Friday, May 22, 2009

ಥತ್!! ..ಈ ಜಡಿಮಳೆ ನನ್ನ ಕನಸುಗಳಿಗೆ ಸಾಥ್ ನೀಡಲಿಲ್ಲ..

ಮಳೆಯೇ ಶಿವರಾಯ ಓ ತಂದೆ
ಯಾವ ದೇವರಿಲ್ಲ ನಿನ ಮುಂದೆ..
ಯಾವತ್ತೋ ಕೇಳಿದ ಜನಪದ ಹಾಡಿನ ಸಾಲುಗಳು ಮತ್ತೆ ಮತ್ತೆ ನನ್ನೊಳಗೆ ಗುನುಗಿದವು. ಇತ್ತೀಚೆಗೆ ಬೆಂದ ಕಾಳೂರಿನ ಇಳೆಯಂಗಳಕ್ಕೆ ತುಂತುರು ಮಳೆ ಹನಿ ಸ್ಪರ್ಶಿಸಿದಾಗ ನೆನಪುಗಳ ಮೆರವಣಿಗೆಯಲ್ಲಿ ನನ್ನದೂ ಪುಟ್ಟ ಪಯಣವಾಗಿಸಿದ್ದೆ. ಬಾಲ್ಯದ ಭಾವಗೀತೆಗಳನ್ನು ತುಂತುರು ಮಳೆಹನಿಯ ಝೇಂಕಾರದೊಂದಿಗೆ ಮೆಲುಕುಹಾಕಿದ್ದೆ. ತಣ್ಣನೆಯ ಗಾಳಿ, ಮುತ್ತಿನ ನೀರ ಹನಿಗೆ ಸಂಭ್ರಮಗೊಂಡ ಪುಟ್ಟ ಮಕ್ಕಳು, ಮೊದಲ ಮಳೆ ಹನಿಯ ಸ್ಪರ್ಶದಿಂದ ಪುಳಕಿತಗೊಂಡ ಇಳೆ, ಗೂಡು ಸೇರುವ ತವಕದ ಹಕ್ಕಿಗಳ ಕಲರವ ಧರಿತ್ರಿಯಲ್ಲೂ ಒಂದು ಬಗೆಯ ಸಂಭ್ರಮದ ಹಬ್ಬವಾಗಿಸಿತ್ತು. ಹ್ಲಾಂ..ನೀವೇ ಓದಿದ್ರಲ್ಲಾ..ತುಂತುರು ಮಳೆಯಲ್ಲಿ ನೆನಪುಗಳ ಮೆರವಣಿಗೆ!!

ಆದರೆ, ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಸುರಿವ ಜಡಿಮಳೆ ಅದೇಕೋ ನನ್ನೊಳಗಿನ ಬೆಚ್ಚಗಿನ ಭಾವಕ್ಕೆ ಸಾಥ್ ನೀಡುತ್ತಿಲ್ಲ. ರಪರಪನೆ ಸುರಿವ ಮಳೆಹನಿಗಳಿಗೆ
ಕನಸುಗಳು ಗೂಡು ಕಟ್ಟೊಲ್ಲ. ಮುತ್ತಿನ ಹನಿಗಳ ಜೊತೆ ಆಡಿಬಿಡೋಣ ಎಂದೂ ಅನಿಸಲ್ಲ. ಮನೆಯೊಳಗೆ ಕುಳಿತು ಹಪ್ಪಳ ಸಂಡಿಗೆ ಮೆಲ್ಲುತ್ತಾ ವರುಣನ ಭೂ ಚುಂಬನ ನೋಡಿ ಖುಷಿಪಡೋಣ ಅಂದ್ರೂ ಈ ಬೆಂಗ್ಳೂರು ಮಳೆ ಮನೆ ಸೇರಕ್ಕೆ ಮೊದಲೇ ಗುಡುಗು-ಸಿಡಿಲ ಆರ್ಭಟ ಹೊತ್ತು ತಂದು ಮನಸ್ಸನ್ನೇ ಮುದುಡಿಸಿ ಬಿಡುತ್ತೆ. ಹೌದು, ಆ ಸಂಜೆಗೂ-ಬೆಂಗಳೂರಿನಲ್ಲಿ ಸುರಿಯೋ ಮಳೆಗೂ ಅದೇನೋ ಬಂಧ ..ಸಂಜೆಯಾಗುವಾಗಲೇ ಧೋ ಎಂದು ಮಳೆ ಸರಿಬೇಕಾ!
ಥತ್! ಕೆಟ್ಟ ಸಿಟ್ಟು ಬಂದು ಬಿಡುತ್ತೆ. ಈ ಮಳೆಯನ್ನು ಅನುಭವಿಸೋಕೆ ಆಗೊಲ್ಲ ಅಂತ ಅಲ್ವಾ? ಅಂತ ನಿರಾಶೆಯ ಕರಿಮೋಡ ನನ್ನನ್ನೇ ಆವರಿಸಿಬಿಡುತ್ತೆ.

ಮೊನ್ನೆ ಸುರಿದ ಜಡಿಮಳೆಗೆ ಬೆಂಗಳೂರಿನ ಡಾಂಬರ್ ರಸ್ತೆಗಳೆಲ್ಲ ಹಳ್ಳ-ಹೊಳೆ, ಮಹಾನದಿಗಳಾಗಿದ್ದವು. ಬಿರುಸಿನಿಂದ ಬೀಸಿದ ಗಾಳಿಯ ಅಟ್ಟಹಾಸಕ್ಕೆ ನನ್ನ ಪ್ರೀತಿಯ ಛತ್ರಿಯ ಬೆನ್ನೆಲುಬುಗಳೆಲ್ಲಾ ಮುರಿದು ನುಜ್ಜು-ಗುಜ್ಜಾಗಿ, ಆ ಮುದ್ದಿನ ಛತ್ರಿ ನನ್ನೆದೆ ಅಪ್ಪಿಕೊಂಡು ಮಲಗಿಬಿಟ್ಟಿತ್ತು. ಕಾಲಲ್ಲಿದ್ದ ಕಪ್ಪಗಿನ ಶೂ ಮಣ್ಣು ಮೆತ್ತಿಕೊಂಡು ನನ್ನನ್ನೂ ಹೊರಲಾಗದೆ ಬಸವಳಿದಿತ್ತು. ಮಳೆ ಬಿದ್ದ ರಭಸಕ್ಕೆ ನನ್ನ ದೇಹ ಸೋತು ಸುಣ್ಣವಾಗಿತ್ತು. ಅಟೋ ಎಂದು ಕೈಹಿಡಿದರೆ 2-3 ಕಿಮೀಗೂ 100 ಮೇಲೆ ಕೇಳಿದ್ರೆ ನಾ ಹ್ಯಾಂಗ ಕೊಡಲಿ? ಎಂದು ಮುನಿಸಿಕೊಂಡಿದ್ದೆ ..ಅಟೋ ಮಂದಿ ಜೊತೆ! ಬಸ್ಸು ಹುಡುಕಾಡಿದರೆ ನೀರ ಮೇಲೆ ನಿಂತ ಬಸ್ಸುಗಳು ಕದಲದೆ, ಅಲ್ಲೇ ಜಾಮ್ ಆಗಿಬಿಟ್ಟಿದ್ದವು. .! ಈ ಬೆಂಗಳೂರು ಮಳೆ ಅಂದ್ರೆ ಹಂಗೇ..ಅಯ್ಯೋ ಕರ್ಮಕಾಂಡ ಬೇಡವೇ ಬೇಡ..ಅಂದ ಶಾಪ ಹಾಕುತ್ತಾ ರಪರಪನೆ ಕೆನ್ನೆ ಮೇಲೆ ಬಡಿದ ಮಳೆಹನಿಯನ್ನು ಒರೆಸಿಕೊಳ್ಳುತ್ತಾ ಮಳೆರಾಯನ ಜೊತೆ ಕೋಪಿಸಿಕೊಂಡೆ..ಬಾ ಮಳೆಯೇ..ಎಂದು ಮನಸ್ಸು ಹಾಡಲೇ ಇಲ್ಲ!

ಹೌದು, ಈ ಬೆಂಗಳೂರಲ್ಲಿ ಮಳೆ ಬಂದ್ರೆ..ಹಂಗೆ ರಸ್ತೆಗಳೆಲ್ಲಾ ನದಿಗಳಾಗಿಬಿಡೋದು. ಕೇಬಲ್, ಟೆಲಿಫೋನ್ ನವರು ಅಗೆದ ಗುಂಡಿಗಳು, ಬಿಬಿಎಂಪಿ ಅವರ ಕರ್ಮಕಾಂಡ ಕೆಲಕೆಲಸಗಳಿಗೆ ರಸ್ತೆಯನ್ನೆಲ್ಲಾ ಅಗೆದು ಎತ್ತರ-ತಗ್ಗು ಮಾಡಿ, ಈ ಜಡಿಮಳೆಗೆ ನಡೆದು ಹೋಗೋರು ಆ ಗುಂಡಿಯಲ್ಲಿ ಬಿದ್ರೂ ಕೇಳೋರು ಯಾರಿಲ್ಲ. ಬೇಸಿಗೆ, ಮಳೆ, ಚಳಿಗಾಲ...ಹೀಗೆ ಎಲ್ಲಾ ಕಾಲದಲ್ಲೂ ಈ ರಸ್ತೆಗಳ ಬದಿ ಗುಂಡಿಗಳನ್ನು ತೋಡುತ್ತಾನೆ ಇರೋರು ಬಿಬಿಎಂಪಿಯವ್ರು! ಮೊನ್ನೆ ಮೊನ್ನೆ ನಾನೂ ನಿಂತ ನೀರ ಮೇಲೆ ನಡೆದು ಪಾದಗಳು ಧೊಪ್ಪನೆ ಗುಂಡಿಯೊಳಗೆ ಬಿದ್ದಾಗ ನನ್ನ ಎತ್ತಿದ್ದು ನನ್ನ ಕಲೀಗ್.

ಮೊನ್ನೆ ಮಳೆಗಾಲ ಆರಂಭವಾದಾಗ ಬಿಬಿಎಂಪಿ ಆಯುಕ್ತರು, ನಾವು ಮಳೆ ಎದುರಿಸೋಕೆ ರೆಡಿ ಎಂದು ತೊಡೆ ತಟ್ಟಿ ಹೇಳಿದ್ದಾರೆ! ಆದರೆ ಕಳೆದ ಸಲನೂ ಅವರು ಹಾಗೇನೇ ಹೇಳಿ..ಕೊನೆಗೆ ಜೋರು ಮಳೆಗೆ ಮನೆ-ಮನೆಗೆಲ್ಲಾ ನೀರು ನುಗ್ಗಿದಾಗ ಪ್ರತಿಷ್ಠಿತ ಬಡಾವಣೆಗಳಿಗೆ ಮಾತ್ರ ಹೋಗಿ ವಾಪಾಸಾಗಿ ಕೊನೆಗೆ ಮಾಧ್ಯಮದಲ್ಲೆಲ್ಲಾ ಬಿಸಿಬಿಸಿ ಸುದ್ದಿಯಾದಾಗ ಒಂದೆರಡು ಕೊಳಗೇರಿಗಳಿಗೆ ಹೋಗಿ ಕೈತೊಳೆದುಕೊಂಡ್ರು.

ಇರಲಿ ಬಿಡಿ..ಈ ಬೆಂಗಳೂರಿನಲ್ಲಿ ಭೋರ್ಗರೆವ ಮಳೆ ಅದೇಕೋ ನಂಗೆ ಹಳ್ಳಿಯ ಮುಗ್ಧತೆ, ಖುಷಿಯ ಕಚಗುಳಿ ತರುತ್ತಿಲ್ಲ. ಜಡಿಮಳೆಗೆ ನಮ್ಮೂರ ತೋಟದಲ್ಲಿ ಹಸಿರೆಳೆಗಳನ್ನು ನೋಡುತ್ತಾ ನೆನೆದ ಸಂಭ್ರಮ ತರುತ್ತಿಲ್ಲ! ಥತ್..ಇರಲಿಬಿಡಿ...!!

20 comments:

ಬಾಲು said...

ತುಂತುರು ಮಳೆಯಲ್ಲಿ ನೆನಪುಗಳ ಮೆರವಣಿಗೆ!!
kanditha sathya. nangu kooda nenp aagutte male bartha iruvaga, beligge ofc ge horaduvaga kaiyalli chatri ittu antha!!!

sunaath said...

ಬಿಬಿಎಂಪಿ ಆಯುಕ್ತರು ರೇನಕೋಟ್ ಹಾಗೂ ಛತ್ರಿ ಕೊಂಡುಕೊಂಡಿದ್ದಾರಂತೆ!

ಮನಸು said...

ಧರಿತ್ರಿ,
ಯಾವುದು ನಮ್ಮ ಊರಿನಷ್ಟು ಖುಷಿ ಕೊಡೋಲ್ಲ, ಈಗಾ ನೋಡಿ ನಾವು ಬೆಂಗಳೂರಿನವರೇ ಕುವೈಟ್ಗೆ ಬಂದಿದ್ದೀವಿ. ಇಲ್ಲಿ ನೋಡಿದರೆ ನಮ್ಮ ಬೆಂಗಳೂರು ಹೇಗೆ ಇರಲಿ ನನ್ನೊರು ನನಗೆ ಹೆಚ್ಚು ಚೆಂದ ಎಂದು ಕೊಳ್ಳುತ್ತೆವೆ ಹಾಗೆ ನಿಮಗೊ ನಿಮ್ಮೊರ ಮಳೆ ಖುಷಿ ಕೊಟ್ಟಿದೆ. ಏನು ಮಾಡೋದು ಬೆಂಗಳೂರು ಕೆರೆ ಹೊಂಡಗಳಾಗಿಬಿಟ್ಟಿವೆ... ಹಾಗಂತ ನಾವು ಯಾವು ಊರು ಹೋಗೋಳೊ ಹಾಗಿಲ್ಲ ನಾವು ಎಲ್ಲೇ ಹೋದರು ಬೆಂಗಳೂರಿನವರು ಹ ಹ ಹ ಹ..
ಮಳೆ ನೋಡಬೇಕೆನಿಸಿದೆ ನನಗೆ ಈ ಬಿಸಿಲ ಧಗೆ ಸಾಕೆನಿಸಿದೆ....
ವಂದನೆಗಳು

PARAANJAPE K.N. said...

ಧರಿತ್ರಿ,
ಬೆ೦ಗಳೂರಿನ ಕಾ೦ಕ್ರೀಟು ಕಾಡಿನಲ್ಲಿ ಮಳೆನೀರಿನ ಹರಿವಿಗೆ ಬೇಕಾದ ಚರ೦ಡಿವ್ಯವಸ್ಥೆಯೇ ಸರಿಯಾಗಿಲ್ಲ, ಹಾಗಾಗಿ ರಸ್ತೆಯಲ್ಲಿ ನೀರು ನಿ೦ತು ಬಿಡುತ್ತದೆ. ಸಾಮಾನ್ಯ ಮಳೆ ಬ೦ದರೂ ಇಲ್ಲಿ ಹಾನಿ ಸ೦ಭವಿಸುತ್ತದೆ. ನಿನ್ನ ಅನುಭವದ ಬರಹ ಚೆನ್ನಾಗಿದೆ. ಸುಲಲಿತವಾಗಿದೆ. ನಾನೊಮ್ಮೆ ದೊಡ್ಡಮಳೆ ಬ೦ದ ದಿನ ಮೈಸೂರಿನಲ್ಲಿ ರಸ್ತೆ ದಾಟಲು ಹೋಗಿ ಚರ೦ಡಿಗೆ ಬಿದ್ದ ಪ್ರಸ೦ಗ ನೆನಪಾಯಿತು.

Guru's world said...

ಧರಿತ್ರಿ,,
ಇ ಬೆಂಗಳೂರೇ ಹೀಗೆ.....ವಿಚಿತ್ರ claimet ಹಾಗು ಒಂದು ಚರಂಡಿಯನ್ನು ಬಿಡದೆ ಕಟ್ಟಿಕೊಂಡಿರುವ ಮನೆ ಕಾಂಪ್ಲೆಕ್ಸ್ ಗಳಿಂದ ಇದು ನಿತ್ಯದ ಗೋಳು.......ಬಿದ್ದ ನೀರು ಇನ್ನೆಲ್ಲಿಗೆ ಹೋಗಬೇಕು ಹೇಳಿ.......
ಗುರು

Mohan Hegade said...

ಜಡಿಮಳೆ, ತುಂತುರುಮಳೆ, ಭಂಯಕರ ಮಳೆ, ಈಗೆ ಅನೇಕ ರೀತಿ ಹೇಳುತ್ತೇವೆ, ಆದರೆ ಮಳೆರಾಯ ಹೇಳುತ್ತಾನೆ ನನಗೆ ಬಿಳಬೇಕೆನ್ದಾಗ ಬಿಳುವೆ, ಅದಕ್ಕೆ ಯಡ್ಯುರಪ್ಪ, ಸೋನಿಯಾ ಗಾಂದಿ, ಮನಮೋಹನ್ ಸಿಂಗ್ ರನ್ನು ಕೇಳಲ್ಲ, ಪಾಪ ಈ ಧರಿತ್ರಿ ನನ್ನಿಂದ ತೊಂದರೆ ಅನುಬವಿಸಿದಲೆಂದು, ನಾನು ಮಾತು ಕೊಟ್ಟ ಧರಿತ್ರಿಗೆ ಮೋಸ ಮಾಡಲ? ಅಲ್ಲದೆ ಅದು ನನ್ನ ಕರ್ತವ್ಯ ಕೂಡ ಅಲ್ಲವ ಎಂದಾಗ ನಾನೇನು ಮಾಡಲಿ ಹೇಳು. ಅಲ್ಲದೆ ಬೆಂಗಳೂರು ಕೆರೆಗಳಲ್ಲ ಹೋಗಿ ಕಟ್ಟಡ, ಮನೆ ಆದರೆ ಮಳೆ ಅದರದೇ ಮಾರ್ಗ ನೋಡಿಕೊಂಡಿದ್ದು ಸರಿನೆ ಅಲ್ಲವಾ???????? ಒಳ್ಳೆಯ ಪದ ಪುಂಜಗಳು.
ದನ್ಯರಿ,

ಮಲ್ಲಿಕಾರ್ಜುನ.ಡಿ.ಜಿ. said...

ನಮ್ಮೂರಲ್ಲಿ ಮಳೆಯೇ ಇಲ್ಲದೆ ಮಳೆಗಾಗಿ ಕಾಯುತ್ತಿದ್ದರೆ ನೀವು ಅತಿವೃಷ್ಟಿಯಿಂದ ಒದ್ದಾಡುತ್ತಿದ್ದೀರ. ನೀವು ಹೇಳಿದಂತಹ ಅವ್ಯವಸ್ಥೆಗಳಿಲ್ಲದಿದ್ದರೆ ಬೆಂಗಳೂರು ನಿಜಕ್ಕೂ ಸುಂದರ. ಆ climate ಬೇರೆಲ್ಲೂ ಸಿಗಲ್ಲ.

ಧರಿತ್ರಿ said...

@ಬಾಲು ಸರ್..ಓ ಹೌದಾ? ಆ ಛತ್ರಿ ನಂಗೆ ಸಿಕ್ಕಿದೆ!! ಪ್ರತಿಕ್ರಿಯೆಗೆ ಧನ್ಯವಾದಗಳು.

@ಸುನಾಥ್ ಸರ್..ಹೌದು...ನೀವು ಹೇಳಿದ್ದು ನಿಜವಾಗಿರಲೂಬಹುದು!

@ಮನಸ್ಸು ಮೇಡಂ..ಬನ್ನಿ ಇಲ್ಲಿಗೆ ಮಳೆ ನೋಡೋಣ..ನೀರು ತುಂಬಿದ ಹೊಂಡಗಳು ಕಾಣದ ನದಿಗಳಾಗಿರುವ ರಸ್ತೆಗಳನ್ನು ನೋಡೋಣ.

@ಪರಾಂಜಪೆಯಣ್ಣ...ನೀವೂ ಬಲಿಯಾಗಿದ್ರಾ? ಛೇ!

@ಹೌದು..ಗುರು ಅದಕ್ಕೆ ಬಿಬಿಎಂಪಿ ಕರ್ಮಕಾಂಡ ಅನ್ನೋದು

@ಮೋಹನ್ ಹೆಗಡೆ ಅವರೇ ನಿಮ್ಮ ಪ್ರತಿಕ್ರಿಯೆಗೆ ನಾನೂ ಧನ್ಯರಿ...


ಪ್ರತಿಕ್ರಿಯೆಗೆ ಎಲ್ಲರಿಗೂ ಧನ್ಯವಾದಗಳು..ಮರಳಿ ಬನ್ನಿ ಧರಿತ್ರಿಯ ಪುಟ್ಟ ಮನೆಗೆ ಬರ್ತೀರಲ್ಲಾ..

-ಧರಿತ್ರಿ

shivu said...

ಧರಿತ್ರಿ,

ಆಹಾ! ಮೊದಲು ಮಳೆಯ ಬಗ್ಗೆ ಹೊಗಳಿಕೆ, ಈಗ ತೆಗಳಿಕೆಯೇ....ಇರಲಿ ಅದು-ಇದು ಎರಡು ಅನುಭವ...ಇದು ಎಂದು ಸುಳ್ಳು ಹೇಳಿಸಲ್ಲ....ನಿನಗೆ ಆಫೀಸಿನಿಂದ ಬರುವಾಗ ಸಂಜೆ ಮಳೆ ಕಾಟ ಕೊಟ್ಟರೇ...ಇಷ್ಟೆಲ್ಲಾ ಆಯಿತಾ....ಛೇ..ಛೇ...ಪಾಪ...ಇರಲಿಬಿಡು...ಸತ್ಯವನ್ನೇ ಬರೆದಿದ್ದೀಯಾ....ಮೊದಲಬಾರಿಗೆ ಉಪಮೆ..[ಅಲ್ಲಲ್ಲಿ ಇತ್ತು]ಪದಜೋಡಣೆ, ಕಾವ್ಯಾತ್ಮಕತೆ, ನವಿರು ಹಾಸ್ಯವನ್ನೆಲ್ಲಾ ದಾಟಿ ಇರುವುದನ್ನು ಇದ್ದಂಗೆ ಬರೆಯುವುದೇ ತುಂಬಾ ಖುಷಿ ಕೊಡುವುದು...ಏಕೆಂದರೆ ಅದು ಎಲ್ಲರ ಅನುಭವ ಕೂಡ...ಇಷ್ಟವಾಯಿತು...

ಮಳೆಯಲ್ಲಿ ಕಳೆದೊಂದು ವಾರದಿಂದ ಸಂಜೆ ನಾನು ಪ್ರತಿದಿನ ನೆನೆಸಿ ಹಾಕಿದ ಬಟ್ಟೆಯಂತಾಗುತ್ತಿದ್ದೇನೆ.....ಮೊನ್ನೆ ಮಳೆಯಲ್ಲಿ ಕಣ್ಣ ಮುಂದೆ ನಡೆದ ಘಟನೆಯನ್ನು ಬರೆಯುತ್ತಿದ್ದೇನೆ...ಸದ್ಯದಲ್ಲೇ ಬ್ಲಾಗಿಗೆ ಹಾಕುತ್ತೇನೆ.
ಹೀಗೆ ಬರಹದಲ್ಲಿ ವೈವಿಧ್ಯತೆಯಿರಲಿ...ಅಭಿನಂದನೆಗಳು.

ಬಿಸಿಲ ಹನಿ said...

ಮಳೆಯೊಂದಿಗೆ ಬಿಚ್ಚಿಕೊಳ್ಳುವ ನೆನಪುನೇವರಿಕೆಗಳನ್ನು ಚನ್ನಾಗಿ ಸೆರೆಹಿಡಿದಿದ್ದೀರಿ.

ಅಂತರ್ವಾಣಿ said...

ಧರಿತ್ರಿ,
ಮಳೆ ಬಂದರೆ ತೊಂದರೆ ಇಲ್ಲ. ಆದರೆ ಆ ಮಳೆ ನೀರು ಹೋಗುವಂತೆ ರಸ್ತೆ ಮಾಡಬೇಕು.. ಮೊನ್ನೆ ಮಳೆಯಿಂದ ರಿಂಗ್ ರೋಡಲ್ಲಿ ೧೦ ಕಾರ್ ಗಳು ಕೆಟ್ಟು ಹೋಗಿತ್ತು!

ಉಮೇಶ ಬಾಳಿಕಾಯಿ said...

ಧರಿತ್ರಿ,

ಹೌದು, ಹಳ್ಳಿಯ ಮುಗ್ಧ ವಾತಾವರಣದಲ್ಲಿ ಅನುಭವಿಸುವ ಮಳೆಯ ಅನುಭೂತಿಗೂ, ಪಟ್ಟಣದ ಗಿಜಿಗುಡುವ, ಯಾಂತ್ರಿಕ ಜೀವನದ ಮಧ್ಯದ ಮಳೆಯ ಕಿರಿಕಿರಿಗೂ ತುಂಬಾ ವ್ಯತಾಸವಿದೆ. ನಗುವ ಮಗುವಿನ ಮುಖಕ್ಕೂ ಮತ್ತು ಅದರ ತಲೆ ಚಿಟ್ಟು ಹಿಡಿಸುವ ಅಳುವಿಗೂ ಇರುವಷ್ಟೇ. ಬೇಸಿಗೆಯಲ್ಲಿ ಬೆಂದ ಜೀವಕ್ಕೆ ತುಂತುರು ಮಳೆ ಮತ್ತು ಮಳೆಯಲ್ಲಿ ನೆನೆದು ಒದ್ದೆಯಾದ ತನುವಿಗೆ ಹೊಂಬಿಸಿಲು ತರುವ ಮಧುರಾನುಭೂತಿ ಮಾತ್ರ ಇಷ್ಟವಾಗುತ್ತೆ. ಅತಿಯಾದರೆ ಅಮೃತವೂ ವಿಷ ಅನ್ನಿಸೋ ಹಾಗೆ.

ಎಂದಿನಂತ ಚಂದದ ಬರಹಕ್ಕೆ ಅಭಿನಂದನೆಗಳು.

- ಉಮೀ

Prabhuraj Moogi said...

ಕೆರೆಗಳನ್ನೆಲ್ಲ ಮುಚ್ಚಿ ಮುಚ್ಚಿ ಕಟ್ಟಡಗಳ ಕಟ್ಟಿದರೆ ಇನ್ನೇನಾಗುತ್ತದೆ ಹೇಳಿ, ನಾನೂ ಬಿಬಿಎಂಪಿಯವರನ್ನು ದೂಷಿಸಬಹುದು ಆದರೂ ದಿನೇ ದಿನೇ ಮಿತಿ ಮೀರಿ ಬೆಳೆಯುತ್ತಿರುವ ಬೆಂಗಳೂರಿಗೆ ಎಲ್ಲ ನಾಗರೀಕ ಸೌಲಭ್ಯಗಳನ್ನು ಕೊಡುವುದು ನಿಜಕ್ಕೂ ಅಸಾಧ್ಯವಾಗುತ್ತಿದೆ. ಹಾಗಂತ ಅವನ್ನು ನಾನು ಬೆಂಬಲಿಸೊಲ್ಲ ಆದ್ರೆ ವಾಸ್ತವದ ಸ್ಥಿತಿ ಹಾಗಿದೆ ಅಂದೆ ಅಷ್ಟೇ.. ಚಿಕ್ಕವರಿದ್ದಾಗ ಅದೇ ಮಳೆ ನೀರಲ್ಲಿ ಕಾಗದದ ದೋಣಿ ಬಿಟ್ಟು ಖುಷಿಪಟ್ಟ ನಮಗೆ ಈಗ ಅದು ಕೊಚ್ಚೆಯಾಗಿ ಕಾಣುತ್ತದೆ, ನೀವಿನ್ನೂ ಆ ಮಳೆಯ ಬಗ್ಗೆ ಆ ಅಕ್ಕರೆ ಇಟ್ಟುಕೊಂಡಿರುವುದು ಚೆನ್ನಾಗಿದೆ... ಮಳೆ ನೀರಲ್ಲಿ ಬಿದ್ದೆನೆಂದಿರುವಿರಿ ಈಗ ಹೇಗಿದ್ದೀರಿ, ಬಹಳ ಪೆಟ್ಟಾಗಿಲ್ಲ ತಾನೆ...

jithendra hindumane said...

ಮಳೆ ಅನುಭವಿಸಲು ಬಿಸಿ ಕಾಫಿ ಹಿಡಿದು ಮನೆಯಲ್ಲಿ ಕುಳಿತಿರಬೇಕು... ಅದಕ್ಕೆ ನಮ್ಮೂರು ಮಲೆನಾಡಿಗೆ ಜುಲಾಯಿ ತಿಂಗಳಲ್ಲಿ ಬನ್ನಿ....

ಜಲನಯನ said...

ಧರಿತ್ರಿ ಏನಾಯ್ತು ಗೊತ್ತಾ?...ಬ್ಲಾಗ್ ಈದ್ತಾ ಕೂತಿದ್ದೆ, ಟಿ.ವಿ. ನೋಡ್ತಾ ಕೂತಿದ್ದ ನನ್ನ ಮಗಳು..ನಿಮ್ಮ ಧಾಟಿ, ನಿಮ್ಮ ಪರದಾಟ, ಮತ್ತೆ...ವಿವರಣೆ ಎಲ್ಲಾ ಓದ್ತಾ ಮುಗುಳ್ನಕ್ಕ ನನ್ನನ್ನ ನೋಡಿ, ಏನು ??!! ಅನ್ನೋ ತರಹ ಹುಬ್ಬು ಮೇಲಕ್ಕೇರಿಸಿ... ನೋಡಿದ್ಳು...ನಾನು ಬ್ಲಾಗಿನ ಮೂರ್ನಾಲ್ಕು ಪಂಕ್ತಿ ಓದ್ದೆ, ...ಇವರು..ಡಾ. ವಿಟ್ಠಲ್ ರಾವ್ ಅವರ ಫ್ರೆಂಡಾ ..?? ಅಂದ್ಲು...ನನಗೆ ಕ್ಷಣಕ್ಕೆ..ನನಗೆ ಗೊತ್ತಿಲ್ದೇ ಇರೋದು ಇವಳಿಗೆಹ್ಯಾಗೆ ತಿಳಿದಿದ್ದು..ಅಂದುಕೊಳ್ಳೋದರೊಳಗೆ...ಥಟ್ಟನೆ ನೆನಪಿಗೆ ಬಂತು..ಈ ಟಿ.ವಿ ಯ ‘ಸಿಲ್ಲಿ-ಲಲ್ಲಿ‘, ಅದ್ರಲ್ಲಿ ಡಾ. ವಿಟ್ಠಲ್ ರಾವ್ ಪ್ರತಿ ಸರ್ತಿ ‘ಕರ್ಮಕಾಂಡ‘ ಅನ್ನೋದು ಇವಳ ಫೇಮಸ್ ಡೈಲಾಗ್ ಆಗಿತ್ತು... ನಿಮ್ಮ ಬರಹದಲ್ಲಿ ಎರಡು ಕಡೆ ಈ ಪದ ಬಳಸಿದ್ದರಿಂದ ಅವಳಿಗೆ ಹಾಗೆ ಅನ್ನಿಸಿರಬೇಕು...
ನಿಜಕ್ಕೂ ಬೆಂಗಳೂರು ಮಳೆಯಲ್ಲಿ ಬೆಂಗಳೂರಿಗರು ಕಳೆಯುವ ಕಾಲ- ಕರ್ಮ ಕಾಂಡವೇ ಸರಿ.
ಅಂದ ಹಾಗೆ, ಮುಚ್ಚದೇ ಇರುವ ಮ್ಯಾನ್ ಹೋಲ್ ಗಳ ಬಗ್ಗೆ ಎಚ್ಚರದಿಂದಿರಿ.....ಮೊನ್ನೆ ಒಂದು ನ್ಯೂಸ್ ಐಟಂ ಓದ್ದೆ..ಬೈಕ್ ಸಮೇತ ಒಬ್ಬ ಮ್ಯಾ.ಹೋ. ನಲ್ಲಿ ಬಿದದ್ದು.
ಬೆಳವಣಿಗೆ ಹೆಸರಲ್ಲಿ ನುಂಗಣ್ಣಗಳಿಗೆ ಒಳ್ಳೆ ಸುಗ್ಗಿ, ರೋಡುಗಳು ಕೆಟ್ಟ್ರೆ...ಅಲ್ವೇ...?
ದಿನ ನಿತ್ಯದ ವಿಷಯಗಳು ಚನ್ನಾಗಿ ಶೇಪ್ ಆಗ್ತವೆ ನಿಮ್ಮ ಬರಹಗಳಲ್ಲಿ...

PaLa said...

ಮಳೆಗಾಲದಲ್ಲಿ ಚಿಕ್ಕಮಗಳೂರಿಗೆ ಹೋಗಿ ಬರ್ಬೇಕು.. ಧೋ ಅಂತೇನೂ ಸುರಿಯೋದಿಲ್ಲ.. ಅಲ್ಲಿದು ಒಂಥರಾ ಸೋನೆ ಮಳೆ. ಹಾಗೇ ನಡ್ಕೊಂಡು ಹೋಗ್ತಾ ಇದ್ರೆ ಗಡ್ಡ, ಮೀಸೆ, ತಲೆಕೂದಲ ಮೇಲೆಲ್ಲಾ ಮುತ್ತಿನ ಹನಿ ಕೂತ್ಕೊಳ್ಳುತ್ತೆ.. ೪ ವರ್ಷದ ಅನುಭವ ಒಮ್ಮೆ ಟ್ರೈ ಮಾಡಿ :)

ಶಿವಪ್ರಕಾಶ್ said...

ಅಯ್ಯೋ, ನೀವು ಬೆಂಗಳೂರಿನಲ್ಲಿ ಇರುವ ರಸ್ತೆಗಳನ್ನು ನೋಡಿ ಹೀಗೆ ಹೇಳ್ತಾ ಇದೀರಿ...
ನಮ್ ಕಡೆ Highway'ಗಳಲ್ಲಿ ದೊಡ್ಡ ದೊಡ್ಡ ಕುಣಿಗಳು ಇರ್ತವೆ.
ಹಾಗಂತ ಮಳೆ ಮೇಲೆ ಬೇಜಾರ ಮಾಡ್ಕೊಳ್ಳೋಕೆ ಆಗುತ್ತಾ..
ಸ್ವಲ್ಪ ನಾವೇ ಹುಷಾರ್ ಆಗಿ ಹೋಗ್ಬೇಕು... :(
ಬೇಜಾರ ಆಗ್ಬೇಡಿ, ನಾನೆನದ್ರು ಮಿನಿಸ್ಟರ್ ಆದ್ರೆ............................. :P

ಸುಧೇಶ್ ಶೆಟ್ಟಿ said...

ನ೦ದು ಇದೇ ರಾಗ.... ಬೆ೦ಗಳೂರಿನಲ್ಲಿ ಮಳೆ ಬ೦ದಾಗಲೆಲ್ಲಾ ನಮ್ಮ ಊರಿನ ಮಳೆಯ೦ತಲ್ಲ ಇದು ಅ೦ತ ನನ್ನ ಕಲೀಗ್ಸ್ ತಲೆ ತಿನ್ನುತ್ತೇನೆ... ಊರಿನಲ್ಲಾದರೆ ಮಳೆ ಬ೦ದಾಗ ಕರಿದ ಗೆಣಸಿನ ಹಪ್ಪಳ ತಿನ್ನುತ್ತಾ ಮಳೆಗೆ ತೋಯುವ ಆ ತೆ೦ಗಿನ ಮರಗಳು, ಬೈಲಿನಲ್ಲಿರುವ ಗದ್ದೆಯ ತೋಟಗಳನ್ನು ನೋಡುತ್ತಾ ಆ ಮಳೆಯನ್ನು ಅನುಭವಿಸುವಾಗ ಸಿಗುವ ಸುಖ ಇಲ್ಲಿ ಸಿಗುವುದಿಲ್ಲ....

ಒ೦ತೆ ಜಾಗ್ರತೆಡ್ ನಡಪುಲೆ ಅವೇ.... ಮುಲ್ಪ ರಸ್ತೆಡ್ ಓಲ್ ಗು೦ಡಿ ತೋಡುದೆರ್ ಪ೦ದ್ ಗೊತ್ತಾಪುಜಿ....

ಧರಿತ್ರಿ said...

@ಮಲ್ಲಿಯಣ್ಣ..ಸದ್ಯದಲ್ಲೆ ಮಳೆ ಬರುತ್ತೆ...ಆಮೇಲೇ ನೀವೂ ಹಳ್ಳಿ ಮಳೆಯ ಖುಷಿ ಅನುಭವಿಸಿ. ಧನ್ಯವಾದಗಳು.

@ಶಿವಣ್ಣ..ನಿಮ್ಮ ಪ್ರೋತ್ಸಾಹ ನನ್ನ ಬರವಣಿಗೆಗೆ ಟಾನಿಕ್ ಇದ್ದಂಗೆ. ಮಳೆಯನ್ನು ನೆನೆದ ನಿಮ್ಮ ಅನುಭವ ಕಥನ ಬೇಗನೆ ಬರಲಿ..ಓದಕೆ ಕಾಯ್ತಾ ಇದ್ದೀನಿ. ಧನ್ಯವಾದಗಳು.

@ಜಯಶಂಕರ್, ಉದಯ್ ಸರ್..ಪ್ರತಿಕ್ರಿಯೆಗೆ dಧನ್ಯವಾದಗಳು. ಬರ್ತಾ ಇರಿ. ಹೌದು, ಜಯಶಂಕರ್...ನಮ್ಮ ಕಡೆನೂ ಹೀಗೇ ಆಗಿತ್ತು.

@ಉಮೇಶ್..ನೀವು ಹೇಳೋದು ನಿಜ. ಈ ಪ್ರತಿಕ್ರಿಯೆಯಲ್ಲಿನ ಭಾಷೆ ಬಳಕೆ ತುಂಬಾ ಇಷ್ಟವಾಯಿತು ಕಣ್ರೀ.

@ಪ್ರಭುರಾಜ್...ಅಯ್ಯೋ ನಂಗೂ ನೆನಪಾಯಿತು..ಕ್ಲಾಸ್ ರೂಮಲ್ಲಿ ಕುಳಿತುಕೊಂಡು ಕಿಟಕಿ ಬದಿಯಲ್ಲಿ ಕುಳಿತು ಕಾಗದ ದೋಣಿ ಮಾಡಿ ಹರಿಯೋ ನೀರಿಗೆ ಹಾಕಿ ಖುಷಿಪಡುತ್ತಿದ್ದ ದಿನಗಳು! ಹ್ಲಾಂ..ಈವಾಗ ನಾನು ಚೆನ್ನಾಗಿದ್ದೀನಿ ಮಾರಾಯ್ರೆ..ಇನ್ನು ಎಚ್ಚರಿಕೆಯಿಂದ ನಡೇತೀನಿ. ಸದ್ಯದಲ್ಲಿ ಯಾವ ಮಳೇಗೂ ಜಗ್ಗಲ್ಲ ಅನ್ನೋವಷ್ಟು ಧೈರ್ಯ ಬೆಳೆಸಿಕೊಂಡಿದ್ದೀನಿ.

@ಜಿತೇಂದ್ರ ಸರ್..
ಹೋಗುವೆನು ನಾ…….
ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ ಮಳೆಯ ಬೀಡಿಗೆ
ಸಿರಿಯ ಚೆಲುವಿನ ರೂಢಿಗೆ
ಬೇಸರಾಗಿದೆ ಬಯಲು
ಹೋಗುವೆ ಮಲೆಯ, ಕಣಿವೆಯ ಕಾಡಿಗೆ
ಹಸಿರು ಸೊಂಪಿನ ಬಿಸಿಲು ತಂಪಿನ
ಗಾನದಿಂಪಿನ ಕೂಡಿಗೆ (ಕುವೆಂಪು)-ಧನ್ಯವಾದಗಳು.

@ಪಾಲಚಂದ್ರ..ನಮ್ಮೂರು ಚಿಕ್ಕಮಗಳೂರಿಗೆ ಹತ್ರ ಕಣ್ರೀ. ನಮ್ಮೂರ ಮಳೇನೂ ಹಂಗೆ ಇರುತ್ತೆ. ಧನ್ಯವಾದಗಳು.

@ಜಲನಯನ..ಸರ್..ನಿಮ್ಮ ಮಗಳಿಗೆ ನನ್ನ ನೆನೆಕೆಗಳನ್ನು ತಿಳಿಸಿ. ಎಲ್ಲಾ ನೆನೆಪಿಟ್ಟುಕೊಂಡಿದ್ದಾಳೆ..ನಿಮ್ಮ ಪುಟ್ಟಿ. ಪ್ರತಿಕ್ರಿಯೆಗೆ ಧನ್ಯವಾದಗಳು.

@ಶಿವಪ್ರಕಾಶ್..ಮಿನಿಸ್ಟರು ಬೇಡ ..ಬಿಬಿಎಂಪಿ ಚುನಾವಣೆ ಸದ್ಯದಲ್ಲೆ ನಡೆಯಲಿದೆ. ಚುನಾವಣೆಗೆ ನಿಲ್ಲಿ...ನಮ್ಮ ಓಟು ನಿಮಗೆ..ಆಯುಕ್ತರಾಗಿ..!

@ಸುಧೇಶ್...ಹಳ್ಳಿ ಮಳೆಯ ನೆನೆಸಿಕೊಂಡೇ ನಾವು ತೊಯ್ತು ಬಿಡ್ತೀವಿ ಅಲ್ವಾ? ಆವು ನಿಧಾನ ನಡಪುವೆ..ಜಾಗ್ರತೆಡ್. ಆವೇ. ಸೊಲ್ಮೆಲು

-ಪ್ರೀತಿಯಿಂದ
ಧರಿತ್ರಿ

ಸಾಗರದಾಚೆಯ ಇಂಚರ said...

ಧರಿತ್ರಿ,
ಮಳೆ ಅಂದ ಕುಡ್ಲೆ ಮಲೆನಾಡಿನ ನನ್ನೂರು ನೆನಪಿಗೆ ಬಂತು. ಸ್ವಿಡೆನ್ನಿನಲ್ಲಿ ಮಳೆ ಅಷ್ಟೊಂದು ಜೋರಾಗಿ ಬರದು, ಮೇಲಿಂದ ವಿಪರೀತ ಚಳಿ, ಎಂಜಾಯ್ ಮಾಡಲು ಸಾದ್ಯವಿಲ್ಲ. ಊರನ್ನು ನೆನಪಿಸಿದ್ದಿರ
ಧನ್ಯವಾದಗಳು