Wednesday, November 3, 2010

ಅಕ್ಕ ದೊಡ್ಡವಳಾಗಿದ್ದಳು!


ಅಂದು ಅಕ್ಕ ಇದ್ದಕಿದ್ದಂತೆ ಮನೆಯಿಂದ ಮಾಯವಾಗಿದ್ದಳು. ಅಮ್ಮನಿಗೆ ತುಟಿಯಂಚಿನಲ್ಲಿ ನಗು, ಅಜ್ಜಿ ಊರುಗೋಲು ಹಿಡಿದು ಮನೆಯ ಹಿಂಬದಿಯ ಆ ದಟ್ಟ ಕಾಡಿಗೆ ಹೊರಟಿದ್ದಳು. ಅಕ್ಕ ಆ ಮುಳ್ಳಿನ ಪೊದೆಯೊಳಗೆ ನುಗ್ಗಿ ಕುಳಿತು ಸುಮ್ಮನೆ ಒಬ್ಬಳೇ ಅಳುತ್ತಿದ್ದಳು. ‘ಅಕ್ಕಾ, ಏಕೆ ಅಳ್ತಿಯಾ?’ ಎಂದು ಕೇಳಿದಾಗ ಅಮ್ಮ ಸುಮ್ಮನಾಗುವಂತೆ ನನಗೆ ಗದರಿದ್ದರು. ಮುಂದಿನ ಯೋಚನೆಗಳಿಗೆ ಅವಕಾಶಗಳಿರಲಿಲ್ಲ. ಅಕ್ಕನನ್ನು ಕರೆದುಕೊಂಡು ಬಂದು ಅಂಗಳದಲ್ಲೇ ಕೂರಿಸಿ, ಬಟ್ಟೆ ಬದಲಾಯಿಸಿ ಸ್ನಾನ ಮಾಡಲು ಅಜ್ಜಿಯ ಸುಗ್ರಿವಾಜ್ಞೆ ಹೊರಡಿತ್ತು. ಅಮ್ಮ ನಮ್ಮೂರ ಹೊಳೆ ದಾಟಿ ಆಚೆ ಮನೆಯ ಹೆಂಗಳೆಯರನ್ನು ಕರೆದುಕೊಂಡು ಬಂದಳು. ಅವರೆಲ್ಲರ ನೋಟ ಅಕ್ಕನತ್ತ, ಅಕ್ಕನ ಕಣ್ಣುಗಳಲ್ಲಿ ನಾಚಿಕೆಯ ಕಾಮನಬಿಲ್ಲು.

ಅಕ್ಕ ದೊಡ್ಡವಳಾಗಿದ್ದಳು!!
ಅಂದು ಅಮ್ಮನ ತಲೆಯಲ್ಲಿ ಅಕ್ಕನ ಮದುವೆಯ ಚಿಂತೆ. ವೊನ್ನೆ ವೊನ್ನೆ ತನಕ ನನ್ನನ್ನು ಸ್ಕೂಲಿಗೆ ರೆಡಿ ಮಾಡಿ, ಅವಳೂ ಬ್ಯಾಗ್ ಹೆಗಲೇರಿಸಿಕೊಂಡು ನನ್ನ ಜೊತೆ ಹೆಜ್ಜೆ ಹಾಕುತ್ತಿದ್ದ ಅಕ್ಕನನ್ನು ಮರುದಿನ ಅಮ್ಮ ಶಾಲೆಗೆ ಹೋಗಬೇಡ ಎಂದು ಗದರಿ ಅಂಗಳದಲ್ಲಿ ನಿಲ್ಲಿಸಿದಳು. ಅಮ್ಮನೇ ಅಕ್ಕನಿಗೆ ರಜೆ ಘೋಷಿಸಿಬಿಟ್ಟಿದ್ದಳು! ಹಟ್ಟಿಯ ಪಕ್ಕದಲ್ಲಿರುವ ಪುಟ್ಟ ಕೋಣೆಯೇ ಆಕೆಯ ಮನೆಯಾಗಿತ್ತು. ಅಂದಿನವರೆಗೆ ಸಂಭ್ರಮದ ಬುಗ್ಗೆಯಾಗಿದ್ದ ಅಕ್ಕ ಅವಳನ್ನು ‘ಕೂಡಿ’ ಹಾಕಿದ ಕೋಣೆಯಲ್ಲಿ ಆಕೆ ಒಬ್ಬಂಟಿಯಾಗಿದ್ದಳು. ಅಲ್ಲಿಗೇ ಊಟ, ನೀರು, ಬಟ್ಟೆ ...ಎಲ್ಲವೂ ಅಲ್ಲಿಗೇ ಸರಬರಾಜಾಗುತ್ತಿತ್ತು. ಅವಳನ್ನು ಮುಟ್ಟಬಾರದು ಎಂದು ಅಮ್ಮ ಹೇಳಿದಾಗ ನನಗೆ ಕಣ್ಣಂಚಿನಲ್ಲಿ ನೀರು ಜಿನುಗಿತ್ತು. ಆ ಕೋಣೆಯಲ್ಲಿ ಅಕ್ಕನನ್ನು ‘ಕೂಡಿ’ ಹಾಕಿದಾಗೆ ಭಾಸವಾಗಿತ್ತು. ಅಲ್ಲಿ ಹೋಗಬೇಡ, ಬಾವಿಯಿಂದ ನೀರು ಎತ್ತಬೇಡ, ತೋಟದ ಕಡೆ ಹೋದ್ರೆ ಅಲ್ಲಿ ದೇವರ ಗುಡಿ ಇದೆ, ಮನೆಯ ಜಗುಲಿನೂ ಮುಟ್ಟಬೇಡ, ನೀನು ಊಟ ಮಾಡಿದ ತಟ್ಟೆಯನ್ನು ಬೇರೆನೇ ಇಟ್ಟುಕೋ, ಲಂಗ ಧಾವಣಿ ಬೇಡ, ಸೀರೆ ಉಡಬೇಕು....ಇಂಥ ಉಪದೇಶಗಳಲ್ಲೇ ಅಮ್ಮ ಅಕ್ಕನನ್ನು ‘ಸೀಮಿತ ಪ್ರಜ್ಞೆ’ಗೆ ತಳ್ಳಿಬಿಟ್ಟಿದ್ದಳು.

ಅಕ್ಕನ ಬಿಟ್ಟು ಶಾಲೆಗೆ ಹೋದಾಗ ಮೇಷ್ಟ್ರು, ‘ನಿನ್ನಕ್ಕ ಎಲ್ಲಿ?’ ಎಂದು ಕೇಳಿದಾಗ ಎಲ್ಲರೆದುರು ಜೋರಾಗಿ ಅಕ್ಕ ದೊಡ್ಡವಳಾಗಿದ್ದಾಳೆಂದು ಹೇಳಿಬಿಟ್ಟಿದ್ದೆ. ಮೇಷ್ಟ್ರು ಉದ್ದದ ಕೋಲು ಹಿಡಿದು ಸುಮ್ನಿರೋ ಎಂದು ಗದರಿದ್ದು ಇನ್ನೂ ನೆನಪು. ಸುತ್ತಮುತ್ತಲಿನವರು ಮಗಳು ದೊಡ್ಡವಳಾದಳು, ಇನ್ನು ಮದುವೆಯ ಚಿಂತೆ ಎಂದಾಗ ಅಕ್ಕ ಪ್ರಶ್ನಾರ್ಥವಾಗಿ ನೋಡುತ್ತಿದ್ದಳು. ಅವಳಿಗಿನ್ನೂ ೧೪ ದಾಟಿರಲಿಲ್ಲ. ಇನ್ನೂ ಏಳನೇ ಕ್ಲಾಸು. . ಮಲ್ಲಿಗೆಯ ವೊಗ್ಗಿನಂತೆ ಆಗಷ್ಟೇ ಬಿರಿದ ಅವಳದು ಮದುವೆ-ಬದುಕು-ಬಂಧನ ಇದ್ಯಾವುದನ್ನೂ ಚಿಂತಿಸದ ವಯಸ್ಸು.

ಅಂದು ಅಕ್ಕನನ್ನು ನನ್ನಿಂದ ದೂರ ಇಟ್ಟಿದ್ದು ಅಮ್ಮನ ಮೇಲೆ ಕೆಟ್ಟ ಸಿಟ್ಟು ತರಿಸಿತ್ತು. ಅಮ್ಮ, ಅಜ್ಜಿ ಅದ್ಹೇಕೆ ಹೀಗೆ ಮಾಡಿದ್ರು? ಯಾವುದೂ ಅರ್ಥವಾಗಿರಲಿಲ್ಲ. ಆದರೆ, ಅಕ್ಕನೆತ್ತರಕ್ಕೆ ನಾನೂ ಬೆಳೆದಾಗ ಇದೆಲ್ಲವೂ ನನಗೂ ಅರ್ಥವಾಯಿತು. ಆದರೆ, ಅಕ್ಕನನ್ನು ಕೂಡಿ ಹಾಕಿದ ಕೋಣೆಯಲ್ಲಿ ನನ್ನನ್ನು ಕೂಡಿ ಹಾಕಲಿಲ್ಲ, ಅಕ್ಕನಂತೆ ನನ್ನನ್ನು ಅಮ್ಮನೇನೂ ಗದರಲಿಲ್ಲ. ಅಲ್ಲಿ ಹೋಗಬೇಡ, ಇಲ್ಲಿ ಹೋಗಬೇಡ...ಎಂಬ ಯಾವ ಚೌಕಟ್ಟುಗಳನ್ನು ಅಮ್ಮ ಹಾಕಿರಲಿಲ್ಲ. ಅಮ್ಮನ ತುಟಿಯಂಚಿನಲ್ಲಿ ನಗುವಷ್ಟೇ ಮೂಡಿತ್ತು. ಸಂಪ್ರದಾಯಗಳ ಚೌಕಟ್ಟುಗಳು ಅಂದು ಅರ್ಥ ಕಳೆದುಕೊಂಡಿದ್ದವು! ಇದೆಲ್ಲಾ Uಚುತ್ತಿರುವಾಗ ಪಿ.ಲಂಕೇಶ್ ಅವರ ನೀಲು ಕವಿತೆಯೊಂದು ನೆನಪಾಯಿತು.
ನನಗೆ ಅತ್ಯಂತ
ಸಂಕೋಚದ
ನೆನಪು
ಯಾವುದೆಂದರೆ

ನನ್ನ ಪ್ರೀತಿಯ ತಂದೆಗೆ
‘ಇನ್ನು ನನಗೆ ಸ್ನಾನ ಮಾಡಿಸಬೇಡ’
ಎಂದು ಲಂಗದಿಂದ ಸೀರೆಗೆ ಜಾರಿದ್ದು!!

ಬಹುಶಃ ಈ ಕವನದಲ್ಲಿ ಹೇಳಿದಂತೆ ಹೆಣ್ಣುಮಗಳೊಬ್ಬಳು ‘ಹರೆಯ’ಕ್ಕೆ ಬರುವುದು ಅವಳಿಗೆ ಅತ್ಯಂತ ನಾಚಿಕೆಯ ನೆನಪಾಗಿರಬೇಕು.

9 comments:

PARAANJAPE K.N. said...

ಬೆಳಗ್ಗೆನೇ ಓದಿದೆ, ಚೆನ್ನಾಗಿದೆ.

Umesh Balikai said...

ಚೆನ್ನಾಗಿದೆ :)

ಸೀತಾರಾಮ. ಕೆ. / SITARAM.K said...

ಹೆಣ್ಣಿನ ಪ್ರೌಡತೆಯ ಘಟ್ಟದಲ್ಲಿ ಸಂಪ್ರದಾಯದ ನೆರಳನ್ನು ಹಾಗೂ ಮೌಡ್ಯದ ಆಚರಣೆಗಳನ್ನು ನೆನಪಿನ ಮೂಸೆಯಿಂದ ಸುಂದರವಾಗಿ ಅನಾವರಣ ಮಾಡಿದ್ದಿರಿ..ಹಾಗೆ ಆಚರಣೆಗಳು ಕಾಲದೊಂದಿಗೆ ನೆಪಥ್ಯಕ್ಕು ಸರಿದದ್ದನ್ನು ಹೇಳಿದ್ದಿರಾ..
ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಚೆನ್ನಾಗಿದೆ.

balasubramanya said...

ಲೇಖನ ಚೆನ್ನಾಗಿದೆ.ಹೆಣ್ಣಿನ ಪ್ರೌಡತೆಯ ಘಟ್ಟದ ಅನಾವರಣ ಚೆನ್ನಾಗಿ ಮೂಡಿಬಂದಿದೆ.

umesh desai said...

ಧರಿತ್ರಿ ಎಂದಿನಂತೆ ಚೆಂದದ ಬರಹ ಸೊಗಸಾಗಿದೆ

ಸುಧೇಶ್ ಶೆಟ್ಟಿ said...

naviraadha baraha endhinanthe :)

venkat.bhats said...

ನಿಮ್ಮ ಬರಹಗಳು ತುಂಬಾ ಇಷ್ಟವಾಯ್ತು, ಬರೀತಾ ಇರಿ

ಶಿವಪ್ರಕಾಶ್ said...

Wow... Excellent writeup... :)