Sunday, August 23, 2009

ಅಕ್ಕನಿಗೆ ಪ್ರೀತಿಯ ನೆನಪುಗಳು...

ಅಕ್ಕಾ..ನಿನ್ನೆ ಗೌರಿ-ಗಣೇಶ ಹಬ್ಬ. ನಿನ್ನ ತುಂಬಾ ನೆನಪಾಯ್ತು. ಸೂರ್ಯ ಮೂಡೋ ಹೊತ್ತಿಗೆ ಎದ್ದು ಸ್ನಾನ ಮಾಡಿ ದೇವರೆದುರು ದೀಪ ಹಚ್ಚಿ ಆರತಿ ಎತ್ತುವಾಗ ನಿನ್ನ ನೆನಪಾಯ್ತು. ಪಾಯಸ ಮಾಡಿ ಮಾವ, ಅಣ್ಣ, ತಮ್ಮ, ಪಕ್ಕದ್ಮನೆಯ ಪುಟ್ಟ ಮಕ್ಕಳಿಗೆ ಬಡಿಸುವಾಗ ನಿನ್ನ ನೆನಪು ತೀರಾ ಕಾಡಿತ್ತು. ಅಕ್ಕಾ... ಹಬ್ಬ ಬಂದರೆ ಮನೆಮುಂದೆ ಚೆಂದದ ರಂಗೋಲಿ ಇಡೋಕೆ ನೀನಿಲ್ಲ ಅಂದಿತ್ತು ಮನ.

ಅಕ್ಕಾ..ನಿನ್ನೆ ನಾ ಸೀರೆ ಉಟ್ಟಿದ್ದೆ ಗೊತ್ತಾ? ನನ್ನ ಇಷ್ಟದ ಬಣ್ಣ ಮೆರೂನ್ ಕಲರ್ ಸೀರೆ ಉಟ್ಟು, ಕೈ ತುಂಬಾ ಬಳೆ, ತಲೆ ತುಂಬಾ ಮಲ್ಲಿಗೆ ಮುಡಿದಿದ್ದೆ. ಆದರೆ, ನಂಗೆ ನೋಡು ಸೀರೆ ಉಡೋಕೆ ಬರಲ್ಲ..ಅದಕ್ಕೆ ಪಕ್ಕದ್ಮನೆಯ ಆಂಟಿ ಚೆನ್ನಾಗಿ ಸೀರೆ ಉಡಿಸಿದ್ರು ಅಕ್ಕಾ. ನೀನಿರುತ್ತಿದ್ದರೆ ನೋಡು ನೀನೇ ಉಡಿಸುತ್ತಿದ್ದೆಯಲ್ಲಾ? ತಲೆತುಂಬಾ ಹೂವು ಉಟ್ಟು, ಹಣೆಗೊಂದು ಬಿಂದಿಗೆ ಉಟ್ಟು ನೀನೂ ನನ್ನ ಜೊತೆ ಖುಷಿಪಡುತ್ತಿದ್ದೆ ಅಲ್ವಾ? ನನ್ನ ತಂಗಿ ಚೆನ್ನಾಗ್ ಕಾಣ್ತಾಳೆ ಅಂತ ಹೆಮ್ಮೆ ಪಡುತ್ತಿದ್ದೆಯಲ್ಲಾ.

ಅಕ್ಕಾ ನಿನ್ನೆ ದೇವಸ್ಥಾನಕ್ಕೆ ಹೋಗಿದ್ದೆ. ಹಣ್ಣುಕಾಯಿ ಮಾಡಿಸಿ ದೇವರ ಬಳಿಯೂ ನೀನು ಬೇಕೆಂದು ಬೇಡಿಕೊಂಡೆ. ನೀನು ಜೊತೆಗಿರುತ್ತಿದ್ದರೆ ನೀನೂ ನನ್ನ ಜೊತೆ ಬರ್ತಾ ಇದ್ದೆ. ನಿನ್ನ ಪುಟ್ಟ ಮಕ್ಕಳು ನನ್ನ ಮಡಿಲಲ್ಲಿ ಪ್ರೀತಿಯಾಟ ಆಡುತ್ತಿದ್ದವಲ್ಲಾ. ಏನು ಮಾಡೋದು ಹೇಳು...ದೇವರು ನಂಗೆ ನಿನ್ನ ಕೊಡಲೇ ಇಲ್ಲ ನೋಡು. ದೇವರ ಮೇಲೂ ಕೆಟ್ಟ ಸಿಟ್ಟು ಬರುತ್ತೆ...ಎಲ್ಲಾ ಕೊಟ್ಟು ಅಕ್ಕನನ್ನು ನಂಗೆ ಕೊಟ್ಟಿಲ್ಲ ಅನ್ನೋ ಕೊರಗು ನಂದು.

ಅಕ್ಕಾ..ಈ ಬಾರಿ ನಾನು ಹಬ್ಬಕ್ಕೆ ಅಮ್ಮನೂರಿಗೆ ಹೋಗಿಲ್ಲ. ಕೃಷ್ಣಾಷ್ಟಮಿಯ ದಿನವೇ ಹೋಗಿಬಂದೆ. ಅಮ್ಮಾ ಇಂದು ಬೆಳಿಗ್ಗೆ ಫೋನು ಮಾಡಿದ್ರು. ಯಾಕೆ ಗೊತ್ತಾ? ನಾನೂನು ಹುಟ್ಟಿದ್ದು ಗಣೇಶ ಹಬ್ಬದ ದಿನ. ಇವತ್ತು ಅಮ್ಮನೂ ಗಣಪತಿ ದೇವಸ್ತಾನಕ್ಕೆ ಹಣ್ಣುಕಾಯಿ ಹೂವು, ಬೆಲ್ಲ ತಕೊಂಡು ಹೋಗಿ ನನ್ನ ಲೆಕ್ಕದಲ್ಲಿ ಪೂಜೆ ಮಾಡಿಸಿದೆ ಅಂದ್ರು. ಅಮ್ಮಂಗೆ ನನ್ನ ಹುಟ್ಟಿದ ದಿನ ಅಂದ್ರೆ ಅದು ಚೌತಿ ದಿನವೇ ಹೊರತು ಆಗಸ್ಟ್ 2 ಅಂದ್ರೆ ಅವರು ನಂಬೊಲ್ಲ. ಅಮ್ಮ ಓದಿಲ್ಲ ಅಕ್ಕಾ..ಅದಕ್ಕೆ ನೋಡು ಅವರು ಪ್ರತಿ ವರ್ಷ ಚೌತಿಯನ್ನೇ ನೆನಪಿಟ್ಟುಕೊಳ್ಳುತ್ತಾರೆ. ಅಮ್ಮನ ಮುಗ್ಧತೆಗೆ ಮನಸಾರೆ ವಂದಿಸಿದೆ.
ಅಕ್ಕಾ..ಯಾಕೋ ನಿತ್ಯ ಅಂದುಕೊಳ್ಳುತ್ತಿದ್ದೆ ಮನ..

ನನಗೂ, ನನ್ನ ಬದುಕಿನಲ್ಲಿ ಸುಗ್ಗಿಯ ಸಂಭ್ರಮದಿಂದ ಮೆರೆಯೋಕೆ ನೀನಿರಬೇಕಿತ್ತು...
ನನ್ನ ನೀನು, ನಿನ್ನ ನಾನು ತುಂಬಾ ಪ್ರೀತಿಸುವವರಾಗಿರಬೇಕಿತ್ತು...
ಮನದ ಕದ ತೆರೆದು...ಪ್ರೀತಿಯ ಮಳೆಯಲ್ಲಿ ತೋಯಿಸಲು ನೀನಿರಬೇಕಿತ್ತು...
ನನ್ನ ಮೌನ-ಮಾತು, ಹುಸಿಮುನಿಸು, ಮುಂಗೋಪದ ಜೊತೆ ಸಾಥ್ ನೀಡಲು ನೀನಿರಬೇಕಿತ್ತು...
ಅಕ್ಕಾ..ನೀನು ಯಾವಾಗ ಬರ್ತೀಯಾ....ಹೇಳು ಬೇಗ...
ಇಂತೀ ನಿನ್ನ
ತಂಗಿ

14 comments:

ಸುಧೇಶ್ ಶೆಟ್ಟಿ said...

ಅಕ್ಕನಿಗೆ ಬರೆದ ಪತ್ರ ಚೆನ್ನಾಗಿತ್ತು.... ತಡವಾಗಿ ಹುಟ್ಟಿದ ಹಬ್ಬದ ಶುಭಾಶಯಗಳು :)

umesh desai said...

ಧರಿತ್ರಿ ನಿಜವೇ ಎಲ್ಲರಿಗು ಎಲ್ಲಾನು ಅವನ ಕಡೆ
ಆಗೋದಿಲ್ಲ ಕೊರಗಬೇಡ ...

sunaath said...

ಧರಿತ್ರಿ,
ಪ್ರತಿಯೊಬ್ಬರಿಗೂ ಒಬ್ಬ ಅಕ್ಕ ಬೇಕು. ಅವಳು ತಾಯಿಯ ಸ್ಥಾನದಲ್ಲಿ ಇರುತ್ತಾಳೆ. ಆದರೆ ನಸೀಬು ಬೇಕಲ್ಲ!
By the way, ನಿಮಗೆ ಹುಟ್ಟುಹಬ್ಬದ ಶುಭಾಶಯಗಳು.

ಮನಸು said...

ಧರಿತ್ರಿ,
ಆ ಕಾಣದ ಅಕ್ಕನಿಗಾಗಿ ಇಷ್ಟು ಮುದ್ದಾಗಿ ಪತ್ರ ಬರೆದಿರುವೆಯಲ್ಲ ಆ ಅಕ್ಕ ಈ ಪತ್ರ ಓದಿ ನಿನ್ನ ಸೇರಲು ಬರುವಳು, ಬಹಳ ಪ್ರೀತಿಯಿಂದ ಬರೆದಿರುವ ಈ ಪತ್ರ ನಿನ್ನಕ್ಕನಿಗೆ ಮುಟ್ಟಿದೆ....
ಹುಟ್ಟು ಹಬ್ಬದ ಶುಭಾಶಯಗಳು
ವಂದನೆಗಳು

Naveen...ಹಳ್ಳಿ ಹುಡುಗ said...

ಧರಿತ್ರಿ ಯಕ್ಕ ಮೊದಲಿಗೆ ಹುಟ್ಟು ಹಬ್ಬದ ಶುಭಾಶಯಗಳು... ಇಲ್ಲದ ಅಕ್ಕನಿಗೆ ಬರೆದ ಪತ್ರ ಮನ ಮುಟ್ಟುವಂತಿದೆ.. ನನಗು ಕೂಡ ಅಕ್ಕ-ತಂಗಿಯರಿಲ್ಲ ವೆಂಬ ಕೊರಗು ಆಗಾಗ ನೋವುಂಟು ಮಾಡುತ್ತದೆ..

ಜಲನಯನ said...

ಧರಿತ್ರಿ, ಮನದಾಳದ ಹುಟ್ಟು ಹಬ್ಬದ ಶುಭಾಷಯಗಳು, ನನಗೆ ಇಬ್ಬರಲ್ಲ ಮೂವರು ತಂಗಿಯರು ಎಂದುಕೊಳ್ಳಲೇ....
ಗಾಂಧಿ ಜಯಂತಿಯಂದು ಹುಟ್ಟಿದ ನಿನಗೆ (ಸಂಬೋಧನೆ ಇತರ ತಂಗಿಯರಿಗಿದ್ದಂತೆ ಇರಬೇಕಲ್ಲ !!).
ನಿನ್ನ ಕಲ್ಪನೆಗೇ ಇಷ್ಟೊಂದು ಆಪ್ಯಾಯತೆ ಎಂದರೆ ನಿಜ ಅಕ್ಕನ ಮತ್ತು ಅವಳ ಮಕ್ಕಳಿಗೆ ಅಷ್ಟೇ ಏಕೆ, ಎಲ್ಲ ಹತ್ತಿರದವರಿಗೆ ನಿನ್ನ ಕಾಳಜಿ, ಆಪ್ಯಾಯತೆ ನನಗೆ ಬಹು ಮೆಚ್ಚಿಗೆಯಾಯಿತು.
ನಿನ್ನ ಬಾಳಲ್ಲಿ ಎಲ್ಲ ಶುಭ ಮತ್ತು ಸಂತೋಷದಾಯಕವಾಗಲಿ ..ಇದು ಗಣೇಶ ಚತುರ್ಥಿಯಂದು ನಿನ್ನೆಲ್ಲ ಅಣ್ಣಂದಿರ ಹಾರೈಕೆ.

Umesh Balikai said...

ನನಗೂ ಇಲ್ಲದ ಸ್ವಂತ ಅಕ್ಕನ ಕೊರತೆ ನನ್ನ ಆಗಾಗ ಕಾಡ್ತಾ ಇರುತ್ತೆ. ದೊಡ್ಡಪ್ಪ, ದೊಡ್ಡಮ್ಮನ ಹೆಣ್ಣು ಮಕ್ಕಳು ಇದ್ದರೂ ಸದಾ ನನ್ನ ಜೊತೆ ಇರೋ ಸ್ವಂತ ಅಕ್ಕ ಇರಬೇಕಿತ್ತು ಅನ್ನಿಸ್ತಾ ಇರುತ್ತೆ. ಅಕ್ಕನಿಗೆ ಬರೆದ ನಿಮ್ಮ ಪತ್ರ ಓದಿ ನಾನೂ ದೇವರಿಗೆ ಸ್ವಲ್ಪ ಬೈದೆ; ನನಗೆ ಅಣ್ಣ, ತಮ್ಮ, ತಂಗಿ ಎಲ್ಲಾ ಕೊಟ್ಟಿರೋ ನೀನು ಒಬ್ಬಳು ಅಕ್ಕನನ್ನೂ ಕೊಡಬಾರದಿತ್ತೇ ಅಂತ.

ಚಿಕ್ಕ, ಚಂದದ, ಆಪ್ತ ಬರಹ,... ಅಭಿನಂದನೆಗಳು.

- ಉಮೇಶ್

ಏಕಾಂತ said...

ಮತ್ತೆ ಮತ್ತೆ ಓದಬೇಕೆನಿಸುವಷ್ಟು ಆಪ್ತ ಬರಹ. ಕಾದ ಮೌನವನ್ನು ಆಗ ತಾನೆ ಎರಕ ಹೊಯ್ದಂತಿದೆ. ಹುಟ್ಟು ಹಬ್ಬದ ಶುಭಾಶಯಗಳು. ಅಮ್ಮನ ಪ್ರೀತಿಗೆ ಹೇಳಲು ತೋಚುತ್ತಿಲ್ಲ. ಹಬ್ಬದಂದು ಹಬ್ಬಬೇಕಿತ್ತು ಪ್ರೀತಿ. ನಿಜ. ಒಬ್ಬಳು ಅಕ್ಕ ಬೇಕು. ಒಬ್ಬ ಅಣ್ಣ. ಕಡೇ ಪಕ್ಷ ಒಬ್ಬ ತಮ್ಮನಿರಬೇಕಿತ್ತು. ಹಾಗಂತ ಸಣ್ಣಗೆ ಕೊರಗಿಕೊಂಡು ಮನೆಯಿಂದ ಹೊರಟು ಬಂದೆ. ಮತ್ತಷ್ಟು ಬರೆಯಿರಿ. ಸಾಕಷ್ಟು ಓದಲು.

ರಾಘವೇಂದ್ರ ಹೆಗಡೆ- ಸಕಲ ಸ್ಟುಡಿಯೋ. said...

bavakke basheya bandana !!!

PARAANJAPE K.N. said...

ಎ೦ದಿನ ನಿನ್ನ ಆಪ್ತ ಶೈಲಿ ಇಲ್ಲಿಯೂ ಪಡಿಮೂಡಿದೆ. ಚೆನ್ನಾಗಿದೆ.

ಸವಿಗನಸು said...

ಧರಿತ್ರಿ,
ನಿಮ್ಮ ಬಗೆ ಕೇಳಿದ್ದೆ...ಮೊದಲ ಭೇಟಿ ನಿಮ್ಮ ಬ್ಲಾಗಿಗೆ...
ಅಕ್ಕನ ಬಗೆ ನೀವು ಬರೆದಿರೊದು ಓದಿ ನನ್ನ ಅಕ್ಕನ ನೆನಪಾಯಿತು...
ನಿಮ್ಮ ಪತ್ರ ಹೃದಯಕ್ಕೆ ತಟ್ಟುವಂತಿತ್ತು...
ಚೆಂದದ ಬರಹ...
ಅಭಿನಂದನೆಗಳು...

ರೂpaश्री said...

ಧರಿತ್ರಿ ಅವರೆ,
ಇಲ್ಲದ ಅಕ್ಕನಿಗಾಗಿ ಇಷ್ಟೊಂದು ಪ್ರೀತಿಹರಿಸಿ ಪತ್ರ ಬರೆದಿದ್ದೀರಾ. ನಿಮ್ಮ ಜೊತೆಯಲ್ಲಿರುವ ನಿಮ್ಮ ಮನೆಯವರು ನಿಜವಾಗ್ಲೂ ಲಕ್ಕಿ!

ಹುಟ್ಟು ಹಬ್ಬದ ಶುಭಾಶಯಗಳು(ತಡವಾಗಿ)..

ಅಂದಹಾಗೆ ನನಗೂ ಅಕ್ಕ/ತಂಗಿಯಿಲ್ಲ!

kanaadaraaghava said...

Akkanige patra tulupide.

PaLa said...

ಚೆನ್ನಾಗಿದೆ