲ್ಲ. ಅವರ ಗಂಡಂದಿರೂ ಅಷ್ಟೇ, ಅಪ್ಪ-ಅಮ್ಮನ ಮಾತು ಮೀರಲ್ಲ. ಪೇಟೆಗೆ ಹೋಗಬೇಕಾದರೂ ಅಮ್ಮನ ಬಳಿ ಹೇಳಿ ಹೊರಡೋರು.
ಹಬ್ಬ ಬಂದ್ರೆ ಶೆಟ್ಟರ ಮನೆ ಸಂಭ್ರಮದ ಮೇಲೆಯೇ ಎಲ್ಲರಿಗೂ ಕಣ್ಣು. ಏನು ಖುಷಿ ಶೆಟ್ರ ಮನೆಯಲ್ಲಿ ಅನ್ನೋರು ಸುತ್ತಲ ಜನ. ರಸ್ತೆ ಕಾಮಗಾರಿಗೆ ಬಂದವ್ರ ಮಕ್ಕಳಿಗೆಲ್ಲಾ ಶೆಟ್ರು ಕರೆದು ಊಟ ಹಾಕೋರು. ಮಗ-ಸೊಸೆಯಂದಿರಿಗೆ ಒಡವೆ, ವಸ್ತ್ರಗಳನ್ನು ನೀಡಿ ಖುಷಿಪಡೋರು. ಜೀವನ ಪ್ರೀತಿನ ಹಂಚೋರು. ಅರಮನೆಯಂಥ ಮನೆಯಲ್ಲಿ ಜನಸಂಖ್ಯೆ ೨೦ ದಾಟಿದವರೂ ಜೋರು ದನಿಗಳು ಸದ್ದು ಮಾಡುತ್ತಿರಲಿಲ್ಲ. ಮಕ್ಕಳ, ಸೊಸೆಯಂದಿರ, ಮೊಮ್ಮಕ್ಕಳ ಖುಷಿ ಜಾತ್ರೆ ನಡುವೆಯೇ ಶೆಟ್ಟರ ಹೆಂಡ್ತಿ ಬದುಕು ಬಿಟ್ಟು ದೂರಹೋಗಿದ್ದಾರೆ. ಶೆಟ್ಟರು ಒಂಟಿಯಾಗಿದ್ದಾರೆ. ಅವರ ಕಣ್ಣುಗಳಲ್ಲಿ ಮೊದಲಿನ ಉತ್ಸಾಹ ಮರೆಯಾಗಿದೆ.
ಶೆಟ್ಟರ ಹೆಂಡ್ತಿ ತೀರಿ ತಿಂಗಳು ಮೂರು ಸರಿದಿದೆ. ಶೆಟ್ಟರ ಮನೆಯ ಮಾತುಗಳು ಒಂದು ಕಿ.ಮೀ. ದೂರ ದವರೆಗೆ ಕೇಳುತ್ತಿವೆ. ಅಡುಗೆ ಮನೆಯಲ್ಲಿ ಪಾತ್ರೆಗಳ ಸದ್ದು ಜೋರಾಗಿದೆ. ಒಂಬತ್ತು ಗಂಟೆಗೆ ಎದ್ದು ಸೊಸೆಯಂದಿರು ಹಲ್ಲಿಗೆ ಬ್ರೆಶ್ ಹಿಡಿಯುತ್ತಾರೆ. ಕೈಗೊಂದು ಕಾಲಿಗೊಂದು ಆಳುಗಳು ಬಂದು ಬೆಳ್ಳಂಬೆಳಿಗ್ಗೆ ಕಾಲಿಂಗ್ ಬೆಲ್ ಒತ್ತುತ್ತಾರೆ. ಸಂಜೆಯ ತಂಪಿಗೆ ಮುಖವೊಡ್ಡಿ ಕುಳಿತಾಗ ನೆನಪಾಗಿದ್ದು ಶೆಟ್ಟರ ಅರಮನೆಯ ಭೂತಕಾಲದ ಬದುಕು.
2 comments:
ಶಿಸ್ತಿನ ಯಜಮಾನ್ತಿ ಹೋದ ಮೇಲೆ, ಎಂಥಾ ಬದಲಾವಣೆ ಬಂತಲ್ಲ! ಬರಹ ಸೊಗಸಾಗಿದೆ.
ಹಿರಿಯರ ಮಾರ್ಗದರ್ಶನ, ಭಯ, ಭಕ್ತಿಗಳಿಲ್ಲದ ಮನೆ ಹಾಗೆಯೇ. ಜವಾಬ್ಧಾರಿ ಇರುವುದಿಲ್ಲ. ಇದೆಲ್ಲವನ್ನೂ ನೋಡುತ್ತಿರುವ ಶೆಟ್ಟರ ಹೆಂಡತಿಯ ಆತ್ಮ ಅದೆಷ್ಟು ವಿಲಿ ವಿಲಿ ಒದ್ದಾದುತ್ತಿದೆಯೋ?
ಅವರ ಆತ್ಮಕ್ಕೆ ದೇವರು ಶಾಂತಿ ಕೊಡಲಿ.
Post a Comment