Sunday, July 29, 2012

ನಮ್ಮನೆಗೆ ಟಿವಿ ಬಂತು!ನಮ್ಮನೆಗೆ ಟಿವಿ ಬಂತು ಎಂದು ಹೇಳೋದು ಎಂಥ ವಿಚಿತ್ರ ಸುದ್ದಿ ಎಂದು ಅನಿಸುತ್ತೆ ಅಲ್ವೇ? ಈಗ ಯಾರ ಮನೆಯಲ್ಲಿ ಟಿವಿ, ಕಂಪ್ಯೂಟರ್ ಇಲ್ಲ ಅಂತ ಕೇಳ್ತೀವಿ. ಆದರೆ, ಪುತ್ತೂರಿನ ಪುಟ್ಟದೊಂದು ಹಳ್ಳಿ ಕಳೆಂಜೋಡಿ ಎಂಬಲ್ಲಿಗೆ ಮೊನ್ನೆ ಮೊನ್ನೆ ಕರೆಂಟು ಬಂತು. ಅಲ್ಲಿ ಇದ್ದಿದ್ದು 12 ಮನೆಗಳು ಮಾತ್ರ. ಪುಟ್ಟ ದ್ಬೀಪ ತರ ಇತ್ತು. ಸುತ್ತಮುತ್ತ ದಟ್ಟ ಕಾಡು., ಕರೆಂಟು ಕಂಬ ಹಾಕೋದೇ ಕಷ್ಟ ಅನ್ತಾ ಇದ್ರು. ಆದರೆ. ತಿಂಗಳ ಹಿಂದೆ ನಮ್ಮ ಹಳ್ಳಿಗೆ ಕರೆಂಟು ಬಂದಿದೆ. ಸರ್ಕಾರಿ ಯೋಜನೆಯಡಿಯಲ್ಲಿ ಮನೆಗಳಲ್ಲಿ ಎರಡು ಮೂರು ವಿದ್ಯುತ್ ದೀಪ ಬೆಳಗುತ್ತಿದೆ. ಚಿಮಿಣಿ ದೀಪ ನೋಡಿದ ಇಲ್ಲಿನ ಹೆಂಗಸರಿಗೆಲ್ಲಾ ಫುಲ್ ಖುಷಿ. ದಟ್ಟಕಾಡಿನ ನಡುವೆ ಪುಟ್ಟ ಪುಟ್ಟ ತೋಟಗಳ ನಡುವೆ ಇದ್ದ ಮನೆಗಳಲ್ಲಿ ಮೂರ್ನಾಲ್ಕು ಚಿಮಿಣಿ ದೀಪಗಳು. ಬೀಡಿ ಸುರುಟುವ ಹೆಂಗಸರೆಲ್ಲಾ ಈ ಚಿಮಿಣಿಗಳನ್ನೇ ಅವಲಂಬಿಸಿದ್ದರು. ಎಷ್ಟೊ ಬಾರಿ ನಿದ್ದೆಗಣ್ಣಿನಲ್ಲಿ ಬೀಡಿ ಸುರುಟುತ್ತಿರುವಾಗ ಆ ದೀಪ ಹಾಗೇ ಬಿದ್ದು, ಬೀಡಿಗಳೆಲ್ಲಾ ಸೀಮೆಎಣ್ಣೆ ವಾಸನೆ ಬಂದು ಆ ಬೀಡಿಗಳೇ ವ್ಯರ್ಥ ಆಗುತ್ತಿದ್ದವು. ಈಗ ಹೆಂಗಳೆಯರೆಲ್ಲಾ ವಿದ್ಯುತ್ ದೀಪ ದಡಿಯಲ್ಲಿ ಬೀಡಿ ಸುರುಟುತ್ತಿದ್ದಾರೆ.

ನನ್ನ ತಮ್ಮಾಇಂದು ಬೆಳ್ಳಂಬೆಳಿಗ್ಗೆ ಫೋನು ಮಾಡಿದ್ದ. ಹಲೋ ಅನ್ನೋಕೆ ಮೊದಲೇ ಅಕ್ಕಾ ಟಿವಿ ಬಂತು ಅಂದ. ಕೇಬಲ್ ಹಾಕಿಸಿದ್ಯಾ? ಅಂತ ಕೇಳಿದೆ. ಎಲ್ಲಾ ಹಾಕಿಸಿದ್ದೀನಿ ಅಂದ. ಮೊದಲು ನನಗೆ ಮಾತೇ ಹೊರಡಲಿಲ್ಲ. ನನ್ನ ತಮ್ಮ ಮತ್ತು ನಾನು ಒಂದ್ಸಲ ಪಕ್ಕದೂರ ಗೌಡ್ರ ಮನೆಗೆ ಟಿವಿ ಬಂದಾಗ ಅದನ್ನು ನೋಡಲು ಅಲ್ಲಿಗೆ ಹೋಗಿದ್ದು ನೆನಪಾಯಿತು ನಮ್ಮ ಹಳ್ಳಿ ದಾಟಿ ಗೌಡ್ರ ಮನೆಗೆ ಹೋಗಬೇಕಿತ್ತು. ಆಗ ನನ್ನ ವಯಸ್ಸಿನ್ನೂ ಹತ್ತು ದಾಟಿರಲಿಲ್ಲ. ಊರಿನವರೆಲ್ಲಾ ಟಿವಿ ನೋಡಲು ಬರುತ್ತಿದ್ದರು. ಮಕ್ಕಳಂತೂ ಗೌಡ್ರ ಮನೆಯ ವರಾಂಡದಲ್ಲಿ ಎದುರು ಸಾಲಿನಲ್ಲಿ ಚಾಪೆ ಹಾಸಿ ಕೂರುತ್ತಿದ್ದರು.ನನ್ ತಮ್ಮ ಫೋನ್ ಮಾಡಿದಾಗ ಎಲ್ಲವೂ ಒಮ್ಮೆಲೇ ನೆನಪಾಯಿತು.

ಟಿವಿ ಬಂದ ಖುಷಿಯನ್ನು ಅಮ್ಮಂಗೆ ಕೇಳೋಣ ಅನಿಸ್ತು. ಅಮ್ಮಾ, ಫುಲ್  ಖುಷೀನಾ ಅಂಥ ಕೇಳಿದೆ. ಅದಕ್ಕೆ ಅಮ್ಮಾ, ಏನು ಸೌಂಡು ಮಗಾ, ನನಗೆ ತಲೆ ಧಿಮ್ ಅನ್ಯಾ ಇದೆ. ನಿನ್ನೆಯಿಂದ ಮನೆಯಲ್ಲಿ ಜಾತ್ರೆ. ಏನೇನೋ ಹಾಕ್ತಾನೆ...ನೋಡ್ತಾರೆ. ನನಗಿನ್ನೂ ಅಭ್ಯಾಸವಾಗಬೇಕು ಅಂದ್ರು. ಮೊದಲೇ ಬಿಪಿ ಪೇಶೆಂಟು ಆಗಿರುವ ಅಮ್ಮಂಗೆ ಮೊದಲೇ ಗಜಿಬಿಜಿ, ಸದ್ದು&ಗದ್ದಲ ಆಗೋಲ್ಲ. ಸರಿ ಹೋಗುತ್ತೆ ಬಿಡಮ್ಮಾ ಅಂದೆ. ನಮ್ಮನೆಗೆ ಟಿವಿ ಬಂತು ಅಂಥ (ನಮ್ ಜನರೇಷನ್) ಕೇಳುವ ಸುದ್ದಿ ನಿಮಗೆ ಏನನಿಸಿತ್ತು?

5 comments:

ಜಲನಯನ said...

ಚಿತ್ರಾ ಟಿವಿ ಬಂತು...!! ಓಕೆ... ಇದು ನನಗೆ ಅಷ್ಟು ಆಶ್ಚರ್ಯ ಆಗ್ಲಿಲ್ಲ...ಅಶ್ಚರ್ಯ ಆಗಿದ್ದು ಕರೆಂಟು ಈಗ ಬಂತು ಅಂದಿದ್ದು... ನಿಜಕ್ಕೂ ಇನ್ನೂ ಎಷ್ಟೋ ಮಲೆನಾಡಿನ ಹಳ್ಳಿಗಳಲ್ಲಿ ಇದೇ ಪರಿಸ್ಥಿತಿ ಇರಬಹುದು...
ತಮ್ಮಂಗೆ ಖುಶ್..ಅಮ್ಮಂಗೆ ಪಿರ್ಪಿರಿ...ಅಲ್ವಾ??
ಟಿವಿ ಊರಲ್ಲಿ ಇಲ್ಲದಾಗ ಬಂದ್ರೆ...ಅಬ್ಬಾ ಅದು ಸಂಭ್ರಮ, ಜಂಭ, ಎಲ್ಲಕ್ಕೂ ಎಡೆಕೊಡುತ್ತೆ ಅಲ್ವಾ... ಎನಿವೇ ಈ ಸಲ ಮನೆಗೆ ಹೋದಾಗ ಗೌಡರ ಮನೆಗೆ ಟಿವಿ ನೋಡೋಕೆ ಹೋಗೋ ಪ್ರಮೇಯ ಇರೊಲ್ಲ... ಎಂಜಾಯ್.

ಹರ್ಷಕುಮಾರ್ ಕುಗ್ವೆ said...

ಸೂಪರ್.... ನಿಮ್ಮ ಮನೆಗೆ ಬಂದ ಟೀವಿಯನ್ನು ನಾವೂ ನೋಡಬೇಕು... ಯಾವಾಗ ಕರ್ಕೊಂಡ್ ಹೋಗ್ತೀತಾ ಹೇಳಿ!!

sunaath said...

ನಿಮ್ಮ ಹಳ್ಳಿಗೆ ಶುಭಾಶಯಗಳು.

ತ್ರಿಲೋಚನ ರಾಜಪ್ಪ said...

ಒಂದರ ಕೊಂಡಿ ಹಿಡಿದು ನಿಮ್ಮ ಬ್ಲಾಗ್ಗೆ ಬಂದೆ! ಚೆನ್ನಾಗಿದೆ...ನಂಗೆ ನಮ್ಮನೇಲಿ ಬಂದ ಟಿವಿಯ ನೆನಪಾಯಿತು..ಕ್ರಿಕೆಟ್ ನೋಡಲು ಹಳ್ಳಿ ಪೂರ್ತಿ ಮನೆಯ ಮುಂದಲ ಜಗಲಿ ಮೇಲಿನ ಕಪ್ಪು ಬಿಳುಪು ಟಿವಿ ನೋಡತ್ತಿದಿದ್ದು, ಎಲ್ಲಾ ಹಾಗೆ ಓದ್ಕೊಂಡು ನೆನಪು ಬಂದವು :)

ತ್ರಿಲೋಚನ ರಾಜಪ್ಪ said...

ಒಂದರ ಕೊಂಡಿ ಹಿಡಿದು ನಿಮ್ಮ ಬ್ಲಾಗ್ಗೆ ಬಂದೆ! ಚೆನ್ನಾಗಿದೆ...ನಂಗೆ ನಮ್ಮನೇಲಿ ಬಂದ ಟಿವಿಯ ನೆನಪಾಯಿತು..ಕ್ರಿಕೆಟ್ ನೋಡಲು ಹಳ್ಳಿ ಪೂರ್ತಿ ಮನೆಯ ಮುಂದಲ ಜಗಲಿ ಮೇಲಿನ ಕಪ್ಪು ಬಿಳುಪು ಟಿವಿ ನೋಡತ್ತಿದಿದ್ದು, ಎಲ್ಲಾ ಹಾಗೆ ಓದ್ಕೊಂಡು ನೆನಪು ಬಂದವು :)