Saturday, March 31, 2012

ದಿ ಗ್ರೇಟ್ ಡಿಕ್ಟೇಟರ್ ಸ್ಪೀಚ್ ...

೧೯೪೦ರಲ್ಲಿ ಬಂದ ಚಾರ್ಲಿ ಚಾಪ್ಲಿನ್ ಅಭಿನಯದ ದಿ ಗ್ರೇಟ್ ಡಿಕ್ಟೇಟರ್ ಚಿತ್ರದಲ್ಲಿ, ಜೇವಿಶ್ ಬಾರ್ಬರ್ ಆಗಿ ನಟಿಸಿದ ಚಾಪ್ಲೀನ್ ಸ್ಪೀಚ್ ತುಣುಕು. ಎಪ್ಪತ್ತು ವರ್ಷಗಳ ಹಿಂದೆ ಆ ಸಿನಿಮಾದಲ್ಲಿ ಬಂದ ಮಾತುಗಳು ಇಂದಿಗೂ ಪ್ರಸ್ತುತ ಅನಿಸುತ್ತವೆ. ಈ ಚಾರ್ಲಿ ಬಾಯಲ್ಲಿ ಈ ಸ್ಪೀಚ್ ಕೇಳಿ ಖುಷಿಗೊಂಡು ಅನುವಾದಿಸಿದೆ.

ನಾನು ಚಕ್ರವರ್ತಿಯಾಗೋಕೆ ಬಯಸುತ್ತಿಲ್ಲ. ಅದು ನನ್ನ ಬ್ಯುಸಿನೆಸ್ ಅಲ್ಲ. ನಾನು ಯಾರನ್ನೂ ಆಳಬೇಕಾಗಿಲ್ಲ, ಯಾರ ರಾಜ್ಯವನ್ನೂ ಆಕ್ರಮಿಸಿಕೊಳ್ಳಬೇಕಾಗಿಲ್ಲ. ಸಾಧ್ಯವಾದರೆ, ಎಲ್ಲರಿಗೂ ಸಹಾಯಮಾಡಬೇಕೆಂದಿದ್ದೀನಿ. ಜ್ಯೂಯಿಷರು, ಕರಿಯರು, ಬಿಳಿಯರು...ಹೀಗೆ ಜಗತ್ತಿನಲಿರುವ ಎಲ್ಲರಿಗೂ ನಾನು ಸಹಾಯ ಮಾಡ್ಬೇಕು.

ಮನುಷ್ಯ ಇರೋದೇ ಹಾಗೇ, ಪರಸ್ಪರ ಸಂತೋಷದಿಂದ ಕೂಡಿ ಬದುಕಬೇಕು, ಆದರೆ, ಯಾರೋಬ್ಬರೂ ಇನ್ನೊಬ್ಬರ ದುಃಖದಲ್ಲಿ ಬದುಕಬಾರದು. ಇನ್ನೊಬ್ಬರನ್ನು ತಿರಸ್ಕರಿಸಿ ಅಥವಾ ದ್ವೇಷಿಸಿ ಬದುಕುವ ಹಕ್ಕು ಯಾರಿಗೂ ಇಲ್ಲ. ಈ ಜಗತ್ತಿನಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಈ ಫಲವತ್ತಾದ ಸುಂದರ ಭೂಮಿ ಎಲ್ಲರಿಗೂ ಜಾಗ ಕೊಟ್ಟಿದೆ.

ಬದುಕಿನ ದಾರಿ ಸ್ವಚ್ಛಂದ ಹಾಗೂ ಸುಂದರ. ಆದರೆ, ಆ ಚೆಂದದ ದಾರಿಯನ್ನು ಕಳೆದುಕೊಂಡುಬಿಟ್ಟಿದ್ದೀವಿ. ಮನುಷ್ಯನ ಆತ್ಮದಲ್ಲಿ ದುರಾಸೆಯ ವಿಷ ತುಂಬಿದೆ. ಪರಸ್ಪರ ದ್ವೇಷದ ಬ್ಯಾರಿಕೇಡ್ ನಿರ್ಮಾಣವಾಗಿದೆ. ಪರಿಣಾಮವಾಗಿ ದುಃಖ ಹಾಗೂ ನೆತ್ತರನೆಲದಲ್ಲಿ ಬದುಕು ಬಸವಳಿದಿದೆ.

ನಾವು ವೇಗವನ್ನು ಕಲಿತಿದ್ದೇವೆ, ಆದರೆ, ನಮ್ಮ ಹೃದಯದ ಬಾಗಿಲು ಮುಚ್ಚಿಕೊಂಡಿದೆ. ಯಂತ್ರಗಳು ಬೇಕಾದನ್ನು ಕೊಡುತ್ತವೆ. ಇನ್ನು ಬೇಕು ಬೇಕು ಎನ್ನುವ ಆಸೆಯನ್ನು ಮನುಷ್ಯನಲ್ಲಿ ಹುಟ್ಟಿಹಾಕಿವೆ. ನಮ್ಮ ಜ್ಞಾನ ಸಿನಿಕತನದ ಕಡೆಗೆ ಸಾಗಿದೆ. ನಮ್ಮ ಯೋಚನೆ ದೊಡ್ಡದು, ಆದರೆ ಹೃದಯ ವೈಶಾಲ್ಯತೆ ಕಿರಿದು. ನೆನಪಿಡಿ, ಯಂತ್ರಗಳಿಗಿಂತ ಮಾನವೀಯತೆ ಮುಖ್ಯ,ಚಾಣಾಕ್ಷತೆಗಿಂತ ದಯೆ ಹಾಗೂ ಮೃದುತ್ವ ಮುಖ್ಯ. ಇದರಿಂದ ಹೊರತಾದ ನಮ್ಮ ಸುಂದರ ಬದುಕು
ಹಿಂಸೆಯ ಮಡುವಾಗುತ್ತದೆ.


ನನ್ನ ಹೃದಯದ ಧ್ವನಿ ಈಗ ಮಿಲಿಯನ್‌ಗಟ್ಟಲೆ ಜನರಿಗೆ ಕೇಳಿಸುತ್ತಿರಬಹುದು. ಕುಗ್ಗಿಹೋಗಿರುವ ಮಹಿಳೆಯರು,ಗಂಡಸೆರು, ಮಕ್ಕಳು, ವ್ಯವಸ್ಥೆಯ ಬಲಿಪಶುಗಳು ಎಲ್ಲರೂ ಕಿವಿಯಾಗುತ್ತಿರಬಹುದು. ಅವರು ನನ್ನ ಮಾತುಗಳನ್ನು ಕೇಳುತ್ತಿದ್ದರೆ ಅವರಿಗೆ ನಾನು ಹೇಳೋದಿಷ್ಟೇ: ದುಃಖಕ್ಕೆ ಕುಗ್ಗದಿರಿ, ಅಂತಿಮವಾಗಿ ಸರ್ವಾಧಿಕಾರ ಸಾಯುತ್ತೆ, ಅಧಿಕಾರ ಜನರ ಕೈಗೆ ಬರುತ್ತೆ,
ಎಲ್ಲಿಯವರೆಗೆ ಮನುಷ್ಯ ಸಾಯುತ್ತಾ ಇರುತ್ತಾನೋ ಅಲ್ಲಿಯವರೆಗೆ ಸ್ವಾತಂತ್ರ್ಯಕನಸಾಗಿರುತ್ತದೆ.

ದೇಶಕಾಯುವ ಯೋಧರೇ,
ಕ್ರೂರಿಗಳಿಗೆ ನಿಮ್ಮನ್ನು ಬಲಿ ಕೊಡಬೇಡಿ, ನಿಮ್ಮನ್ನು ಕಡೆಗಣಿಸುವವರು, ನಿಮ್ಮನ್ನು ಜೀತಕ್ಕೆ ಇಟ್ಟುಕೊಂಡಿದ್ದವರು, ನೀವು ಹೀಗೆ ಇರಬೇಕೆಂದು ಜೀವನ ಪರಿಕ್ರಮಗಳನ್ನು ಸೂಚಿಸುವವರು, ನಿಮ್ಮ, ಯೋಚನೆಗಳನ್ನು ಕಸಿದುಕೊಂಡವರು, ನಿಮ್ಮನ್ನು ಜೀವಂತವಾಗಿ ಭಕ್ಷಿಸುವವರು, ನಿಮ್ಮನ್ನು ದನಕರುಗಳಂತೆ ಕಾಣೋರು, ಫಿರಂಗಿ ಒಳಗಿನ ಗುಂಡಿನ ಮೇವಾಗಿ ಬಳಸುವಂಥ ಅಸ್ವಾಭಾವಿಕ, ಯಂತ್ರದಂಥ ಮನಸ್ಸು-ಹೃದಯವುಳ್ಳವರಿಗೆ ನಿಮ್ಮ ಬಲಿಕೊಡಬೇಡಿ. ನೀವು ಯಂತ್ರಗಳಲ್ಲ, ನೀವು ದನಗಳಲ್ಲ, ನೀವು ಮನುಷ್ಯರು. ನಿಮ್ಮ ಹೃದಯದಲ್ಲಿ ಮಾನವೀಯತೆಯನ್ನು ಪ್ರೀತಿಸುವವರು ನೀವು. ಗುಲಾಮತನಕ್ಕಾಗಿ ಹೋರಾಡಬೇಡಿ, ಬದಲಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ.


ಸಂತ ಲೂಕ್‌ನ ಏಳನೇ ಅಧ್ಯಯದಲ್ಲಿ ಹೀಗೆನ್ನುತ್ತಾರೆ: ದೇವರ ಸಾಮ್ರಾಜ್ಯ ಮನುಷ್ಯನ ಹೃದಯದಲ್ಲೇ ಇದೆ. ಕೇವಲ ಒಬ್ಬನ ಅಂತರಂಗದಲ್ಲಿ ಅಲ್ಲ, ಈ ಮನುಕುಲದಲ್ಲಿ. ನಿಮ್ಮಲ್ಲಿ, ಜಗತ್ತಿನ ಮಿಲಿಯನ್ ಗಟ್ಟಲೆ ಜನರ ಹೃದಯದಲ್ಲಿ. ನೀವು ಮನುಷ್ಯರು, ಯಂತ್ರಗಳನ್ನು ಸೃಷ್ಟಿಸುವ ಅಧಿಕಾರ ನಿಮ್ಮಲ್ಲಿದೆ, ಅಂತೆಯೇ ಸಂತೋಷವನ್ನು ಸೃಷ್ಟಿಸುವ ಸಾಮರ್ಥ್ಯವೂ ನಿಮ್ಮಲ್ಲೇ ಇದೆ.

ಜೀವನವನ್ನು ಸುಂದರ ಹಾಗೂ ಸ್ವತಂತ್ರಗೊಳಿಸುವ, ಜೀವನವನ್ನು ಅತ್ಯಾದ್ಭುತ ಸಾಹಸವನ್ನಾಗಿ ಪರಿವರ್ತಿಸುವ ಸಾಮರ್ಥ್ಯವೂ ನಿಮಗೇ ಇದೆ. ಪ್ರಜಾಪ್ರಭುತ್ವ ಹೆಸರಿನಲ್ಲಿ ಈ ಒಂದು ಮಹೋನ್ನತ ಅವಕಾಶವನ್ನು ಬಳಸಿಕೊಳ್ಳಿ. ನಾವೆಲ್ಲ ಒಗ್ಗೂಡೋಣ. ಶಾಂತಿಯುತ ಹಾಗೂ ಪ್ರಾಮಾಣಿಕ ಜಗತ್ತಿಗಾಗಿ ಹೋರಾಡೋಣ. ಆಗ ಮನುಕುಲದ ಅಭ್ಯುದಯಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತೆ. ಯುವಕರಿಗೆ ಭವಿಷ್ಯ ಕಟ್ಟುವ, ವೃದ್ಧರಿಗೆ ಭದ್ರತೆ ಇರುವ, ವಿಜ್ಞಾನ ಹಾಗೂ ಪ್ರಗತಿಯ ಮೂಲಕ ಮನುಷ್ಯನಿಗೆ ಸಂತೋಷ ನೀಡುವ ಚೆಂದದ ಜಗತ್ತು ನಿರ್ಮಾಣವಾಗುತ್ತೆ.


Click below link for Great Dictator speech by Chaplin

Tuesday, March 27, 2012

ಹೀಗೊಂದು ಸ್ವಗತ!

ಅಜ್ಜನನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ತಂದಿದ್ದರು. ಪುಟ್ಟ ವಯಸ್ಸಿನ ನಾನು ಸಾವಿಗೆ ಭಯಪಟ್ಟಿದ್ದೆ. ಸಾವಿಗೆ ಅಳಬೇಕು ಅನ್ನೋದು ನನಗೆ ಗೊತ್ತಿತ್ತು. ನನ್ನ ಪ್ರೀತಿಯ ಅಜ್ಜ ಬಿಟ್ಟುಹೋದರೆ ಮತ್ತೆ ಬರೊಲ್ಲ ಅನ್ನೋದು ನನಗೆ ಗೊತ್ತಿತ್ತು. ಆಗಿನ್ನೂ ಕಾರಂತರ ಕಿಸಾಗೋತಮಿಯ ಕಥೆ ಓದದ ಮನಸ್ಸು ನನ್ನದು.


ಹೊಟ್ಟೆಪಾಡಿಗೆ ಕಾಳುಮೆಣಸು ಕೊಯ್ಯಲು ಹೋದ ಅಜ್ಜ, ಮರದ ತುದಿಯಿಂದ ಕೆಳಬಿದ್ದು ಪ್ರಾಣ ಕಳೆದುಕೊಂಡಿದ್ದ. ಅಜ್ಜನ ಉಳಿಸಕೆ ಒಂದು ವಾರ ಆಸ್ಪತ್ರೆಯಲ್ಲಿ ಹೋರಾಡಿದರೂ ಅಜ್ಜನ ಸಾವು ತಡೆಯಲಾಗಲಿಲ್ಲ. ಆದರೆ, ಆ ಒಂದು ವಾರ ಮನೆ ದುಃಖದ ಕಡಲಾಗಿತ್ತು. ಅಜ್ಜಿ, ಅಮ್ಮ, ದೊಡ್ಡಮ್ಮ,ಚಿಕ್ಕಮ್ಮ ಅಳು ಮುಗಿಲುಮುಟ್ಟಿತು. ಅಜ್ಜನ ತಿಥಿ ಮುಗಿದು ತಿಂಗಳು ಕಳೆದರೂ ಮನೆಯಲ್ಲಿ
ಅಳು ನಿಲ್ಲಲಿಲ್ಲ. ನಾನೂ ಅತ್ತಿದ್ದೆ....ಯಾರೂ ತಡೆಯಲಾಗದ ಅಳುವನ್ನು!

ನಾನು ಡಿಗ್ರಿ ಓದುವಾಗ ಮೇಷ್ಟ್ರು ಹೇಳಿದ್ರು: ನಿಜವಾದ ದುಃಖ ನೋಡಬೇಕಾದ್ರೆ ಸಾವಿನ ಮನೆಗೆ ಹೋಗಬೇಕು ಎಂದು! ಆಗ
ನನ್ನಜ್ಜ ಸುಟ್ಟು ಬೂದಿಯಾದ ದಿನ ನೆನಪಾಗಿತ್ತು. ಇಡೀ ಬಂಧುಬಳಗ ಅತ್ತು ಅತ್ತು ಬಸವಳಿದ ದಿನ ನೆನಪಾಗಿತ್ತು.

ಆರು ತಿಂಗಳ ಹಿಂದೆ ಮಾವ ಗತಿಸಿದರು. ಮಡಿಲಲ್ಲಿ ಮಗಳಂತೆ ಪ್ರೀತಿಯ ಉಯ್ಯಾಲೆಯಲ್ಲಿ ತೂಗಿದ ಮಾವ. ನಾನು ಕಚೇರಿಯಲ್ಲಿದ್ದೆ. ಮನೆಯಿಂದ ನಮ್ಮವ್ರ ಫೋನ್, ಅಪ್ಪ ಹೋಗಿಬಿಟ್ರು! ಅರ್ಜಂಟ್ ಮೀಟಿಂಗ್‌ನಲ್ಲಿದ್ದೆ. ಒಂದು ಕ್ಷಣ ಕಣ್ಣು ರೆಪ್ಪೆ ತಟಸ್ಥವಾಯಿತು. ಮಾತಿಗೂ ದನಿ ಬರಲಿಲ್ಲ. ಮೀಟಿಂಗ್ ಮುಗ್ಸಿ ಐದೇ ನಿಮಿಷದಲ್ಲಿ ಮನೆಯಲ್ಲಿದ್ದೆ. ಅತ್ತೆ, ನಮ್ಮೆಜಮಾನ್ರು ಮೌನವಾಗಿದ್ದರು. ನನ್ನ ಕಣ್ಣಂಚಿನಲ್ಲಿ ಪುಟ್ಟ ಹನಿಬಿಂದು ಕೆಳಗೆ ಬಿತ್ತು. ದೊಡ್ಡ ಪೆಟ್ಟಿಗೆಯಲ್ಲಿ ತುಂಬಿಸಿ ಮಾಮನ ಬೆಳಗಿನ ತನಕ ಹಾಗೇ ಇಡಲಾಯಿತು. ಸಂಬಂಧಿಕರೆಲ್ಲರೂ ಬಂದರು. ಯಾರೂ ಗೋಳೋ ಅಳಲಿಲ್ಲ.


ಮೊನ್ನೆ ಇನ್ನೊಂದು ಸಾವಿನ ಮನೆಗೆ ಹೋದೆ. ಅಲ್ಲಿ ಅಳೋರೇ ಕಾಣಲಿಲ್ಲ. ಮಗನನ್ನು ಕಳೆದುಕೊಂಡ ಅಮ್ಮ, ಮಗನ ದೇಹದ ಬಳಿ ನಿಂತು ಮೌನವಾಗಿದ್ದರು. ಪತ್ನಿಯ ದುಃಖದ ಕಣ್ಣೀರು ಬತ್ತಿಹೋಗಿತ್ತು. ಅಪ್ಪನ ಕಳೆದುಕೊಂಡ ಏಕೈಕ ಮಗಳೂ ವಿದೇಶದಿಂದ ಬರಲೊಲ್ಲೆ ಎಂದಳು. ನನಗನಿಸಿದ್ದು ಇಷ್ಟೇ: ಸಾವಿನ ಮನೆಯಲ್ಲಿ ಕಣ್ಣೀರೇ ಕಾಣಿಸಲಿಲ್ಲ, ಬಹುಶಃ ಕಿಸಾಗೋತಮಿಯ ಕಥೆ ಎಲ್ಲರಿಗೂ ಅರ್ಥವಾಗಿರಬೇಕೆಂದು! ಹಾಗಂತ, ಸಾವಿನ ಮನೆಯಲ್ಲಿ ಕಣ್ಣೀರು ಇಲ್ಲವೆಂದಲ್ಲ. ಹುಟ್ಟು, ಸಾವು,ನೋವು ಎಲ್ಲದಕ್ಕೂ ಸ್ಪಂದಿಸುವ ಮಾನವನ ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ಸಣ್ಣ ಬದಲಾವಣೆ. ಸಾವನ್ನೂ ಸವಾಲಾಗಿ ಸ್ವೀಕರಿಸುವ ಮನದ ಗಟ್ಟಿತನವೇ? ಸಾವು ಸಾಮಾನ್ಯವೇ? ಯಾವ ಪ್ರಶ್ನೆಗಳು ಮೂಡಿದರೂ ಅಲ್ಲಿ ನಮ್ಮ-ನಮ್ಮ ಮನಸ್ಸೇ ಉತ್ತರ. ಮನಸ್ಸು ಮೌನವಾಗಿದ್ದಾಗ ಹೀಗೊಂದು ಸ್ವಗತ!


Saturday, March 17, 2012

ಶೆಟ್ಟರ ಅರಮನೆ ಬದುಕು

ನಮ್ಮನೆ ವರಾಂಡದಲ್ಲಿ ಕುಳಿತರೆ ಶೆಟ್ಟರ ದೊಡ್ಡ ಬಂಗ್ಲೆ ಕಾಣಿಸುವುದು. ಭಾನುವಾರದ ಸುಂದರ ಸಂಜೆ. ಗಾಳಿ ಮೌನವಾಗಿತ್ತು. ಸಂಜೆಯ ತಂಪಿನಲ್ಲಿ ನೆನಪುಗಳು ಬಿಚ್ಚಿದವು. ಶೆಟ್ಟರ ಮನೆಯಲ್ಲಿ ಮೊಮ್ಮಕ್ಕಳ ಕಲರವ. ಶೆಟ್ಟರಿಗೆ ಒಟ್ಟು ೧೨ ಮಂದಿ ಮೊಮ್ಮಕ್ಕಳು. ಅವರ ನಾಲ್ಕು ಜನ ಗಂಡು ಮಕ್ಕಳು, ನಾಲ್ವರಿಗೂ ಮದುವೆಯಾಗಿದೆ. ಹಾಗಾಗಿ,ಮೊಮ್ಮಕ್ಕಳ ಸಂಖ್ಯೆಒಂದು ಡಜನ್.

ಶೆಟ್ಟರ ಹೆಂಡ್ತಿ ಇರುವಾಗ ಮನೆಯಲ್ಲಿ ನಿತ್ಯವೂ ಸುಗ್ಗಿ. ನಾಲ್ವರು ಸೊಸೆಯರಿಗೆ ಕೆಲ್ಸವನ್ನು ಹಂಚುತ್ತಿದ್ದುದ್ದೇ ಶೆಟ್ಟರ ಹೆಂಡ್ತಿ. ಬೆಳಿಗ್ಗೆ ಎದ್ದಾಗ ನಿತ್ಯ ದಿನಚರಿಯ ವೇಳಾಪಟ್ಟಿ ಸೊಸೆಯಂದಿರ ಮುಂದೆ. ಮನೆಯ ದೊಡ್ಡ ವರಾಂಡದಲ್ಲಿ ಅತ್ತೆ ಕುಳಿತರೆ, ನಾಲ್ಕು ಕಡೆಗೂ ಕಣ್ಣು ನಡೆಯುತ್ತಿತ್ತು. ಬೆಳಗ್ಗೆ ತಿಂಡಿ ರೆಡಿ ಮಾಡುವುದರಿಂದ ಹಿಡಿದು ರಾತ್ರಿ ತನಕ ಎಲ್ಲವೂ ಅಚ್ಚುಕಟ್ಟಾಗಿ ನಡೆಯಬೇಕು.

ಮನೆಯಲ್ಲಿ ನಾಲ್ಕು ದೊಡ್ಡ ನಾಯಿಗಳಿವೆ. ಎಲ್ಲವೂ ಬೆಳಿಗ್ಗೆ-ಸಂಜೆ ವಾಕ್ ಮಾಡ್ತವೆ. ಇದರ ಉಸ್ತುವಾರಿಯೂ ಸೊಸೆಯಂದಿರದ್ದೆ. ಬೆಳಿಗ್ಗೆದ್ದರೆ ಮೊದಲ ಕೆಲ್ಸ ನಾಯಿಗಳನ್ನು ವಾಕ್ ಮಾಡಿಸುವುದು. ಅತ್ತೆಯ ಮಾತು ಮೀರಿ ಯಾವುದೇ ಕೆಲಸಗಳಿಲ್ಲ. ಅವರ ಗಂಡಂದಿರೂ ಅಷ್ಟೇ, ಅಪ್ಪ-ಅಮ್ಮನ ಮಾತು ಮೀರಲ್ಲ. ಪೇಟೆಗೆ ಹೋಗಬೇಕಾದರೂ ಅಮ್ಮನ ಬಳಿ ಹೇಳಿ ಹೊರಡೋರು.

ಹಬ್ಬ ಬಂದ್ರೆ ಶೆಟ್ಟರ ಮನೆ ಸಂಭ್ರಮದ ಮೇಲೆಯೇ ಎಲ್ಲರಿಗೂ ಕಣ್ಣು. ಏನು ಖುಷಿ ಶೆಟ್ರ ಮನೆಯಲ್ಲಿ ಅನ್ನೋರು ಸುತ್ತಲ ಜನ. ರಸ್ತೆ ಕಾಮಗಾರಿಗೆ ಬಂದವ್ರ ಮಕ್ಕಳಿಗೆಲ್ಲಾ ಶೆಟ್ರು ಕರೆದು ಊಟ ಹಾಕೋರು. ಮಗ-ಸೊಸೆಯಂದಿರಿಗೆ ಒಡವೆ, ವಸ್ತ್ರಗಳನ್ನು ನೀಡಿ ಖುಷಿಪಡೋರು. ಜೀವನ ಪ್ರೀತಿನ ಹಂಚೋರು. ಅರಮನೆಯಂಥ ಮನೆಯಲ್ಲಿ ಜನಸಂಖ್ಯೆ ೨೦ ದಾಟಿದವರೂ ಜೋರು ದನಿಗಳು ಸದ್ದು ಮಾಡುತ್ತಿರಲಿಲ್ಲ. ಮಕ್ಕಳ, ಸೊಸೆಯಂದಿರ, ಮೊಮ್ಮಕ್ಕಳ ಖುಷಿ ಜಾತ್ರೆ ನಡುವೆಯೇ ಶೆಟ್ಟರ ಹೆಂಡ್ತಿ ಬದುಕು ಬಿಟ್ಟು ದೂರಹೋಗಿದ್ದಾರೆ. ಶೆಟ್ಟರು ಒಂಟಿಯಾಗಿದ್ದಾರೆ. ಅವರ ಕಣ್ಣುಗಳಲ್ಲಿ ಮೊದಲಿನ ಉತ್ಸಾಹ ಮರೆಯಾಗಿದೆ.

ಶೆಟ್ಟರ ಹೆಂಡ್ತಿ ತೀರಿ ತಿಂಗಳು ಮೂರು ಸರಿದಿದೆ. ಶೆಟ್ಟರ ಮನೆಯ ಮಾತುಗಳು ಒಂದು ಕಿ.ಮೀ. ದೂರ ದವರೆಗೆ ಕೇಳುತ್ತಿವೆ. ಅಡುಗೆ ಮನೆಯಲ್ಲಿ ಪಾತ್ರೆಗಳ ಸದ್ದು ಜೋರಾಗಿದೆ. ಒಂಬತ್ತು ಗಂಟೆಗೆ ಎದ್ದು ಸೊಸೆಯಂದಿರು ಹಲ್ಲಿಗೆ ಬ್ರೆಶ್ ಹಿಡಿಯುತ್ತಾರೆ. ಕೈಗೊಂದು ಕಾಲಿಗೊಂದು ಆಳುಗಳು ಬಂದು ಬೆಳ್ಳಂಬೆಳಿಗ್ಗೆ ಕಾಲಿಂಗ್ ಬೆಲ್ ಒತ್ತುತ್ತಾರೆ. ಸಂಜೆಯ ತಂಪಿಗೆ ಮುಖವೊಡ್ಡಿ ಕುಳಿತಾಗ ನೆನಪಾಗಿದ್ದು ಶೆಟ್ಟರ ಅರಮನೆಯ ಭೂತಕಾಲದ ಬದುಕು.

Tuesday, March 13, 2012

ಕಲ್ಲುದೇವರುಗಳ ಎದುರು ಮೊಮ್ಮಗು ಬೇಡಿದ ಅಪ್ಪ

ಅಂದು ಅಪ್ಪ ತುಂಬಾ ಕಾಡಿದ. ಒಂದೂವರೆ ವರ್ಷದಲ್ಲಿ ನನ್ನಲ್ಲಿ ಪ್ರೀತಿಯ ಸೌಧವನ್ನೇ ಕಟ್ಟಿದ ಅಪ್ಪ. ಕಳೆದ ವರ್ಷ ಇದೇ ದಿನ ಅಪ್ಪನ ಕಾಲು ಮುಟ್ಟಿ ನಮಸ್ಕರಿಸಿದ್ದೆ. ಅಪ್ಪ ಹರಸಿದ್ದ: ಮಗಳೇ, ಬರುವ ವರ್ಷ ಮೊಮ್ಮಗು ಬರಲೆಂದು. ಬಂದು ಬಿಡುತ್ತೆ ಅಪ್ಪ...ಕಾಯ್ತಾ ಇರು ಎಂದು ಸುಳ್ಳು ಹೇಳಿದ್ದೆ. ನನ್ನ ಸುಳ್ಳುಗಳನ್ನೂ ಸತ್ಯವೆಂದು ನಂಬಿದ್ದ ಮುಗ್ಧ ಅಪ್ಪ.


ಒಂದ್ಸಲ ತಿರುಪತಿಗೆ ಹೋಗಿದ್ವಿ. ಸರತಿ ಸಾಲಿನಲ್ಲೇ ನಿಂತರೆ ಗಡಗಡ ನಡುಗುತ್ತಿದ್ದ ಅಪ್ಪನಿಗೆ ಎದುರುಬಾಗಿಲಲ್ಲೇ ದೇವರ ದರ್ಶನಕ್ಕೆ ಅನುಮತಿ ಸಿಕ್ತು. ದೇವರೆದುರು ಕೈ ಮುಗಿದು ನಿಂತ ಅಪ್ಪನ ಕಣ್ಣಲ್ಲಿ ಕಣ್ಣೀರು ಜಿನುಗುತ್ತಿತ್ತು. ಎಪ್ಪತ್ತೈದು ದಾಟಿದ ಅಪ್ಪನಿಗೆ ಸಾವಿನ ಖಚಿತತೆ ಗೊತ್ತಿತ್ತೇ? ಅನುಮಾನಿಸಿತು ಮನ. ಲಡ್ಡು ತೆಗೆದುಕೊಂಡು ಹೊರಬಂದ ಅಪ್ಪನ
ಬಳಿ ಕೇಳಿದೆ?: ಏನ್ ಬೇಡ್ಕೊಂಡೆ ದೇವ್ರರಲ್ಲಿ? ಏನು ಕೊಟ್ಟ ದೇವರು? ಎಂದು. ಅಪ್ಪ ನಗುತ್ತಲೇ ಹೇಳಿದ: ಮಗಳ ಮಡಿಲ ತುಂಬಲಿ ಎಂದು ಕೇಳಿದೆ. ದೇವ್ರು ಲಡ್ಡುಕೊಟ್ಟಿದ್ದಾನೆ. ಅದನ್ನು ಭಕ್ತಿಯಿಂದ ಸೇವಿಸು ಎಂದ. ಹೌದೇನು ಅಪ್ಪ? ತುಂಬುತ್ತೆ ಬಿಡಪ್ಪಾ, ಪದೇ ಪದೇ ಮೊಮ್ಮಗು ಪುರಾಣ ಆಡಿದ್ರೆ ಮಾತೇ ಆಡಲ್ಲ ಎಂದು ಗದರಿ ಸುಮ್ಮನಾದೆ. ಅಪ್ಪನ ಮುಖದಲ್ಲಿ ತುಸು ಬೇಜಾರು.

ಅದೊಂದು ಗುರುವಾರ. ಅಪ್ಪ ಸಾಯಿಬಾಬಾ ಮಂದಿರಕ್ಕೆ ಹೋಗಿಬಂದಿದ್ದ. ಸಾಯಿ ಮಂದಿರದಿಂದ ದೊಡ್ಡ ಡಬ್ಬದಲ್ಲಿ ಪ್ರಸಾದ ತಂದಿದ್ದ. ಏನಪ್ಪಾ ದೊಡ್ಡ ಡಬ್ಬದಲ್ಲಿ ಪ್ರಸಾದ ತಂದೆ? ದೇವರಿಗೇನಾದ್ರೂ ಇನ್ಲುಪುವೆನ್ಸ್ ಮಾಡಿಬಿಟ್ಟೆಯಾ? ಎಂದೆ. ಅದಕ್ಕವನು, ಸುಮ್ಮೆ ತಿನ್ನು, ಹೇಳಿದ್ರೆ ನೀನು ಕೋಪಿಸಿಕೊಳ್ತಿ. ಸುಮ್ಮೆ ಭಕ್ತಿಯಿಂದ ತಿನ್ನು ಅಂದ. ಗಬಗಬನೆ ತಿಂದೆ. ಅಪ್ಪನ ಮುಖದಲ್ಲಿ ಸಂತೃಪ್ತಿಯ ನಗು.


ಕತ್ತಲು-ಬೆಳಕು ಕಣ್ಣೆದುರೇ ಸರಿದುಹೋಯಿತು. ಬದುಕು ಬಂಡಿಯಲ್ಲಿ ಅಪ್ಪ ಮೊಮ್ಮಗುವಿನ ನಿರೀಕ್ಷೆಯಲ್ಲಿದ್ದ. ಪ್ರತಿ ಶುಕ್ರವಾರ ಲಕ್ಷ್ಮಿಗೆ ಪೂಜೆ ಮಾಡುವಾಗಲೂ, ತುಳಸಿ ಗಿಡಕ್ಕೆ ನೀರು ಹಾಕುವಾಗಲೂ ಅಪ್ಪನಿಗೆ ಮೊಮ್ಮಗುವಿನ ಕನವರಿಕೆ. ಕೈ-ಕಾಲುಗಳಲ್ಲಿ ಬಲವಿಲ್ಲದಿದ್ದರೂ, ಸಿಕ್ಕ-ಸಿಕ್ಕ ಕಲ್ಲು ದೇವರುಗಳೆದುರು ನಿಂತು ಅಪ್ಪ ಮೊಮ್ಮಗು ಬೇಡಿದ್ದ. ಅವನಿಗೇನು ಗೊತ್ತು? ದೇವರು ಮಗು ಕೊಡಲ್ಲವೆಂದು?

ಮೊನ್ನೆ ಮೊನ್ನೆ ನಮ್ಮ ಮದುವೆಗೆ ಎರಡು ವರ್ಷ. ಕಳೆದ ವರ್ಷ ದೇವರ ಮನೆಯಲ್ಲಿ ಅಪ್ಪ-ಅಮ್ಮ ಇಬ್ಬರೂ ನಿಂತು ಅಕ್ಷತೆ ಹಾಕಿ ಹರಸಿದ್ದರು. ಈ ಬಾರಿ ಅಮ್ಮ ಒಬ್ಬಳೇ ಇದ್ದಳು!. ವರಾಂಡದಲ್ಲಿದ್ದ ಅಪ್ಪನ ಫೋಟೋಗೋ ಮಲ್ಲಿಗೆ ಹಾರ ಹಾಕಿ ನಮಸ್ಕರಿಸಿದೆ. ನನ್ನ ಕಣ್ಣುಗಳು ಒದ್ದೆಯಾದವು. ಅಪ್ಪ ತುಟಿಬಿಚ್ಚಲಿಲ್ಲ, ಮೊಮ್ಮಗು ಎಲ್ಲಿ ಎಂದು ಕೇಳಲಿಲ್ಲ. ಕಪ್ಪಗಿನ ದಪ್ಪ ಕನ್ನಡದೊಳಗಿನಿಂದ ನನ್ನ ನೋಡಿದ. ಅಪ್ಪ ಕೋಪಿಸಿಕೊಂಡಿರಬೇಕೆಂದು ನಾನೂ ಮಾತಿಲ್ಲದೆ ಸುಮ್ಮನಾದೆ.

Saturday, March 10, 2012

ಯುಗಾದಿಗೆ ಬಂದುಬಿಡು ಮಗಳೇ,

ಇನ್ನೇನೋ ಎರಡು ವಾರ. ಯುಗಾದಿ ಬಂದಿದೆ. ಈ ಬಾರಿ ನನಗೆ ಡಬಲ್ ಖುಷಿ. ಏಕಂದ್ರೆ ಮಗ್ಳು ಮನೆಗೆ ಬರ್ತಾಳೆ. ನೀನು ಬಂದೇ ಬರ್ತಿ ಅನ್ನೋ ಗಟ್ಟಿ ಗ್ಯಾರಂಟಿ. ಕಳೆದ ಸಲ್ಸ ಆಫೀಸ್ ಕೆಲ್ಸದ ನೆಪ ಹೇಳಿ ತಪ್ಪಿಸಿಕೊಂಡಿದ್ದೆ. ಮುಂದಿನ ದೀಪಾವಳಿಗೂ ನೀನು ಬರಲೇ ಇಲ್ಲ. ಈ ಬಾರಿ ನಿನಗೆ ವಿನಾಯ್ತಿ ಇಲ್ಲ. ನೋಡು ಮಗಳೇ, ಈ ಬಾರಿ ನೀನು ಬರಲೇಬೇಕು. ಮನೆಯಲ್ಲಿ ಅಪ್ಪಿ ಕರು ಹಾಕಿದ್ದಾಳೆ.

ಹಾಗಾಗಿ, ಹಾಲು, ಮಜ್ಜಿಗೆ, ಮೊಸರಿಗೆ ಚಿಂತೆಯಿಲ್ಲ. ಕರು ತುಂಬಾ ಮುದ್ದಾಗಿದೆ. ಈಗ ತಿಂಗಳು ತುಂಬಿದೆ. ಅಪ್ಪಿ ದಿನಕ್ಕೆ ಮೂರು ಲೀಟರ್ ಹಾಲು ಕೊಡ್ತಾಳೆ. ಸಂಜೆ ಕರುವಿಗೆ ಹೆಚ್ಚು ಹಾಲು ಬಿಡ್ತೀನಿ. ಕರುವಿಗೆ ಅಮ್ಮಿ ಅಂದ ಹೆಸರಿಟ್ಟಿದ್ದೀನಿ. ಈ ಬಾರಿ ಅಪ್ಪಿ-ಅಮ್ಮಿಯ ಪೂಜೆನ ನಿನ್ನ ಕೈಯಿಂದಲೇ ಮಾಡಿಸ್ತೀನಿ. ಅದನ್ನು ನೋಡಿದಾಗ ನಿನ್ನ ಪ್ರೀತಿಯ ಅಕ್ಕತ್ತಿ ನೆನಪಾಗ್ತಾಳೆ. ಅಕ್ಕತ್ತಿನೂ ಹಾಗೇ ಮುದ್ದಾಗಿದ್ಳು, ನೀನು ಅವಳ ಜೊತೆಗೇ ಮಲಗೋಕೆ ರಚ್ಚೆ ಹಿಡಿಯುತ್ತಿದ್ದೆ.

ಮಗಳೇ, ನೀನು ಬರುವುದೇ ಬೆಟ್ಟದಷ್ಟು ಖುಷಿ ನನಗೆ. ನಾಲ್ಕು ದಿನ ರಜೆ ಹಾಕಿ ಬಂದುಬಿಡು.ಅಳಿಯನನ್ನೂ ಕರ‍್ಕೊಂಡು ಬಾ. ಬೇಸಿಗೆ ಬಂದ್ರೂ, ನಮ್ಮೂರಲ್ಲಿ ಸೆಖೆ ಇಲ್ಲ. ಬಾವಿ ತುಂಬಿಕೊಂಡಿದೆ. ಮನೆಯ ಅಂಗಳದಲ್ಲಿ ಇನ್ನೊಂದಷ್ಟು ಹೂಗಿಡಗಳನ್ನು ತಂದು ಹಾಕಿದ್ದೀನಿ. ಸೇವಂತಿಗೆ, ಗುಲಾಬಿ ಹೂವು ಬಿಟ್ಟಿದೆ. ವಾಪಸ್‌ ಹೋಗುವಾಗ ಮುಡಿತುಂಬಾ ಹೂವ ಮುಡ್ಕೊಂಡು ಹೋಗು. ಸಣ್ಣವಳಿರುವಾಗ ನಿನ್ನ ಉದ್ದದ ಜಡೆಗೆ ಅದೆಷ್ಟು ಹೂವು ಮುಡಿಸಿದ್ನೋ. ಈಗ ನಿನ್ನ ಚೋಟುದ್ದ ಜಡೆ ನೋಡುವಾಗ ಕೆಟ್ಟ ಸಿಟ್ಟು ಬಂದುಬಿಡುತ್ತೆ ನೋಡು. ಇರಲಿ ಬಿಡು, ನಿಮ್ಮ ಪ್ಯಾಟೆ ಸ್ಟೈಲು ನಿಂಗೆ.

ಮನೆ, ಹಟ್ಟಿ ಸ್ವಚ್ಛ ಮಾಡ್ಬೇಕು, ಅಟ್ಟದಲ್ಲಿ ವರ್ಷವಿಡೀ ತುಂಬಿದ ಕಸ...ಎಲ್ಲವನ್ನೂ ಸ್ವಚ್ಛಮಾಡ್ಬೇಕು. ಈಗ್ಲೇ ಕೆಲ್ಸಗಳು ಆರಂಭವಾಗಿದೆ. ಅಂಗಳಕ್ಕೆ ಸಗಣಿ ಸಾರೋಕೆ ಪಕ್ಕದ್ಮನೆಯ ಸೀತಕ್ಕ ಮೂರು ದಿನ ಮೊದಲೇ ಬರುತ್ತಾಳೆ. ನಿನ್ ತಮ್ಮಂಗೆ ಹೊಲ, ತೋಟದ ಕೆಲ್ಸ ವಹಿಸಿಬಿಟ್ಟಿದ್ದೀನಿ. ಅವನಿಗೆ ಒಂಚೂರು ಪುರುಸೋತ್ತು ಇಲ್ಲ. ಈ ಬಾರಿ ವಿಶೇಷ ಅಂದ್ರೆ ಸೊಸೆ ಮನೆಗೆ ಬಂದಿದ್ದಾಳೆ. ನನ್ನ ಕೆಲ್ಸಗಳಿಗೆ ಅವಳ ಸಾಥ್ ಇದ್ದೇ ಇದೆ.

ನಿಂಗೆ ಈಗ್ಲೆ ಎರಡು ರೇಷ್ಮೆ ಸೀರೆ ತಂದಿಟ್ಟಿದ್ದೀನಿ ಕಣೇ. ನೀನು ಬಿಳಿ ಬಣ್ಣಕ್ಕೆ ಒಪ್ಪುವ ಆಕಾಶ ನೀಲಿ ಹಾಗೂ ಹಸಿರು ಬಣ್ಣದ ಸೀರೆಗಳು. ಅದಕ್ಕೆ ಚಿನ್ನದ ಬಣ್ಣದ ಬಾರ್ಡರ್. ಮಿರಮಿರನೆ ಮಿನುಗುವ ಸೆರಗು. ನೀನು ಉಟ್ಟರೆ ಥೇಟ್ ಮದುಮಗಳಂತೆ ಕಾಣ್ತಿ ನೋಡು. ನೀನು ಮನೆಯಲ್ಲೇ ಆ ಸೀರೆ ಉಡ್ಬೇಕೆಂದು ರವಿಕೆ ಕೂಡ ಹೊಲಿಸಿಟ್ಟಿದ್ದೀನಿ. ಇನ್ನೊಂದು ಜೊತೆ ಚಿನ್ನದ ಬಳೆ ಮಾಡಿಟ್ಟಿದ್ದೀನಿ. ಬೇಗನೇ ಬಂದುಬಿಡು ಮಗಳೇ. ಜೊತೆಗೆ ನಿನಗೆ ಏನು ಬೇಕು ಅದೆಲ್ಲಾ ಮಾಡಿಟ್ಟಿದ್ದೀನಿ. ಕಳೆದ ವರ್ಷದ ಜೇನುತುಪ್ಪ, ಹಪ್ಪಳ, ಉಪ್ಪಿನಕಾಯಿ ಇನ್ನೂ ಹಾಗೇ ಇದೆ. ತಕ್ಕೊಂಡು ಹೋಗ್ತೀವಿಯಂತೆ. ಅಂದಹಾಗೆ, ಪತ್ರ ನೋಡಿ ಸಿಡಾಸಿಡಾ ಅನ್ಬೇಡ. ಈ ಬಾರಿ ನೀನು ಬರ‍್ಲೇಬೇಕು. ಮುಗಿಸ್ತೀನಿ, ಪತ್ರ ಬರಿ.


(ಫೋಟೋ: ಗೂಗಲ್‌ನಲ್ಲಿ ಹುಡುಕಿದಾಗ ಸಿಕ್ಕಿದ್ದು!!)

Thursday, March 8, 2012

ನೀನೆಷ್ಟು ಧೈರ್ಯವಂತೆ ಕಣಮ್ಮಾ?


ಅಮ್ಮ ಇವತ್ತು ನಿಂಗೆ ಪತ್ರ ಬರೀಲೇಬೇಕು. ಇಂದು ಮಹಿಳಾ ದಿನ. ಬೆಳಿಗೆದ್ದು ಟಿವಿ. ಪತ್ರಿಕೆಗಳನ್ನು ನೋಡಿದೆ. ಸಾಧಕಿ ಮಹಿಳೆಯರ ಗುಣಗಾನ. ಶೋಷಣೆಗಳ ಕಣ್ಣೀರು. ಆದರೆ, ನನಗೆ ನೆನಪಾಗಿದ್ದು ಇವೆಲ್ಲವುಗಳನ್ನು ಮೀರಿ ಬದುಕಿದ ನೀನು. ನನ್ನಮ್ಮ ಎಷ್ಟು ಒಳ್ಳೆಯವಳು, ನನ್ನಮ್ಮ ಎಷ್ಟು ಬುದ್ಧಿವಂತೆ, ಅಕ್ಷರಗಳ ಪರಿಚಯವಿಲ್ಲದಿದ್ದರೂ ಅದೆಷ್ಟು ಜ್ಞಾನವಂತೆ ನನ್ನಮ್ಮ ಅನಿಸ್ತು. ನಿನ್ನ ಬಗ್ಗೆ ಹೆಮ್ಮೆಯಿಂದ ಬೀಗಿದೆ. ಈಗ ನನಗೆ ನೀನಿಲ್ಲದ ಹೊತ್ತು. ಗಂಡನ ಜೊತೆಗೆ ಬದುಕು ಕಟ್ಟಿದ್ದೀನಿ. ಇದು ಪ್ರತಿ ಹೆಣ್ಣು ಮಗಳ ಜೀವನದ ಅನಿವಾರ್ಯತೆ.

ನನಗಿನ್ನೂ ನೆನಪಿದೆ ಅಮ್ಮ. ನನ್ನ ಕಲಿಕೆಗೆ ನೀನೆಷ್ಟು ಕಷ್ಟಪಟ್ಟೆ ಅಂತ. ಅಪ್ಪ ನಮ್ಮ ಬಿಟ್ಟುಹೋದ, ಅಜ್ಜ ಮನೆಯಿಂದಲೇ ಹೊರಹಾಕಿದ. ಒಪ್ಪೊತ್ತಿನ ಅನ್ನಕ್ಕೂ ಪರದಾಡುವ ಸಂದರ್ಭ. ಬರೀ ಬೀಡಿ ಸುರುಟಿ ನನ್ನ ಓದಿಸಿದೆ, ಡಿಗ್ರಿ ಕೊಡಿಸಿದೆ, ಕ್ಲಾಸಿನಲ್ಲಿ ಫಸ್ಟ್ ಬರುವಂತೆ ಮಾಡಿದೆ. ನಾನು ಸ್ಕೂಲಿಗೆ ಹೋಗುತ್ತಿದ್ದಾಗ ಪಕ್ಕದ್ಮನೆಯ ಗೌಡ್ರ ಮನೆಯ ಮಕ್ಕಳ ಬುತ್ತಿಯಲ್ಲಿದ್ದ ರೊಟ್ಟಿ ನನಗೂ ಬೇಕೆಂದು ರಚ್ಚೆ ಹಿಡಿದಾಗ ರೊಟ್ಟಿ ಮಾಡಿಕೊಟ್ಟೆ. ಗೌಡ್ರ ಮಗಳ ಹಕ್ಕಿಗಳ ಚಿತ್ರವಿರುವ ಬಣ್ಣದ ಬ್ಯಾಗ್ ಕೇಳಿದಾಗ ಅದನ್ನೂ ತಂದಿತ್ತೆ. ಮನೆಯಲ್ಲಿ ಓದಲು ಟೇಬಲ್, ಕುರ್ಚಿ ಬೇಕೆಂದಾಗ ಅದನ್ನೂ ಮಾಡಿಸಿಕೊಟ್ಟೆ. ರಜೆ ಕಳೆದು ಸ್ಕೂಲಿಗೆ ಕಳುಹಿಸುವಾಗ ಹೊಸ ಬಟ್ಟೆಗಳನ್ನು ತೊಡಿಸಿ ಶಾಲೆಗೆ ಕಳುಹಿಸಿದೆ. ವಾರದ ಕೊನೆಯಲ್ಲಿ ಐಸ್‌ಕ್ಯಾಂಡಿಗೆ ದುಡ್ಡು ಬೇಕೆಂದಾಗ ನಾಲ್ಕಾಣೆ ಕೊಡಲು ನೀನು ಮರೆಯಲಿಲ್ಲ.

ಪರೀಕ್ಷೆ ಮಾರ್ಕ್ಸ್ ಕಾರ್ಡಿಗೆ ಸೈನ್ ಹಾಕೋಕೆ ಹೇಳಿದಾಗ ಶಾಲೆಗೇ ಬಂದು ಹೆಬ್ಬೆಟ್ಟು ಒತ್ತಿದೆ. ಅರ್ಥವಾಗದನ್ನು ಮೇಷ್ಟ್ರ ಬಳಿ ಕೇಳಿ ತಿಳ್ಕೊಂಡೆ. ಸ್ಕೂಲ್ ಡೇ ದಿನ ನನ್ನ ಜೊತೆಗೆ ಬಂದು ವೇದಿಕೆ ಮುಂದೆ ಕುಳಿತೆ. ವೇದಿಕೆಯಲ್ಲಿ ಮಿಂಚುತ್ತಿದ್ದ ನನ್ನ ನೋಡಿ ಹೆಮ್ಮೆಪಟ್ಟೆ. ಬಹುಮಾನಗಳು ಸಿಕ್ಕಾಗ ಎದ್ದು ನಿಂತು ಚಪ್ಪಾಳೆ ತಟ್ಟಿದೆ. ಇನ್ನೂ ಒಂದು ತಮಾಷೆ ಎಂದರೆ, ಆರಂಭದಲ್ಲಿ ಸ್ಕೂಲ್‌ಗೆ ಹೋಗಲು ಭಯಪಡುತ್ತಿದ್ದ ನನ್ನ ಜೊತೆ ನೀನು ಸ್ಕೂಲ್‌ಗೆ ಬಂದು ಕೂರುತ್ತಿದ್ದಿ ಅಲ್ವಾ? ಎಂಥ ಒಳ್ಳೆಯ ಅಮ್ಮ ನೀನು?

ನನಗಿನ್ನೂ ನೆನಪಿದೆ ಅಮ್ಮ. ನಿನಗೆ ಓದು ಬರದಿದ್ದರೂ, ಚಿತ್ರಗಳನ್ನು ನೋಡಿಯೇ ಪಾಠ ಹೇಳುತ್ತಿದ್ದೆ. ಕಥೆ ಹೇಳುತ್ತಿದ್ದೆ.. ಅದ್ಹೆಂಗೇ ಮಗ್ಗಿ ಹೇಳುತ್ತಿದ್ದೆ ನನಗೇ ಅಚ್ಚರಿ. ನನ್ನಮ್ಮ ಅಕ್ಷರ ಗೊತ್ತಿಲ್ಲದ ವಿದ್ಯಾವಂತೆ ಅಂತ ಹೆಮ್ಮೆಪಡುತ್ತಿದ್ದೇನೆ. ಹೋದಲೆಲ್ಲಾ ಹೆಬ್ಬೆಟ್ಟು ಒತ್ತುತ್ತಿದ್ದ ನಿನಗೆ ಸಹಿ ಮಾಡೋಕೆ ನಾನು ಕಲಿಸಿದ್ದೆ. ಒಂದೇ ದಿನದಲ್ಲಿ ಸಹಿ ಹಾಕಲು ಕಲಿತ ನಿನ್ನ ಬುದ್ದಿಮತ್ತೆಗೆ ಸಲಾಂ ಅಮ್ಮ. ಕಾನೂನು ಕಟ್ಟಳೆ, ಜಮೀನು ವ್ಯವಹಾರ, ತೋಟದ ಕೆಲ್ಸ ಎಲ್ಲವನ್ನೂ ನೀಟಾಗಿ ಮಾಡೋ ನಿನ್ನ ಜ್ಞಾನ ಯಾರಿಗೇನು ಕಡಿಮೆ?

ನನ್ನಪ್ಪ ನಮ್ಮ ಬಿಟ್ಟುಹೋದಾಗ ನನಗಿನ್ನೂ ಎರಡು ವರ್ಷ. ದಟ್ಟಕಾಡಿನ ಮಧ್ಯೆ ಮುಳಿಹುಲ್ಲಿನ ಮನೆಯಿತ್ತು. ಸುತ್ತಮುತ್ತ ಮನೆಗಳಿಲ್ಲ. ಮನೆಗೆ ಬಿದಿರ ಬಾಗಿಲು. ಮಳೆಗಾಲದಲ್ಲಿ ಹಾವುಗಳ ಕಾಟ. ರಾತ್ರಿಯಿಡೀ ಚಿಮಿಣಿ ದೀಪ ಹಚ್ಚಿಕೊಂಡು ಬೆಳಕಿನೆದುರು ಮೌನವಾಗಿ ನನ್ನ ಎದೆಗವಚಿಕೊಂಡು ಕೂರುತ್ತಿದ್ದೆ . ಆಗ ಅಜ್ಜ-ಅಜ್ಜಿ ನೆರವಾಗಲಿಲ್ಲ. ಸಂಬಂಧಿಕರ ಕರೆ ಇರಲಿಲ್ಲ. ಸಮಾಧಾನ ಹೇಳಬೇಕಾದ ನನ್ನ ಕಣ್ಣುಗಳಷ್ಟೇ ಮಾತನಾಡುತ್ತಿದ್ದವು. ಜಗತ್ತಿನ ಅರಿವೂ ನನಗಿರಲಿಲ್ಲ. ಆ ಪುಟ್ಟ ಗುಡಿಸಲಿನಲ್ಲೇ ಎಂಥ ಅದ್ಭುತವಾದ ಬದುಕು ಕಟ್ಟಿದೆ ನೀನು?

ಕಷ್ಟಗಳು ಬಂದಾಗ ಇನ್ನೊಬ್ಬರ ಮನೆಯೆದುರು ಹೋಗಿ ಗೋಳೋ ಎಂದು ಅಳಲಿಲ್ಲ ನೀನು. ಕೆಲಸ ಕೊಡಿ ಎಂದು ಬೇಡಲಿಲ್ಲ ನೀನು. ಅಸಹಾಯಕಳಾಗಿ ಕೈ ಕಟ್ಟಿ ಕುಳಿತಿಲ್ಲ ನೀನು. ಬದುಕು ನೀಡದ ಅಪ್ಪ-ಅಮ್ಮನಿಗೆ, ಗಂಡನಿಗೂ ಬೈಯಲಿಲ್ಲ ನೀನು. ಬದಲಾಗಿ ಬೀಡಿ ಸುರುಟಿದೆ, ಹಸುಗಳನ್ನು ಸಾಕಿದೆ, ಆಡುಗಳನ್ನು ಸಾಕಿದೆ, ಎಮ್ಮೆಗಳನ್ನು ಸಾಕಿ ಹಾಲು ಕರೆದು ಕೈ ತುಂಬಾ ನೋಟು ಎಣಿಸಿದೆ. ತೆಂಗಿನಗಿಡ, ಅಡಿಕೆ ಗಿಡ, ಬಾಳೆ ಗಿಡ, ಕರಿಮೆಣಸು ಬೆಳೆದೆ. ಜೋಳ ಬಿತ್ತಿದೆ. ನಿನ್ನ ಕೈತೋಟದಲ್ಲೇ ಕೃಷಿಯ ಅರಮನೆ ಕಟ್ಟಿ ನನ್ನ ಬೆಳೆಸಿದೆ. ಪುಟ್ಟದಾದ ಮನೆ ಕಟ್ಟಿ ಸೂರು ಮಾಡಿಕೊಂಡೆ. ಎಂಥ ಧೈರ್ಯವಂತೆ ಅಮ್ಮ ನೀನು? ಪ್ರತಿ ಸಲ ನಿನ್ನ ಬಗ್ಗೆ ಬರೀತೀನಿ, ಹೇಳ್ಕೋತೀನಿ. ನೀನು ಬರೆದು ಮುಗಿಯದ ಕಾವ್ಯ, ನಿರಂತರವಾಗಿ ಹರಿಯೋ ತೊರೆ. ಇವತ್ತಿಗೆ ಇಷ್ಟು ಸಾಕು. ಪತ್ರ ಓದಿ ಒಂದೇ ಒಂದ್ಸಲ ಬಾಯಿ ಅಗಲಿಸಿ ಜೋರಾಗಿ ನಕ್ಕುಬಿಡು ಕೇಳಿಸಿಕೊಳ್ತಿನಿ

(ಫೋಟೋ: ಗೂಗಲ್‌ನಲ್ಲಿ ಹುಡುಕಿದಾಗ ಸಿಕ್ಕಿದ್ದು!!)

Tuesday, March 6, 2012

ನನ್ನವನಿಗೆ ಸುಮ್ನೆ ಒಂದು ಪತ್ರ

ಕಳೆದುಹೋಯಿತು ಎರಡು ವಸಂತ. ಸುಖಾಸುಮ್ಮನೆ ಕುಳಿತು ಹಿಂತಿರುಗಿ ನೋಡಿದಾಗ ಅರೆ! ೨ ವರ್ಷ ಅನ್ನೋ ಅಚ್ಚರಿ. ಅಕ್ಷರಗಳಲ್ಲೇ ಬದುಕಿನ ಅರಮನೆ ಕಟ್ಟಿದ್ದು , ಅಕ್ಷರಗಳನ್ನೇ ಪ್ರೀತಿಯ ಮುತ್ತಾಗಿ ಪೋಣಿಸಿದ್ದು ಎಲ್ಲವೂ ಸಿಹಿಸಿಹಿ ನೆನಪು. ಎರಡು ವರ್ಷಗಳ ಹಿಂದೆ ಸಂಬಂಧಗಳ ನಡುವೆ ಹರಿದಾಡಿದ್ದ ಪತ್ರಗಳನ್ನು ಮತ್ತೆ ಬಿಚ್ಚಿ ನೋಡುವ ಖುಷಿ.

ಆರಂಭದಲ್ಲಿದ್ದ ಸಿಟ್ಟು-ಸಿಡುವಿನ ಕಾವು ಈಗಿಲ್ಲ. ಆಗೊಮ್ಮೆ -ಈಗೊಮ್ಮೆ ಗೆಳೆಯರ ಮಧ್ಯೆ ನೆನಪಾಗುತ್ತಿದ್ದ ಸಿಗರೇಟಿನ ಹೊಗೆಯಿಲ್ಲ. ಈಗಲೂ ನೀನು ಆಗಾಗ ನೊರೆ ಉಕ್ಕಿಸುವ ಬಿಯರ್ ಬಾಟಲಿ ಮೇಲೆ ಕೊಂಚ ಮುನಿಸಿದೆ. ಇರಲಿಬಿಡು!

ಸುಖಾಸುಮ್ಮನೆ ರೇಗುವ ನಿನ್ನ ಮುಖದಲ್ಲಿ ನಗುವಿನ ಕಮಲ ಅರಳಿದೆ. ಮಾತು-ಮಾತಿಗೂ ಮುನಿಯುತ್ತಿದ್ದ ನನ್ನಲ್ಲೂ ನಗು ಅರಳಿದೆ, ಬದುಕು ಸುಖಿಸುತ್ತಿದೆ. ಬದುಕು ತುಂಬಾ ಖುಷಿಯ ಸುಗ್ಗಿ ಹರಿಸಿದ್ದಿ. ನನ್ನದೆಯ ತುಂಬಾ ಹೊಸಹೊಸ ಕನಸುಗಳ ಕಸುವು ಮಾಡಿದ್ದಿ. ಹೆಚ್ಚೇನೂ ಹೇಳಲ್ಲ. ಅಕ್ಕರೆಯ ಅರಮನೆಯಲ್ಲಿ ಕವಿ ಹೇಳಿದಂತೆ ನಾನೊಂದು ಪುಟ್ಟಕೊಳ, ನೀನದರ ಜೀವಜಲ.

Saturday, March 3, 2012

ನನಗೊಬ್ಳು ನಾದಿನಿ ಬಂದ್ಳು


ನನಗೊಬ್ಬನೇ ತಮ್ಮ. ಅಮ್ಮನ ಜೊತೆಗೆ ಕೃಷಿಗೆ ಯಜಮಾನ. ಮೊನ್ನೆ-ಮೊನ್ನೆ ಅವನಿಗೂ ಮದುವೆ ಆಯಿತು. ನನ್ನ ಮದುವೆ ಹಳ್ಳಿ ಸೊಬಗನ್ನೆಲ್ಲಾ ಮೈತುಂಬಿಸಿಕೊಂಡಿರಲಿಲ್ಲ. ಆದರೆ, ತಮ್ಮನಿಗೆ ಚಾನ್ಸ್ ಸಿಕ್ಕಿತು. ಹಸಿರು ವನದ ನಡುವಿರುವ ನಮ್ಮನೆಯಲ್ಲೇ ಮದುವೆ.

ವಾರದ ಮೊದಲೇ ಮನೆಯಂಗಳದಲ್ಲಿ ತೆಂಗಿನ ಮಡಲಿನ ಚಪ್ಪರದ ಶೃಂಗಾರ. ಮಾವಿನ ತಳಿರುಗಳ ತೋರಣ ಚಪ್ಪರಕ್ಕೆ ರಂಗು ತಂದಿತ್ತು. ಅಗಳವಾದ ಅಂಗಳ. ಸುತ್ತಲೂ ಅಮ್ಮ ನೆಟ್ಟ ಹೂವಿನ ಗಿಡಗಳು. ನಮ್ಮನೆಯ ಬಾವಿಯಲ್ಲಿ ನೀರಿಗೆ ಬರವಿಲ್ಲ, ಹಾಗಾಗಿ, ಹೂವಿನ ಗಿಡಗಳೂ ಹಸುರು ಹಸುರಾಗಿವೆ. ಅಂಗಳದಿಂದ ಇಳಿಯುತ್ತಲೇ ತೋಟ, ಸುತ್ತಮುತ್ತ ದೊಡ್ಡ ದೊಡ್ಡ ಮರಗಳು. ಮದುವೆಗೆಂದು ಸಿಂಗಾರಗೊಂಡ ಮನೆಯೇ ಮದುಮಗಳಂತೆ ಕಂಗೋಳಿಸುತ್ತಿತ್ತು.

ಮದುವೆಗೆ ತಮ್ಮನದೇ ಓಡಾಟ. ಅಮ್ಮನಿಗೆ ಆರೋಗ್ಯದ ಚಿಂತೆ. ದೂರದೂರಿನಲ್ಲಿ ಗಂಡನ ಹುಡುಕಿದ ನನಗೆ ಮನೆ ಹತ್ತಿರವಿರಬಾರದಿತ್ತೇ ಅನಿಸುತ್ತಿದೆ ನಿಜ. ತಮ್ಮನ ಮದುವೆಗೆ ನಾನೇ ಓಡಾಟ ಮಾಡಬೇಕನಿಸಿತ್ತು. ಅನಿವಾರ್ಯ ಬದುಕು. ಬೆಂಗಳೂರಲ್ಲಿ ಇನ್ನೊಂದು ಅಮ್ಮ ಸಿಕ್ಕಿದ್ದಾರೆ, ಅದು ಅತ್ತೆಮ್ಮ. ಮೂರು ದಿನಗಳ ಮೊದಲು ತವರು ಸೇರಿದೆ. ತಮ್ಮನಿಗೆ ಗಡಿಬಿಡಿ.
ಮದುವೆ ಗಂಡಿಗೆ ರೆಸ್ಟ್ ಇಲ್ಲ. ಜೊತೆಗೆ ವಾರದ ಮೊದಲೇ ತಯಾರಿ. ಸುತ್ತಮುತ್ತಲಿನ ಗೌಡ್ರ ಹೆಂಡ್ತಿಯರು ಮನೆಯಲ್ಲಿ ಠಿಕಾಣಿ.



ನಮ್ಮ ಅಪ್ಪನ, ಅಜ್ಜಿಯ ಕಡೆಯವರೆಲ್ಲಾ ಮನೆ ತುಂಬಿಕೊಂಡಿದ್ದರು. ಮಾತು, ಹಾಸ್ಯ, ನಗು, ಖುಷಿ-ಖುಷಿಯ ಜಾತ್ರೆ. ನನ್ನ ಅಜ್ಜನ ಕಡೆಯವರು ಆರು ಮಂದಿ ಅತ್ತಿಗೆ ಆಗಬೇಕಾದವ್ರು ಇದ್ದಾರೆ. ಎಲ್ಲರೂ ಎರಡು ದಿನ ಮೊದಲೇ ಮನೆ ಸೇರಿದ್ದರು. ಅವರು ಬಂದ್ರೆ ಸಾಕು ಮನೆಯಲ್ಲಿ ಜನಜಾತ್ರೆ. ಅಡುಗೆ ಮನೆಯಲ್ಲೂ ಅವರದೇ ಕಾರುಬಾರು. ನಮ್ಮನೆಯ ಹಿಂದೆ ಅಡುಗೆಗೆಂದೇ ಚಪ್ಪರದ ಹಾಲ್ ರೆಡಿಯಾಗಿತ್ತು. ಸುತ್ತಮುತ್ತಲಿನ ಮನೆಗಳಿಂದಲೇ ಪಾತ್ರೆಗಳನ್ನು ತಂದದ್ದಾಯಿತು.ಇದಕ್ಕೇನೂ ಬಾಡಿಗೆ ರೊಕ್ಕವಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಕೆಲ್ಸ. ಸಾಗಣಿ ಸಾರಿದ ಅಂಗಳದಲ್ಲೇ ತರಕಾರಿ ಹಚ್ಚುವ ಕೆಲಸ

ಮದುವೆಗೆ ಮೊದಲ ದಿನ ಮದರಂಗಿ ಶಾಸ್ತ್ರ. ರಾತ್ರಿಯಿಡೀ ಪರಸ್ಪರ ಅಂಗೈಯಲ್ಲಿ ಚಿತ್ತಾರ ಬಿಡಿಸುವ ಕೆಲಸ. ಆಗಾಗ, ನಡುರಾತ್ರಿಯಲ್ಲೂ ಪಟಾಕಿಗಳ ಸದ್ದು. ಯಾರಿಗೂ ನಿದ್ದೆಯಿಲ್ಲ. ಹಾಡು-ಆಟಗಳಲ್ಲೇ ಕಳೆದುಹೋಗುವ ಸಮಯ. ಚಂದ್ರ ಮರೆಯಾಗಿ ಸೂರ್ಯ ಕಾಣುವ ತನಕವೂ ಮಾತಿನ ಜಾತ್ರೆ.

ಸೂರ್ಯ ಮೇಲೆರುವ ಹೊತ್ತಿಗೇ ಹೆಣ್ಣಿನ ಕಡೆಯವರ ದಿಬ್ಬಣ. ಲುಂಗಿ-ರುಮಾಲು ಸುತ್ತಿದ ಬಂಟರು. ಮೈ ತುಂಬಾ ಒಡವೆಯಲ್ಲಿ ಸೀರೆಯುಟ್ಟ ಹೆಂಗಳೆಯರ ನಗೆಚೆಲುವು. ತೋಟದಲ್ಲೆಲ್ಲಾ ಓಡಾಡಿ ಖುಷಿಪಡುವ ಪುಟಾಣಿಗಳ ಕಲರವ. ಮದುವೆಯಾಗದ ಗಂಡುಮಕ್ಕಳ ಕಣ್ಣಲ್ಲಿ ಹುಡುಕಾಟ. ನನ್ನ ಯಾರು ನೋಡುತ್ತಾರೋ ನಾಚಿಕೆಯಲ್ಲಿ ಮುದುಡಿದ ಹುಡುಗಿರ ಕಣ್ಣುಗಳು. ಅಕ್ಕನ ಜೊತೆಗೆ ಆಗಾಗ ಕ್ಯಾಮರಾಕ್ಕೆ ಪೋಸು ಕೊಡುವ ಮದುಮಗಳ ತಂಗಿ. ಚಿನ್ನ-ಬಣ್ಣಗಳಿಂದ ದೂರವಿದ್ದ ನನಗೆ ಅಮ್ಮನಿಂದ ಬೈಗುಳ. ಕೈ ತುಂಬಾ ಬಳೆ ಹಾಕು, ಒಡವೆ ಹಾಕೋ, ಮುಡಿಗೆ ಹೂವ ಮುಡಿ, ನೀಟಾಗಿ ಸೀರೆಯುಟ್ಟುಕೋ,..ಹೇಳಿ ಹೇಳಿ ಅಮ್ಮನಿಗೇ ಸುಸ್ತು. ಮಗಳ ಬಗ್ಗೆ ಕೊಂಚ ಕೋಪ. ಅಂತೂ ಮದುವೆ ಮುಗಿಯಿತು. ಮನೆಗೆ ಮಗಳೊಬ್ಬಳು ಬಂದ ಖುಷಿ ಅಮ್ಮನಿಗೆ, ಹೆಂಡ್ತಿ ಬಂದ ಖುಷಿ ತಮ್ಮನಿಗೆ, ಅಮ್ಮನ ಮಾತುಗಳಿಗೆ ಕಿವಿಯಾಗಿ, ಬದುಕಿಗೆ ಸಾಥ್ ನೀಡುವ ಗಟ್ಟಿಗಿತ್ತಿ ನಾದಿನಿ ಬಂದ ಖುಷಿ ನನಗೆ.