Monday, July 27, 2009

ಜೀವನಪ್ರೀತಿಗೆ ಪರಿಧಿಯ ಹಂಗೇಕೆ?

ಜೀವನ ಪ್ರೀತಿಯ ಅನುಭೂತಿ ...!

ಯಾಕೋ ಇದ್ದಕಿದ್ದಂತೆ ಮತ್ತೆ ಮತ್ತೆ ಕಾಡೋ ನನ್ನೋಳಗಿನ ಇಬ್ಬನಿ ಹನಿಯಿದು. ತುಂಬಾ ಸಲ ಜೀವನ ಪ್ರೀತಿಯ ಅನುಭೂತಿಯೇ? ಅನ್ನೋ ಅನುಮಾನದ ಪ್ರಶ್ನೆ ನನ್ನೊಳಗೆ ಕಾಡಿದ್ದರೂ, ಹೌದು, ಈ ಬದುಕು ಪ್ರೀತಿಯ ಅನುಭೂತಿ ಅನ್ನುತ್ತಿದ್ದೆ ನನ್ನ ಆತ್ಮಸಾಕ್ಷಿ. ಒಂದು ಕ್ಷಣ ಕಣ್ಣಂಚು ಒದ್ದೆಯಾದರೂ, ನೋವು-ನಲಿವಿನ ಗೆರೆಗಳು ಕಣ್ಣಂಚಿನಲ್ಲಿ ಸರಿದು ಹೋದರೂ 'ಜೀವನವೇ ಪ್ರೀತಿಯ ಅನುಭೂತಿ' ಎಂದನಿಸುತ್ತೆ. ಹೌದು, ಈ ಜಗತ್ತು, ಈ ಜನ್ರು, ಈ ಪ್ರಕೃತಿ, ಈ ಪ್ರಾಣಿ ಪ್ರಪಂಚ, ಈ ಸರ್ವ ಜೀವಸಂಕುಲವನ್ನು ಕಲಿಯೋಕೆ, ತಿಳಿಯೋಕೆ ಅದೆಷ್ಟೋ ವರುಷಗಳು ಸರಿದಿವೆ. ಅಮ್ಮನ ಎದೆಹಾಲಿನ ಹಠ ಬಿಟ್ಟು ಅದೆಷ್ಟು ವರುಷ ಸರಿದಿದೆ ಅಲ್ವಾ?

ಅಲ್ಲಿಂದ ಇಲ್ಲಿತನಕ ಜೀವನವನ್ನು ಪ್ರೀತಿಸುತ್ತಾ, ನನ್ನಂತೆ ಇತರರು ಅನ್ನುತ್ತಾ, ಆತ್ಮಸಾಕ್ಷಿಯ ಮಾತಿಗೆ ತಲೆದೂಗುತ್ತಾ ಬಂದಿರೋವರಿಗೆ ಜೀವನದಲ್ಲಿ ಪ್ರೀತಿಯ ಅನುಭೂತಿ ಪಡೆಯೋದೇ ಒಂದು ಅದೃಷ್ಟ ಅನ್ನಬೇಕು. ಮೊನ್ನೆ ಮೊನ್ನೆ ನನ್ನ ಪ್ರೀತಿಯ ಗೆಳೆಯ ಚೆಂದದ ಸಾಲೊಂದು ಬರೆದುಕೊಡು ಎಂದಾಗ ನಂಗೆ ಥಟ್ಟನೆ ಹೊಳೆದ ವಾಕ್ಯ: ಜೀವನ ಪ್ರೀತಿಯ ಅನುಭೂತಿ!

ನಿಮಗೂ ಹಾಗೇ ಅನಿಸಲ್ವಾ ಹೇಳಿ? ಮನುಷ್ಯನಿಗೆ ಏಳೇಳು ಜನ್ಮವಿರುತ್ತೆ ಅಂಥ ನಮ್ಮಜ್ಜಿ ಹೇಳಿದ ನೆನಪು. ಹೌದು, ಅದಕ್ಕೆ ಮಾನವ ಜನ್ಮ ದೊಡ್ಡದು, ಅದನ್ನು ಹಾಳು ಮಾಡಿ ಕೊಳ್ಲದಿರಿ ಹುಚ್ಚಪ್ಪಗಳಿರಾ! ಎಂದು ಹಾಡಿದ್ದಿರಬೇಕು ದಾಸರು. ಹುಲ್ಲು, ಪೊದೆ, ಪ್ರಾಣಿಗಳಾಗಿ ಹುಟ್ಟುವ ಬದಲು ಮನುಷ್ಯನಾಗಿ ಹುಟ್ಟೋದೇ ಲೇಸು ಅಂತಾರೆ ಹಿರಿಯರು.

ಹುಟ್ಟಿದ ಮೇಲೆ, ಹುಟ್ಟಿ ಬೆಳೆದ ಮೇಲೆ ಇದೆಲ್ಲಾ ನೆನೆಪಾಗುತ್ತೆ ಕಣ್ರೀ. ಹೌದು, ನಾನೂ ಹುಟ್ಟಿದ್ದೇನೆ..ಮನುಷ್ಯಳಾಗಿ! ಒಂದಿಷ್ಟು ಭಾವನೆಗಳು, ಒಂದಿಷ್ಟು ಪ್ರಿತಿ, ಒಳ್ಳೆಯದೆನಿಸುವ ಜೀವನ, ಹೃದಯದಲ್ಲಿ ಒಂದಿಷ್ಟು ಕನಸು, ಅಮ್ಮನ ಮಮತೆ, ವಾತ್ಸಲ್ಯ, ಎಲ್ಲನೂ ದೇವ್ರು ಕೊಟ್ಟಿದ್ದಾನೆ. ಹಸಿವ ಹೊಟ್ಟೆಗೆ, ಉಡೋ ಬಟ್ಟೆಗೆ, ಬಸ್ಸಿಗೆ ಓಡಾಡೋಕೆ, ಅಮ್ಮನ ಕನಸಿಗೆ ಜೀವ ತುಂಬೋಕೆ: ಕೈಗೊಂದು ಪುಟ್ಟ ಕೆಲಸ! ಆಸರೆಗೆ ಪುಟ್ಟದೊಂದು 'ಮನೆ', ಅದೇ ನನ್ನ ಪಾಲಿನ 'ಅರಮನೆ'. ಅಕ್ಷರಗಳಿಗೆ ಜೀವ ತುಂಬೋಕೆ ಒಂದಿಷ್ಟು ಸುಂದರ ಭಾವನೆಗಳು, ನನ್ನಂತೆ ಪರರೂ ಎನ್ನೋ ಪುಟ್ಟದಾದ ಮನಸ್ಸು, ಇತತರ ನೋವು-ನಲಿವಿಗೆ ಸ್ಪಂದಿಸುವ ಹೃದಯ..ಸಾಕಲ್ವೇ? ಬದುಕನ್ನು ಪ್ರೀತಿಸೋಕೆ!

ನಿನ್ನೆ ಸುನಂದಾ ಬೆಳಗಾಂವಕರ ಅವರ, 'ಕೊಡುವುದೇನು, ಕೊಂಬುದೇನು?' ಪುಸ್ತಕ ಓದುತ್ತಿದ್ದೆ. ಅವರೊಂದು ಕಡೆ ಹೇಳುತ್ತಾರೆ, "'ದೇವರು ಈ ಜೀವನವನ್ನು ಪ್ರೀತಿಸುವುದಕ್ಕೆಂದೇ ಕೊಟ್ಟಿದ್ದಾನೆ, ದ್ವೇಷಿಸುವುದಕ್ಕಲ್ಲ. ಪ್ರೀತಿ, ದ್ವೇಷ ಬೆಳಕು ನೆಳಲಿನ ಆಟ. ದ್ವೇಷಿಸುತ್ತಾ ಬದುಕುವುದು ಒಂದು ಶಾಪ. ಪ್ರೀತಿಸುತ್ತಾ ಬದುಕುವುದು ಒಂದು ವರ"!

ಬಹುಶಃ ಈ ಪುಟ್ಟ ಲೇಖನಕ್ಕೆ ಸ್ಫೂರ್ತಿ ಕೂಡ ಇದೇ ಸತ್ವಯುತವಾದ ಶಬ್ಧಗಳಿರಬಹುದು. ಜೀವನಪ್ರೀತಿಗೆ ಪರಿಧಿ ಬೇಡ, ಅದು ಶರಧಿಯಂತೆ ಪ್ರವಹಿಸಲಿ. ಪ್ರೀತಿಗೆ ಹಂಗು ಬೇಡ..ನಮ್ಮ ಬದುಕನ್ನೇ ಪ್ರೀತಿಸಿ ಬಿಡೋಣ. ಅಲ್ಲಿ ಅನನ್ಯತೆಯಿದೆ, ಪ್ರಾಮಾಣಿಕತೆ ಇದೆ, ನಿಷ್ಕಲ್ಲಶ ಭಾವನೆಯಿದೆ. ಮತ್ತೇನು ಬೇಕು? ಒಂಬತ್ತು ತಿಂಗಳು ಹೊತ್ತು, ಹೆತ್ತು, ಸಲಹಿ, 'ನಾವೀಗ ದೊಡ್ಡವರಾಗಿದ್ದೇವೆ' ಅನ್ನೋದನ್ನು ಹೇಳಿಕೊಳ್ಳುವಂತೆ ಮಾಡಿರುವ 'ಅಮ್ಮನೆಂಬ ದೇವರು' ನೀಡಿದ ಈ ಅಮೂಲ್ಯ ಬದುಕಿಗೆ?

15 comments:

SSK said...

ಧರಿತ್ರಿ ಅವರೇ,
ಜೀವನದ ಬಗ್ಗೆ ತುಂಬಾ ಒಳ್ಳೆ ವ್ಯಾಖ್ಯಾನವನ್ನು ಹೇಳಿದ್ದೀರಿ!
ಇಂತಹ ಭಾವನೆಗಳಿಗೆ ಅನುಭವ ಮತ್ತು ಅನುಭೂತಿಗಳೇ ಸಾಕ್ಷಿ.
ಅಮೂಲ್ಯವಾದ ಈ ಲೇಖನಕ್ಕೆ ನನ್ನ ಧನ್ಯವಾದಗಳು.

Naveen...ಹಳ್ಳಿ ಹುಡುಗ said...

ದರಿತ್ರಿಯವರೆ ಲೇಖನ ಅರ್ಥ + ಭಾವ ಪೂರ್ಣವಾಗಿದೆ.

umesh desai said...

ಧರಿತ್ರಿ ಒಳ್ಳೇ ಲೇಖನ ಜೀವನ ಪ್ರೀತಿ ಇರಲೇಬೇಕು ಇಲ್ಲವಾದರೆ ಬದುಕುವುದು ಹೇಗೆ ?ನಿಜವೇ ಅಂಗಾಂಗಳೆಲ್ಲ ಇದ್ದು
ಮಿಡಿಯುವ ಮನಸ್ಸೂ ಇದ್ದು ಕೆಲಜನ ಕೇವಲ ಪರೀಕ್ಷೆ ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ತಾರೆ ಅವರಿಗೆ ಧಿಕ್ಕಾರ ಇರಲಿ
" ಜಗದ ತೋಟದಲ್ಲಿ ಹೂವಿನಷ್ಟೇ ಮುಳ್ಳು ಇವೆ ಬೊಗಸೆಯಲ್ಲಿ ಬೀಳಬಹುದು ನೀ ಕೈ ಚಾಚಬೇಕಷ್ಟೇ....."

ಸುಧೇಶ್ ಶೆಟ್ಟಿ said...

chennagide dharithri avare....

"anubhuthi" emba padavannu bahala baari balasiddu thumba hidisithu nodi :):)

Chevar said...

ಬರಹದ ಕೊನೆಯ ಸಾಲು " ಒಂಬತ್ತು ತಿಂಗಳು ಹೊತ್ತು, ಹೆತ್ತು, ಸಲಹಿ, 'ನಾವೀಗ ದೊಡ್ಡವರಾಗಿದ್ದೇವೆ' ಅನ್ನೋದನ್ನು ಹೇಳಿಕೊಳ್ಳುವಂತೆ ಮಾಡಿರುವ 'ಅಮ್ಮನೆಂಬ ದೇವರು' ನೀಡಿದ ಈ ಅಮೂಲ್ಯ ಬದುಕಿಗೆ?" ಇದರ ಅರ್ಥ ಇನ್ನೂ ತಿಳಿಯುತ್ತಿಲ್ಲ. ಉಳಿದಂತೆ ಎಲ್ಲವೂ wonderful.

ರವಿರಾಜ್ ಆರ್.ಗಲಗಲಿ said...

uttama lekhana

ಜಲನಯನ said...

ಎಲ್ಲಿ ಭೂರಮೆ ದೇವ ಸನ್ನಿಧಿ ಅರಸಿ ಬಿಮ್ಮನೆ ಬಂದಳೋ....
ಈ ಸಾಲುಗಳು ನಮ್ಮ ಕನ್ನಡ ಪಠ್ಯದ ಪದ್ಯಭಾಗದ ಉತ್ತಮ ಪದ್ಯಗಳಲ್ಲೊಂದರದು.
ಅದೇ,,ಅಂದ್ಕೋತಿದ್ದೆ...ಎಲ್ಲಿ ಗ್ರಹಣಗಳ ಗಹನತೆಗೆ ಹೋದಳೋ ಧರಿತ್ರಿ ಎಂದು...??
ಎಂತಹ ಆಳದ ಭಾವನೆಗಳ ಮಂಥನ...ಇಡೀ ಜೀವನವನ್ನೇ ತೇಯ್ದವರಂತೆ ಪುಟಿದಿವೆ ನಿಮ್ಮ ಮಾತುಗಳು...
ಪ್ರೀತಿಗೆ ಹಂಗು ಬೇಡ- ಹೌದು ನಿಜವಾದ ಮಾತು. ಹಂಗಿನ ನೆರಳು ಸೋಕಿದರೂ...ಅಸಹನೆ, ಅಹಂ ತಲೆಯೆತ್ವೆ ಅಲ್ವಾ..?
..........ಛೇ...ಬಿಡೀಪ್ಪಾ..ಇದನ್ನೆಲ್ಲ..ನೀವೇ ಹೇಳಿಲ್ವೇ...ಮಾನವ ಜನ್ಮ ದೊಡ್ದದು... ಹುಚ್ಚಪ್ಪಗಳಾಗೋದು ಬೇಡ......

kanaadaraaghava said...

Dharitriyavara jeevana preeti, sanna paridhiya dodda shardhi. sharadhi ukkali, praangana baridaagadirali.... nirantara..

Vigneshwar said...

ishtawaythu :) omme nanna chikka bloganu nodthira plz :)
http://chikadondhuaase.blogspot.com

ಕನಸು said...

ಹಾಯ್ ,
ಜೀವನ ಅಂದ್ರೆ ಜೀವನ ನಿಮ್ಮ ಲೇಖನ ತುಂಭಾ ಅದ್ಬುತ್

ಶರಶ್ಚಂದ್ರ ಕಲ್ಮನೆ said...

ಧರಿತ್ರಿ ಅವರೇ,
ಲೇಖನ ಭಾವಪೂರ್ಣವಾಗಿದೆ. ನಿಮ್ಮಂತೆ ಜೀವನ ಪ್ರೀತಿ ಎಲ್ಲರಲ್ಲೂ ಉಕ್ಕಲಿ... ಪ್ರವಹಿಸಲಿ. ಚಂದದ ಬರಹ..

ರವಿಕಾಂತ ಗೋರೆ said...

ಜೀವನ ಪ್ರೀತಿ...... ವಾಹ್..ಚೆನ್ನಾಗಿದೆ.. ಹೀಗೆ ಬರೆಯುತ್ತಿರಿ

PRAKRIthi said...

ಜೀವನ ಹಾಗೂ ಪ್ರೀತಿ ಈ ಎರಡೂ ವಿಷಯಗಳ ಕುರಿಥಾಗಿ ತುಂಬಾ ಚಿಂತನೆ ಮಾಡಿದ್ದೇನೆ. ನಿಮ್ಮ ಭಾವನಾತ್ಮಕ ಅಭಿಪ್ರಾಯಗಳೆಲ್ಲವು ಸರಿ ಅನ್ನಿಸುತ್ತೆ. ಆದರೆ ನಿಮ್ಮ article ನ theme ಕುರಿತಾಗಿ ಒಂದೆರಡು ಸಾಲಿನ ಉತ್ತರ ನೀಡಿದಲ್ಲಿ ತುಮ್ಬಾ ಸಂತಸ ಪಡುತ್ತೆನೆ...
ಪ್ರಕೄತಿ

Prabhuraj Moogi said...

ಜೀವನದ ಮೇಲೆ ಪ್ರೀತಿ ಇಲ್ಲದಿದ್ರೆ ಅದು ನೀರಸ ಬದುಕಾಗುತ್ತದೆ, ಜೀವನವನ್ನೇ ಪ್ರೀತಿಸುವಷ್ಟು ಅದು ಸುಂದರವಾಗಿರುವುದಿಲ್ಲವಾದರೂ, ಹೇಗಿದ್ದರೇನು ಅದು ನಮ್ಮ ಜೀವನವೇ ಅಲ್ವಾ ಅಂತಾದ್ರೂ ಪ್ರೀತಿ ಬಂದ್ರೆ ಒಳ್ಳೇದು...

ಸಾಗರದಾಚೆಯ ಇಂಚರ said...

ಧರಿತ್ರಿಯವರೇ,
ಬರೋಕೆ ತಡವಾಯ್ತು, ಕ್ಷಮೆ ಇರಲಿ
ತುಂಬಾ ಒಳ್ಳೆಯ ಬರಹ ಎಂದಿನಂತೆ, ಶಬ್ದಗಳಲ್ಲಿ ಬಂಧಿಸ್ದಿರ