Tuesday, October 16, 2012

ಅಜ್ಜಿ ಮತ್ತು ಟಿಕೆಟ್


ನನ್ನ ಕಾಲದಲ್ಲಿ ಮಾರ್ಕೆಟ್ಟಿಗೆ ನಡೆದುಕೊಂಡು ಹೋಗ್ತಿದ್ದೆ ಕಣವ್ವಾ..ಎಂದು ಎಪ್ಪತ್ತರ ಅಜ್ಜಿ ನಕ್ಕು ನನ್ನ ಹತ್ತಿರ ಬಂದು ಕುಳಿತುಕೊಂಡಳು. ವೀಳ್ಯದೆಲೆ ತಿಂದು ಬಾಯಿ ಕೆಂಪಾಗಿತ್ತು. ಮೂಗಿನಲ್ಲಿ ಹಳೇ ಕಾಲದ ದೊಡ್ಡ ನತ್ತು ಮಿನುಗುತ್ತಿತ್ತು. ಸೊಂಟದಲ್ಲಿ ಕಾಸಿನ ಚೀಲ. ನೋಡಕ್ಕೂ ಲಕ್ಷಣವಾಗಿದ್ದ ಅಜ್ಜಿಯ ಮಾತಿಗೆ ಹ್ಲೂಂಗುಡದೆ ವಿಧಿಯಿಲ್ಲ.

ನಮ್ಮನೆ ಸಮೀಪ ಬಸ್ ಹತ್ತಿದರೆ ಮಾರುಕಟ್ಟೆಗೆ ಸುಮಾರು 10 ಕಿ.ಮೀ. ದೂರ. ಅಜ್ಹಿ ಮಾತು ಮುಂದುವರೆಸಿದಾಗ ಕಿವಿಯಲ್ಲಿದ್ದ ಇಯರ್ ಫೋನ್ ತೆಗೆದು ಬ್ಯಾಗ್ ಗೆ ತುಂಬಿಸಿಕೊಂಡೆ. 'ನಾನು ನಿನ್ ತರ ಇದ್ದಾಗ ಮಾರ್ಕೆಟ್ಟಿಗೆ ನಾಲ್ಕಾಣೆ ಟಿಕೆಟ್ ಕಣವ್ವಾ. ನಾಲ್ಕಾಣೆ ಸಂಪಾದಿಸಕೂ ಕಷ್ಟದ ಕಾಲ ಅದು. ಬಸ್ ಗೆ ಕೊಡೋ ನಾಲ್ಕಣೆಯಲ್ಲಿ ಬುಟ್ಟಿ ತುಂಬಾ ಹೂವ ಬರುತ್ತಿತ್ತು ತಾಯಿ. ಈಗ ಒಂದು ಮೊಳಕ್ಕೆ 20 ಕೊಡ್ಬೇಕು. ಆಗ ನೋಡು, ನಾಲ್ಕಾಣೆಗೆ ಐದು ಕೆ.ಜಿ. ಹೂವ ಸಿಗೋದು. ಏನ್ ಕಾಲ ಬಂತವ್ವಾ?' ಎಂದು ಕಿಟಕಿ ಪಕ್ಕ ಕುಳಿತ ನನ್ನ ಸರಿಸಿ, ವೀಳ್ಯದೆಲೆಯನ್ನು ಕ್ಯಾಕರಿಸಿ ಹೊರಗೆ ಉಗಿದಳು.

ಏನೂ ಅಂದ್ಕೋಬೇಡ ಕಣವ್ವಾ, ಬಾಯಲ್ಲಿ ಇಟ್ಟುಕೊಂಡು ನನಗೆ ಅಭ್ಯಾಸ ಇಲ್ಲ ಅಂದಳು. ಪರ್ವಾಗಿಲ್ಲಮ್ಮಾ ಅಂದೆ. ನಂಗೆ ಮಾರ್ಕೆಟ್ಟಿಗೆ 10 ರೂ. ಇತ್ತು. ಈಗ 12 ಆಗಿದೆ. ಏನ್ ರೇಟೋ? ಟಿಕೆಟ್, ತರ್ಕಾರಿ, ಪೆಟ್ರೋಲ್, ಗ್ಯಾಸ್ ಎಲ್ಲನೂ ಜಾಸ್ತಿ ಮಾಡವ್ರೆ. ದಿನಾ ಬಂದ್. ನಮ್ಮೊಂಥರಿಗೆ ಕಷ್ಟ. ಮೊನ್ನೆಬಂದ್ ಆಯಿತಲ್ಲಾ...ಹೂವ ತರಕೆ ಮಾರ್ಕೆಟ್ಟಿಗೆ ಬರ್ಬೇಕಿತ್ತು.  ಎರಡು ದಿನ ವ್ಯಾಪಾರ ಇಲ್ಲ. ಒಂದು ದಿನ ವ್ಯಾಪಾರ ಇಲ್ಲಾಂದ್ರೆ ಒಂದು ದಿನದ ಊಟ ಇಲ್ಲಮ್ಮಾ..ಎಂದು ಮತ್ತೊಮ್ಮೆ ನನ್ನ ಪಕ್ಕ ಸರಿಸಿ ಉಗಿದಳು. ಕಳೆದ ಸಲ ನಮ್ಮ ಮನೆಪಕ್ಕದ ಸಾಹುಕಾರಪ್ಪ ಎಲೆಕ್ಷನ್ ದಿನ ನಮ್ಮನೆಗೆ ಕಾರು ತಕೋ ಬಂದು ಹತ್ತಿಸಿಕೊಂಡಿದ್ದ. ಇಂಥ ಚಿಹ್ನೆಗೆ ಓಟು ಹಾಕ್ಬೇಕು ಅಂದಿದ್ದ. ಒಂದು ಸಾವಿರ ರೂಪಾಯಿನೂ ಕೊಟ್ಟಿದ್ದ. ನಾನು ಹಂಗೇ ಮಾಡಿದ್ದೆ ಕಣವ್ವಾ. ಅವನದೇ ಸರ್ಕಾರ ಬಂತು. ಆದ್ರೆ, ಈ ಬಾರಿಯಂತೂ ನಾನು ಓಟು ಹಾಕಕೇ ಹೋಗಲ್ಲ. ಈ ಪರಿ ರೇಟು ಮಾಡಿದ್ರೆ ಏಕಮ್ಮಾ ಓಟು ಹಾಕೋದು?...ಎನ್ನುತ್ತಿದ್ದ ಅಜ್ಜಿ ಕೈಚೀಲದಲ್ಲಿದ್ದ ಪುಡಿ ಚಿಲ್ಲರೆಯನ್ನು ತೆಗೆದು ನನ್ನ ಅಂಗೈಯಲ್ಲಿಟ್ಟು ಎಣಿಸಿಕೊಡು ಎಂದಳು.

ಅಂದಹಾಗೆ, ನಿನ್ ಊರು ಯಾವುದು? ಎಲ್ಲೋಗ್ಬೇಕು ಎಂದು ಪರಿಚಯನೂ ಮಾಡಿಕೊಂಡ ಅಜ್ಜಿ. ನನ್ನ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದಳು. ಲಕ್ಷಣವಾಗಿದ್ದೀಯಾ, ಆದರೆ, ಒಂದು ಕೈಗೆ ಯಾಕೆ ಬಳೆ ಹಾಕಿಲ್ಲ ಎಂದು ಕೇಳಬೇಕೆ? ಹೆಣ್ಣು ಮಕ್ಕಳು ಹೂವ ಮುಡ್ಕೊಂಡು, ಕೈಗೆ ಬಳೆ ತೊಟ್ಟು ಲಕ್ಷಣವಾಗಿರಬೇಕು ಕಣಮ್ಮಾ. ಮುತ್ತೈದೆಯರಿಗೆ ಕೈಲೀ ಬಳೆ ಇರ್ಬೇಕು ಎಂದು ಉಪದೇಶ ಮಾಡಿದಳು. ನಿತ್ಯ ಬಳೆ ತೊಡುತ್ತಿದ್ದ ನಾನು ಅಂದು ಅರ್ಜೇಂಟಾಗಿ ಬಸ್ ಹತ್ತಿದ್ದೆ!. ಅಜ್ಜಿಯ ಮಾತಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಬಸ್ ಕೆ.ಆರ್. ಸರ್ಕಲ್ ಸಿಗ್ನಲ್ ನಲ್ಲಿ ನಿಂತಿತ್ತು. ಅಜ್ಜಿ ಇನ್ನೂ ಜಾಸ್ತಿ ಮಾತಾಡುತ್ತೆ ಎಂದೇಳಿ, ಮತ್ತೆ ಕಿವಿಗೆ ಇಯರ್ ಫೋನ್ ಇಟ್ಟೆ. ನನ್ ಕೈಯಲ್ಲಿದ್ದ ಐಪಾಡ್ ನೋಡಿ, "ಇದೇನು ಮಗಾ? ಮೊಬೈಲಾ?' ಅಂತ ಕೇಳಬೇಕೆ. ಅದನ್ನು ವಿವರಿಸಿ ಸುಮ್ಮನಾಗಿಬಿಟ್ಟೆ.


ಇನ್ನೇನೋ ಒಂದು ಸ್ಟಾಪ್, ಮಾರ್ಕೆಟ್ ಬಂದುಬಿಡುತ್ತೆ ಅನ್ನುವಾಗ ಅಜ್ಜಿ ಮತ್ತೆ ಮಾತಿಗೆ ಶುರುಮಾಡಿತ್ತು. ನೋಡವ್ವಾ, ನಂಗೆ ನಿನ್ ವಯಸ್ಸಿನ ಮೊಮ್ಮಕ್ಕಳು ಇದ್ದಾರೆ. ತುಂಬಾ ಮಾತಾಡಿಬಿಟ್ಟೆ. ಬೇಜಾರು ಮಾಡಬೇಡ ತಾಯಿ. ಒಳ್ಳೆದಾಗ್ಲಿ...ಅಂದುಬಿಟ್ಟಳು. ಕೂದಲು ಪೂರ್ತಿ ಬೆಳ್ಳಿಯಾಗಿದ್ದ ಅಜ್ಜಿ, ಜ್ಞಾನಕ್ಕೆ ಮನಸ್ಸಲ್ಲೇ ಸಲಾಂ ಅಂದೆ.

Thursday, October 11, 2012

ನನ್ನ ರೈಲು ಪ್ರಯಾಣ...


ರೈಲನ್ನು ದೂರ ನಿಂತು ನೋಡಿದವಳಿಗೆ ಅಂದು ರೈಲಿನ ಒಳಗಡೆ ಹೋಗಿ ನೋಡುವ ತವಕ. ಕಿಟಕಿ ಬಳಿ ಕುಳಿತರೆ ಏನೆಲ್ಲಾ ನೋಡಬಹುದು, ನನಗೂ ದಾರಿಹೋಕರೆಲ್ಲಾ ಕೈ ಬೀಸಬಹುದು, ಹೊಲ ಗದ್ದೆಗಳನ್ನು, ಹಸಿರು ಹಾಸನ್ನು, ಮುಗಿಲ ಚಿತ್ತಾರವನ್ನು ನೋಡುತ್ತಾ ಹೋಗಬಹುದೆನ್ನುವ ಖುಷಿ. 


ಸಂಜೆ ನಾಲ್ಕರ ಹೊತ್ತಿಗೆ ಗಂಟೆ ಢಣ ಢಣ ಎನ್ನುವುದೇ ತಡ, ಗೇಟು ದಾಟಿ ಒಂದು ಫರ್ಲಾಂಗು ಓಡಿ ಆಗುತ್ತಿತ್ತು. ಏಕೆಂದರೆ, ನಾಲ್ಕೂವರೆ ಸರಿಯಾಗಿ ರೈಲು ಬರುತ್ತಿತ್ತು!. ಅದು ಕೂ ಎನ್ನುತ್ತಾ ಚುಕುಬುಕು ಸದ್ದು ಮಾಡುತ್ತಾ ದಟ್ಟ ಹೊಗೆ ಸೂಸುತ್ತಾ ಬರುವುದನ್ನು ನೋಡುವುದೇ ಚೆಂದ. ಅದು ಉಗಿಬಂಡಿ. ಇನ್ನು ರೈಲು ಬಂದಾಗ  ಕಿಟಕಿಯಿಂದ ಇಣುಕುತ್ತಿದ್ದವರಿಗೆ ಟಾಟಾ ಮಾಡುವುದೇ ಖುಷಿ. ರೈಲು ನೋಡುವ ಸಂಭ್ರಮ ಹೈಸ್ಕೂಲ್ ಮುಗಿಯೋ ತನಕ ಇತ್ತು. ಕಾಲೇಜಿಗೆ ಬಂದ ಮೇಲೆ ರೈಲು ನೋಡಲಾಗಲೇ ಇಲ್ಲ.

ಬಳಿಕ ರೈಲು ಪ್ರಯಾಣ ಮಾಡುವ ಅವಕಾಶ ಸಿಕ್ಕಿದ್ದು ಮದ್ವೆಯ ಬಳಿಕ. ನಮ್ಮನೆಯವರು ಹನಿಮೂನ್ ಗೆಂದು ಕೇರಳಕ್ಕೆ ರೈಲು ಬುಕ್ ಮಾಡಿದ್ದರು. ಅಲ್ಲಿಯವರೆಗೆ ರೈಲಲ್ಲಿ ಪ್ರಯಾಣಿಸದ ನಾನು ಹುಟ್ಟಿದ 27 ವರ್ಷಗಳ ಬಳಿಕ ರೈಲು ಹತ್ತಿದ್ದೆ. ಅದೂ ಮೆಜೆಸ್ಟಿಕ್ ನಲ್ಲಿ. ರೈಲನ್ನು ದೂರ ನಿಂತು ನೋಡಿದವಳಿಗೆ ಅಂದು ರೈಲಿನ ಒಳಗಡೆ ಹೋಗಿ ನೋಡುವ ತವಕ. ಕಿಟಕಿ ಬಳಿ ಕುಳಿತರೆ ಏನೆಲ್ಲಾ ನೋಡಬಹುದು, ನನಗೂ ದಾರಿಹೋಕರೆಲ್ಲಾ ಕೈ ಬೀಸಬಹುದು, ಹೊಲ ಗದ್ದೆಗಳನ್ನು, ಹಸಿರು ಹಾಸನ್ನು, ಮುಗಿಲ ಚಿತ್ತಾರವನ್ನು ನೋಡುತ್ತಾ ಹೋಗಬಹುದು. ಎಲ್ಲವನ್ನೂ ನೆನೆಸಿಕೊಂಡು ಮನಸ್ಸು ಖುಷಿಪಡುತ್ತಿತ್ತು. ಮದ್ವೆಯಾಗಿ ಹನಿಮೂನ್ ಗೆ ಹೋಗ್ತೀವಿ ಅನ್ನೋ ಖುಷಿಗಿಂತಲೂ ರೈಲಿನೊಳಗೆ ಏನೇನು ಅಚ್ಚರಿ, ಅದ್ಭುತಗಳಿವೆ ಎಂಬ ಬಗ್ಗೆ ನಾನು ಹೆಚ್ಚು ಕುತೂಹಲಗೊಂಡಿದ್ದೆ.

ರೈಲು ಹತ್ತಿಯಾಯಿತು. ಕಿಟಕಿ ಬದಿಯ ಸೀಟು ಗಿಟ್ಟಿಸಿಕೊಂಡಾಯ್ತು. ಆದರೆ, ಸ್ಲಿಪರ್ ಕೋಚ್ ಆಗಿದ್ದರಿಂದ ನಮ್ಮನೆಯವರು ನೀನು ಕೆಳಗಡೆ ಮಲಗು, ನಾನು ಮೇಲೆ ಮಲಕ್ಕೊಳ್ತಿನಿ ಅಂದ್ರು. ನನಗೆ ಭಯ ಶುರು. ನಿದ್ದೆ ಮಾಡಿದಾಗ ಯಾರಾದ್ರೂ ಕಳ್ಳರು ಬಂದ್ರೆ ಏನು ಗತಿ? ಕಣ್ಣುಗಳು ಕೊಳಗಳಾದವು. ಎಷ್ಟು ಸಮಾಧಾನ ಹೇಳಿದ್ರೂ ಕೇಳದೆ, ಅವರನ್ನು ಪಕ್ಕ ಕೂರಿಸಿಕೊಂಡು ಅಂಟಿಕೊಂಡು ಕುಳಿತುಬಿಟ್ಟಿದ್ದೆ. ಬಾತ್ ರೂಂಗೆ ಹೋಗಕೂ ಭಯ. ಹೇಗೋ ಬೆಳಗಾಯ್ತು. ಕೆಲವರು ರೈಲಿನ ಬಾಗಿಲಲ್ಲಿ ನಿಂತು ಎಲ್ಲವನ್ನೂ ನೋಡುತ್ತಾ, ಕೈ ಬೀಸುತ್ತಾ ಸಾಗುವಾಗ ಬಿದ್ದುಬಿಟ್ಟರೆ? ಎಂದು ನಾನೇ ಆತಂಕಗೊಳ್ಳುತ್ತಿದ್ದೆ. ಬೆಳಿಗ್ಗೆ 10ರ ಹೊತ್ತಿಗೆ ಕೊಚ್ಚಿನ್ನಲ್ಲಿ ಇಳಿದಾಗ ಮನಸ್ಸು ನಿರಾಳವಾಯಿತು.

                                                             ********
ಇನ್ನೊಂದು ಮೈಸೂರಿಗೆ ರೈಲಿನಲ್ಲಿ ಪ್ರಯಾಣ. ಅಂದು ಸಿಕ್ಕಿದ್ದು ಸಾಮಾನ್ಯ ಬೋಗಿ. ರೈಲು ಸಹವಾಸಬೇ ಬೇಡ ಅನಿಸಿದ್ದು ಆವಾಗ. ಎದುರುಗಡೆ ಏಳೆಂಟು ಹೆಂಗಸರು, ಪಕ್ಕದಲ್ಲಿ ಕಚ್ಚೆ ಹಾಕಿದ ರೈತರು. ಪದೇ ಪದೇ ವೀಳ್ಯದೆಲೆ ಜಗಿದು ಕಿಟಕಿ ಬದಿಯಲ್ಲಿ ಕುಳಿತು ಮೌನವಾಗಿದ್ದ ನನ್ನ ಸ್ವಲ್ಪ ಪಕ್ಕ ಸರೀಮ್ಮಾ ಎಂದೇಳಿ ಕ್ಯಾಕರಿಸಿ ಉಗಿಯೋರು. ಎದುರುಗಡೆ ಕುಳಿತ ಹೆಂಗಸರ ಬಾಯಲ್ಲಂತೂ ಊರ ಸುದ್ದಿ, ಸೀರಿಯಲ್ ಗಳು ಎಲ್ಲವೂ ತೂರಿ ಬಂದವು. ಮೈಸೂರು ತಲುಪುವವರೆಗಿನ ಆ ಮೂರು ಗಂಟೆಗಳು ನನಗೆ ಅತ್ಯಂತ ಕಷ್ಟದ ಸಮಯವಾಗಿತ್ತು.
                                                               *********
ಇನ್ನೊಂದು ಮೈಸೂರಿನಿಂದ ವಾಪಸ್ ಬರುವ ಪ್ರಸಂಗ.  ಜನರಲ್ ಬೋಗಿ ಕಿರಿಕಿರಿ ಬೇಡೆಂದು ಮೊದಲೇ ಟಿಕೆಟ್ ಕಾಯ್ದಿರಿಸಲಾಗಿತ್ತು. ಕಾರ್ಯಕ್ರಮಗಳೆಲ್ಲಾ ಮುಗಿಸಿ ಸೂರ್ಯ ಮುಳುಗುವ ಹೊತ್ತಿಗೆ ರೈಲು ಪ್ರಯಾಣಕ್ಕೆ ಸಿದ್ಧಳಾಗಿದ್ದೆ. ರೈಲು ತಡವಾಗಿ ಬಂದಿದ್ದರಿಂದ ನೂಕುನುಗ್ಗಲು. ಎಲ್ಲರೂ ಎಲ್ಲರನ್ನೂ ದೂಡಿ, ಒದ್ದು ಸಾಗುವವರೇ. ನಮ್ಮನೆಯವರು ನನ್ನ ಕೈಹಿಡಿದುಕೊಂಡು ನನ್ನನ್ನೂ ಎಳೆದುಕೊಂಡು ರೈಲು ಹತ್ತಲು ಅಣಿಯಾದರು. ಆದರೆ, ಜನಸಂದಣಿಯಲ್ಲಿ ನನ್ನ ಕೈ ತಪ್ಪಿ ನಾನು ಕೆಳಗಡೆಯೇ ಬಾಕಿಯಾದೆ. ಮತ್ತೆ ನಮ್ಮವ್ರು ನನ್ನ ಹುಡುಕಿಕೊಂಡು ವಾಪಸ್ ಬಂದಾಗ ಅಳುತ್ತಾ ಕೆಳಗಡೆಯೇ ನಿಂತಿದ್ದೆ. ಅಷ್ಟೊತ್ತಿಗೆ ರೈಲು ಚಲಿಸಲು ಆರಂಭಿಸಿತ್ತು!

                                                                 *********
ಈಗ ನಮ್ಮೂರಿಗೂ ರೈಲು ಬರುತ್ತಿದೆ. ಆದರೆ, ಸೀಟು ಸಿಗೋದೇ ಕಷ್ಟ. ಶಿರಾಡಿಘಾಟ್ ನಲ್ಲಿ ಬಸ್ ಗಳಲ್ಲಿ ಓಲಾಡಿಕೊಂಡು ಹೋಗುವ ನನಗೆ ಶಿರಾಡಿಘಾಟ್ ನ ಹಸಿರು ತಪ್ಪಲಲ್ಲಿ ಹಗಲಿನಲ್ಲಿ ರೈಲಿನಲ್ಲಿ ಪ್ರಯಾಣಿಸಬೇಕೆನ್ನುವ ಆಸೆಯಿದೆ.

Thursday, October 4, 2012

ಅಮ್ಮನಿಗೆ ವಯಸ್ಸಾಗುತ್ತಿದೆ...




ಕಣ್ಣುಗಳು ಆಳಕ್ಕೆ ಇಳಿದಿದ್ದವು. ಕೆನ್ನೆಗಳೂ ಕಾಣಲಿಲ್ಲ, ಕೆನ್ನೆ ಮೇಲಿದ್ದ ಗುಳಿಯೂ ಮಾಯವಾಗಿತ್ತು. ವೀಳ್ಯದೆಲೆ ತಿಂದು ಬಾಯಿ ಕೆಂಬಣ್ಣಕ್ಕೆ ತಿರುಗಿತ್ತು. ಹಲ್ಲುಗಳೂ ಇರಲಿಲ್ಲ. ಬೊಕ್ಕು ಬಾಯಿ ಅಗಲಿಸಿ ನಕ್ಕಾಗ ಮಗುವಿನಂತೆ ಕಂಡಳು. ಮಕ್ಕಳು ಬಿಟ್ಟರೆ ಇನ್ಯಾವ ನೆನಪುಗಳೂ ಅವಳಿಗಿಲ್ಲ. ಒಂದೊಂದು ಸಲ ಮಗುವಿನಂತೆ ರಚ್ಚೆ ಹಿಡಿಯುತ್ತಾಳೆ, ಇನ್ನೊಂದು ಸಲ ಗಂಭೀರವಾಗಿ ಜಗಲಿ ಮೇಲೆ ಕುಳಿತು ತನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾಳೆ.

ಊರಿನ ಸೋಮನ ಅಮ್ಮಂಗೆ ವಿಧವಾ ವೇತನ, ಆಶ್ರಯ ಯೋಜನೆ ಜಾರಿಯಾಗಬೇಕಾದರೆ ಗ್ರಾಮ ಪಂಚಾಯ್ತಿಯಿಂದ ಹಿಡಿದು ತಾಲೂಕು ಕಚೇರಿ, ತಹಶೀಲ್ದಾರ್ ಅಂತ ಸುತ್ತಾಡಿದ್ದು ಅವಳೇ. ಊರಿನ ಹೆಂಗಳೆಯರ ಮಧ್ಯದಲ್ಲಿ ನಾಯಕಿಯಾಗಿ ಮೆರೆದವಳು ಅವಳೇ. ಅವರ ಸಮಸ್ಯೆ, ದೂರು-ದುಮ್ಮಾನಗಳನ್ನು ತಂದು ಹರವಿದರೆ ಅದಕ್ಕೆ ಪರಿಹಾರ ಸೂಚಿಸುವವಳು ಅವಳೇ. ಐದು ಎಕರೆ ಜಮೀನಿನಲ್ಲಿ ತೆಂಗು-ಕಂಗು, ಬಾಳೆಗಳನ್ನು ನೆಟ್ಟು ನಿತ್ಯ ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದಳು. ಮುಂಜಾವು ಹೊತ್ತಿಗೇ ಎದ್ದು ದನಕರುಗಳನ್ನು ತೊಳೆದು, ಹಾಲು ಕರೆದು, ಗಂಜಿ ಕುಡಿದು ತೋಟಕ್ಕೆ ಹೋದರೆ ಸೂರ್ಯ ಮೇಲೇರುವ ಹೊತ್ತಿಗೆ ವಾಪಸ್ ಬರುತ್ತಿದ್ದಳು. ಅನ್ನ-ಹಸಿವು, ನೀರಡಿಕೆಗಳ ಗುಂಗಿಲ್ಲದೆ ತನ್ನ ಕೆಲಸದಲ್ಲೇ ದೇವರನ್ನು ಕಂಡವಳು ಅವಳು. ಕೂಲಿ-ನಾಲಿಗೆ ಹೋಗುವುದು ಅವಮಾನವೆಂದು ಬಗೆದು ತನ್ನ ತೋಟವನ್ನೇ ನಂದನವನ ಆಗಿಸಿ, ಬಟ್ಟಲು ಅನ್ನ ಸಂಪಾದಿಸಿದವಳು.

ಗಂಡ ಬಿಟ್ಟು ಇನ್ನೊಬ್ಬಳ ತೆಕ್ಕೆ ಸೇರಿದಾಗ ಅತ್ತು-ಕರೆದು ರಂಪ ಮಾಡಿ ಹೋದದ್ದು ಹೋಯಿತು, ಮಕ್ಕಳ ನಗುವಿನಲ್ಲೇ ನನ್ನ ಸುಖವಿದೆ ಎಂದುಕೊಂಡವಳು. ಮಗ ಹೊಸ ಕೊಡೆ, ಹೊಸ ಬಟ್ಟೆ ಬೇಕೆಂದಾಗ ಕಿವಿಯೋಲೆ ಅಡವಿಟ್ಟು ಬಣ್ಣದ ಕೊಡೆ ತಂದವಳು. ಪ್ರತಿಷ್ಠಿತ ಕಾಲೇಜಿನಲ್ಲಿ ಮಕ್ಕಳಿಗೆ ಸೀಟು ಸಿಗಬೇಕೆಂದು ತಿಂಗಳುಗಟ್ಟಲೆ ಬಿರುಬಿಸಿಲಿಗೂ ನಡೆದರೂ ದಣಿವಾಗದವಳು. ಅಕ್ಷರಗಳ ಅರಿವಿಲ್ಲದೆಯೇ ಕಾನೂನು, ಲೋಕಜ್ಞಾನ ಪಡೆದವಳು.

ಅಮ್ಮಾ..ಎಂದಾಗ "ಮಗಳೇ' ಎನ್ನುವ ಪುಟ್ಟ ನಗು ಮುಖದಲ್ಲಿ. ನಮಗೆ ಎಲ್ಲವನ್ನೂ ಅರ್ಥಮಾಡಿಸಿದ ಅವಳಿಗೆ ಇಂದು ಏನೂ ಅರ್ಥವಾಗುವುದಿಲ್ಲ. ನೆನಪುಗಳು ಮಾಸಿಹೋಗುತ್ತಿವೆ. ಉಂಡಿದ್ದು, ನಕ್ಕಿದ್ದು, ಮಾತಾಡಿದ್ದು ಎಲ್ಲವೂ ಅರೆಕ್ಷಣದ ನೆನಪುಗಳು. ವಯಸ್ಸನ್ನು ಹಿಡಿದು ನಿಲ್ಲಿಸೋಣ ಅಂದ್ರೆ ಅದೂ ಕೈಲಾಗುತ್ತಿಲ್ಲ. ಅಮ್ಮ ವಯಸ್ಸಿನೊಂದಿಗೆ ನಡೆಯುತ್ತಿದ್ದಾಳೆ.