Wednesday, February 1, 2012

ನಮ್ಮೂರಿಗೆ ಕರೆಂಟು ಬರುತ್ತಿದೆ....ನಮ್ಮೂರಿಗೆ ಕರೆಂಟು ಬರುತ್ತಿದೆ. ಕಂಬಗಳನ್ನು ಹಾಕೋಕೆ ಗುಂಡಿ ತೋಡಿದ್ದಾರೆ. ಏಪ್ರಿಲ್ ಒಳಗೆ ಕರೆಂಟು ಬರಬಹುದು ಮಗಾ. ಆಮೇಲೆ ಸೀಮೆಎಣ್ಣೆ ಖರ್ಚಿಲ್ಲ. ನಿಂಗೆ ಊರಿಗೆ ಬಂದ್ರೆ ಬೋರಾಗಕ್ಕಿಲ್ಲ. ಕರಂದ್ಲಾಜೆ ಶೋಭಕ್ಕನೇ ಕರೆಂಟು ಕಳಿಸಿರಬೇಕು....ಹೀಗೆ ಪಕ್ಕದ್ಮನೆ ಅಜ್ಜಿಯ ನಾನ್ ಸ್ಟಾಪ್ ಮಾತುಗಳು ಮುಂದುವರೆಯುತ್ತಲೇ ಇದ್ದವು.
ಬೆಂಗಳೂರಿನಿಂದ 8 ಗಂಟೆಗಳ ಪ್ರಯಾಣ ಮಾಡಿ ನಮ್ಮನೆಗೆ ತಲುಪುವಷ್ಟರಲ್ಲಿ ಉಸ್ಸಪ್ಪಾ ಎಂದು ಜಗಲಿ ಮೇಲೆ ಕುಳಿತು ಒಂದು ಚೊಂಬು ನೀರು ಕುಡಿದು ಸುಧಾರಿಸಿಕೊಳ್ಳುತ್ತಿದ್ದೆ. ಹೀಗಿದ್ದರೂ ನಾನು ಊರಿಗೆ ಹೋದ ಖುಷಿಯಲ್ಲಿ ಅಜ್ಜಿ ಕರೆಂಟು ಪುರಾಣವನ್ನು ಹೇಳುತ್ತಲೇ ಇತ್ತು. ಪುತ್ತೂರು ತಾಲೂಕಿನ ದೋಳ್ಳಾಡಿ ಗ್ರಾಮದಲ್ಲಿ ಕಳೆಂಜೋಡಿ ಎಂಬಲ್ಲಿರುವುದು ನಮ್ಮನೆ. ಸುತ್ತಲೂ ದಟ್ಟ ಕಾಡು, ಹಸಿರು ಹಸಿರು. ವರ್ಷವಿಡೀ ಕೂಲ್ ಕೂಲ್. ನೀರಿಗೆ ಬರವಿಲ್ಲ. ಕೂಲಿ-ನಾಲಿಗೆ ಬರವಿಲ್ಲ. ಊರಮಂದಿಗೆಲ್ಲ ಸಾಹುಕಾರರು. ತೋಟವಿದೆ, ಬೇಕಾದಷ್ಟು ಜಮೀನಿದೆ. ಅಡಿಕೆ, ತೆಂಗಿನ ಗಿಡಗಳು ಬೇಸಿಗೆಯಲ್ಲೂ ಹಸಿರಾಗಿರುತ್ತವೆ. ತೋಟ ತುಂಬಾ ದನಕರುಗಳು ಅಂಬಾ ಅನ್ನುತ್ತವೆ. ಇಲ್ಲಿರುವುದು ಬರೇ ಹತ್ತು ಮನೆ. ದ್ವೀಪದಂತೆ, ಆದರೆ ಸುತ್ತಲೂ ನೀರಿಲ್ಲ, ಬದಲಾಗಿ ಆಕಾಶದೆತ್ತರಕ್ಕೆ ಬೆಳೆದ ಮರಗಳಿವೆ. ಹಾಗಾಗಿ, ಈ ಕರೆಂಟು ಮರಗಳನ್ನು, ಕಾಡನ್ನು ದಾಟಿ ಬರಬೇಕು. ಇಷ್ಟು ವರ್ಷಗಳ ಕಾಲ ನಮ್ಮೂರಿಗೆ ಕರೆಂಟು ಕನಸಾಗಿತ್ತು. ಈಗ ಗುಂಡಿ ತೋಡಿದ್ದಾರೆ


ನಮ್ಮ ಅಮ್ಮ ಸಣ್ಣವರಿರುವಾಗ ಮನೆಮುಂದೆ ಆನೆ, ಹುಲಿ ನೋಡಿದ್ದಾರಂತೆ. ಈಗಲೂ ಕಡವೆ, ಮೊಲ, ಕಾಡುಹಂದಿ, ಕೋತಿಗಳು ಅಂಗಳಕ್ಕೆ ಬಂದು ನಕ್ಕು ಓಡುತ್ತವೆ. ಅಂಥ ಕಾಡುಹಳ್ಳಿಯಿಂದ ಸ್ಕೂಲಿಗೆ ಹೋಗಬೇಕಾದರೆ ಕನಿಷ್ಠ ಏಳು ಕಿ.ಮೀ. ನಡೆಯುತ್ತಿದೆ. ಹೋಗುವಾಗ ಏಳು, ಬರುವಾಗ ಏಳು. ದಿನದಲ್ಲಿ 14 ಕಿ.ಮೀ. ನಡಿಗೆ. ಆಗ ಕಾಲುಗಳು ದಣಿಯುತ್ತಿರಲಿಲ್ಲ. ಸುಸ್ತು ಅನ್ನೋ ಪದವೇ ಗೊತ್ತಿರಲಿಲ್ಲ. ಓಡಾಡಲು ಗಾಡಿ ಬೇಕನಿಸುತ್ತಿರಲಿಲ್ಲ. ಚಿಮಿಣಿ ದೀಪದಡಿ ಓದಿದರೂ ತರಗತಿಯಲ್ಲಿ ಮೊದಲ ಸ್ಥಾನ ಬಿಟ್ಡುಕೊಡುತ್ತಿರಲಿಲ್ಲ. ಪಠ್ಯ-ಪಠ್ಯೇತರ ಎರಡರಲ್ಲೂ ಮೊದಲ ಸ್ಥಾನ ನನ್ನದಾಗಿತ್ತು. ಊರಿಗೆ ಹೋದಾಗ ಎಲ್ಲವೂ ನೆನಪುಗಳು ಕಣ್ಣಂಚಿನಲ್ಲೇ ಸರಿದುಹೋದವು.

ಕರೆಂಟಿಲ್ಲದ ಆ ಊರಿನಲ್ಲಿ, ಅಷ್ಟೊಂದು ದೂರ ನಡೆದು ಓದಿದ್ದೆ. ಅದೇ ದಟ್ಟಕಾಡಿನ ನಡುವಿನ ಮನೆಯಲ್ಲಿ ಅಮ್ಮ ಕಲಿಸಿದ ಬದುಕಿಗೆ ರೆಕ್ಕೆ ಕಟ್ಟಿ ಬೆಂಗಳೂರಿಗೆ ಹಾರಿಬಂದಿದ್ದು. ಈಗ ಊರಿಗೆ ಹೋದರೆ 1 ಕಿ.ಮೀ. ನಡೆಯುವುದೂ ಕಷ್ಟವಾಗುತ್ತಿದೆ. ಬೆಂಗಳೂರಿನಿಂದ ಊರಿಗೆ ಹೋದಾಗ ಅಮ್ಮ ಸಂಜೆ ಚಿಮಿಣಿ ದೀಪ ಹಚ್ಚಿ ಹೇಳುತ್ತಾಳೆ, ಬೆಂಗಳೂರಿನಲ್ಲಿ ಕರೆಂಟು ನೋಡಿ, ಇಲ್ಲಿ ರಾತ್ರಿ ಬೋರ್ ಅನಿಸಬಹುದೆಂದು!

ಒಂದು ಸಲ ಅಮ್ಮ ಹೇಳಿದ್ದಳು: ಮೆಣಸಿನಕಾಯಿ ಗಿಡ ಕೊಡ್ತೀನಿ. ತಕೊಂಡು ಹೋಗಿ ನೆಡು ಎಂದು. ಅಮ್ಮನ ಮಾತು ನನಗೆ ಅಚ್ಚರಿಯಾದರೂ ಅವಳಿಗೆ ಸಹಜ. ನಾನು ಹೇಳಿದೆ: ಬೆಂಗಳೂರಲ್ಲಿ ಮೆಣಸಿನಗಿಡ ಹಾಕೋಕೆ ಜಾಗ ಸಿಗಲ್ಲ ಎಂದು. ಬಳಿಕ ಅಮ್ಮನ ಒಂದು ವಾರದ ಮಟ್ಟಿಗೆ ಬೆಂಗಳೂರಿಗೆ ಕರೆದುಕೊಂಡು ಬಂದೆ. ಒಂದು ವಾರ ನಮ್ಮನೆ ಅವಳಿಗೆ ಬಂಧನ ಅನಿಸಿಬಿಟ್ಟಿತು. ಬರೇ ವಾಹನ, ಕಟ್ಟಡಗಳೇ ಇವೆ. ಅಲ್ಲಿ. ಒಂದೇ ಒಂದು ಹಸಿರು ಗಿಡನೂ ಕಾಣಿಸಲ್ಲ ಅಂದಳು. ಒಂದು ವಾರದ ಬಂಧನದಿಂದ ಕಳಚಿ ವಾಪಸ್ ಊರಿಗೆ ಹೋದವಳು ಊರ ಮಂದಿ ಹೇಳಿದಾಗ, ಅಲ್ಲಿ ಕೃಷಿ, ತೋಟ, ಗದ್ದೆ, ದನಗಳು ಏನೂ ಇಲ್ಲ. ಬರಡು ಭೂಮಿ ಅಂದ್ಳತೆ.

7 comments:

ವಿ.ರಾ.ಹೆ. said...

ಕರೆಂಟಿರ್ಲಿಲ್ವಾ! Really?! Surprising!

ಇದು breaking news!

sunaath said...

ನನ್ನ ಬಾಲ್ಯದಲ್ಲಿ ನಮ್ಮ ಊರಿನಲ್ಲಿಯೂ ಕರಂಟ ಇರಲಿಲ್ಲ. ರಾತ್ರಿ ಹೊತ್ತು ಮನೆಯ ಹೊರಗೆ ಚಿಕ್ಕಿಗಳನ್ನು ನೋಡುತ್ತ ಮಲಗಿಕೊಳ್ಳುತ್ತಿದ್ದೆವು. ಅವು ಸುಖದ ದಿನಗಳು!

ಮೌನರಾಗ said...

ಚಂದದ ಲೇಖನ.....
ಈ ರೀತಿಯ ಅನುಭವಿಲ್ಲದ ನಮಗೆ ಒಂದು ಬಾರಿ ಅನುಭವ ಮಾಡಿ ಕೊಟ್ಟಿರಿ...

ಮನಸು said...

ಆಶ್ಚರ್ಯವಾಗುತ್ತೆ ಇಷ್ಟು ದಿನಗಳ ಕಾಲ ಊರಲ್ಲಿ ಕರೆಂಟ್ ಇಲ್ಲದೆ ಹೇಗಿದ್ದರೋ ಎನಿಸುತ್ತೆ... ಈಗಲಾದರು ಕರೆಂಟ್ ತೋರಿಸುವ ಮನಸು ಮಾಡಿದ್ದರಲ್ಲಾ ಅದೇ ಹೆಚ್ಚು...

ಅಮ್ಮಂದಿರು ಹೊಸ ಜಾಗಕ್ಕೆ ಹೊಂದಿಕೊಳ್ಳೊಕೆ ಕಷ್ಟ..!!

ಜಲನಯನ said...

ಚಿತ್ರಾ ಊರಿಗೆ ಕರೆಂಟ್ ಬಂದ ನೆನೆಪು ನನಗಂತೂ ಇಲ್ಲ ಹಾಗಾಗಿ...ಸ್ವಲ್ಪ ಖುಷಿ ನಿನ್ನ ಊರಿಗಿಂತ ನನ್ನ ಊರು ಮುಂದುವರೆದಿತ್ತು...ಹಹಹಹ್ ಆದ್ರೆ ಓದೋಕೆ ಹೋಗ್ತಿದ್ದ ಮೇಷ್ಟ್ರ ಮನೆಲಿ ಸೀಮೆ ಎಣ್ಣೆ ಬುಡ್ಡಿ....!!!! ಅದ್ರ ಅನುಭವ ಇದೆ..

Ismail M Kutty Shivamogga said...

Good News

ರವಿಕಾಂತ ಗೋರೆ said...

namma oorina nenapaayitu...