Sunday, August 8, 2010

ಇದು ಅಮ್ಮನಾಗುವ ಖುಷಿ.



ನಾನು ಅಮ್ಮನಾಗುತ್ತಿದ್ದೇನೆ ಕಣೇ, ಎಷ್ಟು ಖುಷಿಯಾಗುತ್ತಿದೆ ಗೊತ್ತಾ? ಎಂದು ಆಕೆ ಕಂಗಳಲ್ಲಿ ಖುಷಿಯ ನೀರು ತುಂಬಿಕೊಂಡು ಹೇಳುತ್ತಿದ್ದರೆ ನಾನು ಒಂದು ಕ್ಷಣ ಗೊಂದಲಕ್ಕೀಡಾಗಿದ್ದೆ. ಒಂದು ವರ್ಷದ ಹಿಂದೆ ಆಕೆಯ ಮದುವೆಯಾಗಿತ್ತು. ಮದುವೆಗೆ ವೊದಲು ನಿತ್ಯ ನನ್ನ ಒಡನಾಡಿಯಾಗಿದ್ದ ನನ್ನ ಗೆಳತಿ, ಆವಾಗಲೆಲ್ಲಾ ಮದುವೆ, ಮಕ್ಕಳು, ಸಂಸಾರ ಎಂದರೆ ಅಯ್ಯೋ ಅದ್ರ ಸಹವಾಸವೇ ಬೇಡಪ್ಪಾ ಅನ್ನುತ್ತಿದ್ದಳು. ಆದರೆ, ಮದುವೆಯ ವೊದಲಿನ ಗೆಳತಿಗೂ, ಈಗಿನ ಗೆಳತಿಗೂ ಅಜಗಜಾಂತರ ವ್ಯತ್ಯಾಸ.

‘ನನ್ನ ಹೊಟ್ಟೆಯಲ್ಲಿ ನನ್ನದೇ ಮಗು’ ಎಂದಾಗ ಎಷ್ಟು ಖುಷಿಯಾಗುತ್ತೆ? ಪುಟ್ಟ ಪುಟ್ಟ ಕೈಗಳು, ಕಾಲುಗಳು, ಹಾಲುಗಲ್ಲ, ಕಂದನ ಅಳು, ಸುಮ್ಮ ಸುಮ್ಮನೆ ನಗುವುದು...ಎಲ್ಲವನ್ನು ನೆನೆಸಿಕೊಂಡು ಹೆಮ್ಮೆಪಡುತ್ತಿದ್ದೀನಿ ಕಣೇ. ನನ್ನ ಹೊಟ್ಟೆಯಲ್ಲಿ ಮಗು ಕೈ-ಕಾಲು ಅಲ್ಲಾಡಿಸಿದಂತೆ ಅನಿಸಿದಾಗ ನನಗಂತೂ ದಿನಾ ಕಂಗಳು ತುಂಬಿಕೊಳ್ಳುತ್ತೆ. ಆ ಪಾಪುನ ಬೇಗ ನೋಡ್ಬೇಕು, ಅದನ್ನು ಮುದ್ದು ಮಾಡುತ್ತಾ ಅದಕ್ಕೆ ಹಾಲುಣಿಸಬೇಕು, ತುತ್ತು ಬಾಯಿಗಿಡಬೇಕು ಅನಿಸುತ್ತೆ....” ಹೀಗೆ ಅವಳು ಹೇಳುತ್ತಲೇ ಇದ್ದಳು.

ಅವಳಿಗಿನ್ನೂ ನಾಲ್ಕು ತುಂಬಿ ಐದರ ಹೊಸ್ತಿಲು...
ಮನದೊಳಗೆ ಅಚ್ಚರಿ. ಒಂದು ಕ್ಷಣ ನೆನಪಾಯಿತು, ಯಾರೋ ಹೇಳಿದ ಮಾತು; ತಾಯ್ತನದ ಸುಖ ಅನುಭವಿಸಿದವರಿಗೇ ಗೊತ್ತು .

ಹೌದು, ನನ್ನನ್ನು ಒಂಬತ್ತು ತಿಂಗಳು ಹೊಟ್ಟೆಯೊಳಗೆ ಹೊತ್ತ ಅಮ್ಮನೂ ಹೀಗೆ ಖುಷಿಪಟ್ಟಿರಬೇಕು ಅಲ್ವಾ? ಅಮ್ಮ ಹೇಳುತ್ತಿದ್ದಳು: “ನೀನು ಹುಟ್ಟಿದ್ದು ನಮ್ಮೂರ ಹೊಳೆ
ಬದಿಯ ದಾರಿ ಮಧ್ಯೆಯಲ್ಲಿ. ನೀನು ಹುಟ್ಟುವಾಗ ಏನೂ ಕಷ್ಟವಿರಲಿಲ್ಲ” ಅಂತ.
ನನ್ನ ಕೇಕೆ, ನಗು, ಅಳು, ಕಿರುಚಾಟ, ರಚ್ಚೆ ಹಿಡಿಯುವಿಕೆ...ಎಲ್ಲವನ್ನೂ ಅಮ್ಮ ಪ್ರೀತಿಸಿದ್ದಾಳೆ. ಅತ್ತಾಗ ಹೊಡೆಯದೆ ಹಾಗೇ ಮುದ್ದು ಮಾಡಿ ಲಾಲಿ ಹಾಡಿದ್ದಾಳೆ.

ಗೆಳತಿ ಅಮ್ಮನಾಗುವ ಸುದ್ದಿ ಕೇಳುತ್ತಲೇ ಯೋಚನಾಲಹರಿಗಳು ಎತ್ತೆತ್ತಲೋ ಹೊರಟವು.
ಅಬ್ಬಾ!
ಬದುಕೇ ವಿಚಿತ್ರಪ್ಪಾ...ಅಮ್ಮನಾದಾಗ ಹೆಣ್ಣೊಬ್ಬಳು ಇಷ್ಟೊಂದು ಖುಷಿ ಪಡುವುದು ಕೂಡ ಸೃಷ್ಟಿಕರ್ತನ ಲೀಲೆಯೇ? ಅದ್ಯಾಕೆ ಹೆಣ್ಣೇ ಅಷ್ಟೊಂದು ಖುಷಿಪಡುತ್ತಾಳೆ? ಆ ಮಗುವಿಗೆ ಜನ್ಮ ನೀಡಿದ ಅಪ್ಪನ ಮುಖದಲ್ಲಿ ‘ಅಮ್ಮನ ಮುಖದ ಸಂತೋಷ’ ಕಾಣಲು ಸಾಧ್ಯವೇ?
ಅಮ್ಮನೆಂದರೆ ಹಾಗೇ...ಎಲ್ಲಾ ಅಮ್ಮನೂ ಹಾಗೇ...ತನ್ನದೇ ಮಗುವಿನ ಹುಟ್ಟಿನಲ್ಲಿ ಆಕೆ ಮರುಹುಟ್ಟು ಪಡೆಯುತ್ತಾಳೆ...ಹೊಸ ಜಗತ್ತಿಗೆ ತೆರೆದುಕೊಳ್ಳುತ್ತಾಳೆ.
ಇದು ಅಮ್ಮನಾಗುವ ಖುಷಿ...