Monday, September 7, 2009

ಆ ದೇವಾಲಯದಲ್ಲಿ ನಿನ್ನ ಕೈಯಾರೆ ಕುಂಕುಮ ಇರಿಸಿಕೊಳ್ಳಬಹುದಿತ್ತು...

ಮುನ್ನಾ...
'ಚಳಿಗೆ ಶ್ವೆಟರ್ ಹಿಡಿದುಕೋ. ಕಿಟಕಿ ಸಂದಿಯಲ್ಲಿ ಮುಖ ಹಾಕಿ ಕೂರಬೇಡ. ಚಳಿಗೆ ಜ್ವರ, ನೆಗಡಿ ಜಾಸ್ತಿ ಆದೀತು. ಕಿಟಕಿ ಬಾಗಿಲು ಮುಚ್ಚಿಕೋ, ಕಿವಿ, ಮುಖವನ್ನೆಲ್ಲಾ ಮುಚ್ಚಿಕೋ. ಬ್ಯಾಗಲ್ಲಿ ಬಿಸಿನೀರು ಹಾಕೋ ಮುನ್ನಿ..' ಎಂದು ಪ್ರೀತಿಯಿಂದ ನೀ ಕಳಿಸಿದ ಮೆಸೇಜ್ ಅನ್ನು ಎಷ್ಟು ಬಾರಿ ಓದಿದ್ದೇನೋ ನನಗೇ ಗೊತ್ತಿಲ್ಲ. ಅದೇ ಗುಂಗಿನಲ್ಲಿ ಇದೀಗ ಪತ್ರ ಬರೀತಾ ಇದ್ದೀನಿ ನೋಡು. ಸೂರ್ಯ ಮೂಡುವ ಆ ಮುಂಜಾವು ಬೆಂಗಳೂರಿನಿಂದ ಅಮ್ಮನೂರಿನ ಬಸ್ಸು ಹಿಡಿದಾಗ ನಾನಿರುವ ಪುಟ್ಟ ಮನೆ, ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದ ನನ್ನ ಪ್ರೀತಿಯ ಪುಸ್ತಕಗಳು, ನಿತ್ಯ ನನ್ನ ಕಣ್ಣುಗಳಿಗೆ ಖುಷಿ ನೀಡುತ್ತಿದ್ದ ಎದುರುಮನೆಯ ಪುಟ್ಟ ಮಗುವಿನ ನಗು ನನ್ನ ಕಾಡಲಿಲ್ಲ. ಕಾಡಿದ್ದು ನಿನ್ನ ನೆನಪು, ನಿನ್ನ ನಗು, ನಿನ್ನ ಖುಷಿ, ಕಾಳಜಿ, ಪ್ರೀತಿ ತುಂಬಿದ ನಿನ್ನ ಮಾತುಗಳು, ನನ್ನ ಬದುಕಿನ ಹೆಜ್ಜೆಗಳನ್ನು ತಿದ್ದಿ ತೀಡಿದ ನಿನ್ನ ವಿಶಾಲ ಹೃದಯ, ಭಾವನೆಗಳ ಜೋಕಾಲಿಯಲ್ಲಿ ನನ್ನ ತೂಗಿದ ಆ ನಿನ್ನ ನಿಷ್ಕಲ್ಮಶ ಪ್ರೀತಿ, ಅತ್ತಾಗ ಸಂತೈಸಿದ ನಿನ್ನ ಮಡಿಲು, ಪ್ರತಿ ಕ್ಷಣ ಕ್ಷಣವೂ ನನ್ನ ಆರೋಗ್ಯ, ನನ್ನ ಇರುವು, ನನ್ನ ಬದುಕು, ಇಡೀ 'ನನ್ನನ್ನೇ' ಕಣ್ಣುರೆಪ್ಪೆಯಲ್ಲಿಟ್ಟುಕೊಂಡು ಕಾಪಾಡಿದ ನಿನ್ನ ಅದಮ್ಯ ಅಕ್ಕರೆ.....!! ಹೌದು...ಮುನ್ನಾ..ಇದೇ ಕಾಡಿದ್ದು...ಬೇರೇನಲ್ಲ.

ಅಮ್ಮನೂರಿಗೆ ಸಾಗುವ ಆ ಬೃಹತ್ ಬೆಟ್ಟ ದಾಟಿ ಸಾಗುವಾಗ ನೀನಿದ್ದರೆ ನಿನ್ನ ಮಡಿಲಲ್ಲೇ ಆರಾಮವಾಗಿ ನಿದ್ದೆಹೋಗಬಹುದಿತ್ತು ಅನಿಸಿತ್ತು. ಅಮ್ಮನಿಗೆ ನಿನ್ನ ಪರಿಚಯಿಸಬಹುದಿತ್ತು, ನಮ್ಮೂರ ಸುಂದರ ತೋಟದಲ್ಲಿ ನಿನ್ನ ಸುತ್ತಾಡಿಸಬಹುದಿತ್ತು. ನಮ್ಮ ಪುಟ್ಟ ಹೆಂಚಿನ ಮನೆಯಲ್ಲಿ ಕುಳಿತು ನನ್ನ ಜೊತೆ ಅಮ್ಮ ಮಾಡಿಟ್ಟ ಹಪ್ಪಳ ಸಂಡಿಗೆ ಮೆಲ್ಲಬಹುದಿತ್ತು. ಜಡಿಮಳೆಗೆ ಜುಳು ಜುಳು ಎನ್ನುತ್ತಾ ಹರಿಯೋ ನಮ್ಮೂರ ನೇತ್ರಾವತಿಯನ್ನು ನಿನಗೂ ತೋರಿಸಬಹುದಿತ್ತು ಅನಿಸಿತ್ತು. ಹಸಿರ ವನಸಿರಿಯಲ್ಲಿ ನಿನ್ನ ಜೊತೆ ನಾನೂ ದಾರಿಯುದ್ದಕ್ಕೂ ಸಾಗಬಹುದಿತ್ತು. ನಮ್ಮೂರ ದೇವಾಯಲಕ್ಕೆ ನಿನ್ನ ಕರೆದುಕೊಂಡು ಹೋಗಿ ನಿನ್ನ ಕೈಯಾರೆ ಕುಂಕುಮ ಇರಿಸಿಕೊಳ್ಳಬಹುದಿತ್ತು ಅನಿಸಿತ್ತು..ಹೌದು..ಮುನ್ನಾ..ನೆನಪಾಗಿದ್ದು ನೀನು ಮಾತ್ರ....ನನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸೋ ನೀನು ಮಾತ್ರ.

ಥತ್! ನಾ ದೂರದಲ್ಲಿದ್ರೆ ನೀ ಮುನಿಸಿಕೊಳ್ತೀಯಾ. ರಂಪ ಮಾಡ್ತೀಯಾ. ಬೇಗ ಬಾ ಎಂದು ರಚ್ಚೆ ಹಿಡೀತೀಯಾ. ಪುಟ್ಟ ಮಕ್ಕಳಂತೆ ಹಠಮಾಡ್ತೀಯಾ. ಅದಕ್ಕೆಲ್ಲಾ ನಾ ಮೌನವಾಗಿದ್ದಾಗ ನಿಂಗೆ ಪ್ರೀತೀನೇ ಇಲ್ಲ ಅಂತೀಯಾ. ದಿನ, ವಾರ, ತಿಂಗಳುಗಟ್ಟಲೆ ಮಾತು ಬಿಡ್ತೀಯಾ. ಆದರೆ ನಾನಂತೀನಿ 'ಅದೇ ಕಣೋ ಪ್ರೀತಿ' ಅಂತ. ನೀ ಕೋಪದಲ್ಲಿದ್ದಾಗ ನಾನು ಕತ್ತಲನ್ನೂ ಪ್ರೀತಿಸೋಕೆ ಹೊರಡ್ತೀನಿ..ಕತ್ತಲೇ ಹಿತ ಅಂತೀನೀ. ಇರುಳನ್ನೂ ಬೆಳಕಿನಂತೆ ಪ್ರೀತಿಸುವ, ಅಮಾವಾಸ್ಯೆಯ ಕರಾಳ ರಾತ್ರಿಯನ್ನೂ ಪ್ರೀತಿಸುವ ಆ ಶಕ್ತಿ ನೀಡಿರೋದು ನಿನ್ನ ಪ್ರೀತಿ ಗೊತ್ತಾ?

ನಿನ್ನ ಪ್ರೀತಿಸ್ತೀನಿ...ನಿನ್ನನ್ನು, ನಿನ್ನ ಬದುಕನ್ನು, ನಿನ್ನ ಭಾವನೆಗಳನ್ನು, ನಿನ್ನ ಸಾಧನೆಯನ್ನು, ನಿನ್ನ ಕನಸುಗಳನ್ನು, ನಿನ್ನ ಸುತ್ತಲಿನ ನೋವು-ನಲಿವುಗಳನ್ನೂ ನಾ ಪ್ರೀತಿಸ್ತೀನಿ ಅನ್ನೋದನ್ನು ನಾ ಹ್ಯಾಗೆ ಪ್ರೂವ್ ಮಾಡಲಿ ಹೇಳು? ನೀ ದುಃಖದಲ್ಲಿದ್ದಾಗ ನನ್ನ ಕೊರಗು ಅದು ಕಲ್ಪನೆಗೂ ನಿಲುಕದು ಕಣೋ
ಮುನ್ನಾ..ನೀ ಖುಷಿಯಿರಬೇಕು. ನಿನ್ನ ಖುಷೀ, ಸಂಭ್ರಮನಾ ನಾ ನೋಡಬೇಕು. ನಿನ್ನ ನಾ ಪ್ರೀತಿಸ್ತೀನಿ, ನೀ ನನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸ್ತೀಯಾ..ನಿನಗೆ ಅತ್ಯಂತ ಖುಷಿ ತರುವ, ನಿನಗೆ ಅತ್ಯಂತ ಪವಿತ್ರ ಎನಿಸುವ ಸಂಗತಿಗಳನ್ನು ಮೀರಿದ ಯಾವ ವಿಚಾರಗಳೂ ನನಗೆ ಖುಷಿ ತರೊಲ್ಲ. ನಿನ್ನ ನೆಮ್ಮದಿನೇ ನನ್ನ ನೆಮ್ಮದಿ ನೋಡು. ನೀ ಪಡುವ ಸಂತೋಷ ನೆಮ್ಮದಿಯ ಸಂಭ್ರಮದ ಗಳಿಗೆಗಿಂತ ಈ ಜಗತ್ತಿನಲ್ಲಿರುವ ಇನ್ಯಾವುದೇ ವಸ್ತುಗಳು ನನಗೆ ಖುಷಿ ನೀಡಲಾರವು.

ಹ್ಲೂಂ..ಮಧ್ಯರಾತ್ರಿ 1 ಗಂಟೆ. ಇನ್ನು ಮಲಗಬೇಕು ಕಣೋ. ಉಳಿದಿದ್ದನ್ನು ಇನ್ನೊಂದು ಪತ್ರದಲ್ಲಿ ಬರೇತೀನಿ. ಅಲ್ಲಿತನಕ ಈ ಪತ್ರ ಓದುತ್ತಾ ಇರು..ಸರೀನಾ.

ನಿನ್ನ ಪ್ರೀತಿಯ
ಮುನ್ನಿ
.