Thursday, June 13, 2013

ಜೀವನ ಮತ್ತು ತೂಕ


ಇತ್ತೀಚೆಗೆ "ಅಪ್ ಇನ್ ದ  ಏರ್'' ಚಿತ್ರ ನೋಡಿದೆ. ಜಾರ್ಜ್ ಕ್ಲೂನಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಬಿಡುಗಡೆಯಾಗಿದ್ದು 2009ರಲ್ಲಿ. ಮನುಷ್ಯ-ಸಂಬಂಧಗಳ ಕುರಿತು ನಮ್ಮೋಳಗೆ ಕಾಡುವ, ಪ್ರಶ್ನೆಗಳನ್ನು ಹುಟ್ಟುಹಾಕುವ ಚೆಂದದ ಚಿತ್ರವಿದು. ಬದುಕು-ಬವಣೆ, ಭಾವನೆ-ಬಾಂಧವ್ಯ, ಹಾಸ್ಯ-ಲಾಸ್ಯ ಎಲ್ಲವೂ ಇದರಲ್ಲಿದೆ. ಅದರಲ್ಲಿ ರ್ಯಾನ್ ಬಿಂಗಂ ಪಾತ್ರದಲ್ಲಿ ಕಾಣಿಸಿಕೊಂಡ ಕ್ಲೂನಿ ಒಂದು ಕಡೆ ಭಾಷಣ ಮಾಡುತ್ತಾನೆ. ಮನಸ್ಸಿಗೆ ಬಹಳ ಹಿಡಿಸಿತು. ಅನುವಾದಿಸಿ ಇಲ್ಲಿಟ್ಟಿದ್ದೀನಿ.
                                                                       
                                 ********
ನಮ್ಮ ಜೀವನ ಎಷ್ಟು ತೂಗುತ್ತೆ ಅಂದುಕೊಂಡಿದ್ದೀರಿ? ಒಂದು ಸಣ್ಣ ಕಲ್ಪನೆ. ನೀವೊಂದು ಬ್ಯಾಕ್ ಪ್ಯಾಕ್ (ಬೆನ್ನಿಗೆ ಹಾಕಿಕೊಳ್ಳುವ ಚೀಲ) ತಗಲುಹಾಕಿಕೊಂಡಿದ್ದೀರಿ ಎಂದಿಟ್ಟುಕೊಳ್ಳೋಣ. ನಾನು ಏನು ಹೇಳೋದಂದ್ರೆ ನಮ್ಮ ಜೀವನದಲ್ಲಿ ಏನೇನು ಇದೆಯೋ ಅದನ್ನೆಲ್ಲಾ ಆ ಬ್ಯಾಕ್ ಪ್ಯಾಕ್ ಗೆ ತುಂಬಬೇಕು.

ಮೊದಲು ಸಣ್ಣ-ಸಣ್ಣ ವಸ್ತುಗಳಿಂದ ಶುರುಮಾಡೋಣ. ಮೊದಲು ಕಪಾಟುಗಳು, ಪೆಟ್ಟಿಗೆಗಳು..ಮುಂತಾದವುಗಳನ್ನು ತುಂಬಿ. ಬಳಿಕ ಬಟ್ಟೆಗಳು, ಲ್ಯಾಪ್ ಟಾಪ್ ಮತ್ತು ಅದಕ್ಕೆ ಸಂಬಂಧಿಸಿದ ಏನೇನು ವಸ್ತುಗಳಿವೆಯೋ ಅವುಗಳು, ನಿಮ್ಮನೆಯಲ್ಲಿರುವ ದೀಪಗಳು, ನಿಮ್ಮ ಟೀವಿಗಳು...ತುಂಬುತ್ತಾ ಹೋಗಿ. ನಿಮ್ಮ ಬ್ಯಾಕ್ ಪ್ಯಾಕ್ ಸ್ವಲ್ಲ ಭಾರವಾದಂಗೆ ಅನಿಸುತ್ತೆ ಅಲ್ವಾ? ಅಲ್ಲಿಗೇ ನಿಲ್ಲಿಸಬೇಡಿ...ಇನ್ನೂ ನಿಮಗೆ ಬಹುಮುಖ್ಯವಾಗಿರುವ ಅದೆಷ್ಟೋ ವಸ್ತುಗಳಿವೆ; ನೀವು ಮಲಗೋ ಮಂಚ, ಓಡಾಡೋ ಕಾರು, ನಿಮ್ಮ ಮನೆ...ಬ್ಯಾಕ್ ಪ್ಯಾಕ್ ಇನ್ನೂ ಭಾರವಾಗುತ್ತೆ. 

ಇನ್ನು ಜನರನ್ನು ತುಂಬಿಸಿಕೊಳ್ಳೋಣ...ಮೊದಲು ನಮ್ಮ ಸ್ನೇಹಿತರ ಸ್ನೇಹಿತರು, ಆಫೀಸ್ ನಲ್ಲಿ ಸಿಗೋ ನಿಮ್ಮ ಕಲೀಗ್ ಗಳು..ಬಳಿಕ ನಿಮ್ಮ ಪ್ರಾಣಸ್ನೇಹಿತರು, ನಿಮ್ಮ ಸಹೋದರ-ಸಹೋದರಿಯರು, ಮಕ್ಕಳು-ಮರಿಗಳು, ಅಪ್ಪ-ಅಮ್ಮ, ನಿಮ್ಮ ಗಂಡ, ನಿಮ್ಮ ಹೆಂಡ್ತಿ, ನಿಮ್ಮ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ...
ಆ ಬ್ಯಾಕ್ ಪ್ಯಾಕ್ ನೊಳಗೆ ತುಂಬಿಸಿ. ಇವೆಲ್ಲವನ್ನೂ ತುಂಬಿಸಿದ ಬಳಿಕ ನಿಮ್ಮ ಬ್ಯಾಕ್ ಪಾಕ್ ನ ಭಾರವನ್ನು ಫೀಲ್ ಮಾಡಿ. ಎಷ್ಟೊಂದು ಭಾರವಿದೆ ಅನಿಸಲ್ವೇ?
ನಿಮಗನಿಸುತ್ತೆ: ಬ್ಯಾಕ್ ಪ್ಯಾಕ್ ನಲ್ಲಿರುವ ಆ ಸಂಬಂಧಗಳು ಅತ್ಯಂತ ಭಾರವಾದ ವಸ್ತುಗಳೆಂದು!
ಇವನ್ನೆಲ್ಲ ಹೊತ್ತುಕೊಂಡು ನಾವು ನಡಿಲೇಬೇಕು........

ನನ್ನೆದೆಯ ಮರುವಸಂತ


ಮಗ ಹುಟ್ಟಿದಾಗ ನನ್ನಲ್ಲಿ ಅದೆಂಥ ಸಂಭ್ರಮ? ಊರಮಂದಿಗೆಲ್ಲ ಲಡ್ಡು ಹಂಚಿದ್ದೇ ಹಂಚಿದ್ದು. ಮೇಲಿಟ್ಟರೆ ಕಾಗೆ ಹೊತ್ತೊಯ್ಯುತ್ತೆ, ಕೆಳಗಿಟ್ಟರೆ ಇರುವೆ ಕಚ್ಚುತ್ತೆ ಎಂದು ಅವನ ನನ್ನೆದೆಯಿಂದ ಕೆಳಗೆ ಇಳಿಸಿದ್ದೇ ಕಡಿಮೆ. ಕಂಕುಳಲ್ಲೇ ಹಾಲು ಕುಡಿದು ಅಲ್ಲೇ ನಿದ್ದೆಗೆ ಜಾರುತ್ತಿದ್ದ ನನ್ನ ರಾಜಕುಮಾರ.
ಅದೆಂಥ ಕತೆಗಳನ್ನು ಅವನಿಗೆ ಹೇಳಿದ್ದೆ. ಜೀಜಾಬಾಯಿ ಕಥೆ ಹೇಳಿ "ಮಗನೇ ಶಿವಾಜಿ ನೀನಾಗು'' ಎನ್ನುತ್ತಿದ್ದೆ. ರಾಮಾಯಣ, ಮಹಾಭಾರತದಿಂದ ಹಿಡಿದು ಗಾಂಧೀ, ಅಂಬೇಡ್ಕರ್ನಂಥ ಮಹಾನುಭಾವರ ಕತೆಗಳನ್ನು ಹೇಳಿಸಿಕೊಂಡೇ ನಿದ್ದೆ ಮಾಡುತ್ತಿದ್ದ ನನ್ನ ಮಗ. ಕಥೆ ಹೇಳದಿದ್ದರೆ "ಅಮ್ಮ, ನೀನು ಕತೆ ಹೇಳು'' ಎಂದು ನನ್ನ ಸೆರಗ ಹಿಡಿದು ಜಗ್ಗುತ್ತಿದ್ದ. ನನಗೆ ಕಥೆ ಹೇಳೊದ್ರಲ್ಲೇ ಖುಷಿ. ನನ್ನ ಅಪ್ಪ-ಅಮ್ಮ ಹೇಳಿಕೊಟ್ಟಿದ್ದ ಕಥೆಗಳು, ಅಕ್ಕ-ಪಕ್ಕದವರ ಬಳಿ ಕೇಳಿ ತಿಳಿಕೊಂಡ ಕಥೆಗಳು ಎಲ್ಲವೂ ನನ್ನ ಮಗನಿಗೆ. ಕೆಲವೊಮ್ಮೆ ರಾತ್ರಿಯಿಡೀ ಮಲಗದೆ ಕಥೆ ಹೇಳಿಸಿಕೊಂಡಿದ್ದೂ ಉಂಟು. ಅದೆಂಥ ಕಥೆಯ ಹುಚ್ಚು? ಅವಂಗೆ.
ಕಥೆ ಕೇಳುತ್ತಲೇ ಬೆಳೆದ ಮಗನಿಗೆ ಐದು ದಾಟಿತು. ಶಾಲೆಗೆ ಸೇರಿಸಬೇಕು. "ಹೆಂಗಪ್ಪಾ, ಇಡೀ ದಿನ ನನ್ನ ಮುದ್ದು ಮಗನ ಬಿಟ್ಟಿರಲಿ?'' ಎಂದು ಕಣ್ಣುಗಳು ಮಂಜಾಗಿದ್ದವು. ಅವನಿಗೆ ಹೊಸ ಚಡ್ಡಿ, ಶರ್ಟ್,ಬ್ಯಾಗ್, ಶೂ ಹಾಕಿಸಿ ಸ್ಕೂಲ್ ಗೆ ರೆಡಿ ಮಾಡುವಾಗ ಅದೆಂಥ ಖುಷಿಯ ಹೊಳಪು ನನ್ನೊಳಗೆ?
ಈ ಚಡ್ಡಿ ಹಾಕುವ ಮಗ ಯಾವಾಗ ಪ್ಯಾಂಟ್ ಹಾಕೋನು ಆಗ್ತಾನೆ? ಅನ್ನೋ ಕನಸು ಬೇರೆ. ದಿನಾ ಮುಂಜಾವು ಐದು ಗಂಟೆಗೆ ಎದ್ದು ಅವನಿಗೆ ಬಾಕ್ಸ್ ರೆಡಿ ಮಾಡಿ ಸ್ಕೂಲ್ ಗೆ ಕಳುಹಿಸುವಾಗ ಅದೆಂಥ ಸಂಭ್ರಮ? ಈ ದಿನ, ತಿಂಗಳು, ವರ್ಷಗಳೆಲ್ಲಾ ಉರುಳಿ ಒಮ್ಮೆಲೇ ನನ್ನ ಮಗ 'ದೊಡ್ಡವನಾಗಿಬಿಟ್ಟಿದ್ದರೆ' ಎಷ್ಟು ಚೆನ್ನಾಗಿರುತ್ತಿತ್ತು? ಎಂಬ ಹುಚ್ಚುಚ್ಚು ಕನಸು.
ಅವನು ಏನು ಕೇಳಿದ್ರೂ ಕೊಡಿಸೋದ್ರಲ್ಲಿ ನನಗೊಂದು ಹೊಸ ಖುಷಿ. ಪ್ರತಿ ಮಳೆಗಾಲಕ್ಕೂ ಹೊಸ ಕೊಡೆ ಕೇಳುತ್ತಿದ್ದ. ಕೆಲವೊಮ್ಮೆ ಹೆಣ್ಣುಮಕ್ಕಳಂತೆ ನನಗೆ ಬಣ್ಣದ ಕೊಡೆ ಬೇಕೆಂದು ರಚ್ಚೆ ಹಿಡಿಯುತ್ತಿದ್ದಾಗ ನಗು ಬರುತ್ತಿತ್ತು. ಬೇಸಿಗೆ ರಜೆ ಮುಗಿದ ತಕ್ಷಣ ಹೊಸ ಬಟ್ಟೆ, ಬ್ಯಾಗು, ಪುಸ್ತಕಗಳ ಸಂಭ್ರಮ. ಆ ಪುಸ್ತಕಗಳಿಗೆ ಬೈಂಡ್ ಹಾಕೋದು ಅಬ್ಬಬ್ಬಾ...ಅದೆಂಥ ಕೆಲಸ? ಒಂದೇ ವಾರದಲ್ಲಿ ಅವೆಲ್ಲಾ ಹರಿದು ಚಿತ್ರಾನ್ನವಾಗುತ್ತಿದ್ದವು. ಮತ್ತದೇ ಬೈಂಡ್ ಹಾಕುವ ಕೆಲಸ ನನಗೆ. ಪ್ರೈಮರಿ ಹೇಗೋ ಮುಗಿಯಿತು. ನೋಡು ನೋಡುತ್ತಿದ್ದಂತೆ ಹೈಸ್ಕೂಲು ಕೂಡ ಮುಗಿದೇ ಹೋಯ್ತು. ವರ್ಷಗಳೆಲ್ಲಾ ಹಕ್ಕಿ ತರ ರೆಕ್ಕೆಬಡಿದು ಏಕ್ ದಂ ಹಾರಿಬಿಟ್ಟಾವೆ ಎಂದನಿಸಿತು.
ಕಾಲೇಜು ಸೇರಿದ. ಓದಲು, ಬರೆಯಲು ಸಪರೇಟು ರೂಮ್ ಬೇಕು ಅಂದ. ಮೊಬೈಲ್, ಅದು-ಇದು ಏನೇನೋ ಕೇಳಿದ. ಎಲ್ಲನೂ ಕೊಡಿಸಿದ್ದಾಯಿತು. ಎಲ್ಲವೂ ನನ್ನ ಮಗ ರಾಜಕುಮಾರನಿಗಾಗಿ. ದಿನ, ತಿಂಗಳು, ವರ್ಷಗಳೆಲ್ಲಾ ಉರುಳಿ ನನ್ನ ಮಗ 'ದೊಡ್ಡವನಾಗೇಬಿಟ್ಟ'.

******
ಈಗ ಕನ್ನಡಿಯಲ್ಲಿ ಮತ್ತೆ ಮತ್ತೆ ನನ್ನ ನಾ ನೋಡಿಕೊಳ್ಳುತ್ತೇನೆ. ಕಪ್ಪು ಕೂದಲುಗಳ ನಡುವೆ ಅದೆಷ್ಟು ಚೆನ್ನಾಗಿತ್ತು ನನ್ನ ಬೈತಲೆ? ಆದರೆ, ಈಗ ಬಿಳಿ ಕೂದಲುಗಳ ರಾಶಿ. ಎಲ್ಲವೂ ಗೋಜಲು-ಗೋಜಲು. ಕಾಡಿಗೆ ಹಚ್ಚಿ ಹೊಳೆಯುತ್ತಿದ್ದ ಕಣ್ಣುಗಳು ಆಳಕ್ಕೆ ಹೋದಂಗೆ, ಕಣ್ಣ ಸುತ್ತ ನೆರಿಗೆಗಳು, ಕಪ್ಪು ಕಲೆಗಳು ಮೂಡಿದಂಗೆ ಅನಿಸುತ್ತೆ. ಯೌವನದಲ್ಲಿ ನನ್ನವನ ಮಾತು-ಮಾತಿಗೂ ನಾಚಿ ಕೆಂಪಾಗುತ್ತಿದ್ದ ಕೆನ್ನೆಯ ಬದಿಯಲ್ಲಿದ್ದ ಆ ಚೆಂದದ ಗುಳಿಗಳೂ ಮಾಯವಾಗಿವೆ. ಕಾಲೇಜು ಓದುವಾಗ ಹುಡುಗ್ರೆಲ್ಲಾ ಗುಳಿಚೆಲುವೆ ಎಂದು ರೇಗಿಸುತ್ತಿದ್ದರು. ಮುಖಾನ ಅಂದವಾಗಿಸಲು ಅದೇ ಹಳೆಯ ಬ್ರಾಂಡ್ ಪಾಂಡ್ಸ್ ಪೌಡರ್ ಹಚ್ತೀನಿ. ಬೈತಲೆ ಪಕ್ಕ ಕಾಣುವ ಬೆಳ್ಳಿಕೂದಲುಗಳನ್ನು ಮತ್ತೆ ಮತ್ತೆ ಕೀಳಕೆ ಪ್ರಯತ್ನ ಮಾಡ್ತೀನಿ. ಅದು ಬರಲೊಲ್ಲೆ ಎಂದು ರಚ್ಚೆ ಹಿಡಿಯುತ್ತೆ. ಉಸ್ಸಾಪ್ಪಾ...ಎಂಬ ನಿಟ್ಟುಸಿರು...ಎದೆಯೊಳಗಿಂದ ಹಾವು ಬುಸುಗುಟ್ಟಿದಂತೆ!.
ಎದುರಿಗಿದ್ದ ಮಗ ನೋಡಿ ನಕ್ಕು ಹೇಳುತ್ತಾನೆ. "ಅಮ್ಮಾ...ನಿಜವಾಗ್ಲೂ ನಿನ್ನ ಓಟರ್ ಐಡಿಯಲ್ಲಿ ಇರುವ 'ಡೇಟ್ ಆಫ್ ಬರ್ತ್' ಕರೆಕ್ಟಾ?''
ನನಗಿಂತ ಎತ್ತರಕ್ಕೆ ಬೆಳೆದ ಮಗನ ನೋಡಿ ಕತ್ತೆತ್ತಿ ಕಣ್ಣಲ್ಲೇ ಕೇಳುತ್ತೇನೆ; "ಏಕೆ?''
"ಅಮ್ಮಾ...ಗೆಸ್ ಮಾಡು'' ಎನ್ನುತ್ತಾನೆ.

ನನಗೆ ಮತ್ತೆ ಕನ್ನಡಿಯಲ್ಲಿ ನನ್ನ ನಾ ನೋಡಿಕೊಳ್ಳುವ ಖುಷಿ. ನನ್ನೆದೆಯಲ್ಲಿ ಮರುವಸಂತ.

ಒಂದು ವಾಕಿಂಗ್ ಮುಂಜಾವು



ದಟ್ಟಮರಗಳ ನಡುವೆ ಅಗಲ ರಸ್ತೆಗಳು, ರಸ್ತೆ ತುಂಬಾ ಗುಲ್ ಮೊಹರ್, ಚಿನ್ನದ ಹೂವು, ಪಿಂಕ್ ಕ್ಯಾಸಿಯಾ ...ಬಣ್ಣ-ಬಣ್ಣದ ಪುಷ್ಪಗಳ ಚಿತ್ತಾರ. ಇನ್ನೂ ಬೀದಿ ದೀಪ ಆರದ ಐದರ ಹೊತ್ತಿನಲ್ಲಿ ಹೂವ ಹಾಸಿನ ರಸ್ತೆ ಮೇಲೆ ನಡೆಯುವುದೇ ಚೆಂದ. ಹೂವುಗಳಿಂದ ಕಂಗೊಳಿಸುವ ಮರಗಳ ನಡುವೆ ಸೂರ್ಯ ಕೆಂಪೇರುವುದು ಕಣ್ಮನಸಿಗೆ ಹಬ್ಬ. ಹಾಳು ಸೆಖೆ...ಆದರೂ, ಪುಷ್ಪ ಚಿತ್ತಾರವನ್ನು ನೋಡಿದರೆ "ಇರಲಿ ಬೇಸಿಗೆ ಕಾಲ'' ಎನ್ನುತ್ತಿತ್ತು ಮನಸ್ಸು.

****************
ರಾಜಕಾರಣಿಯೊಬ್ಬನ ದೊಡ್ಡ ಗೇಣಿನ ಬಂಗಲೆ. ಅದರೆದುರು ಹತ್ತಾರು ಕಾರುಗಳು, ರಾತ್ರಿಯಿಡೀ ನಿದ್ದೆಯಿಲ್ಲದೆ ತೂಕಡಿಸುವ ಸೆಕ್ಯೂರಿಟಿ ಗಾರ್ಡ್ ಗಳು.

****************
ಅದು ದೈವಭಕ್ತ ಹೆಂಗಸರ ವಾಕಿಂಗ್. ಯಾರದೋ ಕಾಂಪೌಂಡ್ ಗೆ ಹತ್ತಿ ಪೂಜೆಗಾಗಿ ಹೂವುಗಳನ್ನು ಕಿತ್ತು ಸೆರಗಿನಲ್ಲಿ ತುಂಬಿಸಿಕೊಳ್ಳುತ್ತಿದ್ದರು. "ನಾಯಿಗಳಿವೆ ಎಚ್ಚರಿಕೆ' ಎಂಬ ಬೋರ್ಡಿಗೂ ಅವರು ಹೆದರಲಿಲ್ಲ!.

****************
ಒಂದು ವರ್ಷದ ಹಿಂದೆ ಆ ಕೌಂಪೌಂಡಿನಲ್ಲಿ ಮೇಣದ ಗಣಪತಿ ಬಂದು ಕುಳಿತಿದ್ದಾನೆ. ವಾಕಿಂಗ್ ಹೋಗುವವರೆಲ್ಲಾ ಆ ಗಣಪತಿಗೆ ಸೆಲ್ಯೂಟ್ ಹೊಡೆದೇ ಮುಂದೆ ಸಾಗುತ್ತಾರೆ. ಅವನೆದುರು ಇರುವ ಡಬ್ಬಕ್ಕೆ ಬೆಳ್ಳಂಬೆಳಗ್ಗೆ ನೋಟು ತುಂಬುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯಾಕೋ ಗಣಪತಿ ದಿನ ಹೋದಂಗೆ ಶ್ರೀಮಂತನಾಗುತ್ತಿದ್ದಾನೆ!
****************

ಎಂಬತ್ತು ದಾಟಿರುವ ತಾತನ ಹಿಂದೆ ಏಳೆಂಟು ಬೀದಿನಾಯಿಗಳು ಸುತ್ತುತ್ತಿದ್ದವು. ನೋಡಿದರೆ, ಅಜ್ಜ ನಾಯಿಗಳಿಗಾಗಿ ತಿಂಡಿ ತಂದಿದ್ದರು. ಪ್ರತಿದಿನ ವಾಕ್ ಹೋಗುವಾಗ ಬೀದಿ ನಾಯಿಗಳ ಕಾಟ ತಡೆಯಲಾರದೆ ಅವರು ಈಗ ನಾಯಿಗಳಿಗೆ ತಿಂಡಿ ತರುವ ಅಭ್ಯಾಸ ಮಾಡಿಕೊಂಡಿದ್ದಾರಂತೆ!.
****************

ಮನೆಯ ಕೆಲಸದಾಕೆ...ಮನೆಮುಂದೆ ಬಿದ್ದಿದ ಕಸದರಾಶಿಗೆ ಬೆಂಕಿ ಹಚ್ಚುತ್ತಿದ್ದಳು. ಅದರಿಂದ ದಟ್ಟಹೊಗೆ, ಕೆಟ್ಟವಾಸನೆ. ಬೆಳಿಗ್ಗೆಯಾದರೂ ಶುದ್ಧ ಗಾಳಿ ಸಿಗಲೆಂದು ಮೂಗು ಬಯಸುತ್ತಿದ್ದರೆ...ಒಮ್ಮೆಲೇ ಕೆಮ್ಮು ಬರತೊಡಗಿತು.
****************

ಬೀದಿ ದೀಪಗಳು ನಿಧಾನಕ್ಕೆ ಆಫ್ ಆಗತೊಡಗಿದವು. ಇನ್ನೇನೋ ಸೂರ್ಯ ಬರುವ ಹೊತ್ತು. ರಸ್ತೆ ಮೇಲಿನ ಹೂವಿನ ಚಿತ್ತಾರ ಮಬ್ಬು ಮುಂಜಾವಿನಲ್ಲಿ ಇನ್ನಷ್ಟು ಮೋಹಕ. ಯೋಚನೆಗಳಿಗೆ ನೂರಾರು ದಾರಿಗಳು. ಮುಂದೆ ಸಾಗಿದರೆ ಬಂಗಲೆಯೊಂದರ ಪಕ್ಕದಲ್ಲಿ ಗೊರಕೆ ಸದ್ದು ಕೇಳುತ್ತಿತ್ತು. ಪಾಪ, ರಾತ್ರಿಯಿಡೀ ಎಚ್ಚರವಿದ್ದ ಸೆಕ್ಯೂರಿಟಿ ಆರು ಗಂಟೆ ಹೊತ್ತಿಗೆ ನಿದ್ದೆಗೆ ಜಾರಿದ್ದ!.
****************

ಯಾರದೋ ಮನೆ, ಮನೆಯೆದುರು ಹೂವು ಕುಂಡಗಳ ಅಲಂಕಾರ, ಇನ್ನ್ಯಾರದೋ ಮನೆಯ ಸೆಕ್ಯೂರಿಟಿ ತನ್ನ ಜೊತೆಗೆ ವಾಕಿಂಗ್ ಬಂದ ನಾಯಿಯನ್ನು ಅಲ್ಲಿ "ನಿತ್ಯಕರ್ಮ'' ಮಾಡಿಸುತ್ತಿದ್ದ!. ಇನ್ನೂ ಮುಂದೆ ಹೋದರೆ ಗಾಡಿ ತೊಳೆಯುವ ಹುಡುಗ "ರಂಗೋಲಿ'' ಮೇಲೆ ನೀರು ಹಾಕಿದನೆಂದು ಮನೆಯೊಡತಿ ಬೈಯುತ್ತಿದ್ದಳು.
****************

" ಥೂ....ಮಗ'' ಕಾಫಿ ಮಾರುವ ಅಜ್ಜಿ ದೊಡ್ಡ ಸ್ವರದಲ್ಲಿ ಬೈಯುತ್ತಿದ್ದಳು. ಆ ಏರಿಯಾದ ಸೆಕ್ಯೂರಿಟಿ ಗಾರ್ಡ್ ಗಳಿಗೆ ಮುಂಜಾವು ಶುರುವಾಗುವುದೇ ಅಜ್ಜಿಯ ಬಿಸಿ-ಬಿಸಿ ಕಾಫಿ ಮೂಲಕ. ಹತ್ತಾರು ಮಂದಿ ಯಾವಾಗಲೂ ಅಜ್ಜಿ ಮುಂದೆ ಕಾಫಿಗಾಗಿ ಕ್ಯೂ ನಿಂತಿರುತ್ತಾರೆ. ಒಂದೊಂದು ದಿನ ಅಜ್ಜಿ ಖುಷಿಯಲ್ಲಿರುತ್ತಾಳೆ, ಕೆಲವೊಮ್ಮೆ ಜಮದಗ್ನಿಯಾಗುತ್ತಾಳೆ. ತಿಂಗಳ ಕೊನೆಯಲ್ಲಿ ಎಲ್ಲರಿಗೂ ಸಾಲದ ಮೇಲೆ ಕಾಫಿಯಂತೆ. ಒಬ್ಬ ಎರಡು ತಿಂಗಳಿಂದ ಬಿಟ್ಟಿ ಕಾಫಿ ಕುಡಿದು ಸಾಲ ತೀರಿಸಿಲ್ಲ ಎಂದು ಅಜ್ಜಿಗೆ ಸಿಟ್ಟು ನೆತ್ತಿಗೇರಿತ್ತು.
*********************

ಗಂಟೆ ಆರೂವರೆ. ಸೂರ್ಯ ನಿಧಾನಕ್ಕೆ ಮೇಲೇರುತ್ತಿದ್ದ. ಬಂದ ದಾರಿಯಲ್ಲೇ ವಾಪಸ್ ಹೊರಟೆ. ಹೂವ ಚಿತ್ತಾರ ಬೀದಿ ಗುಡಿಸುವವಳ ಪೊರಕೆಗೆ ಸಿಕ್ಕು ಕಸದರಾಶಿಯಾಗಿದ್ದವು. ಮನೆ ಗೇಟ್ ತೆರೆದರೆ, ಅಮ್ಮ ಹೊಸಿಲಿಗೆ ರಂಗೋಲಿ ಹಾಕಿ, ಅರಿಶಿಣ-ಕುಂಕುಮ ಹಚ್ಚಿದ್ದಳು. ಪತಿದೇವರಿಗೆ ಮಾತ್ರ ಇನ್ನೂ ಬೆಳಗಾಗಿರಲಿಲ್ಲ!!!