Tuesday, May 19, 2009

ನಾನೂ ಆಡುತ್ತಾ ನಲಿವಾಗೋ ಮಗುವಾಗಿರಬೇಕಿತ್ತು...!!!

ಹೌದು! ನಾನೂ ಮಗುವಾಗಿರಬೇಕಿತ್ತು..ಆಟಿಕೆ, ಗೊಂಬೆಗಳ ಜೊತೆ ಆಡೋ, ಮುಗ್ಧತೆ, ಪ್ರಾಮಾಣಿಕತೆಯ ಪ್ರತೀಕ ಪುಟ್ಟ ಮಗುವಾಗಬೇಕಿತ್ತು!!
ಹೌದು..ನಿನ್ನೆ ಬೆಂಗಳೂರಿನಲ್ಲಿ ಸುರಿದ ಮಳೆಯ ಭೋರ್ಗರೆತವನ್ನು ಕಿಟಕಿ ಸಂದಿಯಲ್ಲಿ ಇಣುಕಿ ನೋಡುತ್ತಲೇ ಯಾಕೋ ಮತ್ತೆ ಮತ್ತೆ ಹೀಗೇ ಅಂದುಕೊಳ್ಳುತ್ತಿದ್ದೆ..ನಾನೂ ಮಗುವಾಗಿರುತ್ತಿದ್ದರೆ..?!

ಬೆನ್ನು ತುಂಬಾ ಭಾರದ ಬ್ಯಾಗ್ ಎತ್ತಿಕೊಂಡು, ಕೈಯಲ್ಲಿ ಟಿಫನ್ ಬಾಕ್ಸ್ ಹಿಡಿದುಕೊಂಡು ದಾರಿಯುದ್ದಕ್ಕೂ ನಲಿದಾಡುತ್ತಾ ಖುಷಿ ಖುಷಿಯಿಂದ ಶಾಲೆಗೋಗುವ ಪುಟ್ಟ ಮಕ್ಕಳನ್ನು ಕಂಡಾಗ ನಾನೂ ಮಗುವಾಗಿರಬೇಕಿತ್ತು ಅನಿಸುತ್ತೆ. ಬೆಳಿಗ್ಗೆ ಆಫೀಸಿಗೆ ಹೊರಟು ಬಸ್ ಸ್ಟಾಂಡಿನಲ್ಲಿ ನಿಂತಾಗ ಅಮ್ಮ-ಅಪ್ಪ ಜೊತೆಗೆ ಬಂದು ಶಾಲೆ ಬಳಿ ಇಳಿಯುವ , ಸಂಜೆಯಾಗುತ್ತಿದ್ದಂತೆ ಹಕ್ಕಿಗಳಂತೆ ಕಲರವಗುಟ್ಟುವ ಮುದ್ದು ಕಂದಮ್ಮಗಳನ್ನು ಕಂಡಾಗ ನಾನೂ ನಲಿವ ಮಗುವಾಗಬೇಕಿತ್ತು ಅನಿಸಿಬಿಡುತ್ತೆ.

ಎದುರುಮನೆಯ ಅಜ್ಜಿಯ ಮೊಮ್ಮಗಳು ನಾಲ್ಕು ವರ್ಷದ ಅಶ್ವಿನಿ ರಾತ್ರಿ ಹತ್ತು ಗಂಟೆಗೆ ಆಂಟಿ ಊಟ ಆಯಿತಾ? ಎಂದು ಮಾತಿಗಿಳಿಯುವಾಗ ಸುತ್ತಲಿನ ಮನೆಯವರೆಲ್ಲವರೂ ಅವಳ ಮುದ್ದು ಮುಖ ಕಂಡು ಪುಳಕಿತಗೊಂಡಾಗ ನಂಗೂ ಅನಿಸುತ್ತೆ: ನಾನೂ ಅಶ್ವಿನಿ ಥರದ ಮುದ್ದಾದ ಪುಟಾಣಿಯಾಗಿರುತ್ತಿದ್ದರೆ ಅಂತ! ಆಫೀಸ್ ನಿಂದ ಹೊರಡುವಾಗ ದಾರಿ ಮಧ್ಯೆ ಸಿಗೋ ಜಾರು ಬಂಡಿಯಲ್ಲಿ ಮಕ್ಕಳು ಆಡೋದನ್ನು ಕಂಡಾಗ, ಶಿವಾಜಿನಗರದ ಕಮರ್ಶಿಯಲ್ ರಸ್ತೆಯಲ್ಲಿ ನಡೆದಾಗ ಸಿಗುವ ಮಕ್ಕಳ ಬಣ್ಣ-ಬಣ್ಣದ ಡ್ರೆಸ್ ಗಳನ್ನು ಕಂಡಾಗ..ಛೇ! ನಾನೂ ಮಗುವಾಗಿರುತ್ತಿದ್ದರೆ ಇಷ್ಟು ಸುಂದರವಾದ ಬಟ್ಟೆ ಹಾಕಿ ನಾನೂ ಮೆರೆಯುತ್ತಿದ್ದೆ ಎಂದನಿಸುತ್ತೆ. ಬೊಕ್ಕುಬಾಯಿ ಅಗಲಿಸಿ ಕಥೆ ಹೇಳುವ ಎಂಬತ್ತರ ಮುತ್ತಜ್ಜಿ ಎದುರು ಕುಳಿತು ಕಣ್ಣು-ಕಿವಿ ಅರಳಿಸಿ ಕಥೆ ಕೇಳುವ ನಮ್ಮೂರ ಸೀತಕ್ಕನ ಅವಳಿ ಮಕ್ಕಳನ್ನು ಕಂಡಾಗ, ನಾನೂ ಅಮ್ಮನ ಮಡಿಲಲ್ಲಿ ಕುಳಿತು ಕಿಟ್ಟು-ಕಿಟ್ಟಿ ಕಥೆ ಕೇಳುತ್ತಲೇ ನಿದ್ದೆಯ ಮಂಪರಿಗೆ ಜಾರೋ ಕಂದಮ್ಮನಾಗಿರಬೇಕಿತ್ತು ಅನಿಸುತ್ತೆ. ಅಪ್ಪ-ಅಮ್ಮ ಜಗಳವಾಡುತ್ತಿದ್ರೂ ಅದಾವುದನ್ನೂ ಕಿವಿಗೆ ಹಾಕಿಕೊಳ್ಳದೆ ತನ್ನ ಪಾಡಿಗೆ ತಾನು ಖುಷಿಯಾಗುವ ಮುಗ್ಧ ಮಗುವನ್ನು ಕಂಡಾಗ ಛೇ! ನಾನೂ ಮಗುವಾಗಿರುತ್ತಿದ್ರೆ ಜಗತ್ತು ಕತ್ತಲಾದ್ರೂ ನಾ ಬೆಳಕಾಗುತ್ತಿದ್ದೆ ಎಂದನಿಸುತ್ತೆ.


ಹ್ಲಾಂ..! ಒಂದನೇ ಕ್ಲಾಸಿನಲ್ಲಿ ಎರಡನೆ ಬೆಂಚಿನಲ್ಲಿ ಕುಳಿತಿದ್ದ ಪ್ರತಿಭಾ ನನ್ನ ಕಡ್ಡಿ ಕದ್ದಾಗ ದಿನವಿಡೀ ಅತ್ತು ಕಣ್ಣು ಕೆಂಪಗಾಗಿಸಿದ ನಾನು ಮರುದಿನ ಬಂದು ಪ್ರೀತಿಯಿಂದ ಮಾತಿಗಿಳಿದಿದ್ದೆ. ನಾಲ್ಕನೇ ಕ್ಲಾಸಿನಲ್ಲಿರುವಾಗ ನನ್ನ ಜಡೆ ಹಿಡಿದೆಳೆದು ಶಿವರಾಮ ಮೇಷ್ಟ್ರ ಬಳಿ ಬೆತ್ತದ ರುಚಿ ಕಂಡ ತೀರ್ಥರಾಮನ ಬಳಿ ನಮ್ಮೂರ ಜಾತ್ರೇಲಿ ಐಸ್ ಕ್ಯಾಂಡಿ ಗಿಟ್ಟಿಸಿಕೊಳ್ಳೋದು ಮಾತ್ರ ನಾನು ಮರೀಲೇ ಇಲ್ಲ!

ಮೊನ್ನೆ ಮೊನ್ನೆ ಸಿಕ್ಕ ಗೆಳೆಯನ ಜೊತೆ ದಿನವಿಡೀ ಜಗಳವಾಡೀ ಸಿಟ್ಟಿನಿಂದ ಗುರ್ ಎನ್ನುತ್ತಾ ಸಿಡಿಲಂತೆ ಆರ್ಭಟಿಸುತ್ತಾ ಕೊನೆಗೆ ಅದು ತಣ್ಣಗಾಗೋದು ಆತ ರಾತ್ರಿ ಮಲಗೋಕೆ ಮುಂಚೆ ಫೋನ್ ಮಾಡಿ, Just Kidding Da..ಎಂದಾಗಲೇ. ಆವರೆಗೆ ಇಡೀ ದಿನವನ್ನು ಜಗಳದಲ್ಲೇ ಕಳೆದು ನೆಮ್ಮದಿಯೆಲ್ಲಾ ಮಣ್ಣುಪಾಲಾಗಿರುತ್ತೆ. ಇತ್ತೀಚೆಗೆ ಸುಂದರ ಗೆಳತಿಯೊಬ್ಬಳು ಪರಿಚಯವಾದಗ, ಆಕೆಯನ್ನು ಪಡೆದಿದ್ದೇ ಧನ್ಯೆ ಎನ್ನುವ ಶ್ರೇಷ್ಠತೆಯ ಭಾವ ನನ್ನನ್ನು ಆವರಿಸಿಕೊಳ್ಳುವಾಗಲೇ ಆಕೆ ನನ್ನ ಬಿಟ್ಟು ದೂರ ಹೋಗಿದ್ದು ಮನಸ್ಸಿಗೆ ತೀರ ನೋವಾಗಿತ್ತು. ಸಂಸಾರ, ಬದುಕು, ಜಂಜಾಟ ಎಂದು ಪರದಾಡುವ ಅದೆಷ್ಟೋ ಮಂದಿಯನ್ನು ಕಂಡಾಗ ನಾನೂ ಮಗುವಾಗಿರುತ್ತಿದ್ರೆ ಛೇ! ಈ ತಲೆಬಿಸಿನೇ ಇರ್ತಾ ಇರಲಿಲ್ಲ ಎಂದನಿಸುತ್ತೆ.

ಬೆಳ್ಳಂಬೆಳಿಗ್ಗೆ ಬಾಸ್ ಜೊತೆ ಕಿರಿಕಿರಿ ಮಾಡೋದು, ಮನೆಯಲ್ಲಿ ತಿಂಗಳ ಕೊನೆಯಲ್ಲಿ ಕಾಡೋ ವಿಪರೀತ ಚಿಂತೆಗಳು, ಭವಿಷ್ಯದ ಕುರಿತಾಗಿ ತಲೆತಿನ್ನೋ ಅರೆಬರೆ ಯೋಚನೆಗಳು, ಪದೇ ಪದೇ ಮನೆಯಲ್ಲಿ ನನ್ನ ಮದುವೆ ಬಗ್ಗೆ ತಲೆ ಕೊರೆಯುವ ಅಮ್ಮನನ್ನು ಕಂಡಾಗ ನಾನೂ ಮಗುವಾಗಿರುತ್ತಿದ್ರೆ ಈ ತಾಪತ್ರಯಗಳೆಲ್ಲಾ ಇರುತ್ತಿರಲಿಲ್ಲ ಎಂದನಿಸುತ್ತೆ. ಕಳೆದುಕೊಂಡ ಗೆಳೆಯ/ ಗೆಳತಿ, ಕಡಿದುಹೋದ ಸಂಬಂಧಗಳು, ಬೆಸದ ಭಾವಬಂಧ, ಆಸೆ-ಹಂಬಲಗಳ ಗೋಜು, ನಿರಾಶೆಯ ಕರಿಮೋಡ...ಬಹುಶಃ ಮಗುವಾಗಿರುತ್ತಿದ್ರೆ ಇದಾವುದೂ ನನ್ನ ಬಾಧಿಸುತ್ತಿರಲಿಲ್ಲ ಎಂದನಿಸುತ್ತೆ. ಬಾಲ್ಯದಲ್ಲಿ ಗೊಂಬೆಗಳ ಜೊತೆ ಆಟ ಆಡುವಾಗ ಅದೆಷ್ಟೋ ಗೊಂಬೆಗಳನ್ನು ನನ್ನ ಕೈಯಾರೆ ಹಾಳುಮಾಡಿದ್ದೆ..ತುಂಡು ತುಂಡು ಮಾಡಿ ಮನೆಯದುರು ಹರಿಯೋ ಹೊಳೆಗೆ ಬಿಸಾಕಿದ್ದೆ. ಅದಾವುದೂ ನನಗೆ ದುಃಖವಾಗಿ ಕಾಡಲಿಲ್ಲ..ಆದರೆ ಈ ಗೆಳೆತನ, ಬದುಕಿನ ಸಂಬಂಧಗಳು ನಮ್ಮಿಂದ ದೂರವಾದ್ರೆ ಅದೆಷ್ಟು ಮನಸ್ಸನ್ನು ಕಾಡುತ್ತೆ ಅಲ್ವಾ?

ಏನೋಪ್ಪಾ..ಯಾರಾದ್ರೂ ಇಂಥ ತಲೆಹರಟೆ ಯೋಚನೆ ಮಾಡ್ತಾರಾ? ಅಂತ ನನ್ನ ಬೈಕೋಬೇಡಿ. ಇಷ್ಟಕ್ಕೂ ಈ ಬರಹ ಬರೆಯೋಕೆ ಕಾರಣವಾಗಿದ್ದು ಮಡಿಕೇರಿಯಿಂದ ಗೆಳೆತಿಯೊಬ್ಬಳು ನಿನ್ನೆ ರಾತ್ರಿ ಕಳಿಸಿದ ಪುಟ್ಟ ಸಂದೇಶ: "Broken Toys and Lost pencils" Better than "Broken Hearts and Lost Friends"!!!

ಚಿತ್ರ ಕೃಪೆ : www.flickr.com