ಬಹುಶಃ ಮನುಷ್ಯ-ಮನುಷ್ಯ ಸಂಬಂಧಗಳಿಗಿಂತಲೂ ಕೆಲವೊಮ್ಮೆ ಪ್ರಾಣಿ-ಮನುಷ್ಯರ ಸಂಬಂಧ ಗಾಢವಾಗಿರುತ್ತೆ, ನಿಷ್ಕಲ್ಮಶ, ಪ್ರಾಮಾಣಿಕವಾಗಿರುತ್ತೆ. ನಮ್ಮನೆಯ ಕರು, ನಮ್ಮನೆಯ ಪ್ರೀತಿಯ ಬೆಕ್ಕು, ನಾಯಿಮರೀನ ನಾವು ನಮ್ಮನೆ ಮಕ್ಕಳ ಥರ ನೋಡಿಕೊಳ್ಳ್ತೀವಿ. ಅವುಗಳೂ ಅಷ್ಟೇ..ನಮ್ಮ ಮೇಲೆ ಅವು ತೋರಿಸುವ ನಿಷ್ಕಲ್ಮಶ ಪ್ರೀತಿನ ಕಂಡಾಗ ನಮ್ಮ ಮನೆ-ಮನಸ್ಸು ತುಂಬಿಬಿಡುತ್ತೆ. ಒಂದು ಕ್ಷಣ ಅವುಗಳು ನಮ್ಮೆದುರು ಇಲ್ಲಾದಾಗ ಅವುಗಳಿಗಾಗಿ ನಮ್ಮ ಕಣ್ಣುಗಳು ಹುಡುಕಾಡುತ್ತವೆ. ಅದರಲ್ಲೂ ನಾಯಿಯನ್ನು ಅತ್ಯಂತ ಕೃತಜ್ಞ ಪ್ರಾಣಿ ಅಂತಾರೆ. ಎಷ್ಟೋ ವರುಷಗಳ ಹಿಂದೆ ನಾವು ಒಂದು ನಾಯಿಗೆ ರೊಟ್ಟಿ ತುಂಡನ್ನು ಹಾಕಿದ್ರೆ ಅದು ಜೀವನವೀಡೀ ನಮ್ಮ ನೋಡಿದಾಗ ಬಾಲ ಅಲ್ಲಾಡಿಸಿ, ಕಿವಿ ನಿಮಿರಿಸಿ ಪ್ರೀತಿ ವ್ಯಕ್ತಪಡಿಸುತ್ತೆ.
ನಾನು ಶಾಲೆಗೆ ಹೋಗೋ ಸಮಯದಲ್ಲಿ ನಮ್ಮನೆಯಲ್ಲಿ ಒಂದು ನಾಯಿ ಇತ್ತು. ಸಕತ್ತ್ ಡುಮ್ಮ ನಾಯಿ...ಗುಂಡು-ಗುಂಡಾಗಿ ನೋಡಕ್ಕೂ ತುಂಬಾ ಸುಂದರವಾಗಿತ್ತು. ಅದಕ್ಕೆ ನನ್ನ ತಮ್ಮ 'ದೊಲ್ಲ' ಅಂತ ಹೆಸರಿಟ್ಟಿದ್ದ. ಅದಕ್ಕೂ ಮಲಗೋಕೆ ಚೆಂದದ ದಿಂಬು ಎಲ್ಲಾ ರೆಡಿಮಾಡಿದ್ದ ನನ್ನ ತಮ್ಮ. ರಾತ್ರಿ ತಮ್ಮನಿಗೆ ನಿದ್ದೆ ಬರೋ ತನಕ ಅದು ನಮ್ಮ ಜೊತೆನೇ ನಿದ್ದೆ ಮಾಡುತ್ತಿತ್ತು. ಆಮೇಲೆ ಎದ್ದು ಹೋಗಿ ಜಗಲಿಯಲ್ಲಿ ಮನೆ ಕಾಯುತ್ತಿತ್ತು. ನಾವು ಶಾಲೆಗೆ ಹೋಗುವಾಗ ಅರ್ಧದಾರಿ ತನಕ ನಮ್ಮ ಜೊತೆಗೆ ಬರೋ ದೊಲ್ಲ, ಆಮೇಲೆ ಸಂಜೆಯೂ ನಾವು ಶಾಲೆ ಬಿಡುವ ಹೊತ್ತಿಗೆ ಮನೆ ಗೇಟ್ ಎದುರು ಕುಳಿತು ಕಾಯುತ್ತಿತ್ತು. ನಾವು ಬರೊದೇ ತಡ..ನಮ್ಮ ಜೊತೆ ಅದಕ್ಕೂ ಏನಾದ್ರೂ ತಿನ್ನಬೇಕು..ಇಲ್ಲಾಂದ್ರೆ ನಮ್ಮ ಮೈಮೇಲ್ಲ ಹಾರಿ ಕಚ್ಚೋ ಕೆಲಸ ಮಾಡುತ್ತಿತ್ತು. ನನ್ನ ತಮ್ಮನಿಗಂತೂ ದೊಲ್ಲ ಅಂದ್ರೆ ನಮಗೆಲ್ಲರಿಗಿಂತಲೂ ಹೆಚ್ಚು ಪ್ರೀತಿ.
ಆದರೆ ಆ ದೊಲ್ಲ ಬದುಕಿದ್ದು ಎರಡನೇ ವರುಷ. ನಮ್ಮನೆಯ ಪಕ್ಕದ್ಮನೆಯ ನಾಯಿ ಅದಕ್ಕೆ ಕಚ್ಚಿ ಹೊಟ್ಟೆಗೆ ಗಾಯವಾಗಿತ್ತು. ಹಾಗಾಗಿ ತುಂಬಾ ದಿನ ಅದು ಮಲಗಿದ್ದಲ್ಲೇ ಇತ್ತು..ತಮ್ಮ ಆರೈಕೆ ಮಾಡ್ತಾ ಇದ್ದ. ಮತ್ತೆ ಎದ್ದು ನಡೆಯಲಾರಂಭಿಸಿದರೂ ತೀರ ಓಡಾಟ ಕಷ್ಟವಾಗುತ್ತಿತ್ತು. ಕೊನೆಗೊಂದು ದಿನ ನಾವು ಶಾಲೆಯಿಂದ ಬರುವಾಗ ದೊಲ್ಲ ಇರಲಿಲ್ಲ..ಎಲ್ಲಿ ಹುಡುಕಿದ್ರೂ ಸಿಕ್ಕಿರಲಿಲ್ಲ. ಒಂದು ದಿನ ಕಳೆದ ಮೇಲೆ ನಮ್ಮ ತೋಟದ ಬದಿಯಲ್ಲಿ ನಮ್ಮ ದೊಲ್ಲ ಚಿಕ್ಕ ಪೊದೆಗೆ ಸಿಕ್ಕಹಾಕೊಂಡು ಹೆಣವಾಗಿದ್ದ. ನನ್ನ ತಮ್ಮ 'ಅಮ್ಮ ನೀನೇ ಕೊಂದಿದ್ದು ನನ್ನ ದೊಲ್ಲನ..ನನ್ನನ್ನೂ ಕೊಂದುಬಿಡು' ಅಂತ ಅಳುತ್ತನೇ ಇದ್ದ. ಎರಡು ದಿವಸ ಊಟ ಮಾಡದೆ ಕುಳಿತಿದ್ದ. ಆದ್ರೂ ಅದನ್ನು ಹೂತ ಜಾಗದಲ್ಲಿ ಮತ್ತೆ ಮತ್ತೆ ಹೋಗಿ ಅಳುತ್ತಿದ್ದ. ವರುಷ ಅದೆಷ್ಟು ಸರಿದರೂ ದೊಲ್ಲನ ನೆನಪು ಬದುಕಾಗೇ ಇದೆ.
ನಿನ್ನೆ ಶ್ರೀ ಪೀಲು ಬಗ್ಗೆ ಹೇಳಿದಾಗ..ದೊಲ್ಲನೂ ನೆನಪಾದ..ಕಣ್ತುಂಬಿ ಬಂತು. ಕೆಲವೊಮ್ಮೆ ಮನುಷ್ಯ-ಮನುಷ್ಯ ನಡುವಿನ ಬಾಂಧವ್ಯ, ಪ್ರೀತಿನ ಕಂಡಾಗ ಮೂಕ ಪ್ರಾಣಿಯ ಪ್ರೀತಿಯೇ ಶ್ರೇಷ್ಠ ಅನಿಸುತ್ತೆ. ಈ ಪ್ರೀತಿ ಕನ್ನಡಿಯಂತೆ ಒಡೆಯಲ್ಲ, ನೋವು ಕೊಡಲ್ಲ, ಮನಸ್ಸು ಚುಚ್ಚೊಲ್ಲ, ಒಮ್ಮೊಮ್ಮೆ ಹೃದಯ ಭಾರವಾಗಿಸಲ್ಲ..ಪರಿಪರಿಯಾಗಿ ನಮ್ಮ ಕಾಡುತ್ತೆ, ಸಿಹಿನೆನಪಾಗುತ್ತೆ, ಬದುಕಿನ ಶ್ರೇಷ್ಠ ಘಟ್ಟದಲ್ಲಿ ನಿಂತು ನಮ್ಮನ್ನು ಗೌರವಿಸುತ್ತೆ ...ಏನಂತೀರಿ?
26 comments:
ಧರಿತ್ರಿ ದೊಲ್ಲನನ್ನೇ ಪೀಲು ಹಿಂಬಾಲಿಸಿಬಿಟ್ಟಳೆ? ಅದು ನಾಯಿ ಅನ್ನುವುದಕ್ಕಿಂಥ ನಮ್ಮ ಮನೆಯ ಕೊನೆಯ ಮಗಳಂತೆ ಇದ್ದಳು. ಅವಳ ಬಗ್ಗೆ ಬರೆಯಬಾರದೆಂದುಕೊಂಡಿದ್ದೇನೆ. ಅದ್ಯಾಕೋ ಗೊತ್ತಿಲ್ಲ. ಬ್ಲಾಗಿನಲ್ಲಿ ಪೀಲುಳನ್ನು ನೆನಪಿಸಿಕೊಂಡ ನಿನ್ನ ಪ್ರೀತಿಗೆ ಶರಣು ಧರಿತ್ರೀ....
ಕೃತಜ್ಞತೆಗಳು ಶ್ರೀ..ಬರ್ತಾ ಇರು ನನ್ನ ಮನೆ ಕಡೆ.
-ಧರಿತ್ರಿ
ಧರಿತ್ರಿ ಪ್ರಾಣಿ ಮನುಷ್ಯರ ನಡುವೆ ಸಂಬಂಧದ ಆಳ ವಿಜ್ನಾನಕ್ಕೂ ಇನ್ನೂ ಸವಾಲಾಗಿದೆ ಬಹಳ ಹಿಂದೆ ನಮ್ಮ ಮನೆಯಲ್ಲಿ
ಒಂದು ಬೆಕ್ಕಿತ್ತು. ಮುಂಜಾನೆ ನಾ ಚಹಾ ಕುಡೀಬೇಕಾದ್ರ ಬಂದು ನನ್ನ ತೊಡಿ ಏರಿ ಕೂಡತಿತ್ತು. ರಾತ್ರಿ ಯಾವ ಮಾಯದಲ್ಲೋ ಬಂದು ನನ್ನ ಹತ್ರ ಮಲಗ್ತಿತ್ತು. ಒಂದು ದಿನ ಭಾವ್ಯಾಗ ಅದರ ಹೆಣ ತೇಲತಿತ್ತು ಗುಬ್ಬಿ ಹಿಡೀಲಿಕ್ಕೆ ಹೋಗಿ ಬಿದ್ದದ ಅಂತ ಅವ್ವ ಹೇಳತಿದ್ಲು...ಆ ಬೆಕ್ಕು ನಿಮ್ಮ ದೊಲ್ಲ ಎಲ್ಲೂ ಹೋಗಿಲ್ಲ ಇಲ್ಲೇ ನಮ್ಮ ಮನಸಿನ್ಯಾಗ್ ಇದ್ದಾರ್
ಧರಿತ್ರಿ,
ನೀವು ಹೇಳುವುದು ಕರೆಕ್ಟ್, ಮನುಷ್ಯರಿಗಿಂತ ಪ್ರಾಣಿಗಳ ನಿಷ್ಕಲ್ಮಶ ಪ್ರೀತೇನೆ ಎಷ್ಟು ಉತ್ತಮ... ಎಷ್ಟು ಹಚ್ಚ್ಕೊಂಡ್ ಬಿಡ್ತವೆ ಅಲ್ವ.....ನಿಮ್ಮ ಇ ಲೇಖನ ನನ್ನ ಪ್ರೀತಿಯ ನಾಯಿ ಹಾಗು ಬೆಕ್ಕನ್ನು ನೆನಪಿಸಿತು.....:-(
ಇವಾಗ ಯಾವುದು ಇಲ್ಲ... ಆದರೆ ಅದು ನಮ್ಮನ್ನು ಅಗಲಿದಾಗ ಆಗುವ ಬೇಜಾರು ಅಸ್ಟಿಸ್ತಲ್ಲ......
ಒಳ್ಳೆಯ ಬರಹಕ್ಕೆ ಧನ್ಯವಾದಗಳು....
ಗುರು
ಮನುಷ್ಯ-ಮನುಷ್ಯ ಸಂಬಂಧಗಳಿಗಿಂತಲೂ ಕೆಲವೊಮ್ಮೆ ಪ್ರಾಣಿ-ಮನುಷ್ಯರ ಸಂಬಂಧ ಗಾಢವಾಗಿರುತ್ತೆ...Exactly correct
ಏನ್ರೀ ನೀವು..? ಅಮ್ಮ..ತಮ್ಮ ಅಂದ್ರಿ Fine ಅಂದೆ, ಕೆವೆಂಪು ಬೇಂದ್ರೆ ಅಂದ್ರಿ ನಾನ್ಸರೀರಿ ಅಂದ್ರೆ..ನಾಯಿ ಬಗ್ಗೆನೂ..ಭವನಾತ್ಮ ಮತ್ತೆ ಭಾವನಾತ್ಮಕ ಗಂಟೊಗಳನ್ನ ಹೆಣೆದಿದ್ದೀರಾ ಅದೂ..ನಾಯಿ ಅಂದ್ರೆ so-so ಅನ್ನೋ ಮನೋಭಾವದ ನನ್ನ ಮನಸ್ಸಲ್ಲೂ ಪ್ಚ್..ಪ್ಚ್..ಅನ್ನುವಂತೆ ಮಾಡಿದ್ರಿ...ಭಲೇ ಕಣ್ರಿ ನೀವು...
ಎಲ್ಲ ಸರಿ ಸ್ವಲ್ಪ ನಮ್ಮ ಗೂಡಿನ ಕಡೆ ಹೋಗಿ ಬನ್ನಿ...ಒಂದು ಪೋಸ್ಟ್ ಮಾಡಿದ್ದೀನಿ...ನೋಡಿ..ಒಬ್ಬರೇ ಇದ್ರೆ..ಜೋರಾಗಿ ಓದಿ ಮನಸಾ ನಕ್ಕುಬಿಡಿ...ಹೇಗೆ..?? ಬರ್ತೀರಲ್ಲಾ..??
ಧರಿತ್ರಿ....
ತುಂಬಾ ಚಂದದ ಬರಹ.....
ಮಾತು ಬಾರದ...
ಪ್ರಾಣಿ ಪ್ರೀತಿಗಳೇ ಹಾಗೆ...
ಅವು ಪ್ರೀತಿ, ಸ್ನೇಹ ವ್ಯಕ್ತಪಡಿಸುವ ರೀತಿಯಿಂದಲೇ...
ನಮ್ಮ ಹ್ರದಯದ ಆಳಕ್ಕೆ ಇಳಿದು ಬಿಡುತ್ತವೆ....
ನನ್ನಕ್ಕನ ಮನೆಯಲ್ಲಿ "ಸೋನು" ನಾಯಿ ಮರಿ ಇತ್ತು....
ಮನೆಯಲ್ಲಿ ಯಾರಾದರೂ ಬೆಳಿಗ್ಗೆ "ಏಳು" ಗಂಟೆಯನಂತರವೂ ಮಲಗಿದ್ದರೆ...
ಅವರ ಬೆಡ್ ಷೀಟ್ ಹಿಡಿದೆಳೆದು ಎಬ್ಬಿಸಿ ಬಿಡುತ್ತಿತ್ತು....
ನಮ್ಮ ಅಕ್ಕ ಅದಕ್ಕೆ ಮೊದಲ ತುತ್ತು ಅನ್ನ ತಿನ್ನಿಸಿದರೆ ಮಾತ್ರ...
ತನ್ನ ಊಟ ಖಾಲಿ ಮಾಡುತ್ತಿತ್ತು....
ಒಂದು ದಿನ ಬೀದಿ ನಾಯಿಗಳು ..
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಂದು ಕಚ್ಚಿ ಕಚ್ಚಿ ಸಾಯಿಸಿ ಬಿಟ್ಟಿದ್ದವು....
ನಮಗೆಲ್ಲ ಈಗಲೂ ನೆನಪಾದರೆ...
ಕಣ್ ತುಂಬಿ ಬರುತ್ತದೆ....
ಬಹಳ .... ಬಹಳ ಚಂದದ ಬರಹ ಧರಿತ್ರಿ.....
ಧರಿತ್ರಿ,
ಅರ್ಥ ಪೂರ್ಣ ಮತ್ತು ಭಾವ ಪೂರ್ಣ...
ಮನುಷ್ಯ ಸಂಬಂಧಕ್ಕಿಂತ ಮಿಗಿಲಾದದ್ದು ಅನ್ನಿಸಿ ಬಿಡುತ್ತೆ. ಅದಕ್ಕೆ ಹೇಳೋದು ನಿಸರ್ಗವನ್ನು ಪ್ರೀತಿಸಿ ಬಿಡಬೇಕು ಅಂತ, ಏನಂತೀರಿ?
...ಅಲ್ಲದೇ ಹಿಂದೊಮ್ಮೆ ನಾಯಿಮರಿ ಸಾಕಿ, ಅದು ನನಗೆ ಅತಿಯಾಗಿ ಹೊಂದಿಕೊಂಡುಬಿಟ್ಟು, ನಾನು ಹೋದಲ್ಲೆಲ್ಲಾ ಹಚ್ ನೆಟ್ವರ್ಕಿನಂತೆ ನನ್ನ ಹಿಂದೆಯೇ ಬರತೊಡಗಿ, ಒಂದು ದಿನ ತೋಟಕ್ಕೆ ಹೋಗುತ್ತಿದ್ದಾಗ ನನ್ನ ಹಿಂದೆ ಬಂದ ಇದನ್ನು ಪಟೇಲರ ಮನೆಯ ನಾಯಿ ಕಚ್ಚಿ ಕೊಂದು ಹಾಕಿದ ಮೇಲೆ ನಾನು ಇನ್ನು ಯಾವ ಪ್ರಾಣಿಯನ್ನೂ ಸಾಕಬಾರದು ಎಂಬ ತೀರ್ಮಾನಕ್ಕೆ ಬಂದಿದ್ದೆ. ಪ್ರೀತಿಪಾತ್ರ ಸಾಕುಪ್ರಾಣಿಗಳನ್ನು ಕಳೆದುಕೊಳ್ಳುವ ದುಃಖ ಯಾವ ದುಃಖಕ್ಕೂ ಕಮ್ಮಿಯಲ್ಲ.. (from ಇಲಿ ಕಾಟ )
ಈ ಪೋಸ್ಟಿನ ಟೈಟಲ್ ತುಂಬಾ ಚೆನ್ನಾಗಿದೆ ತಂಗಮ್ಮಾ..
ದರಿತ್ರಿ ಯವರೇ ನಿಮ್ಮ ಲೇಖನ ಓದುತ್ತಿರಬೇಕಾದರೆ ಎಂದೋ ಒಂದು ಟೀ-ಶರ್ಟ್ ಮೇಲೆ ಬರೆದಿದ್ದ ಮಾತು ನೆನಪಿಗೆ ಬಂತು..
"I lost my dog and the girl friend, Please help me to find my dog not my g.f"...
ಲೇಖನ ಮನಕಲುವಂತಿದೆ..
ಬರೆಯುತಿರಿ
ಧರಿತ್ರಿ,
ತುಂಬಾ ಹ್ರದಯಕ್ಕೆ ಮುಟ್ಟುವ ಬರಹ, ಪ್ರಾಣಿಗಳ ಒಳ್ಳೆಯತನ ಮಾನವನಾದ ನಮಗೆ ಇನ್ನೂ ಬಂದಿಲ್ಲ,
ಯಾವಾಗ ಬರುವುದೋ ಗೊತ್ತಿಲ್ಲ,
ಒಳ್ಳೆಯ ಬರಹ
ಅಬ್ಬಬ್ಬಾ ಎಷ್ಟುಂದು ಚನ್ನಾಗಿ ಬರಿದಿದ್ದಿರಿ ನಾಯಿಯ ಬಗ್ಗೆ. ನಾನು ಬರಿ ಮನುಷ್ಯರ ಪ್ರೀತಿಯ ಬಗ್ಗೆ ಬರೆಯುತ್ತೀರಿ ಎಂದುಕೊಂಡಿದ್ದೆ. ಆದರೆ ಪ್ರಾಣಿ ಪ್ರೀತಿಯ ಬಗ್ಗೆ ಬರೆದು ಅಚ್ಚರಿ ಮೂಡಿಸಿದ್ದೀರಿ. ಕವಿ ಜಿ. ಎಸ್. ಸಿದ್ಧಲಿಂಗಯ್ಯನವರ "ಪ್ರಾಣಿಗಳು" ಎನ್ನುವ ಪದ್ಯವೊಂದು ಇದೆ. ಅದನ್ನು ಓದಿ ಚನ್ನಾಗಿದೆ.
ಗಾಢವಾದ ಸಂಬಂಧವನ್ನು ಅನುಭವಿಸಬೇಕಾದರೆ, ನಾಯಿಯನ್ನು ಸಾಕಬೇಕು. ಪ್ರೀತಿಯ ನೋವನ್ನು ಚೆನ್ನಾಗಿ ಚಿತ್ರಿಸಿದ್ದೀರಿ.
heart touching ri...
ಧರಿತ್ರಿ,
ದೊಲ್ಲ, ಪೀಲುಗಳ ಕತೆ ಕೇಳಿ ಮನಸ್ಸಿಗೆ ಬೇಸರವಾಯಿತು..ನಮ್ಮ ಮನೆಯ ಬಳಿ ನಾಯಿಗಳಿಲ್ಲದ್ದರಿಂದ ನನಗೆ ಅವುಗಳ ಜೊತೆ ಒಡನಾಟವಾಗಿಲ್ಲ...ನಮ್ಮ ದಿನಪತ್ರಿಕೆ ಸ್ಥಳಗಳಲ್ಲಿ ನಾಯಿಗಳಿವೆ ಅದರ ಬಗ್ಗೆ "ನಾಯಿಯ ಅಧಿಕಪ್ರಸಂಗತನ" ಎನ್ನುವ ಲೇಖನವನ್ನು ಕ್ಯಾಮೆರಾ ಹಿಂದೆ ಬ್ಲಾಗಿನಲ್ಲಿ ಬರೆದಿದ್ದೆ.
ಕೆಲವೊಮ್ಮೆ ಮನುಷ್ಯರಿಗಿಂತ ನಾಯಿಗಳೇ ಹೆಚ್ಚು ಆತ್ಮೀಯರು ಅನ್ನಿಸಿಬಿಡುತ್ತೇ ಅಲ್ವಾ..
ಭಾವಪೂರ್ಣವಾದ ಲೇಖನ.
ಧರಿತ್ರಿ ಅವರೇ,
ನಾಯಿಯ ಮೇಲಿನ ಲೇಖನ ಮನ ಮುಟ್ಟುವಂತಿದೆ!
ಬಹಳ ವರ್ಷಗಳ ಹಿಂದೆ, ಒಂದು ದಿನ ಬೆಳಬೇಳಗ್ಗೆನೆ ಅಮ್ಮನ ಸ್ನೇಹಿತೆಯೊಬ್ಬರು ಫೋನ್ ಮಾಡಿದರು. ಅಮ್ಮನೇ ಸೀದಾ ಫೋನ್ ತಗೊಂಡಿದ್ದರಿಂದ, ಅವರು (ಫ್ರೆಂಡ್) ಅಳುತ್ತಲೇ ಮಾತಾಡುತ್ತಿದ್ದರು! ಅಮ್ಮ ಗಾಬರಿಯಿಂದ ಏನಾಯಿತು ಎಂದು ಕೇಳಿದಾಗ ಅವರು ಅವರ ಮನೆಯ ನಾಯಿ ರೂಬಿ ಸತ್ತುಹೋಯಿತು ಎಂದು ತಿಳಿಸಿ ಮತ್ತಷ್ಟು ಅಳುತ್ತಿದ್ದರು. ನಮಗೆಲ್ಲ ಆಗ ಆಶ್ಚರ್ಯ, ಮನೇಲಿ ಸಾಕಿದ ನಾಯಿ ಸತ್ತೊಗಿದ್ದಕ್ಕೆ ಅಷ್ಟೊಂದು ಯಾರಾದರೂ ಅಳುತ್ತಾರಾ ಅಂತ ನಾವೆಲ್ಲಾ ಮಾತಾಡಿಕೊಂಡಿದ್ದೆವು!! (ಎರಡು ನಾಯಿಗಳಿದ್ದವು ಅವರ ಮನೆಯಲ್ಲಿ, ಒಂದು ರೂಬಿ, ಮತ್ತೊಂದು ರಾಖಿ ಅಂತ!)
ಧರಿತ್ರಿ,
ಹೌದು, ಕೆಲವೊಮ್ಮೆ ಮನುಷ್ಯರೊ೦ದಿಗಿನ ಸ೦ಬ೦ಧಕ್ಕಿ೦ತ ಕೇಡು ಬಗೆಯದ, ದ್ರೋಹವರಿಯದ ಮೂಕಪ್ರಾಣಿಗಳೊ೦ದಿಗಿನ ಪ್ರೀತಿಯೇ ಹೆಚ್ಚು ಆಪ್ಯಾಯಮಾನವೆನಿಸುತ್ತದೆ. ನಿನ್ನ ಬರಹ ಎ೦ದಿನ೦ತೆ ಭಾವಪೂರ್ಣ, ಪೂರ್ಣಾ೦ಕಯೋಗ್ಯ.
ಧರಿತ್ರಿಯವರೆ,
ಮನಕಲಕುವ ಬರಹ.
ನಾನು ಹೈಸ್ಕೂಲು ಓದುವಾಗ ನನ್ನತ್ತೆಯ ಮನೇಲಿದ್ದೆ. ಅವರ ಮನೇಲಿ ಒಂದು ಪೊಮ್ರೇನಿಯನ್ ನಾಯಿ ಸಾಕಿದ್ದರು."ಲೈಕ" ಎಂದು ಹೆಸರು. ೧೩ ವರ್ಷ ಬದುಕಿತ್ತು. ನಮ್ಮ ಜೊತೆ ಹಾಸಿಗೆ ಮೇಲೇ ಮಲಗುತ್ತಿತ್ತು. ಅದು ಸತ್ತಾಗ ಅವರ ಗೊಳು ನೋಡಲಾಗದಾಗಿತ್ತು. ಈಗಲೂ ಅದರ ತಿಥಿ ಮಾಡುತ್ತಾರೆ. ನಿಮ್ಮ ಲೇಖನದಿಂದ ಇದೆಲ್ಲ ನೆನಪಾಗಿ ಕೊರೆದಿರುವೆ.
ಧರಿತ್ರೀ....ಹಲೋ...ಹಲೋ...
ಅಮ್ಮಾ ಮಾರಾಯ್ತೀ.....ಹಲೋ...ಹಲೋ.....ನಾಯೀನ ಮಲಗಿಸ್ಬುಟ್ಟು ನೀನೂ ಮಲ್ಗಿಬಿಟ್ಟೆಯಾ ಎಂಗಮ್ಮಾ ಮಾರಾಯ್ತೀ...??
ಟ್ರಿನ್..ಟ್ರಿನ್..ಟ್ರಿನ್,,,ಟ್ರಿನ್,,,,
ಈ ಪ್ರಾಣಿಗಳು ಮೂಕ ಅಂತ ಮಾತಿನಲ್ಲಿ ಮಾತ್ರ ಭಾವನೆಗಳ ವ್ಯಕ್ತ ಮಾಡೊದ್ರಲ್ಲಿ ನಮ್ಮ ಮಾತಿಗಿಂತ ಅವುಗಳ ಸನ್ನೆ ಸಂಜ್ಞೆಗಳೆ ಮೇಲು...
so cuuuute...did ya capture it! wats the content abt...
ನಿಜ ಧರಿತ್ರಿ,
ಮನುಷ್ಯ ಪ್ರೀತಿಗಿಂತ ಮೂಕ ಪ್ರಾಣಿಗಳ ನಿಷ್ಕಲ್ಮಶ ಪ್ರೀತಿ ತುಂಬ ದೊಡ್ಡದು. ಕಡೆ ಪಕ್ಷ ಅವು ಯಾವತ್ತೂ ನಮ್ಮ ಮನಸ್ಸು ನೋಯಿಸಲ್ಲ, ಹೃದಯ ಒಡೆಯಲ್ಲ. ನಮ್ಮ ಮನೆಯಲ್ಲೂ ಒಂದು ನಾಯಿ ಇತ್ತು. ಥೇಟ್ ನಿಮ್ ನಾಯಿ ಥರಾನೇ ನಾವು ಶಾಲೆಯಿಂದ ಬರೋವಾಗ ನಮ್ಮ ದಾರೀನೆ ಕಾಯ್ತಾ ಇತ್ತು. ದಾರೀಲೆ ಸಿಕ್ರೆ, ಮನೇವರೆಗೂ ನಂ ಜೊತೆ ಬಾಲ ಅಲ್ಲಾಡಿಸ್ತಾ ಬರ್ತಿತ್ತು. ಒಂದು ದಿನ ಯಾವುದೋ ರೋಗ ಬಂದು ಅದು ನಮ್ಮನ್ನೆಲ್ಲಾ ಬಿಟ್ಟು ಹೋಯ್ತು. ನಿಮ್ಮ ಲೇಖನ ಓದಿ ಅದರ ನೆನಪಾಯ್ತು.
ತುಂಬಾ ದಿನಗಳಾಯ್ತು..ಬ್ಲಾಗ್ ಕಡೆ ತಲೆಹಾಕದೆ. ನಿಮ್ಮ ಪ್ರತಿಕ್ರಿಯೆಗಳನ್ನೂ ನೋಡುವಷ್ಟೂ ಸಮಯವಿರಲಿಲ್ಲ..ಕ್ಷಮಿಸಿ. ನಿಮ್ಮ ಬ್ಲಾಗ್ ನತ್ತಲೂ ಕಣ್ಣುಹಾಯಿಸಲಿಲ್ಲ..!ನನ್ನೆಲ್ಲಾ ಬರಹಗಳಿಗೆ ಬೆನ್ನುತಟ್ಟುವಂತೆ ಇಲ್ಲಿಯೂ ನನ್ನನ್ನು ಪ್ರಿತಿಯಿಂದ ಪ್ರೋತ್ಸಾಹಿಸಿದ್ದೀರಿ..ಅದಕ್ಕಾಗಿ ನಾ ಋಣಿ. ಎಲ್ಲರಿಗೂ ನನ್ನ ಧನ್ಯವಾದಗಳು..ಪ್ರತ್ಯೇಕ ಹೆಸರು ಹೇಳಿ ಧನ್ಯವಾದ ಹೇಳಲಿಲ್ಲ ಎಂಬ ಹುಸಿಮುನಿಸು ಬೇಡ..ಮುಂದಿನ ಬರಹದಲ್ಲಿ ಮತ್ತೆ ನಿಮ್ಮ ನೋಡುವೆ.
ವಂದೇ,
ಧರಿತ್ರಿ
ಧರಿತ್ರಿ ತುಂಬಾ ಚೆನ್ನಾಗಿ ಬರೆದಿದ್ದೀರಿ
ನನಗೆ ನಮ್ಮ " ಜುನ್ನ " ನೆನಪಾಯಿತು " ಅದು ಸುಂದರ ವಾದ ಬೆಕ್ಕು ಪಮೇರಿಯನ್ ತರ ಇತ್ತು
ಆದರೇನಂತೆ ಅದರ ಮಕ್ಕಳು ಕರ್ನಾಟಕಾದ್ಯಂತ ಬೇರೆ ಬೇರೆ ಮನೆ ಗಳಲ್ಲಿ ಬೆಳೆಯುತ್ತಿವೆ. ಮುಂದೆ ತಿಳಿಸುತ್ತೇನೆ .,.,.,.,
ಧರಿತ್ರಿ,
ನೀವು ಬದುಕನ್ನು ನೋಡುವ ರೀತಿ ಬಹುವಾಗಿ ಮೆಚ್ಚುತ್ತೆ.ಈ ಪೀಲು,ದೊಲ್ಲ..ಇವುಗಳ ನಿಸ್ವಾರ್ಥ ಪ್ರೀತಿ,ಬರಿ ಸ್ವಾರ್ಥವೇ ತು೦ಬಿರುವ ಮು೦ದುವರಿದ ಪ್ರಪ೦ಚಕ್ಕೊ೦ದು ಪಾಟ.ಮೊನ್ನೆ ರಜಾಕ್ಕೆ೦ದು ಭಾರತಕ್ಕೆ ಬ೦ದಿದ್ದಾಗೆ ನಮ್ಮ ಅಕ್ಕನ ಮಗ ಒ೦ದು ಆಗ ತಾನೆ ಹುಟ್ಟಿದ ನಾಯಿಮರಿಯೊ೦ದನ್ನು ಸಾಕಲು ತ೦ದಿದ್ದ.ನಾನು ವಿರೋದಿಸಿದ್ದೆ ನೀನು ಈ ಎಳೇ ಮರಿಯನ್ನು ತ೦ದು ಹಿ೦ಸೆ ಮಾಡುತ್ತಿದ್ದೀಯ,ಪಾಪ ಅದರ ತಾಯಿಯಿ೦ದ ಅದನ್ನು ಬೇರೆ ಮಾಡಿ ಅದಕ್ಕೆ ನೋವು೦ಟುಮಾಡುತ್ತಿದ್ದೀಯ ಎ೦ದಿದ್ದೆ.ಈ ನಾಯಿ ಮರಿಗಳು ಅಷ್ಟೆ ಎಷ್ಟು ಬೇಗ ಹೆತ್ತವರಿ೦ದ ಬೇರೆಯಾದರು ಮನುಷ್ಯನ ಆರೈಕೆಯಲ್ಲಿ ಎಲ್ಲವನ್ನೂ ಮರೆತುಬಿಡುತ್ತವೆ.ನನ್ನ ಅಕ್ಕನ ಮಗ ಆ ನಾಯಿ ಮರಿಯನ್ನು ಅದರ ತಾಯಿಗಿ೦ತ ಹೆಚ್ಚಾಗಿ ನೋಡಿಕೊಳ್ಲುತ್ತಿದ್ದ.ಅವರಿಬ್ಬರ ಪ್ರೀತಿ ಕ೦ಡು ಮೂಕವಿಸ್ಮಿತನಾದೆ.ನ೦ಗೊತ್ತು ಮು೦ದೊ೦ದು ದಿನ ಆ ನಾಯಿ ಅವನನ್ನು ಬಿಟ್ಟು ಇಹಲೋಕ ತ್ಯಜಿಸಿ ಹೋದಾಗ ...ಅವನಿಗಾಗುವ ನೋವನ್ನು ನೆನೆಸಿಕೊ೦ಡೇ ನನ್ನ ಮನಸ್ಸು ಭಾರಾವಾಗುತ್ತಿದೆ.ಅ೦ದ ಹಾಗೆ ಆ ನಾಯಿ ಮರಿ ಹೆಸರು "ಸ್ಕೂಬಿ".ನಿಮ್ಮ ಬರಹ ಮನಸ್ಸನ್ನು ಚಿ೦ತನೆ ಗೆ ಹಚ್ಚುತ್ತದೆ.ಮನುಜನ್ಯಾಕೆ ಈ ನಾಯಿತರ ನಿಸ್ವಾರ್ಥ ಪ್ರಿತಿಯನ್ನು ತೋರಿಸಲಾರ ಅ೦ತ.
ಶ್ರೀಧರ್ ಸರ್ ಮತ್ತು ಇಸ್ಮಾಯಿಲ್ ಸರ್..,ನನ್ನ ಪುಟ್ಟ ಬರಹ ಓದಿದ್ದಕ್ಕೆ, ಒಂದಿಷ್ಟು ಹಂಚಿಕೊಂಡದ್ದಕ್ಕೆ ಧನ್ಯವಾದಗಳು. ಬರ್ತಾ ಇರಿ...
-ಧರಿತ್ರಿ
Post a Comment