Sunday, October 3, 2010

ನಿನ್ನ ಅಪ್ಪಾ ಅನ್ತೀನಿ...


ಅಂದಿನವರೆಗೆ ಅಪ್ಪಾ ಎಂಬ ಎರಡಕ್ಷರವನ್ನೇ ದ್ವೇಷಿಸುತ್ತಿದ್ದೆ. ಅಪ್ಪನ ಕುರಿತು ಬರೆಯಬೇಕಾದಾಗ, ಅಪ್ಪನ ಕುರಿತು ಹೇಳಬೇಕಾದಾಗ ಅಲ್ಲಿ ಭಾವಗಳಿಗೆ ಜೀವವೇ ಇರಲಿಲ್ಲ. ಏಕೆಂದರೆ ಅಪ್ಪನಾಗಬೇಕಾದವನು ಅಪ್ಪನ ಜವಾಬ್ದಾರಿ ನಿಭಾಯಿಸಲೇ ಇಲ್ಲ. ಮಗಳ ಕನಸುಗಳಿಗೆ, ಅವಳ ಸುಂದರ ಭಾವಗಳಿಗೆ ಜೀವ ನೀಡಲೇ ಇಲ್ಲ. ಅಂದು ಅಮ್ಮನ ಮಡಿಲಿಗೆ ಬಿದ್ದಾಗ ಆತ ಇನ್ಯಾರೋ ಕುತ್ತಿಗೆಗೆ ಮತ್ತೆ "ತಾಳಿ'ಯಾಗಿದ್ದ!

ಇಂದು ನಿನ್ನನ್ನೇ ಅಪ್ಪ ಎಂದು ಕರೆಯುತ್ತಿದ್ದೇನೆ. ಈವರೆಗೆ ನನ್ನ ಬಾಯಿಂದ ಹೊರಬೀಳದ ಅಪ್ಪಾ ಎಂಬ ಎರಡಕ್ಷರದ ಸುಂದರ ಸಂಬಂಧಕ್ಕೆ ಜೀವ-ಭಾವ ಕೊಟ್ಟಿದ್ದು ನೀನೇ. ನೀನು ಪುಟ್ಟೀ ಅಂತ ಕರೆದಾಗಲೆಲ್ಲಾ ಆ ನಿನ್ನ ಸುಂದರ ಕರೆಗೆ ಕರಗಿ ಖುಷಿಯಿಂದ ಕಂಗಳು ಒದ್ದೆಯಾಗುತ್ತಿದೆ, ದೇವ್ರ ಮೇಲೆ ಸಿಟ್ಟುಗೊಳ್ಳುತ್ತಿದ್ದೆ. ನಿನ್ನಂಥ ಒಳ್ಳೆ ಅಪ್ಪನ ಏಕೆ ಇಷ್ಟು ತಡವಾಗಿ ಕೊಟ್ಟೆ ಅಂತ!
ಹೆಣ್ಣೊಬ್ಬಳಿಗೆ ಅಮ್ಮನ ಆಸರೆ ಹೇಗೋ ಹಾಗೆಯೇ ಅಪ್ಪನಾಸರೆಯೂ ಬೇಕಲ್ವಾ? ನನ್ನ ಕ್ಲಾಸಿನ ಹುಡುಗಿಯರೆಲ್ಲ ಅಪ್ಪಾ..ಅಪ್ಪಾ..ಅಂಥ ಕರೆಯುವಾಗ, ತಮ್ಮ ಅಪ್ಪನ ಕುರಿತು ಹಿಗ್ಗಿನಿಂದ ಹೇಳುತ್ತಿರುವಾಗಲೆಲ್ಲಾ ನನ್ನಪ್ಪನಿಗೆ ಹಿಡಿಶಾಪ ಹಾಕುತ್ತಿದ್ದೆ. ನನಗೂ ಅಪ್ಪಾ ಬೇಕಿತ್ತು, ನನ್ನನ್ನು ಹೆಗಲ ಮೇಲೆ ಹೊತ್ತು ಪೇಟೆ ಸುತ್ತಿಸುವ ಅಪ್ಪಾ ಬೇಕಿತ್ತು ಎಂದನಿಸುತ್ತಿತ್ತು, ಏನು ಮಾಡುವುದು ಹೇಳು...ನನ್ನಪ್ಪ ಆವಾಗಲೇ ನನ್ನೆದುರಿನಿಂದ ಮರೆಯಾಗಿದ್ದ. ಅಪ್ಪನೆನಿಸಿಕೊಳ್ಳುವ ಕನಿಷ್ಠ ಅರ್ಹತೆಯನ್ನೂ ಕಳೆದುಕೊಂಡಿದ್ದ.

ಅದಕ್ಕೇ ನೋಡು ಅಪ್ಪಾ...ಈವಾಗ ನಾನು ನಿನ್ನ ಅಪ್ಪಾ ಅನ್ತೀನಿ. ಪುಟ್ಟ ಮಗು ಕೋಪಿಸಿಕೊಂಡಂತೆ ನಿನ್ನ ಜೊತೆ ಕೋಪಿಸಿಕೊಳ್ತೀನಿ. ಅದು ಕೊಡಿಸು, ಇದು ಕೊಡಿಸು ಅಂಥ ಹಠ ಹಿಡಿತೀನಿ. ನೋಡಿದವರಿಗೆ ನೀನು ನನ್ನ ಅಪ್ಪನೋ ಅಥವಾ ಮಾವನೋ ಅನ್ನೋ ಕನ್‌ಫ್ಯೂಸ್ ಹುಟ್ಟುಹಾಕ್ತೀನಿ. ನಿನ್ನ ನೋಡಿದ್ರೆ ಮಾವ ಅನ್ನೋ ಭಯ ಮೂಡಲ್ಲಪ್ಪ, ಅಪ್ಪ ಅನ್ನೋ ಪ್ರೀತಿ ಹುಟ್ಟುತ್ತೆ, ಮಮತೆ ಉಕ್ಕುತ್ತೆ, ಅಪ್ಪಾ ಸಿಕ್ಕಿದ್ದಾನೆ ಅನ್ನೋ ಗೌರವ, ಹೆಮ್ಮೆ ಮೂಡುತ್ತೆ. ಅದಕ್ಕೆ ನೋಡು ವೊನ್ನೆ ನಮ್ಮ ಡ್ರೈವರ್ ಮಾಮ, ನಾನು ನಿನ್ ಮಗಳೋ ಅಥವಾ ಸೊಸೆನೋ ಅಂಥ ಪ್ರಶ್ನೆ ಮಾಡಿದ್ರು. ನೀನು ತಂದುಕೊಡುವ ಚಾಕಲೇಟು, ಸೀರೆಗಳು, ಚೂಡಿದಾರ್ ಬಟ್ಟೆಗಳು, ಪ್ರತಿ ಶುಕ್ರವಾರ ತಂದುಕೊಡುವ ಎರಡು ವೊಳ ಮಲ್ಲಿಗೆ, ನನಗೆ ಸಣ್ಣ-ಪುಟ್ಟ ಜ್ವರ
ಬಂದ್ರೂ ನೀನು ಮಾಡಿಕೊಡುವ ಬಿಸಿ ಬಿಸಿ ಕಾಫಿ, ಆ ಹಳ್ಳಿ ಮದ್ದು ಯಾವ ಮಾವ ಮಾಡಿಕೊಡುತ್ತಾನೆ ಹೇಳು? ಅದಕ್ಕೆ ಮಾವನಂದ್ರೆ ನನಗೆ ಅಪ್ಪ.

ಜೀವನ ಅಂದ್ರೆ ಹೀಗೇ ಅಪ್ಪಾ...ಎಲ್ಲೋ ಮಿಸ್ ಆಗಿದ್ದು ಮತ್ತೆಲ್ಲೋ ಸಿಗುತ್ತೆ. ಸಣ್ಣವಳಿರುವಾಗ ನನ್ನಪ್ಪನ ಮಿಸ್ ಮಾಡ್ಕೊಂಡೆ. ಆವಾಗ ಅತ್ತು ಕರೆದರೂ ಆ ದೇವ್ರು ಅಪ್ಪನ ಕೊಡಲೇ ಇಲ್ಲ. ಈಗ ನೀನು ಸಿಕ್ಕಿದ್ದಿ, ಸಾಕು...ಎನಗೆ. ಇನ್ನೇನು ಬೇಕು ನೆಮ್ಮದಿಯ ಸಂಸಾರಕ್ಕೆ, ಭರವಸೆಯ ನಾಳೆಗಳಿಗೆ?

ಪ್ರಕಟ: http://hosadigantha.in/epaper.php?date=08-26-2010&name=08-26-2010-15