Sunday, August 23, 2009

ಅಕ್ಕನಿಗೆ ಪ್ರೀತಿಯ ನೆನಪುಗಳು...

ಅಕ್ಕಾ..ನಿನ್ನೆ ಗೌರಿ-ಗಣೇಶ ಹಬ್ಬ. ನಿನ್ನ ತುಂಬಾ ನೆನಪಾಯ್ತು. ಸೂರ್ಯ ಮೂಡೋ ಹೊತ್ತಿಗೆ ಎದ್ದು ಸ್ನಾನ ಮಾಡಿ ದೇವರೆದುರು ದೀಪ ಹಚ್ಚಿ ಆರತಿ ಎತ್ತುವಾಗ ನಿನ್ನ ನೆನಪಾಯ್ತು. ಪಾಯಸ ಮಾಡಿ ಮಾವ, ಅಣ್ಣ, ತಮ್ಮ, ಪಕ್ಕದ್ಮನೆಯ ಪುಟ್ಟ ಮಕ್ಕಳಿಗೆ ಬಡಿಸುವಾಗ ನಿನ್ನ ನೆನಪು ತೀರಾ ಕಾಡಿತ್ತು. ಅಕ್ಕಾ... ಹಬ್ಬ ಬಂದರೆ ಮನೆಮುಂದೆ ಚೆಂದದ ರಂಗೋಲಿ ಇಡೋಕೆ ನೀನಿಲ್ಲ ಅಂದಿತ್ತು ಮನ.

ಅಕ್ಕಾ..ನಿನ್ನೆ ನಾ ಸೀರೆ ಉಟ್ಟಿದ್ದೆ ಗೊತ್ತಾ? ನನ್ನ ಇಷ್ಟದ ಬಣ್ಣ ಮೆರೂನ್ ಕಲರ್ ಸೀರೆ ಉಟ್ಟು, ಕೈ ತುಂಬಾ ಬಳೆ, ತಲೆ ತುಂಬಾ ಮಲ್ಲಿಗೆ ಮುಡಿದಿದ್ದೆ. ಆದರೆ, ನಂಗೆ ನೋಡು ಸೀರೆ ಉಡೋಕೆ ಬರಲ್ಲ..ಅದಕ್ಕೆ ಪಕ್ಕದ್ಮನೆಯ ಆಂಟಿ ಚೆನ್ನಾಗಿ ಸೀರೆ ಉಡಿಸಿದ್ರು ಅಕ್ಕಾ. ನೀನಿರುತ್ತಿದ್ದರೆ ನೋಡು ನೀನೇ ಉಡಿಸುತ್ತಿದ್ದೆಯಲ್ಲಾ? ತಲೆತುಂಬಾ ಹೂವು ಉಟ್ಟು, ಹಣೆಗೊಂದು ಬಿಂದಿಗೆ ಉಟ್ಟು ನೀನೂ ನನ್ನ ಜೊತೆ ಖುಷಿಪಡುತ್ತಿದ್ದೆ ಅಲ್ವಾ? ನನ್ನ ತಂಗಿ ಚೆನ್ನಾಗ್ ಕಾಣ್ತಾಳೆ ಅಂತ ಹೆಮ್ಮೆ ಪಡುತ್ತಿದ್ದೆಯಲ್ಲಾ.

ಅಕ್ಕಾ ನಿನ್ನೆ ದೇವಸ್ಥಾನಕ್ಕೆ ಹೋಗಿದ್ದೆ. ಹಣ್ಣುಕಾಯಿ ಮಾಡಿಸಿ ದೇವರ ಬಳಿಯೂ ನೀನು ಬೇಕೆಂದು ಬೇಡಿಕೊಂಡೆ. ನೀನು ಜೊತೆಗಿರುತ್ತಿದ್ದರೆ ನೀನೂ ನನ್ನ ಜೊತೆ ಬರ್ತಾ ಇದ್ದೆ. ನಿನ್ನ ಪುಟ್ಟ ಮಕ್ಕಳು ನನ್ನ ಮಡಿಲಲ್ಲಿ ಪ್ರೀತಿಯಾಟ ಆಡುತ್ತಿದ್ದವಲ್ಲಾ. ಏನು ಮಾಡೋದು ಹೇಳು...ದೇವರು ನಂಗೆ ನಿನ್ನ ಕೊಡಲೇ ಇಲ್ಲ ನೋಡು. ದೇವರ ಮೇಲೂ ಕೆಟ್ಟ ಸಿಟ್ಟು ಬರುತ್ತೆ...ಎಲ್ಲಾ ಕೊಟ್ಟು ಅಕ್ಕನನ್ನು ನಂಗೆ ಕೊಟ್ಟಿಲ್ಲ ಅನ್ನೋ ಕೊರಗು ನಂದು.

ಅಕ್ಕಾ..ಈ ಬಾರಿ ನಾನು ಹಬ್ಬಕ್ಕೆ ಅಮ್ಮನೂರಿಗೆ ಹೋಗಿಲ್ಲ. ಕೃಷ್ಣಾಷ್ಟಮಿಯ ದಿನವೇ ಹೋಗಿಬಂದೆ. ಅಮ್ಮಾ ಇಂದು ಬೆಳಿಗ್ಗೆ ಫೋನು ಮಾಡಿದ್ರು. ಯಾಕೆ ಗೊತ್ತಾ? ನಾನೂನು ಹುಟ್ಟಿದ್ದು ಗಣೇಶ ಹಬ್ಬದ ದಿನ. ಇವತ್ತು ಅಮ್ಮನೂ ಗಣಪತಿ ದೇವಸ್ತಾನಕ್ಕೆ ಹಣ್ಣುಕಾಯಿ ಹೂವು, ಬೆಲ್ಲ ತಕೊಂಡು ಹೋಗಿ ನನ್ನ ಲೆಕ್ಕದಲ್ಲಿ ಪೂಜೆ ಮಾಡಿಸಿದೆ ಅಂದ್ರು. ಅಮ್ಮಂಗೆ ನನ್ನ ಹುಟ್ಟಿದ ದಿನ ಅಂದ್ರೆ ಅದು ಚೌತಿ ದಿನವೇ ಹೊರತು ಆಗಸ್ಟ್ 2 ಅಂದ್ರೆ ಅವರು ನಂಬೊಲ್ಲ. ಅಮ್ಮ ಓದಿಲ್ಲ ಅಕ್ಕಾ..ಅದಕ್ಕೆ ನೋಡು ಅವರು ಪ್ರತಿ ವರ್ಷ ಚೌತಿಯನ್ನೇ ನೆನಪಿಟ್ಟುಕೊಳ್ಳುತ್ತಾರೆ. ಅಮ್ಮನ ಮುಗ್ಧತೆಗೆ ಮನಸಾರೆ ವಂದಿಸಿದೆ.
ಅಕ್ಕಾ..ಯಾಕೋ ನಿತ್ಯ ಅಂದುಕೊಳ್ಳುತ್ತಿದ್ದೆ ಮನ..

ನನಗೂ, ನನ್ನ ಬದುಕಿನಲ್ಲಿ ಸುಗ್ಗಿಯ ಸಂಭ್ರಮದಿಂದ ಮೆರೆಯೋಕೆ ನೀನಿರಬೇಕಿತ್ತು...
ನನ್ನ ನೀನು, ನಿನ್ನ ನಾನು ತುಂಬಾ ಪ್ರೀತಿಸುವವರಾಗಿರಬೇಕಿತ್ತು...
ಮನದ ಕದ ತೆರೆದು...ಪ್ರೀತಿಯ ಮಳೆಯಲ್ಲಿ ತೋಯಿಸಲು ನೀನಿರಬೇಕಿತ್ತು...
ನನ್ನ ಮೌನ-ಮಾತು, ಹುಸಿಮುನಿಸು, ಮುಂಗೋಪದ ಜೊತೆ ಸಾಥ್ ನೀಡಲು ನೀನಿರಬೇಕಿತ್ತು...
ಅಕ್ಕಾ..ನೀನು ಯಾವಾಗ ಬರ್ತೀಯಾ....ಹೇಳು ಬೇಗ...
ಇಂತೀ ನಿನ್ನ
ತಂಗಿ

Wednesday, August 19, 2009

ಆ ಪ್ರಶ್ನೆ ನನ್ನ ಆತ್ಮವನ್ನು ಚುಚ್ಚಿಬಿಟ್ಟಿತ್ತು...

ಮೊನ್ನೆ ಮೊನ್ನೆ ಸ್ವಾತಂತ್ರ್ಯ ದಿನ ಆಚರಿಸಿದ್ದೂ ಆಯಿತು..ಅದೂ ಪೊಲೀಸರ ಬಿಗಿಬಂದೋಬಸ್ತ್ ನಲ್ಲಿ! ಇದು ನಮ್ಮ ಹಣೆಬರಹ ಬಿಡಿ. ಪ್ರತಿಯೊಂದು ಕಾರ್ಯಕ್ರಮಕ್ಕೂ ಪೊಲೀಸರ ಸರ್ಪಗಾವಲು. ಕೃಷ್ಣದೇವರಾಯ ಕಾಲದಲ್ಲಿ ಚಿನ್ನವನ್ನು ರಸ್ತೆಯಲ್ಲಿಟ್ಟು ಮಾರಾಟ ಮಾಡುತ್ತಿದ್ದುದು ಇಲ್ಲೇನಾ ಎಂಬ ಶಂಕೆ ಮೂಡುತ್ತಿದೆ. ಅದಿರಲಿ, ಮೊನ್ನೆ ಸ್ವಾತಂತ್ರ್ಯ ದಿನದಂದು ಗೆಳತಿಯ ಮನೆಯಲ್ಲಿ ಸುಮ್ನನೆ ಕುಳಿತು ಟಿವಿ ನೋಡುತ್ತಿದೆ. ಗತಕಾಲದ ಇತಿಹಾಸವನ್ನು ಮತ್ತೆ ಮೆಲುಕು ಹಾಕುವ ಚಿತ್ರಣಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು..ಹೀಗೇ ಬೇರೆ ಬೇರೆ ಚಾನೆಲ್ ಗಳಲ್ಲಿ ಸ್ವಾತಂತ್ರ್ಯ ಆಚರಣೆ ಭರ್ಜರಿಯಾಗೇ ನಡೆಯುತ್ತಿತ್ತು. ಯಾವುದೋ ಒಂದು ಚಾನೆಲ್ ನೋಡಿದಾಗ 'ನಮ್ಮ ದೇಶದ ಹೀರೋ'ಗಳೆಂಬ ಕಾರ್ಯಕ್ರಮ ನಡೆಯುತ್ತಿತ್ತು. ಥಟ್ಟನೆ ಕಣ್ಣುಹಾಯಿಸಿದೆ, ಕ್ರಿಕೆಟ್ ತಾರೆಗಳಿಬ್ಬರನ್ನು 'ಹೀರೋಸ್ ಆಫ್ ಇಂಡಿಯಾ' ಸ್ತಾನದಲ್ಲಿ ಕುಳಿತುಕೊಳ್ಳಿಸಿ ಸಂವಾದಕ್ಕೆ ಅವಕಾಶ ನೀಡಲಾಗಿತ್ತು. ಕಿಕ್ಕಿರಿದ ಜನರು. 'ನೀವು ಯಾರನ್ನು ಯಾವಾಗ ಮದುವೆ ಆಗ್ತೀರಾ?', 'ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಇಷ್ಟನಾ?' 'ನಿಮಗೆ ಯಾವ ಹುಡುಗಿಯಾದ್ರೂ ಪಪೋಸ್ ಮಾಡಿದ್ಳಾ?' ಇಂಥ ಪ್ರಶ್ನೆಗಳ ಸುರಿಮಳೆ ವೀಕ್ಷಕರ ಕಡೆಯಿಂದ ಬರುತ್ತಿತ್ತು.

ಚಾನೆಲ್ ಆಫ್ ಮಾಡಿ ಕುಳಿತವಳಿಗೆ ಶಾಲಾ ದಿನಗಳಲ್ಲಿ ಟೀಚರ್ ಹೇಳಿಕೊಟ್ಟ ನಮ್ಮ 'ಹೀರೋ'ಗಳ ಬಗ್ಗೆ ಯೋಚನೆ ಮೂಡತೊಡಗಿತ್ತು.

ಹೌದು, ಶಾಲಾದಿನಗಳಲ್ಲಿ ನನ್ನ ಬೆಂಚಿನ ಪಕ್ಕದ ಗೋಡೆಗೆ ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ಮಹಾತ್ನಾಗಾಂಧೀಜಿ ಯ ದೊಡ್ಡ ಫೋಟೋಗಳನ್ನು ಅಂಟಿಸಿದ್ದರು. ನಿತ್ಯ ನಮ್ಮ ಟೀಚರ್ ಕ್ಲಾಸಿಗೆ ಬಂದವರೇ ದೇಶದ ಮಹಾನ್ ನಾಯಕರ ಕುರಿತು ಹೇಳೋರು. ಅವರ ಸಾಹಸಗಾಧೆಗಳನ್ನು ಪರಿಚಯಿಸೋರು. ಅವರ ಜೀವನ ಮೌಲ್ಯವನ್ನು ನಮಗೂ ಅರಿವಾಗಿಸೋರು. ಅವರು ನಮ್ಮ 'ನಾಯಕ'ರು ಅನ್ನೋರು. ಕೈಗೆ 'ರಾಷ್ಟ್ರಪಿತರು' ಎಂಬ ಪುಸ್ತಕ ನೀಡಿ ಒಬ್ಬೊಬ್ಬರಾಗಿ ಓದೋಕೆ ಹೇಳೋರು. ನಾವೆಲ್ಲ ಏರಿದ ಧ್ವನಿಯಲ್ಲಿ ಓದಿದ್ದೇವೆ. ಇವರೇ ನಮ್ಮ ನಾಯಕರೆಂದು ಒಪ್ಪಿಕೊಂಡಿದ್ದೇವೆ. ಭಲೇ ಮಗು...ಅಂತ ಟೀಚರ್ ಬಾಯಿಂದ ಹೊಗಳಿಸಿಕೊಂಡಿದ್ದೇವೆ. ಸ್ವಾತಂತ್ರ್ಯ ಬಂದಾಗ ಹೊಸ ಯುನಿಫಾರ್ಮ್ ಹಾಕಿ ನಮ್ಮೂರ ಶಾಲೆಯಿಂದ ನಾಲ್ಕೈದು ಕಿಮೀ ದೂರ ಮೆರವಣಿಗೆಯಲ್ಲಿ ಸಾಗಿದ್ದೇವೆ. ಗಾಂಧೀ ಕೀ ಜೈ, ಭೋಸ್ ಕೀ ಜೈ, ಭಗತ್ ಕೀ ಜೈ, ಶಾಸ್ತ್ರೀಜಿ ಕೀ ಜೈ ಅಂತ ಕೂಗುತ್ತಾ ಸಾಗಿದ್ದೇವೆ. ಕೂಗುತ್ತಲೇ ತ್ರಿವರ್ಣ ಧ್ವಜ ಹಾರಿಸಿದ್ದೇವೆ. ದೇಶಭಕ್ತಿ ಗೀತೆ ಹಾಡಿದ್ದೇವೆ. ಸ್ವಾತಂತ್ರ್ಯವೆಂದು ಬೀಗಿದ್ದೇವೆ. ನಮಗೆ ಪೊಲೀಸರ ಸರ್ಪಗಾವಲು ಬೇಕಿರಲಿಲ್ಲ. ಜೊತೆಗೆ ಟೀಚರ್ ಗಳು ಇದ್ದರು. ನಾಯಕರ ಹೆಸರುಗಳನ್ನು ಕೂಗಿ ಸಾಗುವಾಗ ಮೈಯೆಲ್ಲಾ ರೋಮಾಂಚನ. ಆ ನಮ್ಮ ಪುಟ್ಟ ಮನಸ್ಸಿನಲ್ಲಿ ನಿಜವಾದ ದೇಶನಾಯಕರು ನೆಲೆಹೂರಿದ್ದರು. ನಾವು ಹಾಗೇ ಆಗಬೇಕು ಅಂತ ಕನಸು ಕಂಡಿದ್ದೇವೆ. ಹೌದು, ನಾನೂ ಹೊರತಾಗಿರಲಿಲ್ಲ. ಭಗತ್ ಸಿಂಗ್ ಬದುಕಿನಕಥೆಯನ್ನು ಮತ್ತೆ ಮತ್ತೆ ಓದುತ್ತಿದೆ. ಗಾಂಧೀಜಿಯ ಸತ್ಯಾನ್ವಷಣೆಯನ್ನು ಓದಿ ನಾನೂ ಚಕಿತಳಾಗಿದ್ದೆ. ಆಗ ಸ್ವಾತಂತ್ರ್ಯ ಆಚರಿಸುವುದೂ ನಮಗೂ ಹಬ್ಬ. ಖುಷಿಯ ಹಬ್ಬ, ಸಂಭ್ರಮ ಸಡಗರದ ಹಬ್ಬ. ಏನೋ ಉತ್ಸಾಹ.

ಕುಳಿತಲ್ಲಿಯೇ ಯೋಚಿಸುತ್ತಿದ್ದೆ...ಆದರೆ ಈಗ? ಎಂಬ ಪ್ರಶ್ನೆ ನನ್ನ ಆತ್ಮಕ್ಕೆ ಚುಚ್ಚಿಬಿಟ್ಟಿತ್ತು!!

ನಮ್ಮ ಹೀರೋಗಳು ಯಾರು? ಬಹುತೇಕರ ಹೀರೋಗಳು ಕ್ರಿಕೆಟ್ ತಾರೆಗಳು, ಸಿನಿಮಾ ತಾರೆಗಳ ಮಟ್ಟಿಗಷ್ಟೇ ಸೀಮಿತವಾಗಿದೆ. ನಮ್ಮಮ್ಮ-ನಮ್ಮಪ್ಪನೇ ನಮಗೆ ಹೀರೋಗಳು ಅನ್ನೋರು ಈಗ ಕಡಿಮೆಯೇ. ಕ್ರಿಕೆಟ್ ತಾರೆಗಳು ಅಥವಾ ಸಿನಿಮಾ ನಟ-ನಟಿಯರನ್ನು ಹೀರೋಗಳೆಂದು ಪರಿಗಣಿಸಬೇಡಿ ಅನ್ನೋ ದನ್ನು ಹೇಳುತ್ತಿಲ್ಲ,. ಅದು ನನ್ನ ಉದ್ದೇಶವೂ ಅಲ್ಲ. ಆದರೆ. ನಮ್ಮ ನಿಜವಾದ ಹೀರೋಗಳನ್ನು ಕಂಡುಕೊಳ್ಳುವಲ್ಲಿ ನಾವು ತುಕ್ಕು ಹಿಡಿದಿದ್ದೇವೆ ಅನ್ನೋದಷ್ಟೇ ನನ್ನ ಮನದ ನೋವು. ಒಬ್ಬ ಚೆಂದದ ನಟ ಅಥವಾ ನಟಿ ಪರದೆ ಮೇಲೆ ಚೆನ್ನಾಗಿ ಅಭಿನಯಿಸಿದರೆ ಅವರೇ ನಮ್ಮ ಹೀರೋಗಳಾಗುತ್ತಾರೆ. ಓರ್ವ ಬ್ಯಾಟ್ಸ್ ಮನ್ ನಾಲ್ಕೈದು ಸಿಕ್ಸ್ ಬಾರಿಸಿದ್ರೆ ಬಾಲ್ ಹೋಗುವ ರಭಸ ನೋಡಿಯೇ ನಾವು ಅವನನ್ನು ಹೀರೋ ಅಂಥ ಅಪ್ಪಿಕೊಳ್ಳುತ್ತೇವೆ...ಇರಲಿ. ಅಪ್ಪಿಕೊಳ್ಳಿ ಬೇಡ ಅನ್ನಲ್ಲ. ಆದರೆ, ಹೀರೋ ಅನ್ನುವ ಪದವೇ ಅರ್ಥ ಕಳೆದುಕೊಂಡಿದೆ ಅಲ್ವಾ? ಅಂತೀನಿ ಅಷ್ಟೇ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರು, ದೇಶವನ್ನು ಹಗಲಿರುಳೂ ಕಾಯುವ ಯೋಧರು, ನಮ್ಮ ಬದುಕು ನೀಡಿದ ಪ್ರೀತಿಯ ಅಪ್ಪ-ಅಮ್ಮ, ಬದುಕಿಗೆ ದಾರಿ ತೋರಿದ ಗುರುಗಳು, ದಿನವಿಡೀ ಬೆವರು ಸುರಿಸಿದ ಅನ್ನದಾತನಂದ ಸಹನಾಮಯಿಗಳು ನಮಗೆ ಯಾವಾಗ 'ಹೀರೋ'ಗಳಾಗುವುದು? ಟೀಚರ್ ಹೇಳಿದ ಹೀರೋಗಳು, ಸ್ವಾತಂತ್ರ್ಯ ಬರೇ ಶಾಲಾ ದಿನಗಳಿಗಷ್ಟೇ ಸೀಮಿತವಾಯಿತಲ್ಲಾ ಅನ್ನೋ ನೋವು ನನ್ನ ತುಂಬಾ ಕಾಡಿತ್ತು. ಬದಲಾವಣೆಯೇ ಜಗದ ನಿಯಮ..ಆದರೆ....!
ಬೇಡ ಹೆಚ್ಚು ಬರೆಯಲ್ಲ..