Thursday, July 29, 2010

ಅಮ್ಮನಾಗುವ ಅತ್ತೆ...


ಅಂದು ಅತ್ತೆ ‘ನೀನು ಮನೆಗೆ ಭಾಗ್ಯಲಕ್ಷ್ಮಿ ಕಣಮ್ಮಾ, ಬಲಗಾಲಿಟ್ಟು ಒಳಗೆ ಬಾ’ ಎಂದು ಕರೆದು ಮನೆ ತುಂಬಿಸಿಕೊಂಡಾಗ ನಿಜಕ್ಕೂ ಹೌದಾ? ನನ್ನ ಅತ್ತೆ ನನ್ನ ಚೆನ್ನಾಗಿ ನೋಡ್ಕೋತಾರಾ? ಅತ್ತೆ-ಸೊಸೆ ಎಂದರೆ ಹಾವು-ಮುಂಗುಸಿಯಂತೆ ಎಂದು ಯಾರ್‍ಯಾರೋ ಹೇಳಿದ ಮಾತು ನೆನೆಪಾಗುತ್ತಿತ್ತು. ನನ್ನ ಒಳಮನಸ್ಸು ‘ನೀನೀಗ ಸೊಸೆ’ ಎಂದು ಸಾರಿ ಸಾರಿ ಹೇಳುತ್ತಿತ್ತು. ಬದುಕಿನ ಒಂದು ಘಟ್ಟದಿಂದ ಮತ್ತೊಂದು ಘಟ್ಟಕ್ಕೆ ಕಾಲಿಟ್ಟಾಗ ಆತಂಕ, ಖುಷಿ ಎಲ್ಲವೂ ಧುತ್ತೆಂದು ಮನದೊಳಗೆ ಮನೆಮಾಡಿತ್ತು.

ಹೌದು, ಮದುವೆಯಾಗಿ ಆಗಿನ್ನೂ ಒಂದು ವಾರ ಪೂರ್ತಿಯಾಗಿರಲಿಲ್ಲ. ಅತ್ತೆ ಮನೆಯಿನ್ನೂ ಹೊಸತು. ಇನ್ನೂ ಗಂಡನ ಮುಖ ಬಿಟ್ಟರೆ ಬೇರೆನೂ ಪರಿಚಯವಿಲ್ಲ. ಅಡುಗೆ ಮನೆಯಲ್ಲಿ ‘ಅತ್ತೆಯೇ ವಿಜ್ಞಾನಿ’. ಆ ವಿಜ್ಞಾನವನ್ನು ನಾನಿನ್ನೂ ಕರಗತಮಾಡಿಕೊಳ್ಳಬೇಕು. ಪುಟ್ಟ ಮಗುವಿನಂತೆ ಎಲ್ಲವನ್ನೂ ಗಂಡನೇ ಹೇಳಬೇಕು. ಅಂದು ನಾಳೆ ಶುಕ್ರವಾರ ಕಣಮ್ಮಾ, ಲಕ್ಷ್ಮಿ ಪೂಜೆ ಮಾಡಬೇಕು. ಬೇಗ ಎದ್ದುಬಿಡು ಎಂದು ರಾತ್ರಿಯೇ ಅತ್ತೆ ನೆನಪಿಸಿದಾಗ, ‘ನೆನೆಸಿಕೊಂಡಲ್ಲಿ ದೇವರಿದ್ದಾನೆ’ ಎಂದು ನಂಬಿಕೊಂಡಿದ್ದ ನನಗೆ ಅವರ ಎಚ್ಚರಿಕೆಯನ್ನೂ ಮೀರಲಾಗಲಿಲ್ಲ. ‘ಏಳ್ತೀನಮ್ಮ’ ಎಂದು ನಗುಮುಖದಿಂದಲೇ ಒಪ್ಪಿಕೊಂಡಾಗ ಖುಷಿಯಿಂದ ಅತ್ತೆ ‘ಜಾಣೆ’ ಎಂದು ಬೆನ್ನುತಟ್ಟಿದ್ದರು.

ಮರುದಿನ ಬೆಳಿಗ್ಗೆ ಬೇಗನೇ ಎದ್ದು ಸ್ನಾನ ಮಾಡಿ, ಸೀರೆಯುಟ್ಟು, ಕೈ ತುಂಬಾ ಬಳೆ, ಮುಡಿತುಂಬಾ ಹೂವು ಮುಡಿದು ಅತ್ತೆ ಹೇಳಿದಂತೆ ಲಕ್ಷ್ಮಿಯನ್ನು ಪೂಜಿಸಿದ್ದೆ. ನನಗೆ ಶ್ಲೋಕಗಳು ಗೊತ್ತಿಲ್ಲದಿದ್ದರೂ ಪಟಪಟನೆ ಶ್ಲೋಕಗಳನ್ನು ಬಾಯಿಪಾಠ ಮಾಡಿಕೊಂಡು ಹೇಳಿಕೊಡುತ್ತಿದ್ದ ಅತ್ತೆಯ ಪ್ರತಿಭೆಗೆ ನಾನೇ ಬೆರಗಾಗಿದ್ದೆ. ಬಹುಶಃ ಎಲ್ಲಾ ಅತ್ತೆಯರು ಹೀಗೇನೋ ಎಂದು ಮನಸ್ಸು ಕೇಳುತ್ತಿತ್ತು. ಹೊಸ ಬದುಕಿನಲ್ಲಿ ಹೊಸತರ ಬೆರಗು ನನ್ನೊಳಗೆ ಮನೆಮಾಡಿತ್ತು. ಆದ್ರೂ ಅತ್ತೆ-ಸೊಸೆಯರನ್ನು ಯಾಕೆ ಪರಸ್ಪರ ಶತ್ರುಗಳಂತೆ ಕಾಣ್ತಾರೆ? ಸಮಾಜವೇ ಹಾಕಿಕೊಟ್ಟ ಚೌಕಟ್ಟು ಇದಲ್ವಾ? ಸುಮ್ಮ ಸುಮ್ಮನೆ ಹೆಣ್ಣಿಗೆ ಹೆಣ್ಣೇ ಮರುಗುವ ‘ಹೆಣ್ಣು ಬದುಕು’ ಇದೆಯಾದರೂ ಪರಸ್ಪರ ಎತ್ತಿಕಟ್ಟುವ ಪರಂಪರೆಯನ್ನು ಸಮಾಜವೇ ಬೆಳೆಸಿದ್ದಲ್ವಾ? ಎಂದನಿಸುತ್ತಿತ್ತು.

ಅಂದು ಯುಗಾದಿ ಹಬ್ಬದಂದು ನನ್ನತ್ತೆ ನನಗೆ ಗುಲಾಬಿ ಬಣ್ಣದ ಹೊಸ ಚೂಡಿದಾರ್ ತಂದಾಗ ನಾನೆಷ್ಟು ಖುಷಿಪಟ್ಟಿದ್ದೆ? ಹೊಸ ಚೂಡಿಧಾರ್ ಧರಿಸಿ ಅತ್ತೆ ಕಾಲಿಗೆ ನಮಸ್ಕರಿಸಿ ಅಫಿಸಿಗೆ ಹೊರಟಾಗ ನನ್ನ ಹಣೆಗೆ ಕುಂಕುಮವಿಟ್ಟು ತಬ್ಬಿ ಮುತ್ತಿಟ್ಟ ಅತ್ತೆಯನ್ನು ಕಂಡಾಗ, ಅಮ್ಮ-ಅತ್ತೆನ ಅದೇಕೆ ಸಮಾಜ ಅಷ್ಟೊಂದು ಅಂತರದಲ್ಲಿ ಕಾಣುತ್ತೆ ಎಂದನಿಸಿತ್ತು. ಹೌದು, ಅತ್ತೆನೂ ಅಮ್ಮ ಆಗ್ತಾಳೆ, ಏಕಂದ್ರೆ ಅವಳು ಅಮ್ಮನಾಗಿದ್ದವಳು!

(ಹೊಸದಿಗಂತದಲ್ಲಿ ನಾನು ಬರೆಯುವ ಭಾವಬಿಂದು ಅಂಕಣದಲ್ಲಿ ಪ್ರಕಟ:
http://hosadigantha.in/epaper.php?date=07-29-2010&name=07-29-2010-15)