Monday, August 23, 2010

ಅಮ್ಮನಾದ ಅಣ್ಣನಿಗೆ...

ಅಂದು ನೀನು ಅತ್ತಿದ್ದೆ, ನನ್ನ ದೊಡ್ಡ ಬ್ಯಾಗನ್ನು ಎತ್ತಿ ಆ ಕೆಂಪು ಬಣ್ಣದ ಕಾರಿಗೆ ಹಾಕುವಾಗ ನೀನು ಮುಸಿ ಮುಸಿ ಅಳುತ್ತಿದ್ದುದನ್ನು ಕಂಡು ಒಂದು ಕ್ಷಣ ಅಚ್ಚರಿ. ಪ್ರತಿದಿನ ನೀನು ಅಳುಮುಂಜಿ ಎಂದು ರೇಗಿಸುತ್ತಾ, ನಿನ್ನಿಂದ ಬೈಗುಳ ತಿನ್ನುತ್ತಾ ಇದ್ದವಳಿಗೆ ಅಂದು ನೀನು ಅಳೋದು ನಿಜಕ್ಕೂ ವಿಸ್ಮಯ ಅನಿಸಿಬಿಡ್ತು. ಪ್ರೀತಿ ಅಂದ್ರೆ ಅದೇ ತಾನೇ? ನಿನ್ನ ಬಗ್ಗೆ ಯೋಚಿಸಿದಾಗಲೆಲ್ಲಾ ನನಗನಿಸುವುದು ಬಹುಶಃ ನನ್ನ ನೀನು ಪ್ರೀತಿ ಮಾಡಿದಷ್ಟೂ ಬೇರ್‍ಯಾವ ಅಣ್ಣಂದಿರೂ ಪ್ರೀತಿ ಮಾಡೊಲ್ಲ ಅಂತ! ಇದು ನನ್ನ ಹೆಮ್ಮೆ. ನಿನ್ನ ಮೇಲಿನ ಅತೀವ ಪ್ರೀತಿ, ವಿಶ್ವಾಸ.

ನಿನ್ನನ್ನು ಅಣ್ಣಾ ಅಂತ ಕೂಗೋದೇ ಒಂದು ಸಂಭ್ರಮ ಕಣೋ. ಅಂದು ನಾನು ಮದುವೆಯಾಗುತ್ತಿದ್ದೇನೆ ಅಂದಾಗ ಎಲ್ಲರಿಗಿಂತ ಖುಷಿ ಪಟ್ಟವನು ನೀನೇ ಅನಿಸುತ್ತೆ. ಹೋದಲೆಲ್ಲಾ ಸಿಕ್ಕ ಸಿಕ್ಕ ‘ಕಲ್ಲುದೇವರು’ಗಳ ಎದುರು ಮೂಕವಾಗಿ ನಿಂತು ನನ್ನ ತಂಗಿಗೆ ಮದುವೆಯಾಗಲಿ ಎಂದು ಬೇಡಿಕೊಳ್ಳುತ್ತಿದೆಯಲ್ಲಾ ಬಹುಶಃ ಅದರ ಫಲವೇ ಇರಬೇಕು ಅಂದುಕೊಂಡು ಮತ್ತೆ ಅದೇ ದೇಗುಲಗಳ ಮುಂದೆ ನಿಂತು ಹಣ್ಣು ಕಾಯಿ ಮಾಡಿಸಿದವನು ನೀನೇ! ನನ್ನಣ್ಣ ಎಂದು ನಿನ್ನ ನೂರು ಬಾರಿ ಕೂಗಿದರೂ ಯಾವತ್ತೂ ನೀನು ನನ್ನ ಎತ್ತಿ ಆಡಿಸಲಿಲ್ಲ, ಮುದ್ದು ಮಾಡಲಿಲ್ಲ, ಹೆಗಲ ಮೇಲೆ ಕುಳ್ಳಿರಿಸಿ ಪೇಟೆ ಸುತ್ತಾಡಿಸಿಲ್ಲ. ಆದರೂ ನಿನ್ನೊಳಗೇ ನನಗಾಗಿ ಕಾದಿಟ್ಟಿರುವ ಆ ಅನನ್ಯ ಪ್ರೀತೀನಾ ಕ್ಷಣ ಕ್ಷಣವೂ ಧಾರೆ ಎರೆಯುತ್ತಾ ಬಂದೆ.

ಅಂದು ನನ್ನ ನೀನು ಅತ್ತೆ ಮನೆಗೆ ಕಳುಹಿಸಿಕೊಡುವಾಗ ನನ್ನ ತಬ್ಬಿಕೊಂಡು ಅದೆಷ್ಟು ಅತ್ತುಬಿಟ್ಟಿಯಲ್ಲಾ. ಅಲ್ಲಿಯವರೆಗೆ ನಿನ್ನ ಕಣ್ಣಿಂದ ಒಂದು ಹನಿ ಬಿಂದು ಜಾರಿದ್ದನ್ನೂ ನಾ ನೋಡಿರಲಿಲ್ಲ. ಇಂದಿಗೂ ಆ ಮುಖ ಕಣ್ಣೆದುರು ತೇಲಿಬಂದರೆ ನಾನೂ ಕಣ್ಣೀರಾಗುತ್ತೇನೆ. ಸಮಾಜ, ಬದುಕಿನ ಪ್ರಶ್ನೆ ಬಂದಾಗ ಅಲ್ಲೆಲ್ಲಾ ನಿನ್ನ ಕಾಳಜಿಯ ಚೌಕಟ್ಟು ಹಾಕಿದ್ದೆ. ನನ್ನೊಳಗಿರುವ ಪ್ರತಿಭೆಗಳನ್ನು ಹೆಕ್ಕಿ ತೆಗೆದು ನನ್ನೆದುರಿಟ್ಟೆ. ಒಡಹುಟ್ಟಿಲ್ಲಾಂದ್ರೂ ಒಡನಾಡಿಯಾಗಿದ್ದೆ. ಬಹುಶಃ ನನ್ನ ಬಾಯಿಂದ ಅಣ್ಣಾ...ಎಂಬ ಶಬ್ಧ ಬಂದರೆ ಅದು ನಿನ್ನ ಕಿವಿಗೇ ಬೀಳುತ್ತೆ, ಏಕೆಂದರೆ ನೀನೋರ್ವನೇ ಆ ಅಣ್ಣ! ಅಮ್ಮನ ನೆನಪಾದಗೆಲ್ಲಾ ನೀನೇ ಅಮ್ಮ ಅಂದಿದ್ದೀನಿ, ಮೌನವಾಗಿ ನಿನ್ನೆದುರು ಮೂಕಳಂತೆ ಅತ್ತಿದ್ದೀನಿ. ಎಲ್ಲವನ್ನೂ ನಿನ್ನೆದುರು ಹರವಿ ಮನಸ್ಸು ಹಗುರವಾಗಿಸಿಕೊಂಡಿದ್ದೀನಿ. ಎಲ್ಲೋ ಕಳೆದುಹೋದ ಕನಸು, ಪ್ರೀತಿ, ದೂರದಲ್ಲೆಲ್ಲೋ ಬಿಟ್ಟು ಬಂದ ಅಮ್ಮ, ಆ ನನ್ನ ಪುಟ್ಟ ಮನೆ...ಹೀಗೆ ಎಲ್ಲಾ ಕಡೆ ‘ಮಿಸ್’ ಆದದ್ದನ್ನೆಲ್ಲಾ ಒಮ್ಮೆಲೇ ನನ್ನೆದುರು ತಂದಿಟ್ಟವನು ನೀನೇ.
೨೪ ರಕ್ಷಾ ಬಂಧನ. ಅದಕ್ಕೆ ನಿನಗೆ ಶುಭಾಶಯ ಹೇಳೋಣ ಅಂಥ ಪತ್ರ ಬರೆದಿದ್ದೀನಿ. ಬೊಗಸೆ ತುಂಬಾ ಪ್ರೀತೀನ ನಿನಗಾಗಿ ಇಟ್ಟಿದ್ದೀನಿ. ಪತ್ರನ ಜೋಪಾನವಾಗಿ ನಿನ್ನ ಬೀರುವಿನಲ್ಲಿ ಭದ್ರವಾಗಿಟ್ಟುಕೋ. ಶುಭಾಶಯಗಳು...
ಮತ್ತದೇ ನಿನ್ನ ಮಡಿಲಾಸೆ...
ಇಂತೀ
ನಿನ್ನ ತಂಗಿ

(ಪ್ರಕಟ: http://hosadigantha.in/epaper.php?date=08-19-2010&name=08-19-2010-15)

Wednesday, August 18, 2010

ಸಾವಿನ ಮನೆಯ ‘ನಗು’


ನಮ್ಮನ್ನು ಹೊತ್ತ ವಾಹನ ಮುಂದೆ ಸಾಗುತ್ತಿದ್ದರೆ, ಹಿಂದಿನಿಂದ ವೇಗವಾಗಿ
ಬರುವ ವಾಹನಗಳಿಗೆ ನಮ್ಮನ್ನು ಹಿಂದಿಕ್ಕಿ ಹೋಗುವ ತವಕ. ಪ್ರತಿಯೊಬ್ಬರಿಗೂ ತಮ್ಮ ಗುರಿಯನ್ನು ಮುಟ್ಟುವ ಹಂಬಲ. ಅದಕ್ಕಾಗೇ ಪೈಪೋಟಿ. ಮನಸ್ಸು ಹಿಂದಕ್ಕೆ ಹೊರಳಿತ್ತು.

ಅಂದು ಆ ಜೀವ ತನ್ನ ಪಾಡಿಗೆ ತಾನು ಮಲಗಿತ್ತು, ನಿಶ್ಯಬ್ದವಾಗಿ! ಈ ಲೋಕದ ಪರಿವೇ ಅದಕ್ಕಿಲ್ಲ. ಅದರೆದುರು ನಿಂತು ಅಳುವವರ ಪರಿಚಯ ಅದಕ್ಕಿಲ್ಲ. ಗೋಳಾಡುವವರು ಅವರ ಪಾಡಿಗೆ ಗೋಳಾಡುತ್ತಿದ್ದರು. ಆ ಇಳಿವಯಸ್ಸಿನಲ್ಲಿ ಲೋಕದ ಪರಿವೆಗೆ ‘ಶವ’ವಾಗಿದ್ದ ಆಕೆ,
ಬದುಕಿನ ‘ಪ್ರತಿಬಿಂಬ’ದಂತೆ ಕಾಣುತ್ತಿದ್ದಳು. ಒಂದು ಕಾಲದಲ್ಲಿ ಚಿಗರೆಯಂತೆ ಓಡಾಡಿದ್ದ ಆ ಜೀವ, ಅಂದು ಕೃಶವಾಗಿತ್ತು. ವಯಸ್ಸು ಸೌಂದರ್ಯವನ್ನು ಉಳಿಸಿಕೊಳ್ಳಲಿಲ್ಲ. ಕಣ್ಣುಗಳೂ ಮಸುಕಾಗಿದ್ದವು.

ಸಾವಿನಂಚಿನಲ್ಲಿರುವ ಆ ಮುಖಗಳೂ ಅವಳೆದುರು ನಿಂತು ಅತ್ತವು. ಅವರ ಕಂಗಳಲ್ಲೂ ನಾಳಿನ
ಬದುಕಿನ ಭಯವಿತ್ತು! ಇನ್ನೊಬ್ಬರ ‘ಸಾವ’ನ್ನು ನೋಡುತ್ತಲೇ ನಾಳೆ ಎದುರಾಗುವ ನಮ್ಮ ‘ಸಾವಿನ’ ಕುರಿತು ಚಿಂತಿಸುವುದು ಅದೆಷ್ಟು ಕ್ರೂರ? ಇಷ್ಟೆಲ್ಲಾ ಆದರೂ ದೂರದಲ್ಲಿ ನಿಂತು ನಗುತ್ತಿದ್ದ ಮಗುವಿಗೆ ಅದಾವುದರ ಪರಿವೇ ಇರಲಿಲ್ಲ.

ಆ ಮಗು ಮನೆಯೆದುರು ತೂಗು ಹಾಕಿದ್ದ ತೂಗುದೀಪ ಬೇಕೆಂದು ಹಠ ಹಿಡಿಯುತ್ತಿತ್ತು. ತಣ್ಣನೆ ಮಲಗಿದ್ದ ‘ಅನಾಥ ಜೀವ’ವನ್ನು ನೋಡಿ ನಗುತ್ತಿತ್ತು. ಅಮ್ಮನೊಂದಿಗೆ ಹಾಲು ಕುಡಿಬೇಕೆಂದು ರಚ್ಚೆ ಹಿಡಿಯುತ್ತಿತ್ತು. ತನ್ನ ಲೋಕದಲ್ಲೇ ಹಲವು ವಿಸ್ಮಯಗಳಿಗೆ ಮುನ್ನುಡಿಯಾಗುತ್ತಿತ್ತು.
ಬದುಕಿನ ದಾರಿಯಲ್ಲಿ ನಾಳೆ
ಬರುವ ‘ಸಾವಿನ’ ಸುಳಿವು ಅದಕ್ಕಿರಲಿಲ್ಲ. ಆ ಮುಗ್ಧ ನಗೆಗೆ ಸಾವಿನ ಮನೆಯಲ್ಲೂ ಪುಟ್ಟದೊಂದು ಭರವಸೆ ಮೂಡಿಸುವ ಪ್ರಯತ್ನ.
ಬದುಕು ಅಂದ್ರೆ ಇದೇನಾ?...ಮನವೆಂಬ ಶರಧಿಯಲ್ಲಿ ನೂರಾರು ಪ್ರಶ್ನೆಗಳ ಅಲೆ ಅಲೆಗಳು!
(ಪ್ರಕಟ: http://hosadigantha.in/epaper.php?date=08-12-2010&name=08-12-2010-15

Sunday, August 8, 2010

ಇದು ಅಮ್ಮನಾಗುವ ಖುಷಿ.



ನಾನು ಅಮ್ಮನಾಗುತ್ತಿದ್ದೇನೆ ಕಣೇ, ಎಷ್ಟು ಖುಷಿಯಾಗುತ್ತಿದೆ ಗೊತ್ತಾ? ಎಂದು ಆಕೆ ಕಂಗಳಲ್ಲಿ ಖುಷಿಯ ನೀರು ತುಂಬಿಕೊಂಡು ಹೇಳುತ್ತಿದ್ದರೆ ನಾನು ಒಂದು ಕ್ಷಣ ಗೊಂದಲಕ್ಕೀಡಾಗಿದ್ದೆ. ಒಂದು ವರ್ಷದ ಹಿಂದೆ ಆಕೆಯ ಮದುವೆಯಾಗಿತ್ತು. ಮದುವೆಗೆ ವೊದಲು ನಿತ್ಯ ನನ್ನ ಒಡನಾಡಿಯಾಗಿದ್ದ ನನ್ನ ಗೆಳತಿ, ಆವಾಗಲೆಲ್ಲಾ ಮದುವೆ, ಮಕ್ಕಳು, ಸಂಸಾರ ಎಂದರೆ ಅಯ್ಯೋ ಅದ್ರ ಸಹವಾಸವೇ ಬೇಡಪ್ಪಾ ಅನ್ನುತ್ತಿದ್ದಳು. ಆದರೆ, ಮದುವೆಯ ವೊದಲಿನ ಗೆಳತಿಗೂ, ಈಗಿನ ಗೆಳತಿಗೂ ಅಜಗಜಾಂತರ ವ್ಯತ್ಯಾಸ.

‘ನನ್ನ ಹೊಟ್ಟೆಯಲ್ಲಿ ನನ್ನದೇ ಮಗು’ ಎಂದಾಗ ಎಷ್ಟು ಖುಷಿಯಾಗುತ್ತೆ? ಪುಟ್ಟ ಪುಟ್ಟ ಕೈಗಳು, ಕಾಲುಗಳು, ಹಾಲುಗಲ್ಲ, ಕಂದನ ಅಳು, ಸುಮ್ಮ ಸುಮ್ಮನೆ ನಗುವುದು...ಎಲ್ಲವನ್ನು ನೆನೆಸಿಕೊಂಡು ಹೆಮ್ಮೆಪಡುತ್ತಿದ್ದೀನಿ ಕಣೇ. ನನ್ನ ಹೊಟ್ಟೆಯಲ್ಲಿ ಮಗು ಕೈ-ಕಾಲು ಅಲ್ಲಾಡಿಸಿದಂತೆ ಅನಿಸಿದಾಗ ನನಗಂತೂ ದಿನಾ ಕಂಗಳು ತುಂಬಿಕೊಳ್ಳುತ್ತೆ. ಆ ಪಾಪುನ ಬೇಗ ನೋಡ್ಬೇಕು, ಅದನ್ನು ಮುದ್ದು ಮಾಡುತ್ತಾ ಅದಕ್ಕೆ ಹಾಲುಣಿಸಬೇಕು, ತುತ್ತು ಬಾಯಿಗಿಡಬೇಕು ಅನಿಸುತ್ತೆ....” ಹೀಗೆ ಅವಳು ಹೇಳುತ್ತಲೇ ಇದ್ದಳು.

ಅವಳಿಗಿನ್ನೂ ನಾಲ್ಕು ತುಂಬಿ ಐದರ ಹೊಸ್ತಿಲು...
ಮನದೊಳಗೆ ಅಚ್ಚರಿ. ಒಂದು ಕ್ಷಣ ನೆನಪಾಯಿತು, ಯಾರೋ ಹೇಳಿದ ಮಾತು; ತಾಯ್ತನದ ಸುಖ ಅನುಭವಿಸಿದವರಿಗೇ ಗೊತ್ತು .

ಹೌದು, ನನ್ನನ್ನು ಒಂಬತ್ತು ತಿಂಗಳು ಹೊಟ್ಟೆಯೊಳಗೆ ಹೊತ್ತ ಅಮ್ಮನೂ ಹೀಗೆ ಖುಷಿಪಟ್ಟಿರಬೇಕು ಅಲ್ವಾ? ಅಮ್ಮ ಹೇಳುತ್ತಿದ್ದಳು: “ನೀನು ಹುಟ್ಟಿದ್ದು ನಮ್ಮೂರ ಹೊಳೆ
ಬದಿಯ ದಾರಿ ಮಧ್ಯೆಯಲ್ಲಿ. ನೀನು ಹುಟ್ಟುವಾಗ ಏನೂ ಕಷ್ಟವಿರಲಿಲ್ಲ” ಅಂತ.
ನನ್ನ ಕೇಕೆ, ನಗು, ಅಳು, ಕಿರುಚಾಟ, ರಚ್ಚೆ ಹಿಡಿಯುವಿಕೆ...ಎಲ್ಲವನ್ನೂ ಅಮ್ಮ ಪ್ರೀತಿಸಿದ್ದಾಳೆ. ಅತ್ತಾಗ ಹೊಡೆಯದೆ ಹಾಗೇ ಮುದ್ದು ಮಾಡಿ ಲಾಲಿ ಹಾಡಿದ್ದಾಳೆ.

ಗೆಳತಿ ಅಮ್ಮನಾಗುವ ಸುದ್ದಿ ಕೇಳುತ್ತಲೇ ಯೋಚನಾಲಹರಿಗಳು ಎತ್ತೆತ್ತಲೋ ಹೊರಟವು.
ಅಬ್ಬಾ!
ಬದುಕೇ ವಿಚಿತ್ರಪ್ಪಾ...ಅಮ್ಮನಾದಾಗ ಹೆಣ್ಣೊಬ್ಬಳು ಇಷ್ಟೊಂದು ಖುಷಿ ಪಡುವುದು ಕೂಡ ಸೃಷ್ಟಿಕರ್ತನ ಲೀಲೆಯೇ? ಅದ್ಯಾಕೆ ಹೆಣ್ಣೇ ಅಷ್ಟೊಂದು ಖುಷಿಪಡುತ್ತಾಳೆ? ಆ ಮಗುವಿಗೆ ಜನ್ಮ ನೀಡಿದ ಅಪ್ಪನ ಮುಖದಲ್ಲಿ ‘ಅಮ್ಮನ ಮುಖದ ಸಂತೋಷ’ ಕಾಣಲು ಸಾಧ್ಯವೇ?
ಅಮ್ಮನೆಂದರೆ ಹಾಗೇ...ಎಲ್ಲಾ ಅಮ್ಮನೂ ಹಾಗೇ...ತನ್ನದೇ ಮಗುವಿನ ಹುಟ್ಟಿನಲ್ಲಿ ಆಕೆ ಮರುಹುಟ್ಟು ಪಡೆಯುತ್ತಾಳೆ...ಹೊಸ ಜಗತ್ತಿಗೆ ತೆರೆದುಕೊಳ್ಳುತ್ತಾಳೆ.
ಇದು ಅಮ್ಮನಾಗುವ ಖುಷಿ...