Monday, June 29, 2009

ಅದ್ಯಾಕೋ ಅಕ್ಷರಗಳು ಖಾಲಿ ಪುಟದಲಿ ಮೂಡಲಿಲ್ಲ..!

ನಾನ್ಯಾಕೆ ಬರೆಯುತ್ತೇನೆ? ಅದೇ ನನ್ನ ಖುಷಿಗೆ, ನನ್ನ ಬರಹದ ತುಡಿತವನ್ನು ಇಲ್ಲಿ ಹಂಚಿಕೊಳ್ಳೋದಕ್ಕೆ. ನನ್ನೊಳಗಿನ ಪುಟ್ಟ ಪುಟ್ಟ ಖುಷಿಯ ಕ್ಷಣಗಳನ್ನು ನಿಮ್ಮ ಜೊತೆ ಹಂಚಿಕೊಳ್ಳೋದಕ್ಕೆ. ಮನದ ಮೂಲೆಯಲ್ಲಿದ್ದ ದುಗುಡ-ದುಮ್ಮಾನಗಳನ್ನು ನಿಮ್ಮ ಜೊತೆ ಹಂಚಿಕೊಂಡು ಮನಸ್ಸು ತಿಳಿಯಾಗಿಸೋದಕ್ಕೆ. ನನ್ನೊಳಗಿನ ಕನಸುಗಳನ್ನು ನಿಮ್ಮ ಜೊತೆ ಹಂಚಿ, ವಿಶ್ ಪಡೆಯೋದಕ್ಕೆ. ಹೌದು. ಹೇಳಲಾಗದ ಮಾತು, ಬಚ್ಚಿಡಲಾಗದ ಭಾವನೆಗಳನ್ನು ಇಲ್ಲಿ ಬಿಚ್ಚಿಡೋದಕ್ಕೆ. ಜಗತ್ತಿನ ಸತ್ಯ-ಮಿಥ್ಯಗಳನ್ನು ಕಂಡು ಕಂಗಳು ನೀರಾದಾಗ ಮನಸ್ಸು ಶುಭ್ರಗೊಳಿಸೋದಕ್ಕೆ ನಾ ಬರೆಯುತ್ತೇನೆ. ಜೀವನ ಪ್ರೀತಿಯಲ್ಲಿ ಮಿಂದು ಮನಸ್ಸು ಖುಷಿಗೊಂಡಾಗ 'ಬದುಕೆಷ್ಟು ಸುಂದರ' ಅಂತ ಖುಷಿಯಿಂದ ಬರೆದುಬಿಡ್ತೀನಿ. ಅದೇ ಇರೋ ಜೀವನದಲ್ಲಿ ಪುಟ್ಟ ಕಷ್ಟಗಳನ್ನೇ ಸಹಿಸಿಕೊಳ್ಳಲಾಗದೆ ಹೃದಯ ಭಾರವಾದಾಗ ಮತ್ತದೇ ಬೇಸರ..ಅದೇ ಹಾಡು..ಅನ್ನೋಕೂ ಈ ಅಕ್ಷರಲೋಕವೇ ಸಾಥ್ ನೀಡೋದು.

ತುಂಬಾ ದಿನಗಳಾಯ್ತು...ಏನೂ ಬರೆಯಕ್ಕಾಗ್ತಿಲ್ಲ. ..ಬರೆಯಲಿಲ್ಲ. ಒಂದಷ್ಟು ಕೆಲಸ ಹೆಗಲ ಮೇಲೆ ಬಿದ್ದಾಗ, ಒಂದಷ್ಟು ಹೊತ್ತು ವ್ಯರ್ಥ ಮಾತುಗಳಲ್ಲಿ ಕಳೆದುಹೋದಾಗ, ಮನೆಯ ಚಿಂತೆ ಕಾಡತೊಡಗಿದಾಗ..ಏನೋ ಒಂಥರಾ ಮನಸ್ಸು ಗೊಂದಲಗಳಲ್ಲಿ ಸಿಕ್ಕಾಗ ಬರೆಯಲು ಕುಳೀತರೂ ಬರೆಯಲಕ್ಕಾಗುತ್ತಿಲ್ಲ. ನನ್ನೊಳಗಿನ ಮಾತುಗಳಿಗೆ ಈ ಬ್ಲಾಗ್ ವೇದಿಕೆ ಅಂದ್ರೂ ಆಗ್ತಿಲ್ಲ. ತುಂಬಾ ನನ್ನನ್ನು ನಾನೇ ಬೈದುಕೊಂಡಿದ್ದೆ. ಹೀಯಾಳಿಸಿಕೊಂಡಿದ್ದೆ. ಖಾಲಿ ಪುಟಗಳನ್ನು ರಾಶಿ ಹಾಕೊಂಡು ಏಕಾಂಗಿಯಾಗಿ ಪೆನ್ನು ಹಿಡಿದು ಕುಳಿತರೂ ಕೈಗಳಲ್ಲಿ ಅಕ್ಷರಗಳು ಮೂಡುತ್ತಿಲ್ಲ, ಭಾವನೆಗಳು ಮಾತಾಡುತ್ತವೆ. ಕಣ್ಣುಗಳು ಮಾತಾಡುತ್ತವೆ, ಮೌನಗಳೂ ಮಾತಾಡುತ್ತವೆ. ಕಿವಿ ಇಂಪಾದ ಹಾಡುಗಳತ್ತ ತುಡಿಯುತ್ತದೆ. ಹೃದಯ ಜೀವನಪ್ರೀತಿಯ ಹುಡುಕಾಟದಲ್ಲಿ ಕಳೆಯುತ್ತೆ. ಮನಸ್ಸು ಮಣ್ಣುಗೂಡಿದ ಪ್ರೀತಿಯನ್ನು ನೆನೆಯುತ್ತೆ. ಆದರೆ ಅಕ್ಷರಗಳು ಖಾಲಿ ಪುಟದ ಮೇಲೆ ಬೀಳುತ್ತಿಲ್ಲ. ಕೈಯಲ್ಲಿರುವ ಪೆನ್ನು ಖಾಲಿ ಪುಟದ ಮೇಲೆ ಬಿಂದುವನ್ನಷ್ಟೇ ಇಟ್ಟು ಸುಮ್ಮನಿದ್ದೆ.

ಏನೇನೋ ಯೋಚನೆಗಳು..ಅಮೂರ್ತ ಕಲ್ಪನೆಗಳು. ಸತ್ಯ, ಪ್ರಾಮಾಣಿಕತೆ, ನಿಷ್ಕಲ್ಮಶ ಪ್ರೀತಿ ಯಾಕೋ ಢಾಳಾಗಿ ಕಾಣುತ್ತವೆ. ಪ್ರಾಮಾಣಿಕವಾಗಿ ಕೆಲ್ಸ ಮಾಡಿದ್ರೂ ಬಾಸ್ ಕೈಯಲ್ಲಿ ಬೈಸಿಕೊಳ್ತೀವಿ. ಬದುಕಿನಲ್ಲಿ ಮಾನವೀಯ ಬಾಂಧವ್ಯ, ಜೀವನಪ್ರೀತಿಯ ಕುರಿತು ಮಾತನಾಡೋರು ವೇದಿಕೆ ಮೇಲೆಯಷ್ಟೇ ಗೊಣಗುತ್ತಾರೆ. ಜೀವನ ಅಂದ್ರೆ ನಮ್ಮೂರ ಆಟದ ಮೈದಾನ ಅನ್ನೋರು ಕೆಲವರು, ಇನ್ನು ಕೆಲವರು ಜೀವನನಾ ಸೀರಿಯಸ್ ಆಗಿ ತಕೋಪಾ ಅಂತ ಬೋಧನೆ ಮಾಡ್ತಾರೆ. ಆದರೆ ಬೋಧನೆ ಮಾಡಿದವರಾರು ನಿಜವಾದ ಜೀವನಾನ ಕಂಡೋರಿಲ್ಲ, ಜೀವನದಲ್ಲಿ ಉದ್ದಾರವೂ ಆಗಿಲ್ಲ! ಇರಲಿ ಏನೇನೋ ಯೋಚನೆಗಳು..

ನೆನಪಾದುವು ಜಿ.ಎಸ್.ಎಸ್. ಅವರ ಕವನದ ಸಾಲುಗಳು.......
ನಾನು ಬರೆಯುತ್ತೇನೆ...
ನನ್ನ ಸಂವೇದನೆಗಳನ್ನು,
ಕ್ರಿಯೆ-ಪ್ರತಿಕ್ರಿಯೆಗಳನ್ನು,
ದಾಖಲು ಮಾಡುವುದಕ್ಕೆ..!
ನಿಂತ ನೀರಾಗದೆ ಮುಂದಕ್ಕೆ
ಹರಿಯುವುದಕ್ಕೆ...
ನನ್ನನ್ನು ನಾನು ಕಂಡುಕೊಳ್ಳುವುದಕ್ಕೆ...
ನಾನು ಬರೆಯುತ್ತೇನೆ
ಋಷಿಯ ನೋವಿಗೆ...
ರೊಚ್ಚಿಗೆ ಮತ್ತು ಹುಚ್ಚಿಗೆ..
ಅಥವಾ ನಂದಿಸಲಾರದ ಕಿಚ್ಚಿಗೆ...!


ಹೌದು..ಮತ್ತೆ ನಾನು ಬರೆಯುತ್ತೇನೆ..ನನ್ನೊಳಗನ್ನು ತೆರೆದಿಡುತ್ತೇನೆ..ಮುಂದಿನ ಬರಹ ಸದ್ಯದಲ್ಲಿಯೇ ನಿಮ್ಮೆದುರು ಕಾಣಲಿದೆ. ಬರ್ತಾ ಇರಿ..ಬೆನ್ನುತಟ್ಟುತ್ತಿರಿ..

18 comments:

ಬಾಲು said...

ಬಾಸ್ ಕಾಟ ಕೊಡ್ತಾ ಇದ್ದಾರೆ ಅಂತ ಬರೀತಾ ಇಲ್ವಾ? ಅದೆಲ್ಲ ಗೊತ್ತಿಲ್ಲ, ಸಧ್ಯದಲ್ಲೇ ಹೊಸ ಪತ್ರಗಳು, ಲೇಖನ ಗಳ ಜೊತೆ ಬರಲಿಲ್ಲ ಅಂದ್ರೆ ಬೆನ್ನು ತಟ್ಟೋಕೆ ಕೋಲು ಹಿಡ್ಕೊಂಡು ಬರಬೇಕಾಗುತ್ತೆ!!! :)

ಆಮೇಲೆ ಕೊನೆಯ ಪದ್ಯ ಚೆನ್ನಾಗಿದೆ.

Sushrutha Dodderi said...

"ಜೀವನದಲ್ಲಿ ಪುಟ್ಟ ಕಷ್ಟಗಳನ್ನೇ ಸಹಿಸಿಕೊಳ್ಳಲಾಗದೆ ಹೃದಯ ಭಾರವಾದಾಗ ಮತ್ತದೇ ಬೇಸರ..ಅದೇ ಹಾಡು.."
ಅಯ್ಯೋ.. ಏನಾಯ್ತು ತಂಗಮ್ಮಾ?

ನಾನೊಂದು ಮಾತು ಕೇಳಲಾ? ಪುಟ್ಟ ಪುಟ್ಟ ಖುಷಿಯ ಕ್ಷಣ, ಮನದ ಮೂಲೆಯ ದುಗುಡ-ದುಮ್ಮಾನ, ನಿನ್ನೊಳಗಿನ ಕನಸು, ಹೇಳಲಾಗದ ಮಾತು, ಬಚ್ಚಿಡಲಾಗದ ಭಾವನೆ -ಇವನ್ನೆಲ್ಲ ನಿನ್ನದೊಂದು ಖಾಸಗಿ ಡೈರಿಯಲ್ಲಿ ಬರೆದಿಟ್ಟರೂ ಅದು ಈ ಬ್ಲಾಗಿಗಿಂತ ಜಾಸ್ತಿ ಖುಶಿ-ನಿರಾಳತೆ ಕೊಡುತ್ತೆ ಅನ್ನಿಸುತ್ತೆ ನಂಗೆ. ಏನಂತೀಯಾ?

(ಆದರೂ ಎಲ್ಲರೂ ಬ್ಲಾಗಿನಲ್ಲಿ ಬರೀತೀವಿ, ಯಾಕೆ?)

ಸಾಗರದಾಚೆಯ ಇಂಚರ said...

ಧರಿತ್ರಿ,
ಕೆಲವೊಮ್ಮೆ ಬರೆಯಬೇಕೆನ್ದುಕೊಂಡರೂ ಬರೆಯಲೂ ಆಗದೆ ತೊಳಲಾಡುವ ಸನ್ನಿವೇಶಗಳು ನನಗೆ ತುಂಬಾ ಸಲ ಆಗಿವೆ. ಬದುಕೇ ಹಾಗೆ, ಎಲ್ಲವೂ ಅನಿರೀಕ್ಷಿತ ಹೆಜ್ಜೆಗಳು, ಕೆಲವೊಮ್ಮೆ ನಿರೀಕ್ಷಿತ ಪ್ರತಿಫಲಗಳು, ಎಷ್ಟೋ ಸಲ ನೋವು ಗಳು, ಅದರ ಹಿಂದೆಯೇ ನಲಿವುಗಳು.
ಒಂದು ಸುಂದರ ಬರಹ ಕೊಟ್ಟಿದ್ದಿರಾ, ಹೀಗೆ ಬರೆಯುತ್ತಿರಿ
ಗುರು

Umesh Balikai said...

ಅರೆ! ತುಂಬಾ ದಿನಗಳ ನಂತರ ಧರಿತ್ರಿ ಏನೋ ಬರೆದಿದ್ದಾರೆ ಅಂತ ನೋಡೋಕೆ ಬಂದ್ರೆ 'ಏಕೆ ಬರೆಯಲಿಲ್ಲ' ಅನ್ನೋದಕ್ಕೆ ವಿವರಣೆ! ಹ್ಮ್.. ಬೇಗ ಬೇಗ ಬರೀರಿ, ತುಂಬಾ ದಿನಗಳಾಯ್ತು ನಿಮ್ಮ ಆಪ್ತ ಬರಹಗಳನ್ನು ಓದಿ.. ಕಾಯ್ತಿದೀವಿ. :)

ಮನಸು said...

nijavada jeevana kandavaru yaaru illa hahaha nija ee matu..
chennagide nimma baraha

umesh desai said...

ಧರಿತ್ರಿ ಬರೀರಿ ಇನ್ನೂ
ಓದ್ತೇವಅದನ್ನು...!

ನನ್ನ ಮನೆಗೆ ಬಂದೇ ಇಲ್ಲ...?

PARAANJAPE K.N. said...

ಧರಿತ್ರಿ,
ಮನಸಿನ ಭಾವನೆಗಳನ್ನೂ ಬಿಚ್ಚಿಟ್ಟಿದ್ದಿಯಾ, ಹೌದು, ಜೀವನವೇ ಹಾಗೆ, ಅದು ನಾವು ಎಣಿಸಿದ ಹಾಗಿರುವುದಿಲ್ಲ, ಅದರ ಹಾದಿಯೇ ಬೇರೆ, ನಾವು ಆ ಹಾದಿಯಲ್ಲಿ ಸಾಗಿ ಗಮ್ಯ ತಲುಪಿಕೊಳ್ಳಬೇಕು. "ಬೋಧನೆ ಮಾಡಿದವರಾರೂ ಜೀವನದಲ್ಲಿ ಉದ್ಧಾರವಾಗಿಲ್ಲ" ನಿನ್ನ ಈ ಸಾಲು ಇಷ್ಟವಾಯಿತು, ಮನಸ್ಸಿಗೆ ತಟ್ಟಿತು.

Vigneshwar said...

bareetha iri,nemmadi irathe...

Rajath said...

Hi I am new to you. I understand you are in . . . . no words. Dont worry light will flash from some corner.
I have enough feelings inside me but cant even express with anybody. yes I have a friend to hear everything of mine but now she is not like earlier. she is also tied or may not be interested i dont know, Jeevanavee heege andukollale? . .

Mohan Hegade said...

ಚಿತ್ರಾಜಿ,
ದಿನ ಬೆಳಗಾದರೆ ಏನೋ ಒಂದು ಮಾಡುವ ಯೋಚನೆಗಳು ಬರುತ್ತೆ, ದಿನದ ಕರ್ತವ್ಯಗಳು ಆರಂಭವಾದಾಗ ಅದನ್ನೆಲ್ಲಾ ಮುಗಿಸುವಾಗ ಎದ್ದಾಗ ಕಂಡ ಬಾವನೆ ಹೋಗಿರುತ್ತೆ. ಇಷ್ಟೇ ಅಲ್ಲವಾ ಜೀವನ? ಸಾಮಾನ್ಯವಾಗಿ ದಿನ ಎಲ್ಲ ಅನುಭವಿಸುವ ಮನಸ್ಸಿನ ತುಮುಲವೇ ಇರೆನ ಇ ಪೊರ್ಲುದ ಲೇಖನ.

ಬರ್ಪೆ

Unknown said...

ಏನೆಂದು ಹೇಳಲಿ??... ಬೇಗನೆ ಬ್ಲಾಗ್ ಲೋಕಕ್ಕೆ ಮರಳಿ ಬನ್ನಿ... ಇನ್ನಸ್ಟು ಹೊಸ ಉತ್ಸಾಹದಿಂದ...

ಜಲನಯನ said...

ಧರಿತ್ರಿ,....??? ಯಾಕ ಪುಟ್ಟಿ..?? ಬೇಜಾರಾಯ್ತಾದಾ...ಅಂಗೆಲ್ಲ ನೋದ್ಕೋಬೇಡ ಚಿನ್ನ...ಬೆನ್ತಟ್ಟು...ಬೆನ್ತಟ್ಟು ಅನ್ತೀಯ..ಮತ್ ಕುಂತ್ಬುಟ್ರೆ ಅಂಗೇಯ ಬೆನ್ತಟ್ಟಾಕಾಯ್ತದಾ ಪುಟ್ಟಾ..?? ಯೋಳು ಮತ್ತೆ..? ನಿನ್ ಪೆನ್ನಾಗಿಂದ..ಪ್ಯಾಪರ್ ಮ್ಯಾಲೆ ಅಂಗೇ ..ಬುಳು ..ಬುಳು..ಬುಳು ಉದ್ರ್ ಬೇಕು ಅಕ್ಸರಾ..
ಎಲ್ಲಿ ಎತ್ಕೋ..ನೋಡುಮಾ..ಎಸಿ..ಅಂಗೇ ಒಂದ್ನಾಲ್ಕ್ ವಾಕ್ಯಾನಾ...?? ಅದೇ..ನಿನ್ ಬ್ಯಾಸ್ರಕ್ಕೆ ಮದ್ದು ಕಣ್ ಪುಟ್ಟಿ...!!!

Guruprasad said...

ಧರಿತ್ರಿ
ಏನು ಬರಿಯೋಲ್ಲ , ಏನು ಬರೀಬೇಕು ಅಂತ ಹೇಳೋದನ್ನೇ ಇಷ್ಟು ಚೆನ್ನಾಗಿ ಬರೆದಿದ್ದೀರ... ಇನ್ನು ಕುಶಿಯಾಗಿ ಬರಿಲೆ ಬೇಕು ಅಂತ ಬರೆದರೆ ಎಷ್ಟು ಚೆನ್ನ ಇರುತ್ತೆ ನಿಮ್ಮ ಬರಹ...
ನಿಜವಾಗ್ಲೂ ತುಂಬ ಮಿಸ್ ಮಾಡ್ಕೋತಾ ಇದ್ದೇವೆ. ಕೆಲಸ ಇದ್ದದ್ದೇ,,, ಬಿಡುವಾದಾಗ ನಿಮಗೆ ತೋಚಿದ್ದು ಬರೀರಿ.. ಬರಿತಾ ಇರಿ......ಅಸ್ಟೆ ..
(ನಿಮ್ಮ ಮನಸಿನ ತೊಳಲಾಟದ ಕಷ್ಟ ಅರ್ಥ ಆಗ್ತಾ ಇದೆ.....:-) )
ಗುರು

shivu.k said...

ಧರಿತ್ರಿ,

ಏನೇನೋ ಯೋಚನೆಗಳು..ಅಮೂರ್ತ ಕಲ್ಪನೆಗಳು. ಸತ್ಯ, ಪ್ರಾಮಾಣಿಕತೆ, ನಿಷ್ಕಲ್ಮಶ ಪ್ರೀತಿ ಯಾಕೋ ಢಾಳಾಗಿ ಕಾಣುತ್ತವೆ. ಪ್ರಾಮಾಣಿಕವಾಗಿ ಕೆಲ್ಸ ಮಾಡಿದ್ರೂ ಬಾಸ್ ಕೈಯಲ್ಲಿ ಬೈಸಿಕೊಳ್ತೀವಿ. ಬದುಕಿನಲ್ಲಿ ಮಾನವೀಯ ಬಾಂಧವ್ಯ, ಜೀವನಪ್ರೀತಿಯ ಕುರಿತು ಮಾತನಾಡೋರು ವೇದಿಕೆ ಮೇಲೆಯಷ್ಟೇ ಗೊಣಗುತ್ತಾರೆ. ಜೀವನ ಅಂದ್ರೆ ನಮ್ಮೂರ ಆಟದ ಮೈದಾನ ಅನ್ನೋರು ಕೆಲವರು, ಇನ್ನು ಕೆಲವರು ಜೀವನನಾ ಸೀರಿಯಸ್ ಆಗಿ ತಕೋಪಾ ಅಂತ ಬೋಧನೆ ಮಾಡ್ತಾರೆ. ಆದರೆ ಬೋಧನೆ ಮಾಡಿದವರಾರು ನಿಜವಾದ ಜೀವನಾನ ಕಂಡೋರಿಲ್ಲ, ಜೀವನದಲ್ಲಿ ಉದ್ದಾರವೂ ಆಗಿಲ್ಲ! ಇರಲಿ ಏನೇನೋ ಯೋಚನೆಗಳು..

ನೀನೆ ಬರೆದಿರುವ ಮೇಲಿನ ಇದಿಷ್ಟು ವಿಚಾರಗಳನ್ನಿಟ್ಟು ಸೊಗಸದ ಕತೆ ಬರಿ...ಅಥವ ಇವೆಲ್ಲಾ ಅಮೂರ್ತ ರೂಪಕ್ಕೆ ಅಕ್ಷರ ರೂಪಕೊಟ್ಟು ಕೈತೊಳೆದುಕೋ..ಸಾದ್ಯವಾದರೇ ಮನಸ್ಸನ್ನು ತೊಳೆದುಕೊಳ್ಳಬಹುದಲ್ವ...ಪ್ರಯತ್ನದ ಹಿಂದೆ ಯಾವುದು ಇಲ್ಲ್ವ ಅಲ್ವ....

ಸುಧೇಶ್ ಶೆಟ್ಟಿ said...

ಧರಿತ್ರಿಯವರೇ....

ಏನೂ ಬರೆದಿಲ್ಲವಲ್ಲ ಇತ್ತೀಚೆಗೆ ನೀವು ಅ೦ತ ಅ೦ದುಕೊಳ್ಳುತ್ತಿರುವಾಗಲೇ ಗ೦ಭೀರ ಬರಹದೊ೦ದಿಗೆ ಬ೦ದು ಬಿಟ್ಟಿದ್ದೀರಾ....

ಈ ಘಟ್ಟ ಬದುಕಿನಲ್ಲಿ ಪ್ರತಿಯೊಬ್ಬರನ್ನು ಕಾಡುತ್ತಿರುತ್ತದೆ...

ನೀವು ಬರೆಯದಿರಲು ’Wrtier's block' ಕಾರಣ ಇರಬಹುದೇ...?

ಬಾಸ್ ಬಯ್ದರೆ ತಲೆಕೆಡಿಸಿಕೊಳ್ಳಬೇಡಿ... ಬಾಸುಗಳಿರುವುದೇ ಬಯ್ಯಲು...

ನಿಮ್ಮ ತೊಳಲಾಟ ಕೊನೆಯಾಗಿ ಆದಷ್ಟು ಬೇಗ ಬರೆದುಬಿಡಿ...

- ಸುಧೇಶ್

Prabhuraj Moogi said...

ಕೆಲವೊಮ್ಮೆ ಏನೋ ಬರೆಯಲು ಕೂತವರು ಏನೊ ಬರೆದು ಬಿಡುತ್ತೇವೆ... ಯಾಕೆ ಬರೆಯುತ್ತೇವೆ ಅನ್ನೋಕಿಂತ ಬರೆದದ್ದು ಯಾರದೊ ಮುಖದ ಮೇಲೆ ಒಂದು ನಗು, ಯಾರಿಗೊ ಸಾಂತ್ವನ ಆಗುತ್ತಲ್ಲ ಅನ್ನೋ ತೃಪ್ತಿ ಕೂಡ ಇರತ್ತೆ, ಕಾಡುವ ಕನಸುಗಳೊ, ಮನದಲ್ಲಿ ಮೂಡುವ ಮಾತುಗಳೊ ಏನೊ ಒಂದು ಗೀಚಿದಾಗ ಸಮಾಧಾನ... ಆದರೆ ಕೆಲಸದ ಒತ್ತಡದಲಿ ಕೆಲ ಸಲ ಬರೆಯಲಾಗಲ್ಲ. ಬಿಡುವಾದಗ ಮತ್ತೆ ಬರೆಯಿರಿ..

shridhar said...

Dharitriyavare ,
Idu ellara manada matu .. collage dinagalalli bitta barahagalannu matte mundivaresa bekemba hamabaladinda .. blog lokakke bande .. bareyalagalilla .. antu enu bareyali anta tiliyade nanna modal blog roopadalli eneno manassige bandiddanni geechide .. tale budavillada matu .. adara nantara ಬರೆಯಬೇಕೆನ್ದರು ಏನು ಬರೆಯಲಿ ಅಂತಾನೆ ಗೊತ್ತಾಗ್ತಾ ಇಲ್ಲ ..
nimma barahavanni yavagalu odutta bandidini... barahvannu munduvaresi .. nimmallara baraha nanagu swalp prerane agali ..
nanu enadaru baredaga tilisuve :)

shridhar bhat

Google transliterationalli tondre iruva karana .. sariyagi translate agailla kshamisi ..

ಧರಿತ್ರಿ said...

ಅರೇ! ಎಷ್ಟೊಂದು ಜನ ಬೆನ್ನುತಟ್ಟಿದ್ದಿರಿ..ನಿಜವಾಗ್ಲೂ ಎಷ್ಟು ಖುಷಿ ಆಯ್ತು ಗೊತ್ತಾ? ಪ್ರತ್ಯೇಕ ಹೆಸರುಗಳನ್ನು ಹೇಳದೆ ಒಮ್ಮೆಲೇ ಎಲ್ಲರಿಗೂ ಥ್ಯಾಂಕ್ಸ್ ಹೇಳ್ತೀನಿ ಅಂತ ಬೈಬೇಡಿ..ನೀವು ಬೈ ದ್ರೂ ನಂಗೆ ಮುನಿಸಿಲ್ಲ ಬಿಡಿ. ಖುಷಿ ಖುಷಿಯಾಗಿ ಮುಂದಿನ ಬರಹಕ್ಕೆ ಅಣಿಯಾಗುತ್ತಿದ್ದೇನೆ. ಬರ್ತಾ ಇರಿ...
ಪ್ರೀತಿಯಿಂದ,
ಧರಿತ್ರಿ