
ಇಂದು ಮಳೆ ಬರುತ್ತಿದೆ. ಈ ಮಳೆನೇ ಹಾಗೇ, ಒಂದೊಂದು ಸಲ ಭಾವಕ್ಕೂ ಭಾಷೆ ಕೊಡೋದು, ಭಾಷೆಗೂ ಮಾತು ಕಲಿಸೋದು. ನೀನಿಲ್ಲದ ಹೊತ್ತಲ್ಲಿ ನಿನಗೆ ಚೆಂದದ ಪತ್ರ ಬರೀಬೇಕು ಅನಿಸಿತ್ತು. ಆದ್ರೂ, ನನ್ನೆಲ್ಲಾ ಭಾವಗಳನ್ನು ಒಟ್ಟಿಗೇ ಹರವಿದ್ರೂ ಯಾಕೋ ಬರೆಯಲಾಗುತ್ತಿಲ್ಲ. ಕಿಟಕಿಯಾಚೆ ನೋಡಿದರೆ ಅಲ್ಲಿ ತುಂತುರು ಹನಿಗಳು ಕಲರವ. ಸಣ್ಣವಳಿರುವಾಗ ಅಮ್ಮನ ಮನೆಯಲ್ಲಿ ಇದೇ ಮೊದಲ ಮಳೆಗೆ ಅಂಗಳಕ್ಕಿಳಿದು ಆಲಿಕಲ್ಲು ಹೆಕ್ಕಿ, ಜಾರಿ ಬಿದ್ದಿದ್ದು ಎಲ್ಲಾ ನೆನೆಪುಗಳು ಧಕ್ಕೆಂದು ಮನದ ಪರದೆಯಲ್ಲಿ ಮೂಡಿಬಿಟ್ಟವು. ಒಂದೆಡೆ ನಿನ್ನ ಆಗಮನದ ನಿರೀಕ್ಷೆ, ಮೊದಲ ಮಳೆಗೆ ಇಳೆ ಪುಳಕಗೊಂಡಂತೆ ನಿನ್ನ ಆಗಮನದ ನಿರೀಕ್ಚೆಯಲ್ಲಿ ಮನ ಸಂಭ್ರಮಿಸುತ್ತಿತ್ತು. ಭಾವಗಳು ಹೀಗೇನಾ? ನೆನಪಿನ ಚಿತ್ರಗಳ ಜೊತೆ-ಜೊತೆಗೆ ಅದೇನೋ ಚಡಪಡಿಕೆ, ಕುತೂಹಲ, ಅವ್ಯಕ್ತವಾದ ಆನಂದ, ಹಂಬಲಗಳ ತಾಕಲಾಟ. ನಿನಗೂ ಹಾಗೇ ಅನಿಸುತ್ತಾ ಹೇಳು?
ನನ್ನೆಲ್ಲಾ ಬದುಕಿನ ಭಾವಗಳನ್ನು ಹೆಕ್ಕಿ ನೋಡಿದಾಗಲೂ ಅಷ್ಟೇ, ಅವುಗಳಿಗೆ ನೀನೇ ಜೀವ, ನೀನೇ ಹುರುಪು-ಉತ್ಸಾಹ. ಅಲ್ಲೆಲ್ಲಾ ನೀನೇ ಕಾಣ್ತಿದ್ದೀಯಾ. ಮಾತು-ಮೌನ ಎಲ್ಲವುಗಳಿಗೆ ಭಾಷೆ ಕೊಟ್ಟೋನು ನೀನೇ ಕಣೋ. ಪ್ರೀತಿಯ ನಾವೆಯಲ್ಲಿ ನನ್ನ ಬದುಕಿನ ಅಸ್ತಿತ್ವವನ್ನು ಕಣ್ಣುರೆಪ್ಪೆಯಲ್ಲಿಟ್ಟುಕೊಂಡು ಸಾಕಿದ್ದೀಯಾ. ನಿನ್ನೆಲ್ಲಾ ಸಿಟ್ಟು, ಕೋಪ-ತಾಪಗಳನ್ನು ನನ್ನೆದುರು ಹೊರಹಾಕಿ, ನನ್ನೆದೆಯಲ್ಲಿ ಉಸಿರಾಗಿಬಿಟ್ಟಿದ್ದಿಯಾ. ನನ್ನೆಲ್ಲಾ ದುಗುಡ-ದುಮ್ಮಾನಗಳನ್ನು, ನಗು-ನಲಿವುಗಳನ್ನು ನಿನ್ನೆದುರು ಹರವಿ ಹೆಕ್ಕಿಕೋ ಎಂದಾಗ ಹಾಗೆ ಎಲ್ಲವನ್ನೂ ಹೆಕ್ಕಿಕೊಂಡಿದ್ದೆ ನೋಡು. ಅದೇ ಕಣೋ ಪ್ರೀತಿ. ಬೀಸೋ ಮಳೆ ಗಾಳಿಯನ್ನೂ ಲೆಕ್ಕಿಸದೆ, ವರ್ಷದ ಆಗಮನಕ್ಕೆ ಕಾಯುವ ಬರಡು ರೈತನಂತೆ ನೀನು ನನಗಾಗಿ ಕಾಯುತ್ತಿದ್ದೆ ನೋಡು, ನಾನೆಷ್ಟು ಹೆಮ್ಮೆ ಪಟ್ಟಿದ್ದೆ ಗೊತ್ತಾ?
ನನ್ನಲ್ಲಿ ಮುನಿಸಿಕೊಂಡು ಆ ಪುಟ್ಟ ಕೆರೆಯ ನಿಶ್ಚಲ ನೀರ ಮೇಲೆ ಕಲ್ಲುಗಳನ್ನು ಹೆಕ್ಕಿ ಬಿಸಾಡಿದಾಗಲೂ ಆ ಕಲ್ಲುಗಳು ಉಲಿದಿದ್ದು ನನ್ನ ಹೆಸರನ್ನೇ. ನೋವು-ನಲಿವು, ಸುತ್ತಲಿನ ಸತ್ಯ-ಮಿಥ್ಯ ಎಲ್ಲವನ್ನೂ ಪ್ರೀತಿಸೋಕೆ ಕಲಿಸಿ, ನನ್ನೊಳಗೊಂದು ಸಂಭ್ರಮದ ಬದುಕು ಕಟ್ಟಿ, ಕುಂಚ ಹಿಡಿದು ನಿಂತ ನನ್ನನ್ನು ನಿನ್ನೆದೆಯಲ್ಲಿ ಸ್ವಾತಿ ಮುತ್ತಾಗಿಸಿದವನು ನೀನೇ ಕಣೋ. ನನ್ನ ಮೌನದ ಪ್ರೀತಿ ಭಾಷೆಗೆ ಮಾತಾಗಿ, ಬದುಕು ಭವಿಷ್ಯದ ಚಿತ್ತಾರ ಬರೆದವನೂ ನೀನೇ. ನಿನ್ನ ಹುಸಿಮುನಿಸು, ನೀ ನಿತ್ಯ ಕುಟ್ಟುವ ಕೀ ಬೋರ್ಡಿನ ಸಂದಿನಲ್ಲಿ, ದಿನಕ್ಕೆ ನಾಲ್ಕು ಬಾರಿ ಸೇದುವ ಎರಡು ಸಿಗರೇಟು, ಅದರಿಂದ ಹೊರಬರುವ ದಟ್ಟ ಹೊಗೆ, ನೀನು ಕುಳಿತಿರುವ ಆ ಸುಂದರ ಕೋಣೆಯ ಕಿಟಕಿ ಮೂಲಕ ಹೊರಬರುವ ತಂಗಾಳಿ, ನಿನ್ನ ಎಲ್ಲಾ ಕಡೆಯೂ ನಾನಿದ್ದೀನಿ. ಆದರೆ, ನಿನ್ನ ಆಫೀಸ್ ನಲ್ಲಿ ನಿನ್ನ ಸೀಟಿನ ಪಕ್ಕ ಕುಳಿತಿರುವ ಆ ಕಪ್ಪು ಸುಂದರಿಯ ಎದೆಬಡಿತದಲ್ಲಿ ಮಾತ್ರ ನಾನಿರಲ್ಲ, ನಿನ್ನಾಣೆಗೂ!
***ಚಿತ್ರಾ ಸಂತೋಷ್
(ಹೊಸದಿಗಂತ ಪತ್ರಿಕೆಯ ನನ್ನ ವಾರದ ಕಾಲಂ 'ಭಾವಬಿಂದು'ನಲ್ಲಿ ಪ್ರಕಟ
http://hosadigantha.in/epaper.php?date=04-22-2010&name=04-22-2010-13
8 comments:
ಹಹಹ ಚೆನ್ನಾಗಿದೆ, ಬೇಡ ಆ ಆಫೀಸಿನ ಕಪ್ಪುಹುಡುಗಿಯ ಭಾವನೆಯಲ್ಲಾಗಲಿ ಹೃದಯಬಡಿತದಲ್ಲಾಗಲಿ ನೀ ಇರುವುದು ಬೇಡ... ನಿನ್ನವರ ಹೃದಯಾಳದಲ್ಲಿರು...ಸದಾ ನಿನ್ನ ಪ್ರೀತಿ ಹಸಿರಾಗಿರಲಿ...ತುಂಬಾ ಚೆಂದದ ಬರಹ
ಹೊಸದಿಗ೦ತದಲ್ಲಿ ಬೆಳಗ್ಗೆನೇ ಓದಿದೆ, ಚೆನ್ನಾಗಿದೆ.
ಆಹಾ, ಮದುವೆಯ ನಂತರದ ಹುಸಿ ಮುನಿಸು, ಬೆಡಗು, ವೈಯಾರ ಎಲ್ಲ ಚೆನ್ನಾಗಿವೆ.
Chennaagide...
ಧರಿತ್ರಿ
ತುಂಬಾ ಚಂದದ ಬರಹ
ಹೊಸ ದಿಗಂತದಲ್ಲಿ ಬಂದಿದೆ ಅಲ್ವಾ
ಚೆ೦ದದ ಭಾವಾಭಿವ್ಯಕ್ತಿ ಕೊನೆಗೆ೦ದು ಸಣ್ಣ ಪ೦ಚ್. ಚೆನ್ನಾಗಿದೆ ಲೇಖನ ಚಿತ್ರಾರವರೇ. ನಮ್ಮ ಬ್ಲೊಗ್-ಗೂ ಭೇಟಿ ನೀಡಿ.
abba! yeshtondu bhaavagaLu!
super agide. "ಅಮ್ಮನ ಮನೆಯಲ್ಲಿ" bavane bere ayitalla?!!!!!!!!!
danyari,
Mohan Hegade
Post a Comment